Saturday, June 27, 2020

ಎಲ್ಲರ ಆತ್ಮವೂ ಒಂದೇ ಎನ್ನುವ ಮಹಾತ್ಮ ಕಬೀರ್ (1962) (ಅಣ್ಣಾವ್ರ ಚಿತ್ರ ೩೧ / ೨೦೭)

ನಾ ನೋಡಿದ ಅನೇಕ ಚಿತ್ರಗಳು ಸದ್ದಿಲ್ಲದೇ ಮನಸ್ಸಿನ ಒಳಗೆ ಇಳಿದು, ತನ್ನೊಳಗೆ ಇರುವ ವಿಷಯಗಳನ್ನು ನಮ್ಮ ಮನದೊಳಗೆ ಮಂಥನ ಮಾಡಲು ಶುರು ಮಾಡುತ್ತವೆ..

ಗಿಡಕ್ಕೆ ನೀರು ಹಾಕಿದ ತಕ್ಷಣ ಹೂಗಳು ಅರಳುವುದಿಲ್ಲ.. ಬದಲಿಗೆ ಬೇರುಗಳು ಆ ಸತ್ವವನು ಹೀರಿ ಬೆಳೆದ ಮೇಲೆ ಹೂಗಳು ಅರಳುತ್ತದೆ..

 ಈ ಚಿತ್ರವೂ ಹಾಗೆ.. ಉದ್ದುದ್ದ ಪ್ರವಚನಗಳಿಲ್ಲದೆ, ಪಾಠವನ್ನು ಹೇಳದೆ ದೃಶ್ಯಗಳಲ್ಲಿಯೇ ಹೇಳಬೇಕಾದ್ದು ಹೇಳುತ್ತದೆ..

ಮಕ್ಕಳು ಜಗಳ ಮಾಡುತ್ತಿರುತ್ತದೆ.. ಈ ಸೂರ್ಯ ನನಗೆ ಈ ಸೂರ್ಯ ನನಗೆ .. ಆಗ ಕಬೀರರು ಅಲ್ಲಿ ಬಂದು ಮಕ್ಕಳಿಬ್ಬರಿಗೂ ಕನ್ನಡಿ  ತರಲು ಹೇಳಿ.. ತಂದ ಮೇಲೆ.. ಅದರಲ್ಲಿ ಸೂರ್ಯನ ಪ್ರತಿಬಿಂಬವನ್ನು ತೋರಿಸಿ.. ಇದು ನಿನ್ನ ಸೂರ್ಯ..ಅದು ಅವನ ಸೂರ್ಯ ಅಂತ ಹೇಳಿ ಸಮಾಧಾನ ಮಾಡುತ್ತಾರೆ..

ಪ್ರತಿಯೊಬ್ಬರಿಗೂ ಜ್ಞಾನವನ್ನು ಕಾಣುವ, ಆನಂದಿಸುವ ಅವಕಾಶವಿರುತ್ತದೆ ಅದಕ್ಕೆ ಬೇಕಾಗಿರೋದು ಪ್ರತಿಫಲನ ಮಾಡುವಂತಹ ಮನಸ್ಸು.. ಅದ್ಭುತ ವಿಚಾರವನ್ನು ಸರಳವಾಗಿ ಹೇಳಿದ್ದಾರೆ 


ಈ ಚಿತ್ರದಲ್ಲಿ ಮಹಿಮೆ, ಪವಾಡಗಳ ಬಗ್ಗೆ ಹೆಚ್ಚಿಗೆ ಹೇಳ ಹೋಗದೆ ಕಥೆಗೆ ಮಾತ್ರ ಒತ್ತುಕೊಟ್ಟು ಚಿತ್ರ ಮಾಡಿರೋದು ಗಮನ ಸೆಳೆಯುತ್ತದೆ..

ಸಿನಿಮಾ ಸರಳವಾಗಿದೆ.. ಹಾಡುಗಳಲ್ಲಿ ಬೇಕಾಗಿರುವ ತತ್ವವನ್ನು ತುಂಬಿದ್ದಾರೆ.. ಈ ಚಿತ್ರ ಎರಡೂ ಆಯಾಮದಲ್ಲಿ ನೆಡೆಯುತ್ತದೆ.. ಒಂದು  ಕಡೆ ಭಕ್ತಿ, ಧ್ಯಾನ, ಮೋಕ್ಷ ಎನ್ನುತ್ತಾ ಪಾತ್ರ ಕಬೀರನ ಪಾತ್ರದಲ್ಲಿ ರಾಜಕುಮಾರ್ .. ಇನ್ನೊಂದು ಕಡೆ ಜಾಗತಿಕ ಭಾವನೆಗಳನ್ನು ಮೈಗೂಡಿಸಿಕೊಂಡು ತನಗೆ ಸರಿ ಅನಿಸಿದಂತೆ ಬದುಕುವ ಬದರಿ ಪಾತ್ರದಲ್ಲಿ ಬಾಲಣ್ಣ  ಮತ್ತು ಬದರಿಯ ವ್ಯಕ್ತಿತ್ವಕ್ಕೆ ವಿರುದ್ಧವಾಗಿ ಭಕ್ತಿ,ಮಡಿ ಎನ್ನುವ ಆತನ ಮಡದಿ ಎಂ ಏನ್ ಲಕ್ಷ್ಮೀದೇವಿ ಅವರೆಡೂ ಆಯಾಮಗಳು ಚಿತ್ರದ ಕೊನೆಯಲ್ಲಿ ತಮ್ಮ ತಮ್ಮ ಹಾದಿಯಲ್ಲಿ ನೆಡೆದುಹೋಗುತ್ತಾರೆ..

ಕಬೀರನ ಆಶಯಗಳನ್ನು ಅನುಮಾನಾಸ್ಪದವಾಗಿ ನೋಡುವ ಅವನ ಹಳ್ಳಿಯವರು ರಾಜನಿಗೆ ದೂರುಕೊಟ್ಟು ಕಬೀರರ ಅಂತ್ಯಕ್ಕೆ ಕಾರಣವಾಗುತ್ತಾರೆ..


ಇತ್ತ ಬದರಿ ತನ್ನ ಯಜಮಾನನ ಸ್ತ್ರೀ ಲೋಲುಪತೆಯನ್ನು ಕಂಡು.. ಇದೆ ಊರಿನಲ್ಲಿ ಉಳಿಯುವುದು ತರವಲ್ಲ  ಎಂದು ತಿಳಿದು  ತಾನು ಕೆಲಸ ಮಾಡುತ್ತಿದ್ದ ಅಂಗಡಿಯಿಂದ ತನ್ನ ಬದುಕಿಗೆ ಬೇಕಾಗುವಷ್ಟು ಹೊನ್ನನ್ನು ತೆಗೆದುಕೊಂಡು ತನ್ನ ಮಡದಿಯನ್ನು ಕರೆದುಕೊಂಡು ಊರು ಬಿಡುತ್ತಾನೆ..

ಸರ್ವೋದಯಪಿ  ಚಿತ್ರದ ಲಾಂಛನದಲ್ಲಿ ಟಿ ಎನ್ ರೆಡ್ಡಿಯವರು ನಿರ್ಮಿಸಿ, ಪಿ ಶ್ರೀನಿವಾಸ್ ಕಥೆ ಚಿತ್ರಕಥೆ ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ವಿಶೇಷವಾಗಿ ಶ್ರೀಮತಿ ಎ ಅನುಸೂಯಾದೇವಿ ಸಂಗೀತ ಒದಗಿಸಿದ್ದಾರೆ.. ಮಗ್ಗದ  ಸದ್ದನ್ನು ಅನುಕರಿಸಿ ಮೂಡಿ ಬರುವ ಒಂದು ಹಾಡಿನ ಸಂಗೀತ ನನ್ನ ಮನಸೆಳೆಯಿತು.

ಸಂಭಾಷಣೆ, ಮತ್ತು ಹಾಡುಗಳನ್ನು ನರೇಂದ್ರ ಬಾಬು ಮತ್ತು ಚಿ ಸದಾಶಿವಯ್ಯ ರಚಿಸಿದ್ದಾರೆ.. ಛಾಯಾಗ್ರಹಣ ಕೆ ಜಾನಕಿರಾಂ ಅವರದ್ದು. ಅನೇಕ ಹಾಡುಗಳಿಗೆ ಅನೇಕ ಹಿನ್ನೆಲೆ ಗಾಯಕರು ಕೆಲಸ ಮಾಡಿದ್ದಾರೆ. ಘಂಟಸಾಲ, ಬಿ ಗೋಪಾಲ್, ನಾಗೇಂದ್ರ, ಎಸ್ ಜಾನಕಿ, ಸಿ ಎಸ್ ಸರೋಜಿನಿ, ಬೆಂಗಳೂರು ಲತಾ,  ಎ ರಾಮಚಂದ್ರರಾವ್, ಜಯದೇವ್, ಜೊತೆಯಲ್ಲಿ ಬಾಲಮುರುಳಿಕೃಷ್ಣ.

ರಾಜಕುಮಾರ್ ಕಬೀರರ ಪಾತ್ರದಲ್ಲಿ ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ. ಇಸ್ಲಾಮ್ ಧರ್ಮದ ಉಡುಗೆಯನ್ನು, ಮೇಕಪ್ ಅದೇ ರೀತಿಯಲ್ಲಿ ಮಾಡಿದ್ದಾರೆ.. ಸ್ವಲ್ಪ ಕೂಡುವಂತೆ ಇರುವ ಹುಬ್ಬು, ತಲೆಗೂದಲನ್ನು ಬಾಚಿದಂತೆ ಇರುವ ಕೇಶ ವಿನ್ಯಾಸ, ಮೀಸೆ ಗಡ್ಡ..ವಿಶಿಷ್ಟವಾಗಿ ಕಾಣುತ್ತಾರೆ.


ಸಂಭಾಷಣೆಯನ್ನು ಅದಕ್ಕೆ ಬೇಕಿರುವ ಭಾವತುಂಬಿ ನಟಿಸಿದ್ದಾರೆ.. ಈ ಚಿತ್ರ ಚಿತ್ರಕತೆಯ ಮೇಲೆ ನಿಂತಿರುವುದರಿಂದ ತಮ್ಮ ಅಭಿನಯ ಸಾಮರ್ಥ್ಯವನ್ನು ಕೊಂಚ ಕುಗ್ಗಿಸಿಕೊಂಡಂತೆ ಕಂಡರೂ, ಅವರಿರುವ ದೃಶ್ಯಗಳಲ್ಲಿ ಅವರೇ ಎದ್ದು ಕಾಣುತ್ತಾರೆ..


ಮನದಾಳದ  ಭಾವವನ್ನು ವ್ಯಕ್ತಪಡಿಸುವ ರೀತಿ ಇಷ್ಟವಾಗುತ್ತದೆ.

ಪುಟ್ಟ ಪಾತ್ರದಲ್ಲಿ ನಾಯಕಿಯಾಗಿ ಕೃಷ್ಣಕುಮಾರಿ ಮುದ್ದಾಗಿ ಕಾಣುತ್ತಾರೆ..


ಅಂಗಡಿಯ ಸಾಹುಕಾರನಾಗಿ ಉದಯಕುಮಾರ್ ಚಂದವಾಗಿ ಕಾಣುತ್ತಾರೆ ಮತ್ತು ಅವರಿರುವ ದೃಶ್ಯಗಳಲ್ಲಿ  ಗಮನಸೆಳೆಯುತ್ತಾರೆ.. ತನ್ನ ತಪ್ಪನ್ನು ಒಪ್ಪಿಕೊಂಡು ಹಲುಬುತ್ತಾ ಶರಣಾಗುವ ದೃಶ್ಯ ಇಷ್ಟವಾಗುತ್ತದೆ.





ಗಂಭೀರವಾದ ಈ ಚಿತ್ರದಲ್ಲಿ ಹಾಸ್ಯ ದೃಶ್ಯಗಳು ಕಡಿಮೆ ಇದ್ದರೂ, ಬಾಲಕೃಷ್ಣ ಮತ್ತು ಎಂ ಎನ್ ಲಕ್ಷ್ಮೀದೇವಿ ಆ ಕೊರತೆಯನ್ನು ನಿಭಾಯಿಸಿದ್ದಾರೆ.





ಸದಾ ಪೂಜೆ, ಮಡಿ, ಆಚಾರ ವಿಚಾರ ಎನ್ನುವ ಲಕ್ಷೀದೇವಿ  ದೇವರಿಗೆ ಪೂಜೆ ಮಾಡುತ್ತಲೇ ಗಂಡನಿಗೆ ಸಹಸ್ರನಾಮ ಮಾಡುವುದು.. ಅವನನ್ನು ನಿದ್ದೆಯಿಂದ ಎಬ್ಬಿಸಲು ಮಾಡಿಕೋಲಿನಿಂದ ತಿವಿಯುವುದು, ಮತ್ತೆ ಸಾಹುಕಾರರು ಬಂದಿದ್ದಾರೆ ಎಂದು ಗಂಡನಿಗೆ ಸುಳ್ಳು ಹೇಳಿದಾಗ ಗಾಬರಿಯಿಂದ ಗಂಡ ಅಂದರೆ ಬಾಲಣ್ಣ ನಿದ್ದೆಯಿಂದ ಎದ್ದು ಗಾಬರಿಯಿಂದ ಹೊರಗೆ ಬಂದಾಗ ನೆಡಯುವ ಮಾತುಗಳು ಇಷ್ಟವಾಗುತ್ತವೆ..

"ಏ .. ಎಲ್ಲೇ ಸಾಹುಕಾರ ಬಂದಿದ್ದಾರೆ ಅಂತ ಸುಳ್ಳು ಯಾಕೆ ಹೇಳಿದೆ"

"ಬಿಸಿಲು ನೆತ್ತಿ ಮೇಲೆ ಬಂದರೂ ಇನ್ನೂ ಏಳಲಿಲ್ಲ ಅದಕ್ಕೆ.. ಸಾಹುಕಾರನ ಹೆಸರು ಕೇಳಿದರೆ ಯಾಕ್ರೀ ಗಾಬರಿ... ಏನಾದರೂ ಅಂಗಡಿ ಲೆಕ್ಕದಲ್ಲಿ .. "

"ಏ ನನ್ನ ಲೆಕ್ಕ ಕನ್ನಡಿ ಕನ್ನಡಿ ಕಣೆ.. " ಅಂತ ಹೇಳುವ ಈ ಸಂಭಾಷಣೆ.. ಅವರು ಊರು ಬಿಡುವಾಗ ಹೇಳುವ ಸಂಭಾಷಣೆಗೆ ತಾಳೆ ಹಾಕಿ ನೋಡಿದರೆ ಈ ಪಾತ್ರದ ಬಗ್ಗೆ ತಿಳಿಯುತ್ತೆ.

"ಮತ್ಯಾಕೆ ಸಾಹುಕಾರರ ಹೆಸರು ಕೇಳಿದರೆ ಗಾಬರಿ" ಅಂತ ಹೆಂಡತಿ ಕೇಳಿದಾಗ ಬಾಲಣ್ಣ ರಾಗವಾಗಿ ಹೇಳುವ ಶೈಲಿ ಸಕತ್ ಇಷ್ಟವಾಗುತ್ತದೆ

"ಮಡಿ ಮಡಿ ಅಂತ ದಿನಕ್ಕೆ ಮೂರಾವರ್ತಿ ನೀರಲ್ಲಿ ಮುಳುಗೋಳು ನೀನು.. ನಮ್ಮ ಸಾಹುಕಾರ ಮೂರು ತಿಂಗಳಿಗೆ ಒಂದಾವರ್ತಿ ಮೈ ತೊಳೆಯೋನು.. ಅಂಥವನು ಈ  ಮನೆ ಒಳಗೆ ಕಾಲಿಟ್ಟರೆ ನಿನ್ನ ಮಡಿ ಭೂಮಿಯೊಳಗೆ ಮೂರು ಅಡಿ ಒಳಗೆ ಹೋಗುತ್ತೆ ಅಂತ ಎದ್ದೆ.. "

ಹೀಗೆ ಮಡಿ ಮಡಿ ಎನ್ನುವ ಹೆಂಡತಿಗೆ ಹೇಳುವ ಮಾತು
"ಎಂಜಲು ಮೈಲಿಗೆಯಲ್ಲಿ ಇರೋದು ಕಣೆ ಮಕ್ಕಳು ಮರಿ ವಿಷಯ" ಗಹನವಾದ ವಿಚಾರವನ್ನು ಸರಳವಾಗಿ ಸಂಭಾಷಣೆಗೆ ಇಳಿಸಿರುವ ಸಂಭಾಷಣಕಾರರು ಗಮನ ಸೆಳೆದರೆ  ಅದ್ಭುತವಾಗಿ ಹೇಳಿರುವ ಬಾಲಣ್ಣ ಇಷ್ಟವಾಗುತ್ತಾರೆ..

ನಿದ್ದೆಯಿಂದ ಎದ್ದ ಬಾಲಣ್ಣ ಜೋರಾಗಿ ಆಕಳಿಸಿದಾಗ "ರೀ ಆಕಳಿಸಬೇಡಿ ಮೈಲಿಗೆ ಗಾಳಿ ಬಿಡಬೇಡಿ.. ಮಡಿಲಿದ್ದೀನಿ" ಎಂದಾಗ

ಮತ್ತೊಮ್ಮೆ ಬಾಲಣ್ಣ

"ಏನು ಸುಡುಗಾಡು ಮಡಿನೋ.. ಹಂಡೆ ಹಂಡೆ ನೀರನ್ನು ಮೈ ಮೇಲೆ  ಸುರಿದುಕೊಂಡು ಮಡಿ ಮಡಿ ಅಂತೀಯಾ
ಪಕ್ಕದ ಮನೆಯವಳು ಸೀರೆ ತಂದಳು ಅಂತ ನನ್ನ ಮೇಲೆ ಗೊಣಗ್ತಾ ಇರ್ತೀಯ
ದೇವರ ಪೂಜೆ ಅಂತ ಮಾಡ್ತಾ ಇರ್ತೀಯ..ದೊಣ್ಣೆ ಮೆಣಸಿನಕಾಯಿ ಪಚ್ಡಿ ನಾ ನೆನೆಸ್ಕೊತಾ ಇರ್ತೀಯ...

ಇವತ್ತು ಸ್ನಾನನೂ ಮಾಡೋಲ್ಲ.. ಹಲ್ಲು ಉಜ್ಜೋಲ್ಲ .. ಹಂಗೆ ದೋಸೆ ತಿಂತೀನಿ ಹೋಗಿ ತಗೊಂಡು ಬಾ ಅಂತ ಚಾಪೆ  ಹಾಸಿಕೊಂಡು ಕೂತು .. "ನಿನ್ನ ಹಾಳ್ ಮಡಿ ಎಕ್ಕುಟ್ಟೋಗ " ಅಂತ ಬಯ್ತಾರೆ...

ಆಗ ಆತನ ಹೆಂಡತಿ ಒಂದು ಬಿಂದಿಗೆ ನೀರು ತಂದು ಅವನ ತಲೆಯ ಮೇಲೆ ಸುರಿಯುತ್ತಾಳೆ.. ಉತ್ತಮ ಹಾಸ್ಯ ದೃಶ್ಯವಿದು ಈ ಚಿತ್ರದಲ್ಲಿ.

ಕೆಲವು ದೃಶ್ಯಗಳು ಪರಿಣಾಮಕಾರಿಯಾಗಿದೆ

ಗುರುವಿನ ಹುಡುಕಾಟದಲ್ಲಿ .. ರಾಮಾನಂದರ ಬಳಿ ಹೋಗಿ ಕೇಳಿದಾಗ ಕೆಲವು ಕಾರಣಗಳಿಂದಾಗಿ ಶಿಷ್ಯನನ್ನಾಗಿ ಸ್ವೀಕರಿಸಲು ಸಾಧ್ಯವಿಲ್ಲ ಅಂತ ಗುರು ಹೇಳುತ್ತಾರೆ.. ಆಗ ಕಬೀರರು ಗುರುಗಳು ಸ್ನಾನ ಮಾಡಿ ಬರುವ ಹಾದಿಯಲ್ಲಿ ಮಲಗಿ ಅವರ ಪಾದದೂಳಿಯನ್ನು ಕಣ್ಣಿಗೆ ಒತ್ತಿಕೊಂಡು ಶಿಷ್ಯನಾಗಿದ್ದೇನೆ ಎಂದು ಹೇಳುವುದು..


ಅವನ ಹಳ್ಳಿಯವರು ಅಪ ಪ್ರಚಾರ ಮಾಡುತ್ತಿದ್ದಾನೆ ಎಂದು ಅನುಮಾನಿಸಿ ಕಬೀರರಿಗೆ ಹೊಡೆದಾಗ ರಕ್ತ ಬರುತ್ತದೆ .. ಆಗ ಶ್ರೀ ರಾಮನ ಮೂರ್ತಿಯ ಹಣೆಯಿಂದ ರಕ್ತ ಜಿನುಗುತ್ತದೆ.









 ಕಬೀರನ ತಾಯಿಯಾಗಿ ಜಯಶ್ರೀ ಇದ್ದಾರೆ.. ಆಕೆಯ ನೆರೆಹೊರೆಯ ಗೆಳತಿಯಾಗಿ ಪಾಪಮ್ಮ ಅಭಿನಯಿಸಿದ್ದಾರೆ..



ವಿಶೇಷವೆಂದರೆ ತೆಲುಗು ನಟ ಶೋಭನ್ ಬಾಬು ಅವರ ಒಂದೇ ಒಂದು ಕನ್ನಡ ಚಿತ್ರವಾಗಿ ಮಹತ್ಮಾ ಕಬೀರ್ ದಾಖಲಾಗಿರುವುದು .. ಶ್ರೀ ರಾಮನ ಪಾತ್ರದಲ್ಲಿ ಒಂದೆರಡು ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಾರೆ..



ಒಂದು ಉತ್ತಮ ಸಂದೇಶವಿರುವ ಚಿತ್ರದಲ್ಲಿ ಕಬೀರರ ಜನ್ಮ ತಳೆದ ಬಗೆಯನ್ನು ಒಂದು ಫಲಕದಲ್ಲಿ ಪುಟ್ಟ ಘಟನೆಯನ್ನು ತೋರಿಸುತ್ತಾರೆ..



ಸರಳ ಚಿತ್ರ. ಉತ್ತಮ ಪರಿಶ್ರಮದಿಂದಾಗಿ ರಾಜ್ ಕುಮಾರರ ೩೧ ನೇ ಚಿತ್ರವಾಗಿ ದಾಖಲಾಗುತ್ತದೆ..

ಮತ್ತೊಂದು ಚಿತ್ರದೊಂದಿಗೆ ಸಿಗೋಣ್ವಾ.. !

Saturday, June 20, 2020

ಕರೀಬ್ ಕರೀಬ್ ಸಿಂಗಲ್ 2017

ಸಾಮಾನ್ಯ ಹೊಸ ಸಿನಿಮಾಗಳು ಗಮನ ಸೆಳೆದರೆ ಮಾತ್ರ ನೋಡುವ ಅಭ್ಯಾಸ ಹವ್ಯಾಸವಾಗಿ ಹೋಗಿದೆ. ನನ್ನ ನೆಚ್ಚಿನ ಡಿವೈನ್ ಗೆಳತಿ ಶ್ರೀ ಈ ಸಿನಿಮಾ ನೋಡಿ ಒಮ್ಮೆ..  ನಿಮಗೆ ತುಂಬಾ ಇಷ್ಟವಾಗುತ್ತೆ ಅಂದಿದ್ದರು.. 

ಸರಿ ನೋಡೋಣ ಅಂತ ಹಾರಿಕೆಯ  ಉತ್ತರ ಕೊಟ್ಟಿದ್ದೆ..ಜೊತೆಗೆ ಯಾರು ಇದ್ದಾರೆ ಈ ಚಿತ್ರದಲ್ಲಿ ಅಂತ ಅವರು ಹೇಳಿದರು.. ಆದರೆ  ಚಿತ್ರದ ಬಗ್ಗೆ ಗುಟ್ಟು ಬಿಟ್ಟು ಕೊಟ್ಟಿರಲಿಲ್ಲ.. ಪಾರ್ವತಿ ಇದ್ದಾಳೆ ಅಂತ ಅವರು ಹೇಳಿದಾಗ ಸಕತ್ ಖುಷಿಯಾಗಿತ್ತು.. ಕಾರಣ ಕನ್ನಡದ ಮಿಲನ, ಪೃಥ್ವಿ ಚಿತ್ರಗಳನ್ನು ನೋಡಿ ಅವಳ ದೊಡ್ಡ ಅಭಿಮಾನಿಯಾಗಿದ್ದೆ.. 

ಚಿತ್ರಕೃಪೆ - ಗೂಗಲೇಶ್ವರ 
ಏನೋ ಒಂದು ರೀತಿಯ ಆಕರ್ಷಣೆ ಇತ್ತು ಅವಳಲ್ಲಿ.. ಬಾಗಿದ ಹುಬ್ಬು.. ಚಿತ್ರಕ್ಕೆ ಬೇಕಾದಂತೆ ಒಮ್ಮೆ ಗುಂಗುರು ಕೂದಲು.. ಇಲ್ಲವೇ ಪರಕೆ ಕಡ್ಡಿಯಂತೆ ನೇರವಾದ ಕೂದಲು.. ಹೊಳೆಯುವ ಕಂಗಳು.. ನೀಳವಾದ ನಾಸಿಕ.. ತುಂಬಾ ಮುದ್ದಾಗಿ ಕಾಣುವ ಅವಳನ್ನು ಚಿತ್ರಪೂರ್ತಿ ನೋಡಬಹುದು ಎನಿಸಿದಾಗ ಸಹಜವಾಗಿಯೇ ಕುತೂಹಲ ಮೂಡಿತ್ತು.. 

ಸರಿ ಅದಕ್ಕೆ ಒಂದು ಮುಹೂರ್ತ ನಿಗದಿ ಪಡಿಸಿ ಇಂದು ಎರಡೂವರೆ ಘಂಟೆಗಳ ಕಾಲ ಬಿಡುವು ಮಾಡಿಕೊಂಡು (ಬಿಡುವು.. ಹ ಹ ಹ ಒಳ್ಳೆಯ ಜೋಕ್ ಅಲ್ಲವೇ ಕೊರೊನ ಬೇಕಾದಷ್ಟು ಸಮಯ ಕೊಟ್ಟಿದೆ) ಇಂದು ನೋಡಿಯೇ ಬಿಟ್ಟೆ.. 

ಜಯ ಶಶಿಧರನ್ ಪಾತ್ರದಲ್ಲಿ ಅಕ್ಷರಶಃ ಪಾರ್ವತೀ ನ್ಯಾಯ ಒದಗಿಸಿದ್ದಾರೆ.. ಚಿತ್ರಪೂರ್ತಿ ಅವರನ್ನು ನೋಡುವುದೇ ಒಂದು ಹಬ್ಬ.. ಕಣ್ಣುಗಳಲ್ಲೇ ಭಾವನೆ ತೋರಿಸುವ ಆಕೆ ನಿಜಕ್ಕೂ ಜಯ ಆಗಿ ಈ ಪಾತ್ರವಾಗಿ ಬಿಟ್ಟಿದ್ದಾರೆ.. 
ಚಿತ್ರಕೃಪೆ - ಗೂಗಲೇಶ್ವರ 

ಪ್ರತಿ ದೃಶ್ಯದಲ್ಲಿಯೂ ಆಕೆ ಇರುವುದರಿಂದ ನನಗೆ ಅರ್ಜುನನ ಮಾತು ನೆನಪಿಗೆ ಬಂತು.. ಗುರುಗಳೇ ಹಕ್ಕಿಯ ಅಕ್ಷಿಯಲ್ಲದೆ ಬೇರೇನೂ ಕಾಣೋದಿಲ್ಲ ಅನ್ನುವ ಹಾಗೆ ಇಡೀ ಚಿತ್ರದುದ್ದಕ್ಕೂ ಆಕೆಯನ್ನು ಅನುಸರಿಸುತ್ತದೆ ನನ್ನ ಕಣ್ಣುಗಳು.. 

ತುಸು ಬಣ್ಣದ ನೇರವಾದ ಕೂದಲು... ಹೊಳೆಯುವ ಕಣ್ಣುಗಳು, ಬಾಗಿದ ಹುಬ್ಬಿನ ಜೊತೆ ಇನ್ನೊಂದು ವಿಶೇಷ ಅಂದರೆ ಆಕೆಯ ನೀಳವಾದ ನಾಸಿಕಕ್ಕೆ ತ್ರಿಕೋಣಾಕಾರಣದ ಹೊಳೆಯುವ ಮೂಗುತಿ.. ಅದ್ಭುತವಾಗಿ ಕಾಣುತ್ತಾರೆ.. 

ಆಕೆಯ ವೇಷಭೂಷಣಗಳು ಸರಳವಾಗಿ, ಸುಂದರವಾಗಿ ಕಾಣುವಂತೆ ಮಾಡಿವೆ.. ಅದರಲ್ಲೂ ಚಿತ್ರದ ಕೊನೆಯ ದೃಶ್ಯಗಳಲ್ಲಿ ಆ ಸೀರೆಯಲ್ಲಿ ಸರಳ ಸುಂದರತೆ ಎಂದರೆ ಇದು ಎನ್ನುವಂತೆ ಮಾಡಿವೆ. 

ಚಿತ್ರಕೃಪೆ - ಗೂಗಲೇಶ್ವರ 

ತನ್ನ ಜೀವನದ ಘಟನೆಗಳನ್ನು ನೆನೆಯುತ್ತಾ ಆಫೀಸಿಗೆ ಬರುತ್ತಾ.. ಬಾಗಿಲನ್ನು ತೆರೆಯುವ ಮುಂಚೆ.. ಒಮ್ಮೆ ದೀರ್ಘ ಉಸಿರು ಎಳೆದುಕೊಂಡು ಮುಖದ ಮೇಲೆ ನಗು ತಂದುಕೊಂಡು ತನ್ನ ಸಹೋದ್ಯೋಗಿಗಳಿಗೆ ಶುಭ ಕೋರುತ್ತಾ ಒಳಗೆ ಬರುವ ದೃಶ್ಯ ನನ್ನ ಇಷ್ಟವಾದ ದೃಶ್ಯ.. 

ಅರೆ ಕಷ್ಟಗಳು, ನೋವು ಇದ್ದೆ ಇರುತ್ತೆ.. ಅದನ್ನು ಬಾಗಿಲಿನಲ್ಲಿಯೇ ಬಿಟ್ಟು ಸವಾಲುಗಳಿಗೆ ಠಕ್ಕರ್ ಕೊಡಬೇಕು ಎನ್ನುವ ಅದ್ಭುತ ದೃಶ್ಯವದು.. 

ತನ್ನ ವಿವರಗಳನ್ನು ಜಾಲತಾಣದಲ್ಲಿ ತುಂಬುವಾಗ.. ತನ್ನ ವಯಸ್ಸನ್ನು ಮೊದಲು ಸರಿಯಾಗಿ ನಮೂದಿಸಿ ನಂತರ ಕಡಿಮೆ ಮಾಡುವಾಗ ಪುಟ್ಟ ತುಂಟ ನಗು.. ಕಣ್ಣುಗಳ ಹೊಳಪು ನೋಡಿದಾಗ ಒಮ್ಮೆ ಎದೆಯ ಬಡಿತ ಕೊಂಚ ಹೆಚ್ಚಾಗುತ್ತದೆ.. 

ಚಿತ್ರಕೃಪೆ - ಗೂಗಲೇಶ್ವರ 

ಪ್ರತಿ ದೃಶ್ಯದಲ್ಲಿಯೂ ಆಕೆಯ ಅಭಿನಯ ತುಂಬಾ ಇಷ್ಟವಾಗುತ್ತದೆ.. ಕೆಲವು ದೃಶ್ಯಗಳಲ್ಲಿ ಓಲಾಡುವ ಕ್ಯಾಮೆರಾ ಆಕೆಯ ಮನಸ್ಥಿತಿ ಡೋಲಾಯಮಾನವಾಗಿರುವುದನ್ನು ಬಿಂಬಿಸುತ್ತದೆ.  

ಒಂದು ದೃಷ್ಟಾಂತ ಕತೆ ನೆನಪಿಗೆ ಬಂತು.. 

ರಾಮಕೃಷ್ಣ ಪರಮಹಂಸರ ಹತ್ತಿರ ಒಬ್ಬಾಕೆ ತನ್ನ ಮಗು ತುಂಬಾ ಬೆಲ್ಲಾ ತಿನ್ನುತ್ತದೆ.. ಅದನ್ನು ಬಿಡಿಸುವ ಉಪಾಯ ಹೇಳಿ ಅಂದಾಗ.. ಆಕೆಯನ್ನು ಒಂದು ವಾರ ಬಿಟ್ಟು ಬರೋಕೆ ಹೇಳುತ್ತಾರೆ.. ಒಂದು ವಾರ ಬಿಟ್ಟು ಬಂದಾಗ ಆಕೆಯ ಮಗುವಿಗೆ "ನೋಡು ಮಗು ಬೆಲ್ಲ ತಿಂದರೆ ಹಲ್ಲು ಹಾಳಾಗುತ್ತದೆ.. ತಿನ್ನೋದು ಬಿಟ್ಟು ಬಿಡು ಮಗು" ಎಂದು  ಮಗುವಿನ ತಲೆ ಸವರುತ್ತಾರೆ.. 

"ಆಕೆ ಅಲ್ಲಾ ಗುರುಗಳೇ ಇದೆ ಮಾತನ್ನು ಹೋದವಾರ ಹೇಳಬಹುದಿತ್ತಲ್ವಾ" ಎಂದಾಗ.. "ನೋಡಮ್ಮ ಬೆಲ್ಲ ತಿನ್ನುವ ಅಭ್ಯಾಸ ನನಗೂ ಇತ್ತು.. ಅದನ್ನು ಬಿಡುವ ಕಷ್ಟ ನನಗೆ ಅರ್ಥವಾದ ಮೇಲೆ... ನಾನು ಇನ್ನೊಬ್ಬರಿಗೆ ಉಪದೇಶ ಹೇಳಬಹುದು ಅಂತ ಅರಿವಾಯಿತು... "

ಈ ಸಿನಿಮಾ ನೋಡಿದಾಗ ನನಗೆ ಅನಿಸಿದ್ದು ಇದೆ ಮಾತು.. ಒಂಟಿ ಜೀವನ ಅಂತ ಬಂದಾಗ ಅದರ ಸಾಧಕ ಬಾಧಕಗಳ ಬಗ್ಗೆ ಅರಿವಾದಾಗ ಜಯ ಶಶಿಧರನ್ ಪಾತ್ರ ಇನ್ನಷ್ಟು ಹತ್ತಿರವಾಗುವ ಪಾತ್ರವಾಗುತ್ತದೆ.. 
ಚಿತ್ರಕೃಪೆ - ಗೂಗಲೇಶ್ವರ 


ಚಿತ್ರದ ಅಂತ್ಯದ ಒಂದು ಭಾಗದಲ್ಲಿ ಸುಮಾರು ಇಪ್ಪತ್ತು-,ಮೂವತ್ತು ಸೆಕೆಂಡುಗಳು ಆಕೆಯ ಮೊಗದ ಮೇಲೆ ಸ್ಟೆಡಿ ಕ್ಯಾಮೆರಾ ನಿಲ್ಲುತ್ತದೆ.. ಕ್ಷಣ ಕ್ಷಣಕ್ಕೂ ಮುಖದ ಭಾವ ಬದಲಿಸುವಾಗ ನನ್ನ ಕಣ್ಣಂಚಲ್ಲಿ ಕೊಂಚ ಹನಿಗಳು ಕಟ್ಟೆ ಕಟ್ಟಿದವು.. ಅದ್ಬುತ ಅಭಿನೇತ್ರಿ ನನ್ನ ನೆಚ್ಚಿನ ಪಾರ್ವತಿ.. ... 

ಹೆಣ್ಣಿನ ಮನದ ತುಮುಲಗಳನ್ನು, ಗೊಂದಲಗಳನ್ನು, ಪರಿಸ್ಥಿತಿಯನ್ನು ನಿಭಾಯಿಸುವ ಹೆಣ್ಣಾಗಿ ಪಾರ್ವತೀ ಬಿಂದಾಸ್ ಹಾಗೂ ಬೊಂಬಾಟ್.. 

ತನುಜಾ ಚಂದ್ರ ಅವರ ನಿರ್ದೇಶನ ಮನಸ್ಸೆಳೆಯುತ್ತದೆ... ಕಾಮ್ನ ಚಂದ್ರ ಅವರ ಕತೆಯನ್ನು ಸುಂದರ ಚಿತ್ರಕತೆಯನ್ನಾಗಿಸಿದವರು ತನುಜಾ ಚಂದ್ರ, ಗಝಲ್ ಧಾಲಿವಾಲ್ ಮತ್ತು ರಾಮಾಶ್ರಿತ್ ಜೋಶಿ.. ಹಾಡುಗಳು ಚಿತ್ರಕತೆಯನ್ನು ಮುಂದಕ್ಕೆ ಕೊಂಡು ಹೋಗಲು ಸಹಾಯ ಮಾಡುತ್ತದೆ.. ಸಾಹಿತ್ಯ ಕತೆಯನ್ನು ಮುಂದಕ್ಕೆ ಒಯ್ಯಲು ಮತ್ತು ಪಾತ್ರಧಾರಿಗಳ ಮನಸ್ಸಿನ ಸ್ಥಿತಿಯನ್ನು  ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.. 

ಚಿತ್ರಕೃಪೆ - ಗೂಗಲೇಶ್ವರ 
ಶ್ರೀ ನಿನಗೇನಾಯ್ತು.. ಈ ಚಿತ್ರದಲ್ಲಿ ಪಾರ್ವತೀ ಒಬ್ಬಳೇನಾ ಇರೋದು... ಬೇರೆ ಯಾರೂ ಇಲ್ವಾ ಅಂತ ಮನಸ್ಸು ಕೇಳಿತು.. 

 ಹೌದು ಕಣೋ.. ಇದ್ದಾರೆ.. ಆಕೆಯ ಒಂಟಿತನವನ್ನು ತಮ್ಮ ಮಕ್ಕಳ ಯೋಗಕ್ಷೇಮವನ್ನು ನೋಡಿಕೊಳ್ಳೋಕೆ ಉಪಯೋಗಿಸುವ ಗೆಳತಿ.. ಆಕೆಯನ್ನು ಬೇಕಾದ ಹೊತ್ತಿಗೆ ಮಾತ್ರ ಉಪಯೋಗಿಸುವ ಆಕೆಯ ಇತರ ಗೆಳತಿಯರು ತನ್ನನ್ನು ಅವರ ಅವಶ್ಯಕತೆಗೆ ಮಾತ್ರ ಉಪಯೋಗಿಸುತ್ತಿದ್ದಾರೆ ಎಂದು ಅರಿವಾದಾಗ ಆಕೆ ಎಲ್ಲರಿಗೂ ಕರೆ ಮಾಡಿ ಸ್ನೇಹಿತೆ ಬೇಕು ಅನಿಸಿದಾಗ ಕರೆ ಮಾಡಿ ಎಂದು ಹೇಳುವಾಗ ಆಕೆಯ ಮುಖಭಾವ ಇಷ್ಟವಾಗುತ್ತದೆ.. 

ಲೋ ಅದನ್ನು ಹೇಳುವಾಗಲೂ ಪಾರ್ವತಿಯೇ ಬೇಕಾ.. ಮಿಕ್ಕವರ ಬಗ್ಗೆ ಹೇಳು ಗುರು ಅಂತ ನನ್ನ ಮನಸ್ಸು ದಂಬಾಲು ಬಿತ್ತು.. 

ಸರಿ ಕಣಪ್ಪ.. ಹೇಳ್ತೀನಿ .. ಈ ಚಿತ್ರದಲ್ಲಿ ಪಾರ್ವತೀ ಜೊತೆಗೆ ಇರ್ಫಾನ್ ಖಾನ್ ಯೋಗಿ ಪಾತ್ರದಲ್ಲಿ ಅಭಿನಯಿಸಿದ್ದಾರೆ.. ಮೋಟಾರ್ ಮೌತ್ ಅಂತಾರಲ್ಲ ಹಾಗೆ ಚಟಪಟ ಮಾತುಗಳಲ್ಲಿ ಆರಂಭದಲ್ಲಿ ಕೊಂಚ ಬೋರ್ ಹೊಡೆಸಿದರೂ.. ಪ್ರೀತಿ ಎನ್ನುವ ನೈಜತೆಯ ಬಲೆಗೆ ಬಿದ್ದಾಗ ಗಂಭೀರವಾಗುವ ಅವರ ಸಹಜ ಅಭಿನಯ ಇಷ್ಟವಾಗುತ್ತದೆ.. 

ಕಾರಣ ಗೊತ್ತಿಲ್ಲ.. ನಾನು ಇರ್ಫಾನ್ ನ ಅಭಿಮಾನಿಯಲ್ಲ.. ಬಹುಶಃ ಆತನ ಚಿತ್ರಗಳನ್ನು ಹೆಚ್ಚು ಹೆಚ್ಚು ನೋಡದೆ ಇರೋದು ಆಗಿರಬಹುದು.. ಅಥವ ಕೊಂಚ ಪೂರ್ವಗ್ರಹ ಪೀಡಿತನಾಗಿ ಹೊಸತನದ ಚಿತ್ರಗಳನ್ನು ನೋಡದೆ ಇರಬಹುದು.. ಒಟ್ಟಿನಲ್ಲಿ ಅರ್ಜುನ ಮತ್ಸ್ಯ ಯಂತ್ರ ಭೇದಿಸುವಾಗ ಬರಿ ಮೀನಿನ ಕಣ್ಣು ಮಾತ್ರ ಕಾಣುವ ಹಾಗೆ. .. ಇಡೀ ಚಿತ್ರದಲ್ಲಿ ಪಾರ್ವತಿಯೇ ಕಾಣುತ್ತಾಳೆ.. 

ಆದರೆ ಕಡೆಯ ದೃಶ್ಯದಲ್ಲಿ ನೀರಿನ ಬಾಟಲ್ ತೋರಿಸಿ ಅವರು ಹೇಳುವ ಸಂಭಾಷಣೆಗೆ ಫಿದಾ ಆಗಿಬಿಟ್ಟೆ.. 

ಒಂದು ಸುಂದರ ಕತೆಯನ್ನು ಸುಂದರ ಸಿನಿಮಾ ಮಾಡಿ.. ಅದನ್ನು ಅದ್ಭುತ ಎನ್ನುವ ಹಂತಕ್ಕೆ ಕರೆದೊಯ್ದಿದ್ದು.. ..  ಬಿಡಪ್ಪ ನಿನ್ನ ಪಾರ್ವತಿಯೇ ಮುಖ್ಯ ಮಿಕ್ಕೆಲ್ಲರೂ ಇಲ್ಲಿ ಇಲ್ಲವೇ ಇಲ್ಲ.. ಈ ಚಿತ್ರದ ಹೆಸರು ಕರೀಬ್ ಕರೀಬ್ ಅಕೇಲಿ ಸಿನೆಮಾ ಕೋ ಜಾನ್ ದಿಯಾ ಹೈ ತುಮ್ಹಾರೀ ಪಾರ್ವತಿ ಎಂದಿತು ಮನಸ್ಸು.. 

ಹೌದು ಕನ್ಲಾ  ಸರಿಯಾಗಿ ಹೇಳಿದೆ ಅಂದೇ.. ಹೌದು ಕರೀಬ್ ಕರೀಬ್ ನಹಿ ಬಹುತ್ ಬಹುತ್ ಏ ಸಿನಿಮಾ ಪಾರ್ವತೀ ಕೋ ಜಾತಿ ಹೈ!

Monday, June 1, 2020

ಕರುಣೆ ಇದ್ದಾಗ ಕುಟುಂಬ ಎಂದಿಗೂ ಐಸಿರಿ ತುಂಬಿದ ಕುಟುಂಬ - ಕರುಣೆಯೇ ಕುಟುಂಬದ ಕಣ್ಣು (1962) (ಅಣ್ಣಾವ್ರ ಚಿತ್ರ ೩೦ / ೨೦೭)

ಅಣ್ಣ ಅಶ್ವಥ್ ಹೇಳಿದ್ದು ವಾಕ್ಯ.. ಅತ್ತಿಗೆ ಆದವಾನಿ ಲಕ್ಷ್ಮೀದೇವಿ ಹೇಳಿದ್ದು ವೇದವಾಕ್ಯ ಉದಯಕುಮಾರ್ ಪಾತ್ರಧಾರಿಗೆ.. ಅವರು ಹೇಳಿದ್ದನ್ನು ಚಾಚು ತಪ್ಪದೆ ಪಾಲಿಸುವ ತಮ್ಮ ಹೀಗೆ ಸುಂದರ ಕುಟುಂಬ ಹೇಗೆ ಅಸೂಯೆ, ಹೊಟ್ಟೆ ಉರಿಯಿಂದ ತೊಂದರೆಗೀಡಾಗುತ್ತದೆ.. ಎನ್ನುವ ಅಂಶ ಸೊಗಸಾಗಿ ಮೂಡಿಸಿದ್ದಾರೆ.

ಉದಯಕುಮಾರ್ ಮಡದಿಯ ಪಾತ್ರಧಾರಿ ಜಯಶ್ರೀ ಆ ಹೊಟ್ಟೆ ಉರಿ, ಅಸೂಯೆ ದೆಸೆಯಿಂದ ತನ್ನ ಮಗ ರಾಜ್ ಕುಮಾರನನ್ನು ಉಡಾಳನನ್ನಾಗಿ ಬೆಳೆಸುತ್ತಾರೆ.. ಕುಮಾರ ಪಾತ್ರದಲ್ಲಿ ರಾಜಕುಮಾರ್ ಅದ್ಭುತವಾಗಿ ನಟಿಸಿದ್ದಾರೆ. ಆತ ಬೆಳೆದ ಹಾಗೆ ದುಶ್ಚಟಗಳು ಬೆಳೆಯುತ್ತವೆ. ಆಕೆಯ ಮತ್ಸರಗುಣ ಈತನಿಗೂ ಬರುತ್ತದೆ,

ಮದುವೆಯಾದರೆ ಸರಿ ಹೋಗಬಹುದು ಎನ್ನುವ ಮಾತಿನಂತೆ ರಾಜ್ ಕುಮಾರನಿಗೆ ಲೀಲಾವತಿಯನ್ನು ಮದುವೆ ಮಾಡಿಸುತ್ತಾರೆ. ಆದರೆ ದುಶ್ಚಟಗಳಿಗೆ ದಾಸನಾಗಿರುವ ಈತ.. ತನ್ನ  ಗೆಳೆಯ ಬಾಲಕೃಷ್ಣ, ರಾಜ್ ಕುಮಾರನ  ಹಾದಿ ತಪ್ಪಿಸುವ ಪಾತ್ರದಲ್ಲಿ ಹುಡುಗಿಯ ಪರಿಚಯ ಮಾಡಿಕೊಡುತ್ತಾನೆ. ಜೊತೆಗೆ ಆಕೆಯನ್ನು ನಾಯಕಿಯನ್ನಾಗಿಯೂ, ರಾಜ್ ಕುಮಾರನನ್ನ ನಾಯಕನ್ನಾಗಿ ಚಿತ್ರ ಮಾಡುತ್ತೀನಿ ಅದಕ್ಕೆ  ಒಂದಷ್ಟು ಹಣ ಬೇಕು ಎಂದು ಪುಸಲಾಯಿಸುತ್ತಾನೆ.

ಮನೆಯಲ್ಲಿ ದುಡ್ಡು ಕೇಳಿದರೆ ಮಂಗಳಾರತಿಯಾಗುತ್ತದೆ ಎಂದು ತಿಳಿದು ಪತ್ನಿಯ ಸರವನ್ನು ಕದ್ದು, ಮಾರ್ವಾಡಿ ಅಂಗಡಿಯಲ್ಲಿ ಬಾಲಕೃಷ್ಣನ ಮೂಲಕ ಒತ್ತೆ ಇಟ್ಟು.. ಆ ದುಡ್ಡು ಅಶ್ವಥ್ ಅವರಿಗೆ ತುರ್ತು ಬೇಕಾಗಿದೆಯೆಂದು ನಂಬಿಸಿ, ದುಡ್ಡನ್ನು ಹೊತ್ತೊಯ್ಯುತ್ತಾರೆ..

ಈ ವಿಷಯ ಹೇಗೋ ಉದಯಕುಮಾರ್ ಅವರಿಗೆ ತಿಳಿದು, ಅಣ್ಣನ ಮೇಲೆ ಬೇಸರಗೊಂಡು, ಹೀಯಾಳಿಸಿ ಕಳಿಸುತ್ತಾರೆ.. ಅತ್ತಿಗೆ ಪಾತ್ರಧಾರಿ ಆದವಾನಿ ಲಕ್ಷ್ಮೀದೇವಿ ತನ್ನ ಮೈದುನ ಅಪರಂಜಿ ಎಂದೇ ಹೇಳಿ.. ಏನೋ ಕೆಟ್ಟ ಘಳಿಗೆ ಎಂದು ಸುಮ್ಮನಾಗುತ್ತಾಳೆ..

ಇತ್ತ ಕೆಟ್ಟ ಹಾದಿ ತುಳಿದಿದ್ದ ಮಗ.. ದುಡ್ಡು ಬೇಕು ಎಂದು ಮನೆಯಲ್ಲಿ ಪಾಲು ಕೇಳುವಂತೆ ತನ್ನ ಅಪ್ಪನನ್ನು ಪ್ರಚೋದಿಸಿ ಒಂದಾಗಿದ್ದ ಮನೆಯನ್ನು ಒಡೆಯುತ್ತಾನೆ.

ಆದರೆ ಆದವಾನಿ ಲಕ್ಷ್ಮೀದೇವಿ ತನ್ನ ಪತಿ ವಂಶದವರು ಬಾಳಿ ಬದುಕಿದ ಮನೆಯನ್ನು ಒಡೆಯಬಾರದು ಎಂದು ತಮ್ಮ ತೋಟದ ಮನೆಗೆ ಹೋಗುತ್ತಾರೆ.

ದುಶ್ಚಟ ಹೆಚ್ಚಾಗಿ, ಅದಕ್ಕೆ ದುಡ್ಡಿಲ್ಲದೆ ಹೋದಾಗ, ಬಾಲಕೃಷ್ಣ ತನ್ನ ಗೆಳೆಯನ ಕೈ ಬಿಡುತ್ತಾರೆ .. ಆ ಗುದ್ದಾಟದಲ್ಲಿ ಏಟಾಗಿ ಮನೆಗೆ ಬರುವ ಕುಮಾರ್, ಆರೋಗ್ಯ ಹದಗೆಟ್ಟು ಕಣ್ಣು ಹೋಗುತ್ತದೆ.

ಮೆಲ್ಲನೆ ತನ್ನ ತಪ್ಪಿನ ಅರಿವಾಗಿ ಮತ್ತೆ ಎಲ್ಲರನ್ನು ಒಂದುಗೂಡಿಸುವ ಪ್ರಯತ್ನಕ್ಕೆ ಸಹಕರಿಸುವುದು ಅಶ್ವಥ್ ಅವರ ಮಗ ರಾಜಾಶಂಕರ್.. ಕಡೆಗೆ ಎಲ್ಲವೂ ಸುಖಾಂತ್ಯವಾಗುತ್ತದೆ.. ಅಣ್ಣ ಅಶ್ವಥ್ ಮತ್ತು ಉದಯಕುಮಾರ್ ಅವರ ಸಂಸಾರ ಒಟ್ಟಿಗೆ ಬಾಳುತ್ತದೆ..

ಇಷ್ಟೆಲ್ಲಾ ಬವಣೆಗಳಿದ್ದರೂ ಎಲ್ಲವನ್ನು ಸಹಿಸಿಕೊಂಡು ಸಂಸಾರ ಮಾಡುವ ಆದವಾನಿ ಲಕ್ಷ್ಮೀದೇವಿ ಪಾತ್ರಕ್ಕೆ ಧರ್ಮದೇವತೆ ಎನ್ನುತ್ತಾರೆ.. ಅದೇ ಈ ಚಿತ್ರದ ತಳಹದಿ..

ಈ ಚಿತ್ರ ತುಂಬಾ ಸರಳವಾಗಿದೆ.. ಹಾಗಾಗಿ ಚಿತ್ರದ ಮೂಲ ಕತೆಯನ್ನು ಹೇಳಿ ನಂತರ ಚಿತ್ರದ ವಿಶೇಷವನ್ನು ಹೇಳುವ ಅಭಿಲಾಷೆ ನನ್ನದು.


ಕೆಲವು ಕರುಣಾರಸ ತುಂಬಿರುವ ಚಿತ್ರಗಳಲ್ಲಿ ಉದಾತ್ತ ಮನೋಭಾವ ತೋರಿಸುತ್ತಾ ಇರುವಂತೆ ಈ ಅತ್ತಿಗೆ ಪಾತ್ರವನ್ನು ಚಿತ್ರಿಸಿಲ್ಲ ಅದೇ ವಿಶೇಷತೆ ಈ ಚಿತ್ರದ್ದು.. ಎಲ್ಲಾ ಪಾತ್ರಗಳನ್ನು ನೈಜವಾಗಿಯೇ ಅಭಿನಯಿಸುವಂತೆ ನೋಡಿಕೊಂಡಿದ್ದಾರೆ ನಿರ್ದೇಶಕರು.

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗುತ್ತದೆಯೇ ಎನ್ನುವ ಸಾರಾಂಶದ ಮೇಲೆ ಈ ಕತೆ ನಿಂತಿದೆ..

 ಕನ್ನಡ ಚಲನ ಚಿತ್ರರಂಗದಲ್ಲಿ ಮೊದಲ ಬಾರಿಗೆ ಕಾದಂಬರಿಯನ್ನು ಆಧರಿಸಿದ ಚಿತ್ರವಿದು. ಶ್ರೀ ಕೃಷ್ಣಮೂರ್ತಿ ಪುರಾಣಿಕ್ ಅವರ ಧರ್ಮದೇವತೆ ಕಾದಂಬರಿಯನ್ನು ಆಧರಿಸಿ ಈ ಚಿತ್ರ ತಯಾರಿಸಲಾಗಿದೆ.




ಶೈಲಶ್ರೀ ಪ್ರೊಡಕ್ಷನ್ಸ್ ಅವರ ಮೊದಲ ಕಾಣಿಕೆಯಿದು. ಸಂಭಾಷಣೆ ಚಿ ಸದಾಶಿವಯ್ಯನವರು ರಚಿಸಿದ್ದ್ದಾರೆ. ಹಾಡುಗಳನ್ನು ಕಣಗಾಲ್ ಪ್ರಭಾಕರ್ ಶಾಸ್ತ್ರೀ ರಚಿಸಿದ್ದಾರೆ. ಸಂಗೀತ ಜಿ ಕೆ ವೆಂಕಟೇಶ್. ಬಿ ದೊರೈರಾಜ್ ಅವರ ಛಾಯಾಗ್ರಹಣ..  ಅವರ ಗೆಳೆಯ ಭಗವಾನ್  ಸಹ ನಿರ್ದೇಶಕರು

ಈ ಚಿತ್ರದ ಕ್ಯಾಪ್ಟನ್ ಟಿ ವಿ ಸಿಂಗ್ ಠಾಕೂರ್.

ರಾಜ್ ಕುಮಾರ್ ಪ್ರಪ್ರಪಥಮ ಬಾರಿಗೆ ತೆರೆಯ ಮೇಲೆ ಧೂಮಪಾನ ಮಾಡುವ ದೃಶ್ಯಗಳಿವೆ. ಸಿಗರೇಟ್ ಹಚ್ಚಿಕೊಳ್ಳುವುದು, ಹೊಗೆಬಿಡುವುದು, ಅದರ ಹಾವಭಾವ ಎಲ್ಲವನ್ನು ಎಷ್ಟು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ ... ರೋಷದಲ್ಲಿ ಕೂಗುವುದಾಗಲಿ, ಅಪ್ಪನನ್ನು ಹೀಯಾಳಿಸಿ ಮಾತಾಡುವುದು, ಅಮ್ಮನಿಗೆ ಟೋಪಿ ಹಾಕುವಂತಹ ಮರುಳು ಮಾತುಗಳು, ಬಾಲಣ್ಣನ ಜೊತೆ ತಮಾಷೆಯ ಮಾತುಗಾರಿಕೆ ಜೊತೆಯಲ್ಲಿಯೇ ಹಣಕಾಸಿನ ವಿಚಾರದಲ್ಲಿ ಲಘುವಾಗಿ ಮಾತಾಡುವ ಅಭಿನಯ.. ಒಂದು ಕಡೆಯಾದರೆ.. ಕಡೆಯಲ್ಲಿ ತನ್ನ ಅವಿವೇಕದ ವರ್ತನೆಯಿಂದ ಮನೆಯನ್ನು ಇಬ್ಭಾಗ ಮಾಡಿದ್ದಕ್ಕಾಗಿ, ತನ್ನ ತಪ್ಪು ನೆಡೆಗಳು ಮನೆಯನ್ನು, ಮನೆತನವನ್ನು ಹಾಳು ಮಾಡಲು ಕಾರಣವಾಗಿದ್ದು ತಾನೇ ಎಂದು ಹಲುಬುವುದು ಮತ್ತೆ  ಮಾಡಲು ಪಶ್ಚಾತಾಪ ಪಡುವ ಪಾತ್ರದಲ್ಲಿ ಅಕ್ಷರಶಃ ತುಂಬಿ ನಟಿಸಿದ್ದಾರೆ.





ಅಶ್ವಥ್ ಮತ್ತು ಆದವಾನಿ ಲಕ್ಷ್ಮೀದೇವಿ ತಾಳ್ಮೆ, ಪ್ರೀತಿ, ಮಮಕಾರಗಳ ಪ್ರತೀಕವಾಗಿ ನಟಿಸಿದ್ದಾರೆ.
ಉದಯಕುಮಾರ್ ಮತ್ತು ಜಯಶ್ರೀ ಅಸೂಯೆ, ಅನುಮಾನ ಉಳ್ಳ ದಂಪತಿಗಳಾಗಿ ಸೊಗಸಾದ ಅಭಿನಯ ನೀಡಿದ್ದಾರೆ.



ಸಮಯಮದ ಪಾತ್ರದಲ್ಲಿ ಲೀಲಾವತಿ, ರಾಜಾಶಂಕರ್, ಹರಿಣಿ ಮನಸೆಳೆಯುತ್ತಾರೆ.




ಮುದ್ದಾಗಿ ಕಾಣುವ ರಾಜಶ್ರೀ ಮತ್ತಿತರರು  ಅಭಿನಯ ನೀಡಿದ್ದಾರೆ

ಆರಂಭದ ಕೆಲವು ದೃಶ್ಯಗಳಲ್ಲಿ ಹಾಸ್ಯ ತುಂಬಿರುವ ನರಸಿಂಹರಾಜು ಮತ್ತು ಬಾಲಕೃಷ್ಣ ನಗುವನ್ನು ಅರಳಿಸುತ್ತಾರೆ. .



ಅತೀ  ಗಮನ ಸೆಳೆಯುವ ಸಂಭಾಷಣೆ ಎಂದರೆ..

ಯಾವ ಕತೆ.. ಹೇಗೆ ಕತೆ ಎಂಬ ನರಸಿಂಹರಾಜು ಅವರ ಪ್ರಶ್ನೆಗೆ ಬಾಲಣ್ಣ ಹೇಳುವ ಉತ್ತರ..

"ರಾಮ ಲಕ್ಷ್ಮಣ ಸೀತೆ ಅಂದರೆ ಪೌರಾಣಿಕ"
"ರಾಮ್ಯ, ಲಕ್ಯ, ಸೀತಮ್ಮ ಅಂದರೆ ಸಾಮಾಜಿಕ"
"ರಾಮ್ ಸಿಂಗ್, ಲಕ್ಷ್ಮಣ್ ಸಿಂಗ್, ಸೀತಾ ಭಾಯಿ ಅಂದರೆ ಐತಿಹಾಸಿಕ"
"ರಾಮ್ ಕಪಾಲಿ, ಲಕ್ಷ್ಮಣ್ ಚಂಡಿ, ಸೀತಾ ಮೋಹಿನಿ ಅಂದರೆ ಜಾನಪದ"

ಇಷ್ಟೇ ಕಣೋ ಎನ್ನುತ್ತಾ ಸಮಜಾಯಿಸಿ ನೀಡುವ ಈ ಸಂಭಾಷಣೆ ಬಲು ಇಷ್ಟ!

ಬಾಲಣ್ಣ ನಾನು ತೆಗೆಯುವ ಚಿತ್ರಗಳು  ವಾರಗಳು ಓಡುತ್ತವೆ ಕಣೋ ಎಂದಾಗ ನರಸಿಂಹರಾಜು
ಹೌದು ಶುಕ್ರವಾರ, ಶನಿವಾರ, ಭಾನುವಾರ ಓಡುತ್ತದೆ ಎನ್ನುತ್ತಾರೆ..

ತಿಳಿ ಹಾಸ್ಯಗಳು ಚಿತ್ರದ ಓಟಕ್ಕೆ ಸಾತ್ ನೀಡುತ್ತಿದ್ದವು..

ಸಾಂಸಾರಿಕ ಚಿತ್ರವಾದ ಕರುಣೆಯೇ ಕುಟುಂಬದ ಕಣ್ಣು ಚಿತ್ರ ಒಳಗಿನ ಕಣ್ಣನ್ನು ತೆರೆಯಲು ಸಹಾಯ ಮಾಡುತ್ತದೆ.

ಇನ್ನೊಂದು ಚಿತ್ರದ ಮೂಲಕ ಬರೋಣ ಮತ್ತೆ.. !