Sunday, September 13, 2015

ಅಂತರಂಗವನ್ನು ಗುಪ್ತಗಾಮಿನಿಯಾಗಿ ಹರಿಸುವ - ರಂಗನಾಯಕಿ (1981)

ಪುಟ್ಟಣ್ಣ ಕಣಗಾಲ್ ಹತ್ತಿರ ಕ್ಷಮೆ ಕೇಳಿ ಕೇಳಿ ಸಾಕಾಯ್ತು.. ಇರಲಿ ಅವರು ಕ್ಷಮಿಸುವಂಥಹ ಧಾರಾಳ ಮನಸ್ಸಿನವರು.. ಅವರ ಕ್ಷಮೆಯಾಚನೆಯೊಂದಿಗೆ ಮತ್ತೆ ಅವರ ಚಿತ್ರರತ್ನಗಳ ಕಡೆಗೆ ನನ್ನ ಪಯಣ.

ದೂರದರ್ಶನ ಎಂಭತ್ತರ ದಶಕದ ಆರಂಭದಲ್ಲಿ ಮಾಯಾಜಾಲವನ್ನೇ ಸೃಷ್ಠಿಸಿತ್ತು.. ಪ್ರತಿ ಶನಿವಾರ ಚಲನಚಿತ್ರಗಳಿಗೋಸ್ಕರ ಕಾದು ಕುಳಿತಿರುತ್ತಿದ್ದೆವು. ರಂಗನಾಯಕಿ ಆ ರೀತಿಯಲ್ಲಿ ಯಾರದೋ ಮನೆಯ ದೂರದರ್ಶನದಲ್ಲಿ, ಕಿಟಕಿಯ ಮೂಲಕ ಅಥವಾ ಅವರ ಧಾರಾಳ ಮನಸ್ಸಿದ್ದರೆ ಅವರ ಮನೆಯೊಳಗೇ ಕೂತು ನೋಡುವ ಅವಕಾಶ.     

ಬಾಲ್ಯದಲ್ಲಿಯೆ ಈ ಚಿತ್ರ ನಾನಾ ಕಾರಣಗಳಿಂದ ಇಷ್ಟವಾಗಿತ್ತು. 

೧) ಎಂ ಏನ್ ವ್ಯಾಸರಾವ್ ಅವರ ಪಾನಿ ಪುರಿ ಗೀತೆ ಎನ್ನುವಂತೆ ರಚಿಸಿದ "ಪ್ರೇಮದಲ್ಲಿ ಸ್ನೇಹದಲ್ಲಿ" ಹಾಡು, ಎಂ ರಂಗರಾವ್ ಅವರ ಅದ್ಭುತ ಟಪೋರಿ ವಾದ್ಯ ಮೇಳ, ಅದಕ್ಕೆ ಸಂಗೀತ ಅದರಲ್ಲಿಯೂ " ಮೈ ಡಿಯರ್" ಎಂದು ಹಾಡಿದ ಕೂಡಲೇ ಬರುವ ಡ್ರಮ್ ಸಂಗೀತ ನನ್ನನ್ನು ಹುಚ್ಚನನ್ನಾಗಿ ಮಾಡಿಸಿತ್ತು. ಎಸ್ ಪಿ ಬಾಲಸುಬ್ರಮಣ್ಯಂ ಅವರ ಅದ್ಭುತ ಗಾಯನ, ಪ್ಲೇ ಬಾಯ್ ಎನ್ನುವ ಒಂದು ಇಮೇಜ್ ಸೃಷ್ಠಿಗೆ ಕಾರಣವಾದ ರಾಮಕೃಷ್ಣ ಅವರ ಪಾತ್ರ, 

೨) " ಮಂದಾರ ಪುಷ್ಪವು ನೀನು" ವಿಜಯನಾರಸಿಂಹ ರಚಿಸಿರುವ ಈ ಹಾಡಿನ್ನು ಜಯಚಂದ್ರನ್ ಶುರುಮಾಡುವ ರೀತಿ, ಧರ್ಮಸ್ಥಳದ ಉದ್ಯಾನವನದಲ್ಲಿ ರಾಧ ಕೃಷ್ಣರ ಮೂರ್ತಿಯ ಮುಂದೆ ಶುರುವಾಗುವ ಈ ಹಾಡು, ಮದ್ಯೆ ಮದ್ಯೆ ಎಸ್ ಪಿ ಶೈಲಜಾ ಸುರಿಸುವ ಜೇನು ಹನಿ ಒಂದು ಕಡೆಯಾದರೆ, ಸರಳ ಇಂಪಾದ ಸಂಗೀತ, ಸುಂದರ ಪ್ರಕೃತಿಯ ಮಡಿಲಲ್ಲಿ ಚಿತ್ರೀಕರಿಸಿದ ರೀತಿ ಇಷ್ಟವಾಗಿತ್ತು. ನಾಯಕ ಅಶೋಕ್ ಅವರ ವೇಷಭೂಷಣ, ಅಂದಗಾರ್ತಿ ಆರತಿಯ ಸುಂದರ ಅಲಂಕಾರ ಒಂದು ರೀತಿಯಲ್ಲಿ ಈ ಹಾಡನ್ನು ಮತ್ತೆ ಮತ್ತೆ ಕೇಳಬೇಕು ಎನ್ನಿಸಿತ್ತು. 

೩) ಶಕ್ತಿ ಸ್ಥಳ ಕೊಲ್ಲೂರಿನಲ್ಲಿ ಆರತಿ ಹಾಡಿ ಕುಣಿಯುವ "ಜೈ ಜಗದಂಬೆ" , ಎಸ್ ಜಾನಕಿ ಭಕ್ತಿ ಪೂರ್ವಕವಾಗಿ ಪರವಶರಾಗಿ ಹಾಡಿದ್ದಾರೆ, ಅದ್ಭುತ ಎನ್ನಿಸುವ ಸಾಹಿತ್ಯದ ರೂವಾರಿ ವಿಜಯನಾರಸಿಂಹ. ಸಂಗೀತದಲ್ಲಿ ಉಪಯೋಗಿಸಿರುವ ವಾದ್ಯ, ಚಿತ್ರೀಕರಣದಲ್ಲಿ ಅದಕ್ಕೆ ಹತ್ತಿರವಾಗುವಂತೆ ಉಪಯೋಗಿಸಿರುವ ವಾದ್ಯ ಇಷ್ಟವಾಗುತ್ತದೆ. ಆರತಿ ಈ ಹಾಡಿನಲ್ಲಿ ಇಷ್ಟವಾಗುವ ಕಾರಣ ಅವರು ಉಟ್ಟಿರುವ ಸೀರೆಯ ಬಣ್ಣ, ಹಣೆಯಲ್ಲಿ ದೊಡ್ಡದಾದ ಕುಂಕುಮದ ಕೆಳಗೆ ಒಂದು ಚಿಕ್ಕ ಬೊಟ್ಟು. 

೪) ಅಣ್ಣ ಎಂದರೆ ಹೀಗೆಯೇ ಇರಬೇಕು ಎನ್ನಿಸುವಷ್ಟು ಇಷ್ಟವಾಗುವ ಅಂಬರೀಶ್, ಕಣಗಾಲ್ ಪ್ರಭಾಕರ್ ಶಾಸ್ತ್ರೀ ರಚಿಸಿರುವ "ಕನ್ನಡ ನಾಡಿನ ರಸಿಕರ ಮನವ" ಹಾಡು ಮತ್ತೊಮ್ಮೆ ಎಸ್ ಪಿ ಬಾಲಸುಬ್ರಮಣ್ಯಂ ನಮಗೆ ಹತ್ತಿರವಾಗುತ್ತಾರೆ. ತುಮಕೂರು ಬಳಿಯ ಶಿವಗಂಗೆಯಲ್ಲಿ ಚಿತ್ರಿಕರಿಸಿರುವ ಹಾಡು ಮತ್ತೆ ಮತ್ತೆ ಕೇಳಬೇಕು ಮತ್ತು ನೋಡಬೇಕು ಎನ್ನಿಸುತ್ತದೆ. ಅದರಲ್ಲೂ ಈ ಹಾಡಿನ ಮದ್ಯೆ ಮದ್ಯೆ ರಂಗಭೂಮಿಯ ಚಿಕ್ಕ ಚಿಕ್ಕ ತುಣುಕುಗಳನ್ನು ಹೆಣೆದಿರುವುದು ಪುಟ್ಟಣ್ಣ ಹಾಡುಗಳನ್ನು ಚಿತ್ರೀಕರಿಸುವ ಅದ್ಭುತ ಶೈಲಿಯನ್ನು ತೋರಿಸುತ್ತದೆ. ಕಡೆಯಲ್ಲಿ ಹಾಡಿನ ಸಾಲನ್ನು ನಿಧಾನಗತಿಯಲ್ಲಿ ಹಾಡಿ ರಂಗಭೂಮಿಯ ಬ್ಯಾನರ್ ಇಂದ ಆರತಿ ಹೆಸರಿಗೆ ಬಣ್ಣವನ್ನು ಬಳೆದು ಅಳಿಸುವುದು ಬಣ್ಣದ ಬದುಕು ಎಷ್ಟು ಕ್ಷಣಿಕ ಎನ್ನುವಂತೆ ಭಾವ ತೋರುತ್ತದೆ. ಆದರೆ ಈ ಹಾಡು ಶುರುವಾಗುವಾಗ ರಂಗು ರಂಗಿನ ಪರದೆ, ಬೆಳಕು ಇವುಗಳ ಮದ್ಯೆ ನಾಯಕಿಯನ್ನು ತೋರಿಸಿ ರಂಗಭೂಮಿಯ ಹೆಚ್ಚುಗಾರಿಕೆಯನ್ನು ಪ್ರದರ್ಶಿಸುತ್ತಾರೆ. 

ಶ್ರೀ ಅಶೋಕ್ ಆರ್ಟ್ಸ್ ಲಾಂಛನದಲ್ಲಿ, ಬಿ ತಿಮ್ಮಣ್ಣ ಅವರ ನಿರ್ಮಾಣದಲ್ಲಿ , ಅಶ್ವತ್ಥ ಅವರ "ರಂಗನಾಯಕಿ" ಎನ್ನುವ ಕಥೆಯನ್ನ ಚಲನಚಿತ್ರವಾಗಿಸಿದರು ಪುಟ್ಟಣ್ಣ. ಚಿತ್ರದ ತಾರಾಗಣ, ತಾಂತ್ರಿಕವರ್ಗದ ಹೆಸರನ್ನು ತೆರೆಯ ಮೇಲೆ ತೋರಿಸುವಾಗ, ರಂಗಭೂಮಿಯ ಅಂದಿನ ಕಾಲದ ಪ್ರಸಿದ್ಧ ವ್ಯಕ್ತಿಗಳ ಚಿತ್ರಗಳ ಜೊತೆಯಲ್ಲಿ ತೋರಿಸುವುದು ಪುಟ್ಟಣ್ಣ ಒಂದು ವಸ್ತು ವಿಷಯಕ್ಕೆ ಎಷ್ಟು ಒತ್ತು ನೀಡುತ್ತಿದ್ದರು ಎನ್ನುವುದಕ್ಕೆ ಸಾಕ್ಷ್ಟಿಯಾಗಿದೆ. 
ಯೋಗಣ್ಣ ಅವರ ಜೊತೆಗೂಡಿ ಈ ಕಥೆಗೆ ಚಿತ್ರಕಥೆ ಬರೆದು ಪುಟ್ಟಣ್ಣ ಕಣಗಾಲ್ ಈ ಚಿತ್ರವನ್ನು ಯಶಸ್ಸಿನ ಮಹಲಿಗೆ ಕೊಂಡೊಯ್ದರು. ಚಿತ್ರಕ್ಕೆ ತಕ್ಕ ತಾಂತ್ರಿಕ ವರ್ಗ ಎನ್ನುವ ಹಾಗೆ ಈ ಚಿತ್ರಕ್ಕೆ ಸಂಗೀತಕ್ಕೆ ಬಂದವರು ಎಂ ರಂಗರಾವ್. ಎಸ್ ಮಾರುತಿರಾವ್ ಪುಟ್ಟಣ್ಣ ಅವರ ಕಲ್ಪನೆಯನ್ನು ಹಾಗೆ ಕ್ಯಾಮೆರ ಕಣ್ಣಲ್ಲಿ ಸೆರೆ ಹಿಡಿಯಲು ನಿಂತರು. 

ಆ ಕಾಲಘಟ್ಟದ ಮುಖ್ಯ ಪ್ರತಿಭೆಗಳನ್ನು ಆಯ್ದು ಈ ಚಿತ್ರ ಮಾಡಿದ್ದರು. ಆರತಿ, ರಾಜಾನಂದ್, ಅಂಬರೀಶ್, ಅಶೋಕ್, ರಾಮಕೃಷ್ಣ, ಹಲವಾರು ರಂಗಭೂಮಿಯ ಪ್ರತಿಭೆಗಳನ್ನು ಆಯ್ಕೆ ಮಾಡಿದ್ದರು. ಇಲ್ಲಿ ಬರುವ ಪ್ರತಿ ಪಾತ್ರಗಳು ಚಿಕ್ಕದೋ ದೊಡ್ಡದೋ ಚಿತ್ರದ ಕಥೆಯ ಮೇಲೆ ಮುಖ್ಯ ಪರಿಣಾಮ ಬೀರುತ್ತಲೇ ಇರುವಂಥವು. 

ಈ ಚಿತ್ರದ ಪ್ರಮುಖ ಪಾತ್ರ ರಂಗನಾಯಕಿ ಎನ್ನುವ ರಂಗಭೂಮಿ ಕಲಾವಿದೆಯದು. ಅವಳ ಬಾಲ್ಯವನ್ನು ಒಂದೆರಡು ದೃಶ್ಯಗಳಲ್ಲಿ ತೋರಿಸಿ, ಆ ಮಗುವಿಗೆ ಬಾಲ್ಯದಿಂದಲೂ ಸಂಗೀತ, ಅಭಿನಯ, ಬಣ್ಣ ಇವುಗಳ ಮೇಲೆ ಇರುವ ಆಸಕ್ತಿಯನ್ನು ರಂಗಭೂಮಿಯ ತಾಲೀಮನ್ನು ನೋಡುವಾಗ ಆ ಮಗುವಿನ ಕಣ್ಣು, ಕಿವಿ, ಕೈ, ಕಾಲುಗಳನ್ನು ಮಾತ್ರ ತೋರಿಸಿ ದೃಶ್ಯದ ಗಾಢತೆಯನ್ನು ಹೆಚ್ಹು ಮಾಡುತ್ತಾರೆ. 

ಅನಾಥ ಮಗುವಾದ ಅಂಬರೀಶ್ ಅವರನ್ನು ಸಾಕಿ ಸಲುಹಿದ ತನ್ನ ಸಾಕು ತಂದೆಯ ಬಗ್ಗೆ ಅಭಿಮಾನದಿಂದ ಹೇಳುವಾಗ ಅಂಬರೀಶ್ ಇಷ್ಟವಾಗುತ್ತಾರೆ, ಆ ಅಭಿಮಾನ, ಹೆಮ್ಮೆ ಅವರ ಧ್ವನಿ ಆಹಾ. 

ರಾಜಾನಂದ್ ಅವರ ಸ್ನೇಹಿತ ಕಷ್ಟ ಕಾಲದಲ್ಲಿ ಇವರ ಬಳಿ ಬರುತ್ತಾರೆ, ಮೊದಲೇ ಕಷ್ಟದಲ್ಲಿದ್ದರೂ, ತನ್ನ ಸ್ನೇಹಿತನಿಗೆ ಸಹಾಯ ಮಾಡಬೇಕು ಎಂದು ತಮ್ಮ ನಾಟಕದ ಮೂರು ದಿನದಲ್ಲಿ ಬರುವ ಪೂರ್ತಿ ಹಣವನ್ನು ಅವನಿಗೆ ಕೊಡುವ ಭರವಸೆ ಕೊಡುತ್ತಾರೆ. ಆಗ ಹೇಳುವ ಮಾತು "ಒಬ್ಬ ಕಲಾವಿದ ಇನ್ನೊಬ್ಬ ಕಲಾವಿದನ ಕಷ್ಟಕ್ಕೆ ಆಗದಿದ್ದರೆ ಕಲಾವಿದನ ಜನ್ಮ ಯಾಕೋ" ಎನ್ನುತ್ತಾರೆ. ಅದ್ಭುತ ನಟನೆ.  

ಕೆಲ ಹಣವುಳ್ಳ ಕಾಮುಕ ವ್ಯಕ್ತಿ ಹಣದ ದರ್ಪದಿಂದ ರಂಗಭೂಮಿ ಕಲಾವಿದರನ್ನು ಅವಮಾನಗೊಳಿಸುವ ಯತ್ನದಲ್ಲಿದ್ದಾಗ, ಅಂಬರೀಶ್ ಚೆನ್ನಾಗಿ ಹೊಡೆದು ಕಳಿಸುತ್ತಾರೆ, ಆಗ ಸಾಕು ತಂದೆ ರಾಜಾನಂದ್ ಅಂಬರೀಶ್ ಅವರಿಗೆ ಚೆನ್ನಾಗಿ ಹೊಡೆಯುತ್ತಾರೆ, 

"ನಾ ಮಾಡಿದ್ದು ತಪ್ಪಾ ಹೇಳಿ ಅಪ್ಪಾಜಿ, ನೀವು ತಪ್ಪು ಎಂದರೆ, ಆ ಸಾಹುಕಾರನ ಕಾಲಿಗೆ ಬಿದ್ದು ತಪ್ಪಾಯ್ತು ಎಂದು ಹೇಳಿ ಕರೆದುಕೊಂಡು ಬರುವೆ" 

"ಕಲಾವಿದರಿಗೂ ಸ್ವಾಭಿಮಾನ, ಮಾರ್ಯಾದೆ ಇದೆ ಎಂದು ತೋರಿಸಲು ನಿನ್ನಂಥವರು ಲಕ್ಷ ಲಕ್ಷ ಹುಟ್ಟಬೇಕು ಕಣೋ" ಎಂದು ರಾಜಾನಂದ್ ಅಂಬರೀಶ್ ಅವರನ್ನು ಅಪ್ಪಿಕೊಳ್ಳುತ್ತಾರೆ. ಅಲ್ಲಿ ರಾಜಾನಂದ್ ಅವರ ಮುಖಾಭಿನಯ, ಧ್ವನಿ ಮತ್ತು ಆ ಗತ್ತು ಅದ್ಭುತ. 

ಈ ಚಿತ್ರದಲ್ಲಿ ಅಭಿನಯ ನೀಡಿರುವ ಕಲಾವಿದರೂ ಈ ಚಿತ್ರಕ್ಕೊಸ್ಕರವೇ ಹುಟ್ಟಿದ್ದಾರೆನೋ ಅನ್ನುವಷ್ಟು ಅದ್ಭುತವಾಗಿ ನಟಿಸಿದ್ದಾರೆ. 

ರಾಜಾನಂದ್ 
ಮೇಲೆ ಹೇಳಿದ ಎರಡು ದೃಶ್ಯಗಳು, 
ಆರತಿಯ ಏಳಿಗೆಯನ್ನು ಕಂಡು ಖುಷಿಯಾಗುವ ದೃಶ್ಯ. 
ಆರತಿಯ ಅಂದವನ್ನು ಮೆಚ್ಚಿ ಬರುವ ಅಶೋಕ್ ಅವರಿಗೆ ರಂಗಭೂಮಿಯ ರಾತ್ರಿ ಹೊತ್ತಿನ ಜಗಮಗ ಬೆಳಕಿನ ಪ್ರಪಂಚ ಮತ್ತು ಬೆಳಗಿನ ಆರ್ಥಿಕ ಪರಿಸ್ಥಿತಿ ಬಿಂಬಿಸುವ ದೃಶ್ಯವನ್ನು ವಿವರಿಸುವ ರೀತಿ. 
ಮದುವೆ ಮಾಡಿಕೊಂಡು ಗಂಡನ ಜೊತೆಯಲ್ಲಿ ಹೋಗುವಾಗ, ಆಗಾಗ ಪತ್ರ ಬರಿ ಎಂದು ಆರತಿಗೆ ಹೇಳುವ ತುಣುಕು
ಆರತಿಯನ್ನು ಚಲನಚಿತ್ರದವರು ಅಭಿನಯಿಸಿ ಎಂದು ಕೇಳಿಕೊಂಡಾಗ, ಆರತಿಯನ್ನು ಒಪ್ಪಿಸುವ ದೃಶ್ಯ 
ದಶರಥನ ಪಾತ್ರದಲ್ಲಿ ಅಂತಿಮ ದೃಶ್ಯದಲ್ಲಿ ನೀಡಿರುವ ಅಭಿನಯ

ಅಂಬರೀಶ್
ಇಡಿ ಚಿತ್ರದಲ್ಲಿ ಆರತಿ ಪಾತ್ರಕ್ಕೆ ನೆರಳಂತೆ ರಕ್ಷಣೆ ನೀಡುವ ಪಾತ್ರ. ತಾನು ಚಿಕ್ಕ ವಯಸ್ಸಿನಲ್ಲಿ ಆಕೆಯನ್ನು ಇಷ್ಟಪಟ್ಟಿದ್ದರೂ, ರಂಗನಾಯಕಿ ಹೇಳುವ ನೀ ನನ್ನ ಅಣ್ಣ ಕಣೋ ಎಂದಾಗ ಒಂದು ಕಡೆ ನಿರಾಸೆ ಇನ್ನೊಂದು ಕಡೆ ಅಣ್ಣನಾದೆ ಎನ್ನುವ ಹೆಮ್ಮೆಯ ಅಭಿನಯ ಅದ್ಭುತ ಎನ್ನಿಸುತ್ತದೆ. ಈ ಕಲಾವಿದ ಎಲ್ಲೋ ಸಿದ್ಧ ಸೂತ್ರಗಳ ಚಿತ್ರಗಳಲ್ಲಿ ಕಳೆದು ಹೋದರೆನೋ ಅನ್ನಿಸುತ್ತದೆ. 

ಅಶೋಕ್
ಪ್ರೀತಿ, ಪ್ರೇಮಗಳು ನಿಜ ಜೀವನದ ಕಷ್ಟ ನಷ್ಟಗಳಲ್ಲಿ ಹೇಗೆ ಕರಗಿ ಹೋಗುತ್ತದೆ ಎನ್ನುವುದನ್ನು ಮುಖಭಾವ ಹಾಗೂ ಮಾತುಗಳ ಭರದಲ್ಲಿ ತೋರಿದ್ದಾರೆ
ನಟಿಮಣಿಯನ್ನು ಸತಿಮಣಿಯನ್ನಾಗಿ ಮಾಡಿ ಮೆರೆಸಲು ಹೊರಟ ನನ್ನ ಬುದ್ಧಿಗೆ ಚಪ್ಪಲಿಲಿ ಹೊಡೆದುಕೊಳ್ಳಬೇಕು ಎನ್ನುವ ದೃಶ್ಯ ಸೂಪರ್ 
ಕಡೆಯಲ್ಲಿ ಆರತಿಗೆ "ಈ ಮಗನಿಗೆ ಜನ್ಮ ಕೊಟ್ಟವಳು ಒಬ್ಬ ದೇವತೆ ಅನ್ನೋ ವಿಷಯವನ್ನು ಮುಚ್ಚಿಟ್ಟುಬಿಟ್ಟಿದ್ದೇನೆ" ಎನ್ನುವಾಗ ಅವರ ತಳಮಳದ ಅಭಿನಯ ಇಷ್ಟವಾಗುತ್ತದೆ. 
ಒರಟು, ಒಂದು ರೀತಿಯ ಪ್ರೀತಿ ಪ್ರೇಮ ಅನುಕಂಪ ಇವುಗಳನ್ನೆಲ್ಲ ಒಂದು ಲಾಭಕ್ಕಾಗಿ ಬಳಸುವ ಮನೋಭಾವದ ಪಾತ್ರವನ್ನು ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ. 

ರಾಮಕೃಷ್ಣ
ಕನ್ನಡ ಚಿತ್ರಜಗತ್ತಿಗೆ ಟಪೋರಿ, ಪ್ಲೇ ಬಾಯ್, ಚಲ್ಲುಚಲ್ಲಾಗಿ ಆಡುವ ಪಾತ್ರದ ರೂಪನ್ನು ತಂದು ಕೊಟ್ಟವರು ಇವರು. ಪುಟ್ಟಣ್ಣ ಅವರ ಅದ್ಭುತ ಮಾರ್ಗದರ್ಶನದಲ್ಲಿ ಆ ರೀತಿಯ ಪಾತ್ರಗಳನ್ನೂ ತೆರೆಯ ಮೇಲೆ ಜೀವಂತ ಮಾಡಿದವರು ಇವರು. ಬೆಲ್ ಬಾಟಮ್ ಪ್ಯಾಂಟ್, ಕಪ್ಪು ಕನ್ನಡಕ, ಕುರುಚಲು ಗಡ್ಡ, ದೊಡ್ಡದಾದ ಬೆಲ್ಟ್, ಯಾವಾಗಲೂ ಒಂದು ರೀತಿಯಲ್ಲಿ ತೂಗಾಡುತ್ತಾ, ಪ್ರಪಂಚವನ್ನು ಉಡಾಫೆಯಿಂದ ನೋಡುವ ಪಾತ್ರದಲ್ಲಿ ಅಪ್ಪಟ ಪರಕಾಯ ಪ್ರವೇಶ ಮಾಡಿದ್ದಾರೆ. 
ಮೊದಲು ನೀವು ಅಭಿನಯ ಮಾಡೋದು ಕಲೀರಿ, ನಿಮ್ಮ ಕಣ್ಣಲ್ಲಿ ಕಾಮ ಎಲ್ಲ್ರಿ ಇದೆ, ತನ್ನ ಮಗುವನ್ನು ನೋಡುವ ತಾಯಿ ಪ್ರೇಮ ಇದೆ.. ನಿಮಗೆ ಕಾಮದ ಕಣ್ಣಲ್ಲಿ ನೋಡೋಕೆ ಬರೋಲ್ಲ.. ನನಗೆ ನಿಮ್ಮನ್ನು ತಾಯಿಯ ರೂಪದಲ್ಲಿ ನೋಡೋಕೆ ಬರೋಲ್ಲ ಎಂದು ಅಳುತ್ತಾ ಹೋಗುವಾಗ ಶಭಾಶ್ ಎನ್ನಿಸುತ್ತದೆ. 
ಆರತಿ 
ಈ ಪಾತ್ರ ಮಾಡೋಕೆ ಹುಟ್ಟಿದ್ದಾರೆನೋ ಅನ್ನುವಷ್ಟು  ಅದ್ಭುತ ಅಭಿನಯ ನೀಡಿದ್ದಾರೆ. ಹಲವಾರು ದೃಶ್ಯಗಳಲ್ಲಿ ಬರಿ ಕಣ್ಣು, ಮುಖಭಾವಗಳಲ್ಲೇ ದೃಶ್ಯವನ್ನು ಉತ್ತುಂಗಕ್ಕೆ ಕರೆದೊಯ್ದಿದ್ದಾರೆ. 
ಮದುವೆ ಆದನಂತರ ಪ್ರೀತಿ ಪ್ರೇಮಗಳು ಬದುಕಿನ ನಿಜ ರೂಪದ ಮುಂದೆ ನಿಲ್ಲೋಲ್ಲ ಎನ್ನುವಂತಹ ದೃಶ್ಯಗಳಲ್ಲಿ ಆರತಿ ಪ್ರಪಂಚದಲ್ಲಿ ಪ್ರೀತಿ, ಪ್ರೇಮ ಇದೆ ಎನ್ನುವ ವಾದ ಒಪ್ಪಿಕೊಂಡರೆ, ಅಶೋಕ್ ವಸ್ತುಗಳು, ಅಂತಸ್ತು, ಹಣ,ಇವುಗಳು ಮಾತ್ರ ಖುಷಿ ನೀಡುತ್ತವೆ ಎನ್ನುವ ವಾದವನ್ನು ಒಪ್ಪಿಕೊಂಡವರು, ಇವುಗಳ ನಡುವೆ ಸಮರವಾದಗೆಲ್ಲ ಆರತಿ ಸಂಭಾಷಣೆ, ಕಣ್ಣಲ್ಲಿ ಕೊಡುವ  ಅಭಿನಯ ಇಷ್ಟವಾಗುತ್ತದೆ. 
ಅಭಿನಯ, ರಂಗ ಭೂಮಿ, ಕಲೆ ಸಾಧನೆ ಇದನ್ನೆಲ್ಲಾ ಅಶೋಕ್ ಅವರಿಗೆ ವಿವರಿಸುವಾಗ ಅವರ ಕಣ್ಣಲ್ಲೇ ಮಾತಾಡುತ್ತಾರೆ. 
ಸಾರಂಗಧರ ನಾಟಕದ ತಾಲೀಮಿನಲ್ಲಿ ಸಾರಂಗಧರ ಪಾತ್ರವನ್ನು ರಾಮಕೃಷ್ಣ ಅವರಿಗೆ ಹೇಳಿಕೊಡುವಾಗ ಮಸ್ತ್ ಮಸ್ತ್ ಅಭಿನಯ. 
ತಾನು ನಂಬಿಕೊಂಡಿರುವ ಕಲೆ ತನ್ನನ್ನು ಬೆಳೆಸಿದೆ ಎನ್ನುವ ಅರಿವು ಇಡಿ ಚಿತ್ರದ ತುಂಬಾ ಹರಿದಾಡಿದೆ. 
ಭಾವುಕ ಸನ್ನಿವೇಶಗಳಲ್ಲಿ, ಮಮತೆಯ ನಟಿಯಾಗಿ, ಮಗನಿಗೆ ಪರಿತಪಿಸುವ ತಾಯಿಯಾಗಿ, ಹತಾಶೆಗೊಳ್ಳುವ ಹೆಂಡತಿಯಾಗಿ ಪ್ರತಿ ಸನ್ನಿವೇಶಗಳಲ್ಲೂ ಆರತಿ ಅದ್ಭುತ ಅಭಿನಯ ನೀಡಿದ್ದಾರೆ. 


ತಾ ನಂಬಿದ ಸಿದ್ಧ ಸೂತ್ರಗಳ ಮೇಲೆ ನಂಬಿಕೆ ಸದಾ ಇರಬೇಕು ಎನ್ನುವ ಮಾತು ಆರತಿಯವರ ಪಾತ್ರದ ಮೂಲಕ ತಿಳಿದು ಬಂದರೆ, ಮಾಡುವ ಕೆಲಸದಲ್ಲಿ ಶ್ರಧ್ಹೆ, ಅಭಿಮಾನ ಇರಬೇಕು ಎನ್ನುವ ಮಾತು ರಾಜಾನಂದ್, ಅಂಬರೀಶ್ ಅವರ ಪಾತ್ರಗಳ ಮೂಲಕ ಅರಿವಾಗುತ್ತದೆ. 
ವಸ್ತು ಸುಖದ ಹಿಂದೆ ಹೋಗುವವರು ಪ್ರಪಂಚದಲ್ಲಿ ಬದುಕಿರುತ್ತಾರೆ ಹೊರತು ಜೀವಿಸಲು ಆಗೋಲ್ಲ ಎನ್ನುವ ನೀತಿ ಅಶೋಕ್ ಪಾತ್ರಧಾರಿ ಹೇಳುತ್ತಾರೆ. 
ಚೆಲ್ಲು ಚೆಲ್ಲು ಅಥವಾ ಉಡಾಫೆ ಇದೆ ಜೀವನವಲ್ಲ, ಸತ್ಯದ ಅರಿವಾಗಬೇಕು, ತಾಳ್ಮೆ ಇರಬೇಕು, ಯೋಚಿಸಬೇಕು ಎನ್ನುವ ಮಾತನ್ನು ರಾಮಕೃಷ್ಣ ಪಾತ್ರ ತೋರುತ್ತದೆ.. 

ಈ ಚಿತ್ರ ಹಲವಾರು ಮುತ್ತು ರತ್ನಗಳನ್ನು ಸುಂದರವಾಗಿ ಪೋಣಿಸಿ ಕನ್ನಡಾಂಬೆಗೆ ತೊಡಿಸಿದ ಅಮೂಲ್ಯ ರತ್ನ ಹಾರ. ಪ್ರತಿಯೊಂದು ದೃಶ್ಯವೂ ಕಲಾತ್ಮಕತೆಯಿಂದ ಕೂಡಿದೆ, ಯಾವುದು ಅತಿ ಎನ್ನಿಸುವುದಿಲ್ಲ. ಕೆಲವು ನಾಟಕದ ತುಣುಕುಗಳನ್ನು ಚಿತ್ರದ ಪರಿಣಾಮ ಹೆಚ್ಚು ಮಾಡುವುದಕ್ಕೆ ಉಪಯೋಗಿಸಿರುವ ಪರಿ ಇಷ್ಟವಾಗುತ್ತದೆ. ಪುಟ್ಟಣ್ಣ ಒಬ್ಬ ಮಾಂತ್ರಿಕ ಕಥೆಯನ್ನು ಹೇಗೆ ಬೆಳ್ಳಿ ಪರದೆಯ ಮೇಲೆ ಎಲ್ಲರಿಗೂ ಇಷ್ಟವಾಗುವ ರೀತಿಯಲ್ಲಿ ತರಬೇಕು ಎನ್ನುವ ಅದ್ಭುತ ಕಲ್ಪನೆ ಯಾವಾಗೂ ಅವರ ಬಳಿ ಚಿತ್ರದ ತಯಾರಿಕ ಹಂತಗಳಲ್ಲೇ ಇರುತ್ತಿತ್ತು ಮತ್ತು ಅದನ್ನು ಹಾಗೆ ಸಾಕ್ಷಾತ್ಕರಿಸಲು ತಮ್ಮ ಪ್ರತಿಭೆಯನ್ನು ಧಾರೆ ಎರೆಯುತ್ತಿದ್ದರು ಎನ್ನುವುದಕ್ಕೆ ರಂಗನಾಯಕಿ ಚಿತ್ರ ಅತ್ಯುತ್ತಮ ಉದಾಹರಣೆ. 

ಪುಟ್ಟಣ್ಣ ಗುರುಗಳೇ... ನಿಮ್ಮ ಮುಂದಿನ ಚಿತ್ರವನ್ನು ನೋಡಿ ಬಂದು ಮತ್ತೊಮ್ಮೆ ನಿಮ್ಮ ಚರಣಕಮಲಗಳಿಗೆ ಅರ್ಪಿಸುವೆ.