Sunday, December 24, 2023

ಭಕ್ತಿ ಶಕ್ತಿಯ ಕದನದಲ್ಲಿ ಗೆಲ್ಲೋದು ಭಕ್ತಿಯೇ ಹೌದು .. ಶ್ರೀ ರಾಮಾಂಜನೇಯ ಯುದ್ಧ (1964 (ಅಣ್ಣಾವ್ರ ಚಿತ್ರ ೫೦/೨೦೭)

ಕಾಲದ ಓಟದಲ್ಲಿ ಯಾರು ನಮ್ಮ ಮುಂದೆ, ಯಾರು ನಮ್ಮ ಹಿಂದೆ ಅಂತ  ಯೋಚಿಸದೆ ತಮ್ಮ ಪಾಡಿಗೆ ಹೆಜ್ಜೆ ಹಾಕುತ್ತಾ ಹೋದಾಗ ಮೈಲಿಗಲ್ಲುಗಳು ತಮಗೆ ತಾವೇ ನೆಟ್ಟುಕೊಳ್ಳುತ್ತಾ ಹೋಗುತ್ತದೆ. 

ಅದೇ ರೀತಿಯ ಚಿತ್ರಜೀವನದ ಮೈಲಿಗಲ್ಲು ಮುಟ್ಟಿದ್ದು ರಾಜ್ ಕುಮಾರ್ ಅವರು. ತಮಗೆ ಒಲಿದು ಬಂದ ಪಾತ್ರ, ತಮ್ಮನ್ನು ಅರಸಿ ಬಂದ ಪಾತ್ರಗಳನ್ನ ಅಚ್ಚುಕಟ್ಟಾಗಿ ಅಭಿನಯಿಸಿ, ಆ ಪಾತ್ರಕ್ಕೆ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಎರಡನೇ ಮೈಲಿಗಳನ್ನು ಯಶಸ್ವಿಯಾಗಿ ದಾಟಿದರು. 

ಮೊದಲ ಮೈಲಿಗಲ್ಲು ಬೇಡರ ಕಣ್ಣಪ್ಪ ಚಿತ್ರದಲ್ಲಿ ನಾಯಕ ನಟನಾಗಿ ಪಾದಾರ್ಪಣೆ, ಅಭೂತಪೂರ್ವ ಯಶಸ್ಸು, ಭರವಸೆಯ ನಾಯಕ ನಟ, ಹೀಗೆ ಹಲವಾರು ವಿಶೇಷಣಗಳನ್ನು ಹೊತ್ತು ಮುಂದಡಿ ಇಟ್ಟ ರಾಜಕುಮಾರ್ ಒಂದೊಂದೇ ಚಿತ್ರಗಳನ್ನು ಶ್ರದ್ಧೆ ತಮ್ಮ ಅಭಿನಯ ಪ್ರತಿಭೆಯನ್ನು ಒರೆಗೆ ಹಚ್ಚಿ ಸುವರ್ಣ ಚಿತ್ರಗಳ ಸರದಾರರಾದರು. 


ನಾರದನನ್ನು ಕಲಹ ಪ್ರಿಯ ಎಂಬ ಒಂದೇ ಮಾತಿನಿಂದ ನಗುತ್ತೇವೆ, ಆದರೆ ಆತ ತರುತ್ತಿದ್ದ ಸಮಸ್ಯೆಗಳು, ಅದಕ್ಕೆ ಆತನೇ ಕೊಡುತ್ತಿದ್ದ ಪರಿಹಾರಗಳು ಪಾಠ ಕಲಿಸುತ್ತಿದ್ದದ್ದು ಅಷ್ಟೇ ಅಲ್ಲದೆ, ಉತ್ತಮ ಸಂದೇಶ ಹೊತ್ತು ನಿಲ್ಲುತ್ತಿದ್ದವು. ದೇವಾನುದೇವತೆಗಳನ್ನೇ ಗೋಳಾಡುವಂತೆ ಮಾಡಿದ ಕೀರ್ತಿ ಖಂಡಿತ ನಾರದ ಮಹರ್ಷಿಗಳಿಗೆ ಸೇರಬೇಕು.. ಅಜಾತಶತ್ರುವಿನಂತೆ ತನ್ನ ತಂದೆ ಬ್ರಹ್ಮನ ಪ್ರತಿ ಸೃಷ್ಟಿಯನ್ನೂ , ದೇವ ದಾನವರರನ್ನೂ ಮಾತಾಡಿಸಿ, ಯೋಗಕ್ಷೇಮವನ್ನು ನೋಡಿಕೊಳ್ಳುತ್ತಿದ್ದ ಉಲ್ಟಾ ಪ್ರಜಾಪಾಲಕ ಎನ್ನಬಹುದು.   ಲೋಕಕಲ್ಯಾಣ ಕಾರ್ಯ, ದುಷ್ಟ ಶಿಕ್ಷಣೆ ಶಿಷ್ಟ ರಕ್ಷಣೆ, ಅಹಂ ಇಳಿಸುವುದು, ದರ್ಪ, ಕ್ರೂರತೆ ಇವುಗಳಿಗೆ ಮಂಗಳ ಹಾಡುವುದು ಇವರ ಮುಖ್ಯ ಕಾರ್ಯಾಚರಣೆ ಅನಿಸುತ್ತದೆ. 


ಹೀಗೆ ಒಮ್ಮೆ ಶಿವ ಶಿವೆಯ ಜೊತೆ ಮಾತಾಡುತ್ತಾ, ಪಾರ್ವತಿಗೆ ಕ್ರೋಧ ಹುಟ್ಟಿಸುವ ನಾರದರಿಗೆ ಮೂಲ ಬಾಣ ವಿಶ್ವಾಮಿತ್ರನ ಅಹಂ ಇಳಿಸುವುದು ಮತ್ತು ಭಕ್ತಿ ಶಕ್ತಿಗಳಲ್ಲಿ ಭಕ್ತಿಯೇ ಗೆಲ್ಲುವುದು ಎಂದು ಲೋಕಕ್ಕೆ ಮನವರಿಕೆ ಮಾಡಿಕೊಡುವುದು ಇದೆ ಈ ಚಿತ್ರದ ಮೂಲ ಹೂರಣ. 

ಶಿವೆಗೆ ಭಕ್ತಿ ಶಕ್ತಿಯ ಬಲಾಬಲಗಳನ್ನು ನಿದರ್ಶನ ಮಾಡಿಸಬೇಕೆಂದು ವಿಶ್ವಾಮಿತ್ರನ ಅಹಂ ಅನ್ನು ಉಪಯೋಗಿಸಿಕೊಳ್ಳುತ್ತಾರೆ ನಾರದರು. ಮಾಯೆ ಸೃಷ್ಟಿಸಿ ಕಾಡುಪ್ರಾಣಿಗಳ ಉಪಟಳ ಹೆಚ್ಚಿಸಿ, ಕಾಡುಪ್ರಾಣಿಗಳ ಉಪಟಳವನ್ನು ನಿವಾರಿಸುವ ಸಲುವಾಗಿ ಕಾಡಿಗೆ ಬರುವ ಚಂದ್ರಭಾನು ಮಹಾರಾಜನಿಗೆ ಮಾಯೆ ಮುಸುಕು ಹಾಕಿ, ವಿಶ್ವಾಮಿತ್ರನ ಆಶ್ರಮದಲ್ಲಿ ನೆಡೆಸುತ್ತಿರುವ ಯಜ್ಞಕ್ಕೆ ಭಂಗ ಬರುವಂತೆ, ಒಂದು ಜಿಂಕೆ ಕಾಡುಪ್ರಾಣಿಗೆ ಹೆದರಿ ಯಜ್ಞಕುಂಡಕ್ಕೆ ಬೀಳುವಂತೆ ಮಾಡಿ, ವಿಶ್ವಾಮಿತ್ರನ ಕೋಪಕ್ಕೆ ಚಂದ್ರುಭಾನು ಮಹಾರಾಜಾ ಗುರಿಯಾಗುವಂತೆ ಮಾಡುತ್ತಾನೆ. ಅಲ್ಲಿಂದ ಮುಂದೆ ಶ್ರೀರಾಮನ ಬಳಿ ವಿಶ್ವಾಮಿತ್ರ ಹೋಗಿ, ಯಜ್ಞಭಂಗ ಮಾಡಿದ ದ್ರೋಹಿಗೆ ಮರಣದಂಡನೆ ಕೊಡುವಂತೆ ಪ್ರೇರೇಪಿಸುವ ವಿಶ್ವಾಮಿತ್ರ, ತನ್ನ ಕೋಪದ ಅಗ್ನಿಯಲ್ಲಿ ಬೇಯುತ್ತಾರೆ.. 

ಇದನ್ನು ಅರಿತ ಚಂದ್ರುಭಾನು ಮಹಾರಾಜ ಹೆದರಿ ಶ್ರೀರಾಮನಿಗೆ ಶರಣಾಗತಿಯಾಗುವಂತೆ ಹೊರಟಾಗ, ಮತ್ತೆ ಮಾಯೆಯ ಮುಸುಕು, ಆತನನ್ನು ಹನುಮಂತನ ಆಶ್ರಮಕ್ಕೆ ಬಳಿಗೆ ಬರುವಂತೆ ಮಾಡುತ್ತಾರೆ ನಾರದರು.  ಮಹಾರಾಜನನ್ನು ಕಂಡು ಉಪಚರಿಸುವ ಅಂಜನಾದೇವಿ, ಆತನಿಗೆ ಅಭಯದ ಅನುಗ್ರಹ ನೀಡುತ್ತಾಳೆ, ತಾಯಿಯ ಮಾತಿನಂತೆ ಹನುಮಂತ ಮಹಾರಾಜನನ್ನು ರಕ್ಷಿಸುವಂತೆ ಪ್ರತಿಜ್ಞೆ ಮಾಡುತ್ತಾನೆ. ಆದರೆ ನಂತರ ಶ್ರೀರಾಮನ ಕೋಪದ ಮಾತುಗಳನ್ನು ಅರಿತ ಹನುಮಂತ, ಶ್ರೀರಾಮನ ಬಳಿ ಕ್ಷಮೆ ಕೇಳಿದರು, ಕೊಟ್ಟ ಮಾತಿನಂತೆ ನೆಡೆದುಕೊಳ್ಳಬೇಕು ಎಂದು ಹನುಮನ ಮೇಲೆ ಯುದ್ಧ ಸಾರುತ್ತಾನೆ. ಇದೆ ಶ್ರೀ ರಾಮಾಂಜನೇಯ ಯುದ್ಧ.  

. ಕಡೆಗೆ ರಾಮಬಾಣ ಲೋಕವನ್ನೇ ದಹಿಸಲು ಹೊರಟು ಕಡೆಗೆ ವಿಶ್ವಾಮಿತ್ರನನ್ನು ಹಿಂಬಾಲಿಸಿದಾಗ, ಅನ್ಯತಾ ಶರಣಂ ನಾಸ್ತಿ ಎಂದು ಶ್ರೀ ರಾಮನ ಭಕ್ತ ಹನುಮನಿಗೆ ಮೊರೆ ಹೋಗುತ್ತಾನೆ. 

ಶ್ರೀರಾಮನ ಪಟ್ಟಾಭಿಷೇಕವಾದ ಮೇಲೆ, ಹನುಮನ ತಾಯಿ ಅಂಜನಾದೇವಿಯ ಬೇಡಿಕೆಯಂತೆ ಆಕೆಯ ಪುತ್ರ ಹನುಮಂತನನ್ನು ತಾಯಿಯ ಬಳಿಗೆ ಹೋಗಬೇಕು ಇದು ರಾಮನ ಆಜ್ಞೆ ಎಂದು ಹನುಮಂತನ ರಾಮನ ಪದತಲದಲ್ಲಿಯೇ ಇರಬೇಕು ಎಂಬ ಹಂಬಲವನ್ನು ಒಲ್ಲದ ಮನಸ್ಸಿನಿಂದ ತಳ್ಳಿ ಹಾಕುತ್ತಾನೆ. ಶ್ರೀ ರಾಮನ ಬಂಧು ಚಂದ್ರುಭಾನು ಮಹಾರಾಜನು ಹೊರಟಾಗ, ಶ್ರೀ ರಾಮನ ಚಡಪಡಿಕೆಯನ್ನು ರಾಜುಕುಮಾರ್ ಅದ್ಭುತವಾಗಿ ಅಭಿನಯಿಸಿದ್ದಾರೆ.  

ಶ್ರೀ ರಾಮನ ಶಾಂತ ಗುಣ, ನಗುಮೊಗ, ಚಿಂತೆಯ ಮ್ಲಾನವಾದನ, ಸಮಸ್ಯೆಯಿದ್ದಾಗೂ ಅದನ್ನು ಎದುರಿಸುವಲ್ಲಿ ತೋರುವ ಅವರ ಅಭಿನಯ ಅದ್ಭುತ.  ಚಿತ್ರ ಪರದೆಯ ಆರಂಭದಲ್ಲಿ ಶ್ರೀ ರಾಮನಾಗಿ ಇದು ರಾಜಕುಮಾರ್ ಅವರ ಮೊದಲ ಚಿತ್ರ ಎಂದೂ, ಜೊತೆಗೆ ಇದು ಅವರ ಅಭಿನಯದ ಐವತ್ತನೆಯ ಚಿತ್ರ ಎಂದು ತೋರಿಸಿದ್ದಾರೆ. ಅದರ ಪ್ರಕಾರ ಇದು ಅವರ ಐವತ್ತನೆಯ ಚಿತ್ರ. ಅದ್ಭುತ ಸಾಧನೆಯಿದು. 

ಚಿತ್ರಗಳೇ ಕೆಲವು ತಯಾರಾಗುತ್ತಿದ್ದ ಕಾಲಘಟ್ಟದಲ್ಲಿ ಸುಮಾರು ಹತ್ತು ವರ್ಷಗಳಲ್ಲಿ ಐವತ್ತು ಚಿತ್ರಗಳನ್ನು ಪೂರೈಸುವುದು ಅದ್ಭುತ ಸಾಧನೆಯೇ ಹೌದು. 

ರಾಜಕುಮಾರ್ ಅವರ ಅಭಿನಯ ಈ ಚಿತ್ರದ ಹೈಲೈಟ್ ಆದರೂ, ರಾಜ್ ಅಭಿನಯವನ್ನು ಮೀರಿಸುವಂತೆ ನಿಂತದ್ದು ಹನುಮಂತನಾಗಿ ಉದಯಕುಮಾರ್. ಆ ಮುಖವಾಡ ಇದ್ದರೂ ಕಣ್ಣಿನಲ್ಲಿಯೇ ಅಭಿನಯ ತೋರುವ, ಸಂಭಾಷಣೆಯನ್ನು ಹೇಳುವಾಗ ಭಾವತೀವ್ರತೆ, ಸಂಭಾಷಣಾ ವೈಖರಿ ಎಲ್ಲವೂ ಅದ್ಭುತವಾಗಿ ಮೂಡಿ ಬಂದಿದೆ. ರಾಜ್ ಅವರ ಸರಿಸಮಾನವಾಗಿ ಉದಯ್ ಅವರ ಅಭಿನಯ ಮೂಡಿಬಂದಿದೆ. 

ಕುಪಿತ ವಿಶ್ವಾಮಿತ್ರನ ಪಾತ್ರಧಾರಿ ಆ ಕಾಲಘಟ್ಟದ ಮುಖ್ಯ ಖಳನಟ ಡಿಕ್ಕಿ ಮಾಧವರಾವ್ ಅವರ ನಟನೆ ವಾಹ್ ಎನಿಸುತ್ತದೆ. 

ಪುಟ್ಟ ಪಾತ್ರದಲ್ಲಿ ವಸಿಷ್ಠನ ಪಾತ್ರದಲ್ಲಿ ಹೆಚ್ ರಾಮಚಂದ್ರಶಾಸ್ತ್ರಿ ಮನಸೆಳೆಯುತ್ತಾರೆ. 

ನಾರದರ ಪಾತ್ರದಲ್ಲಿ ಅಶ್ವಥ್ ಕನ್ನಡ ಚಿತ್ರರಂಗದಲ್ಲಿ ನಾರದರ ಪಾತ್ರವನ್ನು ಇವರಷ್ಟು ಅಚ್ಚುಕಟ್ಟಾಗಿ ನಿಭಾಯಿಸುವವರು ಇವರೊಬ್ಬರೇ. 

ಉಳಿದ ಪ್ರಮುಖ ಪಾತ್ರದಲ್ಲಿ ಸೀತಾದೇವಿಯಾಗಿ ಆದವಾನಿ ಲಕ್ಷ್ಮೀದೇವಿ, ಚಂದ್ರಭಾನುವಿನ ಮಡದಿಯಾಗಿ ಪಂಡರೀಬಾಯಿ, ಪಾರ್ವತಿಯಾಗಿ ಜಯಂತಿ ಅಭಿನಯಿಸಿದ್ದಾರೆ. ಮುದ್ದಾದ ಮಕ್ಕಳು. 

ಅಮೃತಕಾಲ ಪ್ರೊಡಕ್ಷನ್ಸ್ ಲಾಂಛನದಲ್ಲಿ ತಯಾರಾದ ಚಿತ್ರವಿದು. ಎಂ ಎನ್ ನಾಯಕ್ ನಿರ್ದೇಶನ. 

ಸಂಗೀತ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ ಸತ್ಯಂ. 

ಛಾಯಾಗ್ರಹಣ ವಿ ವೆಂಕಟ್ ಅವರದ್ದು. 

ಸಂಭಾಷಣೆ ಗೀತೆಗಳು ಗೀತಪ್ರಿಯ ಅವರದ್ದು. 

ಘಂಟಸಾಲ, ಪಿಬಿಶ್ರೀನಿವಾಸ್, ಎಸ್ ಜಾನಕೀ, ಬಿ ಆರ್ ಲತಾ, ವಸಂತ, ಮಾಡಿಪೆದ್ದಿ ಸತ್ಯಂ ಇವರುಗಳು ಗಾಯನದ ಖಾತೆಯನ್ನು ನೋಡಿಕೊಂಡಿದ್ದಾರೆ. 

















ಕಲಾವಿದರ ತುಂಬು ಕುಟುಂಬದ ಈ ಚಿತ್ರದಲ್ಲಿ ರಾಜಕುಮಾರ್, ಆದವಾನಿ ಲಕ್ಷ್ಮೀದೇವಿ, ಡಿಕ್ಕಿ ಮಾಧವರಾವ್, ಕೆ ಎಸ್ ಅಶ್ವಥ್, ಬಿ ರಾಘವೇಂದ್ರ ರಾವ್, ಪಂಡರಿಬಾಯಿ, ಜಯಂತಿ, ಮುದ್ದಾದ ಮಕ್ಕಳು ಅಮೃತಕಲಾ, ಬೇಬಿ ಪದ್ಮಿನಿ ಅಭಿನಯಿಸದ್ದಾರೆ. 

Friday, December 22, 2023

ಎಲ್ಲಾ ಶಿವನ ದಯೆ .. ಶಿವರಾತ್ರಿ ಮಹಾತ್ಮೆ (1964 (ಅಣ್ಣಾವ್ರ ಚಿತ್ರ ೪೯/೨೦೭)

ಕಂಬದ ಮೇಲಿನ ದೀಪ ಸ್ವಲ್ಪ ಅಲುಗಾಡಿದರೂ ಕತ್ತಲೆಯೇ ಮತ್ತೆ.. 


ಮಕ್ಕಳಿಲ್ಲದ ರಾಜಮನೆತನ.. ರಾಜ ರಾಣಿ ಗುರುವಿನ ಆಜ್ಞೆಯ ಮೂಲಕ ತಪಸ್ಸು ಆಚರಿಸಲು ಆಶ್ರಮಕ್ಕೆ ಹೋಗುತ್ತಾರೆ.. ರಾಜನು ನಿರ್ಮಲ ಮನಸ್ಸಿನಿಂದ ತಪಸ್ಸಿಗೆ ಕೂತರೆ, ರಾಣಿಯು ಆಶ್ರಮದಲ್ಲಿ ಇದ್ದುಕೊಂಡು ಆಶ್ರಮದ ಕೆಲಸ ಕಾರ್ಯಗಳಿಗೆ ನೆರವಾಗುತ್ತಾರೆ. 

ಆದರೆ ಶಿವನ ಮಾಯೆ ಕಂಡವರಾರು.. ಭಕ್ತನನ್ನು ಪರೀಕ್ಷಿಸಲು ಮಾಯೆಯನ್ನು ಸೃಷ್ಟಿಸಿದಾಗ, ಆ ಮಾಯಾಜಾಲಕ್ಕೆ ಸಿಲುಕಿ ತಪೋನಿರತನ ಮನಸ್ಸು ಚಂಚಲವಾಗುತ್ತದೆ.. ಆದರೆ ಅದು ಮಾಯೆ ಎಂದು ಅರಿವಾಗುವ ಹೊತ್ತಿಗೆ ಕಾಲ ಮಿಂಚಿರುತ್ತದೆ.. ಪುತ್ರ ಸಂತಾನವಾದರೂ ಆ ಮಗು ಬೆಳದಂತೆ ದೇವರಲ್ಲಿ ಭಯವಿಲ್ಲ, ದುಷ್ಟನಾಗುತ್ತಾನೆಮ್ ಚಟಗಳಿಗೆ ದಾಸನಾಗುತ್ತಾನೆ ಎಂದು ಶಿವನ ಆಶೀರ್ವಚನ ಹೇಳಿದರೂ, ಕೂಡ ಪುತ್ರ ಮಮತೆ ರಾಜ ರಾಣಿ ಸಂತಾನ ಭಾಗ್ಯಕ್ಕೆ ಒಳಗಾಗುತ್ತಾರೆ. 

ಮಕ್ಕಳಿಲ್ಲದ ರಾಣಿ ಬಹುಕಾಲದ ನಂತರ ಜನಿಸಿದ ಮಗುವನ್ನು ಅಪಾರವಾಗಿ ಪ್ರೀತಿಸಿ, ಮುದ್ದಿಸಿ ಬೆಳಸಿದ ಪರಿಣಾಮ ಮಗ ದಾರಿತಪ್ಪಿದ ಮಗನಾಗುತ್ತಾನೆ.. ಹಿರಿಕಿರಿಯರೆಂಬ ಗೌರವವಿಲ್ಲದೆ, ಕುತಂತ್ರಿ ಸೇನಾಪತಿಯ ಮಗನ ಸಂಗಡ ಸೇರಿಕೊಂಡು ಚಟಕ್ಕೆ ದಾಸನಾಗುತ್ತಾನೆ.. 

ಮದುವೆಯಾದರೆ ಸರಿಹೋಗಬಹುದು ಎಂಬ ಮಾಮೂಲಿ ಕಾರಣಗಳಿಂದ ಸರಿಯಾಗಬಹುದು ಎಂಬ ನಂಬಿಕೆ ರಾಜರಾಣಿಯರಿಗೆ ಹುಸಿಯಾಗುತ್ತದೆ.. ಮಾಯೆಗೆ ಮುಸುಕಿಗೆ ಮನಸೋತ್ತಿದ್ದರ ಪರಿಣಾಮ ಮಗ ದಾರಿ ಬಿಟ್ಟಾಗಿರುತ್ತದೆ. ತಂದೆ ತಾಯಿಯರನ್ನು ಛೀಮಾರಿ ಹಾಕಿ ರಾಜ್ಯವನ್ನು ತನ್ನ ವಶಕ್ಕೆ ತೆಗೆದುಕೊಂಡು, ಅವರನ್ನು ಅರಮನೆಯ ಕೋಣೆಯಲ್ಲಿಯೇ ಸೆರೆಯಾಗಿಸುತ್ತಾನೆ. ಇತ್ತ ತನ್ನ ಮಡದಿ ಏನೇ ಹೇಳಿದರೂ ಏನೇ ಮಾಡಿದರೂ ಅದರಲ್ಲಿ ತಪ್ಪು ಕಂಡುಹಿಡಿಯುತ್ತಾ ಕಡೆಗೆ ಆಕೆಯೂ ಕೂಡ ಅರಮನೆ ಬಿಡುವಂತೆ ಮಾಡುತ್ತಾನೆ.. 

ಇತ್ತ ರಾಜನರ್ತಕಿಯ ಜೊತೆ ಸೇರಿಕೊಂಡು, ಸೇನಾನಿಯ ಮಗ ಷಡ್ಯಂತ್ರ ರಚಿಸಿ, ರಾಜ್ಯ ಕಬಳಿಸಲು ಉಪಾಯಮಾಡಿದಾಗ,  ಅದು ಶಿವನ ಆಶೀರ್ವಾದದಿಂದ ನೆರವೇರದೆ ಕಡೆಗೆ ತನ್ನ ತಪ್ಪನ್ನು ಒಪ್ಪಿಕೊಂಡು, ಮತ್ತೆ ಶಿವನ ಭಕ್ತನ ಸ್ಥಾನಕ್ಕೆ ಬಂದು ನಿಲ್ಲುತ್ತಾನೆ.. 

ಈ ಪುಟ್ಟ ಕಥೆಯನ್ನು ಮಾರ್ಮಿಕವಾಗಿ ಚಿತ್ರಿಸಿ, ಕಥಾನಕವನ್ನು ಎಲ್ಲೂ ಬೋರ್ ಹೊಡೆಸದೆ ಚಿತ್ರಮಾಡಿದ ಕೀರ್ತಿ ಪಿ ಆರ್ ಕೌಂಡಿಣ್ಯ ಅವರದ್ದು. ಇದೊಂದು ರೀತಿ ಕೌಂಡಿಣ್ಯಮಯ ಸಿನಿಮಾ ಅನ್ನಬಹದು, 

ನಿರ್ದೇಶನ ಕೌಂಡಿಣ್ಯ ಅವರದ್ದು, ಕಥೆ ಚಿತ್ರಕಥೆಯನ್ನು ಚಿ ಸದಾಶಿವಯ್ಯನವರ ಜೊತೆ, ನಿರ್ಮಾಣವನ್ನು ಎಸ್ ಎಸ್ ರಾಜು ಅವರ ಜೊತೆ ಸೇರಿ ದುಡಿದಿದ್ದಾರೆ. ಸಂಭಾಷಣೆ - ಹಾಡುಗಳನ್ನು ಅಪ್ಪಮಗ ಜೋಡಿ ಚಿ ಸದಾಶಿವಯ್ಯ, ಹಾಗೂ ಚಿ ಉದಯಶಂಕರ್ ರಚಿಸಿದ್ದಾರೆ, ಮಾಧುರ್ ಅವರ ಛಾಯಾಗ್ರಹಣ, ಶಿವಪ್ರಸಾದ್ ಅವರ ಸಂಗೀತ .. ಹಾಡುಗಳನ್ನು ಪಿ ಬಿ ಶ್ರೀನಿವಾಸ್, ನಾಗೇಂದ್ರ, ಮಾಧವಪೆದ್ದಿ ಸತ್ಯಂ, ಎಸ್ ಜಾನಕಿ ಹಾಗೂ ಸ್ವರ್ಣಲತಾ ಹಾಡಿದ್ದಾರೆ. 

ಈ ಚಿತ್ರದ ನಾಯಕ ಅಥವ ಖಳನಾಯಕ ಅನ್ನಬೇಕೋ ಗೊಂದಲವಾಗುತ್ತದೆ. ಕಾರಣ ಆ ಪಾತ್ರಕ್ಕೆ ಬೇಕಾದ ಅಭಿನಯ ಹಾಗಿದೆ. ಹಿರಿಯರನ್ನು, ಗುರುಗಳನ್ನು, ತಂದೆ ತಾಯಿಯರನ್ನು ಏಕವಚನದಲ್ಲಿ ಮಾತಾಡುತ್ತ, ಗೌರವ ತೋರದೆ, ದೇವರ ಭಯ ಇಲ್ಲದೆ, ಗುಡಿಯ ಅರ್ಚಕರನ್ನು ಹೀನ ಮಾನವಾಗಿ ಬಯ್ಯುವ ನಾಯಕ, ಮದುವೆಮಾಡಿಕೊಂಡ ಪತ್ನಿಯನ್ನು ಕಣ್ಣೀರಿನ ಕಡಲಲ್ಲಿ ಕೈತೊಳೆಸುತ್ತಾ, ರಾಜನರ್ತಕಿಯ ಸಹವಾಸ, ಮದಿರಾ ಪಾನ, ಮತ್ತಲ್ಲಿಯೇ ಬಯ್ಯುವುದು ಈ ರೀತಿಯ ಪಾತ್ರಗಳಲ್ಲಿ ರಾಜಕುಮಾರ್ ಅವರನ್ನು ಕಾಣೋದು ಬಹಳ ಬಹಳ ಅಪರೂಪ ಆ ರೀತಿಯ ಒಂದು ಪಾತ್ರ ಕರುಣೆಯೇ ಕುಟುಂಬದ ಕಣ್ಣು ಚಿತ್ರದಲ್ಲಿತ್ತು.. ಅದೇ ಹಾದಿಯ ಒಂದು ಪಾತ್ರವಿದು. ಅಬ್ಬಬ್ಬಾ ಇವರೇನಾ ಹಿಂದಿನ ಚಿತ್ರಗಳಲಲ್ಲಿ ಮಿಂದು ಬಂದು ಗೆದ್ದವರು ಎನ್ನುವ ಹಾಗೆ ಇದೆ ಅವರ ಅಭಿನಯ. ಹಾವ ಭಾವ, ಅಭಿನಯ, ಆ ಕ್ರೂರತೆ, ಕಡೆಗೆ ಎಲ್ಲವನ್ನೂ ಕಳೆದುಕೊಂಡು ಸ್ವಾಧೀನ ಕಳೆದುಕೊಂಡು ಹೆಳವನ ರೀತಿಯಲ್ಲಿಯೇ ಶಿವಪೂಜೆ ಮಾಡಿ, ಶಿವನ ಕೃಪೆಗೆ ಕಾರಣವಾಗಿ ಮತ್ತೆ ಮರಳಿ ರೂಪಕ್ಕೆ ಬಂದು, ತನ್ನ ರಾಜ್ಯವನ್ನು ದುಷ್ಟ ಸೇನಾಧಿಪತಿಯಿಂದ ಕೈಯಿಂದ ಬಿಡಿಸಿಕೊಂಡು ನಿಲ್ಲುವ ಪಾತ್ರದಲ್ಲಿ ಅಕ್ಷರಶಃ ಪರಕಾಯ ಪ್ರವೇಶವೇ.. ನಾಯಕನ ವಿರುದ್ಧ ಮನಸ್ಥಿತಿಯ ಪಾತ್ರವಾದರೂ ಅದನ್ನು ಒಪ್ಪಿಕೊಂಡು ಲೀಲಾಜಾಲವಾಗಿ ಅಭಿನಯಿಸಿದ ಪರಿಗೆ ಶಭಾಹ್ ಎನ್ನಲೇ ಬೇಕು. ಕಲಾವಿದ ಪಾತ್ರದ ಬಂಧಿಯಾಗಿರಬೇಕು ಎನ್ನುವ ಮಾತು ನಿಜವಾಗುತ್ತದೆ. 

ಉಳಿದಂತೆ ಅಶ್ವಥ್, ಜಯಶ್ರೀ ಅಭಿನಯ ಸಮಪರ್ಕವಾಗಿದೆ. ಇವರ ಸೊಸೆಯ ಪಾತ್ರದಲ್ಲಿ ನಾಯಕನ ಜೊತೆಗಿಂತ, ರಾಜರಾಣಿಯರ ಜೊತೆಯೇ ಅಧಿಕ ದೃಶ್ಯವಿರುವ ಪಾತ್ರದಲ್ಲಿ ಲೀಲಾವತಿ ಮಿಂಚುತ್ತಾರೆ. 
ಚಿತ್ರದ ಓಘಕ್ಕೆ ಹಾಸ್ಯವಿರಲಿ ಎನ್ನುವಂತೆ ನರಸಿಂಹರಾಜು ಅವರ ಪಾತ್ರ ಪೋಷಣೆ ಮತ್ತು ಕಥಾವಿಸ್ತರಣೆ ಸೊಗಸಾಗಿದೆ. 

ಹಿಂದಿನ ಚಿತ್ರ ಚಂದವಳ್ಳಿ ತೋಟ ಚಿತ್ರದಲ್ಲಿ ಅಣು ಅಣುವಾಗಿ ಕಾಡಿದ ಮನೆಮುರುಕ ಪಾತ್ರದ ಅಶ್ವಥ್ ನಾರಾಯಣ ಈ ಚಿತ್ರದಲ್ಲಿ ಅರಮನೆಯನ್ನು ರಕ್ಷಿಸುವ ಒಂದು ಪುಟ್ಟ ಪಾತ್ರದಲ್ಲಿ

 ಆರಂಭದಲ್ಲಿ ಬ್ರಹ್ಮ ವಿಷ್ಣುವಿನ ಯುದ್ಧ ಮನೆಸೆಳೆಯುತ್ತದೆ. 



ಸಿನಿಮಾ ಹೆಸರು ತೋರಿಸುವಾಗ ರುದ್ರಾಭಿಷೇಕ ಮಾಡುತ್ತಾ ರುದ್ರವನ್ನು ಕೇಳುವುದೇ ಒಂದು ಖುಷಿ. ಹಾಡುಗಳು ಸಿನಿಮಾ ಕಥೆಗೆ ತಕ್ಕಂತೆ ಮೂಡಿಬಂದಿದೆ. 

ಸುಂದರ ಚಂದಿರ ರಾಜಕುಮಾರ್ 

ಒಂದು ಸರಳ ಕೆಥಾನಕ.. ಕಥೆಗೆ ಚ್ಯುತಿ ಬಾರದಂತೆ, ಕಥೆ ಎಲ್ಲಿಯೂ ಆ ಕಡೆ ಈ ಕಡೆ ಹೋಗದಂತೆ ನಿಭಾಯಿಸಿ ಉತ್ತಮ ನೋಡಿದ್ದರ ಸಮಾಧಾನ ಆಗುವಂತೆ ಚಿತ್ರವನ್ನು ಬಿಂಬಿಸಿದ್ದಾರೆ. 

ಅಶ್ವಥ್ ಜಯಶ್ರೀ ಜೋಡಿ 

 ಹಿಂದಿನ ಚಿತ್ರ ಚಂದಾವಲ್ಲಿ ತೋಟದಲ್ಲಿ ಕಾಡಿದ
 ಅಶ್ವಥ್ ನಾರಾಯಣ 

ಬ್ರಹ್ಮ ವಿಷ್ಣು ಮಹೇಶ್ವರ ಜೊತೆ ನಾರದ 

 ನಾಯಕಿ ಲೀಲಾವತಿ 

ಖಾಯಂ ಜೋಡಿ ರಾಜ್ ಮತ್ತು ರಾಜು 

ತೆಲುಗು ಚಿತ್ರನಟ ಶೋಭನ್ ಬಾಬು 

 

Sunday, December 10, 2023

ಚಂದವಳ್ಳಿ ಎನ್ನುವ ಅದ್ಭುತ ಕಥಾನಕಚಂದವಳ್ಳಿಯ ತೋಟ (1964 (ಅಣ್ಣಾವ್ರ ಚಿತ್ರ ೪೮/೨೦೭)

ಸಾಮಾನ್ಯ ನಾ ಸಿನಿಮಾ ನೋಡಿ  ಬರೆಯುವ ಶೈಲಿ ಸಿನಿಮಾ ನೋಡಿ ಅದರ ಉತ್ತಮ / ಮಹತ್ತರ  ತುಣುಕುಗಳ ದೃಶ್ಯಗಳ ಚಿತ್ರಗಳನ್ನು ಹಾಕಿ ಅದರ  ಬಗ್ಗೆ ಬರೆಯುತ್ತಾ ಹಾಗೆ ಚಿತ್ರದ ಹೂರಣವನ್ನು ಬರೆಯುವುದು. 

ಆದರೆ ಈ ಚಿತ್ರದಲ್ಲಿ  ಪ್ರತಿ ದೃಶ್ಯಗಳು, ಪ್ರತಿ ಸಂಭಾಷಣೆ, ಪ್ರತಿ ಮುಖಭಾವ ಮುಖ್ಯವೇ ಆಗಿದೆ. ಇಡೀ ಚಿತ್ರದ ಪ್ರತಿ ಕ್ಷಣದ ತುಣುಕು ಹಾಕಬೇಕು. 

ನಾಲ್ಕು ದಶಕಗಳ ಹಿಂದೆ ಈ ಚಿತ್ರವನ್ನು ಟಿವಿಯಲ್ಲಿ ನೋಡಿದಾಗ ಕರುಳು ಚುರ್ ಎಂದಿತ್ತು.. ನಂತರದ ಹಲವಾರು ವರ್ಷಗಳಲ್ಲಿ ಅನೇಕ ಬಾರಿ ಹಾಗೆ ನೋಡಿದ್ದೇನೆ ಜೊತೆಗೆ ನೋಡಲೇಬೇಕು ಎಂದು ಹಠವಿಡಿದು ನೋಡಿದ್ದು ಇದೆ



ಈ ಚಿತ್ರ ಚೆನ್ನಾಗಿದೆ ಎಂದರೆ ಮನುಜನ ಕ್ರೂರವರ್ತನೆ ಚೆನ್ನಾಗಿದೆ ಎಂದ ಹಾಗೆ.. ಚೆನ್ನಾಗಿಲ್ಲ ಎಂದರೆ ನಮ್ಮ ಪ್ರಪಂಚ ಚೆನ್ನಾಗಿದೆ ಎಂದು ಸುಳ್ಳು ಸುಳ್ಳೇ ನಂಬಿದಂತೆ. ಒಂದು ರೀತಿಯ ವಿಚಿತ್ರ ಸ್ಥಿತಿ. 










ಈ ಸಿನೆಮಾದ ಬಗ್ಗೆ ರಾಜಕುಮಾರ್ ಅವರೇ ನನ್ನೊಳಗೆ ಬಂದು ಹೇಳಿದ ಹಾಗೆ ಅನುಭವ ... ಕಣ್ತೆರೆದು ನೋಡು ಎನ್ನುವ ಚಿತ್ರದ ನಿಜವಾದ ನಾಯಕ ಬಾಲಕೃಷ್ಣ  ಅಂತ ಹೇಳಿದ್ದ ಹಾಗೆ ಈ ಚಿತ್ರ ಕೂಡ  ಪ್ರಮುಖ ಪಾತ್ರಧಾರಿ ಉದಯಕುಮಾರ್ ಅವರಿಗೆ ಸೇರಿದ್ದು. ನಂತರದ ಭಾಗ ಮನೆಮುರುಕುತನ ಗುಣದ ಪಾತ್ರಧಾರಿಗಳು ಬಾಲಕೃಷ್ಣ, ಅಶ್ವಥ್ ನಾರಾಯಣ್,  ಪಾಪಮ್ಮ, ಆದವಾನಿ ಲಕ್ಷ್ಮೀದೇವಿ ಮತ್ತು ಬಸವರಾಜ್. 

ಇವರುಗಳು  ಅಭಿನಯಸಿಲ್ಲ ಬದಲಿಗೆ ತಾವೇ ಪಾತ್ರವಾಗಿದ್ದಾರೆ. 

ಮೊದಲ ಬಾರಿಗೆ ಈ ಸಿನಿಮಾ ನೋಡಿದಾಗ ಒಂದೆರಡು ದಿನ ಅದೇ ಗುಂಗಿನಲ್ಲಿದ್ದೆ, ನಂತರ ಪ್ರತಿ ಸಾರಿ ಈ ಸಿನೆಮಾ ನೋಡಿದಾಗ ಆ ಗುಂಗಿನಲ್ಲಿ ಮೂರು ನಾಲ್ಕು ದಿನ ಇರುವುದು ರೂಢಿಯಾಗಿಬಿಟ್ಟಿದೆ. 

ಚಂದವಳ್ಳಿ ಒಂದು ಕುಗ್ರಾಮ ಬಿಸಿಲು ನಾಡಿನ ಒಂದು ಪುಟ್ಟ ಹಳ್ಳಿ.. ಆ ಊರಿನಲ್ಲಿ ಬಿರು ಬಿಸಿಲು ಬಿಟ್ಟರೆ ಬೇರೆ ಏನೂ ಇಲ್ಲ ಅನ್ನುವ ಊರದು. ಲೆಕ್ಕಪತ್ರ ಪರಿಶೋಧನೆ ಮಾಡಲು ಬರುವ ಸರ್ಕಾರಿ ಅಧಿಕಾರಿಯ ಕೊಂಕು ಕುಪಿತ ನುಡಿಗೆ ಊರಿನ ಪ್ರಮುಖನಾದ ಶಿವನಂಜೇಗೌಡ ಶಪಥ ಮಾಡಿ, ಊರಿನಲ್ಲಿ ಒಂದು ಎಳನೀರಿನ ತೆಂಗಿನ ತೋಟ ಮಾಡಬೇಕು ಎಂದು ನಿರ್ಧಾರ ಮಾಡುತ್ತಾರೆ. ಅವರ  ಕುಲಪುರೋಹಿತರು ಜಾತಕ ಪರಿಶೀಲಿಸಿ ತೋಟ ಗೌಡನ ನಕ್ಶತ್ರಕ್ಕೆ ಆಗಿ ಬರೋಲ್ಲ ಎಂದು  ಹೇಳಿದರೂ, ಅದಕ್ಕೆ ಕಿವಿಗೊಡದೆ, ನನ್ನ ಹೆಸರಿಗೆ  ಆಗೋಲ್ಲ ಎಂದರೆ, ತನ್ನ ಹಿತೈಷಿ ನಾರಣಪ್ಪನ ಹೆಸರಲ್ಲಿ ಮಾಡುವಂತೆ ಒಪ್ಪಿಸುತ್ತಾನೆ 

ಊರಿನ ಪುರೋಹಿತರು ತಮಗೆ ವಯಸ್ಸಾಗಿದೆ, ಕರೆದಾಗೆಲ್ಲ ಬರೋಕೆ  ಆಗದು ಎಂದಾಗ, ತಮ್ಮ ಶಿಷ್ಯನೊಬ್ಬನ ಸಂಸಾರವನ್ನು ಕಳಿಸಿಕೊಡುತ್ತಾನೆ, ಅಲ್ಲಿಂದ ಶುರು ಈ ಸಿನೆಮಾದ ನಿಜವಾದ ಕಥೆ ಶುರುವಾಗೋದು. ಆ ಕುಟಿಲ ಭಟ್ಟರ ಸಂಸಾರ ಊರಿನ ಇನ್ನೊಬ್ಬ ತರಲೆ ಕರಿಯಪ್ಪನ ಜೊತೆಗೂಡಿ ಶಿವನಂಜೇ ಗೌಡನ ಇಡೀ ಸಂಸಾರವನ್ನೇ ನಾಶ ಮಾಡುತ್ತಾರೆ.. ಅಂತಿಮವಾಗಿ ಕರಿಯಪ್ಪ, ಭಟ್ಟರು, ಅವನ ಹೆಂಡತಿ, ಮತ್ತು ಅವರಿಗೆ ಸಾತ್ ನೀಡಿದ ತಿಪ್ಪವ್ವ ಎಲ್ಲರಿಗೂ ಕಠಿಣ ಶಿಕ್ಷೆ ಕೊಡುತ್ತಾರೆ. ಇದಕ್ಕೂ ಮುನ್ನ ಸಹೋದರರು  ಪಾಲು ಎನ್ನುತ್ತಾ ಮನೆಯನ್ನು ಎರಡು ಭಾಗವಾದುದ್ದನ್ನು ಕಂಡು ಶಿವನಂಜೆ ಗೌಡನ ಹೆಂಡತಿ ಪುಟ್ಟತಾಯಿ  ಅಸು ನೀಗುತ್ತಾರೆ. ನಂತರ ಕುತಂತ್ರ ಮಾಡಿ ಶಿವನಂಜನ ಮೊದಲ  ಮಗ ಹನುಮನ ಪುಟ್ಟ ಮಗುವನ್ನು ವಿಷ ಹಾಕಿಸಿ ಸಾಯಿಸುತ್ತಾರೆ. ಅದರಿಂದ ಕ್ಷುದ್ರಗೊಂಡ ಹನುಮ ಕೋಪದ ಬರದಲ್ಲಿ ತನ್ನ ತಮ್ಮ ರಾಮನನ್ನು, ಹಾಗೂ ಆತನ ಮಡದಿ ಲಕ್ಷ್ಮಿಯನ್ನು ಕೊಂದದ್ದಕ್ಕೆ ಜೀವಾವಧಿ ಶಿಕ್ಷೆಗೆ ಗುರಿಯಾಗುತ್ತಾನೆ. ಅವನ ಮಡದಿ ಚೆನ್ನೈ ಈ ವಿಷಯ ಕೇಳಿ ಪ್ರಾಣ ಬಿಡುತ್ತಾಳೆ. ಹೀಗಾಗಿ ಶಿವನಂಜನ ಇಡೀ ಪರಿವಾರವೇ ನಾಶವಾಗುತ್ತದೆ. 

ಇಂದಿಗೂ ಬಾಲಣ್ಣ ಅವರ ಈ ಚಿತ್ರದಲ್ಲಿನ ಅಭಿನಯಕ್ಕೆ ಶಭಾಷ್ ಹೇಳಲೇ ಬೇಕು

"ಲೋ ಗೌಡ ನಿನ್ನ ಎಲ್ಲಿ ಬಿಡ್ತೀನಿ"

"ಭಟ್ರೇ ಏನೂ ನನ್ನ ಮಾತಿನಲ್ಲಿ ಹಾವು ಅಂದುಬಿಟ್ರಿ"

"ಭಟ್ರೇ ನಿಮಗೆ ಬದುಕು ಕೊಟ್ಟ ಗೌಡನಿಗೆ ನೀವು ನಿಯತ್ತಾಗಿಲ್ಲ ನಿಮ್ಮ ಸಹವಾಸಕ್ಕೆ ಒಂದು ಸಲಾಂ"

"ನನ್ನ  ತಂಟೆಗೆ ಬರದೇ ಇದ್ರೆ ಸಾಕು"

ಹೀಗೆ ನಗುನಗುತ್ತಾ ವಿಷ ಉಕ್ಕಿಸುವ ಮಾತುಗಳ ಅಭಿನಯ,  ಸದಾ ಬೀಡಿ ಸೇದುತ್ತಾ, ನಾಜೂಕಾಗಿ ಮಾತಾಡುವ, ರೀತಿಯ ಅಭಿನಯಕ್ಕೆ ಒಂದು ಸಲಾಂ

ಈ ಚಿತ್ರದ ಹೂರಣ "ನಿಮ್ಮ ಗಬ್ಬು ಗಲೀಜು ನೀರನ್ನು ನಮ್ಮ ಹಿತ್ತಲಿಗೆ ಬಿಡಬೇಕೆನ್ರಿ ಭಟ್ರೇ.. ಎನ್ನುತ್ತಾ ಕಡೆಗೆ ಭಟ್ಟರ ಕೆಟ್ಟ ಮನಸ್ಸಿನ ಯೋಜನೆಗಳಿಗೆ ದಾರಿ ಬಿಡುವ ದೃಶ್ಯವದು. 

ರಾಜಕುಮಾರ್ ಮೊದಲಾರ್ಧದಲ್ಲಿ "ನೀರ ಹೊತ್ತ ನೀರ ಜಾಣೆ" ಎನ್ನುವ ಹಾಡಲ್ಲಿ ಬಂದು ಹೋಗುವ, ಅವರು ಉತ್ತರಾರ್ಧದಲ್ಲಿ ಗಮನ ಸೆಳೆಯುವ ಅಭಿನಯ ನೀಡಿದ್ದಾರೆ. ಆ ಗುಂಗುರು ತಲೆಗೂದಲು, ಹಳ್ಳಿಯ ದಿರುಸು ಅದೇ ಮಟ್ಟದ ಸಂಭಾಷಣೆ, ಮನೆ ಭಾಗವಾಗುವಾಗ ತನ್ನ ಅಪ್ಪನ ಜೊತೆ ನಿಂತು ದುಃಖಪಡುವ ದೃಶ್ಯ, ಕಡೆಯಲ್ಲಿ ಕುಪಿತನಾಗಿ, ಮುಂದಿನ ಆಗುಹೋಗುಗಳ ಬಗ್ಗೆ ಯೋಚಿಸದೆ ತಮ್ಮ ಹಾಗೂ  ಹೆಂಡತಿಯ ಸಾವಿಗೆ ಕಾರಣನಾಗುವ ದೃಶ್ಯದ ರೌದ್ರಾವತಾರ ಶಭಾಷ್  ಎನಿಸುತ್ತದೆ. 

ಜಯಂತಿ ರಾಜಕುಮಾರ್ ಜೊತೆ ಅಭಿನಯದ ಮೊದಲ ಚಿತ್ರ.. ಆದರೆ ಹಳ್ಳಿಯ ನೆಲೆಯ ಪಾತ್ರದಲ್ಲಿ ಮಿಂಚುತ್ತಾರೆ . ಹದಬೆರೆತ ಅಭಿನಯ ರಾಘವೇಂದ್ರರಾವ್, ಶಾಂತಮ್ಮ, ಜಯಶ್ರೀ, ಲಕ್ಷ್ಮೀದೇವಿ, ಪಾಪಮ್ಮ, ಅಶ್ವಥ್ ನಾರಾಯಣ್, ಅವರದ್ದು, 

ನಿಜವಾಗಿಯೂ ಈ ಚಿತ್ರದ ಪ್ರಮುಖ ಕಂಬಗಳು ಉದಯಕುಮಾರ್ ಮತ್ತು ಬಾಲಕೃಷ್ಣ, 

ವಯೋಸಹಜ ಪಾತ್ರದಲ್ಲಿ ಉದಯಕುಮಾರ್ ಮೊದಲ ಭಾಗದಲ್ಲಿ ಅಚ್ಚುಕಟ್ಟಾಗಿ ಕಂಡರೆ, ವಯಸ್ಸಾದ ಪಾತ್ರದಲ್ಲಿ ಚಿತ್ರದುದ್ದಕ್ಕೂ ಗಮನಸೆಳೆಯುತ್ತಾರೆ. ಸಂಭಾಷಣೆ ಹೇಳುವ ವೈಖರಿ, ಆಂಗೀಕ ಅಭಿನಯ, ಮುಖದಲ್ಲಿ ತೋರುವ ಭಾವ.... ವಾಹ್ ಅದ್ಭುತ. ಅದರಲ್ಲೂ ತನ್ನ ಮೊಮ್ಮಗನನ್ನು ಕಂಡು ಮಾತಾಡುವ ಸಂಭಾಷಣೆ ಅದ್ಭುತ. 

ಬಾಲಣ್ಣ ಏನು ಹೇಳಲಿ, ಆ ವಯಸ್ಸಿಗೆ ಅನಿಸಿದ್ದು, ಸಿಕ್ಕರೆ  ಯಾಕೆ ಹೀಗೆ ಮಾಡಿದಿರಿ ಬಾಲಣ್ಣ, ಗೌಡರು ನಿಮ್ಮ ಜಮೀನು , ಮನೆ, ಖರ್ಚು ಎಲ್ಲಾ ಕೊಟ್ಟಮೇಲೂ ಅವರ ಮನೆಯ ವಿನಾಶಕ್ಕೆ ಆ ತರಲೆ ಭಟ್ಟರ ಮಾತುಗಳಿಗೆ ಬಲಿಯಾಗಿ ಗೌಡರ ಮನೆ  ಹಾಳು ಮಾಡಿಬಿಟ್ರಿ ಅಂತ ಕೇಳೋಣ ಅನ್ನುವಷ್ಟು  ಅಭಿನಯ. 

ಕೊನೆಯ ದೃಶ್ಯದಲ್ಲಿ ಹೇಳುವ "ಅಣ್ಣ ತಮ್ಮಂದಿರು ಒಂದಾಗಿದ್ದರೆ ಮನೆ ಒಂದಾಗಿರುತ್ತದೆ ಮನೆ ಮನೆ ಒಂದಾಗಿದ್ದರೆ ಊರು ಒಂದಾಗಿರುತ್ತದೆ.. ಊರು ಊರು ಒಂದಾಗಿದ್ದರೆ ನಾಡು ಒಂದಾಗಿರುತ್ತದೆ. ನಾಡು ಒಂದಾಗಿದ್ದರೆ  ಯಾವ ಶಕ್ತಿಯೂ  ನಮ್ಮನ್ನು ಗೆಲ್ಲೋಕೆ ಆಗೋದಿಲ್ಲ.. ಈಗ ಹೇಳ್ರಪ್ಪ ಪಾಲಾಗ್ತೀರಾ, ಹಾಳಾಗ್ತೀರಾ.. " ಎಷ್ಟು ಅದ್ಭುತ ವಾಕ್ಯಗಳು. 

ತರಾಸು ಅವರ ಅದೇ ಹೆಸರಿನ ಕಾದಂಬರಿಯನ್ನು  ತರಾಸು ಅವರಿಗೆ ಸಂಭಾಷಣೆಯ ಹೊಣೆಯನ್ನು ಕೊಟ್ಟು ಈ ಸಿನೆಮಾವನ್ನು ನಿರ್ದೇಶಿಸಿದ್ದು ಟಿ ವಿ ಸಿಂಗ್ ಠಾಕೂರ್. ಪಾಲ್ ಅಂಡ್ ಚಂದಾನಿ ನಿರ್ಮಾಣದಲ್ಲಿ ಮೂಡಿ ಬಂದ ಚಿತ್ರಕ್ಕೆ ಸಾಹಿತ್ಯ ತರಾಸು ಹಾಗೂ ಆರ್ ಎನ್ ಜಯಗೋಪಲ್ ಸಂಗೀತ ಟಿ  ಜಿ ಲಿಂಗಪ್ಪ.. ಛಾಯಾಗ್ರಹಣ ಬಿ ದೊರೈರಾಜ್. ಸಹನಿರ್ದೇಶನ ಎಸ್ ಕೆ ಭಗವಾನ್. 

ಹಾಡುಗಳೆಲ್ಲವೋ ಚಿತ್ರದ ಓಟಕ್ಕೆ ಬೇಕಾಗುವ ಹಾಗೆ ಮೂಡಿ ಬಂದಿದೆ. 

ಪಕ್ಕದ ಮನೆಯ ಮೋರಿ ನೀರು ನಮ್ಮ ಮನೆಯಲ್ಲಿ ಗಬ್ಬು ವಾಸನೆ ಬೀರುವ ಹಾಗೆ, ಇನ್ನೊಬ್ಬರ ಕಿಡಿ ಕುಟಿಲ ಮಾತುಗಳು ಮನೆಯನ್ನು ಮನಸ್ಸನ್ನು ಹಾಳು ಮಾಡುತ್ತದೆ.. ಅದರ ಕಡೆಗೆ ತಲೆಗೊಡದೆ ಬದುಕನ್ನು ನಿಭಾಯಿಸಬೇಕು .. ತೋಟದಲ್ಲಿ ಎಳನೀರಿನ ಸಸ್ಯ ಹಾಕಿದಾಗ ಅದಕ್ಕೆ ಕಳೆರೋಗ ಬಂದು ಹಾಳಾಗದಂತೆ ನೋಡಿಕೊಂಡಾಗ ಸಿಹಿ ನೀರು ನಮಗೆ ಇಲ್ಲವೇ ಕಳೆಯನ್ನು ಬೆಳೆಯಲು ಬಿಟ್ಟರೆ ಸಸ್ಯವೂ ಹಾಳು ತೋಟವೂ ಹಾಳು.. ಹಾಗೆಯೇ ಬದುಕು ಕೂಡ ಹಾಳು ಎನ್ನುವ  ಪಾಠ ಸಿಗುತ್ತದೆ... 

Friday, December 1, 2023

ಅಲ್ಲಿಂದ ಶುರುವಾಯಿತು, ಪುಟ್ಟಣ್ಣ ಅವರ ಚಿತ್ರಗಾಥೆ..

ಖುರ್ಚಿಗಳಿಗೆ ಬ್ರಾಂಡ್ ಇರುತ್ತೆ.. ಆದರೆ ಬ್ರಾಂಡ್ ಹೆಸರೇ ಖುರ್ಚಿಗೆ ತಂದುಕೊಟ್ಟದ್ದು ಇವರ ಹೆಗ್ಗಳಿಕೆ.. 

ಯಾರು ಅಂತ ಗೊತ್ತಾಯ್ತೆ.. ನಿರ್ದೇಶಕರ ಸ್ಥಾನಕ್ಕೆ ತಾರಾ ಮೌಲ್ಯ ತಂದು ಕೊಟ್ಟು.. ನಿರ್ದೇಶಕನೇ ಹಡಗಿಗೆ ಕಪ್ತಾನ ಎಂದು ಚಿತ್ರ ಜಗತ್ತಿಗೆ ಪರಿಚಯಿಸಿದ, ಸಾರಿ, ಸಾರಿ ಹೇಳಿದ ಧೀಮಂತ ನಿರ್ದೇಶಕ ಶ್ರೀ ಶ್ರೀ ಶ್ರೀ ಪುಟ್ಟಣ್ಣ ಕಣಗಾಲ್.. 

ರಂಗನಾಯಕಿ ಚಿತ್ರದಲ್ಲಿ ಒಂದು ಸಂಭಾಷಣೆ ಇದೆ.. ರಾಜಾನಂದ್ ಅಂಬರೀಷ್ ಪಾತ್ರಕ್ಕೆ ಹೇಳುವ ಮಾತು

"ನಿನ್ನಂತಹ ಕೋಟಿ ಕೋಟಿ ಕಲಾವಿದರು ಬರಬೇಕು ರಾಮಣ್ಣ.. ಕಲಾವಿದರಿಗೂ ಮರ್ಯಾದೆ ಇದೆ ಘನತೆ ಇದೆ ಎಂದು ಎದೆ ತಟ್ಟಿ ಹೇಳಬೇಕು ಕಣೋ.. "

ಈ ಸಂಭಾಷಣೆ ಹೇಳುವಾಗ ರಾಜಾನಂದ್ ಅವರ ಮುಖಾಭಿನಯ, ಆ ಗತ್ತು, ಆ ಸಂಭಾಷಣೆ ವೈಖರಿ ಅಬ್ಬಬ್ಬಾ.. 

ಹೌದು.. ಪುಟ್ಟಣ್ಣ ಕಣಗಾಲ್ ಅವರ ಚಿತ್ರಗಳು ನನ್ನ ಮನಸ್ಸನ್ನು ಸೂರೆಗೊಳ್ಳುಲು ಶುರುವಾಗುವ ಹೊತ್ತಿಗೆ ಜಗನ್ಮಾತೆಯ ಕರೆಗೆ ಓ ಗೊಟ್ಟು ಈ ಭುವಿಯಿಂದ ಗಂಧರ್ವ ಲೋಕಕ್ಕೆ ತೆರಳಿದ್ದರು. 


ಆದರೆ ಅವರ ಉಪಾಸನೆ, ಸಾಕ್ಷತ್ಕಾರ, ಪಡುವಾರ ಹಳ್ಳಿ ಪಾಂಡವರು, ಧರ್ಮಸೆರೆ ಈ ಚಿತ್ರಗಳು ನನ್ನ ಮೇಲೆ ನಿಧಾನವಾಗಿ ಆವರಿಸುತ್ತಿದ್ದ ಪುಟ್ಟಣ್ಣ ಕಣಗಾಲ್ ಅವರ ಜಾದೂ ಕಡಿಮೆಯಾಗದೆ ಹೆಚ್ಚುತ್ತಾ ಹೋಗಿತ್ತು. ಮೆಲ್ಲನೆ ಅವರ ನಿರ್ದೇಶನದ ಕನ್ನಡ ಚಿತ್ರಗಳನ್ನು ನೋಡುತ್ತಾ ಬಂದೆ.. ಕಾಲಕಾಲಕ್ಕೆ ತಂತ್ರಜ್ಞಾನ ಬದಲಾದ ಹಾಗೆ, ಕ್ಯಾಸೆಟ್, ಸಿಡಿ ಇವೆಲ್ಲಾ ಹೋಗಿ ಈಗ ಇಂದ್ರಜಾಲ ಎನ್ನುವಂತೆ ಜಾಲತಾಣ ಬಂದಿದ್ದು ನನಗೆ ಮತ್ತೊಮ್ಮೆ ಮಗುದೊಮ್ಮೆ ಅವರ ಚಿತ್ರಗಳನ್ನು ಬೇಕಾದ ಹಾಗೆ, ಬೇಕಾದಷ್ಟು ಬಾರಿ, ಕೆಲವು ಫ್ರೇಮುಗಳನ್ನು ಮತ್ತೆ ಮತ್ತೆ ನೋಡುವ ಅವಕಾಶ ಒದಗಿ ಬಂತು. . ಅದರ ಪರಿಣಾಮ ಅವರ ೨೪ ಕನ್ನಡ ಚಿತ್ರಗಳನ್ನು ನೋಡಿ, ಅದರಿಂದ ನಾ ಕಲಿತ ಸಂದೇಶಗಳು, ಆ ಚಿತ್ರಗಳ ಹೂರಣ, ಇವನ್ನೆಲ್ಲ ಬಿಡಿಸುತ್ತಾ ಹೋಗುವ, ಬರೆಯುತ್ತ ಹೋಗುವ ತುಡಿತ ಶುರುವಾಯಿತು. 

ಒಂದು ಶುಭಮಹೂರ್ತದಲ್ಲಿ ಶುರು ಮಾಡಿಯೇ ಬಿಟ್ಟೆ.. ಆದರೆ ಅದಕ್ಕೆ ಚಿಮ್ಮು ಹಲಗೆಯಾಗಿದ್ದು ಕಣಗಾಲ್ ಊರಿಗೆ ಹೋಗಿ ಪುಟ್ಟಣ್ಣ ಹುಟ್ಟಿ ಬೆಳೆದ ಊರನ್ನು, ಮನೆಯನ್ನು ಅವರು ಆಡಿ ಬೆಳೆದಿದ್ದ ಅಂಗಳದಲ್ಲಿ ಕೂತು ಕೆಲವು ಕ್ಷಣಗಳನ್ನು ಕಳೆದು ನಂತರ ಪುಟ್ಟಣ್ಣ ಅವರ ತಮ್ಮ ನರಸಿಂಹ ಶಾಸ್ತ್ರಿಗಳನ್ನು ರಾಮನಾಥಪುರದಲ್ಲಿ ಕಂಡು ಮಾತಾಡಿಸಿ, ಅವರು  ನಿರರ್ಗಳವಾಗಿ  ಒಂದು ಘಂಟೆಗೂ ಮಿಗಿಲಾಗಿ  "ಬೆಳ್ಳಿ ಮೋಡ" ಚಿತ್ರದ ಪೂರ್ವ ಸಿದ್ಧತಾ ಅನುಭವಗಳನ್ನು ಕೇಳಿದಾಗ ಮೈ ಜುಮ್ ಎಂದಿದ್ದು ಇಂದಿಗೂ ಹಸಿರಾಗಿದೆ. 






ಅಲ್ಲಿಂದ ಶುರುವಾಯಿತು, ಪುಟ್ಟಣ್ಣ ಅವರ ಚಿತ್ರಗಾಥೆ..  

ಫಲಿತಾಂಶ ನೋಡಲು ಸಿಗಲಿಲ್ಲ. ಕಾರಣ ಆ ಚಿತ್ರದ ರೀಲುಗಳು ಅಗ್ನಿ ಆಕಸ್ಮಿಕದಲ್ಲಿ ಭಸ್ಮವಾಯಿತು ಅಂತ ಸ್ವತಃ ಆ ಚಿತ್ರದ ನಾಯಕ ಜೈ ಜಗದೀಶ್ ಒಂದು ಸಂದರ್ಶನದಲ್ಲಿ ಹೇಳಿದ್ದು ಕೇಳಿದ ಮೇಲೆ, ಆ ಚಿತ್ರವನ್ನು ನೋಡುವ ಆಸೆ ಬಿಟ್ಟು ಬಿಟ್ಟೆ. ಹೌದು ಅದೇ ಚಿತ್ರವನ್ನು ತೆಲುಗಿಗೆ ನನ್ನು ಪ್ರೇಮಿಂಚು ಎಂಬ ಹೆಸರಿನಲ್ಲಿ ಡಬ್ ಮಾಡಿದ್ದಾರೆ ಅಂತ ತಿಳಿದಾಗ, ಆಗಲಿ ತೆಲುಗು ಭಾಷೆಯಲ್ಲಿ ನೋಡಿದರಾಯ್ತು ಅಂತ ಬಹಳ ಹುಡುಕಾಡಿದೆ.. ಆದರೆ ತೆಲುಗು ಚಿತ್ರವೂ ಕೂಡ ಸಿಗಲಿಲ್ಲ.. ನೋಡೋಣ ಪುಟ್ಟಣ್ಣ ಕಣಗಾಲ್ ಅವರ ಒಂದು ಅದ್ಭುತ ಚಿತ್ರರತ್ನ ನೋಡುವ ಅವಕಾಶ ಖಂಡಿತ ಸಿಗಬಹುದು ಎನ್ನುವ ಆಸೆಯಿದೆ.. ಅದು ನನಸಾದಾಗ ಅದರ ಬಗ್ಗೆ ಬರೆಯುತ್ತೇನೆ. 

ಇಂದು ಅವರ ಜನುಮದಿನ.. ಸುಮಾರು ೯೦ ವರ್ಷಗಳ ಹಿಂದೆ ಬೆಳಿಗ್ಗೆ ಹಕ್ಕಿ ಶಕುನ ಹೇಳುವ ಬುಡಬುಡಕಿಯವರು ಕಣಗಾಲ್ ಹಳ್ಳಿಯ ಒಂದು ಬೀದಿಯಲ್ಲಿ ಸಾಲು ಸಾಲು ಮನೆಯ ಹಾದಿಯಲ್ಲಿ ಬಂದು ಒಂದು ಮನೆಯ ಮುಂದೆ ಡಮರುಗ ಜೋರಾಗಿ ನುಡಿಸುತ್ತಾ ರಾಗವಾಗಿ 

"ಹಾಲಕ್ಕಿ ನುಡಿತೈತೆ ಹಾಲಕ್ಕಿ ನುಡಿತೈತೆ"

ಬೆಳ್ಳಿಮೋಡದ ಮೇಲೆ ಕಾಣುತೈತೆ ಆ ಮಲ್ಲಮ್ಮನ ಪವಾಡ ಕಾಣುತೈತೆ ...  ಕಪ್ಪು ಬಿಳುಪು ಮನಸ್ಸು.. ಆ ಮಹಾತಾಯಿಗೆ ನೃತ್ಯ ಮಾಡುತ್ತಾ ... ಗೆಜ್ಜೆ ಪೂಜೆ ಮಾಡಿದಾಗ ಆ ಕರುಳಿನ ಕರೆಗೆ ಮನಸೋತು ಗರ್ಭವೆನ್ನುವ ಶರಪಂಜರದಿಂದ ಹೊರಗೆ ಪ್ರತಿಭೆ ಸಾಕ್ಷಾತ್ಕಾರವಾಗಿ ಬರುತೈತೆ ... ಬೆಳಗಲೇ  ಬೇಕು ಎಂಬ ಛಲ ಹೊತ್ತ ಸುಯೋಧನನ ಹಾಗೆ ನಾಗರಹಾವು ಮೂಡಿಸುವ ಛಲದ ಯಶಸ್ಸಿನ ಶಿಖರವೂ ಎಡಕಲು ಗುಡ್ಡದ ಮೇಲೆ ಇರಲಿ ಅದರಿಂದ ಎದೆಗುಂದದೆ ಚಲನ ಚಿತ್ರ ಮಾಧ್ಯಮದ ಉಪಾಸನೆ ಮಾಡುತ್ತಾ ಹಲವಾರು ಕಥೆಗಳನ್ನು ಓದಿ ಕಥಾಸಂಗಮ ಮಾಡುತ್ತಾ ಒಂದು ಮಹೂರ್ತದಲ್ಲಿ ಶುಭಮಂಗಳ ಹಾಡುತ್ತಾ.. ನಾಯಕ ಸಿನೆಮಾ ಪರದೆಯ ಮೇಲೆ ನಾಯಕಿಯನ್ನು ಬಿಳಿ ಹೆಂಡ್ತಿಯನ್ನು ಪ್ರೀತಿಸುವಷ್ಟೇ ಚಿತ್ರಮಾಧ್ಯಮವನ್ನು ಪ್ರೀತಿಸುವ ಈ ಮಗುವಿನ ಭವಿಷ್ಯದ ಫಲಿತಾಂಶ ಕಾಲೇಜು ರಂಗದಲ್ಲಿ ನಿರ್ದೇಶನ ಎಂಬ ವಿಶ್ವವಿದ್ಯಾಲಯದಲ್ಲಿ ಅನೇಕಾನೇಕ  ನಿರ್ದೇಶಕರ ಮಧ್ಯೆ ಉಳಿದುಕೊಳ್ಳುವವರು ಪಡುವಾರಹಳ್ಳಿ ಪಾಂಡವರು ಎನ್ನುವಂತೆ, ಅದ್ಭುತ ನಿರ್ದೇಶಕರ ಮಧ್ಯೆ ತಾನು ಹೊಳೆಯುತ್ತಾನೆ.. ಧರ್ಮಸೆರೆ ಎಂಬ ಪ್ರತಿ ಸಂಸ್ಕಾರವನ್ನು ತನ್ನ ಚಿತ್ರಗಳಲ್ಲಿ ತೋರಿಸುತ್ತಾ ರಂಗನಾಯಕಿಯಂತೆ ಧ್ರುವತಾರೆಯಾಗಿ ಬೆಳಗಗುತ್ತಾ, ತನ್ನ ಮನಸ್ಸು ಮಾನಸ ಸರೋವರದಲ್ಲಿರುವಂತೆ ಪ್ರಶಾಂತತೆಯಿಂದ ಕೂಡಿರುತ್ತದೆ .. ಧರಣಿ ಮಂಡಲ ಮಧ್ಯದೊಳಗೆ ಇದ್ದರೂ ಕೂಡ ತನ್ನದೇ ಅಮೃತ ಘಳಿಗೆಗೆ ಕಾಯುತ್ತಾ ಜಗನ್ಮಾತೆ ಋಣಮುಕ್ತಳು ಆಗುವ ವರವನ್ನು ಕೊಡುವಂತೆ  ತನ್ನದೇ ಭಾವವನ್ನು ಹುಡುಕುತ್ತಾ ಮಸಣದ ಹೂವು ಆಗುವ ತನಕ ಸ್ವರ್ಗಕ್ಕೆ ಸಾವಿರ ಮೆಟ್ಟಿಲು ಇರುವವರೆಗೂ ಕರುನಾಡೇ ಏಕೆ, ಇಡೀ ಪ್ರಪಂಚದ ಚಿತ್ರ ಜಗತ್ತು ಈ ಮಗುವಿನ ಕಡೆಗೆ ತಿರುಗಿ ನೋಡುವಂತೆ ಬೆಳೆಯುತ್ತಾನೆ .. ಬೆಳಗುತ್ತಾನೆ.. ಈ ಮಗುವಿಗೆ ನೀವು ಏನೇ ನಾಮಕರಣ ಮಾಡಿ.. ಚಿತ್ರಜಗತ್ತಿನಲ್ಲಿ ಇವರನ್ನು ಗುರುತಿಸುವುದು "ನಮ್ಮ ಪುಟ್ಟಣ್ಣ" ಅಂತಾನೇ!!!

ಬೆಳ್ಳಿ ಮೋಡ (1966)
ಮಲ್ಲಮ್ಮನ ಪವಾಡ (1969)
ಕಪ್ಪು ಬಿಳುಪು (1969)
ಗೆಜ್ಜೆ ಪೂಜೆ (1969)
ಕರುಳಿನ ಕರೆ (1970)
ಶರಪಂಜರ (1971)
ಸಾಕ್ಷಾತ್ಕಾರ (1971)
ನಾಗರ ಹಾವು (1972)
ಎಡಕಲ್ಲು ಗುಡ್ಡ ಮೇಲೆ (1973)
ಉಪಾಸನೆ (1974)
ಶುಭಮಂಗಳ (1975)
ಕಥಾ ಸಂಗಮ (1975)
ಬಿಳಿ ಹೆಂಡ್ತಿ (1975)
ಫಲಿತಾಂಶ (1976)
ಕಾಲೇಜು ರಂಗ (1976)
ಪಡುವಾರಹಳ್ಳಿ ಪಾಂಡವರು (1978)
ಧರ್ಮಸೆರೆ (1979)
ರಂಗನಾಯಕಿ (1981)
ಮಾನಸ ಸರೋವರ (1982)
ಧರಣಿ ಮಂಡಲ ಮಧ್ಯದೊಳಗೆ (1983)
ಋಣ ಮುಕ್ತಳು (1984)
ಅಮೃತ ಘಳಿಗೆ (1984)
ಮಸಣದ ಹೂವು (1984)
ಸಾವಿರ ಮೆಟ್ಟಿಲು (2006) 

ಚಿತ್ರಜಗತ್ತಿನಲ್ಲಿ ಪುಟ್ಟಣ್ಣ ಎನ್ನುತ್ತಾ ದೊಡ್ಡಣ್ಣನ ಸಾಧನೆ ಮಾಡಿರುವ ನಮ್ಮೆಲ್ಲರ ನೆಚ್ಚಿನ ಶ್ರೀ ಪುಟ್ಟಣ್ಣ ಕಣಗಾಲ್ ಅವರಿಗೆ ಜನುಮದಿನ ಶುಭಾಶಯಗಳು.. 

ಪುಟ್ಟಣ್ಣ ಸರ್ ಎಲ್ಲೇ ಏರಿ ಹೇಗೆ ಇರಿ ಈ ಕರುನಾಡಿನ ಚಿತ್ರಜಗತ್ತನ್ನು ಹರಸುತ್ತಾ ಇರಿ!!!

Sunday, November 26, 2023

ಕೋತಿಯ ಹಾಗೆ ಕುಣಿಯುವ ಮನಸ್ಸಿಗೆ ಉತ್ತರ ನವಕೋಟಿ ನಾರಾಯಣ (1964) (ಅಣ್ಣಾವ್ರ ಚಿತ್ರ ೪೭/೨೦೭)

ರಾಜಕುಮಾರ್  ಅವರ ಜೊತೆ ಮಾತಾಡುತ್ತಿದ್ದೆ.. ನೀವು ಐವತ್ತು  ಚಿತ್ರಗಳ ಹತ್ತಿರ ಬರುತ್ತಿದ್ದೀರಾ. ನಿಮ್ಮ ಅಭಿನಯದ ಶಕ್ತಿ ಯಾವುದು.. ನಿಮಗಿಷ್ಟವಾಗುವ  ಪಾತ್ರಗಳು ಯಾವುವು. ?

ಇಷ್ಟವಾದವು ಅಂತ ಏನಿಲ್ಲ.. ಆದರೆ ಭಕ್ತಿರಸದ ಚಿತ್ರಗಳು ಇಷ್ಟವಾಗುತ್ತವೆ.. ಇದೆ ಚಿತ್ರ ನೋಡಿ.. ಕರ್ನಾಟಕ ಸಂಗೀತದ ಪಿತಾಮಹರು ಶ್ರೀ ಪುರಂದರ ದಾಸರ ಜೀವನಗಾಥೆಯನ್ನು ಹೊಂದಿರುವ ನವಕೋಟಿ ನಾರಾಯಣ..  

ಅವಕಾಶಗಳು ಬೇಕಿದ್ದವು,  ಮನೆಯ ಸಂಸಾರವನ್ನು ನೆಡೆಸಬೇಕಿತ್ತು.. ದೊಡ್ಡ ಸಂಸಾರ..  ಈ ಸಮಯದಲ್ಲಿ ಸಿಕ್ಕಿದ ಚಿತ್ರವೇ ನವಕೋಟಿ ನಾರಾಯಣ . 

ರಾಮ್ ಪ್ರಸಾದ್ ಮೂವೀಸ್ ಲಾಂಛನದಲ್ಲಿ ಬಿಡುಗಡೆಯಾದ ಚಿತ್ರವನ್ನು ಡಿ ಆರ್ ನಾಯ್ಡು ನಿರ್ಮಾಣದಲ್ಲಿ ಎಸ್ ಕೆ ಎ ಚಾರಿ ನಿರ್ದೇಶನದಲ್ಲಿ ಮೂಡಿ ಬಂತು.. ಆಗಲೇ ಜನಜನಿತ ಕಥೆಯನ್ನು ಹಲವಾರು ಆಕರ ಗ್ರಂಥಗಳನ್ನು ಆಧರಿಸಿ ನರೇಂದ್ರಬಾಬು ಮತ್ತು ಎಸ್ ಕೆ ಎ ಚಾರಿ ಸೇರಿ ಚಿತ್ರಕಥೆಯನ್ನು ಹೆಣೆದರು.  ಸಂಭಾಷಣೆಯನ್ನು ನರೇಂದ್ರಬಾಬು ಬರೆದರು. ಸಂಗೀತ ಶಿವಪ್ರಸಾದ್ ಕೊಟ್ಟರು. ಛಾಯಾಗ್ರಹಣ ಎಸ್ ವಿ ಶ್ರೀಕಾಂತ್ ಮಾಡಿದರು. 

ಪುರಂದರದಾಸರು ರಚಿಸಿದ ಕೆಲವು ಗೀತೆಗಳನ್ನು ಚಿತ್ರಕ್ಕೆ ಉಪಯೋಗಿಸಿದ್ದಾರೆ. ಪಿ ಬಿ ಶ್ರೀನಿವಾಸ್, ಬಾಲಮುರಳಿಕೃಷ್ಣ, ಸುಬ್ಬನರಸಯ್ಯ, ಪಿ ಲೀಲಾ, ಎಸ್ ಜಾನಕಿ.. ಸಂಗೀತದಲ್ಲಿ ಉಪಯೋಗಿಸಿರುವ ವೀಣಾ ನಾದನ ವೈಣಿಕ ಶಿರೋಮಣಿ ಶ್ರೀ ಚಿಟ್ಟಿಬಾಬು ಅವರದ್ದು. 

ವಾಹ್ ಉತ್ತಮ ಮಾಹಿತಿ ಕೊಡುತ್ತಿದ್ದೀರಾ ಮುಂದುವರಿಸಿ ಸರ್ ಎಂದೇ 

ನೋಡಪ್ಪ ಇದೊಂದು ವಿಚಿತ್ರ ಚಿತ್ರ. ಈ ಚಿತ್ರದ ಮಧ್ಯಭಾಗದಲ್ಲಿ ಬರುವ ಸಂಭಾಷಣೆ ಬಹಳ ಇಷ್ಟವಾಯಿತು... ಐಶ್ವರ್ಯವಿದ್ದಾಗ ಕೇಳಿದವರಿಗೆ ಕೊಡಲಿಲ್ಲ..  ಈಗ ಎಲ್ಲಾ ದಾನಮಾಡಿದ ಮೇಲೆ ಕೊಡಲು ಏನೂ ಇಲ್ಲ.. ಎಲ್ಲಾ ವಿಠಲನ ಪರೀಕ್ಷೆ. 

 ಎಷ್ಟು ನಿಜ ಅಲ್ಲವೇ.. ಇದ್ದಾಗ ಕೊಡೋಕೆ ಮನಸಿರೋಲ್ಲ ಇಲ್ಲದೆ ಇದ್ದಾಗ ಕೊಡೋಕೆ ಮನಸ್ಸಿರುತ್ತೆ ಆದರೆ ಕೊಡೋಕೆ ಏನೂ ಇರಲ್ಲ.. ಇದೆ ಜೀವನ.. 

ಸಂಪತ್ತಿನ ಮೇಲೆ ಶಯನ ಮಾಡುವಷ್ಟು ಆಸ್ತಿ ಪಾಸ್ತಿ ಇದ್ದ ಶ್ರೀನಿವಾಸ ನಾಯಕರು ಪುರಂದರ ದಾಸರಾಗುವ ಹಾದಿ.. 

ಜಿಪುಣಾಗ್ರೇಸರ ನಾರಾಯಣ ಶತಕೋಟಿ ನಾರಾಯಣ ಆಗಬೇಕು ಎನ್ನುವ ಹಂಬಲದಿಂದ ಮಕ್ಕಳಿಗೂ ಊಟ ಹಾಕುವಾಗ ಲೆಕ್ಕಾ ಹಾಕಿ ಅಡಿಗೆಗೆ  ಕೊಡುವ ಮನುಷ್ಯ ಅವರು.. ಸಹಾಯ ಬೇಡಿಬಂದವರಿಗೆ ಮಾತಿನಲ್ಲಿಯೇ ಮನೆ ಕಟ್ಟಿ ಸಾಗು ಹಾಕುವಷ್ಟು ಬುದ್ದಿವಂತ.. 

 ವಿಠಲ ಈತನಿಗೆ ಬುದ್ದಿ ಕಲಿಸುವುದಕ್ಕಾಗಿ ಬ್ರಾಹ್ಮಣ ವೇಷದಲ್ಲಿ ಬಂದು ಸಹಾಯ ಬೇಡುತ್ತಾನೆ.. ಎಂದಿನಂತೆ ಬಯ್ದು ಕಳಿಸುತ್ತಾನೆ.. ನಂತರ ಆ ಬ್ರಾಹ್ಮಣ ನಾಯಕರ ಮನೆಗೆ ಹೋಗಿ ಆತನ ಹೆಂಡತಿಯ ಬಳಿ ಸಹಾಯ ಬೇಡುತ್ತಾರೆ.. ಆಕೆಗೆ ಸಹಾಯ ಮಾಡಬೇಕೆಂಬ ಆಸೆಯಿದ್ದರೂ, ತನ್ನ ಗಂಡನ ಜಿಪುಣತನ ಗೊತ್ತಿದ್ದರಿಂದ ಅಸಹಾಯಕಳಾಗಿರುತ್ತಾಳೆ.. ಆ ಬ್ರಾಹ್ಮಣ  ಮೂಗುತಿಯನ್ನು ನೋಡಿ,  ತವರುಮನೆಯದು ಕೊಡಬಹುದು ಎನ್ನುತ್ತಾನೆ .. ಅದು ಸರಿಯೆನಿಸಿ  ಕೊಡುತ್ತಾಳೆ.. 

ಆಗ ಆ ಬ್ರಾಹ್ಮಣ ಆ ಮೂಗುತಿಯನ್ನು ನಾಯಕರ ಅಂಗಡಿಗೆ ಬಂದು ಅದನ್ನು ಮಾರಿ ಹಣ ಕೊಡು ಎಂದು ಕೇಳುತ್ತಾನೆ.. ಅನುಮಾನ ಬಂದ ನಾಯಕರು,  ಇದು ಕದ್ದ ಮಾಲು ಇರಬಹುದು ಎನಿಸಿ, ತಡ ಮಾಡುತ್ತಾನೆ.. ಆಗ ಆ ಬ್ರಾಹ್ಮಣ, ನಿನ್ನ ಮೇಲೆ  ನನಗೆ ನಂಬಿಕೆ ಇದೆ.. ನನ್ನ ಮೇಲೆ ನಿನಗೆ ನಂಬಿಕೆ ಬಂದಾಗ ಹಣ ಕೊಡು ಎಂದು ಹೊರಟು ಹೋಗುತ್ತಾನೆ.. 

ಕಬ್ಬಿಣದ ಪೆಟ್ಟಿಗೆಯಲ್ಲಿ ಇಟ್ಟು ಮನೆಗೆ ಬಂದಾಗ ಹೆಂಡತಿಯ ಮೂಗುತಿ ಇರೋಲ್ಲ.. ಅನುಮಾನ ಬಂದು ಹೆಂಡತಿಗೆ ಬಯ್ಯುತ್ತಾನೆ... ಗಲಾಟೆ ಮಾಡಿದಾಗ.. ಆಕೆ ದೇವರಮನೆಗೆ ಹೋಗಿ ತನ್ನ ವಜ್ರದುಂಗುರ ಚಚ್ಚಿ ಪುಡಿ  ಮಾಡಿ ಕುಡಿಯಲು ಹೋದಾಗ, ನಾಯಕರು ಆ ಬಟ್ಟಲನ್ನು ಕಿತ್ತುಕೊಂಡು ಅದರೊಳಗೆ ಕೈಯಾಡಿಸಿದಾಗ ಬಟ್ಟಲಿನ ಒಳಗೆ ಮೂಗುತಿ ಇರುತ್ತದೆ. 

ಈ ಘಟನೆ ನಾಯಕರನ್ನು ಬದಲಾಯಿಸುತ್ತದೆ . ಕಾರಣ ಕಬ್ಬಿಣದ ಪೆಟ್ಟಿಗೆಯೊಳಗೆ ಭದ್ರವಾಗಿಟ್ಟ ಮೂಗುತಿ ಇರೋದಿಲ್ಲ.. ಹೆಂಡತಿ ಕೊಟ್ಟ ಮೂಗುತಿ ಬಟ್ಟಲಿನಲ್ಲಿ ಇರುತ್ತದೆ.. ಇಬ್ಬರಿಗೂ ಅಚ್ಚರಿ. 

ಇಲ್ಲಿಂದ ನಾಯಕರ ವಿಚಾರಗಳು, ಮಾತು ಕೃತಿಗಳು ಬದಲಾಗುತ್ತದೆ.. ತನ್ನ ಸಕಲ ಸಂಪತ್ತನ್ನು ಬಡಬಗ್ಗರಿಗೆ ದಾನ ಮಾಡಿ ನಿರ್ವಿಕಾರದಿಂದ ಜೀವನ ಮುನ್ನೆಡೆಸುತ್ತಾರೆ.. ವ್ಯಾಸತೀರ್ಥರಿಂದ ದೀಕ್ಷೆ ಪಡೆದು, ತನ್ನ ಇಡೀ ಸಂಸಾರವನ್ನು ಮಠಕ್ಕೆ ಸಮರ್ಪಿಸಿಕೊಂಡು ಬದುಕುತ್ತಾರೆ.

ಸರ್ ನಿಮ್ಮ ಈ ಚಿತ್ರದಲ್ಲಿ ನಿಮ್ಮ ಅಭಿನಯ ಅಪೂರ್ವ. ದಾಸರನ್ನು ಕಂಡಿಲ್ಲ.. ಆದರೆ ಆ ದಾಸರು ಹೀಗೆ ಇರಬಹುದು ಎಂದು ಅನಿಸುವಷ್ಟು ಸಹಜವಾಗಿದೆ. ಈ ಕೆಳಗಿನ ಮಾತುಗಳನ್ನು ಹೇಳುವಾಗ ನಿಮ್ಮ ಅಭಿನಯ ಎನಿಸುತ್ತದೆ. 

"ಎಲ್ಲ ಕಾಯಿಲೆ ಲೇಹ್ಯ ಕಷಾಯದಲ್ಲಿ ವಾಸಿಯಾಗುತ್ತದೆ... ಆದರೆ ನನ್ನ ಅಪ್ಪನ ಕಾಯಿಲೆಗೆ ಮಾತ್ರ ನವರತ್ನ ಭಸ್ಮ ಬೇಕು .. ಏನೋ ಅನುಮಾನ ನನಗೆ"

"ನಾನೆಲ್ಲಿ ಬೇಡವೆಂದೇ.. ನೀವು ನನ್ನ ಅಪ್ಪನ ಕಾಯಿಲೆ ವಾಸಿ ಮಾಡಿ ಖರ್ಚು ತೆಗೆದುಕೊಂಡು ಹೋಗಿ ನವರತ್ನವೇನು  ನೂರು ರತ್ನ ಭಸ್ಮವಾಗಲಿ." ವೈದ್ಯರಿಗೆ ಹೇಳಿದಾಗ ವೈದ್ಯರು "ನಾನು ವೈದ್ಯನಪ್ಪ ದೇವರಲ್ಲ"

"ಅಂದ್ರೆ ನವರತ್ನ ನಿಮಗೆ ಕೊಟ್ಟು, ಆಯಸ್ಸಿಗೆ ದೇವರ ಹತ್ತಿರ ಕೇಳಬೇಕೋ ಹೋಗ್ರಿ ಹೋಗ್ರಿ"

ನೃತ್ಯಗಾರ್ತಿ ನನ್ನ ನೃತ್ಯ ನೋಡಿ ಎಂದಾಗ "ನೋಡಿದರೆ ಏನಾದರೂ ಲಾಭ ಇದೆಯೇ"

ಅಪ್ಪ ಮರಣಿಸಿದಾಗ ಕೈಯಲ್ಲಿ ಹಣ, ಒಡವೆಗಳ ಥೈಲಿಯನ್ನು ಹಿಡಿದು ಒಳಗೆ ಬರುತ್ತಾರೆ... ನಂತರ ಸಂತಾಪವನ್ನು ಸೂಚಿಸದೆ ಥೈಲಿಯನ್ನು ಕಪಾಟಿನಲ್ಲಿಟ್ಟು ಭದ್ರ ಮಾಡಿ ನಂತರ ಮಾತಾಡುತ್ತಾರೆ.. 

ಅದ್ಭುತ ಅಭಿನಯ.. 

ಸಂಪತ್ತನ್ನೆಲ್ಲ ದಾನ ಮಾಡಲು ನಿಂತಾಗ ಯಾರೂ ಅದನ್ನು ತೆಗೆದುಕೊಳ್ಳಲು ಮುಂದೆ ಬರಲ್ಲ.. ತನ್ನ ಪಾಪವನ್ನು ನೀಗಿಸಿಕೊಳ್ಳಲು ಇದನ್ನೆಲ್ಲಾ ದಾನ ಮಾಡುತ್ತಿದ್ದಾನೆ.. ಎಂದು ಎಲ್ಲರ ಆತಂಕ.. 

ಆಗ ಆತನ ಹೆಂಡತಿ ಆಡುವ ಮಾತುಗಳು "ಎಲ್ಲವನ್ನು ದಾನ ಮಾಡಬೇಕೆಂದು ನಿರ್ಧರಿಸಿದಾಗ..ಅಲ್ಲಿ ನಿಮ್ಮದೇನಿದೆ.. ನನ್ನದು ಎನ್ನುವ  ನಿಮ್ಮನ್ನು ಕಾಡುತ್ತಿದೆ.. ಅದನ್ನು ಬಿಟ್ಟು ಬಿಡಿ"

ಮುಂದೆ ವಿಠಲನ ಕೆಲವು ಪವಾಡದ ದೃಶ್ಯಗಳು, ನಾಯಕರುದಾಸರಾಗಿ ಪರಿವರ್ತನೆ,  ಮುದ್ರಾಧಾರಣೆ, ಮಠದಲ್ಲಿ ದಾಸರನ್ನು ಕಂಡರಾಗದ ಕೆಲವರು ಕೊಡುವ ಕಿರುಕುಳ,  ಮತ್ತೆ ಅವರ ಪರಿವರ್ತನೆ ಇದು ಚಿತ್ರದಕತೆ 

ರಾಜಕುಮಾರ್ ಸರ್ ನಿಮ್ಮ ಅಭಿನಯ ಅದ್ಭುತ ಹಾಗೆಯೇ ನಿಮ್ಮ ಜೊತೆ ಸಾಹುಕಾರ್ ಜಾನಕೀ, ಡಿಕ್ಕಿ ಮಾಧವರಾವ್, ಕಮೆಡಿಯನ್ ಗುಗ್ಗು, ಅಶ್ವಥನಾರಾಯಣ, ರಾಮಚಂದ್ರ ಶಾಸ್ತ್ರೀ ಇತರ ಪಾತ್ರವರ್ಗ ಎಲ್ಲವೂ ಸರಿತೂಕವಾಗಿದೆ.. 

ಒಂದು ಅದ್ಭುತ ಚಿತ್ರ ಆದರೆ ಸರಳ ನಿರೂಪಣೆಯಿಂದ ಖುಷಿ ಕೊಡುತ್ತದೆ.. ಅದರ ಕೆಲವು ತುಣುಕುಗಳು ನೋಡಿ ಆನಂದಿಸೋಣ ಸರ್.. 

 ಆಗಲಪ್ಪಾ ನಿನ್ನ ಆಸೆ ನನ್ನ ಆಸೆ.. ನೋಡೋಣ ಮತ್ತೆ ಇನ್ನೊಂದು ಚಿತ್ರದಲ್ಲಿ ಸಿಗೋಣ.. ನೀ ಆ ತುಣುಕುಗಳನ್ನು ಹಾಕಿರು ನಾನು ಒಬ್ಬನೇ ಇದ್ದಾಗ ನೋಡಲು ಪ್ರಯತ್ನ ಪಡುತ್ತೇನೆ.. 

ಆಗಲಿ .. ಸರ್. 


ಗುಗ್ಗು, ಡಿಕ್ಕಿ 

ಡಿಕ್ಕಿ ಎಂಟ್ರಿ 

ಗದುಗಿನ ನಾರಣಪ್ಪ ಕುಮಾರವ್ಯಾಸ ನಾಗುವುದು 

ರಾಮಚಂದ್ರಶಾಸ್ತ್ರಿ 

ಡಿಕ್ಕಿ ಅಪವಾದ ಹಾಕುವುದು 

ಚರ್ಚೆ ಡಿಕ್ಕಿ 


ವಿಠಲನ ಮಾಯೆ 

ವಿಠಲನ ಮಾಯೆ 


ನಾಯಕರು ದಾಸರಾಗುವುದು 


ನಾರದರೇ  ಪುರಂದರದಾಸರು 


ಪುರಂದರ ದಾಸರ  ಅನ್ನಮಾಚಾರ್ಯ ಭೇಟಿ 

ನಾಯಕರಾಗಿ ಅದ್ಭುತ ಅಭಿನಯ 

ರಾಜ್ ಕುಮಾರ್ ಮತ್ತು ಸಾಹುಕಾರ್ ಜಾನಕಿ 


ಅನ್ನಮಾಚಾರ್ಯ