Sunday, March 10, 2024

ಸೇತುವೆಯಂತಹ ಸಿನಿಮಾಗಳಿಗೆ ಹಾಕಿದ ನಾಂದಿ 1964 (ಅಣ್ಣಾವ್ರ ಚಿತ್ರ ೫೭/೨೦೭)

ಮಸಾಲೆ ಚಿತ್ರಗಳಲ್ಲಿ ಸಂದೇಶ ಇರೋಲ್ಲ.. ಸಂದೇಶವುಳ್ಳ ಸಿನೆಮಾಗಳಲ್ಲಿ ಮಸಾಲೆ ಇರೋಲ್ಲ ಅಂತ ಇನ್ನೂ ಮಾತುಗಳು ಆರಂಭವಾಗದ ಅಥವ ಅಷ್ಟೊಂದು ಚಾಲ್ತಿಯಲ್ಲಿರದ ಮಾತುಗಳ ಕಾಲವದು.. ಒಂದು ಸಂಕೀರ್ಣ ಸಮಸ್ಯೆಯನ್ನು ಒಂದು ಚಿತ್ರರೂಪದಲ್ಲಿ ತರಬಹುದು.. ಜೊತೆಯಲ್ಲಿ ಎಲ್ಲರಿಗೂ ನಿಲುಕುವ ಸಿನಿಮಾ ಮಾಡಬಹುದು ಎಂದು ತೋರಿಸಿದ ಅಥವ ಅಂತಹ ಸಿನಿಮಾಗಳಿಗೆ ನಾಂದಿ ಹಾಡಿದ ಚಿತ್ರ "ನಾಂದಿ"

ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದು ಎನ್ ಎಲ್ ಲಕ್ಷ್ಮೀನಾರಾಯಣ.. ಆರ್ ಎನ್ ಜಯಗೋಪಾಲ್ ಶ್ರದ್ದೆಯಿಂದ ಸಂಭಾಷಣೆ ಮತ್ತು ಹಾಡುಗಳನ್ನು ರಚಿಸಿದ್ದಾರೆ.. ಮತ್ತು ಆರ್ ಎನ್ ಕೃಷ್ಣಪ್ರಸಾದ್ ಛಾಯಾಗ್ರಹಣ ಮಾಡಿದ್ದಾರೆ. ಶ್ರವಣ ಸಮಸ್ಯೆ ಇರುವ ಕಥಾವಸ್ತುವಿಗೆ ಸಂಗೀತ ಬೇಕೇ ಎಂದಾಗ ಹೌದು ಬೇಕು ಎಂದು ತಮ್ಮ ಪ್ರತಿಭೆಯನ್ನು ಒರೆ ಹಚ್ಚಿ ಸಂಗೀತ ನೀಡಿರುವುದು ವಿಜಯಭಾಸ್ಕರ್. 

ಶ್ರೀ ಭಾರತೀ ಚಿತ್ರ ಲಾಂಛನದಲ್ಲಿ ವಾದಿರಾಜ್ ಜವಾಹರ್ ನಿರ್ಮಾಪಕರು.. ಈ ರೀತಿಯ ಚಿತ್ರಗಳನ್ನು ನಿರ್ಮಾಣ ಮಾಡಲು ಧೈರ್ಯ ಬೇಕು.. ಆ ಧೈರ್ಯ ಮಾಡಿದ್ದಾರೆ..  ಮತ್ತು ಯಶಸ್ವೀ ಕೂಡ ಆಗಿದ್ದಾರೆ. 

ಈ ಚಿತ್ರ ಅಂತರ ರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡ ಚಿತ್ರ ಎಂಬ ಹೆಗ್ಗಳಿಕೆ  ನಿರ್ಮಾಪಕ ನಿರ್ದೇಶಕರ ಪರಿಶ್ರಮಕ್ಕೆ ಸಾರ್ಥಕತೆ ಕೊಟ್ಟಿದೆ. 

ಆ ಕಾಲದ ಪ್ರಸಿದ್ಧ ನಟನಟಿಯರು ಶ್ರದ್ದೆಯಿಂದ ನಟಿಸಿದ ಚಿತ್ರವಿದು. ರಾಜಕುಮಾರ್, ಕಲ್ಪನಾ, ದಿನೇಶ್, ಬಾಲಕೃಷ್ಣ, ಜಯಶ್ರೀ , ಸೋರಟ್ ಅಶ್ವಥ್, ಹರಿಣಿ, ಗಣಪತಿ ಭಟ್, ಹನುಮಂತಾಚಾರ್, ಆರ್ ಟಿ ರಾಮ, ಶಾಂತಮ್ಮ, ಉದಯಕುಮಾರ್ ಅಭಿನಯಸಿದ್ದಾರೆ. 

ರಾಜಕುಮಾರ್ 


ಸೋರಟ್ ಅಶ್ವಥ್ 

ಬಾಲಣ್ಣ  ದಿನೇಶ್ 

ಬಾಲಣ್ಣ 

ಹರಿಣಿ 

ಜಯಶ್ರೀ 

ಕಲ್ಪನಾ 


ಸೋರಟ್ ಅಶ್ವಥ್ ಮತ್ತು ಶಾಂತಮ್ಮ 

ಉದಯಕುಮಾರ್ 

ನಿರ್ಮಾಪಕ ವಾದಿರಾಜ್ 


ಸರಳ ಚಿತ್ರಕತೆ.. ಆದರೆ ಅದಕ್ಕೆ ಕೊಟ್ಟಿರುವ ಮತ್ತು ನಿರೂಪಣೆ ವಿಶಿಷ್ಟ. ಸರಕಾರಿ ಶಾಲೆಯ ಅಧ್ಯಾಪಕ ವರ್ಗವಾಗಿ ತನ್ನ ಮಡದಿಯ ಜೊತೆ ಬರುತ್ತಾನೆ.. ಆ ಊರಿನ ನೆರೆಹೊರೆಯವರು ಮತ್ತು ಆತನ ಶಾಲೆಯ ಸಹೋದ್ಯೋಗಿಗಳು ಸಂಸಾರ ನೆಲೆಗೊಳ್ಳಲು ಸಹಾಯಮಾಡುತ್ತಾರೆ. 

ಪತಿಪತ್ನಿಯರ ಸಂಸಾರ ಚೆನ್ನಾಗಿರುತ್ತೆ.. ಹೆಂಡತಿ ಗರ್ಭ ಧರಿಸಿ.. ಮಗುವನ್ನು ಹೆತ್ತು ಅಸುನೀಗುತ್ತಾಳೆ. ಮಗುವನ್ನು ನೋಡಿಕೊಳ್ಳೋಕೆ ಪಕ್ಕದ ಮನೆಯ ಒಡತಿ ಸಹಾಯ ಮಾಡುತ್ತಿರುತ್ತಾರೆ.. ಆದರೆ ಅವರ ಯಜಮಾನರಿಗೆ ಬೇರೆ ಊರಿಗೆ ವರ್ಗವಾದದ್ದರಿಂದ ವಿಧಿಯಿಲ್ಲದೇ ಮಗುವನ್ನು ನೋಡಿಕೊಳ್ಳಲು ಮಾತು ಆಡಲು ಬಾರದ.. ಕಿವಿ ಕೇಳದ, ಮದುವೆಯಾಗದ ತರುಣಿಯನ್ನು ಮದುವೆ ಮಾಡಿಕೊಳ್ಳುತ್ತಾರೆ. ಆದರೆ ವಿಧಿ ಅಲ್ಲೂ ಆಟವಾಗುತ್ತದೆ.. 

ಕಿವಿ ಕೇಳದ ಮಡದಿ ಮಗುವನ್ನು ಶ್ರದ್ದೆಯಿಂದ ನೋಡಿಕೊಳ್ಳುತ್ತಿದ್ದರು, ಮನೆಯಲ್ಲಿ ಅಪಘಾತವಾಗಿ ಮಗು ಉರಿಯುವ ಬೆಂಕಿಯಲ್ಲಿ ಸಿಕ್ಕಿ ಸತ್ತು ಹೋಗುತ್ತದೆ. ಇದು ಆಕೆಯ ಮನಸ್ಸಿಗೆ ಬಹಳ ಘಾಸಿ ಮಾಡುತ್ತದೆ.. ಮತ್ತೆ ಬದುಕು ಮರಳಿ ಹಾದಿಗೆ ಬರುತ್ತದೆ.. ಆಕೆ ಗರ್ಭಿಣಿಯಾಗಿ ಮಗುವಿಗೆ ಜನನ ನೀಡುತ್ತಾಳೆ.. ಮಗುವಿಗೆ ಶ್ರವಣ ಸಮಸ್ಯೆ ಇರುವುದಿಲ್ಲ.. ಆದರೆ ವಿಪರೀತ ಜ್ವರ ಬಂದು.. ಆ ಜ್ವರದ ತಾಪಕ್ಕೆ ಮಗುವಿಗೆ ಶ್ರವಣ ಸಮಸ್ಯೆ ಬರುತ್ತದೆ.. 

ಆಗ ಆತನ ಅಧ್ಯಾಪಕ ಮಿತ್ರರ ಸಲಹೆಯಂತೆ ಪಟ್ಟಣದಲ್ಲಿ ಕಿವುಡು ಮೂಗರ ಶಾಲೆಯಲ್ಲಿ ತರಭೇತಿ ಪಡೆದು.. ಅದನ್ನು ತನ್ನ ಮಡದಿ ಮತ್ತು ಮಗುವಿನ ಮೇಲೆ ಪ್ರಯೋಗ ಮಾಡಿ.. ಸಫಲನಾಗುತ್ತಾನೆ.. ಮತ್ತೆ ತುಟಿ ಚಾಲನೆಯಿಂದ ಮಾತನ್ನು ಗ್ರಹಿಸಿ ಮಾತಾಡಬಹುದು ಎಂಬ ಪ್ರಯತ್ನದಲ್ಲಿ ಯಶಸ್ವಿಯಾಗುತ್ತಾನೆ

ಈ ಕಥೆಯನ್ನು ಒಂದು ದೃಶ್ಯಕಾವ್ಯದ ಮೂಲಕ ಕಟ್ಟಿ ಕೊಟ್ಟಿದ್ದಾರೆ ನಿರ್ದೇಶಕರು. 

ರಾಜಕುಮಾರ್ ಇಲ್ಲಿ ಅತ್ಯಂತ ಸಂಯಮ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದಾರೆ ಅನ್ನೋದಕ್ಕಿಂತ ತಾವೇ ಪಾತ್ರವಾಗಿದ್ದಾರೆ.. ಪ್ರತಿಯೊಂದು ದೃಶ್ಯವನ್ನು ಅರೆದು ಕುಡಿದಂತೆ ಅಭಿನಯಿಸಿರುವ ಅವರ ಪ್ರತಿಭೆಗೆ ಎಷ್ಟು ಹೊಗಳಿಕೆ ಸಲ್ಲಿಸಿದರು ಕಡಿಮೆಯೇ.. ಕಚ್ಚೆ ಪಂಚೆ, ಕೋಟು ಪೇಟದಲ್ಲಿ ಸುಂದರವಾಗಿ ಕಾಣುವ ಅವರು.. ಪಟ್ಟಣದ ದಿರಿಸಿನಲ್ಲೂ ಕೂಡ ಅಷ್ಟೇ ಮುದ್ದಾಗಿ ಕಾಣುತ್ತಾರೆ. 

ತನ್ನ ಮಗು ಬೆಂಕಿ ಅಪಘಾತದಲ್ಲಿ ಸತ್ತು ಹೋಗಿದೆ.. ಅದಕ್ಕೆ ಕಾರಣ ತನ್ನ ಕಿವಿ ಕೇಳದ ಮಡದಿ ಎಂದು ಗೊತ್ತಾದಾಗ ಅವರ ಅಭಿನಯ ಸೊಗಸು. 

ಮಡದಿಗೆ ಮತ್ತು ಮಗುವಿಗೆ ಪಾಠ ಹೇಳಿಕೊಡುವಾಗಿನ ಅವರ ಶ್ರದ್ಧೆ ಇಷ್ಟವಾಗುತ್ತದೆ.. ಹಾಡೊಂದ ಹಾಡುವೆ ನೀ ಕೇಳು ಮಗುವೇ ಅದ್ಭುತ ಅಭಿನಯ ಅವರದ್ದು. 

ಬಾಲಣ್ಣ ಇಲ್ಲಿ ಅಂತಹ ಗಮನಾರ್ಹ ಪಾತ್ರವಲ್ಲದಿದ್ದರೂ ಐದು ರೂಪಾಯಿ ಕೊಡಿ ಅಂತ ತನ್ನ ಸಹೋದ್ಯೋಗಿಗಳ ಬಳಿ ಕೇಳುವ ದೃಶ್ಯದಲ್ಲಿ ಇಷ್ಟವಾಗುತ್ತಾರೆ. ತಮ್ಮ ಕಷ್ಟ ಕಾರ್ಪಣ್ಯಗಳನ್ನು ಹೇಳಿಕೊಳ್ಳುತ್ತಾ, ತಮಗೆ ತೋಚಿದ ರೀತಿಯಲ್ಲಿ ಪರಿಹಾರ ಹೇಳುತ್ತಾ ಹೋಗುವ ಅವರ ಅಭಿನಯ ಸೊಗಸು.. ಶಾಲೆಯ ಮಾಸ್ತರಾಗಿ ತರಗತಿಯಲ್ಲಿ ನಿದ್ದೆ ಹೊಡೆಯುತ್ತಾ ಬೇಜವಾಬ್ಧಾರಿತನದಿಂದ ಮಾತಾಡುವ ಅವರ ಅಭಿನಯ ಸೊಗಸು. 

ನಾಯಕಿಯ ತಂದೆಯಾಗಿ ಕೆಲವು ದೃಶ್ಯಗಳಲ್ಲಿ ಕಾಣುವ ಸೋರಟ್ ಅಶ್ವಥ್.. ಆಕೆಯ ಮಡದಿ ಶಾಂತಮ್ಮ.. 

ಸಹೋದ್ಯೋಗಿಯಾಗಿ ಮತ್ತು ಕಿವುಡು ಮೂಗರ ಶಾಲೆಯ ಬಗ್ಗೆ ಮಾಹಿತಿ ಕೊಡುವ ಪಾತ್ರದಲ್ಲಿ ದಿನೇಶ್ ಈ ಚಿತ್ರದಿಂದ ಕರುನಾಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. 

ಉದಯಕುಮಾರ್ ಅತಿಥಿ ಪಾತ್ರದಲ್ಲಿ ಬಂದು ಹೋಗುತ್ತಾರೆ. ಹಾಗೆಯೇ ನೆರೆಹೊರೆಯ ಗಯ್ಯಾಳಿಯಾಗಿ ಆರ್ ಟಿ ರಮ, ಸಹೋದ್ಯೋಗಿಗಳಾಗಿ ಹನುಮಂತಾಚಾರ್, ಗಣಪತಿ ಭಟ್ ಗಮನಸೆಳೆಯುತ್ತಾರೆ. 

ಮುಖ್ಯ ಪಾತ್ರ ಮಡದಿ ಮಗುವನ್ನು ಬಿಟ್ಟು ಹೋದಾಗ ನೆರೆಹೊರೆಯವರಾಗಿ ಮಗುವನ್ನು ನೋಡಿಕೊಳ್ಳುವ ಹಾಗೆ ಇನ್ನೊಂದು ಮದುವೆ ಮಾಡಿಕೊಳ್ಳಿ ಎಂದು ಸಲಹೆ ನೀಡುವ ಪಾತ್ರದಲ್ಲಿ ಜಯಶ್ರೀ ಇಷ್ಟವಾಗುತ್ತಾರೆ. 

ಎರಡು ಪಾತ್ರ.. ನಾಯಕನ ಬದುಕಿನ ತಿರುವಿಗೆ ಕಾರಣವಾಗುವ ಪಾತ್ರಗಳು ಹರಿಣಿ ಮತ್ತು ಕಲ್ಪನಾ. 

ಚಿತ್ರದ ಮೊದಲ ಭಾಗದಲ್ಲಿ ಕಲ್ಪನಾ ಕಥೆಯ ಓಘಕ್ಕೆ ತಕ್ಕ ಅಭಿನಯ ನೀಡಿದ್ದಾರೆ.. ವೀಣೆ ನುಡಿಸುವಾಗ.. ನಾಯಕ ನಾಯಕಿಯ ಚಿತ್ರ ತೆಗೆಯಲು ಕ್ಯಾಮೆರಾ ತೆಗೆದಾಗ ಕೊಡುವ ಭಂಗಿ, ತನ್ನ ಮನೆಯನ್ನು ಸಜ್ಜುಗೊಳಿಸುವಾಗ ಅವರ ಅಭಿನಯ ಸೊಗಸು 

ಚಿತ್ರದ ಎರಡನೇ ಭಾಗದಲ್ಲಿ ಮಾತನಾಡದ, ಕಿವಿ ಕೇಳದ ಪಾತ್ರವಾಗಿ ಹರಿಣಿ ಭಾವಾಭಿನಯ ಸೊಗಸಾಗಿದೆ. ಮಾತನಾಡದ ಪಾತ್ರವಾಗಿದ್ದರಿಂದ ಮುಖಾಭಿನಯವೇ, ಭಾವಾಭಿನಯವೇ ಪ್ರಮುಖವಾಗಿರುವುದರಿಂದ ಆಕೆಯ ಅಭಿನಯ ಸೊಗಸಾಗಿದೆ. 

ಸಂಗೀತ ಈ ಚಿತ್ರದ ಆತ್ಮ ಅನ್ನಬಹುದು.. ಪ್ರತಿ ದೃಶ್ಯಕ್ಕೂ ವಿಜಯಭಾಸ್ಕರ್ ಅವರ ಸಂಗೀತ, ಮತ್ತು ಹಿನ್ನೆಲೆ ಸಂಗೀತ ಅತಿ ಅದ್ಭುತವಾಗಿದೆ. ಸಿನೆಮಾದ ದೃಶ್ಯಕ್ಕೂ ನೀಡಿರುವ ಹಾಡಿನ ಸಂಗೀತಕ್ಕೂ ವಿಭಿನ್ನವಾಗಿ ನಿಲ್ಲುತ್ತದೆ.. ಅನೇಕ ದೃಶ್ಯಗಳನ್ನು ತಮ್ಮ ಅದ್ಭುತ ಸಂಗೀತದ ಕ್ರೀಯಾಶೀಲತೆಯಲ್ಲಿ ಮೇಲಕ್ಕೆ ಏರಿಸಿದ್ದಾರೆ.  ಅದರ ಒಂದು ಉದಾಹರಣೆ ಕಿವಿ ಕೇಳದ ಹರಿಣಿ ಮನೆಯಲ್ಲಿನ ವೀಣೆಯನ್ನು ಮೀಟುವಾಗ ಅಲ್ಲಿ ನಿಶ್ಯಬ್ಧವಿದೆ . ಹರಿಣಿಗೆ ಕಿವಿ ಕೇಳದೆ ಇದ್ದರೂ, ವೀನೆಯನ್ನು ಮೀಟಿದಾಗ ಆ ಕಂಪನದ ಅನುಭವಾಗುತ್ತೆ, ಆದರೆ ಶಬ್ದ ಕೇಳಿಸದೇ ಅವರ ಮುಖಾಭಿನಯ ಅದ್ಭುತ.  ಪಕ್ಕದ ಕೋಣೆಯಲ್ಲಿನ ರಾಜಕುಮಾರ್ ಅವರಿಗೆ ವೀಣೆಯ ಸದ್ದು ಕೇಳಿಸುತ್ತದೆ.. ಆದರೆ ಮತ್ತೆ ಹರಿಣಿಯನ್ನು ತೋರಿಸಿದಾಗ ಅಲ್ಲಿ ರಾಜಕುಮಾರ್ ಇರುತ್ತಾರೆ ಆಗ ವೀಣೆ ಸದ್ದು ಕೇಳುತ್ತದೆ. ಕ್ರಿಯಾಶೀಲತೆ ವಿಜಯಭಾಸ್ಕರ್ ಅವರ ಪ್ರತಿಭೆ ಸೂಪರ್ ಎನಿಸುತ್ತದೆ. 

ಹಾಡುಗಳು ಸೊಗಸಾಗಿವೆ 
೧.  ನಮ್ಮ ತಾಯಿ ಭಾರತಿ - ಪಿ ಬಿ ಶ್ರೀನಿವಾಸ್ 
೨. ಚಂದ್ರಮುಖಿ ಪ್ರಾಣಸಖಿ - ಎಸ್ ಜಾನಕೀ, ಬೆಂಗಳೂರು ಲತಾ 
೩. ಹಾಡೊಂದ ಹಾಡುವೆ - ಪಿ ಬಿ ಶ್ರೀನಿವಾಸ್ 
೪. ಉಡುಗೊರೆಯೊಂದ ತಂದ - ಎಸ್ ಜಾನಕೀ
೫. ಸತ್ಯಕೆ ಎಂದಿಗೂ ಜಯವೆಂಬ - ಪಿ ಬಿ ಶ್ರೀನಿವಾಸ್, ಎಸ್ ಜಾನಕೀ
೬. ನಮ್ಮ ಪಾಪ ಮುದ್ದು ಪಾಪ - ಎಲ್ ಆರ್ ಈಶ್ವರಿ 

ಇಡೀ ಚಿತ್ರದ ಕಪ್ತಾನ ನಿರ್ದೇಶಕರು ಎನ್ ಎಲ್ ಲಕ್ಹ್ಮೀನಾರಾಯಣ .. ಅವರ ಪರಿಶ್ರಮ ಪ್ರತಿ ದೃಶ್ಯದಲ್ಲೂ ಅವರ ಕಲಾತ್ಮಕತೆ.. ಇಡೀ ಚಿತ್ರತಂಡವನ್ನು ಸಮರ್ಥವಾಗಿ ದುಡಿಸಿಕೊಂಡು ಸಾರ್ಥಕ ಚಿತ್ರವನ್ನು ನೀಡಿದ್ದಾರೆ. 

ಮತ್ತೊಂದು ಚಿತ್ರದ ಮೂಲಕ ಬರುವೆ..