Tuesday, September 18, 2018

ಧರ್ಮ ಯಾವಾಗಲೂ ಜಯವನ್ನೇ ನೋಡುತ್ತವೆ ಎನ್ನುವ ಧರ್ಮ ವಿಜಯ (1959) (ಅಣ್ಣಾವ್ರ ಚಿತ್ರ ೧೨ / ೨೦೭)

ಪೂರ್ವಾಗ್ರಹ ಪೀಡಿತರಾಗಿ ಸಿನಿಮಾಗಳನ್ನು ನೋಡಬಾರದು.. ಅನೇಕ ಬಾರಿ ಈ ರೀತಿಯ ಅನುಭವಗಳಾಗಿದ್ದರೂ ಮತ್ತೆ ಮತ್ತೆ ಅದೇ ಕೂಪಕ್ಕೆ ಜಾರುತ್ತೇನೆ.. ಮತ್ತೆ ಖುಷಿ ಪಡುತ್ತೇನೆ.. ಮತ್ತೆ ಹೀಗೆ ಪುನರಪಿ ಜಾರಂ ಪುನರಪಿ ಏಳುಂ..

ಬಲು ದಿನಗಳೇ.. ಅಲ್ಲ ಬಹಳ ವಾರಗಳಾದ ಮೇಲೆ ಮತ್ತೆ ಅಣ್ಣಾವ್ರ ಜೈತ್ರ ಯಾತ್ರೆ ಮುಂದುವರೆಸಬೇಕೆಂಬ ಹಠ ಹೊತ್ತು ಧರ್ಮ ವಿಜಯ ಚಿತ್ರ ನೋಡಿದೆ.. ಕಳೆದ ಹನ್ನೊಂದು ಸಿನೆಮಾಗಳು ನೋಡಿದ್ದ ನನಗೆ ಇದು ಹೀಗೆ ಇರಬಹುದು ಎನ್ನುವ ಒಂದು ಸೂತ್ರ ಹೊಳೆದಿತ್ತು...

ಈ ಚಿತ್ರ ಬಿಚ್ಚಿಕೊಳ್ಳುತ್ತಾ ಹೋದ ಹಾಗೆ ಒಂದು ರೀತಿಯ ವಿಭಿನ್ನ ಅನುಭವ.. ಕಾಲದ ಚಕ್ರದಲ್ಲಿ ಹೇಗೆ ಬದಲಾವಣೆಗಳಾಗುತ್ತವೆ ಎನ್ನುವ ಒಂದು ನೋಟ ಇಲ್ಲಿ ಸಿಗುತ್ತದೆ..

ಆರಂಭಿಕ ದೃಶ್ಯದಲ್ಲಿ ಆ ರಾಜ್ಯದ ಸೇನಾಧಿಪತಿ ರೋಗಗ್ರಸ್ತನಾಗಿ ಮಲಗಿರುತ್ತಾನೆ ..ಅವನಿಗೆ ಸ್ವಪ್ನ ಅಂದರೂ ಸರಿ ಅಥವಾ ಹಿಂದಿನ ಜನ್ಮದ ನೆನಪು ಅಂದರೂ ಸರಿ.. ಒಂದು ಘಟನೆಯನ್ನು ಬಿಂಬಿಸುತ್ತದೆ.

ಒಂದು ಹೆಂಗಸು.. ಎಂಜಲು ಕೈಯಲ್ಲಿಯೂ ಕಾಗೆ ಓಡಿಸದಂತಹವಳು.. ಅವಳನ್ನು ಪರೀಕ್ಷಿಸಲು ಯಮಧರ್ಮ ಸನ್ಯಾಸಿಯಾಗಿ ಬಂದು.. ಭವತಿ ಭಿಕ್ಷಾಂದೇಹಿ ಎನ್ನುತ್ತಾನೆ .. ಹೆಂಗಸು ಹೊಟ್ಟೆ ತುಂಬಾ ತಾ ಊಟ ಮಾಡುತ್ತಾಳೆಯೇ ವಿನಃ.. ಹೊರಗೆ ಬಂದು ನೋಡುವುದಿಲ್ಲ.. ಆ ಬಿಕ್ಷು ಸಂಜೆಯ ತನಕ ಅಲ್ಲಿಯೇ ನಿಂತಿರುತ್ತಾನೆ.. ಕಡೆಗೆ ಕುಪಿತನಾಗಿ ಬೆಳಗಿನಿಂದ ಸಂಜೆ ತನಕ ನಿಲ್ಲಿಸಿದ್ದೀಯಾ.. ಭಿಕ್ಷೆ ನೀಡಬಾರದೇ ಎಂದಾಗ.. ತೊಗರಿಯ ಸಿಪ್ಪೆಯನ್ನು ಭಿಕ್ಷೆ ಎಂದು ಹಾಕಿ ಬಯ್ದು ಕಳಿಸುತ್ತಾಳೆ.  ನರಕಲೋಕಕ್ಕೆ ಬರುವ ಯಮ.. ಆ ತೊಗರಿಯ ಹೊಟ್ಟನ್ನು ಚೆಲ್ಲುತ್ತಾನೆ.. ಅಲ್ಲಿ ತೊಗರಿಯ ಗಿಡ ಬೆಳೆಯುತ್ತದೆ..

 ಆಯಸ್ಸು ತುಂಬಿದ ಅವಳನ್ನು ನರಕಲೋಕಕ್ಕೆ ಕರೆದೊಯ್ದಾಗ ಹೊಟ್ಟೆ ಹಸಿವು ಎನ್ನುತ್ತಾಳೆ.. ಆಗ ಆ ಯಮಧರ್ಮರಾಜ ಅವಳಿಗೆ ಅದೇ ತೊಗರಿಯ ಗಿಡವನ್ನು ತೋರಿಸಿ. ಹೋಗು ಅದನ್ನು ತಿನ್ನು ಎಂದು ಕಳಿಸುತ್ತಾನೆ.. ಆದರೆ ಅವಳು ತೊಗರಿ ಕಾಯಿಯನ್ನು ಸುಳಿದಾಗ ಒಳಗೆ ಖಾಲಿ ಇರುತ್ತದೆ.. ನನಗೆ ನೀ ಸಿಪ್ಪೆಯನ್ನು ಕೊಟ್ಟೆ ಅದೇ ನಿನಗೂ ಸಿಕ್ಕಿದೆ.. ಎನ್ನುತ್ತಾನೇ ಯಮ..

ಈ ದೃಶ್ಯ ಸೇನಾಧಿಪತಿಯ ಸ್ಮೃತಿಪಟಲದಲ್ಲಿ ಬಂದು.. ತನ್ನ ಹೆಂಡತಿಗೆ. ಇದ್ದದ್ದನ್ನೆಲ್ಲ ದಾನ ಮಾಡಿ ಬಿಡು ಎಂದು ಹೇಳಿ ಇಹಲೋಕ ತ್ಯಜಿಸುತ್ತಾನೆ.. ಇದ್ದ ಸಂಪತ್ತೆಲ್ಲವನ್ನು ದಾನ ಮಾಡಿ ತನ್ನ ಮಗನೊಂದಿಗೆ ಊರು ಬಿಟ್ಟು ಹೋಗುತ್ತಾಳೆ ಆತನ ಹೆಂಡತಿ..

ಇತ್ತ ಆ ಊರಿನ ರಾಜ. ಋಷಿಮುನಿಗಳ ಜೊತೆಯಲ್ಲಿ ಚರ್ಚಿಸಿ.. ದಾನ  ಧರ್ಮ ಮಾಡಿದೆ.. ಜನರಿಗೆ ಉಪಕಾರವಾಗಲಿ ಎಂದು ಕೆರೆ ಕಟ್ಟಿಸಿದೆ ಆದರೆ.. ನೀರು ಬರಲಿಲ್ಲ ಅಂದಾಗ.. ಆ ಮುನಿಪುಂಗವ "ಮಾಡಿದ್ದಕ್ಕೆ ಮನವೇ ಸಾಕ್ಷಿ.. ತೋಡಿದ್ದಕ್ಕೆ ಜಲವೇ ಸಾಕ್ಷಿ" ಎನ್ನುತ್ತಾ ದಾನ ಧರ್ಮ ಮಾಡಿದ್ದು ಸಾಲದು.. ಹೆಚ್ಚು ಮಾಡು.. ಮಳೆ ಬರುತ್ತದೆ.. ಕೆರೆ ತುಂಬುತ್ತದೆ ಎನ್ನುತ್ತಾರೆ.. ಆದ್ರೆ ರೀತಿಯಲ್ಲಿ ಮಾಡಿದ ಮೇಲೆ ಕೆರೆ ತುಂಬುತ್ತದೆ..

ಊರಿನ  ಪ್ರಮುಖ ಶ್ರೀಮಂತರು ದಾನ ಮಾಡಿ ಹೆಸರುಮಾಡಬಹುದು .. ಬಿರುದುಗಳನ್ನು ಕೊಡುತ್ತೇವೆ ಎಂದು ಸಾರಿಸುತ್ತಾನೆ . ಜೊತೆಯಲ್ಲಿ ಅಗಲಿದ ಸೇನಾಧಿಪತಿಯ ಮಗನನ್ನು ಕರೆಸಿ ಸರದಾರನನ್ನಾಗಿ ಮಾಡುತ್ತಾರೆ.. ಬಾಲ್ಯದಲ್ಲಿಯೇ ಬಡತನದಿಂದ ರೋಸಿ ಹೋಗಿದ್ದ  ಆ ಹುಡುಗ.. ದಾನ ಧರ್ಮ, ಅತಿಥಿ ಸತ್ಕಾರ ಎನ್ನುವುದೆಲ್ಲ ಸುಳ್ಳು ಎನ್ನುತ್ತಾ.. ಆ ರೀತಿ ಮಾಡುತ್ತಿದ್ದ ತನ್ನ ತಾಯಿಯನ್ನು ಬಹುವಾಗಿ ತಡೆಯಲು ಪ್ರಯತ್ನ ಪಡುತ್ತಾನೆ.. ಆದರೆ ಫಲಕಾರಿಯಾಗುವುದಿಲ್ಲ.. ಜೊತೆಯಲ್ಲಿ ಆತನ ಹೆಂಡತಿ ಕೂಡ ತನ್ನ ಅತ್ತೆಯ ಮಾರ್ಗದರ್ಶನದಲ್ಲಿಯೇ ನೆಡೆಯುತ್ತಾ.. ಪತಿಗೆ ಬುದ್ದಿ ಹೇಳಲು ಪ್ರಯತ್ನ ಪಡುತ್ತಾಳೆ..

ರಾಜ್ಯದಲ್ಲಿ ನೆಡೆಯುತ್ತಿದ್ದ ಈ ಸುಳ್ಳು ಸುಳ್ಳು ದಾನ ಧರ್ಮಗಳ ಬಗ್ಗೆ ಕುಪಿತನಾಗಿ ರಾಜ ಸಭೆಯಲ್ಲಿ ಪುರ ಪ್ರಮುಖರ ವಿರುದ್ಧ ಮಾತಾಡಿ ರಾಜ ಅವಕೃಪೆ ಪಾತ್ರನಾಗಿ ಮಾತಾಡಿದ್ದಕ್ಕಾಗಿ ರಾಜ್ಯದಿಂದ ಗಡೀಪಾರಾಗುತ್ತಾನೆ.. ಇತ್ತ ತನ್ನ ತಾಯಿ ಮತ್ತು ಹೆಂಡತಿ.. ದಾನ ಧರ್ಮ ಮಾಡುವ ಕೆಲಸದಿಂದ ವಿಮುಖರಾಗದೆ ಇದ್ದದ್ದನ್ನು ಕಂಡು.. ಕೋಪಗೊಂಡು ಮನೆಯನ್ನು ಬಿಟ್ಟು ಪಕ್ಕದ ಊರಿಗೆ ಹೋಗುತ್ತಾನೆ..

ಹಸಿವು, ಕೋಪ, ಆತಂಕ.. ಎಲ್ಲವೂ ಸೇರಿಕೊಂಡು..ದಾರಿ ಕಾಣದಂತಾಗುತ್ತಾನೆ.. ಊರಿನ ಜನರ ಮೌಢ್ಯವನ್ನು ಹೋಗಲಾಡಿಸಿ .. ಪ್ರಾಣಿ ಬಲಿಯನ್ನು ತಪ್ಪಿಸುತ್ತಾನೆ. .. ಆದರೆ ದಾರಿಗಳ್ಳರ ದಾಳಿಗೆ ಸಿಲುಕಿದ ಜನರನ್ನು ರಕ್ಷಿಸಲು ಹೋಗಿ ತನ್ನ ಕೈಯನ್ನು ಕಳೆದುಕೊಳ್ಳುತ್ತಾನೆ.. ತನ್ನ ತಾಯಿ ಮಡದಿಯನ್ನು ಭೇಟಿ ಮಾಡಲು ತನ್ನ ರಾಜ್ಯಕ್ಕೆ ಬರುವ ಇವನನ್ನು ಹಿಡಿದು ರಾಜಸಭೆಗೆ ಕರೆತಂದು.. ಗಲ್ಲಿಗೆ ಹಾಕುವ ಶಿಕ್ಷೆಗೆ ಗುರಿಯಾಗುತ್ತಾನೆ.. ಆದರೆ ದೇವರ ಅನುಗ್ರಹ.. ಇವನದೇನು ತಪ್ಪಿಲ್ಲ.. ಪುರಪ್ರಮುಖರ ಲಂಚಗುಳಿತನ.. ಹೆಸರು ಮಾಡಲು ಅಡ್ಡ ದಾರಿ ಹಿಡಿದು ರಾಜ ಬೊಕ್ಕಸವನ್ನು ಬರಿದು ಮಾಡುವ ಕೋಶಾಧಿಕಾರಿ..  ಹೆಣ್ಣಿನ ಸಹವಾಸಕ್ಕೆ ಹಾತೊರೆದು ತಪ್ಪು ದಾರಿ ಹಿಡಿವ ಸಿರಿವಂತ.. ಹೀಗೆ ಅವಿವೇಕಭಾವ ಹೊತ್ತ ರಾಜ..ಇದರಿಂದ ಪ್ರಕೃತಿ ಮಾತೆ ಕುಪಿತಗೊಂಡು ಕೆರೆ ತೂತು ಬಿದ್ದು.. ಊರು ಕೊಚ್ಚಿ ಹೋಗುವ ಪರಿಸ್ಥಿತಿ ನಿರ್ಮಾಣವಾದಾಗ ಮತ್ತೆ ಸನ್ಯಾಸಿ ಬಂದು.. ಇಲ್ಲಿ ಆದ ಅಚಾತುರ್ಯ ಹೇಳುತ್ತಾ.. ಸಾಧ್ವಿಯೊಬ್ಬಳು ಭಕ್ತಿಯಿಂದ ನಮಸ್ಕರಿಸಿದರೆ ಕೆರೆ ತೂತು ಮುಚ್ಚುವುದೆಂದು ಹೇಳಿ.. ಸರದಾರನ ಹೆಂಡತಿಯನ್ನು ಕರೆದು ನಮಸ್ಕರಿಸಲು ಹೇಳುತ್ತಾರೆ.. ಅದರಂತೆ ಎಲ್ಲವೂ ಸರಿ ಹೋಗುತ್ತದೆ.. ಸರದಾರನ ನೇಣು ಶಿಕ್ಷೆ ತಪ್ಪಿಸುತ್ತದೆ.. ಮತ್ತೆ ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ..

ಹೀಗೆ ಒಂದು ಸರಳ ಕಥೆಯನ್ನು ಅಚ್ಚುಕಟ್ಟಾಗಿ ಹೇಳುವ ವಿಶಿಷ್ಟ ಪ್ರಯತ್ನ ಈ ಚಿತ್ರದ್ದಾಗಿದೆ.. ಎಲ್ಲೂ ವೈಭವೀಕರಣವಿಲ್ಲ.. ಕತೆಯನ್ನು ಹೇಳುವ ಪ್ರಯತ್ನ ಮಾತ್ರ ಮಾಡಿದ್ದಾರೆ.. ಆದರೆ ಈ ಕತೆಯೊಳಗೆ ನುಗ್ಗಿ ಬರುವ ಅನೇಕ ದೃಶ್ಯಗಳು, ಸಂಭಾಷಣೆಗಳು , ಪಾತ್ರಧಾರಿಗಳ ಅಭಿನಯ ಈ ಚಿತ್ರವನ್ನು ಮೇಲೆತ್ತಿದೆ..

ಸರದಾರನ ಪಾತ್ರದಲ್ಲಿ ಅಚ್ಚುಕಟ್ಟಾಗಿ ಮಾಡಿರುವ ರಾಜ್.. ಭಾಷ ಪ್ರಯೋಗ.. ಮುಖಾಭಿನಯ.. ಇಷ್ಟವಾಗುತ್ತದೆ.. ನರಸಿಂಹರಾಜು ಅವರ ಜೊತೆಯಲ್ಲಿನ ಕೆಲವು ಹಾಸ್ಯ ದೃಶ್ಯಗಳು ಸೊಗಸಾಗಿವೆ.. ಚಿತ್ರದಿಂದ ಚಿತ್ರಕ್ಕೆ ಅವರ ಅಭಿನಯ ನೋಡುವುದೇ ಒಂದು ಖುಷಿ.. ಪಾತ್ರಕ್ಕೆ ಬೇಕಾಗುವಷ್ಟು ಅಭಿನಯ ಕೊಡುವ ಕಲೆ ಸಿದ್ಧಿಯಾಗುತ್ತಿರುವ ಲಕ್ಷಣಗಳು ಈ ಚಿತ್ರದಲ್ಲಿ ಕಾಣುತ್ತದೆ.. ಕುದುರೆ ಸವರಿ.. ಕತ್ತಿಯಲ್ಲಿ ಹೊಡೆದಾಟ.. ಕೋಲಿನಲ್ಲಿ ಹೊಡೆದಾಟ.. ಕೋಪ ಬಂದಾಗ ನಿಯಂತ್ರಣದ ಅಭಿನಯ.. ರಾಜ್ ಬೆಳೆಯುತ್ತಿರುವ ಸಂಕೇತ ಸಿಗುತ್ತದೆ..
ಸರದಾರನಾಗಿ ರಾಜ್ 

ಇದು ರಾಜ್ ಚಿತ್ರ ಅನ್ನೋದಕ್ಕಿಂತ ಎಲ್ಲರ ಚಿತ್ರ ಎನ್ನಬಹುದು..ಕಾರಣ ಎಲ್ಲರಿಗೂ ಸಮಾನ ಅಭಿನಯಕ್ಕೆ ಅವಕಾಶವಿದೆ.. ರಾಜನ ಪಾತ್ರಧಾರಿ.. ಜಂಗಮ ಪಾತ್ರಧಾರಿಯಾಗಿ ರಾಮಚಂದ್ರ ಶಾಸ್ತ್ರಿ.. ರಾಜ್ ಹೆಂಡತಿಯಾಗಿ ಹರಿಣಿ.. ಆತನ ಅಮ್ಮನ ಪಾತ್ರಧಾರಿ.. ಇಷ್ಟವಾಗುತ್ತಾರೆ..
ಸೋರಟ್ ಅಶ್ವತ್, ವಾದಿರಾಜ್ ಮತ್ತು ಹರಿಣಿ 
ರಾಜ್ ಅವರ ಮಾವನ ಪಾತ್ರದಲ್ಲಿ ಸೋರಟ್ ಅಶ್ವಥ್ ಉತ್ತಮ ಅಭಿನಯ ನೀಡಿದ್ದಾರೆ.. ಜಿಪುಣಾಗ್ರೇಸರನಾದ ಈತ.. ಹೆಣ್ಣಿನ  ಒನಪು ವಯ್ಯಾರ ನೋಡುವುದಕ್ಕೆ  ಆ ಊರಿನಲ್ಲಿದ್ದ ಚಂಚಲೆಯನ್ನು ಆತನ ಸಂಗಡಿಗರ ಜೊತೆಯಲ್ಲಿ ಕರೆದು ನೃತ್ಯವನ್ನು ನೋಡುತ್ತಾನೆ.. ಅವರು ಸಂಭಾವನೆ ಕೊಡಿ ಎಂದಾಗ ಚಿನ್ನದ ನಾಣ್ಯದ ಥೈಲಿಯನ್ನು ತಂದು.. ಅಲ್ಲಾಡಿಸಿ ಶಬ್ದ ಕೇಳಿಸಿ.. ಅದನ್ನು ನೆಲದ ಮೇಲೆ ಸುರಿದು ತೋರಿಸುತ್ತಾನೆ..
ತನ್ನ ಮಗಳು ನಿರ್ಗತಿಕಳಾಗಿ ತನ್ನ ಅಪ್ಪನ ಹತ್ತಿರ ಸಹಾಯ ಕೇಳಲು ಬಂದಾಗ.. ಅಯ್ಯ್ಯೋ ಸುಮ್ಮನೆ ನನ್ನ ನೋಡೋಕೆ ಏಕೆ ಬಂದೆ.. ನಾ ಚೆನ್ನಾಗಿದ್ದೀನಿ ..ಸಹಾಯ ಬಿಟ್ಟು ಬೇರೆ ಏನೇ ಕೇಳು.. ಕೊಡುತ್ತೇನೆ.. ಸರಿ ಮಗಳೇ ಹೋಗಿ ಬಾ.. ಆಶೀರ್ವಾದ ನಿನಗೆ ಎನ್ನುತ್ತಾ ಅವಳನ್ನು ಕಳಿಸಿ ಲಕ್ಷ್ಮಿಯ ಫೋಟೋ ಮುಂದೆ ನಿಂತು.. ನಿನ್ನ ಮೇಲಿನ ಅಭಿಮಾನ.. ಮನುಷ್ಯರನ್ನು ಪಿಶಾಚಿಯನ್ನಾಗಿ ಮಾಡುತ್ತದೆ.. ಮಗಳಿಗೆ ಸಹಾಯ ಮಾಡಲಾಗಲಿಲ್ಲ ಎಂದು ಗೋಳಾಡುವ ಪುಟ್ಟ ದೃಶ್ಯ ಮನಸ್ಸೆಳೆಯುತ್ತದೆ.. 

ಅಷ್ಟೇನೆ ಎಂದಾಗ.. ನೀವು ನೃತ್ಯವಾದಿ ಕಣ್ಣಿಗೆ ಮತ್ತು ಸಂಗೀತದಿಂದ ಕಿವಿಗೆ ಖುಷಿಪಡಿಸಿದಿರಿ.. ನಾನು ನಾಣ್ಯ ತೋರಿಸಿ ಮತ್ತು ಸಡ್ಡು ಕೇಳಿಸಿ ನಿಮಗೆ ಖುಷಿ ಪಡಿಸಿದ್ದೇನೆ.. ಸರಿ ಹೋಯ್ತು ಅಲ್ವೇ.. ಎನ್ನುತ್ತಾನೆ. .. ಸರಳ ಮಾತುಗಳು ಆದರೆ ಅದನ್ನು ಹೇಳುವ ಶೈಲಿ ಸೊಗಸಾಗಿದೆ..

ವಂಚಕರನ್ನು ಬಯಲಿಗೆ ಎಳೆಯುವ ಪಾತ್ರದಲ್ಲಿ ನರಸಿಂಹರಾಜು ಚಿತ್ರದುದ್ದಕ್ಕೂ ಆವರಿಸಿಕೊಳ್ಳುತ್ತಾರೆ.. ಮುದ್ದಾದ ಅಭಿನಯ... ತಂತ್ರಕ್ಕೆ ಪ್ರತಿತಂತ್ರ ಹೂಡುತ್ತಾ.. ಸಾಗುವ ಅವರ ಪಾತ್ರದ ಅಭಿನಯ ಸೊಗಸಾಗಿದೆ..
ನರಸಿಂಹರಾಜು 
ಪುಟ್ಟ ಪಾತ್ರವಾದರೂ ಗಮನ ಸೆಳೆಯುವ ಪಾತ್ರದಲ್ಲಿ ಲೀಲಾವತಿ ಅಭಿನಯ ಸೊಗಸಾಗಿದೆ.. ರಾಜ್ ಅವರ ಪತ್ನಿಯಾಗಿ ಹರಿಣಿ ಮುಗ್ಧವಾಗಿ ಅಭಿನಯಿಸಿದ್ದಾರೆ..

ಮತ್ತೊಂದು ಪುಟ್ಟ ಪಾತ್ರದಲ್ಲಿ ವಾದಿರಾಜ್ ಹೇಳುವ ಮಾತು "ಏನು ಶ್ರೀಮಂತರೇ ನಿಮ್ಮ ಕುದುರೆಗೆ ನೀರು ಕುಡಿಸೋಲ್ಲವೇ.. ಕೂತವರಿಗೆ ಕುಡಿಸುತ್ತದೆ" ಆ ದೃಶ್ಯವನ್ನು ನೋಡಬೇಕು ಖುಷಿ ಪಡಬೇಕು..

ಚಿತ್ರದ ಕೆಲವು ಮುಖ್ಯ ಸನ್ನಿವೇಶಗಳು ಕೆಳಗಿವೆ
ಸಿರಿವಂತರ ಅವಗುಣಗಳನ್ನು ಬಯಲಿಗೆ ಎಳೆಯುವ ದೃಶ್ಯ 

ಜಿಪುಣಾಗ್ರೇಸರನ ಬುದ್ದಿವಂತಿಕೆ 

ನರಸಿಂಹರಾಜು ಬುದ್ದಿವಂತಿಕೆ 

ರಾಜ್ ಮತ್ತು ರಾಜು 

ಮನಸೆಳೆಯುವ ಪುಟ್ಟ ಪಾಠದಲ್ಲಿ ರತ್ನಾಕರ್ ಜೊತೆ ರಾಜ್ 

ಸುಂದರ ಜೋಡಿಯಾಗಿ ರಾಜ್ ಮತ್ತು ಹರಿಣಿ ಈ ಚಿತ್ರದಲ್ಲಿ 

ಜಿಕೆ ವೆಂಕಟೇಶ್ ಅವರ ಸಂಗೀತವಿರುವ, ಎಸ ಏನ್ ವರ್ಮಾ ಅವರ ಛಾಯಾಗ್ರಹಣವಿರುವ ಈ ಚಿತ್ರವನ್ನು ಎಚ್ ಎಂ ಬಾಬಾ ಪ್ರೊಡಕ್ಷನ್ಸ್ ನಲ್ಲಿ ಏನ್ ಜಗನ್ನಾಥ್ ನಿರ್ದೇಶಿಸಿದ್ದಾರೆ.. ೧೯೫೯ರಲ್ಲಿ ತೆರೀಕಂಡ ಈ ಚಿತ್ರ ತನ್ನ ಸರಳ ಕಥೆಯನ್ನು ಅಚ್ಚುಕಟ್ಟಾಗಿ ತೆರೆಗೆ ತಂದಿದ್ದಾರೆ...

ಧರೆಯಲ್ಲಿ ಧರ್ಮವಿರಬೇಕು. ಧರ್ಮವೇ ನಮ್ಮನ್ನು ಕಾಪಾಡುತ್ತದೆ ಎನ್ನುವ  ಸಂದೇಶವನ್ನು ಸಾರುವ ಚಿತ್ರ ರಾಜ್ ಅವರ ಹನ್ನೆರಡನೆಯ ಚಿತ್ರವಾಗಿ ಬಂದಿದೆ.