Sunday, December 24, 2023

ಭಕ್ತಿ ಶಕ್ತಿಯ ಕದನದಲ್ಲಿ ಗೆಲ್ಲೋದು ಭಕ್ತಿಯೇ ಹೌದು .. ಶ್ರೀ ರಾಮಾಂಜನೇಯ ಯುದ್ಧ (1964 (ಅಣ್ಣಾವ್ರ ಚಿತ್ರ ೫೦/೨೦೭)

ಕಾಲದ ಓಟದಲ್ಲಿ ಯಾರು ನಮ್ಮ ಮುಂದೆ, ಯಾರು ನಮ್ಮ ಹಿಂದೆ ಅಂತ  ಯೋಚಿಸದೆ ತಮ್ಮ ಪಾಡಿಗೆ ಹೆಜ್ಜೆ ಹಾಕುತ್ತಾ ಹೋದಾಗ ಮೈಲಿಗಲ್ಲುಗಳು ತಮಗೆ ತಾವೇ ನೆಟ್ಟುಕೊಳ್ಳುತ್ತಾ ಹೋಗುತ್ತದೆ. 

ಅದೇ ರೀತಿಯ ಚಿತ್ರಜೀವನದ ಮೈಲಿಗಲ್ಲು ಮುಟ್ಟಿದ್ದು ರಾಜ್ ಕುಮಾರ್ ಅವರು. ತಮಗೆ ಒಲಿದು ಬಂದ ಪಾತ್ರ, ತಮ್ಮನ್ನು ಅರಸಿ ಬಂದ ಪಾತ್ರಗಳನ್ನ ಅಚ್ಚುಕಟ್ಟಾಗಿ ಅಭಿನಯಿಸಿ, ಆ ಪಾತ್ರಕ್ಕೆ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಎರಡನೇ ಮೈಲಿಗಳನ್ನು ಯಶಸ್ವಿಯಾಗಿ ದಾಟಿದರು. 

ಮೊದಲ ಮೈಲಿಗಲ್ಲು ಬೇಡರ ಕಣ್ಣಪ್ಪ ಚಿತ್ರದಲ್ಲಿ ನಾಯಕ ನಟನಾಗಿ ಪಾದಾರ್ಪಣೆ, ಅಭೂತಪೂರ್ವ ಯಶಸ್ಸು, ಭರವಸೆಯ ನಾಯಕ ನಟ, ಹೀಗೆ ಹಲವಾರು ವಿಶೇಷಣಗಳನ್ನು ಹೊತ್ತು ಮುಂದಡಿ ಇಟ್ಟ ರಾಜಕುಮಾರ್ ಒಂದೊಂದೇ ಚಿತ್ರಗಳನ್ನು ಶ್ರದ್ಧೆ ತಮ್ಮ ಅಭಿನಯ ಪ್ರತಿಭೆಯನ್ನು ಒರೆಗೆ ಹಚ್ಚಿ ಸುವರ್ಣ ಚಿತ್ರಗಳ ಸರದಾರರಾದರು. 


ನಾರದನನ್ನು ಕಲಹ ಪ್ರಿಯ ಎಂಬ ಒಂದೇ ಮಾತಿನಿಂದ ನಗುತ್ತೇವೆ, ಆದರೆ ಆತ ತರುತ್ತಿದ್ದ ಸಮಸ್ಯೆಗಳು, ಅದಕ್ಕೆ ಆತನೇ ಕೊಡುತ್ತಿದ್ದ ಪರಿಹಾರಗಳು ಪಾಠ ಕಲಿಸುತ್ತಿದ್ದದ್ದು ಅಷ್ಟೇ ಅಲ್ಲದೆ, ಉತ್ತಮ ಸಂದೇಶ ಹೊತ್ತು ನಿಲ್ಲುತ್ತಿದ್ದವು. ದೇವಾನುದೇವತೆಗಳನ್ನೇ ಗೋಳಾಡುವಂತೆ ಮಾಡಿದ ಕೀರ್ತಿ ಖಂಡಿತ ನಾರದ ಮಹರ್ಷಿಗಳಿಗೆ ಸೇರಬೇಕು.. ಅಜಾತಶತ್ರುವಿನಂತೆ ತನ್ನ ತಂದೆ ಬ್ರಹ್ಮನ ಪ್ರತಿ ಸೃಷ್ಟಿಯನ್ನೂ , ದೇವ ದಾನವರರನ್ನೂ ಮಾತಾಡಿಸಿ, ಯೋಗಕ್ಷೇಮವನ್ನು ನೋಡಿಕೊಳ್ಳುತ್ತಿದ್ದ ಉಲ್ಟಾ ಪ್ರಜಾಪಾಲಕ ಎನ್ನಬಹುದು.   ಲೋಕಕಲ್ಯಾಣ ಕಾರ್ಯ, ದುಷ್ಟ ಶಿಕ್ಷಣೆ ಶಿಷ್ಟ ರಕ್ಷಣೆ, ಅಹಂ ಇಳಿಸುವುದು, ದರ್ಪ, ಕ್ರೂರತೆ ಇವುಗಳಿಗೆ ಮಂಗಳ ಹಾಡುವುದು ಇವರ ಮುಖ್ಯ ಕಾರ್ಯಾಚರಣೆ ಅನಿಸುತ್ತದೆ. 


ಹೀಗೆ ಒಮ್ಮೆ ಶಿವ ಶಿವೆಯ ಜೊತೆ ಮಾತಾಡುತ್ತಾ, ಪಾರ್ವತಿಗೆ ಕ್ರೋಧ ಹುಟ್ಟಿಸುವ ನಾರದರಿಗೆ ಮೂಲ ಬಾಣ ವಿಶ್ವಾಮಿತ್ರನ ಅಹಂ ಇಳಿಸುವುದು ಮತ್ತು ಭಕ್ತಿ ಶಕ್ತಿಗಳಲ್ಲಿ ಭಕ್ತಿಯೇ ಗೆಲ್ಲುವುದು ಎಂದು ಲೋಕಕ್ಕೆ ಮನವರಿಕೆ ಮಾಡಿಕೊಡುವುದು ಇದೆ ಈ ಚಿತ್ರದ ಮೂಲ ಹೂರಣ. 

ಶಿವೆಗೆ ಭಕ್ತಿ ಶಕ್ತಿಯ ಬಲಾಬಲಗಳನ್ನು ನಿದರ್ಶನ ಮಾಡಿಸಬೇಕೆಂದು ವಿಶ್ವಾಮಿತ್ರನ ಅಹಂ ಅನ್ನು ಉಪಯೋಗಿಸಿಕೊಳ್ಳುತ್ತಾರೆ ನಾರದರು. ಮಾಯೆ ಸೃಷ್ಟಿಸಿ ಕಾಡುಪ್ರಾಣಿಗಳ ಉಪಟಳ ಹೆಚ್ಚಿಸಿ, ಕಾಡುಪ್ರಾಣಿಗಳ ಉಪಟಳವನ್ನು ನಿವಾರಿಸುವ ಸಲುವಾಗಿ ಕಾಡಿಗೆ ಬರುವ ಚಂದ್ರಭಾನು ಮಹಾರಾಜನಿಗೆ ಮಾಯೆ ಮುಸುಕು ಹಾಕಿ, ವಿಶ್ವಾಮಿತ್ರನ ಆಶ್ರಮದಲ್ಲಿ ನೆಡೆಸುತ್ತಿರುವ ಯಜ್ಞಕ್ಕೆ ಭಂಗ ಬರುವಂತೆ, ಒಂದು ಜಿಂಕೆ ಕಾಡುಪ್ರಾಣಿಗೆ ಹೆದರಿ ಯಜ್ಞಕುಂಡಕ್ಕೆ ಬೀಳುವಂತೆ ಮಾಡಿ, ವಿಶ್ವಾಮಿತ್ರನ ಕೋಪಕ್ಕೆ ಚಂದ್ರುಭಾನು ಮಹಾರಾಜಾ ಗುರಿಯಾಗುವಂತೆ ಮಾಡುತ್ತಾನೆ. ಅಲ್ಲಿಂದ ಮುಂದೆ ಶ್ರೀರಾಮನ ಬಳಿ ವಿಶ್ವಾಮಿತ್ರ ಹೋಗಿ, ಯಜ್ಞಭಂಗ ಮಾಡಿದ ದ್ರೋಹಿಗೆ ಮರಣದಂಡನೆ ಕೊಡುವಂತೆ ಪ್ರೇರೇಪಿಸುವ ವಿಶ್ವಾಮಿತ್ರ, ತನ್ನ ಕೋಪದ ಅಗ್ನಿಯಲ್ಲಿ ಬೇಯುತ್ತಾರೆ.. 

ಇದನ್ನು ಅರಿತ ಚಂದ್ರುಭಾನು ಮಹಾರಾಜ ಹೆದರಿ ಶ್ರೀರಾಮನಿಗೆ ಶರಣಾಗತಿಯಾಗುವಂತೆ ಹೊರಟಾಗ, ಮತ್ತೆ ಮಾಯೆಯ ಮುಸುಕು, ಆತನನ್ನು ಹನುಮಂತನ ಆಶ್ರಮಕ್ಕೆ ಬಳಿಗೆ ಬರುವಂತೆ ಮಾಡುತ್ತಾರೆ ನಾರದರು.  ಮಹಾರಾಜನನ್ನು ಕಂಡು ಉಪಚರಿಸುವ ಅಂಜನಾದೇವಿ, ಆತನಿಗೆ ಅಭಯದ ಅನುಗ್ರಹ ನೀಡುತ್ತಾಳೆ, ತಾಯಿಯ ಮಾತಿನಂತೆ ಹನುಮಂತ ಮಹಾರಾಜನನ್ನು ರಕ್ಷಿಸುವಂತೆ ಪ್ರತಿಜ್ಞೆ ಮಾಡುತ್ತಾನೆ. ಆದರೆ ನಂತರ ಶ್ರೀರಾಮನ ಕೋಪದ ಮಾತುಗಳನ್ನು ಅರಿತ ಹನುಮಂತ, ಶ್ರೀರಾಮನ ಬಳಿ ಕ್ಷಮೆ ಕೇಳಿದರು, ಕೊಟ್ಟ ಮಾತಿನಂತೆ ನೆಡೆದುಕೊಳ್ಳಬೇಕು ಎಂದು ಹನುಮನ ಮೇಲೆ ಯುದ್ಧ ಸಾರುತ್ತಾನೆ. ಇದೆ ಶ್ರೀ ರಾಮಾಂಜನೇಯ ಯುದ್ಧ.  

. ಕಡೆಗೆ ರಾಮಬಾಣ ಲೋಕವನ್ನೇ ದಹಿಸಲು ಹೊರಟು ಕಡೆಗೆ ವಿಶ್ವಾಮಿತ್ರನನ್ನು ಹಿಂಬಾಲಿಸಿದಾಗ, ಅನ್ಯತಾ ಶರಣಂ ನಾಸ್ತಿ ಎಂದು ಶ್ರೀ ರಾಮನ ಭಕ್ತ ಹನುಮನಿಗೆ ಮೊರೆ ಹೋಗುತ್ತಾನೆ. 

ಶ್ರೀರಾಮನ ಪಟ್ಟಾಭಿಷೇಕವಾದ ಮೇಲೆ, ಹನುಮನ ತಾಯಿ ಅಂಜನಾದೇವಿಯ ಬೇಡಿಕೆಯಂತೆ ಆಕೆಯ ಪುತ್ರ ಹನುಮಂತನನ್ನು ತಾಯಿಯ ಬಳಿಗೆ ಹೋಗಬೇಕು ಇದು ರಾಮನ ಆಜ್ಞೆ ಎಂದು ಹನುಮಂತನ ರಾಮನ ಪದತಲದಲ್ಲಿಯೇ ಇರಬೇಕು ಎಂಬ ಹಂಬಲವನ್ನು ಒಲ್ಲದ ಮನಸ್ಸಿನಿಂದ ತಳ್ಳಿ ಹಾಕುತ್ತಾನೆ. ಶ್ರೀ ರಾಮನ ಬಂಧು ಚಂದ್ರುಭಾನು ಮಹಾರಾಜನು ಹೊರಟಾಗ, ಶ್ರೀ ರಾಮನ ಚಡಪಡಿಕೆಯನ್ನು ರಾಜುಕುಮಾರ್ ಅದ್ಭುತವಾಗಿ ಅಭಿನಯಿಸಿದ್ದಾರೆ.  

ಶ್ರೀ ರಾಮನ ಶಾಂತ ಗುಣ, ನಗುಮೊಗ, ಚಿಂತೆಯ ಮ್ಲಾನವಾದನ, ಸಮಸ್ಯೆಯಿದ್ದಾಗೂ ಅದನ್ನು ಎದುರಿಸುವಲ್ಲಿ ತೋರುವ ಅವರ ಅಭಿನಯ ಅದ್ಭುತ.  ಚಿತ್ರ ಪರದೆಯ ಆರಂಭದಲ್ಲಿ ಶ್ರೀ ರಾಮನಾಗಿ ಇದು ರಾಜಕುಮಾರ್ ಅವರ ಮೊದಲ ಚಿತ್ರ ಎಂದೂ, ಜೊತೆಗೆ ಇದು ಅವರ ಅಭಿನಯದ ಐವತ್ತನೆಯ ಚಿತ್ರ ಎಂದು ತೋರಿಸಿದ್ದಾರೆ. ಅದರ ಪ್ರಕಾರ ಇದು ಅವರ ಐವತ್ತನೆಯ ಚಿತ್ರ. ಅದ್ಭುತ ಸಾಧನೆಯಿದು. 

ಚಿತ್ರಗಳೇ ಕೆಲವು ತಯಾರಾಗುತ್ತಿದ್ದ ಕಾಲಘಟ್ಟದಲ್ಲಿ ಸುಮಾರು ಹತ್ತು ವರ್ಷಗಳಲ್ಲಿ ಐವತ್ತು ಚಿತ್ರಗಳನ್ನು ಪೂರೈಸುವುದು ಅದ್ಭುತ ಸಾಧನೆಯೇ ಹೌದು. 

ರಾಜಕುಮಾರ್ ಅವರ ಅಭಿನಯ ಈ ಚಿತ್ರದ ಹೈಲೈಟ್ ಆದರೂ, ರಾಜ್ ಅಭಿನಯವನ್ನು ಮೀರಿಸುವಂತೆ ನಿಂತದ್ದು ಹನುಮಂತನಾಗಿ ಉದಯಕುಮಾರ್. ಆ ಮುಖವಾಡ ಇದ್ದರೂ ಕಣ್ಣಿನಲ್ಲಿಯೇ ಅಭಿನಯ ತೋರುವ, ಸಂಭಾಷಣೆಯನ್ನು ಹೇಳುವಾಗ ಭಾವತೀವ್ರತೆ, ಸಂಭಾಷಣಾ ವೈಖರಿ ಎಲ್ಲವೂ ಅದ್ಭುತವಾಗಿ ಮೂಡಿ ಬಂದಿದೆ. ರಾಜ್ ಅವರ ಸರಿಸಮಾನವಾಗಿ ಉದಯ್ ಅವರ ಅಭಿನಯ ಮೂಡಿಬಂದಿದೆ. 

ಕುಪಿತ ವಿಶ್ವಾಮಿತ್ರನ ಪಾತ್ರಧಾರಿ ಆ ಕಾಲಘಟ್ಟದ ಮುಖ್ಯ ಖಳನಟ ಡಿಕ್ಕಿ ಮಾಧವರಾವ್ ಅವರ ನಟನೆ ವಾಹ್ ಎನಿಸುತ್ತದೆ. 

ಪುಟ್ಟ ಪಾತ್ರದಲ್ಲಿ ವಸಿಷ್ಠನ ಪಾತ್ರದಲ್ಲಿ ಹೆಚ್ ರಾಮಚಂದ್ರಶಾಸ್ತ್ರಿ ಮನಸೆಳೆಯುತ್ತಾರೆ. 

ನಾರದರ ಪಾತ್ರದಲ್ಲಿ ಅಶ್ವಥ್ ಕನ್ನಡ ಚಿತ್ರರಂಗದಲ್ಲಿ ನಾರದರ ಪಾತ್ರವನ್ನು ಇವರಷ್ಟು ಅಚ್ಚುಕಟ್ಟಾಗಿ ನಿಭಾಯಿಸುವವರು ಇವರೊಬ್ಬರೇ. 

ಉಳಿದ ಪ್ರಮುಖ ಪಾತ್ರದಲ್ಲಿ ಸೀತಾದೇವಿಯಾಗಿ ಆದವಾನಿ ಲಕ್ಷ್ಮೀದೇವಿ, ಚಂದ್ರಭಾನುವಿನ ಮಡದಿಯಾಗಿ ಪಂಡರೀಬಾಯಿ, ಪಾರ್ವತಿಯಾಗಿ ಜಯಂತಿ ಅಭಿನಯಿಸಿದ್ದಾರೆ. ಮುದ್ದಾದ ಮಕ್ಕಳು. 

ಅಮೃತಕಾಲ ಪ್ರೊಡಕ್ಷನ್ಸ್ ಲಾಂಛನದಲ್ಲಿ ತಯಾರಾದ ಚಿತ್ರವಿದು. ಎಂ ಎನ್ ನಾಯಕ್ ನಿರ್ದೇಶನ. 

ಸಂಗೀತ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ ಸತ್ಯಂ. 

ಛಾಯಾಗ್ರಹಣ ವಿ ವೆಂಕಟ್ ಅವರದ್ದು. 

ಸಂಭಾಷಣೆ ಗೀತೆಗಳು ಗೀತಪ್ರಿಯ ಅವರದ್ದು. 

ಘಂಟಸಾಲ, ಪಿಬಿಶ್ರೀನಿವಾಸ್, ಎಸ್ ಜಾನಕೀ, ಬಿ ಆರ್ ಲತಾ, ವಸಂತ, ಮಾಡಿಪೆದ್ದಿ ಸತ್ಯಂ ಇವರುಗಳು ಗಾಯನದ ಖಾತೆಯನ್ನು ನೋಡಿಕೊಂಡಿದ್ದಾರೆ. 

















ಕಲಾವಿದರ ತುಂಬು ಕುಟುಂಬದ ಈ ಚಿತ್ರದಲ್ಲಿ ರಾಜಕುಮಾರ್, ಆದವಾನಿ ಲಕ್ಷ್ಮೀದೇವಿ, ಡಿಕ್ಕಿ ಮಾಧವರಾವ್, ಕೆ ಎಸ್ ಅಶ್ವಥ್, ಬಿ ರಾಘವೇಂದ್ರ ರಾವ್, ಪಂಡರಿಬಾಯಿ, ಜಯಂತಿ, ಮುದ್ದಾದ ಮಕ್ಕಳು ಅಮೃತಕಲಾ, ಬೇಬಿ ಪದ್ಮಿನಿ ಅಭಿನಯಿಸದ್ದಾರೆ. 

No comments:

Post a Comment