Thursday, July 30, 2020

ಬೆನ್ನಲ್ಲಿ ಬಿದ್ದವರನ್ನು ಕಾಪಾಡುವ ರತ್ನವೇ ಕನ್ಯಾರತ್ನ (1963) (ಅಣ್ಣಾವ್ರ ಚಿತ್ರ ೩೭ / ೨೦೭)

ರಾಜ್ ಕುಮಾರ್ ಅವರಿಗೆ ಸಿಗುತ್ತಿದ್ದ ಚಿತ್ರಗಳು, ಪಾತ್ರ ಪೋಷಣೆ, ಅವರ ಅಭಿನಯ ನೋಡಿದಾಗ ಬೆರಗಾಗುತ್ತದೆ.. ಹಲವಾರು ಛಾಯೆಯೊಂದಿದ್ದ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾ, ತಮ್ಮ ಅಭಿನಯದ ಬಗ್ಗೆ ಮಾತ್ರ ಗಮನ ಕೊಟ್ಟು ಮುಂದುವರೆಯುತಿದ್ದ ಅವರ ಪ್ರತಿಭೆಗೆ ನಿಧಾನವಾಗಿ ಸಾಣೆ ಹಿಡಿಯುತ್ತಾ ಸಾಗುತ್ತಿತ್ತು ಚಿತ್ರಗಳ ಸರಣಿಗಳು.

ಅಂತಹ ಚಿತ್ರಸರಣಿಯಲ್ಲಿ ಕಾಣಿಸಿದ್ದು ಕನ್ಯಾರತ್ನ.



ಡಿ ಬಿ ಎನ್ ಪ್ರೊಡಕ್ಷನ್ಸ್ ಅರ್ಥಾತ್ ಡಿ ಬಿ ನಾರಾಯಣ ಅವರ ನಿರ್ಮಾಣದಲ್ಲಿ ಮೂಡಿ ಬಂದ ಚಿತ್ರವನ್ನು ಜೆ ಡಿ ತೋಟಾನ್ ನಿರ್ದೇಶಿಸಿದ್ದಾರೆ.

ವಿಜಯನಾರಸಿಂಹ ಮತ್ತು ಚಿ ಸದಾಶಿವಯ್ಯ ಅವರ ರಚನೆಗೆ ಹಾಡುಗಳನ್ನು ಕಣಗಾಲ್ ಪ್ರಭಾಕರ್ ಶಾಸ್ತ್ರೀ, ಕು ರಾ ಸೀತಾರಾಮ ಶಾಸ್ತ್ರಿ, ಚಿ ಸದಾಶಿವಯ್ಯ ಮತ್ತು ವಿಜಯನಾರಸಿಂಹ ಅವರುಗಳು ರಚಿಸಿದ್ದಾರೆ.

ಸಂಗೀತ ಜಿ ಕೆ ವೆಂಕಟೇಶ್ ಅವರದ್ದು.. ಗಾಯನ ಪಿ ಬಿ ಶ್ರೀನಿವಾಸ್, ಎಸ್ ಜಾನಕೀ, ಟಿ. ಎ ಮೋತಿ ಅವರುಗಳದ್ದು.

ಎಂ ಕೆ ರಾಜು ಅವರ ಛಾಯಾಗ್ರಹಣವಿದ್ದ ಈ ಚಿತ್ರ ಕಲಾವಿದರ ಸಶಕ್ತ ಅಭಿನಯದಿಂದ ನೋಡಿಸಿಕೊಂಡು ಹೋಗುತ್ತದೆ.

ಆಗಿನ ಕಾಲದಲ್ಲಿ ಹಳ್ಳಿಯಲ್ಲಿ ಓದೋಕೆ ಅವಕಾಶ ಹೆಚ್ಚು ಇರದ ಕಾರಣ, ಪಟ್ಟಣದಲ್ಲಿ ಓದುವುದು ಮಾಮೂಲು ಅಂತಹ ಕಾಲೇಜು ಓದುವ ಹುಡುಗನಾಗಿ ರಾಜ್ ಕುಮಾರ್ ಅವರ ಅಭಿನಯ ಲವಲವಿಕೆಯಿಂದ ಕೂಡಿದೆ. ಮನೆಯಲ್ಲಿ ಬಡತನವಿದ್ದರೂ ಅದನ್ನು ಲೆಕ್ಕಿಸದೆ, ಮನೆಯಿಂದ ಹಠಮಾಡಿ ದುಡ್ಡು ತರಿಸಿಕೊಂಡು, ಮೋಜು ಮಾಡುವ ಹುಡುಗನಾಗಿ ರಾಜ್ ಗಮನಸೆಳೆಯುತ್ತಾರೆ.
ಓದುವುದನ್ನು ಬಿಟ್ಟು, ಪ್ರೀತಿ ಮಾಡುತ್ತಾ, ನಾಯಕಿ ಲೀಲಾವತಿಯನ್ನು ಮದುವೆಯಾಗಳು ತಯಾರಾಗುತ್ತಾರೆ.


ಆದರೆ ಅವರ ತಾಯಿಗೆ ಇವರ ಮೋಜಿನ ವಿಚಾರ ಗೊತ್ತಾಗಿ, ಓದಿಗಾಗಿ ಮಾಡಿದ ಸಾಲವನ್ನು ತೀರಿಸುವ ಚಿಂತೆಯಿಂದಾಗಿ ಹಾಸಿಗೆ ಹಿಡಿದು ಅಸು ನೀಗಿದ ಮೇಲೆ, ರಾಜ್ ಕುಮಾರ್ ಅವರಿಗೆ ತಮ್ಮ ತಪ್ಪಿನ ಅರಿವಾಗಿ ಓದುವುದರಲ್ಲಿ ಶ್ರದ್ಧೆ ತೋರಿಸಿಕೊಂಡು, ವಿದ್ಯಾವಂತನಾಗುತ್ತಾರೆ ಜೊತೆಗೆ ತಾವು ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಲು ಅವರ ಅಕ್ಕ ಸಾಹುಕಾರ್ ಜಾನಕೀ ನೆರವಾಗುತ್ತಾರೆ..

ಮುಂದೆ, ಸುಂದರ ಅಕ್ಕ ತಮ್ಮನ ಬಾಂಧ್ಯವನ್ನು ಕೆಡಿಸಲು ಆಸ್ತಿಗಾಗಿ ಹೊಂಚು ಹಾಕಿ ಕಾದಿದ್ದ ರಮಾದೇವಿ, ತನ್ನ ತಮ್ಮನ ಮನೆಯಲ್ಲಿಯೇ ಉಳಿದಿದ್ದ ಸಾಹುಕಾರ್ ಜಾನಕಿಯನ್ನು ಮನೆಯಿಂದ ಹೊರಗೆ ಹಾಕಿ, ನಂತರ ತನ್ನ ಮೊದ್ದು ಮಗನಿಗೆ ಆಸ್ತಿ ಗಳಿಸಿಕೊಡುವ ಇರಾದೆಯಿಂದ ಮನೆಯಲ್ಲಿನ ಒಡವೆಗಳನ್ನು ಕದ್ದು, ಆ ತಪ್ಪನ್ನು ಸಾಹುಕಾರ್ ಜಾನಕಿಯ ಮೇಲೆ ಬರುವಂತೆ ಮಾಡಿ ಕಿರುಕುಳ ಕೊಡುತ್ತಾಳೆ.

ಆದರೆ ನಿಜಾಂಶ ಗೊತ್ತಾಗಿ, ರಾಜ್ ಕುಮಾರ್ ಅವರ ತಂದೆಯನ್ನು ಕೊಂದಿದ್ದವರಿಗೆ ಶಿಕ್ಷೆಯಾಗಿ, ಕಾನೂನಿನ ಸಮರದಲ್ಲಿ ಗೆದ್ದು, ತಮ್ಮ ಸಂಸಾರವನ್ನು ಮತ್ತೆ ಸುಖಾಂತ್ಯಕ್ಕೆ ತಂದು ನಿಲ್ಲಿಸುತ್ತಾರೆ.


ಈ ಇಡೀ ಕತೆಯಲ್ಲಿ ಬರುವ ಮುಖ್ಯ ಪಾತ್ರಗಳು ರಾಜ್ ಕುಮಾರ್, ಲೀಲಾವತಿ, ಬಾಲಕೃಷ್ಣ, ರಾಜಾಶಂಕರ್, ಸಾಹುಕಾರ್ ಜಾನಕೀ, ಡಿಕ್ಕಿ ಮಾಧವರಾವ್, ರತ್ನಾಕರ್, ಅಶ್ವಥ್ ನಾರಾಯಣ, ಜಯ, ಪಾಪಮ್ಮ.

ತಮ್ಮ ತಮ್ಮ ಪಾತ್ರಗಳಿಗೆ ಅನುಸಾರವಾಗಿ ಗಮನಸೆಳೆಯುವ ಅಭಿನಯ ನೀಡಿದ್ದಾರೆ.

ಹಾಡುಗಳ ಚಿತ್ರೀಕರಣ ಸೊಗಸಾಗಿದೆ. ಹಳೆಯ ಚಿತ್ರಗಳನ್ನು ನೋಡುವುದರ ಭಾಗ್ಯ ಅಂದರೆ, ಇಂದು ಅನೇಕ ತಾಣಗಳಲ್ಲಿ ಚಿತ್ರೀಕರಣ ನಿಷೇಧವಾಗಿರುವ ಅನೇಕ ತಾಣಗಳನ್ನು ನೋಡುವ ಸಂತಸ. ಅಚ್ಚುಕಟ್ಟಾಗಿ ಚಿತ್ರಿಸಿ, ಸರಳ ನೃತ್ಯಗಳನ್ನು ಆಯೋಜಿಸಿ, ಕಣ್ಣಿಗೆ, ಕಿವಿಗೆ ತಂಪೆನಿಸುವಂತೆ ಮೂಡಿಸುವ ಹಾಡುಗಳನ್ನು, ಅಬ್ಬರವಿಲ್ಲದ ವೇಷಭೂಷಣಗಳನ್ನು ನೋಡುವುದೇ ಒಂದು ಖುಷಿ.

ಈ ಚಿತ್ರದ ಹೆಸರಾದ ಹಾಡುಗಳಾದ :"ಬಿಂಕದ ಸಿಂಗಾರಿ", "ಸುವ್ವಿ ಸುವ್ವಿ ಸುವ್ವಾಲೆ", "ಮೈಸೂರ್ ದಸರಾ ಬೊಂಬೆ" ಗಮನಸೆಳೆಯುತ್ತವೆ.

ತಾನು ನೆನೆದು, ಮನೆಯನ್ನು ಬೆಳಗುವ ಪಾತ್ರದಲ್ಲಿ ಅಕ್ಕನಾಗಿ ಸಾಹುಕಾರ್ ಜಾನಕಿ ಸ್ಮರಣೀಯ ಅಭಿನಯ, ತಮ್ಮ ಸುಖವನ್ನು ಮರೆತು, ತಮ್ಮನ ಏಳಿಗೆಗಾಗಿ ಜೀವ ತೇಯುವ ಪಾತ್ರ ಇಷ್ಟವಾಗುತ್ತದೆ. ಕಷ್ಟ ಪಟ್ಟರೆ ಸುಖ ಸಿಗುತ್ತದೆ ಎನ್ನುವ ಹಾಗೆ ಅಂತ್ಯದಲ್ಲಿ ತಾನು ಪ್ರೀತಿಸಿದ್ದವರ ಜೊತೆ ಮದುವೆಯಾಗುವದರೊಂದಿಗೆ ಸಿನೆಮಾ ಸುಖಾಂತ್ಯ ಕಾಣುತ್ತದೆ.



ಹಾಗೆಯೇ ಅಸೆ ದುರಾಸೆಯಿಂದ ತಮ್ಮ ಅಣ್ಣನ ಮನೆಯನ್ನು ನಾಶ ಮಾಡಲು ಪ್ಲಾನ್ ಮಾಡುವ ರಮಾದೇವಿ, ಕಡೆಯಲ್ಲಿ ಕಾನೂನಿನ ಕೈಗೆ ಸಿಗುವುದು, ಮತ್ತೆ ಅಡ್ಡ ದಾರಿಯಲ್ಲಿ ದುಡಿಯಲು ಹೋಗಿ ತಪ್ಪಿನ ಮೇಲೆ ತಪ್ಪು ಮಾಡುತ್ತಾ ಕಡೆಯಲ್ಲಿ ಕಾನೂನಿಗೆ ಶರಣಾಗುವ ಪಾತ್ರದಲ್ಲಿ ಡಿಕ್ಕಿ ಮಾಧವರಾವ್ ಇದ್ದಾರೆ.


ಜೀವನದಲ್ಲಿ ಕಷ್ಟ ನಷ್ಟಗಳು ಏನೇ ಬರಲಿ ಸಂತೋಷ ತುಂಬಾ ಸಂತೋಷ ಎನ್ನುತ್ತಾ, ಮಗಳಿಗೆ ತಿಳಿ ಹೇಳುವ ಪಾತ್ರದಲ್ಲಿ ಬಾಲಕೃಷ್ಣ ಮನಸೆಳೆಯುತ್ತಾರೆ.

ಉಳಿದ ಪೋಷಕ ಪಾತ್ರಗಳಲ್ಲಿ ರಾಜಾಶಂಕರ್, ಗುಗ್ಗು, ರತ್ನಾಕರ್, ಅಶ್ವಥ್ ನಾರಾಯಣ, ಪಾಪಮ್ಮ, ಜಯ ತಮ್ಮ ಛಾಪನ್ನು ಮೂಡಿಸುತ್ತಾರೆ.


ರಾಜ್ ಅವರ ವೇಷಭೂಷಣಗಳು, ಮಾತಿನ ಐಸಿರಿ, ಹಾಡುಗಳಲ್ಲಿನ ನೃತ್ಯ, ಭಾವಾಭಿನಯ ಇಷ್ಟವಾಗುತ್ತದೆ. ರಾಜ್ ಕುಮಾರ್ ಅಭಿನಯದ ರಾಜರಾಗಿ ಇಡುತ್ತಿರುವ ಹೆಜ್ಜೆಗಳು ದೃಢವಾಗುತ್ತ ಸಾಗುತ್ತಿರುವುದು ಅರಿವಾಗುತ್ತದೆ.


ಮತ್ತೆ ಮುಂದಿನ ಸಿನಿಮಾ.. ನಮ್ಮ ನಿಮ್ಮ ಜೊತೆ ನಮ್ಮ ನೆಚ್ಚಿನ ರಾಜ್ ಕುಮಾರ್ ಇದ್ದೆ ಇರುತ್ತಾರೆ.. ಸಿಗೋಣವೇ.. !

No comments:

Post a Comment