Sunday, January 7, 2024

ಮನ ತುಂಬಿದ ಅಭಿನಯ.. ಮನಸ್ಸು ತುಂಬುವ ಸಿನಿಮಾ..... ತುಂಬಿದ ಕೊಡ (1964 (ಅಣ್ಣಾವ್ರ ಚಿತ್ರ ೫೨/೨೦೭)

ಎಲ್ಲರ ಮೂದಲಿಕೆ, ಎಲ್ಲರ ತೆಗಳಿಕೆ.. ಎಲ್ಲಾ ಪಾತ್ರಗಳು ವಿರುದ್ಧ ನಿಂತು ಮಾತಾಡುವುದು.. ಸ್ನೇಹಿತ ಎಂದವನು ಕೂಡ ಉಲ್ಟಾ ಮಾತಾಡುವುದು.. ಮನೆಯಲ್ಲಿನ ಸದಸ್ಯರೂ ಕೂಡ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳದೆ ಸತಾಯಿಸುವುದು.. ನದಿಯ ಎರಡು ತೀರದಲ್ಲಿರುವವರು ಭೇಟಿ ಮಾಡಲು ಹೊರಟಾಗ ಸಂಧಿಸಲಾಗದೆ ಮತ್ತೆ ಎರಡು ದಡದ ಅಂಚಿನಲ್ಲಿ ನಿಲ್ಲುವುದು.. ಮತ್ತೆ ಪರಿಸ್ಥಿತಿ ಇನ್ನೇನೂ ಪರಿಹಾರ ಕಂಡುಕೊಳ್ಳುತ್ತಿದೆ ಎನ್ನುವಷ್ಟರಲ್ಲಿ ವಿಚಿತ್ರ ಸನ್ನಿವೇಶ ಸೃಷ್ಟಿ.. ಇದೆಲ್ಲಾ ವಿಧಿಯ ಕೈವಾಡ ಎನ್ನುವುದೋ ಅಥವ ಕಾಲನ ಪ್ರಹಾರ ಎನ್ನಬಹುದೋ ಅರಿವಾಗದೇ ಒದ್ದಾಡುತ್ತದೆ ತುಂಬಿದ ಕೊಡ.. ಮೋಸ, ವಂಚನೆ, ದ್ರೋಹ ಇದು ಯಾವುದು ಮನದಲ್ಲಿ ಇಲ್ಲದೆ ಹೋದರೂ, ಈ ವಿಧಿಯ ಆಟ  ಗಂಭೀರವಾದ ಮನವನ್ನೂ ಕೂಡ ತಲ್ಲಣಗೊಳಿಸಿ ಏನು ಮಾಡುವುದು ಎಂಬ ಯೋಚನೆಗೆ ಕಡಿವಾಣ ಹಾಕಿ ಏನೂ ಮಾಡಲಾಗದೆ ಒದ್ದಾಡುವಂತೆ ಮಾಡಿ ಆನಂದಪಡುತ್ತದೆಯಾ ವಿಧಿ ಅನ್ನಿಸುತ್ತೆ. 

ಕನ್ನಡ ಚಿತ್ರಗಳ ಕೊಂಚ ಪರ್ವಕಾಲ ಎನ್ನಬಹುದು, ರಾಜಕುಮಾರ್ ಅವರ ಅನೇಕ ಚಿತ್ರಗಳು ೧೯೬೩ ೧೯೬೪ ರಲ್ಲಿ ಬಿಡುಗಡೆಯಾದವು.  ಪ್ರತಿಚಿತ್ರವೂ ಭಿನ್ನ ವಿಭಿನ್ನ. ಅವರ ಅಭಿನಯ ಸಾಮರ್ಥ್ಯವನ್ನು ಪ್ರಚುರಪಡಿಸುತ್ತಲೇ ಸಾಗುವ ಚಿತ್ರಗಳು.

ಸಂಗೀತದಲ್ಲಿ ಅಪಾರ ಹೆಸರು ಮಾಡಿದ್ದ ಸಂಗೀತ ನಿರ್ದೇಶಕ ಜಿ ಕೆ ವೆಂಕಟೇಶ್ ತಮ್ಮ ಮಿತ್ರರ ಜೊತೆಗೂಡಿ ನಿರ್ಮಿಸಿದ ಚಿತ್ರ ಶ್ರೀ ವೆಂಕಟೇಶ ಚಿತ್ರ ಲಾಂಛನದಲ್ಲಿ ತೆರೆಗೆ ಬಂದ ಚಿತ್ರ "ತುಂಬಿದ ಕೊಡ"

ಹಾಸ್ಯಕಲಾವಿದರೂ ಸಾಕಷ್ಟು ಇದ್ದರೂ, ಹಾಸ್ಯಕ್ಕೆ ಅಷ್ಟು ಒತ್ತು ಕೊಡದೆ ಮೂರು ಕುಟುಂಬಗಳ ಸುತ್ತಾ ಹೆಣೆದ ಕಥಾ ಹಂದರವಿರುವ ಚಿತ್ರವಿದು. ನರಸಿಂಹರಾಜು, ಅಶ್ವಥ್ ನಾರಾಯಣ, ಬಾಲಕೃಷ್ಣ, ಬೆಂಗಳೂರು ನಾಗೇಶ್ ಸಾಮಾನ್ಯ ಇರುವ ಚಿತ್ರಗಳು ಹಾಸ್ಯದ ರಸದಲ್ಲಿ ಮಿಂದು ಬರುವ ಚಿತ್ರ. ಆದರೆ ಇಲ್ಲಿ ಹಾಸ್ಯವನ್ನು ಗುಪ್ತಗಾಮಿನಿಯ ಹಾಗೆ ಸಾಗುತ್ತದೆ. 

ಪಾಪಮ್ಮ ಮತ್ತು ಲೀಲಾವತಿ ಅವರ ಬಡ ಕುಟುಂಬ. ತಂದೆಯು ಮಗಳ ಭವಿಷ್ಯಕ್ಕೆ ಮಾಡಿಸಿದ ಇನ್ಶೂರೆನ್ಸ್ ಹಣದಿಂದ, ತನ್ನ ಕನಸು ವೈದ್ಯೆಯಾಗಿ ಬಡ ಜನತೆಗೆ ಉಚಿತ ಚಿಕಿತ್ಸೆ ಮತ್ತು ವೈದ್ಯಕೀಯ ಸೌಲಭ್ಯ ಕೊಡಬೇಕು ಎಂದು ಆಶಾ ಗೋಪುರ ಕಟ್ಟಿಕೊಂಡ ಕುಟುಂಬವಿದು. 


ಬಾಲಕೃಷ್ಣ ತಾನು ಇಂಕಂ ಟ್ಯಾಕ್ಸ್ ಅಧಿಕಾರಿಯಾಗಿದ್ದರೂ, ಲಂಚಕ್ಕೆ ಆಸೆ ಪಡದೆ, ತನ್ನ ಕರ್ತವ್ಯವನ್ನು ನಿಷ್ಠೆಯಿಂದ ಮಾಡುವ ಕುಟುಂಬದಲ್ಲಿ, ತಾನು ಹಾಕಿದ ಗೆರೆಯನ್ನು ದಾಟದ ಮಗ ರಾಜಕುಮಾರ್ , ಹೇಳಿದಂತೆ ಕೇಳುವ ಮಡದಿ ಜಯಶ್ರೀ ... ತಲೆಹರಟೆಯಾದರೂ ಒಳ್ಳೆಯ ಮನಸ್ಸಿನ ಮಗಳು ಚಿಂದೋಡಿ ಲೀಲಾ ಮತ್ತು ಕೊನೆಯ ಮಗ ತುಂಟ ತರಲೆ. 



ಸಮಾಜಸೇವೆಯೇ ಮುಖ್ಯ ಎನ್ನುವ ಭಾವ ತುಂಬಿದ ಕುಟುಂಬ ಅಶ್ವಥ್ ಅವರದ್ದು. ಸಮಾಜದಲ್ಲಿ ಸಿರಿವಂತನಾಗಿದ್ದರೂ, ಬಡವರಿಗೆ ಅಂತ ಆಸ್ಪತ್ರೆ ಕಟ್ಟಿಸಿ, ಅಗತ್ಯವಾದ ವೈದ್ಯಕೀಯ ನೆರವು ಅಗತ್ಯವಿರುವ ಬಡವರಿಗೆ ಸಿಗುವಂತೆ ಆಗಬೇಕು ಎಂದು ಶ್ರಮಿಸುವ ತಂದೆಯ ಮಾತ್ರ. ಮಗಳು  ಜಯಂತಿಯನ್ನು ನರ್ಸಿಂಗ್ ಕೋರ್ಸ್ ಓದಿಸಿ, ತನ್ನ ಆಸ್ಪತ್ರೆಯಲ್ಲಿಯೇ ಸೇವೆ ಮಾಡಬೇಕೆಂದು ಬಯಸುವ ಅಪ್ಪನ ಪಾತ್ರ


ಈ ಮೂರು ಕುಟುಂಬ ಸುತ್ತಾ ಸಾಗುವ ಕತೆ.  ಬಡತನ ಸಿರಿತನಗಳು ಅಡ್ಡ ಬಂದರೂ ಸಿನೆಮಾದ ಓಘಕ್ಕೆ ತೊಂದರೆ ಮಾಡುವುದಿಲ್ಲ. ಕಾಲೇಜಿನಲ್ಲಿ ಅಕಸ್ಮಾತ್ ಶುರುವಾಗುವ ಜಗಳದಿಂದ ಪ್ರೀತಿ ಶುರುವಾಗುವುದು ರಾಜಕುಮಾರ್ ಮತ್ತು ಲೀಲಾವತಿ ಪಾತ್ರಗಳ ಬೆಳವಣಿಗೆ ನಿಧಾನವಾಗಿ ಚಿತ್ರವನ್ನು ಆವರಿಸಿಕೊಳ್ಳುತ್ತಾ ಹೋಗುತ್ತದೆ. 

ರಾಜಕುಮಾರ್ ಅವರ ಹದಭರಿತ ಅಭಿನಯ ಈ ಚಿತ್ರದ ಮುಖ್ಯ ಅಂಶ. ಎಲ್ಲರಿಂದಲೂ  ಮೂದಲಿಕೆ, ಬೈಗುಳ ಇಲ್ಲವೇ ಕೋಪವನ್ನು ಎದುರಿಸುವ ಪಾತ್ರದಲ್ಲಿ ಅಕ್ಷರಶಃ ಕಾಡುತ್ತಾರೆ. ಏನು ಮಾಡುವುದು, ಹೇಗೆ ನಿಭಾಯಿಸುವುದು ಎನ್ನುವ ಗೊಂದಲಗಳ ದೃಶ್ಯದಲ್ಲಿ ನಿಜಕ್ಕೂ ಅವರ ಅಭಿನಯಕ್ಕೆ  ಸರಿಸಾಟಿಯಿಲ್ಲ. ಕ್ಲಿಷ್ಟವಾದ ಪಾತ್ರವಿದು, ಆದರೆ ಅರಿವಾಗೋದಿಲ್ಲ. ಆಗಲೇ ಸುಮಾರು ಐವತ್ತು ಸಿನಿಮಾಗಳನ್ನು ಪೂರೈಸಿದ್ದರೂ ಈ ರೀತಿಯ ಗುಪ್ತಗಾಮಿನಿಯ ಹಾಗೆ ಒದ್ದಾಡುವ ಪಾತ್ರದಲ್ಲಿ ಜೈ ಅನಿಸುತ್ತಾರೆ. 

ಚಿತ್ರದುದ್ದಕ್ಕೂ ಸಾಗುವ ಲೀಲಾವತಿ ಪಾತ್ರ ಮನಸಲ್ಲಿ ಉಳಿಯುತ್ತದೆ. ಆ ಸ್ನಿಗ್ದ ಚೆಲುವು, ಅಭಿನಯ ಇಷ್ಟವಾಗುತ್ತದೆ. 

ಬಾಲಕೃಷ್ಣ ಕರೆಕ್ಟ್ ಕರೆಕ್ಟ್ ಎನ್ನುತ್ತಲೇ ಎಲ್ಲವನ್ನೂ ಕರೆಕ್ಟ್ ಮಾಡಿಕೊಂಡು ಸಾಗುವ, ಸಂಭಾಷಣೆ ಹೇಳುವ ಶೈಲಿ, ಆ ಅಂಗೀಕಾ ಅಭಿನಯ ಇಷ್ಟವಾಗುತ್ತದೆ. 

ಅಶ್ವಥ್ ಗಾಂಭೀರ್ಯ ತುಂಬಿದ ಪಾತ್ರ. ತನ್ನ ಆಸ್ಪತ್ರೆಯಲ್ಲಿ ಕೆಲಸ ಮಾಡುವ ವೈದ್ಯ ಹಣಕ್ಕಾಗಿ ಕೈ ಚಾಚುವಾಗ, ಅವರ ಜೊತೆ ಸಂಯಮದಿಂದ ಮಾತಾಡುವ ಶೈಲಿ ಸೂಪರ್. 

ಸಣ್ಣ ಪಾತ್ರಗಳು ಆದರೆ ಇಷ್ಟವಾಗುವ ಪಾತ್ರಗಳಲ್ಲಿ ಜಯಶ್ರೀ, ಚಿಂದೋಡಿ ಲೀಲಾ, ಪಾಪಮ್ಮ, ನೆರೆಹೊರೆಯಾಕಿ, ಕಮೆಡಿಯನ್ ಗುಗ್ಗು ನರಸಿಂಹರಾಜು, ಅವರ ಸಹಪಾಠಿಗಳು, ಬೆಂಗಳೂರು ನಾಗೇಶ್.. ಎಲ್ಲರೂ ಅಗತ್ಯಕ್ಕೆ ತಕ್ಕಂತೆ ಅಭಿನಯಿಸಿದ್ದಾರೆ. 




ಈ ಚಿತ್ರದ ಅತ್ಯುತ್ತಮ ಅಂಶ ಎಂದರೆ, ಜಿ ಕೆ ವೆಂಕಟೇಶ್ ಅವರು ನಿರ್ಮಾಪಕರಾಗಿ ಕನ್ನಡತನವನ್ನು ಉಳಿಸುವ ಸಾಹಸ ಮಾಡುವುದು. ಮತ್ತೆ ಚಿತ್ರದ ಕತೆಗೆ ಅಗತ್ಯವಿರುವ ಸನ್ನಿವೇಶದಲ್ಲಿ ಕನ್ನಡದ ಕಾದಂಬರಿ ಸಾರ್ವಭೌಮ ಶ್ರೀ ಅ ನ ಕೃಷ್ಣರಾಯರನ್ನು, ಮತ್ತು ಸುಗಮ ಸಂಗೀತ ಚಕ್ರವರ್ತಿ ಶ್ರೀ ಕಾಳಿಂಗರಾಯರನ್ನು  ತೆರೆಯ ಮೇಲೆ ತೋರಿಸುವುದು. 

ಶ್ರೀ ಅ ನಾ ಕೃ 

ಶ್ರೀ ಕಾಳಿಂಗರಾಯರು 

ಅಪಾರ ಜನಪ್ರಿಯತೆ ಹೊಂದಿರುವ "ಅಂತಿಂಥ ಹೆಣ್ಣು ನೀನಲ್ಲ" ಹಾಡನ್ನು ಶ್ರೀ ಕಾಳಿಂಗರಾಯರಿಂದ ಹಾಡಿಸಿ, ಹಾಗೆಯೇ ಅವರನ್ನು ತೆರೆಯ ಮೇಲೆ ತೋರಿಸುವುದು ವಿಶೇಷ. ಶ್ರೀ ಅ ನ ಕೃ ಅವರ ಮಾತುಗಳು ಇಷ್ಟವಾಗುತ್ತವೆ. 

ಒಟ್ಟಿನಲ್ಲಿ ಒಂದೊಂದು ಸದಭಿರುಚಿಯ ಪಾತ್ರಗಳು ಅದ್ಬುತ ಅಭಿನಯ ನೀಡು ಎನ್ ಸಿ ರಾಜನ್ ಅವರ ನಿರ್ದೇಶನದ ಶ್ರಮವನ್ನು ಸಾರ್ಥಕ ಪಡಿಸಿರುವುದು, ಹಾಗೆಯೇ ಕು ರ ಸೀತಾರಾಮಶಾಸ್ತ್ರಿ ಅವರ ಚಿತ್ರಕತೆ ಸಂಭಾಷಣೆ ಚುರುಕಾಗಿದೆ. ಕವಿಗಳಾದ ಶ್ರೀ ಕೆ ಎಸ್ ನರಸಿಂಹಸ್ವಾಮಿ ಅವರ ಕವನವನ್ನು ಸಂಗೀತಕ್ಕೆ ಅಳವಡಿಸಿರುವುದು, ಜೊತೆಗೆ ಕು ರ ಸೀ ಅವರ ಕೆಲವು ಗೀತೆಗಳು ಈ ಚಿತ್ರದ ಸುಂದರತೆಯನ್ನು ಹೆಚ್ಚಿಸಿರುವುದು ಕಾಣುತ್ತದೆ. ಅಣ್ಣಯ್ಯ ಅವರ ಛಾಯಾಗ್ರಹಣದಲ್ಲಿ ಕ್ಲೋಸ್ ಅಪ್ ಶಾಟ್ಸ್ ಇಷ್ಟವಾಗುತ್ತದೆ. 

ಪಿ ಬಿ ಶ್ರೀನಿವಾಸ್, ಎಸ್ ಜಾನಕೀ, ಮೋತಿ, ಲತಾ, ಜಿ ಕೆ ವೆಂಕಟೇಶ್, ಪದ್ಮ ಮತ್ತು ಕಾಳಿಂಗರಾಯರು ಚಿತ್ರದ ಸಂಗೀತಕ್ಕೆ ವಿಶೇಷ ಮೆರುಗು ನೀಡಿದ್ದಾರೆ. 

ಒಟ್ಟಿನಲ್ಲಿ ಸದಭಿರುಚಿಯ ಚಿತ್ರ ನೋಡಿದ ಖುಷಿ ನನ್ನದು. ಜೊತೆಗೆ ನಿರ್ಧಾರಗಳನ್ನು ತಡಮಾಡದೆ ತೆಗೆದುಕೊಳ್ಳದೆ ಹೋದರೆ ಅದು ನಮ್ಮ ಬದುಕನ್ನು ಬೆಳಗುವ ರೀತಿ, ಹಾಗೆ ಯೋಚಿಸದೆ ತೆಗೆದುಕೊಳ್ಳುವ ನಿರ್ಧಾರಗಳು ಕೆಲವೊಮ್ಮೆ ಪರಿಹಾರಗಳು ಅಂಗೈಯಲ್ಲಿಯೇ ಇದ್ದರೂ, ತಲೆಗೆ ಬಾರದೆ ಒದ್ದಾಡುವಂತೆ ಮಾಡುತ್ತದೆ ಎನ್ನುವುದಕ್ಕೆ ಈ ಚಿತ್ರವೇ ಸಾಕ್ಷಿ. 

No comments:

Post a Comment