Saturday, June 27, 2020

ಎಲ್ಲರ ಆತ್ಮವೂ ಒಂದೇ ಎನ್ನುವ ಮಹಾತ್ಮ ಕಬೀರ್ (1962) (ಅಣ್ಣಾವ್ರ ಚಿತ್ರ ೩೧ / ೨೦೭)

ನಾ ನೋಡಿದ ಅನೇಕ ಚಿತ್ರಗಳು ಸದ್ದಿಲ್ಲದೇ ಮನಸ್ಸಿನ ಒಳಗೆ ಇಳಿದು, ತನ್ನೊಳಗೆ ಇರುವ ವಿಷಯಗಳನ್ನು ನಮ್ಮ ಮನದೊಳಗೆ ಮಂಥನ ಮಾಡಲು ಶುರು ಮಾಡುತ್ತವೆ..

ಗಿಡಕ್ಕೆ ನೀರು ಹಾಕಿದ ತಕ್ಷಣ ಹೂಗಳು ಅರಳುವುದಿಲ್ಲ.. ಬದಲಿಗೆ ಬೇರುಗಳು ಆ ಸತ್ವವನು ಹೀರಿ ಬೆಳೆದ ಮೇಲೆ ಹೂಗಳು ಅರಳುತ್ತದೆ..

 ಈ ಚಿತ್ರವೂ ಹಾಗೆ.. ಉದ್ದುದ್ದ ಪ್ರವಚನಗಳಿಲ್ಲದೆ, ಪಾಠವನ್ನು ಹೇಳದೆ ದೃಶ್ಯಗಳಲ್ಲಿಯೇ ಹೇಳಬೇಕಾದ್ದು ಹೇಳುತ್ತದೆ..

ಮಕ್ಕಳು ಜಗಳ ಮಾಡುತ್ತಿರುತ್ತದೆ.. ಈ ಸೂರ್ಯ ನನಗೆ ಈ ಸೂರ್ಯ ನನಗೆ .. ಆಗ ಕಬೀರರು ಅಲ್ಲಿ ಬಂದು ಮಕ್ಕಳಿಬ್ಬರಿಗೂ ಕನ್ನಡಿ  ತರಲು ಹೇಳಿ.. ತಂದ ಮೇಲೆ.. ಅದರಲ್ಲಿ ಸೂರ್ಯನ ಪ್ರತಿಬಿಂಬವನ್ನು ತೋರಿಸಿ.. ಇದು ನಿನ್ನ ಸೂರ್ಯ..ಅದು ಅವನ ಸೂರ್ಯ ಅಂತ ಹೇಳಿ ಸಮಾಧಾನ ಮಾಡುತ್ತಾರೆ..

ಪ್ರತಿಯೊಬ್ಬರಿಗೂ ಜ್ಞಾನವನ್ನು ಕಾಣುವ, ಆನಂದಿಸುವ ಅವಕಾಶವಿರುತ್ತದೆ ಅದಕ್ಕೆ ಬೇಕಾಗಿರೋದು ಪ್ರತಿಫಲನ ಮಾಡುವಂತಹ ಮನಸ್ಸು.. ಅದ್ಭುತ ವಿಚಾರವನ್ನು ಸರಳವಾಗಿ ಹೇಳಿದ್ದಾರೆ 


ಈ ಚಿತ್ರದಲ್ಲಿ ಮಹಿಮೆ, ಪವಾಡಗಳ ಬಗ್ಗೆ ಹೆಚ್ಚಿಗೆ ಹೇಳ ಹೋಗದೆ ಕಥೆಗೆ ಮಾತ್ರ ಒತ್ತುಕೊಟ್ಟು ಚಿತ್ರ ಮಾಡಿರೋದು ಗಮನ ಸೆಳೆಯುತ್ತದೆ..

ಸಿನಿಮಾ ಸರಳವಾಗಿದೆ.. ಹಾಡುಗಳಲ್ಲಿ ಬೇಕಾಗಿರುವ ತತ್ವವನ್ನು ತುಂಬಿದ್ದಾರೆ.. ಈ ಚಿತ್ರ ಎರಡೂ ಆಯಾಮದಲ್ಲಿ ನೆಡೆಯುತ್ತದೆ.. ಒಂದು  ಕಡೆ ಭಕ್ತಿ, ಧ್ಯಾನ, ಮೋಕ್ಷ ಎನ್ನುತ್ತಾ ಪಾತ್ರ ಕಬೀರನ ಪಾತ್ರದಲ್ಲಿ ರಾಜಕುಮಾರ್ .. ಇನ್ನೊಂದು ಕಡೆ ಜಾಗತಿಕ ಭಾವನೆಗಳನ್ನು ಮೈಗೂಡಿಸಿಕೊಂಡು ತನಗೆ ಸರಿ ಅನಿಸಿದಂತೆ ಬದುಕುವ ಬದರಿ ಪಾತ್ರದಲ್ಲಿ ಬಾಲಣ್ಣ  ಮತ್ತು ಬದರಿಯ ವ್ಯಕ್ತಿತ್ವಕ್ಕೆ ವಿರುದ್ಧವಾಗಿ ಭಕ್ತಿ,ಮಡಿ ಎನ್ನುವ ಆತನ ಮಡದಿ ಎಂ ಏನ್ ಲಕ್ಷ್ಮೀದೇವಿ ಅವರೆಡೂ ಆಯಾಮಗಳು ಚಿತ್ರದ ಕೊನೆಯಲ್ಲಿ ತಮ್ಮ ತಮ್ಮ ಹಾದಿಯಲ್ಲಿ ನೆಡೆದುಹೋಗುತ್ತಾರೆ..

ಕಬೀರನ ಆಶಯಗಳನ್ನು ಅನುಮಾನಾಸ್ಪದವಾಗಿ ನೋಡುವ ಅವನ ಹಳ್ಳಿಯವರು ರಾಜನಿಗೆ ದೂರುಕೊಟ್ಟು ಕಬೀರರ ಅಂತ್ಯಕ್ಕೆ ಕಾರಣವಾಗುತ್ತಾರೆ..


ಇತ್ತ ಬದರಿ ತನ್ನ ಯಜಮಾನನ ಸ್ತ್ರೀ ಲೋಲುಪತೆಯನ್ನು ಕಂಡು.. ಇದೆ ಊರಿನಲ್ಲಿ ಉಳಿಯುವುದು ತರವಲ್ಲ  ಎಂದು ತಿಳಿದು  ತಾನು ಕೆಲಸ ಮಾಡುತ್ತಿದ್ದ ಅಂಗಡಿಯಿಂದ ತನ್ನ ಬದುಕಿಗೆ ಬೇಕಾಗುವಷ್ಟು ಹೊನ್ನನ್ನು ತೆಗೆದುಕೊಂಡು ತನ್ನ ಮಡದಿಯನ್ನು ಕರೆದುಕೊಂಡು ಊರು ಬಿಡುತ್ತಾನೆ..

ಸರ್ವೋದಯಪಿ  ಚಿತ್ರದ ಲಾಂಛನದಲ್ಲಿ ಟಿ ಎನ್ ರೆಡ್ಡಿಯವರು ನಿರ್ಮಿಸಿ, ಪಿ ಶ್ರೀನಿವಾಸ್ ಕಥೆ ಚಿತ್ರಕಥೆ ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ವಿಶೇಷವಾಗಿ ಶ್ರೀಮತಿ ಎ ಅನುಸೂಯಾದೇವಿ ಸಂಗೀತ ಒದಗಿಸಿದ್ದಾರೆ.. ಮಗ್ಗದ  ಸದ್ದನ್ನು ಅನುಕರಿಸಿ ಮೂಡಿ ಬರುವ ಒಂದು ಹಾಡಿನ ಸಂಗೀತ ನನ್ನ ಮನಸೆಳೆಯಿತು.

ಸಂಭಾಷಣೆ, ಮತ್ತು ಹಾಡುಗಳನ್ನು ನರೇಂದ್ರ ಬಾಬು ಮತ್ತು ಚಿ ಸದಾಶಿವಯ್ಯ ರಚಿಸಿದ್ದಾರೆ.. ಛಾಯಾಗ್ರಹಣ ಕೆ ಜಾನಕಿರಾಂ ಅವರದ್ದು. ಅನೇಕ ಹಾಡುಗಳಿಗೆ ಅನೇಕ ಹಿನ್ನೆಲೆ ಗಾಯಕರು ಕೆಲಸ ಮಾಡಿದ್ದಾರೆ. ಘಂಟಸಾಲ, ಬಿ ಗೋಪಾಲ್, ನಾಗೇಂದ್ರ, ಎಸ್ ಜಾನಕಿ, ಸಿ ಎಸ್ ಸರೋಜಿನಿ, ಬೆಂಗಳೂರು ಲತಾ,  ಎ ರಾಮಚಂದ್ರರಾವ್, ಜಯದೇವ್, ಜೊತೆಯಲ್ಲಿ ಬಾಲಮುರುಳಿಕೃಷ್ಣ.

ರಾಜಕುಮಾರ್ ಕಬೀರರ ಪಾತ್ರದಲ್ಲಿ ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ. ಇಸ್ಲಾಮ್ ಧರ್ಮದ ಉಡುಗೆಯನ್ನು, ಮೇಕಪ್ ಅದೇ ರೀತಿಯಲ್ಲಿ ಮಾಡಿದ್ದಾರೆ.. ಸ್ವಲ್ಪ ಕೂಡುವಂತೆ ಇರುವ ಹುಬ್ಬು, ತಲೆಗೂದಲನ್ನು ಬಾಚಿದಂತೆ ಇರುವ ಕೇಶ ವಿನ್ಯಾಸ, ಮೀಸೆ ಗಡ್ಡ..ವಿಶಿಷ್ಟವಾಗಿ ಕಾಣುತ್ತಾರೆ.


ಸಂಭಾಷಣೆಯನ್ನು ಅದಕ್ಕೆ ಬೇಕಿರುವ ಭಾವತುಂಬಿ ನಟಿಸಿದ್ದಾರೆ.. ಈ ಚಿತ್ರ ಚಿತ್ರಕತೆಯ ಮೇಲೆ ನಿಂತಿರುವುದರಿಂದ ತಮ್ಮ ಅಭಿನಯ ಸಾಮರ್ಥ್ಯವನ್ನು ಕೊಂಚ ಕುಗ್ಗಿಸಿಕೊಂಡಂತೆ ಕಂಡರೂ, ಅವರಿರುವ ದೃಶ್ಯಗಳಲ್ಲಿ ಅವರೇ ಎದ್ದು ಕಾಣುತ್ತಾರೆ..


ಮನದಾಳದ  ಭಾವವನ್ನು ವ್ಯಕ್ತಪಡಿಸುವ ರೀತಿ ಇಷ್ಟವಾಗುತ್ತದೆ.

ಪುಟ್ಟ ಪಾತ್ರದಲ್ಲಿ ನಾಯಕಿಯಾಗಿ ಕೃಷ್ಣಕುಮಾರಿ ಮುದ್ದಾಗಿ ಕಾಣುತ್ತಾರೆ..


ಅಂಗಡಿಯ ಸಾಹುಕಾರನಾಗಿ ಉದಯಕುಮಾರ್ ಚಂದವಾಗಿ ಕಾಣುತ್ತಾರೆ ಮತ್ತು ಅವರಿರುವ ದೃಶ್ಯಗಳಲ್ಲಿ  ಗಮನಸೆಳೆಯುತ್ತಾರೆ.. ತನ್ನ ತಪ್ಪನ್ನು ಒಪ್ಪಿಕೊಂಡು ಹಲುಬುತ್ತಾ ಶರಣಾಗುವ ದೃಶ್ಯ ಇಷ್ಟವಾಗುತ್ತದೆ.





ಗಂಭೀರವಾದ ಈ ಚಿತ್ರದಲ್ಲಿ ಹಾಸ್ಯ ದೃಶ್ಯಗಳು ಕಡಿಮೆ ಇದ್ದರೂ, ಬಾಲಕೃಷ್ಣ ಮತ್ತು ಎಂ ಎನ್ ಲಕ್ಷ್ಮೀದೇವಿ ಆ ಕೊರತೆಯನ್ನು ನಿಭಾಯಿಸಿದ್ದಾರೆ.





ಸದಾ ಪೂಜೆ, ಮಡಿ, ಆಚಾರ ವಿಚಾರ ಎನ್ನುವ ಲಕ್ಷೀದೇವಿ  ದೇವರಿಗೆ ಪೂಜೆ ಮಾಡುತ್ತಲೇ ಗಂಡನಿಗೆ ಸಹಸ್ರನಾಮ ಮಾಡುವುದು.. ಅವನನ್ನು ನಿದ್ದೆಯಿಂದ ಎಬ್ಬಿಸಲು ಮಾಡಿಕೋಲಿನಿಂದ ತಿವಿಯುವುದು, ಮತ್ತೆ ಸಾಹುಕಾರರು ಬಂದಿದ್ದಾರೆ ಎಂದು ಗಂಡನಿಗೆ ಸುಳ್ಳು ಹೇಳಿದಾಗ ಗಾಬರಿಯಿಂದ ಗಂಡ ಅಂದರೆ ಬಾಲಣ್ಣ ನಿದ್ದೆಯಿಂದ ಎದ್ದು ಗಾಬರಿಯಿಂದ ಹೊರಗೆ ಬಂದಾಗ ನೆಡಯುವ ಮಾತುಗಳು ಇಷ್ಟವಾಗುತ್ತವೆ..

"ಏ .. ಎಲ್ಲೇ ಸಾಹುಕಾರ ಬಂದಿದ್ದಾರೆ ಅಂತ ಸುಳ್ಳು ಯಾಕೆ ಹೇಳಿದೆ"

"ಬಿಸಿಲು ನೆತ್ತಿ ಮೇಲೆ ಬಂದರೂ ಇನ್ನೂ ಏಳಲಿಲ್ಲ ಅದಕ್ಕೆ.. ಸಾಹುಕಾರನ ಹೆಸರು ಕೇಳಿದರೆ ಯಾಕ್ರೀ ಗಾಬರಿ... ಏನಾದರೂ ಅಂಗಡಿ ಲೆಕ್ಕದಲ್ಲಿ .. "

"ಏ ನನ್ನ ಲೆಕ್ಕ ಕನ್ನಡಿ ಕನ್ನಡಿ ಕಣೆ.. " ಅಂತ ಹೇಳುವ ಈ ಸಂಭಾಷಣೆ.. ಅವರು ಊರು ಬಿಡುವಾಗ ಹೇಳುವ ಸಂಭಾಷಣೆಗೆ ತಾಳೆ ಹಾಕಿ ನೋಡಿದರೆ ಈ ಪಾತ್ರದ ಬಗ್ಗೆ ತಿಳಿಯುತ್ತೆ.

"ಮತ್ಯಾಕೆ ಸಾಹುಕಾರರ ಹೆಸರು ಕೇಳಿದರೆ ಗಾಬರಿ" ಅಂತ ಹೆಂಡತಿ ಕೇಳಿದಾಗ ಬಾಲಣ್ಣ ರಾಗವಾಗಿ ಹೇಳುವ ಶೈಲಿ ಸಕತ್ ಇಷ್ಟವಾಗುತ್ತದೆ

"ಮಡಿ ಮಡಿ ಅಂತ ದಿನಕ್ಕೆ ಮೂರಾವರ್ತಿ ನೀರಲ್ಲಿ ಮುಳುಗೋಳು ನೀನು.. ನಮ್ಮ ಸಾಹುಕಾರ ಮೂರು ತಿಂಗಳಿಗೆ ಒಂದಾವರ್ತಿ ಮೈ ತೊಳೆಯೋನು.. ಅಂಥವನು ಈ  ಮನೆ ಒಳಗೆ ಕಾಲಿಟ್ಟರೆ ನಿನ್ನ ಮಡಿ ಭೂಮಿಯೊಳಗೆ ಮೂರು ಅಡಿ ಒಳಗೆ ಹೋಗುತ್ತೆ ಅಂತ ಎದ್ದೆ.. "

ಹೀಗೆ ಮಡಿ ಮಡಿ ಎನ್ನುವ ಹೆಂಡತಿಗೆ ಹೇಳುವ ಮಾತು
"ಎಂಜಲು ಮೈಲಿಗೆಯಲ್ಲಿ ಇರೋದು ಕಣೆ ಮಕ್ಕಳು ಮರಿ ವಿಷಯ" ಗಹನವಾದ ವಿಚಾರವನ್ನು ಸರಳವಾಗಿ ಸಂಭಾಷಣೆಗೆ ಇಳಿಸಿರುವ ಸಂಭಾಷಣಕಾರರು ಗಮನ ಸೆಳೆದರೆ  ಅದ್ಭುತವಾಗಿ ಹೇಳಿರುವ ಬಾಲಣ್ಣ ಇಷ್ಟವಾಗುತ್ತಾರೆ..

ನಿದ್ದೆಯಿಂದ ಎದ್ದ ಬಾಲಣ್ಣ ಜೋರಾಗಿ ಆಕಳಿಸಿದಾಗ "ರೀ ಆಕಳಿಸಬೇಡಿ ಮೈಲಿಗೆ ಗಾಳಿ ಬಿಡಬೇಡಿ.. ಮಡಿಲಿದ್ದೀನಿ" ಎಂದಾಗ

ಮತ್ತೊಮ್ಮೆ ಬಾಲಣ್ಣ

"ಏನು ಸುಡುಗಾಡು ಮಡಿನೋ.. ಹಂಡೆ ಹಂಡೆ ನೀರನ್ನು ಮೈ ಮೇಲೆ  ಸುರಿದುಕೊಂಡು ಮಡಿ ಮಡಿ ಅಂತೀಯಾ
ಪಕ್ಕದ ಮನೆಯವಳು ಸೀರೆ ತಂದಳು ಅಂತ ನನ್ನ ಮೇಲೆ ಗೊಣಗ್ತಾ ಇರ್ತೀಯ
ದೇವರ ಪೂಜೆ ಅಂತ ಮಾಡ್ತಾ ಇರ್ತೀಯ..ದೊಣ್ಣೆ ಮೆಣಸಿನಕಾಯಿ ಪಚ್ಡಿ ನಾ ನೆನೆಸ್ಕೊತಾ ಇರ್ತೀಯ...

ಇವತ್ತು ಸ್ನಾನನೂ ಮಾಡೋಲ್ಲ.. ಹಲ್ಲು ಉಜ್ಜೋಲ್ಲ .. ಹಂಗೆ ದೋಸೆ ತಿಂತೀನಿ ಹೋಗಿ ತಗೊಂಡು ಬಾ ಅಂತ ಚಾಪೆ  ಹಾಸಿಕೊಂಡು ಕೂತು .. "ನಿನ್ನ ಹಾಳ್ ಮಡಿ ಎಕ್ಕುಟ್ಟೋಗ " ಅಂತ ಬಯ್ತಾರೆ...

ಆಗ ಆತನ ಹೆಂಡತಿ ಒಂದು ಬಿಂದಿಗೆ ನೀರು ತಂದು ಅವನ ತಲೆಯ ಮೇಲೆ ಸುರಿಯುತ್ತಾಳೆ.. ಉತ್ತಮ ಹಾಸ್ಯ ದೃಶ್ಯವಿದು ಈ ಚಿತ್ರದಲ್ಲಿ.

ಕೆಲವು ದೃಶ್ಯಗಳು ಪರಿಣಾಮಕಾರಿಯಾಗಿದೆ

ಗುರುವಿನ ಹುಡುಕಾಟದಲ್ಲಿ .. ರಾಮಾನಂದರ ಬಳಿ ಹೋಗಿ ಕೇಳಿದಾಗ ಕೆಲವು ಕಾರಣಗಳಿಂದಾಗಿ ಶಿಷ್ಯನನ್ನಾಗಿ ಸ್ವೀಕರಿಸಲು ಸಾಧ್ಯವಿಲ್ಲ ಅಂತ ಗುರು ಹೇಳುತ್ತಾರೆ.. ಆಗ ಕಬೀರರು ಗುರುಗಳು ಸ್ನಾನ ಮಾಡಿ ಬರುವ ಹಾದಿಯಲ್ಲಿ ಮಲಗಿ ಅವರ ಪಾದದೂಳಿಯನ್ನು ಕಣ್ಣಿಗೆ ಒತ್ತಿಕೊಂಡು ಶಿಷ್ಯನಾಗಿದ್ದೇನೆ ಎಂದು ಹೇಳುವುದು..


ಅವನ ಹಳ್ಳಿಯವರು ಅಪ ಪ್ರಚಾರ ಮಾಡುತ್ತಿದ್ದಾನೆ ಎಂದು ಅನುಮಾನಿಸಿ ಕಬೀರರಿಗೆ ಹೊಡೆದಾಗ ರಕ್ತ ಬರುತ್ತದೆ .. ಆಗ ಶ್ರೀ ರಾಮನ ಮೂರ್ತಿಯ ಹಣೆಯಿಂದ ರಕ್ತ ಜಿನುಗುತ್ತದೆ.









 ಕಬೀರನ ತಾಯಿಯಾಗಿ ಜಯಶ್ರೀ ಇದ್ದಾರೆ.. ಆಕೆಯ ನೆರೆಹೊರೆಯ ಗೆಳತಿಯಾಗಿ ಪಾಪಮ್ಮ ಅಭಿನಯಿಸಿದ್ದಾರೆ..



ವಿಶೇಷವೆಂದರೆ ತೆಲುಗು ನಟ ಶೋಭನ್ ಬಾಬು ಅವರ ಒಂದೇ ಒಂದು ಕನ್ನಡ ಚಿತ್ರವಾಗಿ ಮಹತ್ಮಾ ಕಬೀರ್ ದಾಖಲಾಗಿರುವುದು .. ಶ್ರೀ ರಾಮನ ಪಾತ್ರದಲ್ಲಿ ಒಂದೆರಡು ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಾರೆ..



ಒಂದು ಉತ್ತಮ ಸಂದೇಶವಿರುವ ಚಿತ್ರದಲ್ಲಿ ಕಬೀರರ ಜನ್ಮ ತಳೆದ ಬಗೆಯನ್ನು ಒಂದು ಫಲಕದಲ್ಲಿ ಪುಟ್ಟ ಘಟನೆಯನ್ನು ತೋರಿಸುತ್ತಾರೆ..



ಸರಳ ಚಿತ್ರ. ಉತ್ತಮ ಪರಿಶ್ರಮದಿಂದಾಗಿ ರಾಜ್ ಕುಮಾರರ ೩೧ ನೇ ಚಿತ್ರವಾಗಿ ದಾಖಲಾಗುತ್ತದೆ..

ಮತ್ತೊಂದು ಚಿತ್ರದೊಂದಿಗೆ ಸಿಗೋಣ್ವಾ.. !

No comments:

Post a Comment