ಕೆಲವು ಬಾರಿ ಅಭಿನಯಿಸುವುದು ಹಾಗಿರಲಿ ಆ ಪಾತ್ರದ ಬಗ್ಗೆ ಯೋಚಿಸುವುದು ಕೂಡ ಸವಾಲಿನ ಕೆಲಸ.. ಅತೀ ಸಂಯಮದ ಪಾತ್ರ ಒಂದು ಕಡೆ.. ಅತೀ ಕ್ರೂರತನದ ಪಾತ್ರ ಇನ್ನೊಂದು ಕಡೆ.. ಇದು ಎರಡೂ ಸವಾಲಿನ ಪಾತ್ರಗಳೇ. ಸತಿ ಶಕ್ತಿ ಚಿತ್ರದಲ್ಲಿ ಈ ರೀತಿಯ ಪಾತ್ರದಲ್ಲಿ ಯಶಸ್ವಿಯಾಗಿದ್ದರು ರಾಜಕುಮಾರ್ ಅವರು.
ಈ ಚಿತ್ರದ ತುಕಾರಾಂ ಪಾತ್ರವೂ ಹಾಗೆ... ಸಮಾಜದ ದೃಷ್ಟಿ.. ಪ್ರತಿಭೆಯ ಬಗ್ಗೆ ಅಸೂಯೆ .. ಹೆಸರು ಪ್ರಚಾರ ಸಿಕ್ಕಿದ್ದಿಕ್ಕೆ ಹೊಟ್ಟೆ ಉರಿ, ಇತ್ತ ಸಂಸಾರದಲ್ಲಿ ಹೆಂಡತಿ ಮಕ್ಕಳು ಉಪವಾಸ ಊಟ ಬಟ್ಟೆಗೆ ತೊಂದರೆ, ಹಣಕಾಸಿನ ಮುಗ್ಗಟ್ಟು ಇದರೊಳಗೆ ವಿಠಲನ ಮೇಲಿನ ಭಕ್ತಿಗೆ ಸಿಡಿ ಸಿಡಿ ಎನ್ನುವ ಮಡದಿ.. ಆತನ ಜ್ಞಾನಾರ್ಜನೆಗೆ, ಆತನ ಭಕ್ತಿಯ ಸಮಯಕ್ಕೆ ಅಡ್ಡಿಮಾಡದಿದ್ದರೂ, ಸಂಸಾರದ ಬವಣೆಗೆ ಹತಾಶೆಗೆಟ್ಟು ಸದಾ ವಿಠಲನಿಗೆ ಕಡಪ ಎಂದೋ, ಕಲ್ಲು ಬೊಂಬೆ ಎಂದೋ, ಉಪಯೋಗಕ್ಕೆ ಬಾರದ ನಾಮಸ್ಮರಣೆಯೆಂದೋ ಸದಾ ದೂರುವ ಮಡದಿಯ ಪ್ರತಿಮಾತುಗಳು ಗದಾ ಪ್ರಹಾರವಾದರೂ, ಅದರಿಂದ ವಿಚಲಿತನಾಗದೆ ತನ್ನ ಗುರಿಯತ್ತ ಹೆಜ್ಜೆ ಹಾಕುವ ಪಾತ್ರದಲ್ಲಿ ರಾಜಕುಮಾರ್ ಅವರು ನಿಜಕ್ಕೂಅದ್ಭುತ ಪರಕಾಯ ಪ್ರವೇಶವೇ ಮಾಡಿದ್ದಾರೆ.. ಸಂಯಮದ ಮುಖ, ನಿಧಾನವಾಗಿ ಗಮನಸೆಳೆಯುವಂತೆ ಮಾತಾಡುವ ಶೈಲಿ, ಆ ಭಕ್ತಿ ಪ್ರಧಾನ ಮುಖ ಭಾವ.. ಪ್ರತಿಯೊಂದು ಅದ್ಭುತ. ಈ ಪಾತ್ರ ಮಾಡಲಿಕ್ಕೆ ರಾಜಕುಮಾರ್ ಆಗಿ ಹುಟ್ಟಿದ್ದಾರೇನೋ ಅನಿಸುತ್ತೆ.. ಅವರ ಇದುವರೆಗಿನ ಚಿತ್ರ ಬದುಕಿನಲ್ಲಿ ಇದೊಂದು ವಿಭಿನ್ನ ಪಾತ್ರ. ಅವರ ಅಭಿನಯ ನಿಜಕ್ಕೂ ಬಹಳ ಪರಿಣಾಮಕಾರಿಯಾಗಿದೆ. ತಲೆಯ ಮೇಲೆ ಪಗಡಿ, ಹಣೆಯಲ್ಲಿ ನಾಮ, ದಪ್ಪ ಮೀಸೆ ಮಂದಹಾಸ, ತಣ್ಣನೆಯ ಮಾತುಗಳು ಅಬ್ಬಬ್ಬಾ ನೈಜತೆ ಎಂದರೆ ಇದೆ ಅನಿಸುವಂತೆ ರಾಜಕುಮಾರ್ ಅವರ ಸಂತ ತುಕಾರಾಮ ಆಗಿದ್ದಾರೆ.. ತಾನು ರಚಿಸಿದ ಕೃತಿಗಳನ್ನು ಸಮಾಜದ ದೋಷಾರೋಪಣೆಯ ಮೇಲೆ ಅನುಭವಿಸಬೇಕಾದ ಶಿಕ್ಷೆಯ ಒಂದು ಭಾಗವಾಗಿ ಆ ಬರಹಗಳನ್ನು ನೀರಿಗೆ ಹಾಕುವಾಗಿನ ಅವರ ತನ್ಮಯತೆ ಅನುಕರಣೀಯ.
ತುಕಾರಾಂ ಅವರ ಮಡದಿಯ ಪಾತ್ರದಲ್ಲಿ ಸಂಸಾರವನ್ನು ನಿಭಾಯಿಸುತ್ತಾ, ತುಕಾರಾಂ ಧಾನ್ಯಗಳನ್ನು, ಆಹಾರ ಸಾಮಗ್ರಿಯನ್ನು ತರುವ ಆದರೆ ಬಡಬಗ್ಗರಿಗೆ ಹಂಚಿ ಉಳಿದದ್ದನ್ನು ಮನೆಗೆ ತಂದಾಗ ಅಥವ ಮನೆಯಲ್ಲಿದ್ದದ್ದನ್ನು ದಾನ ಮಾಡುವಾಗ ಅವರ ಮನದಾಳದ ಮಾತುಗಳು, ಸಂಸಾರವನ್ನು ನೋಡಿಕೊಳ್ಳಬೇಕಾದ ಮನೆಯೊಡತಿಯ ಭಾವ, ಅಭಿನಯ ಹಾಗೆ ನೈಜತೆಯಿಂದ ಕೂಡಿದೆ. ತನ್ನ ಪತಿ ರಚಿಸಿದ ಸಾಹಿತ್ಯವನ್ನು ನದಿಗೆ ಬಿಡಬೇಕಾಗಿ ಬಂದಿದೆ ಎಂದು ಅರಿವಾದಾಗ, ತಾನು ನಿಮ್ಮ ಭಕ್ತಿಗೆ ಅಡ್ಡಿ ಬರುವುದಿಲ್ಲ, ಕಷ್ಟಪಟ್ಟು, ಮನೆಯ ದೀಪಕ್ಕೆ ಬೇಕಾಗಿದ್ದ ಎಣ್ಣೆಯನ್ನು ಬರೆಯುವಾಗ ಬೇಕಾದ ಬೆಳಕಿಗೆ ಉಪಯೋಗಿಸಿದ್ದಾರೆ ಎಂದು ಕುಪಿತಗೊಳ್ಳದೆ, ಇನ್ನೂ ತಾನು ಈ ವಿಚಾರದ ಬಗ್ಗೆ ಆಕ್ಷೇಪ ಮಾಡೋಲ್ಲ, ನಾನು ನೀವು ಹೇಳಿದಾಗೆಲ್ಲಾ ವಿಠಲ ವಿಠಲ ಎಂದು ಕುಣಿಯುತ್ತೇನೆ ಎಂದು ಕುಣಿಯುವ ಅಭಿನಯ ಇಷ್ಟವಾಗುತ್ತದೆ. ಕಡೆಯಲ್ಲಿ ನಾ ವೈಕುಂಠಕ್ಕೆ ಹೋಗಿ ಬರುತ್ತೇನೆ, ನಮ್ಮ ಮಕ್ಕಳನ್ನು ಮನೆಯನ್ನು ಚೆನ್ನಾಗಿ ನೋಡಿಕೋ ಎಂದು ಹೇಳಿದಾಗ ಅದರ ವಾಸ್ತವತೆ ಅರಿಯದೆ, ಹಾ ಸರಿ ಹೋಗಿ ಬನ್ನಿ ಬೇಗ ಬಂದುಬಿಡಿ.. ಎಂದು ಮತ್ತೆ ಮನೆಗೆ ಹೋಗಿ ತನ್ನ ಮನೆಕೆಲಸದಲ್ಲಿ ತಲ್ಲೀನೆ ಆಗುವ ಅಭಿನಯ ಸೂಪರ್ ಲೀಲಾವತಿಯವರದ್ದು. ಬಡ ಬಡ ಮಾತಾಡುತ್ತ, ಹೊಟ್ಟೆಯಲ್ಲಿ ಏನೂ ಇಟ್ಟುಕೊಳ್ಳದೆ ಪಾತ್ರವಾಗುವ ಪರಿ ಸೂಪರ್ ಎನಿಸುತ್ತದೆ.
ಪ್ರಮುಖ ಪಾತ್ರಧಾರಿ ತುಕಾರಾಂ ಅವರಿಗೆ ಕೊಡಬಾರದ ಕೋಟಲೆ ಕೊಡುವ ಪಾತ್ರದಲ್ಲಿ ಬಾಲಕೃಷ್ಣ ಅಂಕ ಗಿಟ್ಟಿಸುತ್ತಾರೆ, ತನ್ನ ಉಪಾಯಗಳೆಲ್ಲ ಫಲಕಾಣದಾದಾಗ, ಕಡೆಯಲ್ಲಿ ಧಾರ್ಮಿಕ ಗುರುಗಳ ಬಳಿ ದೂರನ್ನು ಹೇಳಿ ಶಿಕ್ಷಿಸುವಲ್ಲಿ ಯಶಸ್ವಿ ಯಾಗುವ ಮುಂಬಾಜಿ ಪಾತ್ರದಲ್ಲಿ ಬಾಲಕೃಷ್ಣ ತುಂಬಾ ಸೊಗಸಾಗಿ ಅಭಿನಯಿಸಿದ್ದಾರೆ, ಆ ಪಾತ್ರಕ್ಕೆ ಬೇಕಾಗುವ ಕುಠಿಲತೆ, ನಿಷ್ಟೂರತೆ, ತನ್ನ ಬೆಳವಣಿಗೆ ಅಷ್ಟೇ ಮುಖ್ಯ ಎನಿಸುವ ಸ್ವಾರ್ಥತೆ ಎಲ್ಲವನ್ನೂ ಕಲಸಿ ಕುಡಿದಿದ್ದಾರೆ ಈ ಪಾತ್ರದಲ್ಲಿ..
ಸಣ್ಣ ಪಾತ್ರದಲ್ಲಿ ಬರುವ ಅಶ್ವಥ್ಅ ಅವರು ಧಾರ್ಮಿಕ ಗುರುಗಳ ಪಾತ್ರದಲ್ಲಿ ಸುಂದರ ಅಭಿನಯ. ಭಾಷಾ ಶುದ್ಧತೆ , ಅಭಿನಯ , ಮುಖ ಭಾವ ಸೊಗಸಾಗಿದೆ,ಉಳಿದ ಪಾತ್ರಗಳಲ್ಲಿ ಬಾಲಕೃಷ್ಣ ಅವರ ಶಿಷ್ಯರ ಪಾತ್ರದಲ್ಲಿ ವಾದಿರಾಜ್ ಮತ್ತು ಶಿವಶಂಕರ್ ನಗೆಯುಕ್ಕಿಸುತ್ತಾರೆ.
ಛತ್ರಪತಿ ಶಿವಾಜಿ ಪಾತ್ರದಲ್ಲಿ ಉದಯಕುಮಾರ್, ಮತ್ತು ಆತನ ಪತ್ನಿಯ ಪಾತ್ರದಲ್ಲಿ ಪಂಡರೀಭಾಯಿ ಅವರ ಪುಟ್ಟ ಪಾತ್ರಗಳಾದರೂ, ಅಭಿನಯ ಕಳೆಗಟ್ಟಿದೆ,
ಚಿ ಸದಾಶಿವಯ್ಯ ಅವರ ಹಾಡುಗಳಿಗೆ ವಿಜಯಭಾಸ್ಕರ್ ಸಂಗೀತ ನೀಡಿದ್ದಾರೆ. ಸಂಭಾಷಣೆ ಚಿ ಉದಯಶಂಕರ್ ಅವರದ್ದು ಛಾಯಾಗ್ರಹಣ ಡಿ ವಿ ರಾಜಾರಾಮ್ ಅವರದ್ದು,
ಬಿ ರಾಧಾಕೃಷ್ಣ ಅವಸರು ಶ್ರೀ ಗಣೇಶ ಪ್ರಸಾದ್ ಮೂವೀಸ್ ಲಾಂಛನದಲ್ಲಿ ನಿರ್ಮಾಣ ಪಾಡಿದ ಚಿತ್ರವನ್ನು ಸುಂದರರಾವ್ ನಾಡಕರ್ಣಿ ಉಪಯೋಚಿತವಾಗಿ ತೆರೆಗೆ ತಂದಿದ್ದಾರೆ.
ಭಕ್ತಿ ಮುಕ್ತಿ ಸಂಭಾಷಣೆ ಹಾಡುಗಳು ತುಂಬಿರುವ ಈ ಚಿತ್ರದ ಹಾಡುಗಳ ಗಾಯಕರು ಪಿ ಬಿ ಶ್ರೀನಿವಾಸ್, ಎಸ್ ಜಾನಕೀ, ಎಲ್ ಆರ್ ಈಶ್ವರಿ, ಪೀಠಾಪುರಂ, ಬಿ ರಾಮದಾಸ್, ಮತ್ತು ಭೋಜರಾವ್ ಅವರುಗಳು ಭಕ್ತಿಪೂರಿತವಾಗಿ ಹಾಡಿದ್ದಾರೆ.
No comments:
Post a Comment