Monday, July 20, 2020

ನಿಸ್ವಾರ್ಥದ ದೀಪ ಸದಾ ಬೆಳಕನ್ನು ಪಸರಿಸುತ್ತದೆ - ನಂದಾದೀಪ (1963) (ಅಣ್ಣಾವ್ರ ಚಿತ್ರ ೩೬ / ೨೦೭)

ಈ ಚಿತ್ರದ ನಿಜವಾದ ನಾಯಕ ಸೋರಟ್ ಅಶ್ವಥ್.. ಚಿತ್ರಕಥೆ, ಸಂಭಾಷಣೆ, ಹಾಡುಗಳು, ಹಾಗೂ ಒಂದು ಮುಖ್ಯ ಪಾತ್ರದಲ್ಲಿ ತಮ್ಮ ಪ್ರತಿಭೆಯನ್ನು ಧಾರೆಯೆರೆದಿದ್ದಾರೆ..


ಒಂದು ಕೌಟುಂಬಿಕ ಕಥೆಯನ್ನು ವಾದಿರಾಜ್ ಬರೆದು ನಿರ್ಮಿಸಿದ್ದಾರೆ.  ಶ್ರೀ ಭಾರತಿ ಚಿತ್ರದ ಲಾಂಛನದಲ್ಲಿ ಮೂಡಿಬಂದ ಚಿತ್ರವನ್ನು ಪ್ರಥಮ ಬಾರಿಗೆ ನಿರ್ದೇಶಕರಾಗಿರುವ ಎಂ ಆರ್ ವಿಠ್ಠಲ್ ಮೂಡಿಸಿದ್ದಾರೆ.

ಎಂ ವೆಂಕಟರಾಜು ಅವರ ಸುಮಧುರ ಸಂಗೀತದಲ್ಲಿ ಮೂಡಿರುವ ಹಾಡುಗಳು ಸೊಗಸಾಗಿವೆ.

ಕನಸೊಂದು ಕಂಡೆ ಕನ್ನಡ ಮಾತೆ.. ನಾಡು ನುಡಿಯ ಬಗ್ಗೆ ಬಣ್ಣಿಸುವ ಹಾಡಾಗಿದೆ
ನಲಿವ ಮನ ಒಂದೇ ದಿನ ಯುಗಳ ಗೀತೆಯಾಗಿ ಪ್ರೇಮಿಗಳ ಮನದಾಳದ ಹಾಡಾಗಿದೆ
ಒಂದು ಗೂಡಿದೆ - ವೇಗವಾದ ಸಂಗೀತ ಇರುವ ಹಾಡು
ಗಾಳಿ ಗೋಪುರ ನಿನ್ ಆಶಾತೀರಾ - ಹಿಂದಿನ ಘಟನೆ ನೆನೆದು ತನ್ನ ಬಗ್ಗೆಯೇ ಹೇಳಿಕೊಳ್ಳುವ ಗೀತೆ
ಯಾರಿಗೆ ಯಾರೋ ನಿನಗಿನ್ಯಾರೋ - ಹತಾಶೆಯ ಹಾಡಾಗಿದೆ
ನಾಡಿನಂದ ಈ ದೀಪಾವಳಿ - ಹಬ್ಬದ ವಿಶೇಷದ ಹಾಡಾಗಿ ಇಂದಿಗೂ ಜನಪ್ರಿಯ
ನ್ಯಾಯಕೆ ಕಣ್ಣಿಲ್ಲ ಪ್ರೀತಿಗೆ ಬೆಲೆಯಿಲ್ಲ - ವಿಷಾದದ ಹಾಡು

ಪಿಬಿ ಶ್ರೀನಿವಾಸ್, ನಾಗೇಂದ್ರಪ್ಪ, ಎಸ್ ಜಾನಕಿ, ಪಿ ಲೀಲಾ, ಜಿಕ್ಕಿ ಹಾಡಿದ್ದಾರೆ..

ಕಚಗುಳಿ ಇಡುವ ಸಂಭಾಷಣೆಗಳು ಇವೆ..

ನರಸಿಂಹ ರಾಜು ಮನೆಯ ಕಾರ್ ಡ್ರೈವರ್.. ಅವರ ಒಂದು ಸಂಭಾಷಣೆ
ತಾಳಿ ಇಲ್ಲದ ಮದುವೆ.. ಬ್ರೇಕ್ ಇಲ್ಲದ ಲಾರಿ ಇದ್ದಂಗೆ 



ಡೈಲಾಗ್ ಮಾಸ್ಟರ್ ಎನ್ನಬಹುದಾದ ನೆಚ್ಚಿನ ಬಾಲಣ್ಣ ಒಂದೆರಡು ದೃಶ್ಯಗಳಲ್ಲಿ ಬಂದು ಹೋದರು ಮಾತುಗಳು ಇಷ್ಟವಾಗುತ್ತವೆ..



"ನಾನು ದಲ್ಲಾಳಿ ದಶಾವತಾರದ ಭೀಮಣ್ಣ... ನಂ ಕಂಪನಿ ಬಿಸಿನೆಸ್  ಮೆಣಸಿನಕಾಯಿಂದ ಹಿಡಿದು ಮನೆ ಮಠ ಹೊಲ ಗದ್ದೆ ಇದು ಇಹಲೋಕದ್ದು.. ಪತಿ ಪತ್ನಿಯರನ್ನು, ಗಂಡು ಹೆಣ್ಣನ್ನು ಸೇರಿಸೋದು.. ಇದು ಪರಲೋಕದ್ದು.".

"ಮಾತುಬಾರದ ಮಕ್ಕಳಿಗೆ ಅಕ್ಷರ ಕಲಿಸುವ ಪ್ರೈಮರಿ ಸ್ಕೂಲ್ ಮಾಸ್ಟರ ಪರಿಸ್ಥಿತಿ ಎಲ್ಲಿ ತನಕ ಸುಧಾರಿಸೊಲ್ವೊ.. ಅಲ್ಲಿವರೆಗೆ ದೇಶ ಸುಧಾರಿಸೋಲ್ಲ.. "

ಅದ್ಭುತ ಸಂಭಾಷಣೆ.. ಬಾಲಣ್ಣ ಅದನ್ನು ಹೇಳುವ ಪರಿ ಆಆಆಹಾ ...

ರಾಜ್ ಕುಮಾರ್ ಹರಿಣಿ ಒಬ್ಬರನ್ನೊಬ್ಬರು ಇಷ್ಟ ಪಡುತ್ತಾರೆ.. ಆದರೆ ಹಣದಾಸೆಯ ರಾಜ್ ಅವರ ಅಪ್ಪ ಈ ಮದುವೆಯನ್ನು ಒಪ್ಪೋದಿಲ್ಲ..


ಹರಿಣಿಯ ಅಣ್ಣನಾಗಿ ಉದಯಕುಮಾರ್ ಕಷ್ಟ ಪಟ್ಟು ಓದಿ ಪಟ್ಟಣದಲ್ಲಿ ಕೆಲಸಕ್ಕೆ ಸೇರಿಕೊಂಡು, ತಾನು ಅನಾಥ ಎಂದು ಹೇಳಿಕೊಂಡು ಕಂಪನಿಯ ಯಜಮಾನರ ಮಗಳನ್ನೇ ಮದುವೆಯಾಗುತ್ತಾರೆ.. ಮತ್ತೆ ತಮ್ಮ ಸಂಸ್ಥೆಯನ್ನು ನೋಡಿಕೊಳ್ಳಲು ಲಂಡನ್ ಗೆ ಹೋಗುತ್ತಾರೆ..



ಕಂಪನಿಯ ಯಜಮಾನ ಅಶ್ವಥ್ ಒಬ್ಬಂಟಿಯಾಗಿ ಒದ್ದಾಡುವಾಗ ಆತನ ಗೆಳೆಯನ ಸಲಹೆಯಂತೆ ಮದುವೆಗೆ ಒಪ್ಪುತ್ತಾರೆ

ಇತ್ತ ಹಳ್ಳಿಯಲ್ಲಿರುವ ಆತನ ಅಪ್ಪ.. ಮಗಳ ಓದಿಗೆ ಮಾಡಿದ ಸಾಲ ತೀರಿಸಲಾಗದೆ, ಒದ್ದಾಡುವಾಗ,
ಬಾಲಣ್ಣ ಹರಿಣಿಯನ್ನು ಅಶ್ವಥ್ ಜೊತೆಯಲ್ಲಿ ಮದುವೆ ಮಾಡಿಸಿ ಆಕೆಯ ಅಪ್ಪನಿಗೆ ಸಹಾಯ ಮಾಡುತ್ತಾರೆ.


ಆದರೆ ಅಪ್ಪ ಸೋರಟ್ ಅಶ್ವಥ್ ಇತ್ತ ಮಗಳ ಮನೆಗೂ ಹೋಗದೆ, ಊರಲ್ಲೂ ಇರದೇ ದೇಶಾಂತರ ಹೋಗುತ್ತಾರೆ..

ಇತ್ತ ಮದುವೆಯಾಗಿ ಜೀವನಕ್ಕೆ ಒಗ್ಗಿಕೊಳ್ಳುತ್ತಿರುವಾಗ.. ತನ್ನ ಪತಿರಾಯ ಮಗಳು ಲೀಲಾವತಿ ಗಂಡ ಉದಯಕುಮಾರ್ ಜೊತೆಯಲ್ಲಿ ದೇಶಕ್ಕೆ ಮರಳುತ್ತಾರೆ..


ತನ್ನ ತಂಗಿ ಎಂದು ಹೇಳಿಕೊಳ್ಳಲಾಗದೆ ಉದಯಕುಮಾರ್, ತನ್ನ ಅಣ್ಣ ಎಂದು ಹೇಳಿಕೊಳ್ಳಲಾಗದ ಹರಿಣಿ ಒದ್ದಾಡುತ್ತಾರೆ.. ಪರಸ್ಪರ ಮಾತಾಡುವಾಗ ಅವರ ಮಾತನ್ನು ತಪ್ಪಾಗಿ ಅರ್ಥೈಸಿಕೊಂಡು ಅಶ್ವಥ್ ಮತ್ತು ಲೀಲಾವತಿ ಹರಿಣಿಗೆ ಅವಮಾನ ಮಾಡುತ್ತಾರೆ.. ಇದರಿಂದ ಬೇಸತ್ತ ಹರಿಣಿ ಅಂತಿಮ ದೃಶ್ಯದಲ್ಲಿ ಅವರ ಹೆಸರಲ್ಲಿಯೇ ಕಟ್ಟಡ ನಿರ್ಮಾಣವಾಗುವ ಕ್ರಿಯೆಯಲ್ಲಿ ಮಾರಣಾಂತಿಕ ಪೆಟ್ಟಾಗುತ್ತದೆ. ... ಕಡೆಯ ದೃಶ್ಯದಲ್ಲಿ ತಮ್ಮ ತಪ್ಪನ್ನು ಒಪ್ಪಿಕೊಂಡು ಲೀಲಾವತಿ ಮತ್ತು ಅಶ್ವಥ್ ಹರಿಣಿಯಲ್ಲಿ ಕ್ಷಮೆ ಕೇಳುತ್ತಾರೆ.. ನೆಮ್ಮದಿಯಿಂದ ಕೊನೆಯುಸಿರು ಎಳೆಯುತ್ತಾರೆ.. ನಂದಾದೀಪದಂತೆ ತನ್ನನ್ನೇ ಸುಟ್ಟುಕೊಂಡು ಬೆಳಕು ನೀಡುತ್ತಾರೆ..


ಸರಳ ಕತೆಯನ್ನು ಸಂಭಾಷಣೆ ಮತ್ತು ಹಾಡುಗಳ ಮೂಲಕ ಸಶಕ್ತವಾಗಿ ಕಟ್ಟಿಕೊಟ್ಟಿರುವ ಸೋರಟ್ ಅಶ್ವಥ್ ಈ ಚಿತ್ರದ ನಿಜವಾದ ಹೀರೋ..


ಪ್ರೇಮಿಯಾಗಿ, ತನ್ನ ತಂದೆಯ ದುಡ್ಡಿನ ದುರಾಸೆಗೆ ಸೆಡ್ಡು ಹೊಡೆದು ಮನೆಯಿಂದ ಹೊರಗೆ ಹೋಗಿ ಬದುಕು ಕಟ್ಟಿಕೊಳ್ಳಲು ಪ್ರಯತ್ನ ಪಡುವ ಪಾತ್ರದಲ್ಲಿ ರಾಜ್ ಕುಮಾರ್ ಮಿಂಚುತ್ತಾರೆ.. ತಾನು ಬರೆಯುವ ಸಾಹಿತ್ಯ ಉತ್ತಮ ಮಟ್ಟದ್ದು, ಮತ್ತೆ ಅದಕ್ಕೆ ಎಂದೂ ಬೆಲೆ ಕಟ್ಟಿ ಹೊಟ್ಟೆ ಹೊರೆಯಬಾರದು, ವ್ಯಾಪಾರ ದೃಷ್ಟಿಯಲ್ಲಿ ಬಳಕೆಯಾಗಬಾರದು ಎನ್ನುವ ಉದಾತ್ತ ಮನಸಿನಿಂದ ಬಂದ ಅವಕಾಶಗಳನ್ನು ತಿರಸ್ಕರಿಸುತ್ತಾರೆ.. ಆದರೆ ತನ್ನ ಪ್ರೇಯಸಿ ಹರಿಣಿಯ ಮನೆಯ ಕಷ್ಟ ಅರಿತು, ಅವರಿಗೆ ಸಹಾಯ ಮಾಡಲು ಊರನ್ನು ಬಿಟ್ಟು, ಸಮಾಜದಲ್ಲಿ ಚಾಲ್ತಿಯಲ್ಲಿರಲು, ದುಡ್ಡು ಮಾಡಲು ಜಾಹಿರಾತುಗಳಿಗೆ ಕವನ ಬರೆದುಕೊಟ್ಟು, ಸಣ್ಣ ಸಣ್ಣ ಕಾದಂಬರಿಗಳನ್ನು ಓದುಗರ ಅಭಿರುಚಿಗೆ ತಕ್ಕಂತೆ ಬರೆಯಲು ಮುಂದಾಗಿ.. ದುಡ್ಡು ಗಳಿಸಿ ಊರಿಗೆ ಬಂದಾಗ ಹರಿಣಿಯ ಮದುವೆಯಾಗಿದೆ ಎಂದು ತಿಳಿದಾಗ ಅವರ ಅಭಿನಯ ಸೊಗಸಾಗಿದೆ..




ಬೇಡದ ಬದುಕನ್ನು ಬೇಸರದಿಂದ ಕಳೆಯುವಾಗಿನ ಅಭಿನಯ ಸೊಗಸಾಗಿದೆ.. ನಂತರ ವಾದಿರಾಜ್ ಅವರ ಸಹಾಯದಿಂದ ಒಂದು ಆಶ್ರಮ ಕಟ್ಟಿ ಬೆಳೆಸುವ ಪಾತ್ರವಾಗಿ ಅಭಿನಯ  ಮನೋಜ್ಞವಾಗಿದೆ

ಆರಾಮಾಗಿ, ಲೀಲಾಜಾಲವಾಗಿ ಸಾಗುವ ಅವರ ಅಭಿನಯ... ಅರೆ ಎಷ್ಟು ಸುಲಭ ಈ ಅಭಿನಯ ಅನ್ನುವಂತೆ ಮಾಡಿದ್ದಾರೆ.. ರಾಜ್ ಕುಮಾರ್ ಮನಸೆಳೆಯುತ್ತಾರೆ.

ಕಥೆಯ ಓಟಕ್ಕೆ ಭಂಗ ತರದೇ ಹಾಸ್ಯ ದೃಶ್ಯಗಳು ಕತೆಗೆ ಪೂರಕವಾಗಿ ಸಾಗುತ್ತವೆ.. ನರಸಿಂಹರಾಜು, ಎಂ ಎನ್ ಲಕ್ಷ್ಮೀದೇವಿ ಮತ್ತು ಸಹಾಯಕ ನಿರ್ದೇಶಕನಾಗಿಯೂ ಕೆಲಸ ಮಾಡಿರುವ ರತ್ನಾಕರ ಅವರ ಅಭಿನಯ ಕಚಗುಳಿ ಇಡುವ ಸಂಭಾಷಣೆಗಳು ಚೆನ್ನಾಗಿವೆ.





ಸಹನಟರಲ್ಲಿ, ಪೋಷಕ ಪಾತ್ರಗಳಲ್ಲಿ ರಾಮಚಂದ್ರ ಶಾಸ್ತ್ರೀ, ಜಯಶ್ರೀ, ವಾದಿರಾಜ್, ಹನುಮಂತ ಚಾರ್, ರಮಾದೇವಿ ಕಾಣಿಸಿಕೊಂಡಿದ್ದಾರೆ..





ಈ ಚಿತ್ರದಲ್ಲಿ ಕೆಲವು ತಾಂತ್ರಿಕ ಅಂಶಗಳು ಗಮನ ಸೆಳೆಯುತ್ತದೆ ಕಾರಣ ಛಾಯಾಗ್ರಾಹಕ ಟ್ರಿಕ್ ಶಾಟ್ ಸ್ಪೆಷಲಿಸ್ಟ್ ಆರ್ ಮಧು ಅವರ ಛಾಯಾಗ್ರಹಣ.

ಅಶ್ವಥ್ ಮತ್ತು ಅವರ ಗೆಳೆಯ ಮಾತಾಡುವ ಎರಡು ದೃಶ್ಯಗಳನ್ನು ಒಂದೇ ಫ್ರೇಮಿನಲ್ಲಿ ಕೂರಿಸುವ ಕೈಚಳಕ ಸೂಪರ್..


ಹಾಗೆ ಸೈಕಲ್ ಚಕ್ರದಲ್ಲಿ ರಾಜ್ ಮತ್ತು ವಾದಿರಾಜ್ ಅವರನ್ನು ತೋರಿಸುವ ದೃಶ್ಯ ಗಮನ ಸೆಳೆಯುತ್ತದೆ

ವಿರಾಮದ ದೃಶ್ಯವನ್ನು ರಾಜ್ ಕುಮಾರ್ ಅವರ ಕೈಯಿಂದ ಜಾರಿ ಹೋಗುವ ನೋಟುಗಳು ಮತ್ತು ಅದನ್ನು ವಿರಾಮ ಎಂಬ ಕನ್ನಡದ ಪದಗಳಲ್ಲಿ ತೋರಿಸುವುದು ವಿಶೇಷ..


ಒಂದು ಸರಳ ಕತೆಯನ್ನು ಮನಮುಟ್ಟುವ ಹಾಗೆ ಮೂಡಿಸಿರುವ ಜಾದೂ ನಿರ್ದೇಶಕರಿಂದ ಸಾಧ್ಯವಾಗಿದೆ.. !

ಮತ್ತೊಂದು ಚಿತ್ರ.. ಮತ್ತೊಂದು ಬರಹ.. ಸಿಗೋಣ ಅಲ್ಲವೇ !

No comments:

Post a Comment