ಅನೇಕ ಬಾರಿ ಹೀಗಾಗುತ್ತದೆ. ತಯಾರು ಮಾಡಿದ ಅಡಿಗೆ, ಪ್ರಯತ್ನ ಸೊಗಸಾಗಿರುತ್ತದೆ.. ಆದರೆ ಅದು ಆಸಕ್ತರ ಕೈ ಸೇರುವ ಹೊತ್ತಿಗೆ ಮೊಟಕಾಗಿ ರುಚಿಸದೆ ಹೋಗಬಹುದು ಅಥವ ಇನ್ನೂ ಬೇಕು ಅನಿಸುವಾಗಲೇ ಖಾಲಿ ಕೂಡ ಆಗಿರಬಹುದು.
ಶಿವಗಂಗೆ ಮಹಾತ್ಮೆ ಚಿತ್ರ ಭಕ್ತಿರಸ ಆಧಾರಿತ ಚಿತ್ರ. ಶಿವಗಂಗೆಯ ಸ್ಥಳ ಪುರಾಣ, ಅದರ ವಿಶೇಷತೆ, ಶಿವ ಸಾನಿಧ್ಯವಾದ ಸ್ಥಳ ಹೀಗೆ ಹತ್ತಾರು ವಿಶೇಷಣಗಳ ವಿಚಾರಗಳ ಕಥಾ ಹಂದರ ಹಿನ್ನೆಲೆಯಲ್ಲಿ ತಯಾರಾದ ಚಿತ್ರವಿದು.
ಸೋರಟ್ ಅಶ್ವಥ್ ಅವರ ಕಥೆ ಸಂಭಾಷಣೆ ಹಾಡುಗಳು
ಜಿ ಕೆ ರಘು ಅವರ ಸಂಗೀತ
ಎಸ್ ಮಣಿ ಅವರ ಛಾಯಾಗ್ರಹಣ
ತಿಮ್ಮರಾಯಪ್ಪ ಅವರ ನಿರ್ಮಾಣದಲ್ಲಿ
ಗೋವಿಂದಯ್ಯ ನಿರ್ದೇಶಿಸಿದ ಚಿತ್ರವಿದು.
ರಾಜಕುಮಾರ್, ಹರಿಣಿ, ಉದಯಕುಮಾರ್, ಅಶ್ವಥ್, ಜಯಶ್ರೇ, ಬಾಲಕೃಷ್ಣ, ಜಯ, ರತ್ನಾಕರ್, ರಾಜಶ್ರೀ ಅವರ ತಾರಾಗಣದಲ್ಲಿ ತಯಾರಾದ ಚಿತ್ರದ ಹೂರಣವಿಶ್ಟೆ.
ರಾಜಮನೆತನದವರಾದರೂ ರಾಜಕುಮಾರ್ ಗುಡಿಸಿಲಿನಲ್ಲಿ ಬೆಳೆಯುತ್ತಾರೆ. ತಾಯಿ ಜಯಶ್ರೀ ಅವರಿಗೆ ಕಣ್ಣುಗಳು ಕಾಣದಾಗಿರುತ್ತದೆ. ಅಪ್ಪನಾದ ಅಶ್ವಥ್ ಕಾರಣಾಂತರಗಳಿಂದ ಎರಡನೇ ಮದುವೆಯಾಗಿದ್ದರೋ ಆಕೆಯ ಮಡದಿ ರಾಜ್ಯವನ್ನು ಕಬಳಿಸಬೇಕು ಎಂಬ ಕುಟಿಲನೀತಿಯ ಕುತಂತ್ರಿ ಸೇನಾಪತಿ ಉದಯಕುಮಾರ್ ಜೊತೆಗೂಡಿ ವಿಷವ್ಯೂಹ ರಚಿಸಿರುತ್ತಾಳೆ.
ರಾಜನನ್ನು ಮುಗಿಸಿ, ರಾಜ್ಯವನ್ನು ಸೇನಾಪತಿಯ ಜೊತೆ ಅನುಭವಿಸಬೇಕು ಎನ್ನುವ ಅವಳ ಯೋಜನೆಗೆ ಅಡ್ಡಿಯಾಗಿರೋದು ಮಂತ್ರಿಯ ನಿಷ್ಠೆ ಹಾಗೂ ಆತನ ಮುಂದಾಲೋಚನೆ. ಕುತಂತ್ರ ಮಾಡಿ ಮಹಾರಾಜನನ್ನೇ ಕೊಂದಿದ್ದಾನೆ ಎನ್ನುವ ಸುಳ್ಳು ಆರೋಪ ಹೊರಿಸಿ ಮಂತ್ರಿಯನ್ನು ಕಾರಾಗೃಹಕ್ಕೆ ಕಳಿಸುತ್ತಾರೆ. ಇತ್ತ ಮಹಾರಾಜನನ್ನೂ ಕೂಡ ಸತ್ತಿದ್ದಾನೆ ಎಂದು ಪ್ರಜೆಗಳಿಗೆ ನಂಬಿಸಿ, ಆತನನ್ನು ಬಂಧನದಲ್ಲಿಟ್ಟಿರುತ್ತಾರೆ.
ಇತ್ತ ರಾಜಕುಮಾರ್ ಪಾತ್ರ ತನ್ನ ತಾಯಿಗೆ ಅಂಧತ್ವವನ್ನು ನಿವಾರಣೆಮಾಡುವ ತೀರ್ಥ ಶಿವಗಂಗೆಯಲ್ಲಿ ಸಿಗುತ್ತದೆ ಎನ್ನುವ ಗುರುವಿನ ಮಾತಿನ ಮೂಲಕ ಶಿವಗಂಗೆಗೆ ತೆರಳುತ್ತಾನೆ.
ಇತ್ತ ಸೇನಾಪತಿಯು ಮಂತ್ರಿಯ ಮಗಳು ಹರಿಣಿಯನ್ನು ಹೆದರಿಸಿ, ಜೊತೆಗೆ ಅವಳ ಮನೆಗೆ ಬೆಂಕಿ ಹಚ್ಚಿಸಿ ಅವಳನ್ನು ಕಾಡುಪಾಲಾಗುವಂತೆ ಮಾಡುತ್ತಾನೆ. ಇತ್ತ ರಾಜಕುಮಾರ್ ಅವರ ಅಮ್ಮ ಜಯಶ್ರೀ ಇರುವ ಗುಡಿಸಲಿಗೂ ಬೆಂಕಿ ಹಚ್ಚಿಸಿ ಆಕೆಯನ್ನು ಕಾಡುಪಾಲಾಗುವಂತೆ ಮಾಡುತ್ತಾನೆ.
ಸೇನಾಪತಿಯ ಬಲಗೈ ಬಾಲಕೃಷ್ಣ ಉಪಾಯಮಾಡಿ ಮಂತ್ರಿಯನ್ನು ಸೆರೆಯಿಂದ ಬಿಡಿಸುತ್ತಾನೆ ಮಂತ್ರಿಯು ಮಹಾರಾಜನು ಇರುವ ಜಾಗವನ್ನು ಪತ್ತೆ ಮಾಡಿ ಆತನನ್ನು ಬಿಡಿಸುತ್ತಾನೆ. ಆದರೆ ಮತಿಕಳೆದುಕೊಂಡ ಮಹಾರಾಜ ಕಾಡಿನಲ್ಲಿ ಅಲೆಯುತ್ತಾ ಜಯಶ್ರೀ ಮತ್ತು ಹರಿಣಿಯು ಇರುವ ಸ್ಥಳಕ್ಕೆ ಬರುತ್ತಾರೆ.
ಇತ್ತ ಬಹು ಸಾಹಸಮಾಡಿ, ಶಿವಗಂಗೆಯಿಂದ ಪುಣ್ಯ ತೀರ್ಥವನ್ನು ತಂದು, ಅದರ ಶಕ್ತಿಯಿಂದ ಜಯಶ್ರೀ ಅವರಿಗೆ ಅಂಧತ್ವ ನಿವಾರಣೆಯಾಗುತ್ತದೆ ಮತ್ತು ಮಹಾರಾಜನಿಗೆ ಸ್ಮೃತಿ ಬರುತ್ತದೆ. ತನ್ನ ಹೆಂಡತಿಯನ್ನು ಮಗನನ್ನು ಗುರುತು ಹಿಡಿಯುತ್ತಾರೆ. ಜೊತೆಗೆ ರಾಜಕುಮಾರ್ ಸೇನಾಪತಿ ಉದಯಕುಮಾರ್ ಜೊತೆ ಹೋರಾಡಿ ಮಂತ್ರಿಯನ್ನು ರಕ್ಷಿಸಿ, ಆತನ ಮಗಳು ಹರಿಣಿಯನ್ನು ವರಿಸುತ್ತಾನೆ,
ಆದರೆ ತಂತ್ರಜ್ಞಾನದ ಕಸಿವಿಯಿಂದ ಅನೇಕ ದೃಶ್ಯಗಳು ತುಂಡಾಗಿವೆ, ಕತೆ ಪೂರ್ಣಪ್ರಮಾಣವಾಗಿ ಬಿತ್ತರವಾಗುವ ಹಾಗೆ ಕಾಣಿಸೋಲ್ಲ. ಮಧ್ಯೆ ಮಧ್ಯೆ ದೃಶ್ಯಗಳು ತುಂಡಾಗಿರುವುದರಿಂದ ಕಥೆಯ ಓಘಕ್ಕೆ ಅಡ್ಡಿ ಅನಿಸುತ್ತದೆ. ಪೂರ್ಣ ಚಿತ್ರವನ್ನು ನೋಡಿದ ಮೇಲೆ ಕಥಾಹಂದರ ಅರ್ಥವಾಗುತ್ತದೆ.
ರಾಜಕುಮಾರ್ ಅವರ ಪಾತ್ರ ಇಪ್ಪತ್ತು ನಿಮಿಷಗಳಿಗೂ ಹೆಚ್ಚಿಲ್ಲ. ಸುಮಾರು ೧೨೬ ನಿಮಿಷಗಳ ಚಿತ್ರದಲ್ಲಿ ಅರ್ಧಘಂಟೆಗೂ ಕಡಿಮೆ ರಾಜಕುಮಾರ್ ಅವರ ಪಾತ್ರವನ್ನು ನೋಡಬಹುದು. ಆದರೆ ಅವರಿಗೆ ತಿಳಿದಿತ್ತೋ ಇಲ್ಲವೇ ಗೊತ್ತಿಲ್ಲ. ಅವರ ದೃಶ್ಯಗಳಲ್ಲಿ ಅವರ ಅಭಿನಯಕ್ಕೆ ಪೂರ್ಣ ಅಂಕ ಸಿಗುತ್ತದೆ. ಕಥಾವಸ್ತು ಅವರ ಅಭಿನಯವನ್ನು ಪೂರ್ಣಪ್ರಮಾಣದಲ್ಲಿ ಹಿಡಿದಿಡಲು ಸಹಕಾರಿಯಾಗಿಲ್ಲವಾದರೂ, ಚೆಲುವಿನ ಮುಖ, ಆ ಸಂಭಾಷಣೆ ಹೇಳುವ ವೈಖರಿ, ಹಿರಿಕಿರಿಯರ ಜೊತೆ ಸಲೀಸಾದ ಅಭಿನಯ ಈ ಚಿತ್ರದ ಪ್ಲಶ್ ಪಾಯಿಂಟ್.
ಕೆಲವೇ ದೃಶ್ಯಗಳಾದರೂ ಅಶ್ವಥ್, ಜಯಶ್ರೀ ಅಭಿನಯ ಸೊಗಸಾಗಿದೆ
ಉದಯಕುಮಾರ್ ಈ ಚಿತ್ರದಲ್ಲಿ ವಿಜೃಂಭಿಸಿದ್ದಾರೆ. ಸಾಧುವಿನ ದೃಶ್ಯದಲ್ಲಿ ತುಂಬಾ ಸೊಗಸಾಗಿ ಕಾಣುತ್ತಾರೆ ಉಳಿದಂತೆ ಹರಿಣಿ, ರತ್ನಕರ್, ಬಾಲಕೃಷ್ಣ, ಜಯ ಪಾತ್ರಕ್ಕೆ ತಕ್ಕ ಅಭಿನಯ ನೀಡಿದ್ದಾರೆ
ಹಾಡುಗಳಿಗೆ ಪಿಬಿಶ್ರೀನಿವಾಸ್, ಎಸ್ ಜಾನಕಿ, ಎಲ್ ಆರ್ ಈಶ್ವರಿ, ಜಿಕೆವೆಂಕಟೇಶ್, ಪೀಠಾಪುರಂ ನಾಗೇಶ್ವರರಾವ್ ದನಿ ನೀಡಿದ್ದಾರೆ.
ರಾಜಕುಮಾರ್ ಅವರ ಚಿತ್ರಗಳ ವಿಶೇಷತೇ ಅವರ ದಣಿವರಿಯದ ಅಭಿನಯ..
No comments:
Post a Comment