Sunday, December 1, 2013

ಪುಟ್ಟಣ್ಣ - ಎಂಭತ್ತು ವಸಂತಗಳ ಒಂದು ಚೌಕಟ್ಟು

ಪುಟ್ಟಣ್ಣ ಕಣಗಾಲ್ ಯಾಕೆ ಇಷ್ಟವಾಗುತ್ತಾರೆ.. ಅವರ ಬಗ್ಗೆ ಏನು ಅಂಥಹ ವಿಶೇಷತೆ.. ಎಲ್ಲಾ ನಿರ್ದೇಶಕರ ತರಹ ಅವರು ಒಬ್ಬರು.. ಇದೆಲ್ಲ ನಿಜವೇ ಸುಳ್ಳೇ.. ಈ  ರೀತಿಯ ಪ್ರಶ್ನೆಗಳು ಸದಾ ಉದ್ಭವವಾಗಿರುತ್ತವೆ ಅವರ ಚಿತ್ರಗಳನ್ನು ನೋಡದ ಅಥವಾ ಆರಾಧಿಸದ ಇತ್ತೀಚಿನ ಪೀಳಿಗೆಗೆ..

ಅವರ ಪ್ರತಿಚಿತ್ರದಲ್ಲೂ ವಿಭಿನ್ನ ಕಥಾ ವಸ್ತುವನ್ನು ಒಳಗೊಂಡಿತ್ತು.. ಒಂದು ಸಂದರ್ಶನದಲ್ಲಿ ಅವರೆ ಗುರುತಿಸಿದ ಪ್ರತಿಭೆ ಅಂಬರೀಶ್ ಹೇಳಿದ್ದು "ಗುರುಗಳು ಮಾಡಿದ ಚಿತ್ರಗಳೆಲ್ಲ ನಮ್ಮ ಸಂಸೃತಿಗೆ  ವಿಭಿನ್ನವಾದದ್ದು ಆದರೂ ಅಂಥಹ ಕಥಾ ವಸ್ತುವನ್ನು ಎಲ್ಲರೂ ಒಪ್ಪುವ ರೀತಿಯಲ್ಲಿ ಕಟ್ಟಿಕೊಡುತ್ತಿದ್ದರು" ಪ್ರಾಯಶಃ ಇದು ಅವರ ಚಿತ್ರ ನಿರ್ದೇಶನಕ್ಕೆ ಹಾಗೆಯೇ ಅವರ ವ್ಯಕ್ತಿತ್ವಕ್ಕೆ ಒಂದು ಉತ್ತಮ ಮಾತುಗಳು...

ಇಂದು ಅವರ ಜನುಮ ದಿನ .. ಜನುಮ ದಿನ ಅಂದಾಗ ಅವರ ವ್ಯಕ್ತಿ ವಿಶೇಷಣ ಅಥವಾ ಗುಣಗಳನ್ನು ಹೊಗಳಿ ಹಾಡುವ ಪರಂಪರೆ ಸಾಮಾನ್ಯ.. ಇಂದೇಕೋ ಅವರ ಚಿತ್ರಗಳ ಹಾಡು ನೆನಪಿಗೆ ಬರುತ್ತಿದೆ.. ಅವರನ್ನು ಅವರದೇ ಚಿತ್ರಗೀತೆಗಳ ಮೂಲಕ ಕಟ್ಟಿ ಕೊಡೋಣ ಎನ್ನುವ ವಿಭಿನ್ನ ಚಪಲ ಕಾಡುತ್ತಿದೆ.. ತಗೊಳ್ಳಿ ಇದೋ ಬಂತು ನಿಮ್ಮ ಮುಂದೆ.. ನನಗೆ ಅನ್ನಿಸಿದ ಅವರ ನಿರ್ದೇಶನ ಹತ್ತು ಗೀತೆಗಳು ನಿಮ್ಮ ಮುಂದೆ.. ಇದು ಯಾವುದೇ ಕ್ರಮದಲ್ಲಿ ಇಲ್ಲ.. ನೆನಪಿಗೆ ಬಂದ ನನ್ನ ಮನಸ್ಸಿಗೆ (ಹುಚ್ಚು)ಹಿಡಿಸಿದ ಸಾಹಿತ್ಯ, ಸಂಗೀತ, ಚಿತ್ರೀಕರಣ ಅಷ್ಟೇಯ.. ಸರಿ ನಡೆಯಿರಿ ಹೋಗೋಣ

೧.
ಪ್ರೇಮದಲ್ಲಿ ಸ್ನೇಹದಲ್ಲಿ ಈ ಹಾಡು ರಂಗನಾಯಕಿ ಚಿತ್ರದ್ದು.. ಅದರ ಸಾಹಿತ್ಯ ತುಂಬಾ ವಿಭಿನ್ನ ಆ ಕಾಲದ ಅತ್ಯುತ್ತಮ ಮಸಾಲ ಚಿತ್ರಗೀತೆಯಿಂದೆ ಹೆಸರುವಾಸಿಯಾಗಿತ್ತು.. ಸಾಹಿತ್ಯ ವಿಭಿನ್ನ ಹಾಗೆಯೇ ಮಧುರ ಗೀತೆಗಳಿಗೆ ಹೆಸರಾಗಿದ್ದ ಸಂಗೀತ ನಿರ್ದೇಶಕ ಎಂ ರಂಗರಾವ್ ಈ ಗೀತೆಗೆ ಪಕ್ಕ ಮಸಾಲ ಸಂಗೀತ ನೀಡಿದ್ದಲ್ಲದೆ ಡ್ರಮ್ ಸಂಗೀತವನ್ನು ಅತಿ ಉತ್ತಮವಾಗಿ ಬಳಸಿಕೊಂಡಿದ್ದಾರೆ.. "ಮೈ ಡಿಯರ್" ಎನ್ನುವ ಪದವಾದ ಮೇಲೆ ಬರುವ ಡ್ರಮ್ ಬೀಟ್ಸ್ ಕೇಳಿ.. ಎಸ್ ಪಿ ಬಾಲಸುಬ್ರಮಣ್ಯಂ ಹಾಡಿದ ಈ ಹಾಡು ನಿಜಕ್ಕೂ ಈಗಿನ ಕಾಲದ ಫುಟ್ ಟ್ಯಾಪಿಂಗ್ ಅಂತಾರಲ್ಲ ಅದಕ್ಕಿಂತ ಸೂಪರ್.. ನಮ್ಮ ಕನ್ನಡ ಚಿತ್ರರಂಗದ ಮೊದಲ ಪ್ಲೇಬಾಯ್ ಎನಿಸುವ ಸ್ಪುರದ್ರೂಪಿ ರಾಮಕೃಷ್ಣ ಅವರ ನೃತ್ಯ ಎಲ್ಲವು ಸೊಗಸು.. ಪುಟ್ಟಣ್ಣ ಅವರ ತಾಕತ್ ಇದು. ಒಂದು ಮಸಾಲ ಚಿತ್ರಗೀತೆಯನ್ನು ಅಶ್ಲೀಲ ಎನಿಸದೆ ಚಿತ್ರೀಕರಿಸಿದ್ದು

೨.

ಮಹೇಶ್ ಪಾತ್ರಧಾರಿ ರಾಜ್ ಸಾಕ್ಷಾತ್ಕಾರದಲ್ಲಿ ಒಲವು ಒಲವು ಎನ್ನುತ್ತಾ ಎಲ್ಲರನ್ನು ಒಂದಾಗಿಸುವ ಪ್ರಯತ್ನದಲ್ಲಿ ಸುಳ್ಳು ಕೊಲೆ ಆಪಾದನೆ ಮೇಲೆ ಜೈಲು ಸೇರಿರುತ್ತಾರೆ.. ಅವರಿಗಾಗಿ ಕಾಯುತ್ತಿದ್ದ ಉಮ ಪಾತ್ರಧಾರಿ ಜಮುನ ಕಾದು ಕಾದು ಬೆಂದಿದ್ದಾಗ... ಬಿಡುಗಡೆಗೊಂಡ  ರಾಜ್ ಬರುವುದನ್ನು ಕಂಡು ಜಮುನ ಓಡೋಡಿ ಬರುತ್ತಾರೆ.. ಆಗ ಶುರುವಾಗುವ ಹಾಡು "ಒಲವೆ ಜೀವನ ಸಾಕ್ಷಾತ್ಕಾರ" ಪಿ ಬಿ ಎಸ್ ಮತ್ತು ಪಿ ಸುಶೀಲ ಹಾಡಿದ ಸುಮಧುರ ಹಾಡು... ಪಿ ಸುಶೀಲ ಹೇಳಿದ್ದನ್ನೇ ಪಿ ಬಿ ಎಸ್ ಹಾಡುವ ರೀತಿಯಲ್ಲಿ ಚಿತ್ರೀಕರಣಗೊಂಡಿದೆ.. ಇಲ್ಲಿ ಗಮನಿಸಬೇಕಾದ ಅಂಶ.
ಛಾಯಾಗ್ರಹಣ.. ಮತ್ತು ಕ್ಯಾಮರ ಓಡಾಟ.. ಹತ್ತಿರ ಬರುತ್ತದೆ ದೂರ ಹೋಗುತ್ತದೆ.. ಒಂದು ವಿಚಿತ್ರ ಅನುಭವ ಕೊಡುವ ಶೈಲಿ. ಒಲವು ಒಲವು ಎಂದು ಒದ್ದಾಡಿದರು ಅದರ ಸಾಪಲ್ಯ ಪಡೆಯದೇ.. ಸಿಕ್ಕಿತು ಆದ್ರೆ ದೂರವಾಯಿತು ಎನ್ನುವ ಅನುಭವ ಕೊಡುವ ಚಿತ್ರ ಇದು.. ಮತ್ತು ಇಬ್ಬರು ಹಾಡಿರುವ ಈ ಗೀತೆ ಪ್ರತಿಧ್ವನಿ ಅಥವಾ ಎಕೋ ಎಫೆಕ್ಟ್.. ಈ ಗೀತೆಯ ನಿಜವಾದ ಶಕ್ತಿ.. ಮತ್ತು ಅದುವೇ ಪುಟ್ಟಣ್ಣ ಅವರ ಶೈಲಿ

೩.

"ಗುರುಗಳೇ ನಾನೆ ಒಂದು ಹಾಡು ಕಟ್ಟಿದ್ದೇನೆ.. ಅದನ್ನು ಹಾಡಲೇ" ಶಾರದ ಪಾತ್ರಧಾರಿ ಆರತಿ ತಮ್ಮ ಗುರುಗಳು ಸೀತಾರಾಮ್ (ಮುಂದೆ ಉಪಾಸನೆ ಸೀತಾರಾಮ್ ಎಂದೇ ಪ್ರಖ್ಯಾತಿ ಹೊಂದಿದರು) ಅವರಿಗೆ ಕೇಳುತ್ತಾರೆ.. ಹಾಡು ತಾಯಿ ಅಂದಾಗ ಶುರುವಾಗುವುದು "ಭಾರತ ಭೂಶಿರ ಮಂದಿರ ಸುಂದರಿ".. ಈ ಗೀತೆಯಲ್ಲಿ ಆರತಿ ಅವರ ಮುಖ.. ಭಾವಾಭಿನಯ.. ಮತ್ತು ಅವರ ಮುಖದ ಮೇಲೆ ಬೀರುವ ಬೆಳಕು ಮತ್ತು ಸ್ವಲ್ಪವು ಕದಲದ ಕ್ಯಾಮರ ಕೈಚಳಕ.. ಪ್ರತಿ ಪದವನ್ನು ಅನುಭವಿಸಿ ಅಭಿನಯಿಸಿರುವ ಆರತಿ.. ಪ್ರತಿ ಪದಕ್ಕೂ ಜೀವ ತುಂಬಿ ಹಾಡಿರುವ ಎಸ್ ಜಾನಕಿ.. ಹಾಡುಗಾರಿಕೆಯಿಂದ ಸಂತಸಗೊಂಡು ಮಧ್ಯದಲ್ಲಿ ಬರುವ ಸಂಗೀತ ವಿಧ್ವಾಂಸ ಪಾತ್ರಧಾರಿ ರಾಮಚಂದ್ರ ಶಾಸ್ತ್ರಿ ಹೇಳುವ ಮಾತು "ನಿನ್ನ ಕರುಳು ಹಿಂಡುವ ಸಂಗೀತ ಅದ್ಭುತ ತಾಯಿ ನಿನಗೆ ಸಂಗೀತ ಶಾರದೆ ಸಂಪೂರ್ಣ ಒಲಿದಿದ್ದಾಳೆ ಎನ್ನುವಾಗ ಆರತಿ ಮುಖದಲ್ಲಿ ತೋರುವ ಭಕ್ತಿ ಭಾವ..
ನನಗೆ ತಿಳಿದಂತೆ ಈ ಚಿತ್ರದಲ್ಲಿ ಬಿಟ್ಟು ಕನ್ಯಾಕುಮಾರಿ ತಾಣದಲ್ಲಿ ಬೇರೆ ಯಾವ ಚಿತ್ರಗೀತೆಯು ಕಂಡಿಲ್ಲ. (ತಪ್ಪಿದ್ದರೆ ದಯವಿಟ್ಟು ತಿದ್ದಿ)..


೪.

"ಮುನಿತಾಯಿ ಪ್ರಸಂಗ" ಇದು ಚಿತ್ರರಂಗದ ಇತಿಹಾಸದಲ್ಲಿ ಒಂದು ಅಭೂತಪೂರ್ವ ಪ್ರಯೋಗ. ಒಂದೇ ಚಿತ್ರದಲ್ಲಿ ಮೂರು ಕಥೆಗಳನ್ನು ಹಾಗೂ ಒಂದಕ್ಕೊಂದು ಸಂಬಂಧವಿಲ್ಲದ ಮೂರು ಕಥಾವಸ್ತುವನ್ನು ತೆರೆಗೆ ತಂದ "ಕಥಾ ಸಂಗಮ ಚಿತ್ರದ ಒಂದು ಕಥೆ. ಕಣ್ಣು ಕಾಣದ ಆರತಿ ಮುನಿತಾಯಿ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದರೆ.. "ಓ ದ್ಯಾವ್ರೆ ನಿನ್ನ ಅಂದ ಚಂದವೇನೋ ಒಂದು ನಾ ಕಾಣೆ.. ನಿನ್ನ ನೆನೆದು ಹಿಗ್ಗಿ ಹಿಗ್ಗಿ ಕುಣಿವೆ ನಿನ್ನಾಣೆ" ಕಸ್ತೂರಿ ಶಂಕರ್ ಸುಮಧುರ ಹಾಡುಗಾರಿಕೆಯಲ್ಲಿ.. ಅಷ್ಟೇ ಚಂದದ ಸಾಹಿತ್ಯದಲ್ಲಿ ಕಪ್ಪು ಬಿಳುಪಿನ ವರ್ಣದಲ್ಲಿ ಚಿತ್ರೀಕರಿಸುವ ಹಾಡು. ಆರತಿ ಅಭಿನಯ, ಜೊತೆಯಲ್ಲಿ ಒಂದು ವಸ್ತು ಇಲ್ಲದಿದ್ದರೂ ಅದಕ್ಕೆ ಸಡ್ಡು ಹೊಡೆದು ಇನ್ನೊಂದು ಬಗೆಯ ವಿಭಿನ್ನ ಅನುಭವ ಪಡೆಯಬಹುದು ಎನ್ನುವ ಒಂದು ಸುಂದರ ಪ್ರಯತ್ನ.. ನನಗೆ ಬಲು ಮೆಚುಗೆಯಾದ ಸಾಹಿತ್ಯ ಮತ್ತು ಸಂಗೀತ ಜೊತೆಯಲ್ಲಿ ನನ್ನ ನೆಚ್ಚಿನ ನಟಿ ಆರತಿಯ ಮುದ್ದಾದ ಅಭಿನಯ..

೫.
ಬೆಂಕಿ ಚಂಡು ಹೇಗೆ ಇರುತ್ತದೆ ಎನ್ನುವುದನ್ನು ನೋಡಬೇಕೆ.. ನೋಡಿ ನಾಗರಹಾವು ಚಿತ್ರದ "ಹಾವಿನ ದ್ವೇಷ ಹನ್ನೆರಡು ವರುಷ" ಕನ್ನಡ ಬೆಳ್ಳಿ ತೆರೆಗೆ ಒಂದು ಉಲ್ಕೆ ಅಪ್ಪಳಿಸಿದ ಚಿತ್ರವಿದು. ವಿಷ್ಣು ಎಂಬ ಒಬ್ಬ ಸುರಸುಂದರ ನಾಯಕನಾಗಿ ಬೆಳಗಿದ ಚಿತ್ರ. ಕೋಪ ರೋಷ ದ್ವೇಷ ಛಲ ತ್ಯಾಗ ಹೀಗೆ ಎಲ್ಲವನ್ನು ಹೆಗಲ ಮೇಲೆ ಹೊತ್ತು ಆರ್ಭಟಿಸಿದ ಚಿತ್ರವಿದು. ಈ ಹಾಡಿನಲ್ಲಿ "ನಾ ಇಟ್ಟರೆ ಶಾಪ ಕೊಟ್ಟರೆ ವರ ನೀತಿಯ ಮೀರೋಲ್ಲ" ಎನ್ನುವಾಗ ವಿಷ್ಣುವಿನ ಅಭಿನಯ ನೋಡಿಯೇ ಸವಿಯಬೇಕು.. ಕಲ್ಲು ಬಂಡೆ, ಉರಿ ಬಿಸಿಲು, ಒರಟು ವ್ಯಕ್ತಿತ್ವ ಎಲ್ಲವನ್ನು ಒಂದೇ ಪ್ಯಾಕೇಜ್ ನಲ್ಲಿ ಹೊತ್ತು ತಂದ ಹಾಡು. ಒಲವಿನ ಗೆಳೆಯ ವಿಜಯಭಾಸ್ಕರ್ ಸಂಗೀತ, ಜೊತೆಯಲ್ಲಿ ವಿಷ್ಣುವಿಗೆ ಇನ್ನೊಂದು ಧ್ವನಿ ಎಂದೇ ಹೆಸರಾದ ಎಸ್ ಪಿ ಬಾಲಸುಬ್ರಮಣ್ಯಂ ಹಾಡುಗಾರಿಕೆ, ರೋಷ ಉಕ್ಕಿಸುವ ಸಾಹಿತ್ಯ  ಒಂದಕ್ಕೊಂದು ಮೇಳೈಸಿದೆ...

೬.  "ಅಂದದ ಮನೆಯಲ್ಲಿ ಶ್ರೀಗಂಧದ ಗುಡಿಯಲ್ಲಿ" ದಿಲ್ಲಿಯಿಂದ ಬಂದ ಹೆಣ್ಣಿನ ಬದಲಿಗೆ ಅವಳ ಹಾಗೆಯೇ ಕಾಣುವ ಹಳ್ಳಿಯ ಮುಗ್ಧೆ ಹಾಡುವ ಹಾಡು.. ಉತ್ಕೃಷ್ಟ ಸಾಹಿತ್ಯ. ಕಲ್ಪನಾ ತನ್ನ ಅಭಿನಯದ ಇನ್ನೊಂದು ಮಜಲನ್ನು ಹೊರಗೆ ಹಾಕಿದ ಚಿತ್ರ. ಹಾಡುತ್ತಾ ಹಾಡುತ್ತ ತನ್ನೊಳಗೆ ಮುಳುಗಿಹೋಗುತ್ತಾರೆ. ಅರ್ ರತ್ನ ಅವರ ಉತ್ತಮ ಸಂಗೀತ, ಸಾಹಿತ್ಯ ಹೊಂದಿದ ಈ ಗೀತೆಯ ಪರಾಕಾಷ್ಟೆ "ಅರಿಶಿನ ಕುಂಕುಮ ನಗುನಗುತಿರಲಿ" ಎನ್ನುವಾಗ ಅತೀವ ಭಾವನಾತ್ಮಕ ರೂಪವನ್ನು ಹೊರಹೊಮ್ಮಿಸುವ ಆದವಾನಿ ಲಕ್ಷ್ಮೀದೇವಿಯವರ ಹೊಳೆಯುವ ಮೂಗುತಿ, ಕಣ್ಣುಗಳು, ಮತ್ತು ಆನಂದದಿಂದ ಆನಂದ ಭಾಷ್ಪವನ್ನು ಒರೆಸಿಕೊಳ್ಳುವ ಅಮೋಘ ದೃಶ್ಯ. ಮತ್ತು ಹಾಡಿನ ನಂತರ ಬಾಲಣ್ಣ ಹೇಳುವ "ಹೆಣ್ಣು ಮಕ್ಕಳು ಮನೆಯ ವಾತಾವರಣವನ್ನೇ ಅವಲಂಬಿಸಿರುತ್ತಾರೆ" ಎನ್ನುವ ಅಮೋಘ ಸಂದೇಶ ಹೊತ್ತು ಸಾರುವ ಮಾತುಗಳು..

೭.

 "ಹಿಂದುಸ್ಥಾನವೂ ಎಂದೂ ಮರೆಯದ ಭಾರತ ರತ್ನವು ಜನ್ಮಿಸಲಿ" ಬೆಳ್ಳಿ ತೆರೆಗೆ ವರದ ಹಳ್ಳಿ ಅಥವಾ ಶ್ರೀಧರ ಸ್ವಾಮಿಗಳ ಪುಣ್ಯ ಸ್ಥಳವನ್ನು ಪರಿಚಯಿಸಿದ ಚಿತ್ರ ಅಮೃತಘಳಿಗೆ ಚಿತ್ರದ ಸುಂದರ ಹಾಡು. ಈ ಹಾಡಿನಲ್ಲಿ ಭಾರತದ ಹೆಮ್ಮೆಯನ್ನು ಹೇಳುತ್ತಲೇ.. ಕರುನಾಡಿನ ಅಮೋಘ ಚೆಲುವನ್ನು ಒಲವನ್ನು ಕವಿಗಳ ಲೇಖಕರ ಸಂಗಮವನ್ನು ತೋರುವ ಅಭಿಮಾನವನ್ನು ಉಕ್ಕಿಸುವ ಹಾಡು. ಜಯಚಂದ್ರನ್ ಕನ್ನಡ ಚಿತ್ರಗಳಲ್ಲಿ ಹಾಡಿರುವ ಹಾಡೆಲ್ಲ ಸೂಪರ್ ಹಿಟ್ ಗೀತೆಗಳೇ. ಅದರಲ್ಲಿ ಇದು ಮೊಟ್ಟ ಮೊದಲು ನಿಲ್ಲುತ್ತದೆ. ಶ್ರೀಧರ್ ಅವರಿಂದ ಹದಭರಿತ ಅಭಿನಯ ತೆಗೆದ ಪುಟ್ಟಣ್ಣ.. "ಧಮನಿ ಧಮನಿಯಲಿ ತುಂಬಿರಲಿ" ಎನ್ನುವಾಗ ಮುಷ್ಟಿಯಿಂದ ಎದೆಯನ್ನು ತಟ್ಟಿ ಕೊಳ್ಳುವ ದೃಶ್ಯ.. ಹಾಗೆಯೇ "ಭವ್ಯ ಶಾಸನ ಬರೆಯಿಸಲಿ" ಎನ್ನುವಾಗ ಕೈಯಲ್ಲೇ ಬರೆಯುವ ಅಭಿನಯ ತೋರುವ ದೃಶ್ಯ.. ಮತ್ತು ವಿಹಂಗಮ ಶ್ರೀಧರ ತೀರ್ಥದ ದೃಶ್ಯಗಳು ಮನಸ್ಸೆಳೆಯುತ್ತದೆ.

೮. ಕನ್ನಡ ಚಿತ್ರಗೀತೆಗಳಲ್ಲಿ ಶ್ಲೋಕ, ಮಂತ್ರಗಳು ನುಸುಳಿದ್ದು ಅನೇಕ ಚಿತ್ರಗಳಲಿದ್ದರೂ ಶರಪಂಜರದ ಚಿತ್ರದ ಕೊಡಗಿನ ಕಾವೇರಿ ಹಾಡಿನ ಮುಂಚೆ ಬರುವ "ತುಲಮಾಸೇತು ಕಾವೇರಿ" ಶ್ಲೋಕ, ಹಾಗೆಯೇ ಸಾಕ್ಶತ್ಕಾರ ಚಿತ್ರದಲ್ಲಿ "ಫಲಿಸಿತು ಒಲವಿನ  ಪೂಜಾಫಲ" ಹಾಡಿನಲ್ಲಿ ಮದುವೆ ಸನ್ನಿವೇಶದಲ್ಲಿ ಬರುವ ಕ್ರಮಬದ್ಧ ಮಂತ್ರಗಳನ್ನು ಹಾಗೆಯೇ ಹಾಡಿಸಿದ್ದು ಇವೆಲ್ಲ ಅವರ ಸಂಸ್ಕೃತಿಯ ಬಗೆಗಿನ ಅವರ ಅಭಿಮಾನ ಅದನ್ನು ಎಲ್ಲರೆಡೆಯೂ ಪಸರಿಸಲು ಆಯ್ದುಕೊಂಡ ಮಾಧ್ಯಮ ಎಲ್ಲವು ಮನಸ್ಸಿಗೆ ಹಿಡಿಸುತ್ತದೆ. ಕೊಡಗಿನ ಕಾವೇರಿ ಚಿತ್ರದಲ್ಲಿ ಪಿ ಸುಶೀಲ ಒಂದು ರೀತಿಯಲ್ಲಿ ಹಾಡಿದರೆ.. ಪಿ ಬಿ ಶ್ರೀನಿವಾಸ್ ಪ್ರತಿ ಸಾಲಿನಲ್ಲೂ "ಕಾವೇರಿ" ಎನ್ನುವ ಪದವನ್ನು ಉಚ್ಚರಿಸುವ ರೀತಿ ಭಲೇ ಎನ್ನಿಸುತ್ತದೆ.

೯.
"ವಿರಹ ನೂರು ನೂರು ತರಹ" ಪ್ರೇಮಿಗಳ ವಿರಹವನ್ನು ಬಗೆ ಬಗೆಯಾಗಿ ಸಾರುವ ಒಂದು ಉತ್ತಮ ಗೀತೆ. ಜಯಂತಿ ಅವರ ಮಾಗುತ್ತಿರುವ ಸೌಂದರ್ಯವನ್ನು ಅಷ್ಟೇ ಸುಂದರವಾಗಿ ತೆರೆಯ ಮೇಲೆ ತೋರಿಸಿದ್ದು ಹಾಗೆಯೇ ಸಂಜೆಯ ಇಳೀ ಹೊತ್ತಿನಲ್ಲೇ ಹಠ ಮಾಡಿ ಚಿತ್ರೀಕರಿಸಿದ್ದು ಈ ಹಾಡಿನ ತಾಕತ್.  ಪಿ ಸುಶೀಲ ಅವರ ಅಮೋಘ ಕಂಠ ಸಿರಿ, ಅದಕ್ಕೆ ಒಪ್ಪುವ ಸಂಗೀತ, ಸಾಹಿತ್ಯ ಎಲ್ಲವೂ ಅಮೋಘವಾಗಿ ಮೂಡಿ ಬಂದಿದೆ. ಜಯಂತಿ ಬರಿ ಉತ್ತಮ ಅಭಿನಯ ಮಾತ್ರವಲ್ಲ ಅಮೋಘವಾಗಿಯೂ ಕಾಣಬಲ್ಲರು ಎಂಬುದನ್ನೂ ತೋರಿಸಿದ್ದಾರೆ. ಒಂದು ಈ ಹಾಡಿನ ಒಂದು ದೃಶ್ಯದಲ್ಲಿ ಜಯಂತಿಯ ಜೊತೆಯಲ್ಲಿಯೇ ಕ್ಯಾಮರ ಚಾಲನೆಯಲ್ಲಿರುತ್ತದೆ. ಪ್ರತಿ ಫ್ರೇಮ್ ಕೂಡ ನಿಧಾನವಾಗಿ ಚಲಿಸಿರುತ್ತದೆ ಆದರೆ ಜಯಂತಿ ಅವರ ನಡೆಯುತ್ತಿರುವ ಜಾಗ ಮತ್ತು ಫ್ರೇಮ್ ನಲ್ಲಿ ತೋರಿಸುವ ಚೌಕಟ್ಟು ಮಾತ್ರ ಸಮಾನವಾಗಿ ಕಾಣುತ್ತದೆ. ಈ ದೃಶ್ಯ ನನ್ನ ಮೆಚ್ಚುಗೆಯಾಗಿ ಮನದಲ್ಲೇ ನಿಂತಿರುವ ದೃಶ್ಯ

೧೦.

"ಓ ಗುಣವಂತ ನಿನ್ನ ಗುಣಗಾನ ಮಾಡಲು ಪದಗಳೇ ಸಿಗುತ್ತಿಲ್ಲ" ನಿಜಕ್ಕೂ ಈ ಹಾಡು ಪುಟ್ಟಣ್ಣ ಅವರಿಗಾಗಿ ಬರೆದ ಹಾಡು ಅನ್ನಿಸುತ್ತದೆ. ಯಾಕೆಂದರೆ ಒಬ್ಬ ಸೃಜನಶೀಲ ನಿರ್ದೇಶಕ ಸಾಹಿತ್ಯ ಭಂಡಾರವನ್ನು ಹೇಗೆ ಉಪಯೋಗಿಸಬೇಕು, ಕನ್ನಡ ಕಂಪನ್ನು ಹೇಗೆ ವಿಸ್ತರಿಸಬೇಕು ಎನ್ನುವುದನ್ನು ಎತ್ತಿ ತೋರಿಸಿದ ಅಮೋಘ ಪ್ರತಿಭೆ ನಮ್ಮ ಪುಟ್ಟಣ್ಣ ಕಣಗಾಲ್. ಈ ಹಾಡಿನಲ್ಲಿ ಅತಿ ಸುಂದರವಾಗಿ ಕಾಣುವ ವಿಜಯಲಕ್ಷ್ಮಿ ಸಿಂಗ್, ಮುದ್ದಾಗಿ ಕಾಣುವ ಅಂಬರೀಶ್ ಜೊತೆಯಲ್ಲಿ ಬೆಂಗಳೂರು ಅರಮನೆ ಸುತ್ತ ಮುತ್ತಲೇ ಚಿತ್ರೀಕರಿಸಿದ ಸುಂದರ ಗೀತೆ. ಎಸ್ ಜಾನಕಿ ಹಾಡಿರುವ ರೀತಿ, ತನ್ನ ಪ್ರೀತಿಯನ್ನು ಅಥವಾ ತನ್ನ ಅಭಿಮಾನವನ್ನು ಪ್ರಸ್ತುತ ಪಡಿಸುವ ರೀತಿ ಎಲ್ಲವೂ ಅತ್ಯತ್ತಮ. ವಿಜಯನಾರಸಿಂಹ ಅವರ ಸಾಹಿತ್ಯ ಅಷ್ಟೇ ಸುಂದರವಾದ ವಿಜಯಭಾಸ್ಕರ್ ಅವರ ಸಂಗೀತ ಬೆಳ್ಳಿ ಚಿತ್ರಕ್ಕೆ ಸುವರ್ಣ ಚೌಕಟ್ಟು ಒದಗಿಸಿದೆ.

ಇಂಥಹ ಮಹೋನ್ನತ ನಿರ್ದೇಶಕ ಹುಟ್ಟಿದ ಮಣ್ಣಲ್ಲಿ ನಾವು ಹುಟ್ಟಿದ್ದು ನಮ್ಮ ಭಾಗ್ಯ. ಹಾಗೆಯೇ ಅವರ ಚಿತ್ರಗಳಿಂದ ಕಲಿತ ಕಲಿಯಬಹುದಾದ ಉತ್ತಮ ಸಂದೇಶಗಳು ಅವರ ನಿರ್ದೇಶನದ ಎಲ್ಲಾ ಚಿತ್ರಗಳಲ್ಲೂ ಕಾಣಬರುತ್ತದೆ. ಅವರ ಪ್ರತಿ ಚಿತ್ರಗಳು ಒಂದು ವಿಶ್ವ ವಿದ್ಯಾಲಯ ಇದ್ದ ಹಾಗೆ. ಅವರ ಜನುಮದಿನವನ್ನೂ ವಿಭಿನ್ನವಾಗಿ ಕಟ್ಟಿ ಕೊಡೋಣ ಅನ್ನುವ ನನ್ನ ತವಕಕ್ಕೆ ನೀರು ಎರೆದಿದ್ದು ಅವರ ಚಿತ್ರಗೀತೆಗಳು ಮತ್ತು ಗೀತೆಗಳನ್ನೂ ವಿಭಿನ್ನವಾಗಿ ಚಿತ್ರಿಸಿ ಅಷ್ಟೇ ಸುಮಧುರ ಸಂದೇಶ ಹೊತ್ತು ಸಾರುತ್ತಿದ್ದ ಅವರ ಎಲ್ಲಾ ಚಿತ್ರಗಳ ಅವರ ಶೈಲಿ.

ಪುಟ್ಟಣ್ಣ ನೀವು ಹೃದಯದಿಂದ ಚಿತ್ರೀಕರಿಸಿದ ಎಲ್ಲಾ ಚಿತ್ರಗಳನ್ನು ನೋಡಿ ಅದರ ಬಗ್ಗೆ ನನಗನ್ನಿಸಿದ ಮಾತುಗಳನ್ನು ಹೇಳುವ ನನ್ನ ಬಯಕೆ ಈಡೇರಬೇಕು ಅದಕ್ಕೆ ನಿಮ್ಮ ಆಶೀರ್ವಾದವೂ ಇರಬೇಕು.. ಹುಟ್ಟು ಹಬ್ಬದ ಸುಂದರ ಶುಭಾಶಯಗಳು ನಮ್ಮ ಜೊತೆಯಲ್ಲೇ ಇರುವ ನಿಮ್ಮ ಮಹಾನ್ ಚೇತನಕ್ಕೆ!!!

(ಸಿಕ್ಕ ವೀಡಿಯೊ ತುಣುಕುಗಳನ್ನು ಹಾಕಲು ಪ್ರಯತ್ನ ಪಟ್ಟಿದ್ದೇನೆ.. ಕೆಲವು ಸಿಕ್ಕವು ಕೆಲವು ಸಿಕ್ಕಲಿಲ್ಲ... ಯು ಟ್ಯೂಬ್ ನಲ್ಲಿ ಸಿಕ್ಕ ಕೆಲವು ತುಣುಕುಗಳನ್ನು ತುರುಕುತ್ತಿದ್ದೇನೆ.. ಎಲ್ಲಾದರೂ ಈ ತುಣುಕುಗಳು ಬೇಡದ ವಿಷಯಗಳನ್ನು ಬಿತ್ತಿರಿಸಿದರೆ ದಯಮಾಡಿ ಸಂದೇಶ ಕಳಿಸಿ.. ಕಿತ್ತು ಹಾಕುತ್ತೇನೆ)

Sunday, October 6, 2013

ಪವಾಡ ನಡೆಸಿದ ಮಲ್ಲಮ್ಮ - ಮಲ್ಲಮ್ಮನ ಪವಾಡ (1969)

ಊರಿನ ಅನೇಕ ಕುಟುಂಬದಲ್ಲೂ ನಡೆದಿರಬಹುದಾದ ಒಂದು ತಲೆಮಾರಿನ ಇತಿಹಾಸವನ್ನೇ ತಲೆಕೆಳಗು ಮಾಡಬಲ್ಲ ಸವತಿ ಮಕ್ಕಳ ಕಥಾವಸ್ತುವುಳ್ಳ ಈ ಚಿತ್ರ ಒಂದು ರೀತಿಯಲ್ಲಿ ಇತಿಹಾಸವನ್ನೇ ಮಾಡಿತ್ತು. ಅರವತ್ತರ ಅಂತ್ಯದಲ್ಲಿ ಚಿತ್ರೀಕರಣಗೊಂಡ ಮಲ ತಾಯಿ ಧೋರಣೆಯ ಕಥಾವಸ್ತುವಿನ ಚಿತ್ರ ,ಭಾರತದ ಪ್ರಮುಖ ಭಾಷೆಗಳಲ್ಲಿ ಕಾಲ ಕಾಲ ಘಟ್ಟಕ್ಕೆ ಅನುಗುಣವಾಗಿ ಬದಲಾಗುತ್ತಾ ಚಿತ್ರೀಕರಣಗೊಂಡರೂ,  ನಮ್ಮ ಗಾರುಡಿಗ ಅಶ್ಲೀಲತೆಯ ಸೊಂಕಿಲ್ಲದೆ, ಮೈಯನ್ನು ಮುಟ್ಟದೆ ಭಾವನಾತ್ಮಕವಾಗಿ ಮನಸನ್ನು ಮಾತ್ರ ಮುಟ್ಟುವಂತಹ  ಚಿತ್ರ ನಮಗೆ ನೀಡಿದ್ದಾರೆ.   


ಶ್ರೀ ಬಿ ಪುಟ್ಟಸ್ವಾಮಯ್ಯನವರ ಕಾದಂಬರಿ ಆಧಾರಿತ,  ಪಿ ಪುಲ್ಲಯ್ಯ ಚಿತ್ರಕಥೆ ಹೊಂದಿದ್ದ ಈ ಚಿತ್ರಕ್ಕೆ ಆರ್ ಏನ್ ಜಯಗೋಪಾಲ್ ಮತ್ತು ಪುಟ್ಟಣ್ಣ ಅವರ ಆಪ್ತ ಮಿತ್ರವಿಜಯನಾರಸಿಂಹ ಗೀತೆಗಳನ್ನು ರಚಿಸಿದ್ದರು. ಸಂಭಾಷಣೆ ಕುರಾಸಿ ಎಂದೇ ಖ್ಯಾತರಾಗಿದ್ದ ಕು ರಾ ಸೀತಾರಾಮಶಾಸ್ತ್ರಿ ಮತ್ತು ಛಾಯಾಗ್ರಹಣ ಸೆಲ್ವರಾಜ್ ಅವರದಾಗಿತ್ತು. ಈ ಚಿತ್ರದ  ವಿಶೇಷತೆ ಕಂಚಿನ ಕಂಠದ ವಜ್ರಮುನಿ ಪಾದಾರ್ಪಣೆ ಮಾಡಿದ್ದು ಹಾಗೆಯೇ ಇನ್ನೊಂದು ಕಂಚಿನ ಕಂಠ ಸುಂದರ ಕೃಷ್ಣ ಅರಸ್ ಸಹ ನಿರ್ದೇಶಕ ಆಗಿದ್ದು ಅಷ್ಟೇ ಅಲ್ಲದೆ ಒಂದು ಚಿಕ್ಕ ಚೊಕ್ಕ ಪಾತ್ರವನ್ನು ಮಾಡಿದ್ದರು. ಇಡಿ ಚಿತ್ರಕ್ಕೆ ಸುಮಧುರ ಸಂಗೀತ ನೀಡಿದ್ದು ಸಂಗೀತ ಸಾಮ್ರಾಟ್ ವಿಜಯಭಾಸ್ಕರ್.  

ಪ್ರಥಮ ದೃಶ್ಯದಲ್ಲೇ ಮನಸ್ಸೆಳೆಯುವುದು ಪುಟ್ಟಣ್ಣ ಅವರ ಚಿತ್ರಗಳ ವಿಶೇಷತೆ. ಗೂಳಿಯಂತೆ ಮನದೊಳಕ್ಕೆ ನುಗ್ಗುವ ಆಶಾ ಪಾಶಗಳನ್ನು ಕಡಿವಾಣದಲ್ಲಿಟ್ಟುಕೊಳ್ಳಲು ರಭಸಬೇಕಿಲ್ಲ ಆದರೆ ತಾಳ್ಮೆಯ ಗುಣ ಇರಬೇಕು ಎನ್ನುವುದನ್ನು ಗೂಳಿ ನುಗ್ಗಿ ಬರುವುದನ್ನು ನೋಡಿ "ಬಸವ ಅಲ್ಲೇ ನಿಲ್ಲು" ಎಂದು  ಸಾತ್ವಿಕ ದೃಷ್ಟಿ ಬೀರಿ ಗೂಳಿಯನ್ನು ನಿಲ್ಲಿಸುವ ದೃಶ್ಯದಲ್ಲಿ ಸರೋಜಾದೇವಿ ಪ್ರತಿಪಾದಿಸುತ್ತಾರೆ. ಸಮಸ್ಯೆಗಳನ್ನು ಶಾಂತ ಚಿತ್ತರೀತಿಯಲ್ಲಿ ಮಾತ್ರ ಬಗೆಹರಿಸಬೇಕು ಎನ್ನುವುದು ತಿಳಿಯುತ್ತದೆ. 

ದೇಹ ಬೆಳೆದರು ಮಗು ಮನದೊಳಗೆ ಇರುತ್ತದೆ ಎನ್ನುವ ಹಾಗೆ "ನಾನೂನು ನಿಮ್ಮಂಗೆ ಗೊಂಬೇನೇ ಕಣ್ರೋ" ಎನ್ನುವ ಹಾಡಿನಲ್ಲಿ ಪಿ ಬಿ ಎಸ್ ಗಾಯನ ರಾಜ್ ಅವರ ಅಭಿನಯ ಕಣ್ಣಿಗೆ ಕಟ್ಟುತ್ತದೆ. 

ಅದೇ ಮಾತು ಹೇಳುತ್ತಾ "ಸಂತೋಷ ಬಂದಾಗ ನಗಬೇಕು ಸಂಕಟ ಬಂದಾಗ ಅಳಬೇಕು" ಎನ್ನುವ ಮಾತು ಎಷ್ಟು ನಿಜ ಅಲ್ಲವೇ. ಅದು ಇದ್ದಾಗ ಇದು ಬೇಕು ಇದು ಇದ್ದಾಗ ಅದು ಬೇಕು ಎನ್ನುತ್ತಾ ಎರಡನ್ನು ಅನುಭವಿಸದೆ ಗೋಳಾಡುವ ಮನಸ್ಥಿತಿಗೆ ಸರಿಯಾದ ಚಾಟಿ ಏಟು ಈ ಮಾತು. 

"ಶರಣೆಂಬೆ ನಾ ಶಶಿಭೂಷಣ" ಹಾಡಿನಲ್ಲಿ ದೃಶ್ಯ ಸಂಯೋಜನೆ, ಪಿ ಸುಶೀಲ ಅವರ ಮಧುರ ಗಾಯನ, ಶಿವಲೀಲೆಯನ್ನು ನೆರಳು ಬೆಳಕಿನಲ್ಲಿ ತೋರುವ ತಂತ್ರಜ್ಞಾನ, ಸರೋಜದೇವಿಯವರ ಅಭಿನಯ ಎಲ್ಲವೂ ಹಾಲುಜೇನಿನಂತೆ ಮಿಳಿತವಾಗಿದೆ. 

"ಹುಚ್ಚರಲ್ಲ ನೀವು ಹುಚ್ಚರಲ್ಲ" ಹಾಡಿನಲ್ಲಿ ತೊಳಲಾಟದಿಂದ ಹೊರಗೆ ಕರೆ ತರುವಾಗ ನಾವು ಅವರ ನೆಲೆಗಟ್ಟಿಗೆ ಹೋಗಿ ಅವರನ್ನು ಮೇಲಕ್ಕೆ ತರಬೇಕು ಎನ್ನುವ ಮಾರ್ಮಿಕ ಸಂದೇಶ ಪಿ ಸುಶೀಲ ಅವರ ಗಾಯನದಲ್ಲಿ ಮೂಡಿಬಂದಿದೆ. 

"ಮರೆಯದ ಮಾತಾಡು ಜಾಣ" ಬಿ ಕೆ ಸುಮಿತ್ರ ಧ್ವನಿಯಲ್ಲಿ ಪ್ರೇಮ ಪಾಶ ಮೋಹಕತೆಯ ಅಂಶ ಚೆಲ್ಲುತ್ತದೆ. 

ರಾಜ್ ಕೇಳುತ್ತಾರೆ "ಪ್ರೇಮ" ಎಂದರೆ ಏನು ಎಂದು. ಮಾನಸಿಕವಾಗಿ ಬೆಳೆಯದ ಅವರ ಬುದ್ದಿಮತ್ತೆಗೆ ಪತ್ನಿಯಾದವಳು ಯಾವುದೇ ರೋಮಾಂಚನಕಾರಿ ಅಥವಾ ಪ್ರಚೋದನೆ ನೀಡುವಂತೆ ಹೇಳದೆ, ಚಿತ್ರಿಸದೆ, ಬರಿ ಮಾತು ಮಾತಲ್ಲೇ ಅದರ ಅರ್ಥ ಹೇಳುವ ದೃಶ್ಯ ಈ ಚಿತ್ರದ ಹೈ ಲೈಟ್ ಎನ್ನಬಹುದು. 

ನನಗೆ ತುಂಬಾ ಹಿಡಿಸಿದ ಇನ್ನೊಂದು ಸಂಭಾಷಣೆ "ಸಾತ್ವಿಕ ಮನೋಭಾವ ಎಂದು ಅಂಜುಕುಳಿಯಲ್ಲ" ವಾಹ್.. ನಿಜಕ್ಕೂ ಮನವನ್ನು ಬಡಿದೆಬ್ಬಿಸಬಹುದಾದ ಮಾತುಗಳು. 

ರಾಜ್ ಓದುತ್ತಾರೆ, ವಿಧ್ಯಾವಂತರಾಗುತ್ತಾರೆ.. ಅದನ್ನು ಗಮನಿಸಲು ಬರುವ ಅಪ್ಪನ ಪಾತ್ರಧಾರಿ ಸಂಪತ್ ಕೇಳುತ್ತಾರೆ "ಚಂದ್ರಣ್ಣ ಏನು ಓದುತ್ತಿದ್ದೀಯ"

"ಇಡಿ ಸಾರಸತ್ವ ಲೋಕವನ್ನೇ ಸೂರೆಗೊಂಡ ಕನ್ನಡದ ಮಹೋನ್ನತ ಕವಿ ರನ್ನನ ಗಧಾಯುದ್ಧ  ಓದುತ್ತಿದ್ದೇನೆ. ಮಿತ್ರನ ಋಣವನ್ನು ತೀರಿಸುವ ಸಲುವಾಗಿ ತಮ್ಮನ ಅಂಬಿಗೆ ಬಲಿಯಾಗಿ ರಕ್ತ ತರ್ಪಣ ಕೊಟ್ಟ ಕರ್ಣನ ಸಾವಿನ ಸನ್ನಿವೇಶ" ಎಂದು ಹೇಳುವಾಗ ರಾಜ್ ಕಣ್ಣಲ್ಲಿ ನೀರು, ಅಭಿನಯ, ಸಂಭಾಷಣೆ ಹೇಳುವ ಶೈಲಿ ಇಡಿ ದೃಶ್ಯವನ್ನು ಚಿತ್ರೀಕರಿಸಿದ ರೀತಿ ಪುಟ್ಟಣ್ಣ ಅವರ ತಾಕತ್ ತೋರಿಸುತ್ತದೆ. ಈ ದೃಶ್ಯದ ಬಗ್ಗೆ ಬರೆಯುವಾಗ ನಿಜಕ್ಕೂ ನಾನು ರೋಮಾಂಚನಗೊಂಡಿದ್ದೆ. ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತಿತ್ತು. ಮಗನ ಬಗ್ಗೆ ಹೆಮ್ಮೆ ಪಟ್ಟುಕೊಳ್ಳುವ ಅಭಿನಯ ಸಂಪತ್ ಕಣ್ಣಲ್ಲಿ.... ಬೇಡ ನೀವೇ ಒಮ್ಮೆ ನೋಡಿ ಅನುಭವಿಸಿ.... 

ಮೊದಲ ಹೆಂಡತಿಯ ಮಗನಿಗೆ ಮಲತಾಯಿ ಸರಿಯಾಗಿ ಆರೈಕೆ ಮಾಡಿಲ್ಲ ಎನ್ನುವ ವಿಷಯ ಗೊತ್ತಾದಾಗ ಸಂಪತ್ ಹೇಳುವ ಮಾತು "ತಾಯಿಪ್ರೇಮ ಗಂಗಾ ಪ್ರವಾಹ  ಇದ್ದ ಹಾಗೆ.. ಒಬ್ಬ ಒಂದು ಬೊಗಸೆ ಇನ್ನೊಬ್ಬ ಇನ್ನೊಂದು ಬೊಗಸೆ ಕುಡಿದರೆ ಗಂಗಾ ಪ್ರವಾಹ ಬತ್ತಿ ಹೋಗುವುದಿಲ್ಲ" ತಾಯಿ ಮಮತೆಯ ಬಗ್ಗೆ ಇದಕ್ಕಿಂತ ಉತ್ತಮ ಸಂಭಾಷಣೆ ಬೇಕೇ... 

"ಆಶಾ ವಿಲಾಸಿ ಈ ರೂಪ ರಾಶಿ" ಎಲ್ ಆರ್ ಈಶ್ವರಿ ಈ ಹಾಡಿಗೆ ಬೇಕಾದ ಮಾದಕತೆಯನ್ನು ತುಂಬುತ್ತಾರೆ.. ಅಷ್ಟೇ ಚೆಲುವಾಗಿ ನರ್ತಿಸುವ ಉದಯಚಂದ್ರಿಕ ಮನಸೆಳೆಯುತ್ತಾರೆ. ಅಶ್ಲೀಲತೆಯಿಲ್ಲದೆ ಒಂದು ಮೋಜಿನ ಹಾಡನ್ನು ಸೃಷ್ಟಿಸುವುದು ನಿಜಕ್ಕೂ ಒಂದು ಸವಾಲ್. ಅದರಲ್ಲಿ ನಮ್ಮ ಹೆಮ್ಮೆಯ ನಿರ್ದೇಶಕ ಯಾವಾಗಲೂ ಮುಂದೆ. 

"ಪ್ರಪಂಚದಲ್ಲಿ ವಿವೇಕ ಎನ್ನುವ ಕಠೊರ ಚಾವಟಿಗಿಂತ ಬೇರೆ ಇಲ್ಲ" ಎನ್ನುವ ಮಾತು ಎಷ್ಟು ನಿಜ. 

"ಹಾಡೋಣ ಒಲವಿನ ರಾಗ ಮಾಲೆ" ಪಿ ಬಿ ಎಸ್ ಮತ್ತು ಪಿ ಸುಶೀಲ ಮನ ತುಂಬುತ್ತಾರೆ. ಒಂದು ಪ್ರೇಮ ಗೀತೆ ಅಥವಾ ಒಂದು ಸುಮಧುರ ಪ್ರೀತಿ ತುಂಬಿದ ಗೀತೆ ಗ್ರಾಮೀಣ ಪರಿಸರದಲ್ಲಿ ತೋರುವ ಬಗೆ ಸಂತಸ ಕೊಡುತ್ತದೆ. 

ಇನ್ನೂ ಈ ಚಿತ್ರದ ಇಬ್ಬರ ಅಭಿನಯ ಹೇಳದೆ ಹೋದರೆ ಈ ಲೇಖನ ಅಪೂರ್ಣ.. 

ವಜ್ರಮುನಿ ಮೊದಲ ಚಿತ್ರ.  ಆದರೆ ಅಭಿನಯದಲ್ಲಿ ಯಾವುದೇ ರೀತಿಯಲ್ಲೂ ಇದು ಮೊದಲ ಚಿತ್ರ ಎಂಬ ಅನುಮಾನದ ಲವಲೇಶವೂ ಕಾಣುವುದಿಲ್ಲ. ಅಲ್ಲಿರುವ ನಟ ನಟಿಯರೆಲ್ಲ ಘಟಾನುಘಟಿಗಳೇ..ಸಂಪತ್, ರಾಜ್, ಸರೋಜಾದೇವಿ, ಆದವಾನಿ ಲಕ್ಷ್ಮೀದೇವಿ, ರಮಾದೇವಿ, ರಾಮಚಂದ್ರ ಶಾಸ್ತ್ರಿ, ದ್ವಾರಕೀಶ್, ಅನಂತರಾಮ್ ಮಚ್ಚೇರಿ, ಇವರ ಜೊತೆಯಲ್ಲಿ ನಮ್ಮ ಬಾಲಣ್ಣ.. ಇಂತಹ ಮಹಾನ್ ನಟ ನಟಿಯರ ಎದುರಲ್ಲಿ ಮೊದಲ ಚಿತ್ರದಲ್ಲೇ ಸೆಡ್ಡು ಹೊಡೆಯುವಂತಹ ಅಭಿನಯ.. 

"ಅಮ್ಮ ನಿನ್ನ ಕುಂಕುಮ ಹೋದ ಮೇಲೆ ನಿನಗೆ ಬೇಕಿರುವುದು ನಾಲ್ಕು ಗೋಡೆಯ ನೆರಳು" ಈ ದೃಶ್ಯದಲ್ಲಿ ಆ ಕಂಚಿನ ಕಂಠದ ಅಭಿನಯ, ಮುಖಭಾವ ಅಬ್ಬಾ ಹಾಗೆಯೇ ಬೆನ್ನು ಮೂಳೆಯಲ್ಲಿ ಸಣ್ಣಗೆ ಚಳಿ ಏಳುತ್ತದೆ.

ಇನ್ನೂ  ನನ್ನ ನೆಚ್ಚಿನ ಬಾಲಣ್ಣ 

"ಊರಿಗೆ ಗೊತ್ತಿರುವ ವಿಷಯ ಇವರಿಗೆ ಗೊತ್ತಿಲ್ವ ಚಿನ್ನಾ.. ಇವರು ಈ ಪ್ರಪಂಚದವರಲ್ವ ಚಿನ್ನಾ.. ಯಾರು ಚಿನ್ನಾ ಇವರು....  ಓಹ್ ತಾಯಿನಾ... ಬಿಡು ಚಿನ್ನ...  ಸಾಧಾರಣ... "

"ವಾಲಗ ಊದಿದರೆನಾ ಮದುವೆ ತಾಳಿ ಕಟ್ಟಿದರೇನಾ ಮದುವೆ.. ಆ ಸಂಪ್ರದಾಯ ನಮ್ಮ ಕಡೆ ಇಲ್ಲಾ ಚಿನ್ನ.. ಮೈಸೂರು ಚಿಗುರೆಲೆಯಲ್ಲಿ ಮಲ್ಲಿಗೆ ಅಂಥಹ ಮನಸನ್ನು ಮಡಿಸಿ ದಂತದಂಥಹ ಈ ಕೈಗಳಲ್ಲಿ ಬಾಯಿಯಲ್ಲಿ ಇಡಿಸಿಕೊಂಡರೆ ಆಯಿತು"

"ಲಗಾವಣೆ ಮಾಡ್ಕೊಬೇಕು ಜಮಾವಣೆ"

ಇವೆಲ್ಲಾ ಅವರ ನುಡಿಮುತ್ತುಗಳು. ತಲೆ ಹಿಡುಕನಾಗಿ ವಯ್ಯಾರ ಮಾಡುತ್ತಾ ರಾಗವಾಗಿ ಸಂಭಾಷಣೆ ಹೇಳುವ ಶೈಲಿ ಬಾಲಣ್ಣನಿಗೆ ಮಾತ್ರ ಸಾಧ್ಯ. 

ಹಳ್ಳಿ ಪರಿಸರದಲ್ಲಿ ನಡೆಯುವ ಕುಟುಂಬ ಕಲಹ, ಮಲತಾಯಿ ಮತ್ಸರ ತೋರುವ ಆದವಾನಿ ಲಕ್ಷ್ಮೀದೇವಿ, ತಾಯಿಯ ಮಾತಿಗೆ ಮರುಳಾಗಿ ಕೆಟ್ಟ ದಾರಿ ಹಿಡಿಯುವ ವಜ್ರಮುನಿ ಪಾತ್ರ, ಅದನ್ನು ಎದುರಿಸದೆ ತೊಳಲಾಡುವ ಮನೆಯ ಯಜಮಾನನಾಗಿ ಸಂಪತ್, ತನ್ನ ಮಗಳಿಗೆ ಮೋಸವಾಗಿದೆ ಅಂತ ಅರಿವಾದಾಗ ಊರಿನ ಪ್ರಮುಖರು ಎನ್ನುವುದನ್ನು ಯೋಚಿಸದೆ ಅವರ ಮೇಲೆ ಹರಿಹಾಯುವ ಹೆಣ್ಣಿನ ತಂದೆಯಾಗಿ ಅನಂತರಾಮ್ ಮಚ್ಚೇರಿ, ಇವರ ಮಧ್ಯೆ ಸ್ವಾಮೀ ನಿಷ್ಠೆ ತೋರುವ ಶಾನುಭೋಗರು ಪಾತ್ರದಲ್ಲಿ ರಾಮಚಂದ್ರ ಶಾಸ್ತ್ರಿ, ಸಹಾಯಕ ಪಾತ್ರಗಳಲ್ಲಿ ದ್ವಾರಕೀಶ್, ಶಾಂತಮ್ಮ, ಕೆಲ ಹಳ್ಳಿಗರು, ಇವರ ಮಧ್ಯೆ ಕೆಟ್ಟವರನ್ನು ಇನ್ನಷ್ಟು ಕೆಡಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಪಾತ್ರದಲ್ಲಿ ಬಾಲಣ್ಣ, ರಮಾದೇವಿ, ಉದಯ ಚಂದ್ರಿಕಾ, ಇವರೆನ್ನಲ್ಲ ಸಂಭಾಳಿಸುವ ರಾಜ್ ಮತ್ತು ಸರೋಜಾದೇವಿ.  ಇದನೆಲ್ಲ ಹದವಾಗಿ ಬೆರೆಸಿ ಒಂದು ರುಚಿಯಾದ ಪಾಕ ತಯಾರಿಸಿರುವ ನಿರ್ದೇಶಕ, ಒಂದು ಸುಂದರ ಸಂದೇಶ ನೀಡುವ ಚಿತ್ರವನ್ನಾಗಿ "ಮಲ್ಲಮ್ಮನ ಪವಾಡ"ವನ್ನೇ ಮಾಡಿದ್ದಾರೆ ಎಂದರೆ ಅತಿಶಯೋಕ್ತಿ ಅಲ್ಲವೇ ಅಲ್ಲಾ. 

Wednesday, July 24, 2013

ಬೆಳ್ಳಿ ಮೋಡದ ಅಂಚಿನಿಂದ - ಬೆಳ್ಳಿ ಮೋಡ (1966)

ಚಿತ್ರ ನಿರ್ದೇಶನಕ್ಕೆ ಮಾಂತ್ರಿಕ ಸ್ಪರ್ಶ ತಂದ ಗಾರುಡಿಗನ ತೆರೆಕಂಡ ಮೊದಲ ಚಿತ್ರದ ಹೆಸರು ಇದಕ್ಕಿಂತ ಅಮೋಘ ಹೆಸರು ಬೇಕಿರಲಿಲ್ಲ ಅನ್ನಿಸುತ್ತೆ.. ಬೆಳ್ಳಿ ಮೋಡ.....  ವಾಹ್!


ಪಿ ಬಿ ಶ್ರೀನಿವಾಸ್, ಪಿ ಸುಶೀಲ, ಎಸ್ ಜಾನಕಿ, ಬಿ ಕೆ ಸುಮಿತ್ರ ಅವರ ಸುಮಧುರ ಕಂಠದಲ್ಲಿ
ದ ರಾ ಬೇಂದ್ರೆ  ಮತ್ತು ಅರ್ ಏನ್ ಜಯಗೋಪಾಲ್  ಬರೆದಿರುವ ಸಾಹಿತ್ಯವನ್ನು
ತಮ್ಮ ಉತ್ಕ್ರುಷ್ಟ ಸಂಗೀತದಲ್ಲಿ ಮಿಳಿತಗೊಳಿಸಿರುವ ಸಂಗೀತ ಗಾರುಡಿಗ ವಿಜಯಭಾಸ್ಕರ್
ಕಪ್ಪು ಬಿಳುಪಿನಲ್ಲಿ ಸೆರೆ ಹಿಡಿದು ಕೊಟ್ಟಿರುವ ಛಾಯಾಗ್ರಾಹಕ ಆರ್ ಏನ್ ಕೃಷ್ಣಪ್ರಸಾದ್ 
ಬಿಗಿ ಹಿಡಿತದಲ್ಲಿ ಸಂಕಲನ ಮಾಡಿರುವ ವಿ ಪಿ ಕೃಷ್ಣನ್ 
ಮತ್ತು ಇವರ ಪ್ರತಿಭೆಯನ್ನೆಲ್ಲ ಸರಿಯಾಗಿ ಕಲೆಹಾಕಿದ ನಿರ್ಮಾಪಕ ಪಾರಿಜಾತ ಪಿಕ್ಚರ್ಸ್ ನ ಟಿ ಏನ್ ಶ್ರೀನಿವಾಸನ್ 
ಒಂದು ಸುಂದರಕಥೆಯನ್ನು ಅಷ್ಟೇ ಮಧುರವಾದ ಸಂಭಾಷಣೆಯನ್ನು ಬರೆದ ಲೇಖಕಿ ತ್ರಿವೇಣಿ 
ಈ ಸುಂದರ ಕಲಾವಿದರ ದಂಡಿನ ಹಡಗನ್ನು ಸಮರ್ಥವಾಗಿ ಮುನ್ನೆಡೆಸಿದ ನಾವಿಕರ ಕಪ್ತಾನ ಪುಟ್ಟಣ್ಣ ಕಣಗಾಲ್ 
ಇವರೆಲ್ಲರ ಸಮಾಗಮ ೧೯೬೬ರ ಅಮೋಘ ಕೊಡುಗೆ ಬೆಳ್ಳಿ ಮೋಡ.  

ಚಿತ್ರದ ಆರಂಭಿಕ ದೃಶ್ಯದಲ್ಲಿ ಕಥಾ ಲೇಖಕಿ ದಿವಗಂತ ತ್ರಿವೇಣಿ ಅವರಿಗೆ ನಮನ ಸಲ್ಲಿಸುತ್ತಲೇ.. ತಾವೊಬ್ಬ ವಿಭಿನ್ನ ಹಾದಿ ತುಳಿಯುವವರು ಎನ್ನುವುದನ್ನು ತೋರುತ್ತಾರೆ. ಇದು ಒಬ್ಬ ನಿರ್ದೇಶಕ ತಾನು ಬಳಸಿಕೊಳ್ಳುವ ಕಥಾ ಲೇಖಕ/ಕಿ ಅವರಿಗೆ ಕೊಡುವ ಉತ್ಕೃಷ್ಟ ಸನ್ಮಾನ ಎನ್ನಬಹುದು.

"ಸರ್ ನೀವು ಎಲ್ಲಿಂದ ಬಂದ್ರಿ ಎಲ್ಲಿಗೆ ಹೋಗುತ್ತಿದ್ದೀರಿ?"
ಏನಯ್ಯ ಮಹಾತ್ಮರಿಗೆ ಅರಿವಾಗದ ಪ್ರಶ್ನೆಯನ್ನು ಸಾಮಾನ್ಯನಾದ ನನಗೆ ಕೇಳುತಿದ್ದೀಯ?"

ಈ ಸಂಭಾಷಣೆ ದ್ವಾರಕೀಶ್ ಮತ್ತು ನಾಯಕ ಕಲ್ಯಾಣ್ ಕುಮಾರ್ ಮಧ್ಯೆ ಆರಂಭಿಕ ದೃಶ್ಯದಲ್ಲಿ ಸಿಗುತ್ತದೆ. ಚಿತ್ರದ ಆರಂಭದಲ್ಲೇ ಚಿತ್ರದ ನಾಯಕ ತಾನೂ ಒಬ್ಬ ಸಾಮಾನ್ಯ, ರಾಗ ಭಾವ ದ್ವೇಷಗಳನ್ನು ಒಳಗೊಂಡವ ಎನ್ನುವ ಸಂದೇಶ ಸಾರುತ್ತದೆ.

ಹಾದಿಯಲ್ಲಿ ಹೋಗುತ್ತಾ ಹೋಗುತ್ತಾ ಕರುನಾಡಿನ ಸುಂದರ ಸ್ಥಳ ಚಿಕಮಗಳೂರಿನ ಪ್ರಕೃತಿ ಮಾತೆಯ ಸೌಂದರ್ಯವನ್ನು ಕಪ್ಪು ಬಿಳುಪಿನಲ್ಲಿ ನೋಡುವುದೇ ಒಂದು ಭಾಗ್ಯ.

ಸಂಭಾಷಣೆ ಎಂದು ತೋರಿಸುವ ಫಲಕದಲ್ಲಿ ಕಥಾ ಲೇಖಕಿ ತ್ರಿವೇಣಿಯವರ ಹೆಸರು ಜೊತೆಗೆ ಅರ್ ಏನ್ ಜಯಗೋಪಾಲ್ ಅವರ ಹೆಸರು ತೋರುವುದು ತಾನೊಬ್ಬ ವಸ್ತು ನಿಷ್ಠ ನಿರ್ದೇಶಕ ಎನ್ನುವುದನ್ನು ಸಾರಿ ಸಾರಿ ಹೇಳುತ್ತದೆ.

ಹಾಸ್ಯ ಬ್ರಹ್ಮ ಬಾಲಕೃಷ್ಣ, ದ್ವಾರಕೀಶ್, ಕುಳ್ಳಿ ಜಯ, ಗಣಪತಿ ಭಟ್ಟ ಅವರ ಮಧ್ಯೆ ನಡೆಯುವ ದೃಶ್ಯಗಳು ಕಥೆಯನ್ನು ಅಡ್ಡಾದಿಡ್ಡಿ ಓಡಿಸದೇ ಕಚಗುಳಿ ಇಡುವ ದೃಶ್ಯಗಳನ್ನು ಸೇರಿಸಿರುವುದರಲ್ಲಿ ನಿರ್ದೇಶಕನ ಜಾಣ್ಮೆ ಕಾಣುತ್ತದೆ.

"ನಾ ನಿಮ್ಮ ವಯಸ್ಸಿನಲ್ಲಿದ್ದಾಗ ತಲೆಯ ಮೇಲೆ ಹಾಕಿದ ನೀರು ಕಾಲಿಂದ ಬಿಸಿನೀರಾಗಿ ಹರಿದು ಹೋಗುತ್ತಿತ್ತು. ನನ್ನ ಮೈ ಕಂಚು ಕಂಚು" ಎನ್ನುವ ಬಾಲಣ್ಣ

"ಒಹ್ ಅದಕ್ಕೆ ಕಂಬದಿಂದ ಬರದೆ ಕಾಫಿ ಬೀಜದಿಂದ ಬಂದೆ ಅಲ್ವೇ ಮಾವಯ್ಯ" ಎನ್ನುವ ದ್ವಾರಕೀಶ್

"ಸತಿ ಸಾವಿತ್ರಿಯ ಗಂಡ ಡ್ರೈವರ್ ಆಗಿರಲಿಲ್ಲ" ಎನ್ನುವ ಕುಳ್ಳಿ ಜಯ

 ಈ ಎಲ್ಲಾ ಸಂಭಾಷಣೆಗಳು ನೋಡುಗರಿಗೆ ಒಂದು ವೇದಿಕೆಯನ್ನು ಸಿದ್ಧ ಮಾಡಿಕೊಡುತ್ತಾ ಹೋಗುತ್ತದೆ.

ಭಾವುಕ ದೃಶ್ಯಗಳ ಮಧ್ಯೆ ಈ ರೀತಿಯ ಕಚಗುಳಿ ದೃಶ್ಯಗಳು ಒಂದು ಭಿನ್ನ ಅನುಭವ ಕೊಡುತ್ತದೆ. ಭಾವದ ಏರಿಳಿತದಲ್ಲಿ ಪ್ರೇಕ್ಷಕ ಕಳೆದು ಹೋಗದೆ ಇರುವುದನ್ನು ತಡೆಯುತ್ತದೆ.

ನಾಯಕ ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗಲು ಸಹಾಯ ಹಸ್ತ ಕೇಳಲು ಬರುತ್ತಾನೆ. ಕಾರಣಾಂತರಗಳಿಂದ ಬೆಳ್ಳಿಮೋಡದ ಮಾಲೀಕನ ಸಮಿತಿಗೆ ಸಹಾಯ ಮಾಡಲು ಆಗದ ಕಾರಣ ಮುಂದಿನ ವರ್ಷ ಹೋಗಬಹುದು ಎನ್ನುವ ಭರವಸೆ ನೀಡುತ್ತಾನೆ.

ಅಷ್ಟರಲ್ಲಿ ಮಾಲೀಕನ ಮಡದಿ ತನ್ನ ಮಗಳಿಗೆ ನಾಯಕನ್ನು ಕೊಟ್ಟು ಮದುವೆ ಮಾಡಿ.. ತಮ್ಮ ಸ್ವಂತ ಖರ್ಚಿನಲ್ಲಿ ವಿದೇಶಕ್ಕೆ ಕಳಿಸಬಹುದು ಎನ್ನುವ ಬಯಕೆ ವ್ಯಕ್ತಪಡಿಸುತ್ತಾಳೆ. ಮೊದಲು ಒಪ್ಪದ ಮಾಲೀಕ ನಂತರ ವಿಧಿಯಿಲ್ಲದೇ ಒಪ್ಪಿಕೊಂಡು ನಾಯಕ ನಾಯಕಿಯ ನಿಶ್ಚಿತಾರ್ಥ ಏರ್ಪಡಿಸಿ ವಿದ್ಯಾಭ್ಯಾಸ ಮುಗಿದ ಮೇಲೆ ಮದುವೆ ಎಂದು 
ನಿರ್ಧಾರವಾಗುತ್ತದೆ.

ಈ ದೃಶ್ಯದಲ್ಲಿ ನಾಯಕನ ತಂದೆ ತಾಯಿಯ ದುರಾಸೆ, ದುರಾಲೋಚನೆ ಬಯಲಿಗೆ ಬರುತ್ತೆ. ಬೆಳ್ಳಿ ಮೋಡದ ಆಸ್ತಿಗೆ ನಾಯಕಿಯೇ ಹಕ್ಕು ಭಾದ್ಯಳು  ಎಂದು ಅಷ್ಟೇನೂ ಸುಂದರಿಯಲ್ಲದ ನಾಯಕಿಯನ್ನು ತಮ್ಮ ಸೊಸೆ ಮಾಡಿಕೊಳ್ಳಲು ಹವಣಿಸುತ್ತಾರೆ.

ಅನೀರೀಕ್ಷಿತ ಘಟನೆಯಲ್ಲಿ ಬೆಳ್ಳಿಮೋಡದ ಆಸ್ತಿಗೆ ಇನ್ನೊಬ್ಬ ಹಕ್ಕುದಾರ ಬರುತ್ತಾನೆ. ಮಾಲೀಕನ ಹೆಂಡತಿಗೆ ಗಂಡು ಮಗುವಾಗಿ, ನಾಯಕನ ತಂದೆ ತಾಯಿಯ ಆಸೆ ಮಂಜಿನ ಹನಿಯಂತೆ ಕರಗಿ ಹೋಗುತ್ತದೆ. ನಂತರ ನಾಯಕ ಬರೆದ ಪತ್ರದಲ್ಲಿ ಅವನ ದುರಾಸೆ ಕೂಡ ಸೂಕ್ಷ್ಮವಾಗಿ ಬಯಲಿಗೆ ಬರುತ್ತದೆ. ಈ ನಡುವೆ ಮಾಲೀಕನ ಹೆಂಡತಿ ಮಗುವಿನ ಜವಾಬ್ದಾರಿಯನ್ನು ತನ್ನ ಗಂಡ ಹಾಗೂ ಮಗಳಿಗೆ ಕೊಟ್ಟು ಕೊನೆಯುಸಿರು ಬಿಡುತ್ತಾಳೆ.

ವಿದ್ಯಾಭ್ಯಾಸ ಮುಗಿಸಿದ ನಾಯಕ, ಮರಳಿ ಬಂದಾಗ ಹಿಂದಿನ  ಪ್ರೀತಿ ವಿಶ್ವಾಸ ಮಮಕಾರ ಯಾವುದೂ ಅವನಲ್ಲಿ ಕಾಣುವುದಿಲ್ಲ. ಎಲ್ಲಾ ವಿಷಯ ಬಯಲಾದಾಗ ನಾಯಕಿಗೆ ಮದುವೆಯಲ್ಲಿ ಆಸಕ್ತಿಯೇ ಇರುವುದಿಲ್ಲ. ಹತಾಶನಾದ ನಾಯಕ ಕಾಲು ಜಾರಿ ಕಮರಿಗೆ ಬಿದ್ದು ನಾಯಕಿಯ ಶುಶ್ರೂಷೆಯಲ್ಲಿ ಚೇತರಿಸಿಕೊಳ್ಳುವಾಗ ಅವಳ ನಿಸ್ವಾರ್ಥ ಸೇವೆಯನ್ನು ಕಂಡು ತನ್ನ ದುರಾಸೆಗೆ ನಾಚಿಕೆ ಪಟ್ಟುಕೊಳ್ಳುತ್ತಾ ಪ್ರೀತಿಯ ಮೊಳಕೆ ಒಡೆಯಬಹುದು ಎನ್ನುವ ಆಶಾ ಭಾವಕ್ಕೆ ನಾಯಕಿ "ನೀವು ರೋಗಿ ಎನ್ನುವ ಭಾವದಲ್ಲಿ ನಾ ನಿಮ್ಮನ್ನು ಆರೈಕೆ ಮಾಡಿದೆ" ಎಂದು ತಣ್ಣೀರು ಸುರಿಯುತ್ತಾಳೆ. ಅಲ್ಲಿಗೆ ನಾಯಕನ ಆಸೆ ಕರಗಿ ಹೋಗುತ್ತದೆ.

ಈ ಸರಳ ಕಥೆಯನ್ನು ಸುಂದರವಾಗಿ ವಿಹಂಗಮ ಪ್ರಕೃತಿ ಮಡಿಲಲ್ಲಿ ಚಿತ್ರೀಕರಿಸಿ ಕಲಾವಿದರಿಂದ ಪಾತ್ರಕ್ಕೆ ಎಷ್ಟು ಬೇಕೊ ಅಷ್ಟು ಭಾವವನ್ನು ಮಾತ್ರ ಹೊರಹೊಮ್ಮಿಸಿ ಒಂದು ಸುಂದರ ಕಲಾಕೃತಿಯನ್ನು ಕೊಟ್ಟಿದ್ದಾರೆ ನಮ್ಮೆಲ್ಲರ ಹೆಮ್ಮೆಯ ನಿರ್ದೇಶಕ ಪುಟ್ಟಣ್ಣ ಕಣಗಾಲ್.

ಅವರ ಕುಸುರಿ ಕೆಲಸಕ್ಕೆ ಸಾಕ್ಷಿಯಾದ ಅನೇಕ ದೃಶ್ಯಗಳು ಕಾಣಸಿಗುತ್ತವೆ ಹಾಗೆಯೇ ಬೆಳೆಯುವ ಪೈರು ಮೊಳಕೆಯಲ್ಲಿ ಎನ್ನುವ ಗಾದೆಯಂತೆ ಮುಂದಿನ ಅಮೋಘ ಕೊಡುಗೆ ನೀಡುವ ಚಿತ್ರಗಳ ಬಗ್ಗೆ ಸೂಚನೆ ಕೊಡುತ್ತಾರೆ.
  1. ಮಲೆನಾಡಿನಲ್ಲಿ ಹೊಟ್ಟೆ ಪಾಡಿಗೆ ಚತುರತೆಯಿಂದ ಒಂದಷ್ಟು ಕಾಸು ಮಾಡಿಕೊಳ್ಳುವ ಬಸ್ ನಿಲ್ದಾಣದ ಕೂಲಿಯ ಚಿಕ್ಕ ಪಾತ್ರ ಸೊಗಸಾಗಿದೆ     
  2. ದ್ವಾರಕೀಶ್,  ಬಾಲಣ್ಣ, ಕುಳ್ಳಿ ಜಯ ಅವರ ದೃಶ್ಯಗಳು ತಾನು ಹಾಸ್ಯ ದೃಶ್ಯಗಳಿಗೂ ಸೈ ಎಂದು ತೋರಿಸುತ್ತಾರೆ
  3. ನಾಯಕಿಯ ಭಾವಚಿತ್ರ ನೋಡುತ್ತಲೇ ಅಕಸ್ಮಾತ್ ಕೈಜಾರಿ ಆ ಚಿತ್ರದ ಗಾಜು ಒಡೆದು ಹೋದಾಗ, ತಣ್ಣನೆ ಭಾವ ವ್ಯಕ್ತ ಪಡಿಸುವ ನಾಯಕಿಯ ಸಂಭಾಷಣೆ ಸುಂದರ ಎನಿಸುತ್ತದೆ. ಮತ್ತು ಚಿತ್ರದ ಅಂತ್ಯದ ಬಗ್ಗೆ ಒಂದು ಸುಳಿವು ನೀಡುತ್ತಾರೆ. 
  4. ನಾಯಕ ಮತ್ತು ನಾಯಕಿಯ ಪ್ರೇಮ ನಿವೇದನೆ, ಆ ನವಿರು ಭಾವ ಬೆಟ್ಟದ ಮೇಲಿನ ಒಂಟಿ ಮರದ ಸುತ್ತ ಸುಂದರವಾಗಿ ಚಿತ್ರೀಕರಿಸಿದ್ದಾರೆ 
  5. "ಮೂಡಲ ಮನೆಯ ಮುತ್ತಿನ ನೀರನು"  ಹೆಮ್ಮೆಯ ಕವಿ  ದ ರಾ ಬೇಂದ್ರೆಯವರ ಲೇಖನಿಯಲ್ಲಿ ಮೂಡಿದ ಹಾಡನ್ನು ಅಷ್ಟೇ ಸುಂದರವಾಗಿ ಚಿತ್ರಿಸಲು ದಿನಗಟ್ಟಲೆ ಅಲೆದಾಡಿ ಸುಂದರ ಪ್ರದೇಶಗಳಲ್ಲಿ ಚಿತ್ರೀಕರಿಸಿದ್ದು ಅವರ ಒಳಗಿನ ಕಲಾವಿದ ನಿರ್ದೇಶಕನ ಅವತಾರ ಎನ್ನಬಹುದು. 
  6. ಅಪ್ಪ ತನ್ನ ಮಗಳಿಗೆ ಮತ್ತೆ ತಾನು ಅಪ್ಪನಾಗುತ್ತಿರುವ ಸಂಕೋಚದ ವಿಷಯವನ್ನು ಒಂದು ಹಾಸ್ಯ ರೂಪದಲ್ಲಿ ಹೇಳಿ ನಂತರ ಮಗಳಿಗೆ "ಇನ್ನು ಮೇಲೆ ನೀನು ಅವಳ ಮಗಳಲ್ಲಮ್ಮ... ಅವಳ ತಾಯಿ" ಎನ್ನುವ ದೃಶ್ಯ ಸೂಪರ್
  7. ಬೆಳ್ಳಿ ಮೋಡದ ಮಾಲೀಕ ಮತ್ತು ಕೊನೆಯುಸಿರು ಎಳೆಯುತ್ತಿರುವ ಮಡದಿಯ ನಡುವೆ ನಡೆಯುವ ಮೊದಲ ಪ್ರೇಮ ಪತ್ರದ ವಾಚನ, ಮತ್ತು ಅದನ್ನು ನೆನೆದು ಆ ದುಃಖದ ಸನ್ನಿವೇಶದಲ್ಲೂ ದಂಪತಿಗಳು ನಗುವ, ನೆನೆಸಿಕೊಳ್ಳುವ ದೃಶ್ಯ ಒಂದು ಕಡೆಯಲ್ಲಿ ಅವರಿಬ್ಬರ ಪ್ರೇಮ ಪ್ರೀತಿಯನ್ನು ಕಂಡು ಬೀಗಿದರೆ ಇನ್ನೊಂದೆಡೆ ಜವರಾಯನ  ಬಾಗಿಲಿಗೆ ತೆರೆಳಲು ಸಿದ್ಧವಾಗುವುದು ಕಣ್ಣೀರು ತರಿಸುತ್ತದೆ. ನಿರ್ದೇಶನ ಚಾತುರ್ಯ ಈ ದೃಶ್ಯದಲ್ಲಿ ಕಾಡುತ್ತದೆ. 
  8. ನಾಯಕಿ ತಾನೇ ಮದುವೆಗೆ ನಿರಾಕರಿಸುತ್ತೇನೆ ಎಂದು ಹೇಳುವ ದೃಶ್ಯ ನಾಯಕ ನಾಯಕಿ ಮಧ್ಯೆ ನಡೆಯುವ ಭಾವ ಸಂಘರ್ಷ, ನಾಯಕ ಕೂಗಾಡಿದರೂ ನಾಯಕಿಯ ಪ್ರಶಾಂತತೆ, ಸಂಭಾಷಣೆ ಹೇಳುವ ಧಾಟಿ ಅಬ್ಬಾ ಎನಿಸುತ್ತದೆ 
  9. ನಾಯಕ ಮತ್ತೆ ನಾಯಕಿಯ ಪ್ರೀತಿಗೆ ಬಿದ್ದು, ದ್ವೇಷಿಸುತ್ತಿದ್ದ ಅವಳ ತಮ್ಮನನ್ನು ಮುದ್ದಾಡುವ ದೃಶ್ಯ, ಮತ್ತು ನಾಯಕಿ ನಾಯಕನನ್ನು ಶುಶ್ರೂಷೆ ಮಾಡುವ ದೃಶ್ಯಗಳು ಎಲ್ಲೂ ಅತಿರೇಕಕ್ಕೆ ಹೋಗದೆ ನೈಜತೆ ಮೂಡುವಂತೆ ಮಾಡಿರುವುದು ನಿರ್ದೇಶನ ತಾಕತ್.
  10. ಕಡೆಯ ದೃಶ್ಯದಲ್ಲಿ ನಾಯಕಿ ಹೇಳುವ "ಮುದುಕಿಯ ಬದುಕಿಗೆ ಯೌವನ ಒಂದು ನೆನಪು ಮಾತ್ರ.... ಬೆಳ್ಳಿ ಕರಗಿತು ಮೋಡ ಉಳಿಯಿತು" ಎಂದು ಹೇಳಿ ತಮ್ಮ ಪ್ರೇಮದ ಸಂಕೇತ ಪ್ರತಿನಿಧಿಸುತ್ತಿದ್ದ ಮರವನ್ನು ಕಡಿಯಲು ಮುಂದಾಗುವ ದೃಶ್ಯ  ಮನಸಲ್ಲಿ ಬಹುಕಾಲ ಕಾಡುತ್ತದೆ.  ನಿರಾಶನಾದ ನಾಯಕಿಯ ಅಪ್ಪ ಬೇಸರದಿಂದ ನಿಲ್ಲುವುದು , ನಾಯಕಿಯ ಪುಟ್ಟ ತಮ್ಮ ಇಬ್ಬರ ಜಗಳ ನಿಲ್ಲಿಸಲು ಕೈ ಚಾಚಿ ನಿಲ್ಲುವುದು, ನಾಯಕ ಮರವನ್ನು ಕಡಿಯ ಬೇಡ ಎಂದು ತಡೆಯಲು ಹೋಗುವುದು, ನಾಯಕಿ ಮುಖದಲ್ಲಿ ಹತಾಶೆ ತೋರುತ್ತಾ ಕೊಡಲಿ ಎತ್ತಿ ನಿಲ್ಲುವುದು.. ಇದು ನಿಜಕ್ಕೂ ಬೆಳ್ಳಿ ಮೋಡದ ಹೈ-ಲೈಟ್ ದೃಶ್ಯ ಎನ್ನಬಹುದು. ನೂರಾರು ಸಾಲುಗಳಲ್ಲಿ ಹೇಳುವುದನ್ನು ಒಂದು ದೃಶ್ಯದಲ್ಲಿ ತೋರುವ ಜಾಣ್ಮೆ ನಮ್ಮ ಹೆಮ್ಮೆಯ ನಿರ್ದೇಶನ ಮೊದಲ ಚಿತ್ರದಲ್ಲಿ ತೋರಿದ್ದಾರೆ. 
  • ನಾಯಕಿಯಾಗಿ ಕಲ್ಪನಾ ಹದಬರಿತ, ಯಾವುದೇ ಅತಿರೇಕಕ್ಕೆ ಹೋಗದೆ, ಪ್ರಶಾಂತ ಅಭಿನಯ. ಸಂಭಾಷೆಣೆ ಹೇಳುವ ಶೈಲಿ, ಆ ಧ್ವನಿಯಲ್ಲಿ ಏರಿಳಿತ ಎಲ್ಲವೂ  ತಾನೊಬ್ಬ ಅತ್ಯುತ್ತಮ ನಿರ್ದೇಶಕನ ಕೂಸು ಎನ್ನುವುದನ್ನು ಸಾಬೀತು ಪಡಿಸುತ್ತದೆ 
  • ನಾಯಕನಾಗಿ ಕಲ್ಯಾಣ್ ಕುಮಾರ್ ತಮ್ಮ ಉಚ್ಚ್ರಾಯ ಕಾಲದಲ್ಲಿ ಇಂತಹ ಒಂದು ನಕಾರಾತ್ಮಕ ಪಾತ್ರ ಮಾಡಿರುವುದು ಹುಬ್ಬೇರಿಸುವಂತೆ ಮಾಡುತ್ತದೆ. ಆ ತೊಳಲಾಟ, ಹೇಳಲಾಗದೆ ಒಳಗೆ ಒದ್ದಾಡುವ ತಳಮಳ ಎಲ್ಲವೂ  ಅವರ ಅಭಿನಯದಲ್ಲಿ ಸೊಗಸಾಗಿ ಮೂಡಿಬಂದಿದೆ. ಕಪ್ಪು ಬಿಳುಪಿನಲ್ಲಿ ಮನೋಹರವಾಗಿ ಕಾಣುವ ಅವರ ಮುದ್ದು ಮುಖ ಚೆಲುವಾಂತ ಚೆನ್ನಿಗ ಎನ್ನುವಂತೆ ಮಾಡುತ್ತದೆ 
  • ಕರುನಾಡಿನ ಅಪ್ಪ ಎಂದೇ ಹೆಸರಾದ ಕೆ ಎಸ್ ಅಶ್ವಥ್ ಅವರ ಅಭಿನಯದ ಬಗ್ಗೆ ಏನು ಹೇಳಿದರೂ ಕಡಿಮೆ. ಪ್ರತಿ ದೃಶ್ಯದಲ್ಲೂ, ಅದರಲ್ಲೂ ತನ್ನ ಮಡದಿಗೆ ತಮ್ಮ ಮೊದಲ ಪ್ರೇಮ ಪತ್ರವನ್ನು ಓದುವಾಗ ಆ ನವಿರು ಭಾವದ ಸಂಭಾಷಣೆ ಹೇಳುವ ಶೈಲಿ ಅಶ್ವಥ್ ಅವರಿಗೆ ಮಾತ್ರ ಸಾಧ್ಯ. ಅವರ ಮಾತುಗಳು ನಮ್ಮ ಮನೆಯಲ್ಲಿ ಹೇಳುವ ಸಂಭಾಷಣೆಗಳಷ್ಟೇ ಆಪ್ತತೆ ಕಾಣುತ್ತದೆ. 
  • ಕರುನಾಡಿನ ಅಮ್ಮ ಪಂಡರಿ ಬಾಯಿ ಅಶ್ವಥ್ ಅವರಿಗೆ ಪೈಪೋಟಿ ನೀಡುವಂತೆ ಅಭಿನಯಿಸಿದ್ದಾರೆ. ಅದರಲ್ಲೂ ತಾನು ತಾಯಿಯಾಗುತಿದ್ದೇನೆ ಎನ್ನುವಾಗ ಆ ನಾಚಿಕೆ, ಸಂಕೋಚದ ಮುದ್ದೆಯಾಗುವುದು, ತನ್ನ ಬೆಳೆದ ಮಗಳ ಎದುರಲ್ಲಿ ತಾನು ತಾಯಿಯಾಗುತಿದ್ದೇನೆ ಎಂದು ಹೇಳುವುದು, "ನೀನು ತಾಯಿಯಾಗುವ ವಯಸ್ಸಲ್ಲಿ ನಾನು ತಾಯಿಯಾಗುತ್ತಿದ್ದೇನೆ" ಎನ್ನುವಾಗ ಅವರ ತೊಳಲಾಟ.. ಆಹಾ ಎನ್ನಿಸುತ್ತದೆ. ತನ್ನ ಕೊನೆ ಘಳಿಗೆಯಲ್ಲಿ ತನ್ನ ಪತಿಗೆ ಆ ಪ್ರೇಮದ ಪತ್ರವನ್ನು ಓದಿ ಎಂದು, ನಂತರ ಆ ಪತ್ರದ ಪದಗಳ ಭಾವದ ಸುಖವನ್ನು ಮುಖದಲ್ಲಿ ಅರಳಿಸುವ ಪರಿ ನೋಡಿಯೇ ಅನುಭವಿಸಬೇಕು. 
  • ಇನ್ನೂ ಬಾಲಣ್ಣ, ದ್ವಾರಕೀಶ್, ಕುಳ್ಳಿ ಜಯ, ಗಣಪತಿ ಭಟ್ ಇವರ ಸಂಭಾಷಣೆಗಳು, ಚಿಕ್ಕ ಪಾತ್ರದಲ್ಲಿ ನಾಯಕನ ಅಪ್ಪ ಅಮ್ಮನಾಗಿ ಬರುವ  ರಾಘವೇಂದ್ರ ರಾವ್ ಮತ್ತು ಪಾಪಮ್ಮ ಎಲ್ಲರೂ ಅಚ್ಚುಕಟ್ಟಾದ ಅಭಿನಯ ನೀಡಿದ್ದಾರೆ. 
ಹಾಡುಗಳನ್ನು ಚಿತ್ರಿಕರಿಸುವುದರಲ್ಲಿ ಪುಟ್ಟಣ್ಣ ಎತ್ತಿದ ಕೈ. ಆ ವಿರಾಟ್ ಪ್ರತಿಭೆಯ ಅನಾವರಣ ಈ ಚಿತ್ರದಿಂದ ಶುರುವಾಯಿತು. ಆಯ್ದ ಸುಂದರ ತಾಣಗಳಲ್ಲಿ ಕಷ್ಟವಾದರೂ ಸರಿ ಇಲ್ಲಿಯೇ ಚಿತ್ರಿಕರಿಸಬೇಕೆಂಬ ಛಲ ಎಲ್ಲವು ಸೇರಿ ಅಮೋಘ ದೃಶ್ಯಗಳನ್ನು ಕಣ್ಣಿಗೆ ಕಟ್ಟು ಕೊಟ್ಟಿದ್ದಾರೆ. 

"ಮೂಡಲ ಮನೆಯ" ಹಾಡಿನಲ್ಲಿ ಸುಮಧುರ ಸಾಹಿತ್ಯಕ್ಕೆ ಅಷ್ಟೇ ಸುಮಧುರ ಸಂಗೀತ, ದೃಶ್ಯಗಳ ಜೋಡಣೆ ಸೊಗಸಾಗಿದೆ 
"ಇದೆ ನನ್ನ ಉತ್ತರ" ಹಾಡಿನಲ್ಲಿ ನಾಯಕಿಯ ನಾಚಿಕೆ, ನಾಯಕನ ಪ್ರೀತಿ ಸುಂದರ ಹೊರಾಂಗಣದಲ್ಲಿ ಮೂಡಿಬಂದಿದೆ 
"ಬೆಳ್ಳಿ ಮೋಡದ ಅಂಚಿನಿಂದ" ಹಾಡಿನಲ್ಲಿ ತೋರಿಸುವ ತಾಣಗಳು ಸೊಗಸು. 
"ಮುದ್ದಿನ ಗಿಣಿಯೇ ಬಾರೋ" ಮಕ್ಕಳ ಚೇಷ್ಟೆ, ತುಂಟಾಟ ಕಲ್ಪನಾ ಅಭಿನಯ, ಪುಟ್ಟ ಮಗುವಿನ ಮುದ್ದಾದ ನೃತ್ಯ ಸುಂದರವಾಗಿದೆ 
"ಒಡೆಯಿತು ಒಲವಿನ ಕನ್ನಡಿ" ಉತ್ತಮ ಸಾಹಿತ್ಯ,ಸಂಗೀತದಿಂದ ಮನಸ್ಸೆಳೆಯುತ್ತದೆ.  
  
ಸಹಾಯ ಹಸ್ತ ಚಾಚಿದಾಗ ದುರಾಸೆ ಇರಬಾರದು.. ಉತ್ತಮ ಜೀವನಕ್ಕೆ ಸುಂದರ ಮುಖವಲ್ಲ ಸುಂದರ ಮನಸ್ಸು ಮುನ್ನುಡಿ ಎನ್ನುವ ಸಂದೇಶ ಈ ಚಿತ್ರದಲ್ಲಿ ಹೊರಹೊಮ್ಮಿದೆ. ನಂಬಿದ ಸಿದ್ಧಾಂತಗಳು ಜೀವನಕ್ಕೆ ಹೂ ರಾಶಿ ಚೆಲ್ಲಬಲ್ಲದು ಹಾಗೆಯೇ ಮುಳ್ಳು ಕಲ್ಲು ಕೂಡ ಸಿಗುತ್ತದೆ ಅದನ್ನು ದಾಟಿ ಸಾಗಬೇಕು ಎನ್ನುವ ತಾರ್ಕಿಕ  ಸಂದೇಶ ಅನಾವರಣಗೊಂಡಿದೆ. 

ಚಿತ್ರ ಬ್ರಹ್ಮನ ಮೊದಲ ಕಾಣಿಕೆ ಅಮೋಘ. 

ಕನ್ನಡ ನಾಡಿನ ಚಲನಚಿತ್ರ ಇತಿಹಾಸದಲ್ಲಿ ಪವಾಡ ಶುರುಮಾಡಿದ ಈ ನಿರ್ದೇಶಕ ಮಲ್ಲಮ್ಮನ ಪವಾಡದಲ್ಲಿ ನಮಗೆ ಏನು ಜಾದೂ ತೋರಿಸುತ್ತಾರೆ.... ಮುಂದಿನ ಸಂಚಿಕೆಯಲ್ಲಿ ನೋಡೋಣ!  

Sunday, July 7, 2013

ಪುಟ್ಟಣ್ಣ ಕಣಗಾಲ್..............!

ಪುಟ್ಟಣ್ಣ ಕಣಗಾಲ್....  ಪ್ರಾಯಶಃ ಭಾರತೀಯ ಚಿತ್ರರಂಗದಲ್ಲಿ ಮರೆಯಲಾರದ, ಮರೆಯಲಾಗದ, ಮರೆಯಬಾರದ ಹೆಸರು!
ಭಾರತೀಯ ಚಿತ್ರರಂಗ ಶತಮಾನದ ಸಂಭ್ರಮದಲ್ಲಿರುವಾಗ.. ಈ ರಂಗವನ್ನು ಬೆಳಗಿದ, ಬೆಳಗಿಸಿದ ನಿರ್ದೇಶಕರ ಸಾಲಿನಲ್ಲಿ  ನಿಲ್ಲುವ ತಾಕತ್ ಇರುವ ಅನೇಕರಲ್ಲಿ  ಕನ್ನಡಾಂಬೆಯ ಸುಪುತ್ರ ಶ್ರೀ ಪುಟ್ಟಣ್ಣ ಕಣಗಾಲ್ ಅವರ ಹೆಸರು ಮುಂಚೂಣಿಯಲ್ಲಿ ಇರುವುದು. 

ಇದು ನನ್ನ ಸ್ಟೈಲ್ ಎನ್ನುತ್ತಿದ್ದ ಪುಟ್ಟಣ್ಣ 
ಕನ್ನಡ ಚಿತ್ರರಂಗವನ್ನು ಬೆಳಗಿಸಿದ ಅನೇಕ ನಿರ್ದೇಶಕರಲ್ಲಿ ಪ್ರಮುಖರು ಆರ್ ನಾಗೇಂದ್ರರಾಯರು, ಬಿ ಆರ್ ಪಂತುಲು, ಹೆಚ್ ಎಲ್ ಏನ್ ಸಿಂಹ, ಟಿ ವಿ ಸಿಂಗ್ ಠಾಕುರ್, ಶಂಕರ್ ಸಿಂಗ್,  ಹುಣಸೂರು ಕೃಷ್ಣಮೂರ್ತಿ,  ಬಿ ಎಸ್  ರಂಗ, ಕು ರಾ ಸೀತಾರಾಮ ಶಾಸ್ತ್ರಿ, ದೊರೈ ಭಗವಾನ್, ಸಿದ್ದಲಿಂಗಯ್ಯ, ಶಂಕರ್ ನಾಗ್  ಹೀಗೆ ಪಟ್ಟಿಯಲ್ಲಿ ಬರುವ ಅನೇಕರು.  ಇಂತಹ ಘಟಾನುಘಟಿಗಳ ಮಧ್ಯೆ ತನ್ನದೇ ವಿಶಿಷ್ಟ ಛಾಪನ್ನು ಒತ್ತಿ ನಿರ್ದೇಶಕ ಎನ್ನುವ ಸ್ಥಾನಕ್ಕೆ ಘನತೆ, ಗತ್ತು ತಂದು ಕೊಟ್ಟು, ಅನೇಕ ಹಿರಿ-ಕಿರಿ ಕಲಾವಿದರ ಏಳಿಗೆಗೆ ಕಾರಣವಾಗಿ ಹೆಸರು ಪುಟ್ಟಣ್ಣ ಎಂದಾದರೂ ಆ ಸ್ಥಾನಕ್ಕೆ ದೊಡ್ಡಣ್ಣನ ಗಾಂಭೀರ್ಯ ತಂದುಕೊಟ್ಟ ಮಹನೀಯ ನಮ್ಮೆಲ್ಲರ ಹೆಮ್ಮೆಯ ಪುಟ್ಟಣ್ಣ ಕಣಗಾಲ್. 

ನಿರ್ದೇಶಕ ಎನ್ನುವ ಸ್ಥಾನಕ್ಕೆ ಘನತೆ, ಗತ್ತು ತಂದು ಕೊಟ್ಟರು ಪುಟ್ಟಣ್ಣ
ಇಂದು ದೈಹಿಕವಾಗಿ ನಮ್ಮೊಡನೆ  ಇದ್ದಿದ್ದರೆ ಎಂಭತ್ತು ವಸಂತಗಳನ್ನು ಕಂಡು.. ಸಂಪ್ರದಾಯದ ಪ್ರಕಾರ ಸಹಸ್ರ ಚಂದ್ರ ದರ್ಶನದ ಭಾಗ್ಯ ಪಡೆದುಕೊಳ್ಳುತ್ತಿದ್ದರು. ಆದರೆ ಜೀವಿತವಾವದಿಯ ಐವತ್ತೊಂದು ವಸಂತಗಳಲ್ಲಿ ಸಾಧನೆಯ ಶಿಖರವನ್ನು ಮುಟ್ಟಿ ಕಳಶಪ್ರಾಯರಾದರು. ಅನೇಕ ಕಲಾವಿದರ, ತಂತ್ರಜ್ಞರ ಬಾಳಿಗೆ ಸಹಸ್ರ ಚಂದ್ರನ ಬೆಳದಿಂಗಳನ್ನು ತಂದು ಕೊಟ್ಟರು. ಕಲಾವಿದರ, ತಂತ್ರಜ್ಞರ ಸುಪ್ತ ಪ್ರತಿಭೆಯನ್ನು ಹೊರತರಲು ಕಾರಣಕರ್ತರಾದರು. ಹಾಗಾಗಿಯೇ ಅವರ ನಿಧನ ನಂತರವೂ ನಿರ್ದೇಶಕರ ಹೆಸರು ಬಂದಾಗ ಮೊದಲು ಹೆಸರು ಬರುವುದು "ಪುಟ್ಟಣ್ಣ" ಎಂದು. 

ಎಂಭತ್ತರ ದಶಕದ ಆದಿಯಲ್ಲಿ,  ನಾನು ಹತ್ತು ಹನ್ನೊಂದು ವರ್ಷದವನಾಗಿದ್ದಾಗ, ದೂರದರ್ಶನ ಬೆಂಗಳೂರಿಗೆ ಕಾಲಿಟ್ಟ ಸಮಯದಲ್ಲಿ,  ಶನಿವಾರಗಳಂದು ಬಿತ್ತರಗೊಳಿಸುತ್ತಿದ್ದ ಕನ್ನಡ ಚಿತ್ರ ನೋಡುತ್ತಾ ಬೆಳೆದ ನನಗೆ, ಮೊದಲು ಪುಟ್ಟಣ್ಣ ಅವರ ಚಿತ್ರ ನೋಡಿದ್ದು  "ಉಪಾಸನೆ",   ಯಾಕೋ ಕಾಣೆ ಆ ಚಿತ್ರವನ್ನು ದೂರದರ್ಶನದಲ್ಲಿ ಬೇರೊಬ್ಬರ ಮನೆಯ ಕಿಟಕಿಯ ಮೂಲಕ ಇಡಿ ಚಿತ್ರವನ್ನು ನೋಡಿದ್ದು ಇಂದಿಗೂ ಹಸಿರಾಗಿದೆ. ಪ್ರತಿ ಪಾತ್ರ,ಸಂಭಾಷಣೆ, ಹಾಡು, ಚಿತ್ರೀಕರಣ ನಡೆದ ಸ್ಥಳಗಳು ಎಲ್ಲವೂ ಕಣ್ಣಿಗೆ ಕಟ್ಟಿದಂತಿದೆ. ಅಲ್ಲಿಂದ ಶುರುವಾದ ಅವರ ಚಿತ್ರಗಳ ವ್ಯಾಮೋಹ ಇಂದಿಗೂ ನನ್ನನ್ನು ಬೆನ್ನು ಬಿಡದಂತೆ ಕಾಡುತ್ತಿದೆ. 

ಅವರ ಚಿತ್ರಗಳನ್ನು ನೋಡಬೇಕು, ಅದರ ಸಾರವನ್ನು ಅರಿಯಬೇಕು, ಅಳವಡಿಸಿಕೊಳ್ಳಬೇಕು, ಎನ್ನುವ ತವಕ ಶುರುವಾದದ್ದು ಬಾಲ್ಯದ ದಿನಗಳಲ್ಲಿಯೇ. ಪ್ರತಿ ಚಿತ್ರವೂ ಒಂದು ದೃಶ್ಯ ಕಾವ್ಯ, ಮತ್ತು ಪ್ರತಿ ಚಿತ್ರವೂ ಒಂದೊಂದು ಸಮಸ್ಯೆಯ ಮೇಲೆ ಬೆಳಕು , ಉತ್ತಮ ಸಂದೇಶಗಳನ್ನ ಹೊತ್ತು ತರುತ್ತದೆ. ತಾಂತ್ರಿಕವಾಗಿಯೂ ಶ್ರೀಮಂತವಾಗಿದ್ದ ಅವರ ಚಿತ್ರಗಳು ಆ ಕಾಲದ ತಂತ್ರಜ್ಞಾನವನ್ನು  ಉತ್ಕೃಷ್ಟ ಮಟ್ಟದಲ್ಲಿ ಉಪಯೋಗಿಸಿಕೊಂಡ ಅವರ ಪ್ರಚಂಡ ಪ್ರತಿಭೆಗೆ ಅವರೇ ಸಾಟಿ. ಅವರ ಮಾನಸ ಗುರುಗಳಾದ ಶ್ರೀ ಬಿ ಆರ್ ಪಂತುಲು ಅವರ ಗರಡಿಯಲ್ಲಿ ಚೆನ್ನಾಗಿಯೇ ಪಳಗಿ ತನ್ನ ಛಾಪನ್ನು ಮೂಡಿಸಿದ ಸಾಹಸಿ ಪುಟ್ಟಣ್ಣ ಎನ್ನಬಹುದು. 

ಅವರ ನಿರ್ದೇಶನದಲ್ಲಿ ಮೂಡಿಬಂದ ಎಲ್ಲಾ ಇಪ್ಪತ್ತನಾಲ್ಕು ಚಿತ್ರಗಳನ್ನು ನನ್ನ ಅನುಭವದ ಪಾಕದಲ್ಲಿ ನೆನೆಸಿ ನನಗೆ ತಲುಪಿದ ಮಾತುಗಳನ್ನು ನಿಮ್ಮೊಡನೆ ಹಂಚಿಕೊಳ್ಳಬೇಕು ಎನ್ನುವ ಆಸೆ ತುಂಬಾ ವರ್ಷಗಳದ್ದು. ಈಗ ಕಾಲ ಕೂಡಿ ಬಂದಿದೆ :-)

ಅವರ ಚಿತ್ರಗಳನ್ನು ಏಕೆ, ಹೇಗೆ, ನೋಡಬೇಕು ಎನ್ನುವ ನನ್ನ ತವಕಕ್ಕೆ ನೀರೆರೆದಿದ್ದು ನನ್ನ ಪ್ರೀತಿಯ ಸೋದರಮಾವ ಶ್ರೀಕಾಂತ (ರಾಜ).. ಈ ಲೇಖನಗಳ ಮಾಲೆ ಪುಟ್ಟಣ್ಣ ಅವರ ಚರಣ ಕಮಲಗಳಿಗೆ ಹಾಗೂ ಸುಮಾರು ಆರು ವರ್ಷಗಳ ಹಿಂದೆ ನಮ್ಮನ್ನು ಬಿಟ್ಟು ಅಗಲಿದ ನನ್ನ ಸೋದರಮಾವ ರಾಜನ ನೆನಪಿಗೆ ಅರ್ಪಿತ. 

ಪುಟ್ಟಣ್ಣ ಅವರ ಚಿತ್ರಗಳಲ್ಲಿ ಕಥೆಯೇ ನಾಯಕ. ನಂತರ ಸಂಭಾಷಣೆ, ಹಾಡುಗಳು, ಸಾಹಿತ್ಯ, ಸಂಗೀತ, ಗಾಯನ, ಇದರ ಜೊತೆಯಲ್ಲಿ ಪುಟ್ಟಣ್ಣ ಅವರ ಗರಡಿಯಲ್ಲಿ ಪಳಗಿ ಅಭಿನಯಿಸುತ್ತಿದ್ದ ಕಲಾವಿದರು, ಹಾಗೂ ಇಪ್ಪತ್ತ ನಾಲ್ಕು ಚಿತ್ರಗಳಲ್ಲಿ ಕರುನಾಡಿನ ಅನೇಕ ಸುಂದರ ಪ್ರೇಕ್ಷಣೀಯ ಸ್ಥಳಗಳನ್ನು ಪರಿಚಯ,  ಹಾಗೆಯೇ ಅನೇಕ ಹೆಸರಾದ ಸಾಹಿತಿಗಳ, ಅನೇಕ ಬೆಳಕಿಗೆ ಬಾರದ ಸಾಹಿತಿಗಳ ಕಥೆಗಳನ್ನು, ಕವನಗಳನ್ನು ಯಶಸ್ವಿಯಾಗಿ ಬೆಳ್ಳಿ ಪರದೆಗೆ ಅಳವಡಿಸಿದ್ದು, ಕನ್ನಡ ನಾಡು, ನುಡಿಯ ಬಗ್ಗೆ ಅಪರಿಮಿತ ಪ್ರೇಮ ಇವೆಲ್ಲವೂ  ಪುಟ್ಟಣ್ಣ ಕಣಗಾಲ್ ಚಿತ್ರಗಳಲ್ಲಿ ಕಾಣಸಿಗುತ್ತದೆ. 

ಮುಂದಿನ ಹಲವಾರು ಲೇಖನಗಳಲ್ಲಿ ಅವರ ಚಿತ್ರಗಳ ಬಗ್ಗೆ ನನಗೆ ತಿಳಿದ ಜ್ಞಾನದಲ್ಲಿ, ಅರಿವಿಗೆ ಬಂದಷ್ಟು, ಎಟುಕಿದಷ್ಟು ವಿಚಾರಗಳನ್ನು ಬರೆಯುತ್ತಾ ಹೋಗುತ್ತೇನೆ. 

ಪುಟ್ಟಣ್ಣ ನಿರ್ದೇಶನದ ಭಾಗ್ಯವನ್ನು ಕಂಡ ಚಿತ್ರಗಳು ಇಪ್ಪತ್ತನಾಲ್ಕು. ಅನೇಕ ಪ್ರಶಸ್ತಿಗಳ ಕಿರೀಟ ತೊಟ್ಟುಕೊಂಡ ಚಿತ್ರಗಳು ಹಲವಾರು. ಜನಪ್ರಿಯತೆ, ವಾಣಿಜ್ಯವಾಗಿಯೂ ಯಶಸ್ಸು ಕಂಡ ಚಿತ್ರಗಳು ಹಲವಾರು. ಆ ಚಿತ್ರಗಳ ಪಟ್ಟಿ ನಿಮಗಾಗಿ ಇಲ್ಲಿದೆ 

ಬೆಳ್ಳಿ ಮೋಡ (1966)
ಮಲ್ಲಮ್ಮನ ಪವಾಡ (1969)
ಕಪ್ಪು ಬಿಳುಪು (1969)
ಗೆಜ್ಜೆ ಪೂಜೆ (1969)
ಕರುಳಿನ ಕರೆ (1970)
ಶರಪಂಜರ (1971)
ಸಾಕ್ಷಾತ್ಕಾರ (1971)
ನಾಗರ ಹಾವು (1972)
ಎಡಕಲ್ಲು ಗುಡ್ಡ ಮೇಲೆ (1973)
ಉಪಾಸನೆ (1974)
ಶುಭಮಂಗಳ (1975)
ಕಥಾ ಸಂಗಮ (1975)
ಬಿಳಿ ಹೆಂಡ್ತಿ (1975)
ಫಲಿತಾಂಶ (1976)
ಕಾಲೇಜು ರಂಗ (1976)
ಪಡುವಾರಹಳ್ಳಿ ಪಾಂಡವರು (1978)
ಧರ್ಮಸೆರೆ (1979)
ರಂಗನಾಯಕಿ (1981)
ಮಾನಸ ಸರೋವರ (1982)
ಧರಣಿ ಮಂಡಲ ಮಧ್ಯದೊಳಗೆ (1983)
ಋಣ ಮುಕ್ತಳು (1984)
ಅಮೃತ ಘಳಿಗೆ (1984)
ಮಸಣದ ಹೂವು (1984)
ಸಾವಿರ ಮೆಟ್ಟಿಲು (2006) (ನಿರ್ಮಾಪಕರು ಮಧ್ಯದಲ್ಲಿ ನಿಂತು ಹೋಗಿದ್ದ ಚಿತ್ರವನ್ನು ಪೂರ್ಣ ಮಾಡಿ ಬಿಡುಗಡೆ ಮಾಡಿದರು) 

ಬನ್ನಿ ಹೆಮ್ಮೆಯ ಕನ್ನಡಾಂಬೆಯ ಸುಪುತ್ರ, ಕನ್ನಡ ಮಣ್ಣಿನ ಹಿರಿಮೆಯನ್ನು ಭಾರತದ ಉದ್ದಗಲಕ್ಕೂ ಹರಡಿಸಿದ ಪ್ರತಿಭಾ ಪರ್ವತ ಶ್ರೀ ಪುಟ್ಟಣ್ಣ ಕಣಗಾಲ್ ಅವರ ಚಿತ್ರ ಯಾತ್ರೆಯನ್ನು ಶುರುಮಾಡೋಣ!

Saturday, May 25, 2013

ಮಲೆಗಳಲ್ಲಿ ಮದುಮಗಳು - ಒಂದು ಅನುಭವ (2013)

ಕವಿ ಕಲ್ಪನೆಗೆ, ಬರೆಯುವ ಶಕ್ತಿಗೆ ಎಲ್ಲೇ ಇಲ್ಲಾ ಎಂದು ಹೇಳುತ್ತಾರೆ. ಆ ಕಾಲಘಟ್ಟದಲ್ಲಿ ತಮ್ಮ ಘಟದಲ್ಲಿದ್ದ ಕಲ್ಪನೆಗಳನ್ನು ಅಕ್ಷರಕ್ಕೆ ತುಂಬಿ, ಪದಗಳನ್ನು ಎರಕ ಹುಯ್ದು, ಕಾಲಮಾನವೇ ಒಂದು ಸರತಿ ಹಿಂತಿರುಗುವಂತೆ ಚಿತ್ರಿಸುವ ಜಾಣ್ಮೆಯಲ್ಲಿ ಗೆದ್ದರೆ ಕವಿ/ಲೇಖಕ ಸಮರದಲ್ಲಿ ವಿಜಯ ಸಾಧಿಸಿದಂತೆಯೇ ಸರಿ...!

ಅಂಥಹ ಒಂದು ಸುವರ್ಣ ಚೌಕಟ್ಟಿನಲ್ಲಿ ಮಿನುಗಿ, ಮಿಂದು, ಸಾಹಿತ್ಯ ಲೋಕದಲ್ಲಿ ಒಂದು ಉನ್ನತ ಸ್ಥಾನ ಗಳಿಸಿ.. ಹೆಮ್ಮೆಯಿಂದ ಎದೆಯುಬ್ಬಿಸಿನಿಂತ ಕೆಲವು ಕಾದಂಬರಿಗಳು ಓದುಗರ ಮನಸ್ಸಿನಲ್ಲಿ ಸ್ಥಿರವಾಗಿ ಮಾನಸ ಸರೋವರದ ಪಲ್ಲಂಗದಲ್ಲಿ ಪವಡಿಸಿಬಿಟ್ಟಿರುತ್ತವೆ. ಅಂತಹ ಕಥಾನಕಗಳನ್ನು ಮನ ಮುಟ್ಟಿಸುವುದಿರಲಿ... ಮುಟ್ಟುವುದು ಕೆಲವೊಮ್ಮೆ ಆಸಾಧ್ಯ ಎನ್ನಿಸಿಬಿಡುತ್ತದೆ!  

"ಮಲೆಗಳಲ್ಲಿ ಮದುಮಗಳು" ಕರ್ನಾಟಕ ನಾಡಗೀತೆಯಂತೆಯೇ ಜನಪ್ರಿಯವಾದ ಇನ್ನೊಂದು ಮಹಾನ್ ಕೃತಿ ನಮ್ಮ 
ರಾಷ್ಟ್ರಕವಿ ಕುವೆಂಪು ಅವರಿಂದ. 


ಅಂಥಹ ಬೃಹತ್ ಕಾದಂಬರಿಯನ್ನು ಸುಮಾರು ಒಂಭತ್ತು ತಾಸು ಹೊರಾಂಗಣದಲ್ಲಿ  ಆ ಪುಟಗಳನ್ನೂ ಹಾಗೆಯೇ ತೆರೆದಿಡುವುದು ಒಂದು ಸವಾಲೇ ಸರಿ. ಅಂತಹ ಒಂದು ರೋಮಾಂಚನಕಾರಿ ಅನುಭವ ಕೊಡುವ ಕಲಾಗ್ರಾಮದ ಆವರಣದಲ್ಲಿ ಸುಮಾರು ಒಂದು ತಿಂಗಳಿಂದ ಪ್ರದರ್ಶನಗೊಳ್ಳುತ್ತಿರುವ ನಾಟಕ "ಮಲೆಗಳಲ್ಲಿ ಮದುಮಗಳು". 


ಕೇವಲ ನೂರು ರೂಪಾಯಿಗಳಲ್ಲಿ ಒಂದು ೨೦೦-೩೦೦ ವಸಂತಗಳ ಗೆರೆಯನ್ನು ದಾಟಿಸಿ ಕರೆದುಕೊಂಡು ಹೋಗುವ ಒಂದು ಅದ್ಭುತ ಪ್ರದರ್ಶನ. ಅಲ್ಲಿ   ಪ್ರತಿಯೊಂದು ದೃಶ್ಯಗಳನ್ನು ಸಹಜ ಎನ್ನುವಂತೆ ಇರುವ ಅಂಗಣದಲ್ಲಿ ನಟಿಸುವ ಕಲಾವಿದರು, ಅದಕ್ಕೆ ಪೂರಕವಾದ ಸಾಹಿತ್ಯ ಮತ್ತು ಸಂಗೀತ, ನಾವೆಲ್ಲಾ ಆ ಕಾಲಮಾನದ ಯಜಮಾನರ ಜೊತೆಯಲ್ಲಿ ವಿಹರಿಸುತ್ತಿದ್ದೆವೇನೋ ಅನ್ನುವಷ್ಟು ತನ್ಮಯತೆ ಹುಟ್ಟಿಸುವ ನೈಜತೆ ಮನಸನ್ನು ದಂಗುಪಡಿಸುತ್ತದೆ. 

ಕಾರ್ಯಕ್ರಮಕ್ಕೆ ಬಂದವರನ್ನು ಸುಮ್ಮನೆ ಗಮನಿಸಿದರೆ ಸುಮಾರು ಯುವ ಪೀಳಿಗೆಯೇ ಹೆಚ್ಚು ಕಾಣುತ್ತದೆ. ಇದು ನಿಜಕ್ಕೂ ಶ್ಲಾಘನೀಯ ಮತ್ತು ಇದರ ಶ್ರೇಯಸ್ಸು ಈ ನಾಟಕದ ಆಯೋಜಕರಿಗೆ ಸಲ್ಲುತದೆ. 

ನಾಲ್ಕು ವಿವಿಧ ಅಂಗಣದಲ್ಲಿ ನಡೆಯುವ ಈ ಮಹಾನ್ ಕೃತಿಯ ಪ್ರತಿಕೃತಿಯನ್ನು ನಾನು ನನ್ನ ಮಾತಲ್ಲಿ ಹೇಳುವ ಆಸೆ:

೧. ಕೆರೆ ಅಂಗಳ (Bed Area)
ಕೆರೆ, ಮನೆ, ಆವರಣ, ಸೇತುವೆ, ಹೀಗೆ ಒಂದು ಮಲೆನಾಡಿನ ಹಳ್ಳಿಯನ್ನು ದುತ್ತನೆ ಕಣ್ಣ ಮುಂದೆ ನಿಲ್ಲಿಸುವ ಈ ಅಂಗಣದಲ್ಲಿ ನಾಟಕದ ಆರಂಭದ ವಿವಿದ ಮಜಲುಗಳನ್ನು ತೋರುತ್ತ ಹೋಗುತ್ತಾರೆ. ಪ್ರತಿಯೊಂದು ಪಾತ್ರ, ಪ್ರತಿಯೊಂದು ಸಂಭಾಷಣೆ, ಆಗಾಗ ಕಚಗುಳಿ ಕೊಟ್ಟು ನಗಿಸುವ ಒಂದು ಸಾಲಿನ ಸಂಭಾಷಣೆ ಪ್ರೇಕ್ಷಕರ ಕಣ್ಣಿಗೆ ಬಟ್ಟೆ ಕಟ್ಟಿ ಆ ಕಾಲಘಟ್ಟಕ್ಕೆ ಎಳೆದೊಯ್ಯುತ್ತದೆ. ಪ್ರತಿಯೊಂದು ಪಾತ್ರವು ಜೀವಂತ! ಬಡತನದ ಬೇಗೆಯಲ್ಲಿದ್ದರೂ ಜೀವನದ ಸುಂದರ ಕ್ಷಣಗಳನ್ನು ಅನುಭವಿಸುವ, ಜೀವನ ಶೈಲಿ ಹೀಗೆ ಇರಬೇಕು ಎಂದು ಪರಿ ಪರಿಯಾಗಿ ಹಲಸಿನ ಹಣ್ಣನ್ನು ಬಿಡಿಸಿದಂತೆ ತೋರುವ ಚಿತ್ರಣ ಮಕ್ಕಳ ತುಂಟತನ, ಅನುಮಾನ, ಪ್ರೀತಿ ಪ್ರೇಮದ ಭಾವ ಇವೆಲ್ಲಾ ಆಹ್ ಇಂದ ವಾಹ್ ಎನ್ನುವಂತೆ ಮಾಡುತ್ತದೆ.

೨. ಬಯಲು ರಂಗಮಂದಿರ (Open Air Theater Stage)
ಮನಸ್ಸೊಳಗೆ ಇರುವ ಭಾವಾವೇಶ ಬಯಲಿಗೆ ಬಂದು ನಿಲ್ಲುವ ಸುಂದರ ಸನ್ನಿವೇಶಗಳು ಈ ಘಟ್ಟದಲ್ಲಿ ಮೂಡಿಬರುತ್ತದೆ. ಮನಸ್ಸಿನ ವಿಕಾರ ಮುಖಗಳ ಅನಾವರಣ ಆಗುತ್ತಲೇ, ಮನುಷ್ಯನ ವಿಕೃತ ಮನೋಭಾವ ಪರಿಸ್ಥಿತಿಯನ್ನು ಅಣು ಅನುವಾಗಿ ವಿವರಿಸುತ್ತಲೇ, ಮೂಢನಂಬಿಕೆ, ಜಾತಿ ಪದ್ಧತಿ, ಅದನ್ನು ಲಾಭಕ್ಕೆ ಬಳಸುವ ಹಾದಿಗಳು ಮುಂತಾದ ವ್ಯಾಧಿಯ ಬಲೆಯನ್ನು ಹೇಗೆ ನೇಯುತ್ತದೆ ಎಂದು ವಿವರಿಸುತ್ತದೇ. ಹಳ್ಳಿ ಮನೆ, ಊರಿನ ಅಂಗಳ, ಬೆಟ್ಟದ ತುದಿ, ಮುಂತಾದ ಹಳ್ಳಿ ಸೊಗಡನ್ನು ಕಚಕ್ ಕಚಕ್ ಎನ್ನುವಂತೆ ಕ್ಷಿಪ್ರವಾಗಿ ದರ್ಶನ ಕೊಡುತ್ತಾ ಸಾಗುತ್ತದೆ

೩. ಬಿದಿರುಮೆಳೆ (Bamboo groove)
 ಆನೆಗೆ ಪ್ರಿಯವಾದ ಆಹಾರ ಬಿದಿರು. ಆನೆ ನಡೆದದ್ದೇ ದಾರಿ ಅನ್ನುವ ಹಾಗೇ ತಡೆಯಿಲ್ಲದ ಮನುಷ್ಯನ ದಬ್ಬಾಳಿಕೆ, ಅನಾಚಾರ ದೃಶ್ಯಗಳು ಕಾಣ ಸಿಗುತ್ತದೆ. ಅದಕ್ಕೆ ಪೂರಕವಾಗಿ..  ಇಲ್ಲಿನ ದೃಶ್ಯಗಳಲ್ಲಿ ಹಳ್ಳಿ ಶಾಲೆ, ಹೋಟೆಲ್, ಕಾಡಿನ ಹಾದಿಯನ್ನು ನಾಶ ಮಾಡಿ ಊರಿನ ಹಾದಿ ಮಾಡುವ ತವಕ, ಭಾವಿ ಕಟ್ಟೆ, ಹಾವಿನ ದ್ವೇಷದ ಧ್ಯೋತಕವಾದ ಹುತ್ತಗಳು ಕಾಣಸಿಗುತ್ತವೆ. ಮೋಸ, ಕೆಡಕು, ತಟವಟಗಳಿಂದ ಮಾನವ ತಾನು ಹಾಳಗುವುದಲ್ಲದೇ, ಪರಿಸರವನ್ನು ಗಬ್ಬೆಬ್ಬಿಸುವ ಭಾವಗಳು ಕಾಡುತ್ತವೆ.
೪. ಹೊಂಗೆ ರಂಗ (Honge Ranga)
"ಹೊಂಗೆಯ ನೆರಳೇ ಚೆನ್ನ" ಅನ್ನುವ ಅಣ್ಣಾವ್ರ ಶಂಕರ್ ಗುರು ಚಿತ್ರದ ಹಾಡಿನಂತೆ.. ತಾಮಸ ಗುಣಗಳು ತಂಪಾಗುವ ನಿಟ್ಟಿನಲ್ಲಿ ಕೆಲವೊಮ್ಮೆ ಸ್ಪೋಟಿಸುವ ತಪ್ಪು ತಿಳುವಳಿಕೆಗಳು, ತಪ್ಪುಗಳು, ಸಿಟ್ಟು ಸೆಡವುಗಳು ಮನುಷ್ಯನನ್ನು ಹೇಗೆ ದಾರಿ ತಪ್ಪಿಸುತ್ತವೆ ಹಾಗೆಯೇ ಸರಿ ದಾರಿಗೆ ಮರಳಲು ಫಲಕಾರಿಯಾಗುತ್ತವೆ ಎನ್ನುವುದನ್ನು ಗ್ರಾಮ್ಯ ಪರಿಸರ, ಬೆಟ್ಟದ ತುತ್ತ ತುದಿ, ಮಳೆ ಬಂದು ತುಂಬಿ ಹರಿಯುವ ತೊರೆಗಳು, ತಾನು ಬದುಕಲು ನಂಬಿಕೊಂಡ ಜೀವಿಯನ್ನು ತೊರೆಯುವುದು.. ನಂತರ ಪರಿತಪಿಸುವುದು, ತನ್ನ ದಣಿಗೋಸ್ಕರ ತಾನು ಹಾದಿಯಿಂದ ದೂರ ಸರಿಯುವುದು ಇವೆಲ್ಲ ಪುಸ್ತಕದ ಹಾಳೆಗಳು ತೆರೆದಂತೆ ಅವು ತೆಗೆದುಕೊಳ್ಳುತ್ತದೆ ಹಾಗೂ ಒಳಗಿನ ಮನವನ್ನು ಎದುರು ತಂದು ನಿಲ್ಲಿಸುತ್ತದೆ . 
*********************************************************************************
ಪ್ರತಿಯೊಂದು ಪಾತ್ರವೂ ಕಾಡುತ್ತದೆ, ಪ್ರತಿಯೊಂದು ಸಂಭಾಷಣೆಯು ಮನಕ್ಕೆ ತಾಗುತ್ತದೆ, ಅದಕ್ಕೆ ಪೂರಕ ಹಿಮ್ಮೇಳ ಸಂಗೀತ, ಅದರ ಸಾಹಿತ್ಯ ಎಲ್ಲವು ಮನಸ್ಸಿನ ತಂತಿಯನ್ನು ಟಿಂಗ್ ಎಂದು ಮೀಟುತ್ತದೆ. ನನ್ನ ಮನಸ್ಸಿಗೆ ತಾಕಿ, ಈ ಬೃಹತ್ ಕಥಾವಸ್ತುವಿನ ಪ್ರದರ್ಶನಕ್ಕೆ ಬಂದದ್ದು ಸಾರ್ಥಕ ಅನ್ನಿಸುವಂತೆ ಮಾಡಿದ್ದು ಕೆಲವು ಪಾತ್ರಗಳು ಹಾಗು ಸನ್ನಿವೇಶ :

ಹುಲಿಯ (ನಾಯಿ): ನಿಜವಾಗಿಯೂ ಕಣ್ಣಲ್ಲಿ ಬಿಂದು ಜಿನುಗಿಸುವ ಪಾತ್ರ ಇದು. ಈ ಪಾತ್ರಧಾರಿ ನಿಜಕ್ಕೂ ಉತ್ಸಾಹದ ಚಿಲುಮೆ. ತನ್ನ ಪಾತ್ರ ಗೌಣ ಆಗದೆಯೂ... ಮುಖ್ಯ ಪಾತ್ರವಾಗದ ಹಾದಿಯಲ್ಲಿ ಬೆಳೆಯುವ ಈ ಪಾತ್ರ ಕಲಾವಿದನ ಪರಿಶ್ರಮ ಮತ್ತು ಶ್ರದ್ದೆಗೆ ಒಂದು ದಿಕ್ಸೂಚಿ 

ಚಿಂಕಾರ-ಸೆರೆಗಾರ: ಅದ್ಭುತ ಆಂಗೀಕ ಭಾಷೆ, ಭಾಷ ಪ್ರಯೋಗ, ನಡೆಯುವ ಶೈಲಿ ಖಳ ಎಂದರೆ ಹೀಗೆಯೇ ಇರಬೇಕು ಅನ್ನಿಸುವಷ್ಟು ಅಮೋಘ ಅಭಿನಯ 

ಕುಂಟ ಕಾಲಿನ ವೆಂಕಟಪ್ಪ ನಾಯಕ : ಬೊಂಬಾಟ್ ಸಂಭಾಷಣೆ, ಆಂಗೀಕ ಅಭಿನಯ, ಕೃತ್ರಿಮತೆ ಹೀಗೆಯೇ ಇರಬೇಕು ಅನ್ನುವುದನ್ನು ಸಲೀಸಾಗಿ ತೋರುವ ಅಭಿನಯ.. ವಾಹ್ ಅದಕ್ಕೆ ಸಾಟಿಯಿಲ್ಲ. 

ದೇವಿ ಮೈಮೇಲೆ ಬರುವ ಸನ್ನಿವೇಶ.. ರೋಮಾಂಚನ ತಂದಿತು, ಅದಕ್ಕೆ ಎಲ್ಲಾ ಕಲಾವಿದರು ಪಟ್ಟ ಪರಿಶ್ರಮಕ್ಕೆ ತಲೆ ಬಾಗಿ ವಂದಿಸುವೆ.

 ಚಿತ್ರಗಳು

*******************************************************************************
ಹೀಗೆ ಮನಸ್ಸಿಗೆ ಅನ್ನಿಸಿದ ಕೆಲವು ಮಾತುಗಳನ್ನು ಹೇಳಿದ್ದೇನೆ. ಕಥೆ ಬಗ್ಗೆ, ಹಾಗೂ ಅದರ ನೆಲೆಗಟ್ಟಿನ ಬಗ್ಗೆ ಓದುಗರಿಗೆ ಪರಿಚಯವಿದ್ದೆ ಇರುತ್ತೆ.. ಹಾಗಾಗಿ ಅದರ ಒಳ ನೋಟವನ್ನು ಹೇಳ ಹೋಗಿಲ್ಲ. ಸುಮಾರು ಒಂಭತ್ತು-ಹತ್ತು ತಾಸುಗಳನ್ನು ತ್ರಾಸದಾಯಕವಾದರೂ ಉತ್ಕೃಷ್ಟ ಸಂತಸವನ್ನು ಕೊಡುವ, ಹಾಗೂ ಕಲೆ ಕಲಾವಿದರನ್ನು ಹತ್ತಿರದಿಂದ ನೋಡುವ, ಅವರ ಅನುಭವಗಳನ್ನು ಕೇಳುವ ಸುವರ್ಣ ಅವಕಾಶ ಇನ್ನು ಕೆಲವೇ ಕೆಲವು ದಿನಗಳು ಮಾತ್ರ. ಇದೆ ಜೂನ್ ಒಂದಕ್ಕೆ ಕಡೆ ಆಟ ಅಂತ ಹೇಳುತ್ತಿದ್ದಾರೆ. ಎಷ್ಟೋ ಮಂದಿ ಒಂದಕ್ಕಿಂತ ಹೆಚ್ಚು ಭಾರಿ ನೋಡಿರುವುದು ಈ ನಾಟಕವನ್ನು ಕಲಾಗ್ರಮದ ರಂಗದ ಮೇಲೆ ತಂದ  ತಂಡಕ್ಕೆ ಅನಿರ್ವಚನೀಯ ಆನಂದ ತಂದು ಕೊಟ್ಟಿದೆ...!

ಇಡೀ ತಂಡಕ್ಕೆ ನಮ್ಮ ಬಳಗದಿಂದ ಅಭಿನಂದನೆಗಳು ಹಾಗೂ ತಂಡದ ಮುಂದಿನ ಎಲ್ಲಾ ಸಾಹಸಗಳಲ್ಲಿ ಯಶಸ್ಸು ಹೀಗೆ ಸಿಗಲಿ ಎನ್ನುವ ಹಾರೈಕೆ ನಮ್ಮ ತಂಡದಿಂದ!  

ಒಂದು ಸುಂದರ ಮನಸ್ಸಿನ ಸರದಾರರ ಜೊತೆಯಲ್ಲಿ
ಈ ಒಂದು ಸಾಹಸದ ಪರಿಶ್ರಮವನ್ನು ವೀಕ್ಷಿಸಲು ಜೊತೆಯಾದ ಸುಲತ, ಸಂಧ್ಯಾ, ರೂಪ, ಮೇಘನ ಹಾಗೂ ನನನ್ ಮನದನ್ನೆ ಸವಿತಾ ಹಾಗೂ ಮಗಳು ಶೀತಲ್ ಎಲ್ಲರಿಗೂ ಎಷ್ಟು ಧನ್ಯವಾದಗಳನ್ನು ಸಲ್ಲಿಸಿದರು ಸಾಲದು.

Wednesday, April 24, 2013

ರಾಜ್ ಆಸ್ತಾನದಲ್ಲಿ ಅವರು ಅನಭಿಷಿಕ್ತ ಮಹಾರಾಜರೇ! (2013)

ರಾಜ್ ಕಲಾವಿದರಾಗಿ ಯಾಕೆ ಎಲ್ಲರಿಗೂ ಇಷ್ಟವಾಗುತ್ತಾರೆ. ಉತ್ತರ ಹುಡುಕುತ್ತ ಹೊರಟರೆ ಪ್ರಾಯಶಃ ಈ ಭೂಮಿ.... ಮಂಗಳ ಗ್ರಹವಾಗಿಬಿಡುತ್ತೆ ಅನ್ನಿಸುತ್ತೆ. ಯಾಕೆಂದರೆ ಈ ಪ್ರಶ್ನೆಯನ್ನು ಕೇಳುತ್ತಾ ಹೊರಟರೆ ಎಲ್ಲರೂ ಮುಖ ಕೆಂಪಗೆ ಮಾಡಿಕೊಳ್ತಾರೆ. ಇಡಿ ಭೂಮಂಡಲವೇ ಕೆಂಪಾಗಿ.. ಮಂಗಳ ಗ್ರಹದಂತೆ ಆಗುತ್ತದೆ. 

ಇಂದು ಅವರ ಜನುಮ ದಿನ.. ವರ್ಷವೆಲ್ಲಾ ನೆನಪಲ್ಲಿ ಇದ್ದರೂ ಇಂದು ಇನ್ನೊಮ್ಮೆ ಅವರನ್ನು ನೆನೆಸಿಕೊಂಡು ಮೈ ಮನ ಪುಳಕಗೊಳ್ಳುವ ತವಕ ಎಲ್ಲರಲ್ಲೂ ಇರುತ್ತದೆ. ಮಗುವನ್ನು ಎಷ್ಟೇ ಬಾರಿ ಮುದ್ದಿಸಿದರೂ....  ಇನ್ನೊಮ್ಮೆ ಮುದ್ದಿಸೋಣ ಅನ್ನುವ ಬಯಕೆಯಂತೆ ಅಲ್ಲವೇ!

ರಾಜ್ ಆಸ್ತಾನದಲ್ಲಿ ಅವರು ಅನಭಿಷಿಕ್ತ ಮಹಾರಾಜರೇ. 



ಅವರು ಮಹಾರಾಜರಾಗಿ ದರ್ಬಾರ್ ನಲ್ಲಿ ಕೂತಿದ್ದಾಗ ಅವರ ಆಸ್ಥಾನದಲ್ಲಿ ಯಾರು ಯಾರು ಇರಬಹುದು. ಹೀಗೊಂದು ಕಲ್ಪನೆ ನನ್ನ ಕಾಡುತಿತ್ತು. ಆ ಒಂದು ಕಲ್ಪನೆಗೆ ರೆಕ್ಕೆ ಪುಕ್ಕ ಸಿಕ್ಕ ಈ ಕ್ಷಣದಲ್ಲಿ ಮೂಡಿಬಂದ ಲೇಖನ ಇದು. 

ಮಹಾರಾಜ : ಶ್ರೀ ಶ್ರೀ ಮುತ್ತು ರಾಜಕುಮಾರ್ 

ರಾಜ ಮಾತೆ : ಪಂಡರಿಬಾಯಿ 

ರಾಜ ಗುರು : ಕೆ ಎಸ್ ಅಶ್ವತ್ 

ಸಲಹೆ : ಆದ್ವಾನಿ ಲಕ್ಷ್ಮೀದೇವಿ 

ಮಹಾಮಂತ್ರಿಗಳು  : ವರದರಾಜ್ (ತಮ್ಮ) ಹಾಗೂ ಚಿ. ಉದಯಶಂಕರ್ 


ದರ್ಬಾರಿನ ನಿರ್ದೇಶಕರು : ಎಚ್ ಎಲ್ ಎನ್ ಸಿಂಹ 
                                    ಬಿ ಆರ್ ಪಂತುಲು 
                                    ದೊರೈ ಭಗವಾನ್ 
                                    ವಿಜಯ್ 
                                    ಹುಣಸೂರ್ ಕೃಷ್ಣಮೂರ್ತಿ 
                                    ಟಿ ವಿ ಸಿಂಗ್ ಠಾಕೂರ್ 
                                    ಕು ರಾ ಸೀತಾರಾಮ ಶಾಸ್ತ್ರಿ ಇನ್ನೂ ಅನೇಕ 
                                    ಮಹನೀಯರು 

ದೃಶ್ಯಸೆರೆ ಹಿಡಿದವರು  : ಆರ್ ಮಧುಸೂದನ್ 
                                 ಶ್ರೀಕಾಂತ್ 
                                 ಚಿಟ್ಟಿಬಾಬು 
                                 ಡಿ ವಿ ರಾಜಾರಾಮ್ 
                                 ಗೌರಿಶಂಕರ್ ಇನ್ನೂ ಮುಂತಾದವರು     

ಗರಡಿ ಗುರು : ಎಂಪಿ ಶಂಕರ್ 

ಸಂಗೀತ ವಿದ್ವಾಂಸರು : ಉಸ್ತಾದ್ ಬಿಸ್ಮಿಲ್ಲಾ ಖಾನ್ 
                                ಜಿ ಕೆ ವೆಂಕಟೇಶ್ 
                                ರಾಜನ್ ನಾಗೇಂದ್ರ 
                                ಎಂ ರಂಗರಾವ್ 
                                ಉಪೇಂದ್ರ ಕುಮಾರ್ 
                                ಟಿ ಜಿ ಲಿಂಗಪ್ಪ 
                                ವಿಜಯಭಾಸ್ಕರ್ 
                                ಮತ್ತಿತರರು 

ಸೇನಾಪತಿಗಳು : ನಟ ಭೈರವ ವಜ್ರಮುನಿ ಹಾಗೂ ತೂಗುದೀಪ ಶ್ರೀನಿವಾಸ್   

ರಣಕಲಿಗಳು : ಶಕ್ತಿ ಪ್ರಸಾದ್, ನಾಗಪ್ಪ, ದಿನೇಶ್

ವಿಕಟಕವಿಗಳು : ಹಾಸ್ಯ ಬ್ರಹ್ಮ ಬಾಲಣ್ಣ 
                       ಹಾಸ್ಯ ಚಕ್ರವರ್ತಿ ನರಸಿಂಹರಾಜು 
                       ಕುಳ್ಳ ಏಜೆಂಟ್ ದ್ವಾರಕೀಶ್ 
                       ಹಾಸ್ಯ ರಸತಜ್ಞ ಶಿವರಾಂ  

ಪೋಷಕ ವೃಂದದಲ್ಲಿ : ಹೊನ್ನವಳ್ಳಿ ಕೃಷ್ಣ, ಶಾಂತಮ್ಮ, ಪಾಪಮ್ಮ, ಸಂಪತ್, ಶನಿ ಮಹಾದೇವಪ್ಪ, ಅನಂತರಾಮ್ ಮಚ್ಚೇರಿ, ಗೋ ರಾ ಭೀಮರಾವ್, ಎಂ ಎಸ್ ಉಮೇಶ್, ಎಂ ಎಸ್ ಸತ್ಯ, ರಾಮಚಂದ್ರ ಶಾಸ್ತ್ರಿ, ಗಣಪತಿ ಭಟ್, ಅಶ್ವತ್ ನಾರಾಯಣ, ಜೋಕರ್ ಶ್ಯಾಮ್, ಕುಳ್ಳಿ ಜಯ, ರಮಾ ದೇವಿ, ಎಂ ಎನ್ ಲಕ್ಷ್ಮೀದೇವಿ  ಹಾಗೂ ಮತ್ತಿತರರು 

ನೃತ್ಯ ಪಟುಗಳು : ಉಡುಪಿ ಜಯರಾಂ, ದೇವಿ

ಸಾಹಸ: ಶಿವಯ್ಯ, ವಿಜಯ್, ಜೂಡೋ ರತ್ನಂ  
                                                             
ಈ ಪಟ್ಟಿಯಲ್ಲಿ ಇನ್ನೂ ಅನೇಕ ವಿಖ್ಯಾತ ಕಲಾವಿದರ, ಸಭಿಕರ, ಕಲಾ ಪೋಷಕರ ಹೆಸರುಗಳು ಪ್ರಕಟವಾಗಿಲ್ಲ. ಅವರನೆಲ್ಲಾ ಸೇರಿಸಿ ಒಂದು ದೊಡ್ಡ ಒಡ್ಡೋಲಗ ಮಾಡುವ ಅಭಿಲಾಷೆ ಇದೆ. ಎಲ್ಲರ ಮುಖ ಚಿತ್ರಗಳು ಜಗತ್ತಿಗೆ ಪರಿಚಯವಾಗಬೇಕೆಂಬ ಹಂಬಲ ಇದೆ.... ನೋಡೋಣ..ಪ್ರಯತ್ನ ಪಡೋಣ 

ಅಣ್ಣಾವ್ರ ಈ ಹುಟ್ಟು ಹಬ್ಬಕ್ಕೆ ಒಂದು ಕಲಾವಿದರ ಪಟ್ಟಿ.. ಹಾಗೂ ತಾವು ಮರೆಯಲ್ಲಿ ನಿಂತು ಕಲಾ ರತ್ನವನ್ನು ಬೆಳಕಿಗೆ ತಂದು ಹೊಳಪು ಕೊಟ್ಟ ಎಲ್ಲ ಕಲಾ ಮಣಿಗಳಿಗೆ ಈ ಲೇಖನ ಅರ್ಪಿತ!

Friday, April 12, 2013

ಮೈ ನೇಮ್ ಇಸ್ ರಾಜ್ ರಾಜ್ ರಾಜ್! - ಶಂಕರ್ ರಾಜ್ ಗುರು (2013)

ನಿನ್ನೆ ಯುಗಾದಿ ಹಬ್ಬದ ದಿನ ಏನೋ ಆಟವಾಡುತಿದ್ದ  ಮಗಳು ಎರಡು ಕಣ್ಣರಳಿಸಿ "ಅಪ್ಪಾ!" ಎಂದು ಕಿರುಚಿ ಕಣ್ಣು ಹೊಡೆದು ನಕ್ಕಳು.  ಮನಮಡದಿ "ಅದೆಷ್ಟು ಸಲ ಬಂದ್ರು  ಬಾಯಿ ಬಿಟ್ಕೊಂಡು ನೋಡ್ತೀರಾ" ಅಂದ್ಲು. ನನ್ನ ಅಭಿರುಚಿ ಗೊತ್ತಿದ್ದ ಮಗಳು  ಟಿ.ವಿ ಯ ಸೌಂಡ್ ಸ್ವಲ್ಪ ಹೆಚ್ಚಾಗಿಯೇ ಕೊಟ್ಟಳು.

ಕಲಶಂ ಪ್ರತಿಷ್ಟಾಪನ ಮಹೂರ್ತ ಆರಂಭಂ . ಎನ್ನುವಂತೆ ಲೆಕ್ಕವಿಲ್ಲದಷ್ಟು ಭಾರಿ ನೋಡಿದರು ಮತ್ತೊಮ್ಮೆ ನೋಡಲು ಸಿದ್ಧವಾಗಿ ಕೂತೆವು. ನಿನ್ನೆ ಯುಗಾದಿ ಹಬ್ಬದ ದಿನ ಉದಯ ಮೂವೀಸ್ ನಲ್ಲಿ ಅಣ್ಣಾವ್ರ ಶಂಕರ್ ಗುರು ಸಿನಿಮಾ ಬಿತ್ತರಗೊಂಡಿತು.

ನನ್ನ ಮಗಳಿಗೂ ರಾಜ್ ಚಿತ್ರ ಗಳು ಎಂದರೆ ಖುಷಿಯಾಗುತ್ತಿದೆ ಎಂದರೆ ಈ ಕಲಾವಿದ ಎಲ್ಲಾ ತಲೆಮಾರುಗಳಿಗೂ ಸಲ್ಲುವ ಕಲಾವಿದ ಎನ್ನುವುದಕ್ಕೆ ಇದು ಉದಾಹರಣೆ..

ಈ ಲೇಖನವನ್ನು ಇಬ್ಬರೂ "ರಾಜ"ರಿಗೆ ಸಮರ್ಪಿಸುತ್ತಿದ್ದೇನೆ. ಒಂದು ರಾಜಣ್ಣ (ಅಣ್ಣಾವ್ರು)   ..ಇನ್ನೊಂದು ನನ್ನ ಸೋದರ ಮಾವ ರಾಜ (ಇವನ ಹೆಸರೂ - ಶ್ರೀಕಾಂತ್)  (ಇವ ನಮ್ಮನ್ನು ಅಗಲಿ ೫ ವರ್ಷಗಳು ಕಳೆದಿವೆ).

ಶ್ರೀಕಾಂತ್ & ಶ್ರೀಕಾಂತ್!
ನನ್ನ ಸೋದರಮಾವ ರಾಜನ ಸಿನಿಮಾ ಹುಚ್ಚು ಅದರ ಬಗ್ಗೆ ಇನ್ನೊಂದು ಸುಧೀರ್ಘ ಮಾಲಿಕೆಯೇ ಬರೆಯಬೇಕು. ಇವನಿಗೆ "ಶಂಕರ್ ಗುರು" ಸಿನಿಮಾ ಎಷ್ಟು ಹುಚ್ಚು ಹಿಡಿಸಿತ್ತು ಎಂದರೆ.. ಕಳೆದ ಹದಿನೈದು ವರ್ಷಗಳಲ್ಲಿ ಶಂಕರ್ ಗುರು ಚಿತ್ರ ಬೆಂಗಳೂರಿನಲ್ಲಿ ಬಿಡುಗಡೆ ಕಂಡ ಕಡೆಯಲ್ಲೆಲ್ಲಾ ನೋಡಿ ಬಂದಿದ್ದೇವೆ. ಒಂದು ಫೋನ್ "ಶ್ರೀಕಾಂತು.....  ಶಂಕರ್ ಗುರು... ಬೇಗ ಬಂದು ಬಿಡು" ಇಷ್ಟೇ ಅವನು ಹೇಳ್ತಾ ಇದ್ದದ್ದು. ನಾನು ಬಿಟ್ಟ ಕೆಲಸ ಬಿಟ್ಟು ಓಡಿ ಬಿಡುತಿದ್ದೆ.

ತ್ರಿಪಾತ್ರದಲ್ಲಿ ಅಮೋಘ ಅಭಿನಯ! 
ಇನ್ನು ಶಂಕರ್ ಗುರು ಸಿನಿಮಾ... ಪಕ್ಕ ವ್ಯಾಪಾರಿ ಚಿತ್ರವಾದರೂ, ಒಂದು ಜೀವನದಲ್ಲಿ ಇರಬೇಕಾದ ಶಿಸ್ತು, ನೆಡತೆ,       ಮಾತಾ-ಪಿತೃಗಳ ಬಗ್ಗೆ ಗೌರವ, ಪ್ರೀತಿ ಪ್ರೇಮ, ಹಿರಿಯರ ಮೇಲಿನ ಗೌರವ, ಮನಕಲಕುವ ಸಂಭಾಷಣೆಗಳು, ಸಾಹಸ ದೃಶ್ಯಗಳು, ಸುಮಧುರ ಹಾಡುಗಳು ಈ ಚಿತ್ರದಲ್ಲಿದೆ.
  • "ಈಗ ನನ್ನ ಚಾನ್ಸ್" ಎನ್ನುತ್ತಾ ಕುಂಕುಮದ ಭರಣಿ ತೆಗೆದು ಮಡದಿಗೆ ಸಿಂಧೂರ ಇಡುವ ಪರಿ
  • ಕೆಲವೊಮ್ಮೆ ದೇಹಕ್ಕೆ ಈ ರೀತಿಯ ದಂಡನೆ ಅನಿವಾರ್ಯ ಎನ್ನುವ ಮಾತು.. 
  • ರೆಸ್ಟ್ ಬೇಕಾಗಿರೋದು ದೇಹಕ್ಕಲ್ಲ ಮನಸ್ಸಿಗೆ ... ಮನಸ್ಸಿಗೆ.. ಎನ್ನುವ ಸಂಭಾಷಣೆ  
  • ಫೋನ್ ನಲ್ಲಿ "ಜಿಂಕೆಯ ಕಣ್ಣೆ  ಚೆನ್ನಾ ಎನ್ನುತ್ತಾ ಹಾಗೆಯೇ ಅಳುತ್ತಾ ಕುಸಿದು ಕೂರುವ ದೃಶ್ಯ... "ಅಬ್ಬಬ್ಬಾ ಇಷ್ಟು ವರ್ಷಗಳಾದ ಇಂತಹ ಆನಂದ" ಎನ್ನುವಾಗ ಅವರ ಅಭಿನಯ!  
  • "ಅಡ್ರೆಸ್ ಕೇಳ್ತಾ ಇದ್ರೂ.. ನಾನು ಕೊಟ್ಟಿದ್ದೇನೆ.. ನೀವು ಮಿಕ್ಕಿದ್ದು ಕೊಡಿ"
  • "ಓಹ್ ಶಂಕರ್.. ನಾನು ಗೈಡ್ ಮಾಡ್ತೀನಿ ಅಂದೇ... ಕೇಳಲಿಲ್ಲ.. ಯಾರೋ ಮಿಸ್-ಗೈಡ್ ಮಾಡಿದ್ದಾರೆ"
  • "ಮೊದಲು ನಾನು ಹೇಳುವ ಮಾತು ಕೇಳೋ ಕ್ರಿಮಿನಲ್" ಎನ್ನುವ ಗುರು 
  • "ಕಾಶ್ಮೀರದ ಹೆಣ್ಣಿನ ಅಹಂಕಾರ ಇಳಿಸಿ.. ಕನ್ನಡ ನಾಡಿಗೆ ಕರೆತರದಿದ್ದರೆ ನನ್ನ ಹೆಸರು ಗುರು ಅಲ್ಲಾ" ಎಂದು ಎದೆ ತಟ್ಟಿ  ಕೊಳ್ಳುವ ಶೈಲಿ 
  • "ತಾತ.. ಹೀಗೆ ನನ್ನ ಇನ್ನೊಮ್ಮೆ ಹಿಡಿದುಕೊಂಡರೆ ನಾನು ಗೋತಾ"
  • ಸುಮಧುರ ಹಾಡುಗಳು, ಸುಂದರ ಪ್ರದೇಶಗಳಲ್ಲಿ ಚಿತ್ರಿಕರನವಾದ ಸಾಹಸ ದೃಶ್ಯಗಳು, ಮೂರು ಪಾತ್ರಗಳನ್ನೂ ಮಾಡಿದ್ದರೂ ಒಂದು ಪಾತ್ರದ ಛಾಯೆ ಇನ್ನೊಂದು ಪಾತ್ರದ ಮೇಲೆ ಮೂಡದಿರುವುದು.. ಇವೆಲ್ಲ ಕೇವಲ ಅಣ್ಣಾವ್ರಿಗೆ ಮಾತ್ರ ಸಾಧ್ಯ ಎನ್ನಿಸುತ್ತದೆ. ಧ್ವನಿಯಲ್ಲಿ ಏರಿಳಿತ, ಪಾತ್ರಕ್ಕೆ ತಕ್ಕ ಆಂಗಿಕ ಅಭಿನಯ. 
  • ತಾಂತ್ರಿಕವಾಗಿಯೂ ಶ್ರೀಮಂತವಾಗಿದ್ದ ಚಿತ್ರದ ಹೈ ಲೈಟ್ ಎಂದರೆ.. ಅಣ್ಣಾವ್ರ ಪಾತ್ರಗಳು ಒಬ್ಬರನ್ನು ಒಬ್ಬರು ಸಂಧಿಸಿದಾಗ ಭ್ರಮೆಯಲ್ಲ ನಿಜ ಅನ್ನುವಂತೆ ಮೂಡಿಬರುವ ಪಾತ್ರಧಾರಿಗಳ ಜೋಡಣೆ, ಮತ್ತು ಅಭಿನಯ. (ಮಧು ಅವರ ಛಾಯ ಚಿತ್ರಣ)
  • ಶಂಕರ್ ಪಾತ್ರ ಕೋಮಲವಾದ ಬಳ್ಳಿಯ ತರಹ ಇದ್ದರೇ, ಗುರುವಿನ ಪಾತ್ರ ಪಕ್ಕ ತರಲೆ, ನಗು ಬುಗ್ಗೆ ಉಕ್ಕಿಸುವ ಪಾತ್ರ, ಇನ್ನು ಇದಕ್ಕೆಲ್ಲ ಕಳಶಪ್ರಾಯ ಎನ್ನುವಂತೆ ಗಂಭೀರ ರಾಜ್ ಶೇಖರ್ ಪಾತ್ರ
  • ಈ ಚಿತ್ರದ ಬಗ್ಗೆ ಒಂದು ಬೇರೆಯೇ ಲೇಖನ ಬರೆಯುವ ಆಸೆ ಇದೆ.. ಕಾರಣ ನಾನು ತುಂಬಾ ಇಷ್ಟ ಪಟ್ಟು ಪದೇ ಪದೇ  ನೋಡಿದ ಹಲವಾರು ಚಿತ್ರಗಳಲ್ಲಿ ಇದೂ ಒಂದು. 
ಒಂದು ಕ್ಲಾಸಿಕ್ ದೃಶ್ಯ!
ಇಷ್ಟೆಲ್ಲಾ  ಮಾತುಗಳು ಏಕೆ ಅಂದ್ರೆ ಇನ್ನೂರು ಚಿಲ್ಲರೆ ಚಿತ್ರಗಳಲ್ಲಿ ಅಭಿನಯಿಸಿದರೂ, ಹಿರಿಯ ಕಿರಿಯ ಕಲಾವಿದರ ಜೊತೆ ಅಭಿನಯ, ಪಾತ್ರಕ್ಕೆ ಅಗತ್ಯವಿದ್ದಾಗ ಹಿರಿಯ ಕಿರಿಯಕಲಾವಿದ ಎಂದು ನೋಡದೆ.. ಕಾಲು ಮುಟ್ಟಿ  ನಮಸ್ಕರಿಸುವುದು, ಆಲಂಗಿಸಿಕೊಳ್ಳುವುದು, ಇದೆಲ್ಲ ತಲೆಯನ್ನು  ಭುಜದ ಮೇಲೆ ಸದಾ ಹೊತ್ತಿರೋರಿಗೆ ಮಾತ್ರ ಸಾಧ್ಯ. ನಿರ್ದೇಶಕರ, ನಿರ್ಮಾಪಕರ ನಟರಾಗಿದ್ದ ಇವರು ಒಂದು ರತ್ನವೇ...   ಅಂತಹ ಒಂದು ರತ್ನ ನಮ್ಮ ಅಣ್ಣಾವ್ರು. ಕಲಾವಿದ ರಾಜ್ ಎಂದಿಗೂ ಅಮರ! 

ಅವರ ಎಲ್ಲ ಚಿತ್ರಗಳನ್ನು ನೋಡಿ, ಪ್ರತಿಯೊಂದು ಚಿತ್ರದ ಬಗ್ಗೆ ನನಗನಿಸಿದ ಮಾತುಗಳನ್ನು ಬರೆಯುವ ಆಸೆ ಇದೆ. ಇದು  ಅಣ್ಣಾವ್ರಿಗೆ ತೋರುವ ಗೌರವ ಅಷ್ಟೇ ಅಲ್ಲಾ ... ಸಿನಿಮಾ ಹುಚ್ಚನ್ನು ನನಗೂ ದಾಟಿಸಿ, ಸಿನೆಮಾಗಳಲ್ಲಿ ಬರುವ ಒಳ್ಳೆಯ ವಿಚಾರಗಳನ್ನು ಕಲಿಸಿ, ತಿಳಿಸಿ, ಜೀವನದಲ್ಲಿ ಅಳವಡಿಸಿಕೊಳ್ಳಲು ಸಹಾಯ ಮಾಡಿದ ನನ್ನ ಪ್ರೀತಿಯ ಸೋದರಮಾವ ರಾಜನಿಗೂ ಇದು ಒಂದು ನುಡಿ ನಮನವಾಗುತ್ತೆ ಎನ್ನುವ ಒಂದು ಹಂಬಲ .  

ನನ್ನ ಹೃದಯವನ್ನು ಮುಟ್ಟಿದ ಇಬ್ಬರು ಅನಭಿಷಿಕ್ತ "ರಾಜ"ರಿಗೆ ನನ್ನ ಅಕ್ಷರಗಳಲ್ಲಿ ನಮನ ಸಲ್ಲಿಸುವ ಒಂದು ಸಣ್ಣ ಪ್ರಯತ್ನ! 

ಅಣ್ಣಾವ್ರ ಪುಣ್ಯ ತಿಥಿಯ ಈ ಸಮಯದಲ್ಲಿ.. ಸದಾ ನೆನಪಲ್ಲಿ ಇರುವ ಕಲಾವಿದನನ್ನು ಒಮ್ಮೆ ಕಣ್ಣ ಮುಂದೆ ತಂದು                         ನಿಲ್ಲಿಸಿಕೊಳ್ಳುವ ಒಂದು ಪುಟ್ಟ ಪ್ರಯತ್ನ!

Monday, March 25, 2013

ಹಾಲಿನ ಸಮುದ್ರದಲ್ಲಿ ಹಾರಾಡಿದ "ಮೈನಾ" (2010)

ಬಹಳ ತಿಂಗಳುಗಳ ನಂತರ ಒಂದು ಸಿನೆಮಾಕ್ಕೆ ಹೋಗಬೇಕು ಅನ್ನಿಸಿತು. ಮಗಳಿಗೆ ಇವತ್ತು ಪರೀಕ್ಷೆ ಮುಗಿದಿತ್ತು. ಎಲ್ಲಿಗಾದರೂ ಕರೆದುಕೊಂಡು ಹೋಗೋಣ ಅನ್ನಿಸಿ ಸರಿ ದೂದ್ ಸಾಗರ್ ತೋರಿಸುವ ಎಂದು "ಮೈನಾ" ಚಿತ್ರಕ್ಕೆ "ಶ್ರೀವಿತಲ್" ಹೋದೆವು.

ಚಿತ್ರ ಕೃಪೆ - ಅಂತರ್ಜಾಲ 
ಇನ್ನು ಚಿತ್ರದ ಬಗ್ಗೆ ಆಗಲೇ ನೂರಾರು ವಿಮರ್ಶೆಗಳು, ಹೊಗಳಿಕೆಗಳು, ಗಲ್ಲಾಪೆಟ್ಟಿಗೆಯಲ್ಲೂ ಸದ್ದು ಮಾಡಿದ ಚಿತ್ರ ಎಂದು ಬಣ್ಣಿಸಿ ಬರೆದ ಲೇಖನಗಳು ಮೈನಾ ಹಕ್ಕಿಯಂತೆಯೇ ಹಾರಾಡುತ್ತಿದೆ. ನನಗೆ ಅನ್ನಿಸಿದ ಒಂದೆರಡು ಮಾತುಗಳನ್ನ ಬರೆಯೋಣ ಎನ್ನಿಸಿತು. ಹಾಗಾಗಿ ಈ ಬ್ಲಾಗ್ ಲೇಖನ!
ಚಿತ್ರ ಕೃಪೆ - ಅಂತರ್ಜಾಲ 
ಮೈ ನವಿರೇಳಿಸುವಂತಹ ಆರಂಭಿಕ ಸಾಹಸ ದೃಶ್ಯಗಳಿಂದ ಶುರುವಾಗುತ್ತದೆ ಚಿತ್ರ. ನಂತರ ನಿಧಾನಗತಿಯಲ್ಲಿ  ಕಾವೇರಿಸುತ್ತಾ ಸಾಗುತ್ತದೆ. ಈ ರಿಯಾಲಿಟಿ ಶೋಗಳು ಮನುಷ್ಯರನ್ನು ಮಾನವೀಯ ಕಂಪನಗಳಿಂದ ಹೇಗೆ ದೂರ ಒಯ್ಯಬಲ್ಲದು ಎಂದು ಸೂಕ್ಷ್ಮವಾಗಿ ಪರಿಚಯಿಸುತ್ತಾ ಹೋಗುತ್ತದೆ.

ನಂತರ ಶುರುವಾಗುತ್ತದೆ ರಿಯಲ್ ಸಿನಿಮಾ. ದೃಶ್ಯ ಕಾವ್ಯವಾಗಿ ಹರಿದಾಡುತ್ತದೆ. ಪ್ರತಿಯೊಂದು ಸನ್ನಿವೇಶವನ್ನು ಕುಸುರಿಗಾರನ ಕೈಚಳಕದಲ್ಲಿ ಅರಳಿದ ಕಲೆಯಂತೆ ಸಾಗುತ್ತದೆ. ಪಾತ್ರಧಾರಿಗಳು ಕೂಡ ಆ ಪಾತ್ರಗಳಿಗೆ ಎಷ್ಟು ಬೇಕೋ ಅಷ್ಟು ಅಭಿನಯವನ್ನು ಮುದ್ದಾಗಿ ಅಭಿನಯಿಸಿದ್ದಾರೆ.

ಮನಸೆಳೆಯುವ ಅಂಶಗಳು :
  •  ಚೇತನ್ ಅವರ ಆಕರ್ಷಕ ಮೈಕಟ್ಟು, ಓಡುವ ಶೈಲಿ, ಸುಂದರ ನಗು ಚೆಲ್ಲುವ ಕಣ್ಣುಗಳು, ಜಲಪಾತದಂತೆಯೇ ಹರಿದಾಡುವ ತಲೆಗೂದಲು
  • ಬೇಸರವೆನಿಸುವ ತಬಲಾ ನಾಣಿಯ ಅದೇ ಕುಡುಕನ ಶೈಲಿಯ ಮಾತುಗಳು, ಆದರೆ ಬರು ಬರುತ್ತಾ ನಾಯಕನಿಗೆ ಅವನ ಪ್ರೇಮಕ್ಕೆ  ಸಹಾಯ ಮಾಡುವ ಹೃದಯ ಸಿರಿವಂತಿಕೆ (ಬಹುಶಃ ಸಿನಿಮಾದಲ್ಲಿ ಮಾತ್ರ ಸಿಗುತ್ತೆ)
  •  ಸಾಧು ಕೋಕಿಲ ಅವರ ಹಾಸ್ಯ ನಟನೆಗಿಂತ ಹಿನ್ನೆಲೆ ಸಂಗೀತದಲ್ಲಿ ಗಮನ ಸೆಳೆಯುತ್ತಾರೆ (ಕನ್ನಡ ಚಿತ್ರರಂಗದಲ್ಲಿ ಅವರಂತೆ ಪರಿಣಾಮಕಾರಿಯಾಗಿ ಹಿನ್ನೆಲೆ ಸಂಗೀತ ಕೊಡುವರು ಇನ್ನೊಬ್ಬರಿಲ್ಲಾ ಎನ್ನಿಸುತ್ತದೆ)
  • ಪೋಲಿಸ್ ಸಮವಸ್ತ್ರದಲ್ಲಿ (ಮೊದಲಬಾರಿಗೆ) ಮೈ ತುಂಬಾ ಬಟ್ಟೆ ಹಾಕಿಕೊಂಡು ಮುದ್ದಾಗಿ ಕಾಣುವ  ಸುಮನ್ ರಂಗನಾಥ್
  • ಸಾಹಸ ದೃಶ್ಯಗಳು ಗಮನ ಸೆಳೆಯುತ್ತವೆ. 
  • ಚಿತದ ೯೮ % ಭಾಗ ಅತ್ಯುತ್ತಮ ನಿರ್ದೇಶನ ಮಾಡಿರುವ ನಾಗ್ ಶೇಖರ್! (ಇನ್ನುಳಿದ ೨% ಮಾಹಿತಿಗೆ ಲೇಖನದ ಕೊನೆಯಲ್ಲಿ ನೋಡಿ) 

ಹುಚ್ಚೆಬ್ಬಿಸುವ ಅಂಶಗಳು:
ಚಿತ್ರ ಕೃಪೆ - ಅಂತರ್ಜಾಲ
  • ಹಿರಿಯ ತಾರೆ "ಸರಿತಾ" ನಂತರ ಕಣ್ಣುಗಳಲ್ಲೇ ಅಭಿನಯಿಸುವ ನಾಯಕಿ ನಿತ್ಯಾ ಮೆನನ್. ಅವರ ಪಾತ್ರಕ್ಕೆ ಮಾತುಗಳೇ ಬೇಡವಾಗಿತ್ತು ಅನ್ನಿಸುವಷ್ಟು ಅದ್ಭುತವಾಗಿವೆ ಕಣ್ಣಿನ ಅಭಿನಯ 
  • ಕಲರಫುಲ್ ಎನ್ನುವಾಗ ಕಣ್ಣಲ್ಲಿ ಕಾಣುವ ಕಾಂತಿ 
  • ಚಿಕ್ಕ ವಯಸ್ಸಿನಲ್ಲಿ ತೆವಳಲು ಮಜಾ ಎನ್ನಿಸುತ್ತಿತ್ತು.. ತೆವಳುವುದೇ ಜೀವನದ ಅಂತಿಮ ಎನ್ನುವ  ದೃಶ್ಯದಲ್ಲಿ ಕಣ್ಣುಗಳು ಕಾರುವ ಭಾವ 
  • ನನಗೆ ಗಂಡ ಬೇಕು ಎನ್ನುವಾಗ ಕಣ್ಣಲ್ಲಿ ಕಾಣುವ ದೂದ್ ಸಾಗರ!
  • ನಿತ್ಯಾ ಮೆನನ್ ಅವರದು "ಮೈನಾ"ದಲ್ಲಿ "ಮೈ"ನಾ  ತೋರಿಸದೆ ಮನಸನ್ನು ಬಿಚ್ಚಿಟ್ಟ ಒಂದು ಸುಂದರ ಪಾತ್ರ 
ಕುರ್ಚಿಯ ಮೇಲೆ ನಿಲ್ಲಬೇಕು ಎನ್ನಿಸುವ ಅಂಶಗಳು:


ಜಾದುಗಾರ ಸತ್ಯ ಹೆಗಡೆ (ಚಿತ್ರ ಕೃಪೆ - ಅಂತರ್ಜಾಲ )
  • ಈ ಚಿತ್ರದ ನಿಜವಾದ ನಾಯಕ ಛಾಯಾಗ್ರಾಹಕ ಸತ್ಯ ಹೆಗಡೆ. ಕ್ಯಾಮೆರಾಗಳನ್ನು ಎಲ್ಲೆಲ್ಲಿ ಇಟ್ಟಿದ್ದಾರೆ ಎನ್ನುವ ಅನುಮಾನ ಹುಟ್ಟಿಸುವಷ್ಟು ದೃಶ್ಯಗಳು ಶ್ರೀಮಂತವಾಗಿವೆ. 
  • ಸಮುದ್ರ ತೀರದ ದೃಶ್ಯಗಳು, ಕ್ಯಾಮೆರಾಗಳು ಹರಿದಾಡುವ ಸೊಗಸು ನೋಡಿಯೇ ಅನುಭವಿಸಬೇಕು 
  • ಮಳೆ ದೃಶ್ಯಗಳನ್ನು ಬೊಂಬಾಟ್ ಆಗಿ ಚಿತ್ರೀಕರಿಸಿದ್ದಾರೆ
  • ದೂದ್ ಸಾಗರ ಜಲಪಾತದ ಕಣಿವೆ ದೃಶ್ಯಗಳು, ಕ್ಯಾಸಲ್ ರಾಕ್, ಬ್ರಿಗಾಂಜ್ ಘಾಟ್, ರೈಲು ಪಟ್ಟಿಯ ಮಧ್ಯೆ ಬರುವ ಸುರಂಗಗಳು, ಪ್ರತಿಯೊಂದು ದೃಶ್ಯಕಾವ್ಯ. ಇನ್ನೊಮ್ಮೆ ಈ ಚಿತ್ರವನ್ನು ನೋಡಬೇಕೆನಿಸಿದರೆ ಅದು ಸತ್ಯ ಅವರ ಅದ್ಭುತ ಕೆಲಸಕ್ಕೆ. ಜಲಪಾತಗಳನ್ನು ಇಷ್ಟು ಸುಂದರವಾಗಿ ಸೆರೆಹಿಡಿಯಬಹುದು ಎಂದು ತೋರಿಸಿದ್ದಾರೆ. ಅವರ ಶ್ರಮಕ್ಕೆ ಶಿರಬಾಗಿ ನಮಿಸುವೆ 
ತಲೆಕೂದಲು ಕಿತ್ತು ಕೊಳ್ಳಬೇಕು ಅನ್ನಿಸುವ ಅಂಶಗಳು:
  • ಚಿತ್ರದುದ್ದಕ್ಕೂ ಮೈ ಮುಚ್ಚುವ ಪೋಲಿಸ್ ಧಿರುಸಿನಲ್ಲಿ ಸುಂದರವಾಗಿ ಕಾಣುವ ಸುಮನ್ ರಂಗನಾಥ್ ಕಡೆ ದೃಶ್ಯದಲ್ಲಿ ಒಂದು ಸುಂದರ ಹಾಡನ್ನು ಗಬ್ಬೆಬ್ಬಿಸಿ ರಿಮಿಕ್ಸ್ ಅನ್ನುವ ಕೆಟ್ಟ ತಂತ್ರ ಮಾಡಿ ವಯೋವೃದ್ಧರಾದ ಕೆಲ ನಟರನ್ನ ಬಾಯಿ ಬಾಯಿ ಬಿಡುತ್ತಾ ಚಿತ್ರೀಕರಿಸಿರುವ ಹಾಡು. ಅದಕ್ಕೆ  ಹಿರಿಯ ನಟರನ್ನು ಬಳಸಿಕೊಂಡ ರೀತಿ (ಲೋಕನಾಥ್, ಪಾರ್ಥಸಾರಥಿ, ಉಮೇಶ್)... ದೇವರೇ ಕಾಪಾಡಪ್ಪ! 
  • ರಾತಿ ಪೂರ್ತ ಸಂಕಟ ಅನುಭವಿಸಿ ಹೆತ್ತ ಮಗುವನ್ನು ನಾಯಿ ಕಚ್ಚಿಕೊಂಡು ಹೋಯಿತು ಎನ್ನುವ ಹಾಗೆ... ಒಳ್ಳೆ ಅಂತ್ಯ ಕೊಡಬೇಕಾದ ಜಾಗದಲ್ಲಿ @#$@#$@#$!
  • ಈ ಕಡೆ ಪ್ರೇಮ ಕಾವ್ಯವೂ ಆಗದೆ, ಸೇಡಿನ ರಾಜಕಾರಣವೂ ಆಗದ ಎಡಬಿಡಂಗಿಯಂತಹ ಅಂತ್ಯ
  • ಸಂಜು ಮತ್ತು ಗೀತ ದುಖಾಂತ್ಯವಾಯಿತು ಗಲ್ಲಾ  ಪೆಟ್ಟಿಗೆ ತುಂಬಿತ್ತು ಅಂತ   ಈ ಚಿತ್ರದಲ್ಲಿಯೂ  ಬೇಡದ ಅದೇ ದೋರಣೆಯನ್ನು ತೋರಿರುವುದು. 
  • ಒಳ್ಳೆಯ ನಟರನ್ನು ಪಾತ್ರ ಪೋಷಣೆ ಇಲ್ಲದೆ ವ್ಯರ್ಥ ಮಾಡಿರುವುದು (ಸುಹಾಸಿನಿ, ಅನಂತನಾಗ್, ಜೈ ಜಗದೀಶ್)
  • ಶರತ್ ಕುಮಾರ್ ಈ ಪಾತ್ರಕ್ಕೆ ಬೇಕಿತ್ತೆ ಎನ್ನುವ ಗೊಂದಲ ಕಾಡುತ್ತದೆ

ಹೊಡಿ ಬಡಿ ಚಚ್ಚು ಎನ್ನುವ ಸಿದ್ಧ ಸೂತ್ರಗಳ ಮಧ್ಯೆ ನಿಜಕ್ಕೂ ಉಸಿರಾಡಿಸುವ ಸುಂದರ ಚಿತ್ರ. ನೋಡಿ ಅಪರೂಪಕ್ಕೆ ಎಂಬಂತೆ ಬಂದಿರುವ ಒಂದು ಸುಂದರ ಕನ್ನಡ ಚಿತ್ರವನ್ನು ಬೆಂಬಲಿಸಿ. 

Thursday, March 14, 2013

Bangaradha Manushya (1972)

The first in the list features evergreen movie in Kannada movie land “Bangarada Manushya”.  It ran successfully for two years with out a break, a record in Kannada cini industry.  The re-release after a gap of 20 years also ran in to 100 days.

Part I
It was based on a novel by T K Ramarao, directed by Siddalingaiah, Starring Rajkumar, Bharathi, Balakrishna, Vajramuni in the leads.

Rajkumar returns from the city to visit his Sister’s house in the village, he comes to know his brother in law finished duty on the earth, and is on the way to heavenly abode. The moment his sister (played beautifully by Character Artist “Aadhavani Lakshmidevi”), and her children (Two sons played by Srinath, and Vajramuni), and a daughter sees Rajkumar they ran and hug him.  They all knew, he is the one who can bail them out. 

In this scene, she will be having a rich elder Brother (Lokanath), but still her hearts beats for the younger brother who was still studying, but she will have more faith on her younger brother(Rajkumar) than  on elder brother. 

This shows money is not the criteria for love and affection, always the relationship is between heart to heart, but not from wallet to heart.

Part II

When Rajkumar, retrieves the land from the mortgage, he decides to plough on his own.  After the basic rituals, instead of starting to plough, he gently massages the bulls, and then he lifts soil from the land, and prays to the goddess earth to support his noble gesture to save his sister’s family from the troubled waters.

You will fail to choose the winner who is the most innocent, the bulls, the earth, or the Hero.  It brings tears down the cheeks any time I visit this scene.

This teaches, never neglect the hands which lend you the support in the crisis, and also, never forget to seek the divine intervention, which helps you to clear all the path strewn with thorns.

The character of Rajeeva played by Rajkumar was a gem in its own respect.  Sometimes after reading the novel, and watching the movie, you will tempted to debate whether novel was written by keeping Rajkumar in the mind, or Rajkumar was born to portray the character of Rajeeva.  It is like debating whether egg came first or the hen.