ಬದುಕು ಜಟಕಾಬಂಡಿ ವಿಧಿ ಅದರ ಸಾಹೇಬ ಅಂತ ಡಿವಿಜಿ ಅಜ್ಜ ಶತಮಾನಗಳ ಹಿಂದೆ ತಮ್ಮ ಮಂಕುತಿಮ್ಮನ ಕಗ್ಗದ ಸರಣಿಯೊಂದರಲ್ಲಿ ಹೇಳಿದ್ದರು.
ವಿಧಿಲಿಖಿತದ ಮುಂದೆ ಬೇರೇನೂ ನೆಡೆಯದು ಎನ್ನುವ ತಳಹದಿಯೊಂದಿರುವ ಚಿತ್ರವಿದು.. ವಿಶೇಷ ಎಂದರೆ.. ಆ ವಿಚಾರವನ್ನು ಮುಂದಿಟ್ಟುಕೊಂಡು.. ಅದರಿಂದ ಕೊಂಚವೂ ಆಚೀಚೆ ಹೋಗದೆ ಚಿತ್ರವನ್ನು ನಿರೂಪಿಸಿರುವುದು.. ಪ್ರತಿದೃಶ್ಯವೂ, ಪ್ರತಿ ಮಾತು, ಪ್ರತಿ ಹಾಡು ಹಾಕಿಕೊಂಡಿರುವ ಚೌಕಟ್ಟನ್ನು ದಾಟದೆ ಇರೋದು.
ರಾಜನಿಗೆ ಬೆಳಗಿನ ಜಾವ ಸ್ವಪ್ನದ ಅನುಭವವಾಗುತ್ತದೆ.. ಕಾಡಿನಲ್ಲಿ ಬೇಟೆಗೆ ಹೋದವನಿಗೆ ಹುಲಿ ಹೆದರಿಸುತ್ತದೆ.. ಅದನ್ನು ಸಾವರಿಸಿಕೊಂಡು ಮುಂದೆ ನೆಡೆದಾಗ.. ಒಂದು ಹಾವು ಕಾಣುತ್ತದೆ.. ದಾರಿ ಹೋಕನನ್ನು ಕಚ್ಚಿಕೊಂದ ಹಾವು ಹೆಣ್ಣಾಗಿ ಮಾರ್ಪಾಡಾಗುತ್ತದೆ.. ಅಚ್ಚರಿಯಿಂದ ಈ ವಿದ್ಯಮಾನಗಳನ್ನು ರಾಜ ಮರೆಯಿಂದ ನೋಡುತ್ತಿರುತ್ತಾನೆ..
ಅದೇ ದಾರಿಯಲ್ಲಿ ಇಬ್ಬರು ವಯಸ್ಕರು ಈ ಹೆಣ್ಣಿನ ವಯ್ಯಾರವನ್ನು ಕಂಡು.. ಇಬ್ಬರೂ ಮೋಹಿಸುತ್ತಾರೆ.. ಅವರಿಬ್ಬರಲ್ಲಿಯೇ ಜಗಳ ಶುರುವಾಗಿ ಹೊಡೆದಾಡಿ ಇಬ್ಬರೂ ಸಾಯುತ್ತಾರೆ..
ಅದನ್ನು ಕಂಡ ಆ ಹೆಣ್ಣು ಪಕ ಪಕ ನಗುವುದನ್ನು ಕಂಡು ರಾಜ ಕುಪಿತನಾಗಿ ಆ ಹೆಣ್ಣು ಮಾತಾಡಿಸಿ ಬಯ್ಯುತ್ತಾನೆ.. ಆಗ ಆ ಹೆಣ್ಣು ತಾನು ವಿಧಿಯೆಂದು.. ತಾನು ಎಣಿಸಿದ ಹಾಗೆ ಭುವಿಯಲ್ಲಿ ಘಟನೆಗಳು ನೆಡೆಯುವುದು ಎನ್ನುತ್ತಾಳೆ...
ಕೆಟ್ಟ ಕುತೂಹಲದಿಂದ ವಿವರ ಕೇಳುತ್ತಾ, ಸವಾಲು ಹಾಕುತ್ತಾನೆ.. ಮತ್ತೆ ತನ್ನ ಮರಣದ ಬಗ್ಗೆ ಕೇಳುತ್ತಾನೆ.. ಆಗ ವಿಧಿ ಹೇಳುತ್ತದೆ.. ನೀ ಅತಿಯಾಗಿ ಪ್ರೀತಿಸುವ ನಿನ್ನ ಮಗಳ ಮಗನಿಂದ ಅಂದರೆ ನಿನ್ನ ಮೊಮ್ಮಗನಿಂದಲೇ ನಿನ್ನ ಸಾವು ಎಂದು ಹೇಳಿ ವಿಧಿ ಮಾಯವಾಗುತ್ತದೆ..
ಇದನ್ನೇ ಸವಾಲಾಗಿ ತೆಗೆದುಕೊಂಡು, ತನ್ನ ಮಗಳ ಮದುವೆಯ ಬಗ್ಗೆ ಯೋಚಿಸುವ ಮೊದಲೇ, ತನ್ನ ಮಗಳು ತನ್ನ ಸೇನಾಧಿಪತಿಯ ಮಗನೊಡನೆ ಪ್ರೀತಿಯ ಮಾಯೆಗೆ ಬಿದ್ದಿರುವ ವಿಚಾರ ತಿಳಿಯುತ್ತದೆ..
ಅದನ್ನು ತಪ್ಪಿಸಲು ಏನೇ ಮಾಡಿದರೂ ಅದು ಫಲಕಾರಿಯಾಗದೆ, ರಾಜ ಆ ಯುವಕನಿಗೆ ಕಠಿಣವಾದ ಎರಡು ಪರೀಕ್ಷೆಗಳನ್ನು ಒಡ್ಡಿ, ಅದರಲ್ಲಿ ಯಶಸ್ವಿಯಾದರೆ ತನ್ನ ಮಗಳನ್ನು ಕೊಡುವುದಾಗಿ ಹೇಳುತ್ತಾನೆ..
ಮೊದಲನೆಯದು ಕಲ್ಲಿನ ಗೊಂಬೆ ಕುಣಿಯಬೇಕು.. ಕಲ್ಲು ಗುಂಡು ಕರಗಬೇಕು..
ಆಗ ಆ ಯುವಕನಿಗೆ ಯೋಗಿಯ ಕೃಪಾಕಟಾಕ್ಷವಾಗಿ ಆ ಪರೀಕ್ಷೆಯಲ್ಲಿ ಗೆಲ್ಲುತ್ತಾನೆ..
ಎರಡನೆಯ ಪರೀಕ್ಷೆಯಲ್ಲಿ ಮಾಯಾವಿಯ ತಲೆ ತರಬೇಕೆಂಬುದು..
ಅದಕ್ಕಾಗಿ ರಾಜ್ಯ ಬಿಟ್ಟು ಹೊರಟಾಗ.. ಇತ್ತ ರಾಜನ ಮಗಳು ಮಾಲತಿ ದೇವಿಯನ್ನು ಬೇಡಿಕೊಳ್ಳಲು, ಆಕೆ, ಮೋಹಿನಿ ರಾಜ್ಯದಲ್ಲಿರುವ ಮೋಹಿನಿಯ ಬಳಿ ಕತ್ತಿ ಗುರಾಣಿ ತೆಗೆದುಕೊಂಡರೆ ಕಾರ್ಯ ಯಶಸ್ವಿಯಾಗುತ್ತದೆ ಎಂದು ಹೇಳುತ್ತಾರೆ..
ಅದನ್ನು ಹೇಗೋ ಆ ಯುವಕ ಮಾಧವನಿಗೆ ತಲುಪಿಸುವ ಮೊದಲು.. .. ರಾಜನಿಗೆ ತನ್ನ ಮಗಳು ಗರ್ಭಿಣಿಯಾಗಿರುವ ವಿಚಾರ ತಿಳಿಯುತ್ತದೆ.. ಮದುವೆಯಾಗದೆ ತಾಯಿಯಾಗುತ್ತಿರುವ ವಿಷಯ ತಿಳಿದು ಅವಮಾನವಾಗುತ್ತದೆ ಎಂದು ಕಾರಗೃಹ ಬಂಧನದಲ್ಲಿಡುತ್ತಾನೆ.. ಜನಿಸಿದ ಮಗುವನ್ನು ಕಾಡು ಪಾಲು ಮಾಡುತ್ತಾನೆ..
ಇತ್ತ ಮಾಧವ ತನ್ನ ಶಕಿಯುಕ್ತಿಯಿಂದ ಕತ್ತಿ ಗುರಾಣಿ ತೆಗೆದುಕೊಂಡು ಮಾಯಾವಿಯ ತಲೆ ಕಡಿದು ಹಾಕುತ್ತಾನೆ..
ಹಾದಿಯಲ್ಲಿ ಸಿಕ್ಕಿದ್ದ ಮಗುವನ್ನು ಪಕ್ಕದ ಊರಿನವ ತೆಗೆದುಕೊಂಡು ಹೋಗಿ ಸಾಕುತ್ತಾನೆ..
ಉಳಿದ ದೃಶ್ಯಗಳಲ್ಲಿ ಚಿತ್ರ ಅಂತಿಮ ಹಂತಕ್ಕೆ ಬಂದು ರಾಜ ತನ್ನ ಮಗಳು ಮತ್ತು ಅಳಿಯನನ್ನು ಕೊಳ್ಳಲು ಪ್ರಯತ್ನ ಪಟ್ಟಾಗ.. ಅದು ಫಲಕಾರಿಯಾಗೋಲ್ಲ.. ಕತೆ ಮುಂದುವರಿದು, ಸಾಕಿದ ಮಗು ಬೆಟ್ಟದ ತುದಿಯಲ್ಲಿ ಕಟುಕರ ಕೈಯಲ್ಲಿ ಕೊಲ್ಲಬೇಕೆಂಬ ಗಡಿಬಿಡಿಯಲ್ಲಿ, ,, ಅದು ತನ್ನದೇ ಮೊಮ್ಮಗು ಎಂದು ಅರಿಯದ ರಾಜ.. ಅದನ್ನು ಕಾಪಾಡಲು ಹೋಗಿ ಬೆಟ್ಟದ ಮೇಲಿಂದ ಬಿದ್ದು ಪ್ರಾಣ ಹೋಗುವ ಸ್ಥಿತಿಗೆ ಬರುತ್ತಾನೆ.. ಆಗ ವಿಧಿಯು ಪ್ರತ್ಯಕ್ಷವಾಗಿ ತಾನೇ ಗೆದ್ದೇ ಎಂದು ಹೇಳುತ್ತದೆ.. ಮಾಧವ ತನ್ನ ಮಗು ಹಾಗು ಮಡದಿಯೊಡನೆ ತನ್ನ ರಾಜ್ಯಕ್ಕೆ ಹೋಗುತ್ತಾನೆ..
ಇಡೀ ಚಿತ್ರ ಬೋರ್ ಆಗದಂತೆ ಚಿತ್ರಿಸಿದ್ದಾರೆ ಮತ್ತು ಕತೆಯಿಂದ ಅರೆ ಕ್ಷಣವೂ ಆಚೆಗೆ ಹೋಗೋದಿಲ್ಲ..
ಮಾಧವನಾಗಿ ರಾಜ್ ಕುಮಾರ್ ಲೀಲಾಜಾಲವಾಗಿ ಅಭಿನಯಿಸಿದ್ದಾರೆ.. ಆ ಪೋಷಾಕುಗಳಲ್ಲಿ, ಹಾಡುಗಳಲ್ಲಿ, ಕತ್ತಿ ವರಸೆಗಳಲ್ಲಿ, ಹೊಡೆದಾಟಗಳಲ್ಲಿ ಹಾಗೆ ಮೋಹಿನಿ ರಾಜ್ಯದಲ್ಲಿ ಅವರ ಅಭಿನಯ ಸೊಗಸಾಗಿದೆ..
ತಮಗೆ ಒದಗಿಬಂದ ಪಾತ್ರವನ್ನು ಅಚ್ಚುಕಟ್ಟಾಗಿ ಅಭಿನಯಿಸೋದು ಕರತಲಮಲಕವಾಗುತ್ತಿರುವುದು ಗೊತ್ತಾಗುತ್ತದೆ.. ದೃಶ್ಯ ಏನು ಅಂತ ಹೇಳಿದರೆ ಅದಕ್ಕೆ ಬೇಕಾಗಿರುವ ಆಂಗೀಕ ಅಭಿನಯ, ಮುಖಭಾವ, ಸಂಭಾಷಣೆ ಹೇಳುವ ಶೈಲಿ ಇಷ್ಟವಾಗುತ್ತದೆ..
ನಾಯಕಿಯಾಗಿ ಲೀಲಾವತಿ ಮಾಲತಿ ಪಾತ್ರದಲ್ಲಿ ಸೊಗಸಾದ ಅಭಿನಯ
ನಾಯಕನ ಗೆಳೆಯನ ಪಾತ್ರದಲ್ಲಿ ನರಸಿಂಹರಾಜು ಇಷ್ಟವಾಗುತ್ತಾರೆ.. ಇಬ್ಬರು ಬಜಾರಿ ಪಾತ್ರಗಳು
ಎಂ ಎನ್ ಲಕ್ಷ್ಮೀದೇವಿ ಮತ್ತು ಜಯ ಅವರ ನಡುವೆ ಹೆಣಗಾಡುವ ಪಾತ್ರದಲ್ಲಿ ಮಿಂಚಿದ್ದಾರೆ.
ಖಾಯಂ ಮೋಹಿನಿ ಪಾತ್ರಗಳಾಗುವತ್ತ ಹೆಜ್ಜೆ ಹಾಕುತ್ತಿರುವ ಹರಿಣಿ ಮುದ್ದಾಗಿ ಕಾಣುತ್ತಾರೆ
ರಾಜನ ಪಾತ್ರದಲ್ಲಿ ಅಶ್ವಥ್ ಗಮನ ಸೆಳೆಯುವ ಅಭಿನಯ.. ರಾಜನ ದರ್ಪ, ಅಹಂ, ಸಿಟ್ಟು, ಸೇಡಿನ ಮುಖಭಾವ.. ತಪ್ಪು ಒಪ್ಪಿಕೊಳ್ಳುವ ಅಭಿನಯ ಸೊಗಸಾಗಿದೆ..
ಸಣ್ಣ ಪಾತ್ರದಲ್ಲಿ ಉದಯಕುಮಾರ್ ಮನಸೆಳೆಯುತ್ತಾರೆ..
ನನ್ನ ಗಮನಕ್ಕೆ ಬಂದಿದ್ದು ಚಿತ್ರದ ಉತ್ತರಾರ್ಧದಲ್ಲಿ ಲೀಲಾವತಿ ಅವರ ಪಾತ್ರಕ್ಕೆ ಜಯಶ್ರೀ ಕಂಠದಾನ ಮಾಡಿದ್ದಾರೇನೋ ಅನಿಸುತ್ತದೆ. ಆದರೆ ಅದಕ್ಕೆ ಎಲ್ಲೂ ವಿವರಗಳು ಸಿಗುವುದಿಲ್ಲ..
ಮುರುಗನ್ ಪ್ರೊಡಕ್ಷನ್ ಲಾಂಛನದಲ್ಲಿ ಎನ್ ಎನ್ ಮುರುಗನ್ ನಿರ್ಮಿಸಿರುವ ಈ ಚಿತ್ರವನ್ನು ಎಸ್ ವಿ ಮಹೇಶ್ ನಿರ್ದೇಶಿಸಿದ್ದಾರೆ. ಕತೆ ಸಂಭಾಷಣೆ ಹಾಡುಗಳನ್ನು ಎಚ್ ಎಲ್ ನಾರಾಯಣರಾವ್ ರಚಿಸಿದ್ದಾರೆ, ಹಿನ್ನೆಲೆ ಗಾಯಕರ ದಂಡೇ ಇದೆ ಈ ಚಿತ್ರದಲ್ಲಿ. ಪಿ ಬಿ ಶ್ರೀನಿವಾಸ್, ಎಸ್ ಜಾನಕಿ, ಕೆ ಜಮುನಾರಾಣಿ, ನಾಗೇಂದ್ರಪ್ಪ, ಸರೋಜಿನಿ ಇದ್ದಾರೆ. ಚಿತ್ರಕ್ಕೆ ಟಿ ಪದ್ಮನ್ ಸಂಗೀತವಿದೆ. ಛಾಯಾಗ್ರಹಣ ಎಸ್ ಕೆ ವರದರಾಜ್ ಹಾಗೂ ಕೆ ಗೋವಿಂದಸ್ವಾಮಿ.
ಒಂದು ಸುಂದರ ಚಿತ್ರವಿದು..
ಮತ್ತೊಂದು ಚಿತ್ರದ ಜೊತೆಯಲ್ಲಿ ಸಿಗೋಣ. !
waaah ! superb write up sri !! idee chitra kanna munde banda haage aitu ! keep writing !
ReplyDeleteDhanyavaadagalu Gurugale...
Delete