Tuesday, December 16, 2025

ಪ್ರತ್ಯಕ್ಷವಾದರೂ ಪ್ರಮಾಣಿಸಿ ನೋಡು ಎನ್ನುವ ಮಾತು ಹೇಳುವ ರಾಜಶೇಖರ 1967 (ಅಣ್ಣಾವ್ರ ಚಿತ್ರ ೮೩/೨೦೭)


ನೂರು ಮೀಟರುಗಳ ಓಟ 

ಇನ್ನೂರು ಮೀಟರುಗಳ ಓಟ 

ನಾನೂರು ಮೀಟರುಗಳ ಓಟ 

ಮ್ಯಾರಥಾನ್ ಅಥವ ಮೈಲುಗಳ ದೂರದ ಓಟ 

ಪ್ರತಿಯೊಂದರ ಸಿದ್ಧತೆಯೂ ವಿಭಿನ್ನ 

ಕೆಲವೊಂದು ಸಿನಿಮಾಗಳು ಹಾಗೆಯೇ ಮೊದಲ ಕ್ಷಣದಿಂದ ನಮ್ಮನ್ನು ಆವರಿಸಿಕೊಳ್ಳುತ್ತದೆ, ಅತ್ತಿತ್ತ ನೋಡದಂತೆ ನಮ್ಮನ್ನು ಹಿಡಿದಿಡುತ್ತದೆ.. ಓಹ್ ಸಿನೆಮಾ ಹೀಗೆಯೇ ಸಾಗುತ್ತದೆ ಎನ್ನುವಾಗ ಅಚಾನಕ್ ತಿರುವು ಕೊಟ್ಟು ಭಿನ್ನ ಹಾದಿಯನ್ನು ಹಿಡಿಯುತ್ತದೆ. 

ವಸಂತ್ ಪಿಕ್ಚರ್ಸ್ ಲಾಂಛನದಲ್ಲಿ ಬಿ ಎಸ್ ರಂಗ ಅವರು ನಿರ್ಮಿಸಿರುವ ಚಿತ್ರದ ಹೊಣೆಗಾರಿಕೆಯನ್ನು ಜಿ ವಿ ಅಯ್ಯರ್ ಅವರಿಗೆ ಒಪ್ಪಿಸಿದ್ದಾರೆ. 

ಜಿ ವಿ ಅಯ್ಯರ್ ಅವರು ನಿರ್ಮಾಪಕರು ಕೊಟ್ಟ ಕತೆಯನ್ನು ಚಿತ್ರಕತೆಯಾಗಿಸಿ ಒಪ್ಪುವಂತೆ ಚಿತ್ರವನ್ನು ತೆರೆಗೆ ತಂದಿದ್ದಾರೆ.

ಸಿನೆಮಾದ ಆರಂಭದಿಂದ ಒಂದೇ ವೇಗದಲ್ಲಿ ಸಾಗೋದಕ್ಕೆ ಚಿತ್ರಕಥೆಯೂ ಸಹಾಯ ಮಾಡಿದೆ ಜೊತೆಗೆ ಜಿ ಕೆ ವೆಂಕಟೇಶ್ ಅವರ ಸಂಗೀತವೂ ಕೂಡ ರಭಸ ಕೊಟ್ಟಿದೆ. ಸಾಹಿತ್ಯ ಜಿ ವಿ ಅಯ್ಯರ್ ಅವರದ್ದು. ಬಿ ಎನ್ ಹರಿದಾಸ್ ಅವರ ಛಾಯಾಗ್ರಹಣವಿದೆ. 

ರಾಜಶೇಖರನಾಗಿ ರಾಜಕುಮಾರ್ ಅವರ ಅಭಿನಯ ಕಳೆ ಕಟ್ಟಿದೆ. ತಾರುಣ್ಯದಲ್ಲಿ ಅವರಾಡುವ ಮಾತುಗಳು, ಆಂಗೀಕ ಸಂಭಾಷಣೆ, ಗತ್ತು, ಸ್ನೇಹಕ್ಕೆ ಮಿಡಿಯುವ ಮನಸ್ಸು,ಮನಸ್ಸು ಕೊಂಚ ಗಲಿಬಿಲಿಯಾಗಿ ಪ್ರೇಮಕ್ಕೆ ತಿರುಗಿಕೊಳ್ಳುವ ದೃಶ್ಯ.. ಮುಪ್ಪಿನಲ್ಲಿ ಅವರ ಅದೇ ವಿಶ್ವಾಸದಿಂದ ಮಾತಾಡುವ ರೀತಿ, ಹೊಡೆದಾಟದ ದೃಶ್ಯಗಳು, ಕತ್ತಿ ವರಸೆ.. ಪತ್ನಿ ಮತ್ತು ಗೆಳೆಯನನ್ನ ದೂರ ಮಾಡಿ ನಂತರ ಪಶ್ಚಾತಾಪ ಪಡುವ ದೃಶ್ಯಗಳು.. ರಾಜಕುಮಾರ್ ಅವರಿಗೆ ಹೇಳಿ ಮಾಡಿಸಿದ  ಹಾಗಿದೆ. ತಾರುಣ್ಯದಲ್ಲಿ ಅತ್ಯಂತ ಸುಂದರವಾಗಿ ಕಾಣುವ ಪಾತ್ರ.. ವಯೋಸಹಜತೆಯಿಂದ ಕುಗ್ಗುವ ಅದಕ್ಕೆ ಬೇಕಾದ ಲವಲವಿಕೆಯಿಂದ ಅಭಿನಯಿಸಿದ್ದಾರೆ. 



ಇದೊಂದು ರಾಜ್ ಅವರ ಚಿತ್ರ ಅನ್ನಬಹುದು.. ಚಿತ್ರದುದ್ದಕ್ಕೂ ಬರುವ ಅವರ ಪಾತ್ರ ಚಿತ್ರವನ್ನು ಆವರಿಸಿಕೊಂಡಿದೆ.  ಈ  ಚಿತ್ರದಲ್ಲಿ ರಾಜಕುಮಾರ್ ಅವರೇ ನಾಯಕ.. ರಾಜಕುಮಾರ್ ಅವರೇ ಖಳನಾಯಕ.. ಇದೆ ಈ ಚಿತ್ರದ ವಿಶೇಷ.. 

ಅವರ ನಾಯಕಿಯಾಗಿ ಭಾರತಿ  ಅವರ ಪಾತ್ರ ತಕ್ಕನಾಗಿ ಮೂಡಿಬಂದಿದೆ. ಅವರ ಪಾತ್ರಕ್ಕೆ ಹೆಚ್ಚಿನ ಅವಕಾಶವಿಲ್ಲವಾದರೂ ಸಿಕ್ಕ ದೃಶ್ಯಗಳಲ್ಲಿ ಮನಸೆಳೆಯುತ್ತಾರೆ. 

ರಾಜಕುಮಾರ್ ಅವರ ಸ್ನೇಹಿತ ಜಗಮಲ್ಲನ ಪಾತ್ರದಲ್ಲಿ ಬದಲಾವಣೆಯೆಂದರೆ ಈ ಚಿತ್ರದಲ್ಲಿ ಉದಯಕುಮಾರ್ ಖಳನಾಯಕನಲ್ಲ.. ಬದಲಿಗೆ ಸ್ನೇಹಕ್ಕೆ ಪ್ರಾಣ ಕೊಡುವಂತಹ ಗೆಳೆಯನ ಪಾತ್ರ. ಅದ್ಭುತವಾಗಿ ಅಭಿನಯಿಸಿದ್ದಾರೆ. . 

ಉಳಿದಂತೆ ಮುಖ್ಯ ಪಾತ್ರಗಳಲ್ಲಿ ಗಮನ ಸೆಳೆಯುವವರು ಕುಪ್ಪುರಾಜ್, ರಾಘವೇಂದ್ರ ರಾವ್,ರಮಾದೇವಿ, ಪಾಪಮ್ಮ, ರಮಾ,ಬಾಲಕೃಷ್ಣ, ನರಸಿಂಹರಾಜು, ಬಿ ಎಂ ವೆಂಕಟೇಶ್, ವಂದನ, ದಿನೇಶ್ ಮತ್ತು ಮಚ್ಚೇರಿ. 

ಪ್ರತಿಯೊಬ್ಬರೂ ಪಾತ್ರಕ್ಕೆ ಹಾಗೂ ಚಿತ್ರಕತೆ ಮತ್ತು ಚಿತ್ರದ ಓಘಕ್ಕೆ ತಕ್ಕ ಹಾಗೆ ಅಭಿನಯಿಸಿದ್ದಾರೆ. 

ಬರಹದ ಆರಂಭದಲ್ಲಿ ಹೇಳಿದ ಹಾಗೆ ಚಿತ್ರದ ಆರಂಭಿಕ ಸಂಗೀತದಿಂದ ಜಿ ಕೆ ವೆಂಕಟೇಶ್ ಗಮನ ಸೆಳೆಯುತ್ತಾರೆ. ಚಿತ್ರದ ವೇಗಕ್ಕೆ ಅವರ ಸಂಗೀತ ಸಾತ್ ನೀಡಿದೆ. 

ಚಿಕ್ಕ ಚೊಕ್ಕ ಚಿತ್ರವಿದ್ದು.. ಪ್ರತ್ಯಕ್ಷವಾದರೂ ಪ್ರಮಾಣಿಸಿ ನೋಡು ಎನ್ನುವ ಮಾತನ್ನು  ಪುಷ್ಟಿಕರಿಸುವ ಚಿತ್ರವಿದು! 














No comments:

Post a Comment