Saturday, December 31, 2016

ಮನದ ಅರಿಯನ್ನು ಹರಿಸುವ ಹರಿ ಭಕ್ತ (1956) (ಅಣ್ಣಾವ್ರ ಚಿತ್ರ ೦೪ / ೨೦೭)

ಮನುಷ್ಯ ಯಾವ ಹಂತದಲ್ಲಿ ಹೇಗೆ ಬೆಳೆಯುತ್ತಾನೆ, ಯಾಕೆ ಬೆಳೆಯುತ್ತಾನೆ ಇದು ಚಿದಂಬರ ರಹಸ್ಯ. ಅದನ್ನು ಅರಿತವ ದೇವತ್ವ ಹೊಂದುತ್ತಾನೆ.. ಅದು ಸಾಧ್ಯವೇ ಎಂದು ನಮ್ಮನ್ನೇ ಪ್ರಶ್ನಿಸಿಕೊಳ್ಳುತ್ತಲೇ ಸಾಗುವ ನಮ್ಮ ಜೀವನ ಎಲ್ಲೋ ಹುಟ್ಟಿ ಎಲ್ಲೋ ಕಡಲನ್ನು ಸೇರುವ ನದಿಯ ಹಾಗೆ ಸಾಗುತ್ತಲೇ ಇರುತ್ತದೆ. 

ಸತತವಾಗಿ ನಾಲ್ಕನೇ ಚಿತ್ರದಲ್ಲಿ ರಾಜ್ ಮತ್ತು ಪಂಡರಿಬಾಯಿ ನಾಯಕ ನಾಯಕಿಯಾಗಿ ತೆರೆಗೆ ಬಂದರು. ಟಿ ವಿ ಸಿಂಗ್ ಠಾಕೂರ್ ನಿರ್ದೇಶನದಲ್ಲಿ ಮೂಡಿ ಬಂದ ಚಿತ್ರ. ಕರ್ನಾಟಕ ಫಿಲಂಸ್ ಲಾಂಛನದಲ್ಲಿ ಜಿ ಎನ್ ವಿಶ್ವನಾಥ್ ಶೆಟ್ಟಿ ಮತ್ತು ಟಿ ವಿ ಸಿಂಗ್ ಠಾಕೂರ್ ರವರ ನಿರ್ಮಾಣದಲ್ಲಿ ಉದಯಿಸಿತು. 


ಮಕ್ಕಳಿಲ್ಲದ ದಂಪತಿಗಳು ಸುಸಂತಾನಕ್ಕೆ ವ್ರತವನ್ನು ಹೇಳಿಕೊಡುವ ದೃಶ್ಯದಿಂದ ತೆರೆದುಕೊಳ್ಳುವ ಈ ಚಿತ್ರ.. ಗುರುಗಳು ಹೇಳುತ್ತಾರೆ.. ವ್ರತ ಭಂಗವಾಗಬಾರದು.. ವ್ರತ ಭಂಗವಾದರೆ ಸುಪುತ್ರ ಕಂಠಕವಾಗುತ್ತಾನೆ ಎನ್ನುವ ಮಾತನ್ನು ಹೇಳುತ್ತಾರೆ., "ದೇವರಿಲ್ಲದ ಗುಡಿ ಮಕ್ಕಳಿಲ್ಲದ ಮನೆ" ಎಂದು ಹೇಳುವ ಮಾತು ಇಷ್ಟವಾಗುತ್ತದೆ. 


ಈ ಚಿತ್ರಗಳಲ್ಲಿ ಹದಿಮೂರು ಹಾಡುಗಳು ಇವೆ (ಚಿಕ್ಕದು, ದೊಡ್ಡದು ಎಲ್ಲವೂ ಸೇರಿ), ವಿಲಾಸಿ ಜೀವನದಿಂದ ಪಾರಮಾರ್ಥಿಕ ಜೀವನದ ಕಡೆ ಹೆಜ್ಜೆ ಹಾಕಿಸುವ ಈ ಚಿತ್ರದಲ್ಲಿ ರಾಜ್ ಮತ್ತೊಮ್ಮೆ ತಮ್ಮ ಅಭಿನಯದಿಂದ ತೂಗಿಸಿಕೊಂಡು ಹೋಗುತ್ತಾರೆ. ಮಾತಾ ಪಿತೃಗಳನ್ನು ತುಚ್ಛವಾಗಿ ಕಾಣುವುದು, ಕಟ್ಟಿಕೊಂಡ ಹೆಂಡತಿಯನ್ನು ದೂಷಿಸುವುದು, ಪರಸ್ತ್ರೀ ಸಂಗ, ದಾರಿ ತಪ್ಪಿಸುವ ಕೆಟ್ಟ ಸ್ನೇಹಿತನನ್ನೇ ದೇವರು ಎಂದು ಭಾವಿಸುವುದು , ಬುದ್ದಿ ಹೇಳಲು ಬಂದ ಬಾಲ್ಯ ಸ್ನೇಹಿತನನ್ನು ದೂರ ಅಟ್ಟುವುದು.. ಎಲ್ಲದರಲ್ಲಿಯೂ ಅಭಿನಯ ಅಮೋಘವಾಗಿದೆ.. ಚಿತ್ರದಿಂದ ಚಿತ್ರಕ್ಕೆ ಅವರ ಅಭಿನಯ ಏರುಮುಖ ಏರುತ್ತಿರುವುದರ ಸಾಕ್ಷಿ ಈ ಚಿತ್ರದಲ್ಲಿ ಸಿಗುತ್ತದೆ. 

ವಿಲಾಸಿ ಜೀವನ, ಅಂತಸ್ತಿನ ಅಹಂ, ಕೆಟ್ಟ ಸ್ನೇಹಿತ, ದಾರಿ ತಪ್ಪಿಸುವ ಸ್ತ್ರೀ ವ್ಯಾಮೋಹ ಇವೆಲ್ಲವೂ  ಕಣ್ಣನ್ನು ಕುರುಡಾಗಿಸಿ, ಹೆಜ್ಜೆ ಹಾಕ ಬೇಕಾದ ಹಾದಿ ತಡವರಿಸುವ ಹಾಗೆ ಮಾಡುತ್ತದೆ.. ಆದರೆ ಕೈ ಖಾಲಿಯಾದಾಗ ನಿಧಾನವಾಗಿ ಅವಕಾಶವಾದಿ ವಸ್ತುಗಳು ತಮ್ಮ ಬೇಳೆ ಬೇಯಿಸಿಕೊಂಡು ಜಾಗ ಖಾಲಿಮಾಡುತ್ತಾರೆ.. ಆಗ ಜೇವನದ ಅರಿವು ಸಿಗುತ್ತದೆ. ಈ ಪುಟ್ಟ ಆದರೆ ದೊಡ್ಡ ಸಂದೇಶವನ್ನು ಚಿತ್ರದುದ್ದಕ್ಕೂ ಕಾಣಿಸುತ್ತಲೇ ಹೋಗುತ್ತಾರೆ. 

ಸುಸಂತಾನಕ್ಕೆ ವ್ರತಕ್ಕೆ ಕೂತ ದಂಪತಿಗಳು.. ಲೋಕದ ಕುಹಕ ಮಾತಿಗೆ ನೊಂದು ವ್ರತ ಭಂಗಮಾಡಿಕೊಳ್ಳುತ್ತಾರೆ. ನಂತರ ಜನರಿಲ್ಲದ ತಾಣಕ್ಕೆ ಹೋಗಿ ಶ್ರದ್ಧೆಯಿಂದ ವ್ರತ ಮಾಡಿದರೂ ಕೂಡ, ಮೊದಲೇ ಭಂಗವಾಗಿದ್ದ ವ್ರತದಿಂದ ಹುಟ್ಟುವ ಸಂತಾನವೇ ಹರಿ. ಬಾಲ್ಯದಿಂದಲೂ ದುಷ್ಟಬುದ್ದಿಯಿಂದ ವರ್ತಿಸುವ ಈ ಬಾಲಕ ಬೆಳೆಯುತ್ತಾ ಹೋದ ಹಾಗೆ ಹಠ, ಸಿಟ್ಟು, ದ್ವೇಷ, ಮದಿರೆ, ಮಾನಿನಿ ಇವುಗಳ ದಾಸನಾಗುತ್ತಾನೆ. ಜೊತೆಯಲ್ಲಿ ದಾರಿ ತಪ್ಪಿಸಲು ಸಿಗುವ ಸ್ನೇಹಿತ, ತನ್ನ ಲಾಭಕ್ಕೆ ಏನು ಬೇಕೋ ಅದನ್ನು ನೆರವೇರಿಕೊಳ್ಳಲು ಹರಿಯನ್ನು ಉಪಯೋಗಿಸಿಕೊಳ್ಳುತ್ತಾನೆ. 

ಮದಿರೆಯ ಅಮಲಿನಲ್ಲಿ ಮನೆಯ ಸಮಸ್ತ ಆಸ್ತಿ, ಧನ, ಕನಕ, ಮನೆ ಎಲ್ಲವನ್ನು ಬರೆದುಕೊಟ್ಟು ನಿರ್ಗತಿಕನಾಗುತ್ತಾನೆ. ಅದಕ್ಕಿಂತ ಮೊದಲು, ನಾರಿ ಸ್ನೇಹ ಬೇಡ ಎಂದು ಹೇಳಿದ ತಂದೆ ತಾಯಿಯರನ್ನು ಜರೆದು, ಮಡದಿಯನ್ನ, ತನ್ನ ಸ್ನೇಹಿತನನ್ನು ಮನೆಯಿಂದ ಹೊರಗೆ ಅಟ್ಟುತ್ತಾನೆ, ನಂತರ ನಾರೀಮಣಿಯನ್ನು ಓಲೈಸಿಕೊಳ್ಳಲು ಹೋದಾದ, ನಿರ್ಗತಿಕನಾದ ನಿನ್ನ ಸಂಗ ಮಾಡಿ ಏನು ಉಪಯೋಗ ಎಂದು ಅಣಕಿಸುತ್ತಾಳೆ. ಇದರಿಂದ ನೊಂದ ಹರಿ, ಗುರುವನ್ನು ಹುಡುಕುತ್ತಾ ಹೊರಡುತ್ತಾನೆ, ಹಾದಿಯಲ್ಲಿ ಮತ್ತೆ ಲೋಕದ ಜನರ ಛೀಮಾರಿ, ಕುಹಕ, ಇದೆಲ್ಲದರಿಂದ ನೊಂದ ಹರಿ ಕಾಡುಪಾಲಾಗುತ್ತಾನೆ. ಅಲ್ಲಿ ತಪಸ್ಸು ಮಾಡುತ್ತಾ, ಹೊಟ್ಟೆ ಹೊರೆದುಕೊಳ್ಳಲು ಭಿಕ್ಷಾವೃತ್ತಿ ಮಾಡುತ್ತಾನೆ. 

ಆದರೂ ಅವನ ಅಹಂ ತಕ್ಕ ಮಟ್ಟಿಗೆ ಇದ್ದೆ ಇರುತ್ತದೆ.. ಕಾಲಾನಂತರ ತಂದೆ ತಾಯಿಯರು ಸಿಗುತ್ತಾರೆ, ಆ ಹೊತ್ತಿಗೆ ಅಲ್ಪ ಸ್ವಲ್ಪ ಅಹಂ ಜಾಗ ಖಾಲಿ ಮಾಡಿರುತ್ತದೆ, ತಂದೆ ತಾಯಿಯ ಸೇವೆಯ ಪರಮ ಸೇವೆ ಮಿಕ್ಕದ್ದು ತೃಣ ಸಮಾನ ಎಂದು ನಂಬಿಕೊಂಡು, ಅವರ ಸೇವೆಯಲ್ಲಿಯೇ ಕಾಲ ಕಳೆಯುತ್ತಾನೆ. ಅವನ ಪರೀಕ್ಷಿಸಲು ವಿಠಲನೇ ಬಂದರು, ಈಗ ಮಾತಾ ಪಿತೃಗಳ ಸೇವಾ ಸಮಯ ಬೇಕಿದ್ದರೆ ನನಗೆ ಕಾಯಬಹುದು ಎಂದು ಒಂದು ಇಟ್ಟಿಗೆಯನ್ನು ಎಸೆದು ಅದರ ಮೇಲೆ ವಿಶ್ರಮಿಸು ಎನ್ನುತ್ತಾನೆ. 

ಹರಿಯ ನಿಷ್ಠೆಗೆ ಮೆಚ್ಚಿದ ವಿಠಲ ಅವನನ್ನು ಅನುಗ್ರಹಿಸುತ್ತಾನೆ. ಮಡದಿ ಸ್ನೇಹಿತ ಎಲ್ಲರ ಜೊತೆಯಲ್ಲಿ ಸಂಭ್ರಮಿಸುತ್ತಾನೆ. 

ಹೀಗೆ ನಿಲ್ಲುವ ಈ ಚಿತ್ರದಲ್ಲಿ ದಾರಿ ತಪ್ಪಿಸುವ ಸ್ನೇಹಿತನಾಗಿ ಜಿ ವಿ ಅಯ್ಯರ್ ಮತ್ತೊಮ್ಮೆ ಬೆಳಗುತ್ತಾರೆ. 
ಕಟುಕತನ, ಘಾತುಕತನ, ವಿಶ್ವಾಸ ದ್ರೋಹ, ಕುಹಕ ಮಾತುಗಳು ಎಲ್ಲವನ್ನು ಆವಾಹಿಸಿಕೊಂಡು ಅಭಿನಯಿಸಿರುವ ಶೈಲಿ ಭಲೇ ಭಲೇ ಎನ್ನುವಂತೆ ಮಾಡುತ್ತದೆ. 

ದಾರಿ ತೋರುವ ಸ್ನೇಹಿತನಾಗಿ ನರಸಿಂಹರಾಜು ಲವಲವಿಕೆಯಿಂದ ಅಭಿನಯಿಸಿದ್ದಾರೆ. 
"ಕೆಲಸ ಆದ ಮೇಲೆ ತಾನೇ ಕೈ ಕೊಡುವುದು"
"ಚಂದ್ರ ಮನೆಗೆ ರಾಹಿ ಹೊಕ್ಕ ಹಾಗೆ"
ಜಿ ವಿ ಅಯ್ಯರ್ ಅವರಿಗೆ ಹೇಳುವ ಮಾತು "ಅಯ್ಯ ವಿಷಕಂಠ ನಿನ್ನನ್ನು ಎಲ್ಲಯ್ಯ ಇಟ್ಟು ಪೂಜೆ ಮಾಡುವುದು" ಅಂದರೆ 
ಜಿ ವಿ ಅಯ್ಯರ್ "ನವಗ್ರಹ ಮಧ್ಯೆ ಇತ್ತು ಬಿಲ್ವ ಪತ್ರೇಲಿ ಪೂಜೆ ಮಾಡು" 
ಎಷ್ಟು ಸೊಗಸಾಗಿದೆ ಈ ಸಂಭಾಷಣೆ.. 


ಪಂಡರಿಬಾಯಿ ಮಡದಿಯಾಗಿ ತಮ್ಮ ಅಭಿನಯ ಛಾಪನ್ನು ಮತ್ತೆ ಒತ್ತಿದ್ದಾರೆ, ಇನ್ನು ಉಳಿದ ಪಾತ್ರಧಾರಿಗಳು ಕಥೆಗೆ ಮತ್ತು ಪಾತ್ರಕ್ಕೆ ತಕ್ಕಷ್ಟು ಮುಳುಗಿದ್ದಾರೆ. 


ಒಂದು ಉತ್ತಮ ಚಿತ್ರ, ಅಷ್ಟೇ ಉತ್ತಮ ಸಂದೇಶ.. ರಾಜ್ ಚಿತ್ರಗಳಲ್ಲಿ ಭಕ್ತಿ ಭಾವ ಹೊಮ್ಮಿಸುವ ಚಿತ್ರಗಳ ಸಾಲಿನಲ್ಲಿ ಈ ಚಿತ್ರವೂ ನಿಲ್ಲುತ್ತದೆ. 

ಭರಪೂರ ಹಾಡುಗಳ ಸುಗ್ಗಿಯೇ ಈ ಚಿತ್ರದಲ್ಲಿ ಇದೆ ಆದರೆ ಕಡೆಯಲ್ಲಿ ಬರುವ "ದೇವಾ ದರುಶನವ ನೀಡೆಯಾ" ಮನ ಸೆಳೆಯುತ್ತದೆ. 

ಹರಿ ಹರಿ ಎನ್ನುತ್ತಲೇ ಮನದ ಅರಿಯನ್ನು ದೂರ ಮಾಡುವ ಚಿತ್ರ ಕರುನಾಡ ತಾಯಿಯ ಚರಣ ಕಮಲಗಳಲ್ಲಿ ಕುಸುಮವಾಯಿತು. 

ಮತ್ತೊಮ್ಮೆ ಬರುವೆ . ರಾಜ್ ಚಿತ್ರದ ಜೊತೆಯಲ್ಲಿ!!!

Thursday, December 1, 2016

ಭಾರತ ಭೂಶಿರದಲ್ಲಿ ಪುಟ್ಟಣ್ಣ ಅವರ ಜನುಮದಿನ

"ಪುಟ್ಟಣ್ಣ ಸರ್ ನಿಮ್ಮ ಹತ್ತಿರ ಮಾತಾಡಬೇಕಿತ್ತು.. ೪೪೦ ಕ್ಷಣಗಳು ಸಿಗಬಹುದೇ.. "

"ಯಾರಪ್ಪ ನೀನು.. "

"ನಿಮ್ಮ ಕೋಟಿ ಕೋಟಿ ಅಭಿಮಾನಿಗಳಲ್ಲಿ ನಾನು ಒಬ್ಬ.. ಇಂದು ನಿಮ್ಮ ಜೊತೆ ಮಾತಾಡಬೇಕು ಅನ್ನಿಸ್ತಿದೆ.. "

"ಸರಿ.. ಬಾ ಇಲ್ಲೇ ಸ್ವಲ್ಪ ದೂರದಲ್ಲಿ ನಮ್ಮ ಊರಿನವರ ಬೊಂಡ ಅಂಗಡಿ ಇದೆ.. ಅಂಬಡೆ ಮತ್ತು ಮೆಣಸಿನ ಕಾಯಿ ಬಜ್ಜಿ ಚೆನ್ನಾಗಿ ಮಾಡ್ತಾರೆ.. "

ನನಗೆ ಬಾಯಲ್ಲಿ ನೀರು..

"ಸರಿ ಸರ್"

ಇಬ್ಬರೂ ನೆಡೆಯುತ್ತಾ ಹೋದೆವು... ಅಂಗಡಿ ಸಿಕ್ಕಿತು.. "ಏನಪ್ಪಾ.. ಬಿಸಿ ಬಿಸಿ ಅಂಬಡೆ, ಮೆಣಸಿನಕಾಯಿ ಬಜ್ಜಿ ಎರಡು ಕಾಫಿ.. ಒಂದು ೫೫೫ ಕಳಿಸು.. ನಿನಗೆ ೫೫೫?"

"ಇಲ್ಲ ಸರ್.. ಅಭ್ಯಾಸವಿಲ್ಲ.. ಬಜ್ಜಿ, ಕಾಫಿ ಸಾಕು"

"ಸರಿ ಬಾ.. ನಾ ಓದಿದ್ದ ಶಾಲೆ ಇದು.. ಶಾಲೆಯ ಹೊರಗೆ ಒಂದು ಕಲ್ಲು ಬೆಂಚು ಇದೆ.. ಇವತ್ತು ಭಾನುವಾರ.. ಅಲ್ಲಿಯೇ ಕುಳಿತು ಮಾತಾಡೋಣ.. ಆಗಬಹುದೇ?"

ದೊಡ್ಡವರಿಗೆ ಇಲ್ಲ ಎನ್ನಲು ಆಗುತ್ತದೆಯೇ.. ಸುಮ್ಮನೆ ಗೋಣು ಆಡಿಸಿದೆ..

ಬಜ್ಜಿ, ಅಂಬಡೆ, ಕಾಫೀ ಮತ್ತು ೫೫೫ ಬಂತು..

"ಸರಿ ಹೇಳಪ್ಪ ಏನು ನಿನ್ನ ಮಾತು"

"ಸರ್.. ಉಪಾಸನೆ ಚಿತ್ರದ ಭಾರತ ಭೂಶಿರ ಹಾಡನ್ನು ಗುರುಗಳ ಆಶ್ರಮದಲ್ಲಿ ಚಿತ್ರೀಕರಿಸಿದ ರೀತಿ ನನಗೆ ಬಲು ಇಷ್ಟ ಅದರ ಬಗ್ಗೆ ಹೇಳಿ.. ೪೪೦ ಕ್ಷಣಗಳು ನಿಮ್ಮ ಮಾತಿಗಾಗಿ ಮಾತ್ರ"

"ನೋಡಪ್ಪ.. ಸಂಗೀತ ಒಂದು ಅದ್ಭುತ ಔಷದಿ ಇದ್ದ ಹಾಗೆ.. ಹಾಡನ್ನುಹಾಡುವವರು , ಅದರ ಸಂಗೀತ, ಹಾಡುವ ಸ್ಥಳ, ಹಾಡಿನ ಸಾಹಿತ್ಯ ಎಲ್ಲವೂ ಒಂದು ದೇವಸ್ಥಾನ ಹಾಗೂ ಅಲ್ಲಿನ ಪರಿಸರದಲ್ಲಿರುವ ದೇವರ ಮೂರ್ತಿ, ಪೂಜೆ ಸಾಮಗ್ರಿಗಳು ಇದ್ದ ಹಾಗೆ .. ದೇವರಿಗೆ ನಾವು ಧೂಪ, ದೀಪ, ಮಂತ್ರ, ಅಭಿಷೇಕ, ಅಲಂಕಾರ ಹೇಗೆ ಮಾಡುತ್ತೇವೆಯೋ ಹಾಗೆ.. ಒಂದು ಹಾಡಿಗೂ ಅದೇ ರೀತಿಯ ಸಿದ್ಧತೆ ಬೇಕು.

ಈ ಹಾಡು ಚಿತ್ರೀಕರಿಸುವ ಸ್ಥಳ ಗುರುಗಳ ಆಶ್ರಮ..
ಆಶ್ರಮ ಒಂದು ದೇವಾಲಯವೇ ಅಲ್ಲವೇ
ಆ ಆಶ್ರಮದ ಗುರುಗಳು ದೇವರಿಗೆ ಅರ್ಚಿಸುವ ಅರ್ಚಕರು ತಾನೇ
ಆ ಅರ್ಚನೆಗೆ ಬೇಕಾಗುವ ಸಾಹಿತ್ಯ,  
ಸಂಗೀತ,ಗಾಯನ..
ಭಕ್ತರು ಎಲ್ಲರೂ ಸೇರಿ
ಈ ಹಾಡನ್ನು ಮೇಲಕ್ಕೆ ಏರಿಸಿದ್ದಾರೆ.

ಶಾರದೆ ಪಾತ್ರಧಾರಿ ಸಂಗೀತ ಎಂದರೆ ತಪಸ್ಸು ಎಂದುಕೊಂಡವಳು.. ತಾನುಬಾಲ್ಯದಲ್ಲಿ ಕಣ್ಣಾರೆ ಕಂಡ ಒಂದು  ದೃಶ್ಯವನ್ನು ಹಾಡಿನಲ್ಲಿ ಕಟ್ಟಿ ಕೊಡುತ್ತೇನೆ ಎಂದು ಹೇಳುವಾಗ ಅದಕ್ಕೆ ಬೇಕಾದ ವೇದಿಕೆಯನ್ನು ಸೃಷ್ಟಿ ಮಾಡಲು ಮನಸ್ಸಾಯಿತು.

ವಿಜಯನಾರಸಿಂಹನಿಗೆ ಹೇಳಿದೆ "ನನಗೆ ಈ ರೀತಿಯ ಹಾಡು ಬೇಕು.. ಕನ್ಯಾಕುಮಾರಿಯ ಬಗ್ಗೆ ಹಾಡು" ಅಂತ..
"ಪುಟ್ಟಣ್ಣ ನೀನು ಕೇಳಿದೆ ನಾನು ಕೊಟ್ಟೆ" ಅಂತ ಅದ್ಭುತ ಹಾಡನ್ನು ಬರೆದುಕೊಟ್ಟ.

ಇನ್ನೊಬ್ಬ ಜೀವದ ಗೆಳೆಯ ವಿಜಯಭಾಸ್ಕರ್ ಸಾಹಿತ್ಯಕ್ಕೆ ಸಂಗೀತ ಕೊಟ್ಟನೋ.. ಅಥವಾ ಸಂಗೀತಕ್ಕೆ ಸಾಹಿತ್ಯ ಬಂದಿತೋ ಅರಿವಿಲ್ಲ.. ಅದ್ಭುತವಾದ ಎದೆ ಝಲ್ ಎನ್ನುವಂಥ ಸಂಗೀತ ಒದಗಿಸಿದ..

ಇಬ್ಬರು "ವಿಜಯ"ರು ಈ ಗಾನ ಸಂಭ್ರಮ ಮಹಾಸಮರದಲ್ಲಿ ವಿಜಯಿಯಾದರು..

ಜಾನಕಿಯಮ್ಮನಿಗೆ ಈ ಹಾಡಿನ ಬಗ್ಗೆ ಹೇಳಿದಾಗ.. ಪುಟ್ಟಣ್ಣಾಜಿ ಖಂಡಿತ ಇದು ಒಂದು ಅದ್ಭುತ ಕೃತಿಯಾಗುತ್ತದೆ ಎಂದರು.. ಅದು ನಿಜವೇ ಆಯಿತು..

ಇಂಥಹಃ ಅಮೋಘ ಹಾಡನ್ನು ಸುಮ್ಮನೆ ಹೇಗೋ ಹೇಗೋ ಚಿತ್ರೀಕರಿಸಲು ಮನಸ್ಸಾಗಲಿಲ್ಲ..

ಛಾಯಾಗ್ರಾಹಕ ಶ್ರೀಕಾಂತ್ ಗೆ ಹೇಳಿದೆ.. "ಶಾರದೆ ಮೊಗದ ಮೇಲೆ ಕಾಂತಿ ಬರುವಂತೆ ಲೈಟಿಂಗ್ ಮಾಡಿ.. ಆಕೆಯ ಮುಖದ ಪ್ರತಿ ಭಾವವೂ ಎದ್ದು ಕಾಣುವಂತೆ ನೀವು ಸೆರೆ ಹಿಡಿಯಬೇಕು.. ವೀಣೆಯನ್ನು ನುಡಿಸುವ ಅಭ್ಯಾಸ ಆಕೆಗೆ ಆಗಿದೆ.. ನೋಡುವವರಿಗೆ ಶಾರದೆಯೇ ವೀಣೆ ನುಡಿಸುತ್ತಿದ್ದಾಳೆ ಎನ್ನುವ ಮನವರಿಕೆಯಾಗುತ್ತದೆ.. ಜೊತೆಗೆ ಈ ಹಾಡಿನಲ್ಲಿ ಹಿತಮಿತವಾಗಿ ವೀಣೆಯನ್ನು ಉಪಯೋಗಿಸಿರುವುದರಿಂದ, ಜೊತೆಗೆ ಹಾಡಿನಲ್ಲಿ ಕೆಲವು ಭಾಗಗಳಲ್ಲಿ ಮಾತ್ರ ವೀಣೆಯ ನಾದವಿರುವುದರಿಂದ.. ಆಕೆಯ ಮುಖದ ಭಾವ, ತನ್ಮಯತೆ ಈ ಹಾಡಿಗೆ ಬೇಕು.. " ಮರುಮಾತಿಲ್ಲದೆ ಶ್ರೀಕಾಂತ್ ನಾನು ಹೇಗೆ ಹೇಳಿದ್ದೇನೋ ಅದಕ್ಕಿಂತ ಇನ್ನೂ ಅತ್ಯುತ್ತಮವಾಗಿ ಚಿತ್ರೀಕರಿಸಿದ್ದಾರೆ.

ಇನ್ನೂ ಜಾನಕಿಯಮ್ಮ.. ಅಬ್ಬಾ ಆಕೆ ನಿಜಕ್ಕೂ ಗಾನಸರಸ್ವತಿಯೆ ಹೌದು.. ಪ್ರತಿ ಪದವನ್ನು ಅರ್ಥಮಾಡಿಕೊಂಡು ಅದಕ್ಕೆ ಬೇಕಾದ ಭಾವ ತುಂಬಿ ಈ ಹಾಡನ್ನು ಅಕ್ಷರಶಃ ದೇವಗಾನವನ್ನಾಗಿ ಮಾಡಿದ್ದಾರೆ ಆಕೆ. "ಶಿವ ತಾಂಡವದ  ಢಮರು ನಿನಾದ ನಾದ ಬ್ರಹ್ಮನ ಓಂಕಾರ ನಾದ.. " ಈ ಪದವನ್ನು ಅದೆಷ್ಟು ಭಕ್ತಿಭಾವದಿಂದ ಹಾಡಿದ್ದಾರೆ.. ನನಗೆ ರೋಮಾಂಚನವಾಗುತ್ತದೆ..

ಇನ್ನೂ ಹಾಡು ಶುರುವಾದಾಗ ಬರುವ ರುದ್ರಪಟ್ಟಣದ ಸಂಗೀತ ವಿಧ್ವಾನ್ ಅವರ ಅಭಿನಯ, ಜಾನಕಿಯಮ್ಮನವರ ಆಲಾಪ ಕೇಳಿ ಕಣ್ಣು ಮತ್ತು ಮೊಗದಲ್ಲಿ ಅವರು ತೋರುವ ಭಾವ.. ನಿಜಕ್ಕೂ ನನಗೆ ಈಗ ಹಾಡನ್ನು ಕೇಳಿದರೂ ಕಣ್ಣಲ್ಲಿ ನೀರು ಬರುತ್ತದೆ.."

ಆ ಹಾಡು ಮುಗಿದಾಗ.. "ನಿಮ್ಮ ವಿಧ್ವತ್ತಿನ ಪ್ರತಿಬಿಂಬ ನಿಮ್ಮ ಶಿಷ್ಯೆ.. ಕರುಳು ಹಿಂಡುವ ವೀಣೆಯ ನಾದ, ಜೀವ ತುಂಬುವ ಗಾನದ ಸುಧೆ ನಮ್ಮ ಊರಿನವರೆಲ್ಲರಿಗೂ ತಲುಪುವಂತೆ ಮಾಡಿ" ಎಂದು ಹೇಳಿದಾಗ ನಿಜಕ್ಕೂ ನಾ ಮೂಕನಾದೆ.

ಇಡೀ ದೃಶ್ಯವನ್ನು ನಾ ಕಲ್ಪಿಸಿಕೊಂಡ ರೀತಿಯಲ್ಲಿಯೇ ಚಿತ್ರಿಸಿದ ಹೆಮ್ಮೆ ನನಗೆ.. ಅದನ್ನು ಮೆಚ್ಚಿ ಈ ಚಿತ್ರವನ್ನು ಹಾಡನ್ನು ಯಶಸ್ಸುಗೊಳಿಸಿದ ಕೀರ್ತಿ ಕರುನಾಡ ಚಿತ್ರರಸಿಕರಿಗೆ ಸಲ್ಲಬೇಕು.. :-)

ಇಷ್ಟು ಹೇಳಿ ಪುಟ್ಟಣ್ಣ ಸರ್ ೫೫೫ ನ ಕೊನೆ ದಂ ಎಳೆದರು.. ತಮ್ಮ ಕೈಗಡಿಯಾರ ನೋಡಿಕೊಂಡು ಕಣ್ಣು ಹೊಡೆದರು.. ೪೩೯ ಕ್ಷಣಗಳಾಗಿತ್ತು..

ಅಷ್ಟು ಹೊತ್ತಿಗೆ ಅಂಬಡೆ, ಮೆಣಸಿನಕಾಯಿ ಬಜ್ಜಿ ಎರಡು ಖಾಲಿಯಾಗಿದ್ದವು..

ಪುಟ್ಟಣ್ಣ ಸರ್ ಅವರಿಗೆ ಪ್ರವರ ಹೇಳಿ ಒಂದು ನಮಸ್ಕಾರ ಮಾಡಿ.. ಸಂತೃಪ್ತಿಯಿಂದ ಹೊರ ನೆಡೆದೆ..

ಒಮ್ಮೆ ತಿರುಗಿ ನೋಡಿದೆ.. ಪುಟ್ಟಣ್ಣ ಸರ್.. ಇನ್ನೊಂದು ೫೫೫ ಹಚ್ಚಿ ವಿಜಯದ ಸಂಕೇತವಾದ ಹೆಬ್ಬೆರಳನ್ನು ತೋರಿಸಿದರು..

ತಾಯಿ ಭುವನೇಶ್ವರಿ ವೀಣೆಯನ್ನು ಹಿಡಿದು ನುಡಿಸಿದಂತೆ.. ಹಾಡು ಕೇಳಿಸುತ್ತಿತ್ತು



ಭಾರತ ಭೂಶಿರ ಮಂದಿರ ಸುಂದರಿ
ಭುವನ ಮನೋಹರಿ ಕನ್ಯಾಕುಮಾರಿ

ಸಾಮಗಾನಪ್ರಿಯ ಸಾಂಬರೂಪಿಣಿ
ಪಾಲಗಡಲ ಸ್ವರ ಪಂಚಮಧಾರಿಣಿ
ಸಾಕಾರ ಷಡ್ಜದ ಶರಧಿ ತರಂಗಿಣಿ
ಸಾಗರ ಸಂಗಮ ಸರಸ ವಿಹಾರಿಣಿ

ಶಿವತಾಂಡವದಾ ಢಮರುನಿನಾದ....
ನಾದ ಬ್ರಹ್ಮನ ಓಂಕಾರನಾದ...
ನಾದದೆ ಲೀನಾ ಆಗಮವೇದ
ನಾದ...ವೇದ ...ಶಿವೇ....
ನಾದ ವೇದ ಶಿವೆ ನಿನ್ನವಿನೋದ

ಸಂಗೀತಸುಧೆಯ ಚೈತನ್ಯಧಾರೆ
ಕಣ ಕಣ ನೀನೇ ಕರುಣಾ ಪೂರೆ
ನವ ಭಾವ ನವ ಜೀವ ನೀ ತುಂಬಿ ಬಾರೆ
ನವರಸವಾಹಿನಿ ನೀ ದಯೆ ತೋರೆ

ಭಾರತ ಭೂಶಿರ ಮಂದಿರ ಸುಂದರಿ
ಭುವನ ಮನೋಹರಿ ಕನ್ಯಾಕುಮಾರಿ

(ಪುಟ್ಟಣ್ಣ ಅವರ  ಜನುಮದಿನದಂದು ಅವರ ನೆನಪಲ್ಲಿ ಕೆಲವು ಸಾಲುಗಳನ್ನು ಬರೆಯೋಣ ಎಂದುಕೊಂಡಾಗ ಮೂಡಿ ಬಂತು ಮೇಲಿನ ಕೆಲವು ಅಕ್ಷರಗಳು.. ಇದು ಕೇವಲ ನನ್ನ ಹೃದಯದಲ್ಲಿ ಮೂಡಿಬಂದ ಭಾವಕ್ಕೆ ಒಂದು ಕಾಲ್ಪನಿಕ ಕಥಾ ರೂಪ ಕೊಟ್ಟು ಬರೆದಿದ್ದೇನೆ.. )

ಪುಟ್ಟಣ್ಣ ಸರ್.. ನಿಮ್ಮ ಪ್ರತಿಭೆಗೆ ಏನೂ ಬರೆದರೂ ಅದು ಕಮ್ಮಿಯೇ.. ಆದರೂ ಒಂದು ನುಡಿ ನಮನ ಸಲ್ಲಿಸೋಣ ಎಂದು ಸ್ವಲ್ಪ ಸಲುಗೆ ತೆಗೆದುಕೊಂಡು ಜನುಮದಿನಕ್ಕೆ ಈ ರೀತಿಯ ಶುಭಾಷಯ ಕೋರಿದ್ದೇನೆ.. (ಕ್ಷಮೆ ಇರಲಿ)

Sunday, November 6, 2016

ಜೀವನ ಪಥವನ್ನು ಬದಲಿಸುವ - ಭಕ್ತ ವಿಜಯ (1956) (ಅಣ್ಣಾವ್ರ ಚಿತ್ರ ೦೩ / ೨೦೭)

ಒಂದು ಚಿಕ್ಕ ಸನ್ನಿವೇಶ.. ಒಂದು ಬೇಸರದ ಧ್ವನಿ, ಮನಕಲಕುವ ಘಟನೆ ಮಾನವನ ಜೀವನವನ್ನು ಹೇಗೆ ತಿರುಗಿಸಿ ನಿಲ್ಲಿಸುತ್ತದೆ. ಆ ಕ್ಷಣಕ್ಕೆ ಎಲ್ಲವೂ ಸರಿ ಎನ್ನಿಸಿದರೂ, ಹಸು ಹುಲ್ಲನ್ನು ಗಬ ಗಬ ತಿಂದು, ನಂತರ ಅದಕ್ಕೆ ಬಿಡುವಾಗಿದ್ದಾಗ ಮತ್ತೆ ಅಗಿದು, ಜಗಿದು ರಸ ಹೀರಿ, ಸ್ವಾಧಿಷ್ಟ ಹಾಲು ಕೊಡುವ ಹಾಗೆ, ಈ ಚಿತ್ರವೂ ಕೂಡ ಸರಳವಾಗಿ ಹೇಳಬೇಕಾದ ಸಂದೇಶವನ್ನುಮುಟ್ಟಿಸುತ್ತದೆ .

ಸತತ ಮೂರನೇ ಬಾರಿಗೆ ರಾಜ್ ಮತ್ತು ಪಂಡರಿ ಬಾಯಿ ತೆರೆಯಮೇಲೆ ಮಿಂಚಿದ ಚಿತ್ರವಿದು.

ನಾಯಕ ನಾಯಕಿಯಾಗಿ ಸತತ ಮೂರನೇ ಚಿತ್ರ 
 ಜಗನ್ನಾಥ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಪಿ ಕೆ ಜನಾರ್ಧನ್ ನಿರ್ಮಾಪಕರಾಗಿ ಎ  ಕೆ ಪಟ್ಟಾಭಿ ಅವರ ನಿರ್ದೇಶನದಲ್ಲಿ ಮೂಡಿಬಂದ ಚಿತ್ರರತ್ನವಿದು. 

ಸಂತ ತುಕಾರಾಂ ತಮ್ಮ ಶಿಷ್ಯವೃಂದದ ಜೊತೆಯಲ್ಲಿ ಭಕ್ತಿ ಸಂದೇಶವನ್ನು ಹಂಚುತ್ತಾ ಊರೂರು ಸುತ್ತುತ್ತಾ ಸಂತೋಬಾ ಅವರ ಊರಿಗೆ ಬರುತ್ತಿರುತ್ತಾರೆ. ಆಗ ಕುದುರೆಮೇಲೆ ಬರುತ್ತಿದ್ದ ಸಂತೋಬಾ ಗುರುಗಳನ್ನು ನೋಡಿಯೂ, ಕೆಳಗೆ ಇಳಿಯದೆ, ತಮಗೆ ದಾರಿ ಬಿಡಲಿಲ್ಲ ಎನ್ನುವ ದರ್ಪ ತೋರುತ್ತಾರೆ. ಸಂತ ತುಕಾರಾಂ ಬಗ್ಗೆ ಕೇಳಿಯೂ ಕೂಡ ಗೌರವ ಸಲ್ಲಿಸದೆ ಅಧಿಕಾರ, ಹಣದ ದರ್ಪವನ್ನು ಮೆರೆದು ಹೋಗುತ್ತಾರೆ. 
ರಾಜ್ ಅವರ ಆರಂಭಿಕ ದೃಶ್ಯ
ಇಲ್ಲಿ ರಾಜ್ ಅವರ ಆರಂಭಿಕ ದೃಶ್ಯ ಚುಟುಕಾಗಿದೆ, ಮಾತಿಲ್ಲ ಆದರೆ, ಕಣ್ಣುಗಳು, ಆಂಗೀಕ ಅಭಿನಯ ಸೊಗಸು. 
ಅಭಿನಯದ ಒಂದು ಝಲಕ್ 
ಈ ಚಿತ್ರದಲ್ಲಿ ಬರೋಬ್ಬರಿ ಹನ್ನೆರಡು ಹಾಡುಗಳಿವೆ (ಚುಟುಕು ಹಾಡುಗಳು ಸೇರಿ). ಪಿ ಲೀಲಾ, ಮೈನಾವತಿ, ಎ ಎಂ ರಾಜಾ, ಎಂ ಪ್ರಭಾಕರ್, ಸಿ ಏನ್ ಸರೋಜಿನಿ, ಬಾಗೇಪಲ್ಲಿ ಸುಬ್ರಮಣ್ಯ ಅವರು ಪಿ ಶ್ಯಾಮ್ ಮತ್ತು ಆತ್ಮನಾಥ್ ಅವರ ಸಂಗೀತ ನಿರ್ದೇಶನದಲ್ಲಿ ಹಾಡಿದ್ದಾರೆ. 

ಆನಂದ್ ಅವರು ಕಥೆ ಸಂಭಾಷಣೆ ಮತ್ತು ಹಾಡುಗಳನ್ನು ರಚಿಸಿದ್ದಾರೆ.  ಕೆಲವು ಸನ್ನಿವೇಶಗಳನ್ನು ಸೆರೆಹಿಡಿದ ರೀತಿ ಅಭೂತವಾಗಿದೆ. ಆರ್ ಸಂಪತ್ ಅವರ ಛಾಯಾಗ್ರಹಣ ನಿರ್ದೇಶನದಲ್ಲಿ ಕೆ ಜಾನಕಿರಾಮ್ ಅವರ ನೆರಳು ಬೆಳಕಿನ ಕೈಚಳಕ ಸುಂದರವಾಗಿದೆ. 

ಈ ಚಿತ್ರದಲ್ಲಿ ಮುಖ್ಯ ಕಥೆಯ ಜೊತೆ ಜೊತೆಯಲ್ಲಿ ಹಾಸ್ಯಕ್ಕೂ ಅವಕಾಶ ಕೊಟ್ಟು, ಆ ಪಾತ್ರಗಳು ಕೂಡ ಮುಖ್ಯ ಕಥೆಗೆ ಸಾಥ್ ಕೊಡುತ್ತಾ ಸಾಗುವುದು ವಿಶೇಷ.  
ಆಸೆಬುರುಕ ಅವಕಾಶವಾದಿ ದಂಪತಿಗಳು ಎತ್ತುಗಳು ಇಲ್ಲದ ಗಾಡಿಯನ್ನು ತರುವುದು 
 ಕೆಲವೇ ಕೆಲವೇ ಮುಖ್ಯ ಪಾತ್ರಗಳು ರಾಜ್ ಅವರು ಸಂತೋಬಾನ ಪಾತ್ರದಲ್ಲಿ ಮಿಂಚಿದ್ದಾರೆ, ಸ್ಪುಟವಾದ ಕನ್ನಡ, ಸನ್ನಿವೇಶಕ್ಕೆ ತಕ್ಕ ಹಾಗೆ ಕಣ್ಣುಗಳಲ್ಲಿ ಅಭಿನಯ, ಮೊದಲು ದರ್ಪ ತುಂಬಿದ ಪಾತ್ರ, ನಂತರ ಮನಸ್ಸು ಮಾಜಿ ಭಕ್ತ ಪಥಕ್ಕೆ ತಿರುಗಿದಾಗ, ಸಂತರ ಮುಖಭಾವ ಅಚ್ಚುಕಟ್ಟಾಗಿದೆ.

ಪಂಡರಿ ಬಾಯಿ ಹೇಮಾಳ ಪಾತ್ರದಲ್ಲಿ ಅವರ ಟ್ರೇಡ್ ಮಾರ್ಕ್ ಅಭಿನಯ, ಪತಿಗೆ ನೆರಳಾಗಿ ನಿಲ್ಲುವ ಪಾತ್ರದಲ್ಲಿ ಸಲೀಸಾಗಿ ಅಭಿನಯ ನೀಡಿದ್ದಾರೆ. 

ಕನ್ನಡ ಚಿತ್ರರಂಗದ ಘಟವಾಣಿ ಅತ್ತೆ ರಮಾದೇವಿ ಈ ಚಿತ್ರದಲ್ಲಿ ಸಂತೋಬಾನ ಅಮ್ಮನಾಗಿ, ಹೇಮಾಳ ಅತ್ತೆಯಾಗಿ, ಮನೋಜ್ಞ ಅಭಿನಯ ನೀಡಿದ್ದಾರೆ. ತನ್ನ ಮಗ ಇರುವ ಧನ ಕನಕಗಳನ್ನು ಆಸ್ತಿಯನ್ನು ದಾನ ಮಾಡಿ ಬರಿಗೈಯಲ್ಲಿ ನಿಂತಿರುವುದನ್ನು ಕಂಡು, ತಮ್ಮ ಜೀವನಕ್ಕೆ ತೊಂದರೆ ಇರುವುದನ್ನು ಒಪ್ಪಿಕೊಂಡು ಹಲುಬುವ ಪಾತ್ರ, ಜೊತೆಯಲ್ಲಿಯೇ ಮಗನನ್ನು ಖಂಡಿಸುತ್ತಲೇ, ತಾನು ಪಾಪಿ ಇಂತಹ ಸನ್ನಿವೇಶವನ್ನು ಎದುರಿಸುವ ಕರ್ಮಾ ತನಗೆ ಎಂದು ಹೇಳುವ ದೃಶ್ಯಗಳಲ್ಲಿ ಮನಕ್ಕೆ ನುಗ್ಗುತ್ತಾರೆ. 
ಕರುನಾಡಿನ ಶ್ರೇಷ್ಠ ನಟಿಮಣಿಗಳು - ಆದವಾನಿ ಲಕ್ಷ್ಮೀದೇವಿ, ರಮಾದೇವಿ, ಪಂಡರಿಬಾಯಿ 

ಕನ್ನಡ ಚಿತ್ರರಂಗ ಕಂಡ ಇನ್ನೊಬ್ಬ ಶ್ರೇಷ್ಠ ತಾಯಿ ಪಾತ್ರದ ನಟಿ ಆದವಾನಿ ಲಕ್ಷ್ಮೀದೇವಿ ಸಂತೋಬಾನ ತಂಗಿಯಾಗಿ ಚಿಕ್ಕ ಪಾತ್ರದಲ್ಲಿ ಅಭಿನಯ ನೀಡಿದ್ದಾರೆ. ಅವರ ಪತಿರಾಯನಾಗಿ ಗಣಪತಿ ಭಟ್ ಅವರ ಅಭಿನಯ ಕಥೆಗೆ ಅವಶ್ಯಕವಾದಷ್ಟು ಇದೆ. 

ಹೇಮಾಳ ತಂದೆಯ ಪಾತ್ರದಲ್ಲಿ ಡಿಕ್ಕಿ ಮಾಧವರಾವ್ ಒಂದೆರಡು ಸನ್ನಿವೇಶಗಳಲ್ಲಿ ಬಂದರೂ, ನೆನಪಲ್ಲಿ ಉಳಿಯುತ್ತಾರೆ. 

ಡಿಕ್ಕಿ ಮಾಧವರಾವ್ ಮತ್ತು ಪಂಡರಿಬಾಯಿ - ಅಪ್ಪ ಮಗಳಾಗಿ 
ಈ ಚಿತ್ರ ರಾಜ್ ಮತ್ತು ಪಂಡರಿಬಾಯಿ ಅವರಿಗೆ ಎಷ್ಟು ಸಲ್ಲುತ್ತದೆಯೋ ಅಷ್ಟೇ ಭಾರ ಹೊತ್ತು ನಿಂತಿರುವುದು ಮೈನಾವತಿ ಮತ್ತು ಹನುಮಂತಾಚಾರ್ ಹಾಸ್ಯ ಪಾತ್ರಗಳು.  ಕಥೆಯ ಜೊತೆಯಲ್ಲಿಯೇ ಸಾಗುವ ಆಸೆ ಬುರುಕ, ಅವಕಾಶವಾದಿ ಕಿಲಾಡಿ ಪತಿ ಪತ್ನಿಯರ ಪಾತ್ರ ನಗಿಸುತ್ತದೆ.

ಮೈನಾವತಿ ಮತ್ತು ಹನುಮಂತಾಚಾರ್ - ಹಾಸ್ಯ ರಸದಲ್ಲಿ 
ಇಡೀ ಚಿತ್ರದ ಹೂರಣ ಕೆಲವು ಸಾಲಿನಲ್ಲಿ ನಿಂತಿದೆ. ಹಣ, ಅಧಿಕಾರ ಮತ್ತು ಅಂತಸ್ತಿನ ದರ್ಪದಲ್ಲಿ ಊರಿನ ಸಾಹುಕಾರ ಸಂತೋಬಾ, ದೇಣಿಗೆ ವಸೂಲಿ ಮಾಡಲು ಹಳ್ಳಿಯ ಹೊನ್ನನ ಮನೆಗೆ ಬರುತ್ತಾನೆ, ಮಳೆ ಬೆಳೆ ಇಲ್ಲದೆ, ದೇಣಿಗೆ ಕೊಡಲು ಸಾಧ್ಯವಿಲ್ಲ, ಬೆಳೆ ಬಂದ ತಕ್ಷಣ ಕೊಡುವುದಾಗಿ ಪರಿಪರಿಯಾಗಿ ಬೇಡಿಕೊಂಡರೂ,  ಅವರ ಮಾತನ್ನು ಕೇಳದೆ, ಮನೆಯಲ್ಲಿನ ದವಸ ಧಾನ್ಯವನ್ನು ಹೊತ್ತೊಯ್ಯಲು ತನ್ನ ಆಳುಗಳಿಗೆ ಅಪ್ಪಣೆ ಮಾಡುತ್ತಾನೆ ಸಂತೋಬಾ. ಈ ದೃಶ್ಯದಲ್ಲಿ ಮಕ್ಕಳು ತಿನ್ನುತ್ತಿದ್ದ ಅನ್ನದ ಮಡಿಕೆ ಅಚಾನಕ್ ಬಿದ್ದು, ತಿನ್ನುತ್ತಿದ್ದ ಅನ್ನವೆಲ್ಲ ಮಣ್ಣುಪಾಲಾಗುತ್ತದೆ. ಇದರಿಂದ ಕುಪಿತಗೊಂಡ ಹೊನ್ನನ ಪತ್ನಿ ಹೊನ್ನಿ, ಕಟುವಾಗಿ ಟೀಕಿಸುತ್ತಾ, "ನಿಮ್ಮ ಆಸ್ತಿಯೆಲ್ಲ ಮಣ್ಣಾಗಲಿ" ಎಂದು ಶಪಿಸುತ್ತಾಳೆ. 

ರಾಜ್ ಅವರ ಅಮೋಘ ಅಭಿನಯ - ಅಹಂ ಪಾತ್ರದಲ್ಲಿ 
ನಂತರದ ದೃಶ್ಯದಲ್ಲಿ, ಸಂತೋಬಾ ಅನ್ನ ಕಲೆಸುತ್ತಾ ಕೂತಾಗ, ಹೊನ್ನಿ ಹೇಳಿದ ಮಾತೆ ಮಾರ್ದನಿಯಾಗುತ್ತದೆ, ನೊಂದುಕೊಂಡ ಸಂತೋಬಾ ಊಟ ಮಾಡದೆ ತನ್ನ ಪತ್ನಿ ಹೇಮಾಳ ಬಳಿ ತನ್ನ ದುಗುಡವನ್ನು ಹೇಳಿಕೊಳ್ಳುತ್ತಾನೆ, ಹೆಂಡತಿ ಸಮಾಧಾನ ಮಾಡಿದರೂ ಸಂತೋಬಾನ ತಲೆ ಮೊಸರು ಗಡಿಗೆಯಾಗಿರುತ್ತದೆ. 

ತುಕಾರಾಂ ಅವರನ್ನು ಮನೆಗೆ ಕರೆತರುವೆ ಎಂದು ಹಠ ಹೊತ್ತ ಸಂತೋಬಾ 
ಸಂತ ತುಕಾರಾಂ ಅವರ ಕಥೆ ಕೇಳಲು ತನ್ನ ತಾಯಿ ಮತ್ತು ಪತ್ನಿ ಹೊರಟಾಗ, ಅವರನ್ನು ತಡೆದು, ಅವರನ್ನೇ ಇಲ್ಲಿ ಕರೆಸುತ್ತೇನೆ ಎನ್ನುತ್ತಾನೆ, ಆದರೆ ಅಸ್ತಿ ಅಂತಸ್ತು ಸಂಪತ್ತು ಇವುಗಳನ್ನು ತೃಣ ಸಮಾನ ಎನ್ನುವ ಸಂತರು ಇವನ ಆಜ್ಞೆಗೆ ಒಪ್ಪುವುದಿಲ್ಲ. ಸ್ವತಃ ಸಂತೋಬಾನೇ ಬಂದು ಕರೆದರೂ ಒಲ್ಲೆ ಎನ್ನುತ್ತಾರೆ, ಚಿನ್ನದ ಸರದ ಆಮೀಷ ತೋರಿದರೂ ಸಂತ ತುಕಾರಾಂ ಅವರು, "ನೀನು ಹೊರಗಿನಿಂದ ಧನಿಕ, ಆದರೆ ಒಳಗೆ ಕಡು ಬಡವ, ನಮಗೆ ಹೊನ್ನು ಮಣ್ಣು ಎರಡು ಒಂದೇ" ಎಂದು ಬುದ್ದಿವಾದ ಹೇಳುತ್ತಾರೆ. 

ಸಂತ ತುಕಾರಾಮರು ಮನೆಗೆ ಬರುವುದಿಲ್ಲ ಎಂದು ತಿಳಿದಾಗ ನೊಂದುಕೊಳ್ಳುವ ಹೇಮಾ, ಇದಕ್ಕಿಂತ ಮೊದಲು, ನಿತ್ಯದ ಪೂಜೆಯ ಸಮಯದಲ್ಲಿ ನಾಗರಹಾವು ಕಾಣಿಸಿಕೊಳ್ಳುವುದು, ಹೊನ್ನಿಯ ಶಾಪ ಎಲ್ಲವೂ ಆಕೆಯ ಮಾನಸಿಕ ಆರೋಗ್ಯವನ್ನು ಹಾಳುಮಾಡುತ್ತದೆ. ವೈದ್ಯರ ಔಷದಿ ಕೆಲಸ ಮಾಡೋಲ್ಲ, ಆಗ ತನ್ನ ತಪ್ಪನ್ನು ಅರಿತ ಸಂತೋಬಾ ಸಂತ ತುಕಾರಾಂ ಅವರಿಗೆ ಶರಣಾಗುತ್ತಾನೆ ಮತ್ತು ಮನೆಗೆ ಕರೆ ತರುತ್ತಾನೆ. 

ಸಂತರ ದರ್ಶನದಿಂದ ಗುಣಮುಖಳಾದ ಹೇಮಾಳನ್ನು ಕಂಡು ಬದಲಾವಣೆಯ ಹಾದಿಗೆ ಸಂತೋಬಾ ಬರುತ್ತಾನೆ. ತನ್ನ ತಾಯಿ ಮತ್ತು ಮಡದಿ ತನ್ನ ಮಾವನ ಮನೆಗೆ ಹೋದಮೇಲೆ, ಇದ್ದ ಬದ್ದ ಆಸ್ತಿಯನ್ನು ಊರಿನ ಜನತೆಗೆ ಹಂಚಿ, ತಾನು ಭಗವತ್ ಸತ್ಯ ದರ್ಶನಕ್ಕೆ ದುರ್ಗಮ ಸ್ಥಳಕ್ಕೆ ತೆರಳುತ್ತಾನೆ.  ಅನೇಕ ಕಷ್ಟ ಕಾರ್ಪಣ್ಯಗಳ ಮಧ್ಯೆ, ತನ್ನ ಆರಾಧ್ಯ ದೈವ ಪಾಂಡುರಂಗನ ಸಾಕ್ಷಾತ್ಕಾರ ಪಡೆದುಕೊಂಡು ತನ್ನ ಬದುಕನ್ನು ಸಾರ್ಥಕ ಮಾಡಿಕೊಳ್ಳುತ್ತಾನೆ. 

ಸಂತ ತುಕಾರಾಂ ಅವರಿಂದ ಆಶೀರ್ವಾದ ಪಡೆವ ಸಂತೋಬಾ
ಕಥೆ, ಭಾವುಕತೆ, ಹಾಸ್ಯ, ಸಂಗೀತ, ಚುಟುಕು ಸಂಭಾಷಣೆ, ಸಂದೇಶ ಎಲ್ಲವನ್ನು ಹೊತ್ತು ತಂದಿರುವ ಈ ಚಿತ್ರ ಮನಸ್ಸಿಗೆ ತಂಪನ್ನೆರೆಯುತ್ತದೆ. 

ಇದು ಚಿತ್ರದ ತಿರುಳು. ಬದುಕಲ್ಲಿ ಹಣವೇ ಎಲ್ಲವೂ ಅಲ್ಲ, ಹಣವಿಲ್ಲದೆ ಏನೂ ಇಲ್ಲ ಎಂಬುದು ನಿಜವಾದರೂ, ಹಣವಿಲ್ಲದೆ, ಮನಸ್ಸಿಗೆ ಶಾಂತಿ ನೆಮ್ಮದಿ ತಂದುಕೊಂಡು, ಹಿಡಿದ ನೀತಿಯುಕ್ತ ಮಾರ್ಗವನ್ನು ಅನುಸರಿಸಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ.  ಹಣವಿದ್ದಾಗ ಅಹಂಕಾರವನ್ನು ತೊಡೆದುಹಾಕಿ, ನಂತರ ಗುರಿಯ ಕಡೆಗೆ ಅಹಂ ಅನ್ನು ದೂರ ಸರಿಸಿ ನಡೆಯಬೇಕು, ತಪ್ಪುಗಳನ್ನು ಒಪ್ಪಿಕೊಂಡು ಅದನ್ನು ಸರಿದಾರಿಗೆ ತಂದು ನಿಲ್ಲಿಸಬೇಕು, ಎಂಥಹುದೇ ಆಮೀಷಗಳು, ಅಡತಡೆಗಳು ಬಂದರೂ ಕೂಡ ಮೆಟ್ಟಿ ನಿಂತು ಗುರಿ ಸಾಧನೆಯ ಕಡೆಗೆ ಮನಸ್ಸು ಒಗ್ಗಿಸಿಕೊಂಡರೆ, ದೈವದ ಸಾಕ್ಷಾತ್ಕಾರ ಖಂಡಿತ. 


ರಾಜ್ ಅವರ ಮೂರನೇ ಚಿತ್ರವು ರತ್ನವಾಗಿ ಕರುನಾಡ ತಾಯಿಯ ಕೊರಳಲ್ಲಿ ಇರುವ ಹಾರಕ್ಕೆ ಇನ್ನೊಂದು ಅನರ್ಘ್ಯ ಮಣಿಯಾಗಿ ಸೇರಿಕೊಂಡ ಸಮಯವಿದು. 

ಮತ್ತೊಂದು ಚಿತ್ರದ ಜೊತೆಯಲ್ಲಿ ಬರುವೆ.. ರಾಜ್ ಜೊತೆಯಲ್ಲಿ!!!

Sunday, September 25, 2016

ಅಣ್ಣ ತಂಗಿಯ ಅಂತರ್ಗಾಮಿ ಅನುಬಂಧದಲ್ಲಿ ತಮ್ಮ ಛಾಪು - ಸೋದರಿ (1955) (ಅಣ್ಣಾವ್ರ ಚಿತ್ರ ೦೨ / ೨೦೭)

ಜೀವನದ ಕಡಲಿನ ಅಲೆಗಳು ಹೇಗೆ ಕೆಲವೊಮ್ಮೆ ದಡ ಸೇರಿಸುತ್ತವೆ ಹೇಗೆ ಅಲೆಗಳಲ್ಲಿ ತೇಲಿಸುತ್ತದೆ ಎನ್ನುವುದಕ್ಕೆ ಈ ಚಿತ್ರ ಉತ್ತಮ ಉದಾಹರಣೆ.

ಮೊದಲ ಚಿತ್ರದಲ್ಲಿ ಅಬ್ಬರಿಸಿದ ರಾಜ್ ಅವರು ಈ ಚಿತ್ರದಲ್ಲಿ ತಮ್ಮ ನಾಯಕಿ ಪಂಡರಿಬಾಯಿಯವರ ದೈತ್ಯ ಪ್ರತಿಭೆಯಲ್ಲಿ ಮತ್ತು ನಾಯಕಿ ಪ್ರಧಾನ ಚಿತ್ರದಲ್ಲಿ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.


ವಿಶ್ವಕಲಾಚಿತ್ರದ ಲಾಂಛನದ ಮೊದಲ ಕಾಣಿಕೆಯಾಗಿ ಈ ಚಿತ್ರ ನಿರ್ಮಾಣವಾಗಿದೆ.  ಜಿ ಏನ್ ವಿಶ್ವನಾಥ ಶೆಟ್ಟರು, ಮತ್ತು ಟಿ ವಿ ಸಿಂಗ್ ಠಾಕೂರ್ ಮುಂದೆ ನಿಂತು ಈ ಚಿತ್ರವನ್ನು ನಿರ್ಮಾಣಮಾಡುತ್ತಾರೆ

ಅಣ್ಣ ತಂಗಿ ಅನುಬಂಧದ ಈ ಕಥೆ ತುಂಬಾ ಸರಳ.  ಮಕ್ಕಳಿಲ್ಲದ ಅಣ್ಣ ತನ್ನ ತಂಗಿಗೆ ಯೋಗ್ಯವರನನ್ನು ನೋಡಿ ಮದುವೆ ಮಾಡುತ್ತಾನೆ. ತಂಗಿಗೆ ಹುಟ್ಟುವ ಮೊದಲನೇ ಗಂಡುಮಗುವನ್ನು ತನ್ನ ರಾಜ್ಯದ ಉತ್ತರಾಧಿಕಾರಿಯನ್ನಾಗಿ ಮಾಡುವ ನಿರ್ಧಾರ ಮಾಡಿ ಅದರಂತೆ ತಂಗಿಯಿಂದ ಭಾಷೆ ತೆಗೆದುಕೊಳ್ಳುತ್ತಾನೆ.


ಇತ್ತ .. ಮದುವೆಯಾಗಿ ತನ್ನ ಪತಿ ಕೈಲಾಸನಾಥನೊಡನೆ ಅವರ ರಾಜ್ಯಕ್ಕೆ ಬರುತ್ತಾರೆ.. ಕಾಲ ಚೆನ್ನಾಗಿಯೇ ಸಾಗುತ್ತದೆ. ಮೊದಲನೇ ಮಗು ಗಂಡು ಸಂತಾನ ಆಗುತ್ತದೆ. ಆ ವಿಷಯವನ್ನು ತನ್ನ ಅಣ್ಣನಿಗೆ ತಿಳಿಸುವ ಏರ್ಪಾಡಾಗುತ್ತದೆ.

ಸಂತಸದ ಸುದ್ಧಿಯನ್ನು ತಿಳಿದು ಅಣ್ಣ ಕುಶಿಯಾದರೂ.. ತನ್ನ ರಾಜ್ಯಕ್ಕೆ ಶತ್ರುಗಳ ಭಾದೆಯಿಂದ ಇರುವುದರಿಂದ ಯುದ್ಧಕ್ಕೆ ಹೊರಡುತ್ತಾನೆ. ತನ್ನ ಮಡದಿ ಮೊದಲು ತಂಗಿ ಮಗುವನ್ನು ನೋಡಿಕೊಂಡು ಬರೋಣ ಅಂತ ಹೇಳಿದರೂ.. ಮೊದಲು ಪ್ರಜೆಗಳ ರಕ್ಷಣೆ ನಂತರ ನನ್ನ ವೈಯುಕ್ತಿಕ ಬದುಕು ಎಂದು ನುಡಿದು.. ನಾ ಯುದ್ಧ ಭೂಮಿಯಿಂದ ಮರಳಿ ಬಾರದಿದ್ದರೆ, ತನ್ನ ತಂಗಿಯ ಮಗನನ್ನೇ ದತ್ತು ತೆಗೆದುಕೊಂಡು ರಾಜ್ಯಾಭಿಷೇಕ ಮಾಡಬೇಕೆಂದು ಮಾತು ತೆಗೆದುಕೊಂಡು.. ಯುದ್ಧರಂಗಕ್ಕೆ ಹೊರಡುತ್ತಾನೆ.

ತನ್ನ ಗಂಡ ಹಗಲಿರುಳು ಆತನ ತಂಗಿಯ ಬಗ್ಗೆ ಯೋಚಿಸುವುದು ಮತ್ತು ಆತನ ಮಗನನ್ನೇ ದತ್ತು ತೆಗೆದುಕೊಳ್ಳುವ ವಿಚಾರ ಬಂದಾಗ ಕುಪಿತಗೊಳ್ಳುತ್ತಾಳೆ. ಮೊದಲೇ ಕ್ಷುದ್ರ ಮನಸ್ಸಿನ ರಾಣಿಯ ಬೆಂಕಿಯ ಕುಂಡದ ಮನಸ್ಸಿಗೆ ಇನ್ನಷ್ಟು ತುಪ್ಪ ಸುರಿಯಲು ಆಕೆಯ ದಾಸಿಯ ಕುಟಿಲ ನುಡಿಗಳು ಆಕೆಯನ್ನು ಇನ್ನಷ್ಟು ರೊಚ್ಚಿಗೆ ಎಬ್ಬಿಸುತ್ತದೆ

ರಾಣಿ.. ತಾನು ಗಂಡನಿಗೆ ಕೊಟ್ಟ ಮಾತನ್ನು ಮರೆತು ಆ ಮಗುವನ್ನು ನೋಡಲು ಹೋಗುವುದೇ ಇಲ್ಲ.. ಜೊತೆಯಲ್ಲಿ ತನ್ನ ತಮ್ಮನನ್ನೇ ರಾಜನಾಗಿ ಮಾಡಲು ಕುತಂತ್ರ ಮಾಡುತ್ತಾಳೆ.



ಇತ್ತ ಒಂದು ಸಂತಾನವಾದ ಮೇಲೆ ಇನ್ನೊಂದು ಹೆಣ್ಣು ಮಗುವಾದರೂ.. ತನ್ನ ಅಣ್ಣ ನನ್ನನ್ನು ನೋಡಲು ಬರಲಿಲ್ಲ ಎಂದು ತಂಗಿ ಬೇಸರ ಮಾಡಿಕೊಳ್ಳುತ್ತಾಳೆ.. ಆದರೆ ಕೈಲಾಸನಾಥ ಅವರಿಗೆ ಏನೂ ರಾಜ ಕಾರ್ಯವೋ ಏನೋ, ಬಂದಿಲ್ಲ.. ಒಮ್ಮೆ ನಾವೇ ಹೋಗಿ ಬರೋಣ ಎನ್ನುತ್ತಾನೆ.

ಈ ನಡುವೆ.. ರಾಜ್ಯದಲ್ಲಿ ಕ್ಷಾಮ ತಲೆದೋರಿ.. ತನ್ನ ಪ್ರಜೆಗಳಿಗೆ ಕಂದಾಯ ಮನ್ನಾ ಮಾಡುತ್ತಾನೆ, ಅರಮನೆಯಲ್ಲಿದ್ದ ದವಸ, ಧಾನ್ಯ, ಒಡವೆ, ಆಭರಣ ಕಡೆಗೆ ದೇವರ ಮನೆಯ ಆಭರಣಗಳನ್ನು ಮಾರಿ ಪ್ರಜೆಗಳ ಯೋಗ ಕ್ಷೇಮಕ್ಕೆ ತ್ಯಾಗ ಮಾಡುತ್ತಾನೆ.

ಒಂದುಹೊತ್ತಿನ ಊಟಕ್ಕೂ ತತ್ವಾರವಾದಾಗ, ವಿಧಿಯಿಲ್ಲದೇ, ತನ್ನ ಮಡದಿ ಮಕ್ಕಳಿಗೆ ತವರು ಮನೆ ಸೇರಿಕೊಳ್ಳಲು ಹೇಳಿದರೂ, ಹಠ ಮಾಡುವ ಮಡದಿ ಮಕ್ಕಳನ್ನು ಬಿಟ್ಟು ರಾತ್ರೋ ರಾತ್ರಿ ಊರು ಬಿಟ್ಟು ಹೋಗುತ್ತಾನೆ, ಬೇರೆ ದಾರಿ ಕಾಣದೆ, ತನ್ನೆರಡು ಮಕ್ಕಳನ್ನು ಕಟ್ಟಿಕೊಂಡು, ತವರು ಮನೆಯ ಹಾದಿಯಲ್ಲಿ ಮಗಳು ಹಾವಿಗೆ ಬಲಿಯಾಗುತ್ತಾಳೆ. ಹಾಗೂ ಹೀಗೂ ತವರು ಸೇರಿಕೊಂಡಾಗ.. ಬಿಕ್ಷುಕಿ ತರಹ ಇದ್ದ ಇವಳನ್ನು ಸೇವಕರು ಬಿಡುವುದಿಲ್ಲ.

ಆದರೆ ಗುರುತು ಹಿಡಿದರು, ಅತ್ತಿಗೆ ಎಂದೂ ಕರೆದರೂ, ರಾಣಿ ದಯೆತೋರದೆ, ಮತ್ತೆ ತನ್ನ ದಾಸಿ ಮಾತಿನಂತೆ ಕೊಟ್ಟಿಗೆಯೊಳಗೆ ಇರಲು ಅವಕಾಶ ಮಾಡಿಕೊಡುತ್ತಾಳೆ, ಮತ್ತೆ ಅಲ್ಲಿಯೇ ಅವಳನ್ನು ಮುಗಿಸಲು ಸಂಚು ಹೂಡುತ್ತಾಳೆ.

ರಾಜ ಬಂದಾಗ, ತನ್ನ ತಂಗಿ ಬಗ್ಗೆ ಕೇಳಿದಾಗ ಇಲ್ಲ ಸಲ್ಲದ ಆಪಾದನೆ ಮಾಡಿ, ರಾಜನಿಗೆ ತನ್ನ ತಂಗಿ ಬಗ್ಗೆ ಬೇಸರ ಬಾರಿಸಿದರೂ, ವಿವೇಚನೆಯುಳ್ಳ ರಾಜ ಅದರ ಹಿಂದಿನ ಮರ್ಮ, ಸಂಚು ತಿಳಿದು ದಾಸಿಯನ್ನು ಸೆರೆಯಲ್ಲಿ ಇಡುತ್ತಾನೆ. ನಿಜಾಂಶ ತಿಳಿದು ರಾಣಿ ತನ್ನ ದಾಸಿಯನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.

ತನ್ನ ತಂಗಿಗಾಗಿ ಹುಡುಕುತ್ತಾ ರಾಜ, ತನ್ನ ಮಡದಿ ಮಕ್ಕಳನ್ನು ಹುಡುಕುತ್ತ ಬರುವ ಪತಿಗೆ.. ಆಕೆ ಬದುಕಿಲ್ಲ ಎಂದು ಗೊತ್ತಾಗುತ್ತದೆ, ಸಂಸ್ಕಾರ ಮಾಡುವಾಗ.. ಶಿವ ಪಾರ್ವತಿ ಸಮೇತ ಪ್ರತ್ಯಕ್ಷನಾಗಿ ಸತ್ತ ಮಡದಿ ಮಕ್ಕಳನ್ನು ಬದುಕಿಸಿ ಚಿತ್ರಕ್ಕೆ ಮಂಗಳ ಹಾಡುತ್ತಾನೆ.

ಈ ಚಿತ್ರ ಸರಳ .. ಯಾವುದೇ ಏರು-ಪೇರು ಇಲ್ಲದೆ ಸಲೀಸಾಗಿ ಸಾಗುವ ಚಿತ್ರ. ಇದರಲ್ಲಿ ಪಂಡರಿಬಾಯಿಯವರ ಅಭಿನಯ  ಗಮನ ಸೆಳೆಯುತ್ತದೆ. ತಂಗಿಯಾಗಿ, ಮಡದಿಯಾಗಿ, ಮಕ್ಕಳ ತಾಯಿಯಾಗಿ ಇಡೀ ಚಿತ್ರವನ್ನು ತಮ್ಮ ಹೆಗಲ ಮೇಲೆ ಹೊತ್ತು ಸಾಗಿದ್ದಾರೆ. ಸಿರಿತನ, ಬಡತನ, ಬವಣೆ, ಸಂಕಟ, ಪತಿಭಕ್ತಿ, ಎಲ್ಲವನ್ನು ಗಮನಾರ್ಹವಾಗಿ ತೆರೆಯ ಮೇಲೆ ತಂದಿದ್ದಾರೆ.

ರಾಜ್ ಕುಮಾರ್..ಹಿಂದಿನ ಚಿತ್ರವನ್ನು ತಾನು ಮಾಡೇ ಇಲ್ಲವೇನೋ ಎನ್ನುವಷ್ಟು ಸಲೀಸಾಗಿ ಈ ಚಿತ್ರದೊಳಗೆ ನುಗ್ಗಿದ್ದಾರೆ. ರಾಜನಾಗಿ, ಪತ್ನಿಗೆ ತಕ್ಕ ಪತಿಯಾಗಿ.. ನಂತರ ಮರುಕ ಪಡುವ ಹಾಳುಬಿದ್ದ ಊರಿನ ಪ್ರಮುಖನಾಗಿ, ಕಾಡುಪಾಲಾಗುವ ಪಾತ್ರದಲ್ಲಿ ಪಾತ್ರಕ್ಕೆ ತಕ್ಕ ಅಭಿನಯ ನೀಡಿದ್ದಾರೆ. ಈ ಚಿತ್ರ ರಾಜ್ ಅವರ ಎರಡನೇ ಚಿತ್ರವಾಗಿ ಗಮನ ಸೆಳೆಯುತ್ತದೆ.

ಈ ಚಿತ್ರದಲ್ಲಿ ಮೇಲೆ ಹೇಳಿದ ನಾಯಕ ನಾಯಕಿ ಅಲ್ಲದೆ ಗಮನ ಸೆಳೆಯುವ ಇನ್ನೂ ಐವರು ಕಲಾವಿದರು ಅಂದರೆ
ನರಸಿಂಹರಾಜು : ಪೆದ್ದ ಭಾವಿ ರಾಜಕುವರನಾಗಿ ಅಭಿನಯ, ಸಂಭಾಷಣೆ ಶೈಲಿ ಗಮನ ಸೆಳೆಯುತ್ತದೆ.
ಅವರ ಗುಗ್ಗುರವಾಗಿ ಜಿ ವಿ ಅಯ್ಯರ್.. ಇವರಿಬ್ಬರ ಜುಗಲಬಂಧಿ ಬೇಡರ ಕಣ್ಣಪ್ಪ ಚಿತ್ರದ ಮುಂದುವರೆದ ಭಾಗವಾಗಿ ಅನುಭವಕೊಡುತ್ತದೆ ಮತ್ತು ಕಚಗುಳಿ ಸಂಭಾಷಣೆ ನಗು ತರಿಸುತ್ತದೆ.


ಅದರ ಒಂದು ಝಲಕ್
"ಸಂಪತ್ತು ಹೆಚ್ಚಿದಷ್ಟು ಆಪತ್ತು ಹೆಚ್ಚುತ್ತದೆ"
****
ಗುರು : "ಏನಯ್ಯ ವತ್ಸ ಇಲ್ಲಿಯವರಗೆ ಏನೇನೂ ಕಲಿತುಕೊಂಡಿದ್ದೀಯ"
ಶಿಷ್ಯ : "ಊಟ ನಿದ್ದೆ"
ಗುರು: "ಭಲಾ ಭಲಾ.. ಇನ್ನೇನು ಬರುತ್ತೆ"
ಶಿಷ್ಯ : "ನೆಗಡಿ ಆದಾಗ ಕೆಮ್ಮು ಬರುತ್ತೆ. ಕೆಮ್ಮು ನೆಗಡಿ ಜೊತೇಲಿ ಬಂದಾಗ ಜ್ವರ ಬರುತ್ತೆ "
ಗುರು: ಕೆಮ್ಮು ನೆಗಡಿ ಜ್ವರ ಹೆಚ್ಚಿದಾಗ ಯಮನಿಂದ ಚೀಟಿ ಬರುತ್ತೆ ಗೊತ್ತೂ
****
ಪಾಠಗಳನ್ನ ಅಭ್ಯಾಸ ಮಾಡುತ್ತಾ ಬೇಸತ್ತು ನರಸಿಂಹರಾಜು
"ಕೂಡು ಕಳೆ ಗುಣಿಸು ಭಾಗಿಸು
ಚರಿತ್ರೆ ಅಂತ ಸತ್ತವರ ಕಥೆ
ಭೂಗೋಳ ಅಂತ ಹೊಳೆ ಬೆಟ್ಟಗಳ ವರ್ಣನೆ
ಒಂದೂ ಇಷ್ಟವಿಲ್ಲ
****
ಗುರು : ಒಳ್ಳೆ ಗ್ರಹಚಾರ ಬಂತಲ್ಲ
ಶಿಷ್ಯ : ಅವನ್ಯಾರು
ಗುರು : ಆಕಾಶದಲ್ಲಿರುವ ಗ್ರಹಗಳು ಅಗೋಚರವಾಗಿ ಮನುಷ್ಯನ ಮೇಲೆ ಮಾಡುವ ದಾಳಿಗೆ ಗ್ರಹಚಾರ ಎಂದು ಹೆಸರು.. ಹದಿನೈದನೇ ಪಾಠ
ಶಿಷ್ಯ : ಮನೆಯಲ್ಲಿರುವ ಗ್ರಹಗಳು ಮನೆಯವರ ಮೇಲೆ ಮಾಡುವ ದಾಳಿಗೆ ಗೋಳಾಚಾರ ಅಂತ ಹೆಸರು.. ಇದು ಹದಿನಾರನೇ ಪಾಠ
****
ಗುರು : ಏನಯ್ಯ ವತ್ಸ ನಿನ್ನೆ ಹೇಳಿಕೊಟ್ಟ ಪಾಠ
ಶಿಷ್ಯ : ಗಟ್ಟಿ ಮಾಡಿದ್ದೆ.. ಎಲ್ಲಾ ಕರಗಿ ಹೋಗಿದೆ
****

ಹೀಗೆ ಅನೇಕ ಜುಗಲ್ಬಂಧಿ ಸಂಭಾಷಣೆಗಳು ನಗೆಯ ಹೊನಲನ್ನು ಹರಿಸುತ್ತದೆ.

ಬರೋಬ್ಬರಿ ಹನ್ನೊಂದು ಹಾಡುಗಳಿರುವ ಈ ಚಿತ್ರದಲ್ಲಿ ಹಾಡುಗಳು ಮಧ್ಯೆ ಮಧ್ಯೆ ಬರುತ್ತಲೇ ಇರುತ್ತವೆ. ಹುಣುಸೂರು ಕೃಷ್ಣಮೂರ್ತಿ ರಚಿಸಿರುವ ಹಾಡುಗಳನ್ನು ಪಿ ಲೀಲಾ, ಟಿ ಎಸ್ ಭಗವತಿ, ಸುಶೀಲ, ಸುಮಿತ್ರಾ, ಎ ಎಂ ರಾಜ, ಪಿ, ನಾಗೇಶ್ವರ ರಾವ್ ಹಾಡಿದ್ದಾರೆ.
ಕಥೆ, ಸಂಭಾಷಣೆ ಹುಣುಸೂರು ಕೃಷ್ಣಮೂರ್ತಿ ಮತ್ತು ಜಿ ವಿ ಅಯ್ಯರ್ ಅವರದು.. ಜಿ ವಿ ಅಯ್ಯರ್ ಅವರು ಎರಡು ಪಾತ್ರದಲ್ಲಿ ಅಭಿನಯಿಸಿರುವುದು  ಅಷ್ಟೇ  ಅಲ್ಲದೆ, ಕಥೆ, ಸಂಭಾಷಣೆ, ಸಹ ನಿರ್ದೇಶನದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಸಂಗೀತ ಸಂಯೋಜನೆ ಪದ್ಮನಾಭಶಾಸ್ತ್ರಿ ಮತ್ತು ಮೊದಲ ಬಾರಿಗೆ ಅವಕಾಶ ಸಿಕ್ಕಿದ ಜಿ ಕೆ ವೆಂಕಟೇಶ್.
ಛಾಯಾಗ್ರಹಣ ಬಿ ದೊರೈರಾಜ್ ಅವರದು.

ಈ ಅದ್ಭುತ ತಂಡದ ಚುಕ್ಕಾಣಿ ಹಿಡಿದು ನೆಡೆಸಿದವರು ನಿರ್ದೇಶಕ ಟಿ ವಿ ಸಿಂಗ್ ಠಾಕೂರ್.  ಈ ಚಿತ್ರದಲ್ಲಿ ಬರುವ ಪಾತ್ರಗಳ ಪರಿಚಯವೆಂದರೆ
ಅಣ್ಣನಾಗಿ:  ರಾಘವೇಂದ್ರರಾವ್
ಮಡದಿ ಚಂಚಲದೇವಿಯಾಗಿ : ಜಯಶ್ರೀ
ಆಕೆಯ ತಮ್ಮನಾಗಿ : ನರಸಿಂಹರಾಜು
ನರಸಿಂಹರಾಜು ಪ್ರೇಯಸಿಯಾಗಿ : ಎಂ ಏನ್ ಲಕ್ಷ್ಮೀದೇವಿ
ಗುರುವಾಗಿ : ಜಿ ವಿ ಅಯ್ಯರ್
ತಂಗಿ ಹೇಮಾವತಿಯಾಗಿ : ಪಂಡರಿಬಾಯಿ
ಹೇಮಾವತಿಯ ಪತಿ ಕೈಲಾಸನಾಥನಾಗಿ : ರಾಜಕುಮಾರ್
ಒಬ್ಬರಿಗೊಬ್ಬರು ಸಹಜವಾಗಿ ನಟಿಸಿದ್ದಾರೆ.

ಈ ಚಿತ್ರದಲ್ಲಿ ಇರುವ ನಟ ನಟಿಯರು ತಂತ್ರಜ್ಞರು ರಾಜ್ ಅವರನ್ನು ಧ್ರುವತಾರೆಯಾಗಿ ಮಾಡಲು ಶ್ರಮಿಸಿದವರು ಅಧಿಕರು. ರಾಘವೇಂದ್ರ ರಾವ್, ಬಿ ದೊರೈ ರಾಜ್, ಜಿಕೆ ವೆಂಕಟೇಶ್, ಜಯಶ್ರೀ, ನರಸಿಂಹರಾಜು, ಎಂ ಏನ್ ಲಕ್ಷ್ಮೀದೇವಿ, ಹುಣುಸೂರು ಕೃಷ್ಣಮೂರ್ತಿ, ಟಿವಿ ಸಿಂಗ್ ಠಾಕೂರ್, ಜಿ ವಿ ಅಯ್ಯರ್, ಪಂಡರಿ ಬಾಯಿ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಒಂದು ಸರಳ ಕಥೆಯನ್ನು ಅಷ್ಟೇ ಸರಳವಾಗಿ ಚಿತ್ರಿಸಿ ಕನ್ನಡಿಗರ ಮನ ಮುಟ್ಟಿಸುವಲ್ಲಿ ಸಫಲವಾದ ಚಿತ್ರ ರಾಜ್ ಅವರ ಎರಡನೇ ಚಿತ್ರಮಣಿಯಾಗಿ ಕರುನಾಡಿನ ದೇವತೆಯ ಕೊರಳ ಮಾಲೆಗೆ ಸೇರಿಕೊಂಡಿತು..


ಮುಂದೆ ಇನ್ನೊಂದು ಚಿತ್ರದೊಂದಿಗೆ ಬರುವೆ.. !

Sunday, September 18, 2016

ಶಿವನಿಗೆ ಕಣ್ಣು ಕೊಟ್ಟು ಕರುನಾಡಿನ ಕಣ್ಮಣಿಯಾದ ಬೇಡರ ಕಣ್ಣಪ್ಪ - (1954) (ಅಣ್ಣಾವ್ರ ಚಿತ್ರ ೦೧ / ೨೦೭)

ಕರುನಾಡಿನ ಚಿತ್ರರಂಗ ಅರಳುತ್ತಿದ್ದ ಸಮಯ. ಆಗಲೇ ಅನೇಕ ನುರಿತ ಕಲಾವಿದರು ಬೆಳ್ಳಿತೆರೆಯನ್ನು ಆವರಿಸಿದ್ದರು. ಭಕ್ತಿಪ್ರಧಾನ ಚಿತ್ರಗಳು, ಸಾಮಾಜಿಕ ಚಿತ್ರಗಳು, ಐತಿಹಾಸಿಕ ಚಿತ್ರಗಳು ಮೆಲ್ಲ ಮೆಲ್ಲನೆ ಹೆಜ್ಜೆ ಮೂಡಿಸುತ್ತಿದ್ದ ಕಾಲಘಟ್ಟ ಅದು.


ಅಂತಹ ಸಮಯದಲ್ಲಿ ಮೊದಲ ಸಾಮಾಜಿಕ ಚಿತ್ರವನ್ನು ತೆರೆಗೆ ಇತ್ತ ಕರುನಾಡ ರಂಗಭೂಮಿಯ ಪಿತಾಮಹರಲ್ಲಿ ಒಬ್ಬರಾದ ಗುಬ್ಬಿ ವೀರಣ್ಣ ಅವರ ನಿರ್ಮಾಣ ಸಂಸ್ಥೆಯಿಂದ ಮೂಡಿಬಂದ ಚಿತ್ರ ಬೇಡರ ಕಣ್ಣಪ್ಪ.

ಬಿಡುಗಡೆಗೊಂಡ ದಿನಾಂಕ : ೭ ಮೇ ೧೯೫೪
ನಿರ್ಮಾಣ : ಗುಬ್ಬಿ ವೀರಣ್ಣ ಕರ್ನಾಟಕ ಪ್ರೊಡಕ್ಷನ್ಸ್
ನಿರ್ದೇಶನ : ಎಚ್ ಎಲ್ ಏನ್ ಸಿಂಹ
ಹಾಡುಗಳು : ಲಾವಣಿ ವಿಧ್ವಾನ್ ಎಸ್ ನಂಜಪ್ಪ
ಹಿನ್ನೆಲೆ ಗಾಯನ : ಚಿದಂಬರಂ ಎಸ್ ಜಯರಾಮನ್
                         ಎಂ ಎಲ್ ವಸಂತಕುಮಾರಿ
                         ಟಿ ಎಸ್ ಭಗವತಿ
                         ಮೋತಿ
ಛಾಯಾಗ್ರಹಣ : ಎಸ್ ಮಾರುತಿರಾವ್
ಸಂಗೀತ : ಆರ್ ಸುದರ್ಶನಂ

ತಾರಾಗಣ ಎಂದಾಗ.. ಒಮ್ಮೆ ಹಾಗೆ ಕಣ್ಣು ಹಾಯಿಸಿ ಪರದೆಯ ಮೇಲೆ
ಬೆಳ್ಳಿ ಪರದೆಯಲ್ಲಿ ಮೂಡಿದ ರಾಜಕುವರ 
ಮುತ್ತುರಾಜರಾಗಿದ್ದ ನಟನೆಯ ಮುತ್ತು ಕರುನಾಡಿನ ರಾಜಕುವರ ಆಗಿದ್ದು ಈ ಚಿತ್ರದಿಂದ. ಪರದೆಯ ಮೇಲೆ ಅವರ ಹೆಸರು ಮೂಡಿದ್ದು ಕಂಡು ಮನಸ್ಸು ಹಾಯ್ ಎಂದಿತು. ಅವರ ಜೊತೆಯಲ್ಲಿ ಪಂಡರಿಬಾಯಿ, ನರಸಿಂಹರಾಜು, ಜಿ ವಿ ಅಯ್ಯರ್, ರಾಮಚಂದ್ರಶಾಸ್ತ್ರಿ, ಮೊದಲಾದವರು ಪಾತ್ರಗಳನ್ನು ತೆರೆಯ ಮೇಲೆ ಹಂಚಿಕೊಂಡರು.

ಬೆಳ್ಳಿ ಪರದೆಯನ್ನು ಅಲಂಕರಿಸಲು ಬಂದು, ೨೦೭ ಚಿತ್ರಗಳಲ್ಲಿ ಚಿತ್ರರಸಿಕರ ಮನಸ್ಸನ್ನು ಗೆದ್ದು ಹೆಸರಿಗೆ ತಕ್ಕ ಹಾಗೆ ರಾಜಕುಮಾರ್ ಆಗಿ ತಮ್ಮ ಅಭಿಮಾನಿ ದೇವರುಗಳನ್ನು ರಂಜಿಸಲು ಬಂದ ಮೊದಲ ದೃಶ್ಯ.

"ನಲಿಯುವ ಬಾ ಇನಿಯ" ಎನ್ನುವ ಯುಗಳ ಗೀತೆ ರಾಜ್ ಮತ್ತು ಪಂಡರಿಬಾಯಿಯವರ ಮೊದಲ ಗೀತೆಯಾಗುತ್ತದೆ.

ಬೆಳ್ಳಿಪರದೆಯ ಮೇಲೆ ಮೊದಲ ದೃಶ್ಯ - ರಾಜ್ ಎಂಟ್ರಿ 
ಗಂಧರ್ವರ ಲೋಕದ ಮಣಿಮಂತ ಹಾಗೂ ಶರ್ಮಿಷ್ಠಾ ಜೋಡಿಯಿಂದ ಆಗುವ ಒಂದು ಅಚಾನಕ್ ತಪ್ಪಿನ ಸಲುವಾಗಿ
ಶಪಿತಗೊಂಡ ಮಣಿಮಂತ ಮತ್ತು ಶರ್ಮಿಷ್ಠಾ ದುಃಖಿಸುತ್ತಿರುವಾಗ ಪರಮೇಶ್ವರ ಹೇಳುವ ಮಾತು "ಅದೊಂದು ಕೆಟ್ಟ ಘಳಿಗೆ ಎಂದು ವ್ಯಥೆ ಪಡದೆ, ಅದೊಂದು ಮಹಾ ಘಳಿಗೆ ಎಂದು ನೀನೇಕೆ ಸಂತೋಷ ಚಿತ್ತನಾಗಿರಬಾರದು"

ಇಂತಹ ಅಮೋಘ ಅರ್ಥಗರ್ಭಿತ ಸಂಭಾಷಣೆ.. ಕರುನಾಡಿನ ಹೆಮ್ಮೆಯ ಕಲಾವಿದ ಬೆಳ್ಳಿ ತೆರೆಯನ್ನು ಬೆಳಗಲು ಆರಂಭಿಸಿದ ಮಹಾನ್ ಘಳಿಗೆ ಅದು ಆಗಿತ್ತು.

ನಮ್ಮ ಜೀವನದಲ್ಲಿಯೂ ಬರುವ ಅನೇಕ ಕಷ್ಟ, ನಷ್ಟ, ವ್ಯಸನಗಳನ್ನು ಅನುಭವಿಸಿ, ಇದು ನಮ್ಮ ಜೀವನದ ಪಥದಲ್ಲಿ ಮುಂಬರುವ ಶುಭ ಘಳಿಗೆ ಎಂದು ಮುನ್ನುಗ್ಗಬೇಕು ಎನ್ನುವ ತಾರ್ಕಿಕ ಸಂದೇಶ ಕೊಡುವ ಮಹಾನ್ ಪದಗಳ ಜೋಡಣೆ ಎಂದು ನನ್ನ ಅನಿಸಿಕೆ

ದಿಣ್ಣಪ್ಪ ಹಾಗೂ ನೀಲರಾಗಿ ಭುವಿಯಲ್ಲಿ ಬೇಡರ ಕುಲದಲ್ಲಿ ಜನಿಸುವ ದೃಶ್ಯದಿಂದ ಆರಂಭಗೊಳ್ಳುತ್ತದೆ.

ಬೇಡರ ಕುಲದಲ್ಲಿ ಹುಟ್ಟಿ ದೊಡ್ಡವರಾದ ಮೇಲೆ ಮದುವೆಯ ಈಗಿನ ಆರತಕ್ಷತೆಯನ್ನು ಹೋಲುವಂತೆ, ವಧುವರರರಿಗೆ ಮತ್ತು ಬಂಧು ಬಾಂಧವರಿಗೆ ಮನೋರಂಜನಾ ಕಾರ್ಯಕ್ರಮವಾಗಿ ಮೂಡಿಬರುವ ದೃಶ್ಯದಲ್ಲಿ ನೃತ್ಯ, ಸಂಗೀತ ಸೊಗಸಾಗಿದೆ.

ಆರಂಭಿಕ ದೃಶ್ಯದಲ್ಲಿ ತಮ್ಮ ಹಿರಿಯಜ್ಜನನ್ನು ಊಟಕ್ಕೆ ಕರಿಯುವ ದೃಶ್ಯದಲ್ಲಿನ ಪಂಡರಿಬಾಯಿಯವರ ತುಂಟತನ ಇಷ್ಟವಾಗುತ್ತದೆ.

ನೂತನ ದಂಪತಿಗಳು ಮನೆ ಹಿರಿಯನನ್ನು ಊಟಕ್ಕೆ ಕರೆವ ದೃಶ್ಯ 
ಪಂಡರಿಬಾಯಿ.. ರಾಜ್ ಕರುನಾಡಿನ ನಂ. ೧ ನಟ ಎನ್ನುತ್ತಿದ್ದಾರೆಯೇ 
ನಾಯಕ ಪಟ್ಟ ಯಾರಿಗೆ ಬೇಡ, ಅದಕ್ಕಾಗಿ ಯಾವ ರೀತಿಯಲ್ಲಿ ರಾಜಕೀಯ ಮಾಡುತ್ತಾರೆ ಇದರ ಒಂದು ಸಣ್ಣ ಝಲಕ್ ಕಾಡಿನಲ್ಲಿ ನೆಡೆಯುವ ರಾಮ್ಯ ಮತ್ತು ದಿಣ್ಣನ ಹೊಡೆದಾಟದಲ್ಲಿ  ಅಚ್ಚುಕಟ್ಟಾಗಿ ಚಿತ್ರಿಸಿದ್ದಾರೆ.

ಇಡೀ ತಂಡ ದಿಣ್ಣ ಹಾಗೂ ನೀಲರನ್ನು ಬಹಿಷ್ಕರಿಸಿದಾಗ ದಿಣ್ಣ ತನ್ನ ಮಡದಿಗೆ ಹೇಳುವ ಮಾತು "ಕೈ ಹಿಡಿದವಳು ಹೂಂ ಅಂತ ಧೈರ್ಯ ಕೊಟ್ಟರೆ ಪ್ರಪಂಚಾನೇ ಗೆಲ್ಲಬಹುದು"

ಈ ಮಾತಿನಲ್ಲಿ ಗಂಡ ಹೆಂಡತಿಯಿಂದ ಅಪೇಕ್ಷೆ ಪಡುವ ಸ್ಫೂರ್ತಿ ಮತ್ತು ಹೆಂಡತಿಗೆ  ಗಂಡನ ಮೇಲೆ ಇರುವ ಭರವಸೆಯ ಸಂಕೇತ ಕಾಣುತ್ತದೆ 

ರಾಜ್ ಹಾಗೂ ಪಂಡರಿಬಾಯಿಯವರ ಅಭಿನಯ ಸರಳವಾಗಿ ಮೂಡಿ ಬಂದಿದೆ. ಆಗಲೇ ಅನೇಕ ಚಿತ್ರಗಳಲ್ಲಿ ಅಭಿನಯಿಸಿದ್ದರು ಪಂಡರೀಬಾಯಿಯವರು ರಾಜ್ ಅವರಿಗೆ ಸಾತ್ ನೀಡುತ್ತಲೇ ಗುಪ್ತಗಾಮಿನಿಯಾಗಿ ಅಭಿನಯಿಸಿದ್ದಾರೆ. ರಾಜ್ ಕೂಡ ತಮ್ಮ ಮೊದಲ ಚಿತ್ರ ಎನ್ನುವ ಒಂದು ಸಣ್ಣ ಸುಳುಹನ್ನು ಕೊಡದೆ ಲೀಲಾಜಾಲವಾಗಿ ನಟಿಸಿದ್ದಾರೆ.
ಮುದ್ದಾಗಿ ಕಾಣುವ ಕರುನಾಡಿನ ತಾಯಿ ಪಂಡರಿಬಾಯಿ 
ಇತ್ತ.. ಬೇಡರ ಗುಂಪು ತಮ್ಮನ್ನು ಬಹಿಷ್ಕರಿಸಿದ ಮೇಲೆ, ಉಟ್ಟ ಬಟ್ಟೆ,  ಶಿವನ ಚಿತ್ರಪಟವನ್ನು, ಮತ್ತು ತಮ್ಮ ಚೂರು ಪಾರು ಚಿಂದಿ ಬಟ್ಟೆಯನ್ನು ಹೊತ್ತು ಬೇರೆಡೆಗೆ ಬರುತ್ತಾರೆ.

ನೀಲ ಪಾತ್ರಧಾರಿ ಪಂಡರೀಬಾಯಿಯವರು ತಮ್ಮ ಪತಿ ದಿಣ್ಣ ಕಾಡಿಗೆ ಹೊರಟಾಗ "ನಾನು ಬರಬೇಕು ಊಂ ಊಂ ಎಂದು ಹೇಳುವ ದೃಶ್ಯದಲ್ಲಿ ಮುದ್ದಾಗಿ ಕಾಣುತ್ತಾರೆ..

ಸಾರ್ವಕಾಲಿಕವಾಗಿರುವ ಹೆಣ್ಣು ಗಂಡಿನ ಆಕರ್ಷಣೆಯ ದೃಶ್ಯವಾಗಿ ಕೈಲಾಸ ಶಾಸ್ತ್ರಿ ಮತ್ತು ನೃತ್ಯಗಾತಿ ರಾಣಿ ಮೂಡಿ ಬಂದಿದೆ.
"ದಾರಿ ಕಾಣದೆ ಬಲು ನೊಂದೆ" ಈ ಹಾಡಿನಲ್ಲಿ ಆ ಕಾಲದ ನೃತ್ಯ, ಒನಪು, ವಯ್ಯಾರ ದೃಶ್ಯಕ್ಕೆ ತಕ್ಕನಾಗಿ ಮೂಡಿದೆ.

ಕೈಲಾಸ ಶಾಸ್ತ್ರೀಯ ಪಾತ್ರದಲ್ಲಿ ಜಿ ವಿ ಅಯ್ಯರ್ ಅವರದು ಪರಕಾಯ ಪ್ರವೇಶವೇ ಆಗಿದೆ "ಕೈಲಾಸ-ಪತಿ ಅನುಗ್ರಹವಾಗಲಿ" ಈ ಸಂಭಾಷಣೆಯಲ್ಲಿ ಕೈಲಾಸ ಎಂದರೆ ಕೈಲಾಸ ಶಾಸ್ತ್ರಿ ಮತ್ತು ಪತಿ ಎಂದರೆ ತಾನು ರಾಣಿಗೆ ಪತಿಯಾದೇನು ಎನ್ನುವ ಆಸೆಯನ್ನು ಸೂಕ್ಷವಾಗಿ ಕೈಲಾಸ ಎಂದು ಹೇಳಿ ತುಸು ನಿಧಾನವಾಗಿ ಪತಿ ಸೇರಿಸುತ್ತಾರೆ.
ರಾಜು & ಅಯ್ಯರ್ 

ಮದುವೆ ಆಗಿದ್ದರೂ ಪರಸ್ತ್ರಿ ವ್ಯಾಮೋಹ, ಅದನ್ನು ವ್ಯಕ್ತ ಪಡಿಸುವ ರೀತಿ ಜಿ ವಿ ಅಯ್ಯರ್ ಗೆಲ್ಲುತ್ತಾರೆ .. ಅದಕ್ಕೆ ಅಡ್ಡಿ ಪಡಿಸುವ ಪಾತ್ರದಲ್ಲಿ ನರಸಿಂಹರಾಜು ನಗೆ ಕಡಲನ್ನು ಎಬ್ಬಿಸುತ್ತಾರೆ.

ಹಾಸ್ಯ ಭರಿತ ದೃಶ್ಯ ನರಸಿಂಹರಾಜು, ಜಿವಿ ಅಯ್ಯರ್ ಮತ್ತು ಸಂಧ್ಯಾ 

ನರಸಿಂಹರಾಜು ಅವರ ವಿಭಿನ್ನ ಅಭಿನಯ.. ಹಾಸ್ಯದೌತಣ 
ತನ್ನ ಚಿಕ್ಕಪ್ಪ ಕೈಲಾಸ ಶಾಸ್ತ್ರಿಯವರ ಪರಸ್ತ್ರಿ ವ್ಯಾಮೋಹದ ಬಗ್ಗೆ ಅರಿವಿದ್ದ ಕಾಶಿ ಪಾತ್ರಧಾರಿ ನರಸಿಂಹರಾಜು ತಮ್ಮ ಚಿಕ್ಕಪ್ಪನನ್ನು ಗೋಳು ಹುಯ್ದುಕೊಳ್ಳುವ ದೃಶ್ಯಗಳು ಸುಂದರವಾಗಿ ಮೂಡಿ ಬಂದಿವೆ.

ಶಾಸ್ತ್ರಿ ಮನೆಯ ಮುಂದೆ ನೃತ್ಯಗಾತಿ ರಾಣಿ ಮತ್ತು ಅವಳ ಅಮ್ಮ ಹೋಗುತ್ತಿದ್ದಾಗ, ಕಾಶಿ ಅವರನ್ನು ಮಾತಾಡಿಸುತ್ತಾರೆ.
ಬಿಸಾಡಿದಂತೆ ಮಾತಾಡುವ ಕಾಶಿಯನ್ನು ಕಂಡು ಅವರ ಚಿಕ್ಕಮ್ಮ .
"ಯಾರೋ ಅದು ಕಾಶಿ"
"ಇವರು ನಿತ್ಯ ಸುಮಂಗಲಿಯರು ಚಿಕ್ಕಮ್ಮ"
"ಅಂದರೆ"
"ಅಂದರೆ ಮುತ್ತೈದೆಯರು" ಅಂತ ಹೇಳಿ ಕಿಸಕ್ ಅಂತ ನಗ್ತಾರೆ
"ಮುತ್ತೈದೆಯರನ್ನು ಬೀದೀಲಿ ನಿಲ್ಲಿಸಿ ಮಾತಾಡಿಸಿ ಹಾಗೆ ಕಳಿಸೋದೇ, ಕರೆದಿದ್ದರೇ ಅರಿಶಿನ ಕುಂಕುಮ ಕೊಡ್ತಿದ್ದೆ.. ಈಗಲಾದರೂ ಕರೆದುಕೊಂಡು ಬಾರೋ ಕಾಶಿ"
"ಬಿಡು ಚಿಕ್ಕಮ್ಮ..ಮುಂದಿನ ಸಾರಿ ಕರೆದರೆ ಆಯ್ತು, ಯಾವಾಗಲೂ ಬೀದೀಲೇ ಸಿಗ್ತಾರೆ"

ಎಷ್ಟು ಸರಳವಾದ ಆದರೆ ಅರ್ಥಗರ್ಭಿತವಾದ ಸಂಭಾಷಣೆ.. ಎಲ್ಲೂ ಎಲ್ಲೇ ಮೀರಿಲ್ಲ.. ಉದಾಸೀನತೆ, ಆಕ್ರೋಶ, ತಮ್ಮ ಮನೆಗೆ ಮಾರಿಯಾಗಬಹುದಾದ ಆ ನೃತ್ಯಗಾತಿ ಮತ್ತು ಆಕೆಯ ಅಮ್ಮನ ಮೇಲಿನ ದ್ವೇಷ, ಜೊತೆಯಲ್ಲಿ ತನ್ನ ಚಿಕ್ಕಮ್ಮನ ಮುಗ್ಧತನ ಎಲ್ಲವನ್ನು ಕಾಶಿ ಈ ಸರಳ ಸಂಭಾಷಣೆಯಲ್ಲಿ ಒಪ್ಪಿಸಿದ್ದಾರೆ.

ಸಂಭಾಷಣಕಾರನಿಗೆ ನಮೋನಮಃ.

ಶಾಸ್ತ್ರಿ ಬೇಡರ ದಿಣ್ಣನಿಗೆ ಡಿಕ್ಕಿ ಹೊಡೆದಾಗ.. ದಿಣ್ಣ ಹೆದರದೆ ಶಾಸ್ತ್ರಿಗೆ ಬಯ್ಗುಳ ನೀಡಿ, ಒಂದು ಪೆಟ್ಟು ಕೊಡುವ ದೃಶ್ಯದಲ್ಲಿ ಕರುನಾಡಿನ ಮಹಾನ್ ಪ್ರತಿಭೆಗಳು ರಾಜ್ ಮತ್ತು ಜಿ ವಿ ಅಯ್ಯರ್ ಸಮಾಗಮಗೊಂಡಿದೆ.
ರಾಜ್ ಮತ್ತು ಜಿವಿ ಅಯ್ಯರ್ ತೆರೆಯ ಮೇಲಿನ ಸಂಗಮ 
ಶಾಸ್ತ್ರೀ ನೃತ್ಯಗಾತಿ ರಾಣಿಯ ಮನೆಯೊಳಗೆ ಬರುವಾಗ "ಕೃಷ್ಣಾ ನೀ ಬೇಗನೆ ಬಾರೋ" ಹಿನ್ನೆಲೆ ವಾದ್ಯ ಸಂಗೀತದಲ್ಲಿ ಮೂಡಿ ಬರುತ್ತದೆ.. ಸೂಪರ್ ಸಂಯೋಜನೆ.
ಶಾಸ್ತ್ರಿ, ರಾಣಿ ಮತ್ತು ಸುಂದರಿ.. 
ಶಾಸ್ತ್ರೀಯ ಪರಸ್ತ್ರೀ ವ್ಯಾಮೋಹ, ರಾಣಿಯ ಪರಿಸ್ಥಿತಿಯನ್ನು ಉಪಯೋಗಿಸಿಕೊಳ್ಳುವ ಹವಣಿಕೆ, ಅವಳ ಅಮ್ಮ ಶಾಸ್ತ್ರೀಯ ಈ ಮೋಹವನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳುವ ಯೋಜನೆ ಚುಟುಕಾಗಿ ಸೊಗಸಾಗಿ ಸಂಯೋಜಿಸಿದ್ದಾರೆ.

ಇಡೀ ಚಿತ್ರದಲ್ಲಿ ಕಪ್ಪು ಬಿಳುಪಿನಲ್ಲಿ ಮೂಡಿಬಂದ ಛಾಯಾಗ್ರಹಣ ಸೊಗಸಾಗಿದೆ.
ಸುಂದರ ಛಾಯಾಗ್ರಹಣ 

ಬೇಟೆ ಸಿಗದೇ, ನಿರಾಶರಾಗಿ ಕಳವಳ ಪಡುವಾಗ ಬರುವ ಹಾಡು "ಆಶಾ ಗಗನದಿ ನಿರಾಶೆ ಮೋಡವು" ಅರ್ಥಗರ್ಭಿತವಾಗಿದೆ. ಈ ಹಾಡಿನಲ್ಲಿ "ಆಡುವಾಗ ನೀಡುವಾಗ ಕಾಡೆಲ್ಲಾ ನೆಂಟರು"  ಎಂಥಹ ಮಾತು.. ವಾಹ್ ಸೂಪರ್

ಕಾಡಿನಲ್ಲಿ ಬೇಡರ ದಿಣ್ಣ ಬೇಟೆ ಸಿಗದೇ ಒದ್ದಾಡುತ್ತಿದ್ದಾಗ ಶಿವ ಮಾರುವೇಷದಲ್ಲಿ ಶಿವಪ್ಪನಾಗಿ ದಿಣ್ಣನ ಬಳಿ ಬಂದು.. ಸಮಾಧಾನ ಪಡಿಸುತ್ತಾ "ಕತ್ತಲು ಬೆಳಕು ಇದ್ದೇ ಇರುತ್ತದೆ ಜೀವನ ಅಂದರೆ"

ಮಾರುವೇಷದಲ್ಲಿ ಶಿವಪ್ಪ ಬೇಡರ ದಿಣ್ಣನ ಜೊತೆಯಲ್ಲಿ 
ಎಷ್ಟು ನಿಜ ಆಲ್ವಾ.. ಕಷ್ಟಗಳು ಬರುತ್ತವೆ ಅದರ ಹಿಂದೆ ಅಷ್ಟೇ ತೂಕದ ಸುಖವೂ ಬರುತ್ತದೆ ಎನ್ನುವ ನೀತಿ ಮಾತುಗಳು. ಜೀವನದಲ್ಲಿ ಕಷ್ಟಗಳು ಬಂದಾಗ ಕುಗ್ಗದೆ ಸಾಗಬೇಕು ಎನ್ನುವ ತಾತ್ವಿಕವಾದ ಮಾತು. 

ಹಾಗೆಯೇ ಹಾಡುತ್ತಾ ಸಾಗುವ ಶಿವಪ್ಪ
"ಮಾಯೆಗೆ ಸಿಲುಕಿ ಮರುಳಾದೆ ಮನುಜ..
ಭರವಸೆ ಬಿಡದೆ ಗುರಿ ಸಾಧಸೋ
ದೇವನಿರುವನು ನಿನ್ನಲಿ ಮನುಜ"

ಸುಂದರ ಸಂದೇಶ ಪೂರಿತ ಹಾಡು.

ಬಹುಶಃ ಆರಂಭ ಈ ರೀತಿಯಿದ್ದರಿಂದಲೇ ಇರಬೇಕು ರಾಜ್ ಅವರ ಸರಿ ಸುಮಾರು ಎಲ್ಲಾ ಚಿತ್ರಗಳಲ್ಲಿಯೂ ಒಂದಲ್ಲ ಒಂದು ಸಂದೇಶ ಹೊತ್ತು ತರುತ್ತಲೇ ಇತ್ತು.

ದಿಣ್ಣನಿಗೆ ಬೇಟೆ ಸಿಗದೇ.. ಒದ್ದಾಡುತ್ತಾ ಇರುವಾಗ.. ಗಾಳಿ ಮಳೆಗೆ ಸಿಲುಕಿ ಶಿವನ ಆಲಯಕ್ಕೆ ಬರುತ್ತಾರೆ.. ಕತ್ತಲು.. ಎಡವುತ್ತಾ ತಡವುತ್ತಾ ಸೀದಾ ಶಿವನ ಲಿಂಗದ ಮೇಲೆ  ಅರಿವಿಲ್ಲದೆ ಕೂತು ಬಿಡುತ್ತಾರೆ . ಅಲ್ಲಿಯೇ ಇದ್ದ ಬಿಲ್ವ ಪಾತ್ರೆಯನ್ನು ಲಿಂಗದ ಮೇಲೆ ಹಾಕುತ್ತಾ ಇರುತ್ತಾನೆ

ಬೆಳಿಗ್ಗೆ ಗುಡಿಯನ್ನು ಶುದ್ಧ ಮಾಡಲು ಕಾಶಿ ಬರುತ್ತಾರೆ.. ಆಗ ಕಾಶಿ ಮತ್ತು ಬೇಡರ ದಿಣ್ಣನ ಸಂಭಾಷಣೆ ಚುಟುಕು ಹಾಗೂ ಸೊಗಸು.
ರಾಜ್ ಮತ್ತು ನರಸಿಂಹರಾಜು ಬೆಳ್ಳಿತೆರೆಯ ಮೇಲೆ ಮೊದಲಬಾರಿಗೆ ಬಂದದ್ದು 

ದೇವರ ಬಗ್ಗೆ ಒಲವಿರದ ನಂಬಿಕೆಯಿಲ್ಲದ ಬೇಡರ ದಿಣ್ಣ, ಕಾಶಿಯ ಮಾತಿನಂತೆ ಶಿವನ ಧ್ಯಾನ ಮಾಡುತ್ತಾ ಕೂರುತ್ತಾರೆ.
ಕರುನಾಡಿನಲ್ಲಿ ಸದಾ ಮೊಳಗುವ ಅಮರ ಗೀತೆ "ಶಿವಪ್ಪ ಕಾಯೋ ತಂದೆ". 

ಶಿವನ ಕೃಪೆಯಿಂದ ಧ್ಯಾನ ಮಾಡಿ ಸ್ತುತಿಸಿದ ಮೇಲೆ.. ಆತನಿಗೆ ಬೇಟೆಯಾಗಿ ಮೊಲಗಳು ಕಾಣುತ್ತವೆ. ಆಗಿನಿಂದ ಶಿವಭಕ್ತನಾಗುತ್ತಾನೆ ಬೇಡರ ದಿಣ್ಣ.

"ನಿನ್ನ ಧ್ಯಾನದಲ್ಲಿ ಅದೇನು ಶಕ್ತಿ ಅಡಗಿದೆಯೋ ಶಿವಪ್ಪ. ರೋಮಾಂಚನವಾಗುತ್ತದೆ.. ಅಯ್ಯೋ ನಿನ್ನ ಬಿಟ್ಟು ಹೋಗೋಕೆ ಮನಸೇ ಇಲ್ಲವಲ್ಲ ಪ್ರಭು.."

"ಹಾ.. ಎಷ್ಟು ಗಾಳಿ.. ಚಳಿಯಾಗುತ್ತಲೋ ಶಿವಪ್ಪ ನಿನಗೆ.. ಇರು ಇರು ಎಂದು ತನ್ನ ವಸ್ತ್ರವನ್ನು ಶಿವಲಿಂಗಕ್ಕೆ ಹೊದ್ದಿಸಿ ಹಾ ಈಗ ಬೆಚ್ಚಗಿರುತ್ತದೆ... " ಎಂದು ಹೇಳುವಾಗ ರಾಜ್ ಅವರ ಅಭಿನಯ ಸೊಗಸು ಅಂದರೆ ಸೊಗಸು.

ಮಾರುವೇಷದಲ್ಲಿದ್ದ ಶಿವಪ್ಪ.. ಬೇಡರ ದಿಣ್ಣನ ಗುಡಿಸಲಿಗೆ ಬಂದು "ಅವ್ವ.. ನಮ್ಮ ಒಡೆಯ ದಿಣ್ಣಪ್ಪ ಕಳಿಸಿದರು.. ಒಡವೆ ಬಟ್ಟೆ ಧಾನ್ಯ ಇದೆ.. ಸರಿಯಾಗಿದೆಯಾ ನೋಡಿಕೊಳ್ಳವ್ವ" ಎಂದಾಗ ..
ದಿಣ್ಣಪ್ಪ ನಿಮಗೆ ಕೊಡಪ್ಪ ಅಂತ ಹೇಳಿದ್ರು
ನೋಡ್ರವ್ವ ನಿಮ್ಮ ಗಂಟು ಸರಿಯಾಗಿದೆಯೇ 
ನೀಲ "ನಾವೇ ಬೇಡಿ ತಿನ್ನುವವರು.. ಆಳನ್ನು ಇಟ್ಟುಕೊಳ್ಳೋದೇ.. ತಮಾಷೆ ಬೇಡ ಈ ಗಂಟು ಯಾರದೋ ಏನೋ ತಪ್ಪಿ ಬಂದಿದ್ದೀಯಾ.. "ಅವರವರ ಗಂಟು ಅವರಿಗೆ" ಹೇಳುವ ಸಂಭಾಷಣೆ ಸೂಪರ್

ಬಡತನದಲ್ಲಿ ಬೇಯುತ್ತಿದ್ದರು.. ತಮ್ಮದಲ್ಲದ ವಸ್ತುವಿಗೆ ಆಸೆ ಪಡದ ಆ ಗುಣವನ್ನು ಪ್ರತಿನಿಧಿಸುವ ಈ ದೃಶ್ಯ ಕಾಡುತ್ತದೆ 

ದಿಣ್ಣನ ವಸ್ತ್ರವನ್ನು ತೋರಿಸಿ ಇದು ನಿಮ್ಮ ಯಜಮಾನರದೇ ಅಲ್ಲವೇ ತಾಯಿ.. ಎಂದಾಗ.. ವಿಧಿಯಿಲ್ಲದೇ ಒಪ್ಪಿಕೊಳ್ಳುತ್ತಾಳೆ ನೀಲ.. ಆಗ ಹೊಸ ವಸ್ತ್ರವನ್ನು ಧರಿಸಿ.. ದೇವರಿಗೆ ನಮಸ್ಕರಿಸಿ "ದಯಾಮಯ ಈಶ" ಎಂದು ಹಾಡುತ್ತಾರೆ.

ಇತ್ತ ಬೇಟೆ ಸಿಕ್ಕ ಮೇಲೆ.. ಶಿವನಿಗೆ ತಾನು ಕೊಟ್ಟ ಮಾತಿನಂತೆ.. ಒಂದು ಮೊಲವನ್ನು ಹದವಾಗಿ ಬೇಯಿಸಿ ನೈವೇದ್ಯವಾಗಿ ಅಲ್ಲಿ ಇಡುತ್ತಾನೆ.

ಆಗ ಅಲ್ಲಿಗೆ ಬರುವ ಕಾಶಿಗೆ.. ಅಪ್ಪ ನಿಮ್ಮ ಮಾತಿನಂತೆ ನಾ ಧ್ಯಾನ ಮಾಡಿದೆ ನೀನೆ ನನ್ನ ಗುರು.. ಇಂದಿನಿಂದ ನೀನೆ ನಾನು ನಾನೇ ನೀನು ಎಂದು ಆಲಂಗಿಸಿಕೊಳ್ಳುತ್ತಾನೆ.

ಪ್ರಚಂಡ ಪ್ರತಿಭೆಗಳ ಆಲಿಂಗನ 

ಅಮೋಘ ಪ್ರತಿಭೆಗಳು 
ಹೀಗೆ ದೇವರನ್ನು ನಂಬದ ಬೇಡರ ದಿಣ್ಣ ಶಿವಭಕ್ತನಾಗುತ್ತಾನೆ. ಅತ್ತ ಶಿವಾಲಯದಲ್ಲಿ ನಿತ್ಯವೂ ಪೂಜಿಸುವ ಕೈಲಾಸ ಶಾಸ್ತ್ರಿ ಸ್ತ್ರೀ ವ್ಯಾಮೋಹಕ್ಕೆ ಬಿದ್ದು ದೇವರ ಆಭರಣ ಕಂಠಿಹಾರವನ್ನು ಕದ್ದು. ಬೇಡರ ದಿಣ್ಣನ ಕೊರಳಿಗೆ ಅಪವಾದವನ್ನು ಸುತ್ತುತ್ತಾರೆ .

ಊರ ಪ್ರಮುಖರ ಸಮಕ್ಷಮದಲ್ಲಿ ವಿಚಾರಣೆಯಾದಾಗ.. ಬೇಡರ ದಿಣ್ಣ ಶಿವನ ದೇವಾಲಯಕ್ಕೆ ತಾನೇ ಹೋಗಿ ನೈವೇದ್ಯವಾಗಿ ಮೊಲದ ಮಾಂಸವನ್ನು ಇಟ್ಟೆ ಎಂದು ಒಪ್ಪಿಕೊಳ್ಳುತ್ತಾನೆ,  ಆದರೆ ಕಂಠಿಹಾರದ ಬಗ್ಗೆ ತನಗೇನು ತಿಳಿಯದು ಎಂದು ಹೇಳಿದಾಗ ಅವನ ಮಾತನ್ನು ನಂಬದೆ ಊರ ಪ್ರಮುಖ ದಿಣ್ಣನಿಗೆ ಶಿಕ್ಷೆ ವಿಧಿಸುತ್ತಾರೆ..

ದಿಣ್ಣನನ್ನು ಮರಕ್ಕೆ ಕಟ್ಟಿ ಹೊಡೆಯುತ್ತಿದ್ದಾಗ "ಶಿವನೇ ಎಂದೊಡನೆ ಮುಂದೆ ಮೋಹವು ಹರಿಯುತಿದೆ" ಗಾನ ಮೂಡಿ ಬರುತ್ತದೆ.

ಆಗ ಕೈಲಾಸ ಶಾಸ್ತ್ರೀಯ ಮನೆಗೆ ಓಡಿ ಬರುವ ದಿಣ್ಣನ ಮಡದಿ ನೀಲ ತನ್ನ ಪತಿ ನಿರ್ದೋಷಿ ಎಂದು ಹೇಳಿದರೂ ಕೇಳದೆ.. ನೀ ಮನೆಯೊಳಗೇ ಬಂದದ್ದು ತಪ್ಪು.. ಮನೆ ಮೈಲಿಗೆಯಾಯಿತು ಎಂದು ಶಾಸ್ತ್ರೀ ಹೇಳುತ್ತಾರೆ.

"ನಿಮಗೆ ಮಡಿ ಮೈಲಿಗೆ ಸಮಸ್ಯೆ ಆದರೆ, ನಮಗೆ ಜೀವದ ಸಮಸ್ಯೆ" ಇಂತಹ ಚುಟುಕು ಚುರುಕು ಸಂಭಾಷಣೆ ಈ ಚಿತ್ರದುದ್ದಕ್ಕೂ ಇದೆ. ಇಷ್ಟವಾಗುತ್ತದೆ.

ತಮ್ಮ ಕಷ್ಟ ತಮಗೆ.. ಬಡವರ ಕಷ್ಟ ಸಿರಿವಂತರಿಗೆ ಕಾಣದು ಎನ್ನುವ ಮಾತು ಇಣುಕುತ್ತದೆ. 

ಇತ್ತ.. ಕಂಠಿಹಾರ ಪಡೆದ ಮೇಲೆ ನೃತ್ಯಗಾತಿ ಶಾಸ್ತ್ರಿಯನ್ನು ರಂಜಿಸಲು "ಸಾಕು ಸಾಕು ನವ ಮೋಹನ" ಹಾಡಿನ ಜೊತೆ ನೃತ್ಯ ಸಾಗುತ್ತದೆ.. ಶಾಸ್ತ್ರೀಯ ಆಷಾಡಭೂತಿ ತನವನ್ನು ಊರ ಪ್ರಮುಖರಿಗೆ ತೋರಿಸಲು ಕಾಶಿ ಎಲ್ಲರನ್ನು ಕರೆದು ತಂದಾಗ.. ಶಾಸ್ತ್ರೀ ದೇವರು ಬಂತು ಎಂದು ನಾಟಕ ಮಾಡಿ ತಪ್ಪಿಸಿಕೊಳ್ಳುತ್ತಾರೆ.

ಮತ್ತೆ ದಿಣ್ಣ ಶಿವನ ಮೊರೆ ಹೊಕ್ಕು "ಎನ್ನೊಡೆಯ ಭಾವ ಬಂದನಾ ಹರಿಸೋ" ಹಾಡು.. ಇದಾದ ಮೇಲೆ.. ಶಾಸ್ತ್ರೀಯ ನಿಜ ಸ್ವರೂಪ ಕಾಶಿ ಅನಾವರಣ ಮಾಡುತ್ತಾನೆ.. ಊರ ಜನತೆ ಶಾಸ್ತ್ರಿಗೆ ಹಿಗ್ಗಾಮುಗ್ಗಾ ಚಚ್ಚುತ್ತಾರೆ. ಮತ್ತು ಬೇಡರ ದಿಣ್ಣ ನಿರಪರಾಧಿ ಎಂದು ತೀರ್ಮಾನಿಸುತ್ತಾರೆ..

ತಕ್ಷಣ ಶಿವಾಲಯಕ್ಕೆ ಓಡಿ ಬರುವ.. ದಿಣ್ಣ "ಕಾಯೋ ತಂದೆಯೇ ದೇವಾ ಕರುಣಿಸಿ ದಯ ತೋರೋ ತಂದೆಯೇ" ಎಂದು ಸ್ತುತಿಸುತ್ತಾರೆ..

ಈ ಹಾಡು ಮುಗಿದ ತಕ್ಷಣ.. ಶಿವಲಿಂಗದಲ್ಲಿ ಕಣ್ಣು ಮೂಡಿಬರುತ್ತದೆ.. ಅದನ್ನು ಕಂಡು ಆನಂದ ಪಡುತ್ತಿದ್ದಂತೆ.. ಒಂದು ಕಣ್ಣಿಂದ ರಕ್ತ ಸುರಿಯಲು ಶುರು ಆಗುತ್ತದೆ.. ಗಾಬರಿಗೊಂಡ ದಿಣ್ಣ.. ತನ್ನ ಒಂದು ಕಣ್ಣನ್ನೇ ಕಿತ್ತು ಅಂಟಿಸಿದರೆ.. ಇನ್ನೊಂದು ಕಣ್ಣಿಂದ ರಕ್ತ ಸುರಿಯುತ್ತದೆ.. ಆಗ ತನ್ನ ಇನ್ನೊಂದು ಕಣ್ಣನ್ನು ಕಿತ್ತು ಅಂಟಿಸುತ್ತಾರೆ.
ಮರೆಯಲಾಗದ ದೃಶ್ಯ 
ಆಗ ಪರಮೇಶ್ವರ ಪಾರ್ವತೀ ಸಮೇತನಾಗಿ ಪ್ರತ್ಯಕ್ಷನಾಗಿ ಇಂದಿನಿಂದ ನೀ ದಿಣ್ಣನಿಂದ ಕಣ್ಣಪ್ಪ ಎಂದು ಪ್ರಸಿದ್ಧನಾಗು ಎಂದು ಹರಸುತ್ತಾನೆ..

ಭಕ್ತಿ ಪ್ರಧಾನ ಚಿತ್ರದಲ್ಲಿ ಶುರುವಾದ ರಾಜ್ ಅವರ ಚಿತ್ರಯಾತ್ರೆ.. ಅಮೋಘ ಓಟಕ್ಕೆ ನಾಂದಿ ಹಾಡುತ್ತದೆ.

ಇಡೀ ಚಿತ್ರದಲ್ಲಿ ಒಮ್ಮೆ ಕೂಡ ಅನ್ನಿಸೊಲ್ಲ ಇದು ರಾಜ್ ಅವರ ಮೊದಲ ಚಿತ್ರ ಎಂದು. ವಜ್ರವೊಂದನ್ನು ಭುವಿಯಿಂದ ಬಗೆದು.. ಪ್ರದರ್ಶನಕ್ಕೆ ಇಟ್ಟಂತೆ.. ಸ್ವಾಭಾವಿಕವಾಗಿ ನಟಿಸಿದ್ದಾರೆ ರಾಜ್.. ಈ ಚಿತ್ರ ಮತ್ತು ಮುಂದೆ ಬರುವ ಚಿತ್ರ ಪಾತ್ರಗಳು ರಾಜ್ ಅವರನ್ನು ಪುಟಕ್ಕಿಟ್ಟ ಚಿನ್ನವಾಗಿ ಪರಿವರ್ತಿಸುವಲ್ಲಿ ಸಹಾಯ ಮಾಡುತ್ತದೆ..

ಜಿವಿ ಅಯ್ಯರ್ ನರಸಿಂಹರಾಜು ಅವರ ಜುಗಲ್ ಬಂಧಿ.
ಜಿವಿ ಅಯ್ಯರ್, ನರಸಿಂಹರಾಜು ಮತ್ತು ಸಂದ್ಯಾ ಅವರ ಮಾತಿನ ಚಕಮಕಿ
ಜಿವಿ ಅಯ್ಯರ್, ರಾಣಿ ಮತ್ತು ಆಕೆಯ ತಾಯಿಯ ಜೊತೆಯಲ್ಲಿನ ವಯ್ಯಾರ ಭರಿತ ದೃಶ್ಯಗಳು ಮುದ ನೀಡುತ್ತದೆ.
ರಾಜ್ ಮತ್ತು ನರಸಿಂಹರಾಜು ಅವರ ದೃಶ್ಯ ಸುಂದರವಾಗಿ ಮೂಡಿ ಬಂದಿದೆ.
ಪಂಡರಿಬಾಯಿಯವರ ತೂಕ ಬದ್ಧ ನಟನೆ

ರಾಜ್, ರಾಜು ಮತ್ತು ಅಯ್ಯರ್ ಮೂರು ಅನರ್ಘ್ಯ ರತ್ನಗಳು ಹೊಳೆದ ಈ ಚಿತ್ರಕ್ಕೆ ಅನೇಕ ಪ್ರಶಸ್ತಿಗಳು ಸಿಕ್ಕವು.

ಅರ್ಥ ಗರ್ಭಿತ ಚಿತ್ರದೊಂದಿದೆ ಕರುನಾಡ ಬೆಳ್ಳಿ ಪರದೆಗೆ ಕಾಲಿಟ್ಟ ರಾಜ್ ಅಣ್ಣಾವ್ರು ಆಗುವ ಹಾದಿಯಲ್ಲಿ ಸಾಗುವ ಮೊದಲ ಚಿತ್ರ ಇದು.

ಮತ್ತೆ ಮುಂದಿನ ಚಿತ್ರದೊಂದಿಗೆ ಭೇಟಿ ಆಗುವ.. ಬರುತ್ತೀರಾ ಅಲ್ಲವೇ.. !

Monday, September 12, 2016

ರಾಜೋತ್ಸವ --- ಅರ್ಥಾತ್ ಅಣ್ಣಾವ್ರ ಚಿತ್ರಗಳ ಜೈತ್ರ ಯಾತ್ರೆ...!

ಪುಟ್ಟಣ್ಣ ಕಣಗಾಲ್ ಅವರ ೨೪ ಚಿತ್ರಗಳು ಅಕ್ಷರ ರೂಪದಲ್ಲಿ ಬಂದವು
ಬಾಲಣ್ಣ ಅವರ ಚಿತ್ರಗಳ ಲಹರಿ ಶುರು ಆಗಿದೆ.
ಅಣ್ಣಾವ್ರ ಎಲ್ಲಾ ಚಿತ್ರಗಳನ್ನು ಅಕ್ಷರ ರೂಪದಲ್ಲಿ ಹಿಡಿದಿಡುವ ಸಾಹಸಕ್ಕೆ ಕೈ ಹಾಕುವ ಆಸೆ....
ಹುಚ್ಚೋ ಬೆಪ್ಪೋ ಶಿವನ ಲೀಲೆಯೋ ಅರಿವಾಗುತ್ತಿಲ್ಲ .....

ಹೀಗೊಂದು ಆಸೆ ಮನದಾಳದಲ್ಲಿ ಒಂದು ಚಿಕ್ಕ ಬಿಂದುವಾಗಿ ಮೂಡ ತೊಡಗಿತು.. ನನ್ನ ಆತ್ಮ ಬಂಧುಗಳು ಹತ್ತಿರ ಹೇಳಿಕೊಂಡೆ.. "ಶ್ರೀ.. ವಾಹ್" ಅಂದರು

ನನ್ನ ಆಪ್ತ ಮಿತ್ರರ ಹತ್ತಿರ ಹೇಳಿದೆ.. "ಕಾಯುತ್ತಿರುತ್ತೇವೆ..  ನೀವು ಮಾಡುತ್ತಿರುವುದು ನಿಮಗೆ ರಾಜ್ ಚಿತ್ರಗಳ ಬಗ್ಗೆ ವ್ಯಾಮೋಹ ಅನ್ನಿಸಿದರೂ ಮುಂದಿನ ಪೀಳಿಗೆಗೆ ರಾಜ್ ಎನ್ನುವ ಪ್ರತಿಭಾ ಶಕ್ತಿಯನ್ನು ಅಕ್ಷರಗಳಲ್ಲಿ ಹಿಡಿದಿಡುವ ಒಂದು ಪ್ರಯತ್ನವಾಗಿ ನಿಲ್ಲುತ್ತದೆ " ಅಂದರು..

ಎಷ್ಟರ ಮಟ್ಟಿಗೆ ಯಶಸ್ಸು ಕಾಣತ್ತೇನೆ ಎನ್ನುವ ಗೊಂದಲವಿತ್ತು ಅಣ್ಣಾವ್ರು ಮಲಗಿರುವ ಸ್ಥಳಕ್ಕೆ ಹೋದೆ..... ಕೆಲ ಕ್ಷಣ ಕಣ್ಣು ಮುಂಚೆ ನಿಂತೇ..

"ಶ್ರೀಕಾಂತಾ ಜಮಾಯಿಸಿ ಬಿಡಿ" ಅಂತ ಹೇಳಿದ ಹಾಗೆ ಭಾಸವಾಯಿತು... ಅಣ್ಣಾವ್ರು ಮೈದಡವಿ ಹರಸಿದ್ದಾರೆ ಅನ್ನಿಸಿತು .. ಹಾಗಾಗಿ ಈ ಸಾಹಸ.

ಅಣ್ಣಾವ್ರ ಹತ್ತಿರ ನನ್ನ ಅವರ ಸಂಭಾಷಣೆ ನೆಡೆಯುತ್ತಲೇ ಇರುತ್ತದೆ.. ಅದು ನಿಮಗೆಲ್ಲ ಗೊತ್ತಿರುವ ವಿಷಯವೇ ಅಲ್ಲವೇ..

"ಸಕಲ ಗ್ರಹಗಳ ಬಲ ನೀನೆ ಸರಸಿಜಾಕ್ಷ" ಎನ್ನುವ ಅಣ್ಣಾವ್ರ ಶ್ರುತಿ ಸೇರಿದಾಗ ಚಿತ್ರದ ಕಡೆಯ ದೃಶ್ಯದ ಸಂಭಾಷಣೆಯಂತೆ.. ದೇವರ ಮೇಲೆ ಭಾರ ಹಾಕಿ ಅಭಿಮಾನಿ ದೇವರುಗಳ ದೇವರು ನಮ್ಮ ಕಣ್ಣ ಮುಂದೆಯೇ ೨೦೯ ಚಿತ್ರಗಳಲ್ಲಿ ಆ ಪರಮಾತ್ಮ ಸೃಷ್ಠಿ ಮಾಡಿದ ವಸುಂಧರೆಯನ್ನು, ಭೂಲೋಕ, ಪಾತಾಳ ಲೋಕ, ಸ್ವರ್ಗ, ನರಕ.. ದೇವರು, ದಾನವರು, ರಾಜರು ಮಹಾರಾಜರು, ದಾರ್ಶನಿಕರು, ಸಾಮಾಜಿಕ ಕಳಕಳಿಯುಳ್ಳ ಅರಸರು, ಸಮಾಜಕ್ಕೆ ಹೀಗೆ ಇರಿ ಅನ್ನುವ ಬದಲು.. ಹೀಗೆ ಇದ್ದರೆ ಚೆನ್ನಾ ಎನ್ನುವ ಭಾವ ಹೊತ್ತು ತಂದ ಅನೇಕ ಪಾತ್ರಗಳಲ್ಲಿ ಮನದಲ್ಲಿ ಕೂತಿರುವ ಅಣ್ಣಾವ್ರ ಚಿತ್ರಗಳನ್ನು ನನ್ನ ಮನದ ಕಣ್ಣಿಗೆ ಕಂಡಂತೆ ಅಕ್ಷರಗಳಲ್ಲಿ ಬರೆಯುವ ಒಂದು ದುಸ್ಸಾಹಸ ಶುರು..

ಅಣ್ಣಾವ್ರ ಸಾಲು ಸಾಲು ಚಿತ್ರಗಳ ಪಾತ್ರಗಳಿಂದ ಹೊತ್ತು ತಂದ ಸಂದೇಶಗಳನ್ನು, ಸ್ಫೂರ್ತಿಗಳನ್ನು, ಪಾಠಗಳನ್ನು ನಾ ನೋಡಿ ,ಕಲಿತು, ಅದರಿಂದ ಕಳೆತು, ಮಾಗಿದ ಹಣ್ಣಿನಂತೆ ಸವಿಯಾಗಿ ನನ್ನ ಜೀವನವನ್ನು ಹೀಗೆ ಮಾಡಿಕೊಳ್ಳಬಹುದು ಎಂದು ದಾರಿ ದೀಪವಾಗಿರುವ ಅವರ ಚಿತ್ರಗಳ ಜಲಧಾರೆ ಅಕ್ಷರವರ್ಷವಾಗಿ ನಿಮ್ಮೆಲ್ಲರ ಮುಂದೆ.. ಬರಲಿದೆ

ಕಲ್ಲಿನೊಳಗೆ ಅಡಕವಾಗಿರುವ ಮೂರ್ತಿಯನ್ನು ಕಂಡು ಹಿಡಿದು, ಅದನ್ನು ಸುಂದರವಾದ ಶಿಲ್ಪವನ್ನಾಗಿ ಮಾಡಿದ ಅವರ ಚಿತ್ರಗಳ ನಿರ್ದೇಶಕರು, ಸಾಹಿತಿಗಳು, ಸಂಗೀತ ನಿರ್ದೇಶಕರು, ಛಾಯಾಚಿತ್ರಗ್ರಾಹಕರು, ಸಾಹಸ ನಿರ್ದೇಶಕರು, ಸಹ ನಟ ನಟಿಯರು, ತಂತ್ರಜ್ಞರು, ನೃತ್ಯ ನಿರ್ದೇಶಕರು, ಸಂಕಲನಕಾರರು, ಚಿತ್ರತಂಡದ ಪ್ರತಿಯೊಬ್ಬ ಸಹಾಯಕರು ಮತ್ತು ಇವರೆಲ್ಲರ ಜೀವ.. ಅಣ್ಣಾವ್ರ ಮಾತಿನಲ್ಲಿಯೇ ಅನ್ನದಾತರು ಎನ್ನಿಸಿಕೊಳ್ಳುವ ನಿರ್ಮಾಪಕರು, ಅಣ್ಣಾವ್ರ ಪ್ರತಿ ಚಿತ್ರದ ಕಥೆಯನ್ನು ಕೂಲಂಕುಶವಾಗಿ ಅರ್ಥೈಸಿಕೊಂಡು ಅಣ್ಣಾವ್ರನ್ನು ತ್ರಿವಿಕ್ರಮನಾಗಿ ಬೆಳೆಸಿದ ಅಣ್ಣಾವ್ರ ತಮ್ಮ ವರದಪ್ಪ ಅವರಿಗೂ  ಮತ್ತು ಈ ಸುಂದರ ಅಭಿಮಾನಿದೇವರುಗಳ ದೇವರನ್ನು  ಈ ಭುವಿಗೆ ತಂದ ಅಣ್ಣಾವ್ರ ಅಪ್ಪ ಅಮ್ಮನ ಚರಣಕಮಲಗಳಿಗೆ ಈ ಚಿತ್ರ ಬರಹದ ಜಾತ್ರೆ "ಅರ್ಪಿತಾ"..

ಕರುನಾಡ ತಾಯಿ ಭುವನೇಶ್ವರಿಯ ಕೊರಳ ಮಾಲೆಯನ್ನು ಅಲಂಕರಿಸಿದ ಚಲನಚಿತ್ರ ರತ್ನಮಣಿಗಳು ಈ ಕೆಳಗಿನಂತಿವೆ.

1 1954 ಬೇಡರ ಕಣ್ಣಪ್ಪ
2 1955 ಸೋದರಿ
3 1956 ಭಕ್ತ ವಿಜಯ
4 1956 ಹರಿಭಕ್ತ
5 1956 ಓಹಿಲೇಶ್ವರ
6 1957 ಸತಿ ನಳಾಯಿನಿ
7 1957 ರಾಯರ ಸೊಸೆ
8 1958 ಭೂಕೈಲಾಸ
9 1958 ಶ್ರೀ ಕೃಷ್ಣಗಾರುಡಿ
10 1958 ಅಣ್ಣ ತಂಗಿ
11 1959 ಜಗಜ್ಯೋತಿ ಬಸವೇಶ್ವರ
12 1959 ಧರ್ಮ ವಿಜಯ
13 1959 ಮಹಿಷಾಸುರ ಮರ್ಧಿನಿ
14 1959 ಅಬ್ಬಾ ಆ ಹುಡುಗಿ
15 1960 ರಣಧೀರ ಕಂಠೀರವ
16 1960 ರಾಣಿ ಹೊನ್ನಮ್ಮ
17 1960 ಆಶಾಸುಂದರಿ
18 1960 ದಶಾವತಾರ
19 1960 ಭಕ್ತ ಕನಕದಾಸ
20 1961 ಶ್ರೀಶೈಲ ಮಹಾತ್ಮೆ
21 1961 ಕಿತ್ತೂರು ಚೆನ್ನಮ್ಮ
22 1961 ಕಣ್ತೆರೆದು ನೋಡು
23 1961 ಕೈವಾರ ಮಹಾತ್ಮೆ
24 1961 ಭಕ್ತ ಚೇತ
25 1961 ನಾಗಾರ್ಜುನ
26 1962 ಗಾಳಿಗೋಪುರ
27 1962 ಭೂದಾನ
28 1962 ಸ್ವರ್ಣಗೌರಿ
29 1962 ದೇವಸುಂದರಿ
30 1962 ಕರುಣೆಯೇ ಕುಟುಂಬದ ಕಣ್ಣು
31 1962 ಮಹಾತ್ಮ ಕಬೀರ್
32 1962 ವಿಧಿವಿಲಾಸ
33 1962 ತೇಜಸ್ವಿನಿ
34 1963 ವಾಲ್ಮೀಕಿ
35 1963 ನಂದಾದೀಪ
36 1963 ಸಾಕು ಮಗಳು
37 1963 ಕನ್ಯಾರತ್ನ
38 1963 ಗೌರಿ
39 1963 ಜೀವನ ತರಂಗ
40 1963 ಮಲ್ಲಿ ಮದುವೆ
41 1963 ಕುಲವಧು
42 1963 ಕಲಿತರೂ ಹೆಣ್ಣೇ
43 1963 ವೀರಕೇಸರಿ
44 1963 ಮನ ಮೆಚ್ಚಿದ ಮಡದಿ
45 1963 ಸತಿ ಶಕ್ತಿ
46 1963 ಚಂದ್ರಕುಮಾರ
47 1963 ಸಂತ ತುಕಾರಾಮ
48 1963 ಶ್ರೀರಾಮಾಂಜನೇಯ ಯುದ್ಧ
49 1964 ನವಕೋಟಿ ನಾರಾಯಣ
50 1964 ಚಂದವಳ್ಳಿಯ ತೋಟ
51 1964 ಶಿವರಾತ್ರಿ ಮಹಾತ್ಮೆ
52 1964 ಅನ್ನಪೂರ್ಣ
53 1964 ತುಂಬಿದ ಕೊಡ
54 1964 ಶಿವಗಂಗೆ ಮಹಾತ್ಮೆ
55 1964 ಮುರಿಯದ ಮನೆ
56 1964 ಪ್ರತಿಜ್ಞೆ
57 1964 ನಾಂದಿ
58 1965 ನಾಗಪೂಜ
59 1965 ಚಂದ್ರಹಾಸ
60 1965 ಸರ್ವಜ್ಞಮೂರ್ತಿ
61 1965 ವಾತ್ಸಲ್ಯ
62 1965 ಸತ್ಯ ಹರಿಶ್ಚಂದ್ರ
63 1965 ಮಹಾಸತಿ ಅನುಸೂಯ
64 1965 ಇದೇ ಮಹಾ ಸುದಿನ
65 1965 ಬೆಟ್ಟದ ಹುಲಿ
66 1965 ಸತಿ ಸಾವಿತ್ರಿ
67 1965 ಮದುವೆ ಮಾಡಿ ನೋಡು
68 1965 ಪತಿವ್ರತಾ
69 1966 ಮಂತ್ರಾಲಯ ಮಹಾತ್ಮೆ
70 1966 ಕಠಾರಿವೀರ
71 1966 ಬಾಲನಾಗಮ್ಮ
72 1966 ತೂಗುದೀಪ
73 1966 ಪ್ರೇಮಮಯಿ
74 1966 ಕಿಲಾಡಿ ರಂಗ
75 1966 ಮಧುಮಾಲತಿ
76 1966 ಎಮ್ಮೆ ತಮ್ಮಣ್ಣ
77 1966 ಮೋಹಿನಿ ಭಸ್ಮಾಸುರ
78 1966 ಶ್ರೀ ಕನ್ನಿಕಾಪರಮೇಶ್ವರಿ ಕಥೆ
79 1966 ಸಂಧ್ಯಾರಾಗ
80 1967 ಪಾರ್ವತಿ ಕಲ್ಯಾಣ
81 1967 ಸತಿಸುಕನ್ಯ
82 1967 ಗಂಗೆ ಗೌರಿ
83 1967 ರಾಜಶೇಖರ
84 1967 ಲಗ್ನಪತ್ರಿಕೆ
85 1967 ರಾಜದುರ್ಗದ ರಹಸ್ಯ
86 1967 ದೇವರ ಗೆದ್ದ ಮಾನವ
87 1967 ಬೀದಿ ಬಸವಣ್ಣ
88 1967 ಮನಸ್ಸಿದ್ದರೆ ಮಾರ್ಗ
89 1967 ಬಂಗಾರದ ಹೂವು
90 1967 ಚಕ್ರತೀರ್ಥ
91 1967 ಇಮ್ಮಡಿ ಪುಲಿಕೇಶಿ
92 1968 ಜೇಡರ ಬಲೆ
93 1968 ಗಾಂಧಿನಗರ
94 1968 ಮಹಾಸತಿ ಅರುಂಧತಿ
95 1968 ಮನಸ್ಸಾಕ್ಷಿ
96 1968 ಸರ್ವಮಂಗಳ
97 1968 ಭಾಗ್ಯದೇವತೆ
98 1968 ಬೆಂಗಳೂರು ಮೈಲ್
99 1968 ಹಣ್ಣೆಲೆ ಚಿಗುರಿದಾಗ
100 1968 ಭಾಗ್ಯದ ಬಾಗಿಲು
101 1968 ನಟಸಾರ್ವಭೌಮ
102 1968 ರೌಡಿ ರಂಗಣ್ಣ
103 1968 ಧೂಮಕೇತು (ಚಲನಚಿತ್ರ)
104 1968 ಅಮ್ಮ
105 1968 ಸಿಂಹಸ್ವಪ್ನ
106 1968 ಗೋವಾದಲ್ಲಿ ಸಿ.ಐ.ಡಿ. ೯೯೯
107 1968 ಮಣ್ಣಿನ ಮಗ
108 1969 ಮಾರ್ಗದರ್ಶಿ
109 1969 ಗಂಡೊಂದು ಹೆಣ್ಣಾರು
110 1969 ಮಲ್ಲಮ್ಮನ ಪವಾಡ
111 1969 ಚೂರಿ ಚಿಕ್ಕಣ್ಣ
112 1969 ಪುನರ್ಜನ್ಮ
113 1969 ಭಲೇ ರಾಜ
114 1969 ಉಯ್ಯಾಲೆ
115 1969 ಚಿಕ್ಕಮ್ಮ
116 1969 ಮೇಯರ್ ಮುತ್ತಣ್ಣ
117 1969 ಆಪರೇಷನ್ ಜಾಕ್‍ಪಾಟ್‍ನಲ್ಲಿ ಸಿ.ಐ.ಡಿ. ೯೯೯
118 1970 ಶ್ರೀ ಕೃಷ್ಣದೇವರಾಯ
119 1970 ಕರುಳಿನ ಕರೆ
120 1970 ಹಸಿರು ತೋರಣ
121 1970 ಭೂಪತಿ ರಂಗ
122 1970 ಮಿಸ್ಟರ್ ರಾಜ್‍ಕುಮಾರ್
123 1970 ಭಲೇ ಜೋಡಿ
124 1970 ಸಿ.ಐ.ಡಿ. ರಾಜಣ್ಣ
125 1970 ನನ್ನ ತಮ್ಮ
126 1970 ಬಾಳು ಬೆಳಗಿತು
127 1970 ದೇವರ ಮಕ್ಕಳು
128 1970 ಪರೋಪಕಾರಿ
129 1970 ನಾಡಿನ ಭಾಗ್ಯ
130 1971 ಕಸ್ತೂರಿ ನಿವಾಸ
131 1971 ಬಾಳ ಬಂಧನ
132 1971 ಕುಲಗೌರವ
133 1971 ನಮ್ಮ ಸಂಸಾರ
134 1971 ಕಾಸಿದ್ರೆ ಕೈಲಾಸ
135 1971 ತಾಯಿದೇವರು
136 1971 ಪ್ರತಿಧ್ವನಿ (ಚಲನಚಿತ್ರ)
137 1971 ಸಾಕ್ಷಾತ್ಕಾರ
138 1971 ನ್ಯಾಯವೇ ದೇವರು
139 1971 ಶ್ರೀಕೃಷ್ಣ ರುಕ್ಮಿಣಿ ಸತ್ಯಭಾಮ
140 1972 ಜನ್ಮರಹಸ್ಯ
141 1972 ಸಿಪಾಯಿರಾಮು
142 1972 ಬಂಗಾರದ ಮನುಷ್ಯ
143 1972 ಹೃದಯ ಸಂಗಮ
144 1972 ಕ್ರಾಂತಿವೀರ
145 1972 ಭಲೇ ಹುಚ್ಚ
146 1972 ನಂದಗೋಕುಲ
147 1972 ಜಗಮೆಚ್ಚಿದ ಮಗ
148 1973 ದೇವರು ಕೊಟ್ಟ ತಂಗಿ
149 1973 ಬಿಡುಗಡೆ (ಚಲನಚಿತ್ರ)
150 1973 ಸ್ವಯಂವರ (ಚಲನಚಿತ್ರ)
151 1973 ಗಂಧದ ಗುಡಿ
152 1973 ದೂರದ ಬೆಟ್ಟ
153 1973 ಮೂರೂವರೆ ವಜ್ರಗಳು
154 1974 ಬಂಗಾರದ ಪಂಜರ
155 1974 ಎರಡು ಕನಸು, ಮಂಜುಳಾ
156 1974 ಸಂಪತ್ತಿಗೆ ಸವಾಲ್
157 1974 ಭಕ್ತ ಕುಂಬಾರ
158 1974 ಶ್ರೀ ಶ್ರೀನಿವಾಸ ಕಲ್ಯಾಣ
159 1974 ದಾರಿ ತಪ್ಪಿದ ಮಗ
160 1975 ಮಯೂರ
161 1975 ತ್ರಿಮೂರ್ತಿ
162 1976 ಪ್ರೇಮದ ಕಾಣಿಕೆ
163 1976 ಬಹದ್ದೂರ್ ಗಂಡು
164 1976 ರಾಜ ನನ್ನ ರಾಜ
165 1976 ನಾ ನಿನ್ನ ಮರೆಯಲಾರೆ
166 1976 ಬಡವರ ಬಂಧು
167 1977 ಬಬ್ರುವಾಹನ
168 1977 ಭಾಗ್ಯವಂತರು
169 1977 ಗಿರಿಕನ್ಯೆ
170 1977 ಸನಾದಿ ಅಪ್ಪಣ್ಣ
171 1977 ಒಲವು ಗೆಲವು
172 1978 ಶಂಕರ್ ಗುರು
173 1978 ಆಪರೇಷನ್ ಡೈಮಂಡ್ ರ್ಯಾಕೆಟ್
174 1978 ತಾಯಿಗೆ ತಕ್ಕ ಮಗ
175 1979 ಹುಲಿಯ ಹಾಲಿನ ಮೇವು
176 1979 ನಾನೊಬ್ಬ ಕಳ್ಳ
177 1980 ರವಿಚಂದ್ರ
178 1980 ವಸಂತಗೀತ
179 1981 ಹಾವಿನ ಹೆಡೆ
180 1981 ನೀ ನನ್ನ ಗೆಲ್ಲಲಾರೆ
181 1981 ಭಾಗ್ಯವಂತ
182 1981 ಕೆರಳಿದ ಸಿಂಹ
183 1982 ಹೊಸಬೆಳಕು
184 1982 ಹಾಲು ಜೇನು
185 1982 ಚಲಿಸುವ ಮೋಡಗಳು
186 1983 ಕವಿರತ್ನ ಕಾಳಿದಾಸ
187 1983 ಕಾಮನಬಿಲ್ಲು
188 1983 ಭಕ್ತ ಪ್ರಹ್ಲಾದ
189 1983 ಎರಡು ನಕ್ಷತ್ರಗಳು
190 1984 ಸಮಯದ ಗೊಂಬೆ
191 1984 ಶ್ರಾವಣ ಬಂತು
192 1984 ಯಾರಿವನು
193 1984 ಅಪೂರ್ವ ಸಂಗಮ
194 1985 ಅದೇ ಕಣ್ಣು
195 1985 ಜ್ವಾಲಾಮುಖಿ
196 1985 ಧ್ರುವತಾರೆ
197 1986 ಭಾಗ್ಯದ ಲಕ್ಷ್ಮಿ ಬಾರಮ್ಮ
198 1986 ಅನುರಾಗ ಅರಳಿತು
199 1986 ಗುರಿ
200 1987 ಒಂದು ಮುತ್ತಿನ ಕಥೆ
201 1987 ಶ್ರುತಿ ಸೇರಿದಾಗ
202 1988 ದೇವತಾ ಮನುಷ್ಯ
203 1988 ಶಿವ ಮೆಚ್ಚಿದ ಕಣ್ಣಪ್ಪ
204 1989 ಪರಶುರಾಮ್
205 1992 ಜೀವನ ಚೈತ್ರ
206 1993 ಆಕಸ್ಮಿಕ
207 1994 ಒಡಹುಟ್ಟಿದವರು
208 1994 ಗಂಧದಗುಡಿ ಭಾಗ-೨
209 2000 ಶಬ್ದವೇಧಿ

ಸೂಚನೆ :
೧) "ನಟಸಾರ್ವಭೌಮ" ಇದು ಅಣ್ಣಾವ್ರು ನೂರು ಚಿತ್ರಗಳು ಬಿಡುಗಡೆಗೊಂಡು ಶತಚಿತ್ರಗಳ ನಟ ಎಂದು ಹೆಸರು ಪಡೆದ ಶುಭ ಸಂದರ್ಭದಲ್ಲಿ ತಯಾರಾದ ಒಂದು ಸಾಕ್ಷ್ಯಚಿತ್ರ

೨) ನಾಡಿನ ಭಾಗ್ಯ ಈ ಚಿತ್ರದಲ್ಲಿ ಪುಟ್ಟ ಪಾತ್ರದಲ್ಲಿ ಅಭಿನಯಿಸಿದ್ದಾರೆ..

(ಎಲ್ಲೆಡೆಯೂ ಅವರು ಅಭಿನಯಿಸಿದ್ದು ೨೦೭ ಚಿತ್ರಗಳು ಎಂದಿವೆ.. ಆದರೂ ಪಟ್ಟಿಯಲ್ಲಿನ ಎಲ್ಲಾ ೨೦೯ ಚಿತ್ರಗಳ ಪಾತ್ರಗಳ ಬಗ್ಗೆ ಬರೆವೆ.. ಇದರ ಮಧ್ಯೆದಲ್ಲಿ ಮೇಲೆ ಪಟ್ಟಿಮಾಡಿದ ಚಿತ್ರಗಳಲ್ಲದೆ ಇನ್ನು ಯಾವುದಾದರೂ ಚಿತ್ರದಲ್ಲಿ ಅಣ್ಣಾವ್ರು ಕಂಡು ಬಂದರೆ ಅದನ್ನು ಈ ಪಟ್ಟಿಗೆ ಸೇರಿಸುತ್ತೇನೆ)

ಬನ್ನಿ ಕರುನಾಡು ಮಾತ್ರವಲ್ಲದೆ ಇಡೀ ಜಗತ್ತಿನ ಚಿತ್ರರಂಗ ಕಂಡ ಸರ್ವಶ್ರೇಷ್ಠ ಕಲಾವಿದ ಎಂಬ ಹೆಗ್ಗಳಿಕೆ ಹೊಂದಿರುವ ಅಣ್ಣಾವ್ರ ಚಿತ್ರಯಾತ್ರೆಯನ್ನು ಶುರುಮಾಡೋಣ.. !!!

ನನ್ನ ಜೊತೆಯಲ್ಲಿ ನೀವೆಲ್ಲರೂ ಬರುತ್ತೀರಾ ಅಲ್ಲವೇ!!!
ಏನೇನೂ ಬರೀತೀಯ ಶ್ರೀಕಾಂತಾ...
ಅಣ್ಣಾವ್ರ ಯೋಚನಾ ಲಹರಿ 

ಇದು ಅಣ್ಣಾವ್ರ ಕರೆ.. !!!