Sunday, November 26, 2023

ಕೋತಿಯ ಹಾಗೆ ಕುಣಿಯುವ ಮನಸ್ಸಿಗೆ ಉತ್ತರ ನವಕೋಟಿ ನಾರಾಯಣ (1964) (ಅಣ್ಣಾವ್ರ ಚಿತ್ರ ೪೭/೨೦೭)

ರಾಜಕುಮಾರ್  ಅವರ ಜೊತೆ ಮಾತಾಡುತ್ತಿದ್ದೆ.. ನೀವು ಐವತ್ತು  ಚಿತ್ರಗಳ ಹತ್ತಿರ ಬರುತ್ತಿದ್ದೀರಾ. ನಿಮ್ಮ ಅಭಿನಯದ ಶಕ್ತಿ ಯಾವುದು.. ನಿಮಗಿಷ್ಟವಾಗುವ  ಪಾತ್ರಗಳು ಯಾವುವು. ?

ಇಷ್ಟವಾದವು ಅಂತ ಏನಿಲ್ಲ.. ಆದರೆ ಭಕ್ತಿರಸದ ಚಿತ್ರಗಳು ಇಷ್ಟವಾಗುತ್ತವೆ.. ಇದೆ ಚಿತ್ರ ನೋಡಿ.. ಕರ್ನಾಟಕ ಸಂಗೀತದ ಪಿತಾಮಹರು ಶ್ರೀ ಪುರಂದರ ದಾಸರ ಜೀವನಗಾಥೆಯನ್ನು ಹೊಂದಿರುವ ನವಕೋಟಿ ನಾರಾಯಣ..  

ಅವಕಾಶಗಳು ಬೇಕಿದ್ದವು,  ಮನೆಯ ಸಂಸಾರವನ್ನು ನೆಡೆಸಬೇಕಿತ್ತು.. ದೊಡ್ಡ ಸಂಸಾರ..  ಈ ಸಮಯದಲ್ಲಿ ಸಿಕ್ಕಿದ ಚಿತ್ರವೇ ನವಕೋಟಿ ನಾರಾಯಣ . 

ರಾಮ್ ಪ್ರಸಾದ್ ಮೂವೀಸ್ ಲಾಂಛನದಲ್ಲಿ ಬಿಡುಗಡೆಯಾದ ಚಿತ್ರವನ್ನು ಡಿ ಆರ್ ನಾಯ್ಡು ನಿರ್ಮಾಣದಲ್ಲಿ ಎಸ್ ಕೆ ಎ ಚಾರಿ ನಿರ್ದೇಶನದಲ್ಲಿ ಮೂಡಿ ಬಂತು.. ಆಗಲೇ ಜನಜನಿತ ಕಥೆಯನ್ನು ಹಲವಾರು ಆಕರ ಗ್ರಂಥಗಳನ್ನು ಆಧರಿಸಿ ನರೇಂದ್ರಬಾಬು ಮತ್ತು ಎಸ್ ಕೆ ಎ ಚಾರಿ ಸೇರಿ ಚಿತ್ರಕಥೆಯನ್ನು ಹೆಣೆದರು.  ಸಂಭಾಷಣೆಯನ್ನು ನರೇಂದ್ರಬಾಬು ಬರೆದರು. ಸಂಗೀತ ಶಿವಪ್ರಸಾದ್ ಕೊಟ್ಟರು. ಛಾಯಾಗ್ರಹಣ ಎಸ್ ವಿ ಶ್ರೀಕಾಂತ್ ಮಾಡಿದರು. 

ಪುರಂದರದಾಸರು ರಚಿಸಿದ ಕೆಲವು ಗೀತೆಗಳನ್ನು ಚಿತ್ರಕ್ಕೆ ಉಪಯೋಗಿಸಿದ್ದಾರೆ. ಪಿ ಬಿ ಶ್ರೀನಿವಾಸ್, ಬಾಲಮುರಳಿಕೃಷ್ಣ, ಸುಬ್ಬನರಸಯ್ಯ, ಪಿ ಲೀಲಾ, ಎಸ್ ಜಾನಕಿ.. ಸಂಗೀತದಲ್ಲಿ ಉಪಯೋಗಿಸಿರುವ ವೀಣಾ ನಾದನ ವೈಣಿಕ ಶಿರೋಮಣಿ ಶ್ರೀ ಚಿಟ್ಟಿಬಾಬು ಅವರದ್ದು. 

ವಾಹ್ ಉತ್ತಮ ಮಾಹಿತಿ ಕೊಡುತ್ತಿದ್ದೀರಾ ಮುಂದುವರಿಸಿ ಸರ್ ಎಂದೇ 

ನೋಡಪ್ಪ ಇದೊಂದು ವಿಚಿತ್ರ ಚಿತ್ರ. ಈ ಚಿತ್ರದ ಮಧ್ಯಭಾಗದಲ್ಲಿ ಬರುವ ಸಂಭಾಷಣೆ ಬಹಳ ಇಷ್ಟವಾಯಿತು... ಐಶ್ವರ್ಯವಿದ್ದಾಗ ಕೇಳಿದವರಿಗೆ ಕೊಡಲಿಲ್ಲ..  ಈಗ ಎಲ್ಲಾ ದಾನಮಾಡಿದ ಮೇಲೆ ಕೊಡಲು ಏನೂ ಇಲ್ಲ.. ಎಲ್ಲಾ ವಿಠಲನ ಪರೀಕ್ಷೆ. 

 ಎಷ್ಟು ನಿಜ ಅಲ್ಲವೇ.. ಇದ್ದಾಗ ಕೊಡೋಕೆ ಮನಸಿರೋಲ್ಲ ಇಲ್ಲದೆ ಇದ್ದಾಗ ಕೊಡೋಕೆ ಮನಸ್ಸಿರುತ್ತೆ ಆದರೆ ಕೊಡೋಕೆ ಏನೂ ಇರಲ್ಲ.. ಇದೆ ಜೀವನ.. 

ಸಂಪತ್ತಿನ ಮೇಲೆ ಶಯನ ಮಾಡುವಷ್ಟು ಆಸ್ತಿ ಪಾಸ್ತಿ ಇದ್ದ ಶ್ರೀನಿವಾಸ ನಾಯಕರು ಪುರಂದರ ದಾಸರಾಗುವ ಹಾದಿ.. 

ಜಿಪುಣಾಗ್ರೇಸರ ನಾರಾಯಣ ಶತಕೋಟಿ ನಾರಾಯಣ ಆಗಬೇಕು ಎನ್ನುವ ಹಂಬಲದಿಂದ ಮಕ್ಕಳಿಗೂ ಊಟ ಹಾಕುವಾಗ ಲೆಕ್ಕಾ ಹಾಕಿ ಅಡಿಗೆಗೆ  ಕೊಡುವ ಮನುಷ್ಯ ಅವರು.. ಸಹಾಯ ಬೇಡಿಬಂದವರಿಗೆ ಮಾತಿನಲ್ಲಿಯೇ ಮನೆ ಕಟ್ಟಿ ಸಾಗು ಹಾಕುವಷ್ಟು ಬುದ್ದಿವಂತ.. 

 ವಿಠಲ ಈತನಿಗೆ ಬುದ್ದಿ ಕಲಿಸುವುದಕ್ಕಾಗಿ ಬ್ರಾಹ್ಮಣ ವೇಷದಲ್ಲಿ ಬಂದು ಸಹಾಯ ಬೇಡುತ್ತಾನೆ.. ಎಂದಿನಂತೆ ಬಯ್ದು ಕಳಿಸುತ್ತಾನೆ.. ನಂತರ ಆ ಬ್ರಾಹ್ಮಣ ನಾಯಕರ ಮನೆಗೆ ಹೋಗಿ ಆತನ ಹೆಂಡತಿಯ ಬಳಿ ಸಹಾಯ ಬೇಡುತ್ತಾರೆ.. ಆಕೆಗೆ ಸಹಾಯ ಮಾಡಬೇಕೆಂಬ ಆಸೆಯಿದ್ದರೂ, ತನ್ನ ಗಂಡನ ಜಿಪುಣತನ ಗೊತ್ತಿದ್ದರಿಂದ ಅಸಹಾಯಕಳಾಗಿರುತ್ತಾಳೆ.. ಆ ಬ್ರಾಹ್ಮಣ  ಮೂಗುತಿಯನ್ನು ನೋಡಿ,  ತವರುಮನೆಯದು ಕೊಡಬಹುದು ಎನ್ನುತ್ತಾನೆ .. ಅದು ಸರಿಯೆನಿಸಿ  ಕೊಡುತ್ತಾಳೆ.. 

ಆಗ ಆ ಬ್ರಾಹ್ಮಣ ಆ ಮೂಗುತಿಯನ್ನು ನಾಯಕರ ಅಂಗಡಿಗೆ ಬಂದು ಅದನ್ನು ಮಾರಿ ಹಣ ಕೊಡು ಎಂದು ಕೇಳುತ್ತಾನೆ.. ಅನುಮಾನ ಬಂದ ನಾಯಕರು,  ಇದು ಕದ್ದ ಮಾಲು ಇರಬಹುದು ಎನಿಸಿ, ತಡ ಮಾಡುತ್ತಾನೆ.. ಆಗ ಆ ಬ್ರಾಹ್ಮಣ, ನಿನ್ನ ಮೇಲೆ  ನನಗೆ ನಂಬಿಕೆ ಇದೆ.. ನನ್ನ ಮೇಲೆ ನಿನಗೆ ನಂಬಿಕೆ ಬಂದಾಗ ಹಣ ಕೊಡು ಎಂದು ಹೊರಟು ಹೋಗುತ್ತಾನೆ.. 

ಕಬ್ಬಿಣದ ಪೆಟ್ಟಿಗೆಯಲ್ಲಿ ಇಟ್ಟು ಮನೆಗೆ ಬಂದಾಗ ಹೆಂಡತಿಯ ಮೂಗುತಿ ಇರೋಲ್ಲ.. ಅನುಮಾನ ಬಂದು ಹೆಂಡತಿಗೆ ಬಯ್ಯುತ್ತಾನೆ... ಗಲಾಟೆ ಮಾಡಿದಾಗ.. ಆಕೆ ದೇವರಮನೆಗೆ ಹೋಗಿ ತನ್ನ ವಜ್ರದುಂಗುರ ಚಚ್ಚಿ ಪುಡಿ  ಮಾಡಿ ಕುಡಿಯಲು ಹೋದಾಗ, ನಾಯಕರು ಆ ಬಟ್ಟಲನ್ನು ಕಿತ್ತುಕೊಂಡು ಅದರೊಳಗೆ ಕೈಯಾಡಿಸಿದಾಗ ಬಟ್ಟಲಿನ ಒಳಗೆ ಮೂಗುತಿ ಇರುತ್ತದೆ. 

ಈ ಘಟನೆ ನಾಯಕರನ್ನು ಬದಲಾಯಿಸುತ್ತದೆ . ಕಾರಣ ಕಬ್ಬಿಣದ ಪೆಟ್ಟಿಗೆಯೊಳಗೆ ಭದ್ರವಾಗಿಟ್ಟ ಮೂಗುತಿ ಇರೋದಿಲ್ಲ.. ಹೆಂಡತಿ ಕೊಟ್ಟ ಮೂಗುತಿ ಬಟ್ಟಲಿನಲ್ಲಿ ಇರುತ್ತದೆ.. ಇಬ್ಬರಿಗೂ ಅಚ್ಚರಿ. 

ಇಲ್ಲಿಂದ ನಾಯಕರ ವಿಚಾರಗಳು, ಮಾತು ಕೃತಿಗಳು ಬದಲಾಗುತ್ತದೆ.. ತನ್ನ ಸಕಲ ಸಂಪತ್ತನ್ನು ಬಡಬಗ್ಗರಿಗೆ ದಾನ ಮಾಡಿ ನಿರ್ವಿಕಾರದಿಂದ ಜೀವನ ಮುನ್ನೆಡೆಸುತ್ತಾರೆ.. ವ್ಯಾಸತೀರ್ಥರಿಂದ ದೀಕ್ಷೆ ಪಡೆದು, ತನ್ನ ಇಡೀ ಸಂಸಾರವನ್ನು ಮಠಕ್ಕೆ ಸಮರ್ಪಿಸಿಕೊಂಡು ಬದುಕುತ್ತಾರೆ.

ಸರ್ ನಿಮ್ಮ ಈ ಚಿತ್ರದಲ್ಲಿ ನಿಮ್ಮ ಅಭಿನಯ ಅಪೂರ್ವ. ದಾಸರನ್ನು ಕಂಡಿಲ್ಲ.. ಆದರೆ ಆ ದಾಸರು ಹೀಗೆ ಇರಬಹುದು ಎಂದು ಅನಿಸುವಷ್ಟು ಸಹಜವಾಗಿದೆ. ಈ ಕೆಳಗಿನ ಮಾತುಗಳನ್ನು ಹೇಳುವಾಗ ನಿಮ್ಮ ಅಭಿನಯ ಎನಿಸುತ್ತದೆ. 

"ಎಲ್ಲ ಕಾಯಿಲೆ ಲೇಹ್ಯ ಕಷಾಯದಲ್ಲಿ ವಾಸಿಯಾಗುತ್ತದೆ... ಆದರೆ ನನ್ನ ಅಪ್ಪನ ಕಾಯಿಲೆಗೆ ಮಾತ್ರ ನವರತ್ನ ಭಸ್ಮ ಬೇಕು .. ಏನೋ ಅನುಮಾನ ನನಗೆ"

"ನಾನೆಲ್ಲಿ ಬೇಡವೆಂದೇ.. ನೀವು ನನ್ನ ಅಪ್ಪನ ಕಾಯಿಲೆ ವಾಸಿ ಮಾಡಿ ಖರ್ಚು ತೆಗೆದುಕೊಂಡು ಹೋಗಿ ನವರತ್ನವೇನು  ನೂರು ರತ್ನ ಭಸ್ಮವಾಗಲಿ." ವೈದ್ಯರಿಗೆ ಹೇಳಿದಾಗ ವೈದ್ಯರು "ನಾನು ವೈದ್ಯನಪ್ಪ ದೇವರಲ್ಲ"

"ಅಂದ್ರೆ ನವರತ್ನ ನಿಮಗೆ ಕೊಟ್ಟು, ಆಯಸ್ಸಿಗೆ ದೇವರ ಹತ್ತಿರ ಕೇಳಬೇಕೋ ಹೋಗ್ರಿ ಹೋಗ್ರಿ"

ನೃತ್ಯಗಾರ್ತಿ ನನ್ನ ನೃತ್ಯ ನೋಡಿ ಎಂದಾಗ "ನೋಡಿದರೆ ಏನಾದರೂ ಲಾಭ ಇದೆಯೇ"

ಅಪ್ಪ ಮರಣಿಸಿದಾಗ ಕೈಯಲ್ಲಿ ಹಣ, ಒಡವೆಗಳ ಥೈಲಿಯನ್ನು ಹಿಡಿದು ಒಳಗೆ ಬರುತ್ತಾರೆ... ನಂತರ ಸಂತಾಪವನ್ನು ಸೂಚಿಸದೆ ಥೈಲಿಯನ್ನು ಕಪಾಟಿನಲ್ಲಿಟ್ಟು ಭದ್ರ ಮಾಡಿ ನಂತರ ಮಾತಾಡುತ್ತಾರೆ.. 

ಅದ್ಭುತ ಅಭಿನಯ.. 

ಸಂಪತ್ತನ್ನೆಲ್ಲ ದಾನ ಮಾಡಲು ನಿಂತಾಗ ಯಾರೂ ಅದನ್ನು ತೆಗೆದುಕೊಳ್ಳಲು ಮುಂದೆ ಬರಲ್ಲ.. ತನ್ನ ಪಾಪವನ್ನು ನೀಗಿಸಿಕೊಳ್ಳಲು ಇದನ್ನೆಲ್ಲಾ ದಾನ ಮಾಡುತ್ತಿದ್ದಾನೆ.. ಎಂದು ಎಲ್ಲರ ಆತಂಕ.. 

ಆಗ ಆತನ ಹೆಂಡತಿ ಆಡುವ ಮಾತುಗಳು "ಎಲ್ಲವನ್ನು ದಾನ ಮಾಡಬೇಕೆಂದು ನಿರ್ಧರಿಸಿದಾಗ..ಅಲ್ಲಿ ನಿಮ್ಮದೇನಿದೆ.. ನನ್ನದು ಎನ್ನುವ  ನಿಮ್ಮನ್ನು ಕಾಡುತ್ತಿದೆ.. ಅದನ್ನು ಬಿಟ್ಟು ಬಿಡಿ"

ಮುಂದೆ ವಿಠಲನ ಕೆಲವು ಪವಾಡದ ದೃಶ್ಯಗಳು, ನಾಯಕರುದಾಸರಾಗಿ ಪರಿವರ್ತನೆ,  ಮುದ್ರಾಧಾರಣೆ, ಮಠದಲ್ಲಿ ದಾಸರನ್ನು ಕಂಡರಾಗದ ಕೆಲವರು ಕೊಡುವ ಕಿರುಕುಳ,  ಮತ್ತೆ ಅವರ ಪರಿವರ್ತನೆ ಇದು ಚಿತ್ರದಕತೆ 

ರಾಜಕುಮಾರ್ ಸರ್ ನಿಮ್ಮ ಅಭಿನಯ ಅದ್ಭುತ ಹಾಗೆಯೇ ನಿಮ್ಮ ಜೊತೆ ಸಾಹುಕಾರ್ ಜಾನಕೀ, ಡಿಕ್ಕಿ ಮಾಧವರಾವ್, ಕಮೆಡಿಯನ್ ಗುಗ್ಗು, ಅಶ್ವಥನಾರಾಯಣ, ರಾಮಚಂದ್ರ ಶಾಸ್ತ್ರೀ ಇತರ ಪಾತ್ರವರ್ಗ ಎಲ್ಲವೂ ಸರಿತೂಕವಾಗಿದೆ.. 

ಒಂದು ಅದ್ಭುತ ಚಿತ್ರ ಆದರೆ ಸರಳ ನಿರೂಪಣೆಯಿಂದ ಖುಷಿ ಕೊಡುತ್ತದೆ.. ಅದರ ಕೆಲವು ತುಣುಕುಗಳು ನೋಡಿ ಆನಂದಿಸೋಣ ಸರ್.. 

 ಆಗಲಪ್ಪಾ ನಿನ್ನ ಆಸೆ ನನ್ನ ಆಸೆ.. ನೋಡೋಣ ಮತ್ತೆ ಇನ್ನೊಂದು ಚಿತ್ರದಲ್ಲಿ ಸಿಗೋಣ.. ನೀ ಆ ತುಣುಕುಗಳನ್ನು ಹಾಕಿರು ನಾನು ಒಬ್ಬನೇ ಇದ್ದಾಗ ನೋಡಲು ಪ್ರಯತ್ನ ಪಡುತ್ತೇನೆ.. 

ಆಗಲಿ .. ಸರ್. 


ಗುಗ್ಗು, ಡಿಕ್ಕಿ 

ಡಿಕ್ಕಿ ಎಂಟ್ರಿ 

ಗದುಗಿನ ನಾರಣಪ್ಪ ಕುಮಾರವ್ಯಾಸ ನಾಗುವುದು 

ರಾಮಚಂದ್ರಶಾಸ್ತ್ರಿ 

ಡಿಕ್ಕಿ ಅಪವಾದ ಹಾಕುವುದು 

ಚರ್ಚೆ ಡಿಕ್ಕಿ 


ವಿಠಲನ ಮಾಯೆ 

ವಿಠಲನ ಮಾಯೆ 


ನಾಯಕರು ದಾಸರಾಗುವುದು 


ನಾರದರೇ  ಪುರಂದರದಾಸರು 


ಪುರಂದರ ದಾಸರ  ಅನ್ನಮಾಚಾರ್ಯ ಭೇಟಿ 

ನಾಯಕರಾಗಿ ಅದ್ಭುತ ಅಭಿನಯ 

ರಾಜ್ ಕುಮಾರ್ ಮತ್ತು ಸಾಹುಕಾರ್ ಜಾನಕಿ 


ಅನ್ನಮಾಚಾರ್ಯ 


Saturday, November 4, 2023

ಹಣೆಯ ವಿಭೂತಿ ಅಳಿಸಬಹುದು ಬರಹ ಸಾಧ್ಯವೇ .. ಚಂದ್ರಕುಮಾರ (1963) (ಅಣ್ಣಾವ್ರ ಚಿತ್ರ ೪೬/೨೦೭)

ಒಂದು ಕಡೆ ಸೋಲುತ್ತಿದ್ದೇನೆ ಎನ್ನುವ ಹಪಾಹಪಿ.. ಇನ್ನೊಂದು ಕಡೆ ಗೆಲ್ಲಬೇಕು ಎನ್ನುವ ಛಲ.. ಈ ದ್ವಂದವನ್ನು ಅದ್ಭುತವಾಗಿ ಅಭಿನಯಿಸಿದ್ದಾರೆ ರಾಜಕುಮಾರ್ ಅವರು.. ಹಣೆಯಲ್ಲಿರುವ ವಿಭೂತಿಯನ್ನೋ. ಕುಂಕುಮವನ್ನೋ, ನಾಮವನ್ನೋ ಅಳಿಸಿಕೊಂಡು ಹೊಸತಾಗಿ ಹಾಕಿಕೊಳ್ಳಬಹುದು.. ಆದರೆ ಬ್ರಹ್ಮ ಬರೆದ ವಿಧಿಬರಹ.. ಅನುಭವಿಸಲೇ ಬೇಕು.. ಇದು ಅಳಿಸಲಾರದ ವಿಧಿ ಲಿಖಿತ ಎನ್ನುವ ತಳಹದಿಯ ಮೇಲೆ ಇರುವ ಈ ಚಿತ್ರ.. ರಾಜಕುಮಾರ್ ಅವರ ಶ್ರದ್ಧೆ ಚಿತ್ರದುದ್ದಕ್ಕೂ ಕಾಣುತ್ತದೆ.. ಕಟ್ಟು ಮಸ್ತಾದ ಶರೀರ.. ಆ ಧ್ವನಿ.. ಸೋಲುತ್ತಿದ್ದೇನೆ ಅಂತ ಗೊತ್ತಾಗುತ್ತಿದ್ದರೂ, ಅದನ್ನು ಮೀರಿ ನಿಲ್ಲುತ್ತೇನೆ ಎಂದು ತನ್ನ ಸಹಪಾಠಿಗೆ ಹಾಕಿದ ಸವಾಲು ಪದೇ ಪದೇ ನೆನಪಿಗೆ ಬಂದು ವಿಚಲಿತರನ್ನಾಗಿ ಮಾಡುತ್ತಿರುತ್ತದೆ. 

ಆ ತೊಳಲಾಟವನ್ನು ಒಂದು ಚೂರು ಮೀರದಂತೆ .. ಹದವಾಗಿ ಅಭಿನಯಿಸಿ ತೋರಿಸಿದ್ದಾರೆ ರಾಜಕುಮಾರ್ ಅವರು..  

ಇದೊಂದು ಟಿ  ಮಾದರ್ ಸಂಜೀವನಿ ಅವರ ಪುಟ್ಟ ಕಥೆಯನ್ನು ಸಿನೆಮವನ್ನಾಗಿ ಮೂಡಿಸಿದ್ದಾರೆ ನಿರ್ದೇಶಕ ಕಂ ಛಾಯಾಗ್ರಾಹಕ ಎನ್ ಎಸ್ ವರ್ಮಾ. ಸಂಗೀತ ಆಯೋಜನೆ ಟಿ ಚಲಪತಿ ರಾವ್ ಮತ್ತು ಎಂ ವೆಂಕಟರಾಜು.  ಇದಕ್ಕೆ ಹೊಂದುವಂಥ ಸಂಭಾಷಣೆ ಎಸ್ ಕೆ ಕರೀಂ ಖಾನ್ ಅವರದ್ದು. ಎಚ್ ಎಂ ಬಾಬಾ ಪ್ರೊಡಕ್ಷನ್ಸ್ ಲಾಂಛನದಲ್ಲಿ ೧೯೬೩ರಲ್ಲಿ ತೆರೆಗೆ ಬಂತು. 

ಪ್ರಚಂಡ ಎನ್ನುವ ಪಾತ್ರದಲ್ಲಿ ರಾಜಕುಮಾರ್ ವಿಜೃಂಭಿಸಿದ್ದಾರೆ, ಅವರ ಮುಖಭಾವ,  ಅಭಿನಯ ನೋಡೋದೇ ಒಂದು ಖುಷಿ. ಚಂದ್ರಕುಮಾರನ ಪಾತ್ರದಲ್ಲಿ ಉದಯಕುಮಾರ್ ಹದವಾಗಿ ಅಭಿನಯಿಸಿದ್ದಾರೆ. ಆತನ ನಾಯಕಿಯಾಗಿ ಕಪ್ಪು ಬಿಳುಪಿನ ಚಿತ್ರಗಳ ಚೆಲುವೆ ಕೃಷ್ಣಕುಮಾರಿ. ಒಂದಷ್ಟು ಹಾಸ್ಯಬೇಕು ಅಲ್ಲವೇ.. ನರಸಿಂಹರಾಜು ಅದಕ್ಕೆ ನಿಂತಿದ್ದಾರೆ.. ಇವರು ನಾಲ್ಕು ಪಾತ್ರಗಳ ಸುತ್ತಲೇ ಸುತ್ತುವ ಚಿತ್ರದಲ್ಲಿ ಉಳಿದ ಪಾತ್ರಗಳಾದ ಗುರುಗಳು, ಶಿಷ್ಯ ಗಣಿತಜ್ಞ ಮಾರ್ತಾಂಡ .. ಬಾಲಣ್ಣ ಒಂದು ಪುಟ್ಟ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ.. ಉಳಿದಂತೆ ಇತರ ಕಲಾವಿದರ ಅಭಿನಯ ಚಿತ್ರಕ್ಕೆ ಅಗತ್ಯವಿದ್ದಷ್ಟು ಇದೆ.. 

ಚಿತ್ರದ ಆರಂಭದಲ್ಲಿ ರಾಜ್ ಕುಮಾರ್ ಅವರ ಮಾತುಗಳು ಇಷ್ಟವಾಗುತ್ತದೆ. ಪ್ರಾರಬ್ಧ ಕರ್ಮಗಳು ಅನುಭವಿಸಲೆ ಬೇಕು ಅಂತ ಗುರುಗಳು ಹೇಳುವ ಮಾತಿಗೆ.. ಪ್ರಚಂಡನ ಪಾತ್ರ ಸ್ವಯಂ ಶಕ್ತಿಯಿಂದ ವಿಧಿ ಲಿಖಿತವನ್ನು ಅಳಿಸಬಹುದು. ಇದನ್ನು ಉದಾಹರಣೆ ಸಹಿತ ರುಜುವಾತು ಮಾಡುತ್ತೇನೆ ಎಂದು ಸವಾಲು ಹಾಕುವ ಪ್ರಚಂಡನಿಗೆ ಎದುರಾಗಿ ಮಾರ್ತಾಂಡ ಗಣಿತಜ್ಞ ಇದು ಸಾಧ್ಯವಿಲ್ಲ.. ಎಂದು ಸವಾಲೆಸುಯುತ್ತಾರೆ,,

ಆತ್ಮಶಕ್ತಿಯಿಂದಲೇ ಅಸಾಧ್ಯವನ್ನು ಸಾಧ್ಯವಾಗಿಸಬಹುದು ಎಂದಾಗ.. ಗುರುಗಳು ತೀರ್ಥಯಾತ್ರೆಗೆ ಮಹಾರಾಜರು ಹೊರಟಿದ್ದಾರೆ ಹಾಗಾಗಿ ನಾನು ಸ್ವಲ್ಪ ಕಾಲ ಆಶ್ರಮದಲ್ಲಿರುವುದಿಲ್ಲ.. ಎಂದು ಹೇಳಿ.. ಇಬ್ಬರು ಮಕ್ಕಳನ್ನು ಗಮನಿಸಬೇಕು ಎಂದು ಆಶ್ರಮದಲ್ಲಿ ಬಿಟ್ಟು ಹೊರಡುವಾಗ.. ಪ್ರಚಂಡ.. ಈ ಮಕ್ಕಳನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಒಪ್ಪಿಕೊಳ್ಳುತ್ತಾರೆ.. ಆಗ ಒಂದು ಸಣ್ಣ ನಗೆ ಕೊಡುವ ಮಾರ್ತಾಂಡ... ಗಂಡು ಮಗು ಬೇಡರ ಬಳಿ ಬೆಳೆಯುತ್ತದೆ.. ಹೆಣ್ಣು ಮಗು ರಾಜನರ್ತಕಿಯಾಗುತ್ತದೆ ಇದು ಗಣಿತ ಸಿದ್ಧಾಂತ ಎಂದಾಗ.. ಪ್ರಚಂಡ.. ಇಲ್ಲ ಈ ಮಕ್ಕಳನ್ನು ವಿಧಿ ಬರಹಕ್ಕೆ ವಿರುದ್ಧವಾಗಿ ಇವುಗಳ ಭವಿಷ್ಯ ರೂಪಿಸುತ್ತೇನೆ ಎಂದು ಎರಡು ಮಕ್ಕಳನ್ನು ಜನರೇ ಇಲ್ಲದೆ  ಕರೆದೊಯ್ಯುವಾಗ.. ಗಂಡು ಮಗು ತಪ್ಪಿಸಿಕೊಳ್ಳುತ್ತದೆ.. ಅದು ಬೇಡರ ಕುಟುಂಬಕ್ಕೆ ಸೇರಿಕೊಳ್ಳುತ್ತದೆ.. 

ಹೆಣ್ಣು ಮಗುವನ್ನಾದರೂ, ಜೋಪಾನಮಾಡಬೇಕು ಎಂದು ಒಂದು ಆಶ್ರಮ ಕಟ್ಟಿ ಅಲ್ಲಿ ಹೆಣ್ಣು ಮಗುವನ್ನು ಬೆಳೆಸುತ್ತಾನೆ..ಸೌಂದರ್ಯವತಿಯಾಗಿ ಬೆಳೆಯುವ ಆ ಮಗು.. ಒಂದು ದಿನ ರಾಜಕುಮಾರ ಚಂದ್ರಕುಮಾರನಿಗೆ ಕಾಣಿಸಿಕೊಂಡು ಮೋಹಪರವಶಳಾಗುತ್ತಾಳೆ.. ಆತನು ಕೂಡ ಈಕೆಯನ್ನು ಇಷ್ಟಪಡುತ್ತಾನೆ.. 

ಇದರಿಂದ ಕೋಪಗೊಂಡ ಪ್ರಚಂಡ.. ಏನೇ ಪ್ರಯತ್ನ ಮಾಡಿದರೂ ಆಕೆಯ ನಿಗದಿತ ಭವಿಷ್ಯವನ್ನು ಬದಲಿಸಲಾಗದೆ, ಕಡೆಯಲ್ಲಿ ಒಪ್ಪಿಕೊಳ್ಳುತ್ತಾನೆ. 

ಚಿತ್ರ ನೋಡಿಸಿಕೊಂಡು ಹೋಗುವುದಕ್ಕೆ ಕಾರಣ.. ರಾಜಕುಮಾರ್ ಅವರ ಅಭಿನಯ, ಕಥೆಯನ್ನು ಎಳೆಯದೆ ಅಚ್ಚುಕಟ್ಟಾಗಿ ಹೆಣೆದಿರುವ ಚಿತ್ರಕಥೆ.. ಹಾಡುಗಳನ್ನು ಪಿಬಿ ಶ್ರೀನಿವಾಸ್, ಎಸ ಜಾನಕಿಪಿ ಸುಶೀಲ, ನಾಗೇಶ್ವರರಾವ್ ಹಾಡಿದ್ದಾರೆ. 

ದೈವದ ಲಿಖಿತ ಮುಂದೆ ಮಾನವನ ಪ್ರಯತ್ನ ಏನೂ ಸಾಗದು ಎನ್ನುವ ಸಾರಾಂಶ ಹೊಂದಿದ ಈ ಚಿತ್ರ ಆರಾಮಾಗಿ ನೋಡಿಸಿಕೊಂಡು ಹೋಗುತ್ತದೆ. 

ಈ ಚಿತ್ರದ ಕೆಲವು ದೃಶ್ಯಗಳು ನಿಮಗಾಗಿ.. 

ಬಾಲಣ್ಣ 


ವಾದ ಹುಟ್ಟು ಹಾಕಿದ ದೃಶ್ಯ 

ಮಾರ್ತಾಂಡ ... ಪ್ರಚಂಡನಾಗಿ ರಾಜಕುಮಾರ್ 

ಕೃಷ್ಣ ಕುಮಾರಿ 

ನರಸಿಂಹರಾಜು 

ರಾಜಾಶಂಕರ್ 

ರಾಜಾಶಂಕರ್ 

ಒಂದೇ ದೃಶ್ಯದಲ್ಲಿ ನರಸಿಂಹರಾಜು ಮತ್ತು ಬಾಲಣ್ಣ 

ಉದಯ ಕುಮಾರ್ 

ಜೋಡಿ