Wednesday, July 8, 2020

ಹೊಳೆಯುವ ತೇಜಸ್ಸಿನ ತೇಜಸ್ವಿನಿ (1962) (ಅಣ್ಣಾವ್ರ ಚಿತ್ರ ೩೩ / ೨೦೭)

ಹೆಣ್ಣು ಮಕ್ಕಳಿಗೆ ಅಂತಹ ಸ್ವತಂತ್ರ ಇಲ್ಲ ಎನ್ನುವ ಆ ಕಾಲದಲ್ಲಿಯೇ ಮಹಿಳಾಮಣಿಗಳು ನಿರ್ಮಾಪಕಿಯರಾಗಿದ್ದು ವಿಶೇಷ.

ಈ ಚಿತ್ರವನ್ನು  ತಮ್ಮ ಸರಳ ಅಭಿನಯಕ್ಕೆ ಹೆಸರಾದ ಪಂಡರಿಬಾಯಿ ನಿರ್ಮಿಸಿದ್ದಾರೆ. ಶ್ರೀ ಪಾಂಡುರಂಗ ಪ್ರೊಡಕ್ಷನ್ಸ್ ಲಾಂಛನದಲ್ಲಿ ಎಚ್ ಎಲ್ ಎನ್ ಸಿಂಹ ಅವರ ಚಿತ್ರಕೆಥೆ, ಸಂಭಾಷಣೆ ,ನಿರ್ದೇಶನ , ಎಂ ವೆಂಕಟರಾಜು ಅವರ ಸಂಗೀತ, ಆರ್ ಸಂಪತ್ ಮತ್ತು ಬಿ ದೊರೈರಾಜ್ ಅವರ ಛಾಯಾಗ್ರಹಣ ಇರುವ ಈ ಚಿತ್ರದಲ್ಲಿ ಪಿಬಿ ಶ್ರೀನಿವಾಸ್, ಪಿ ನಾಗೇಶ್ವರ್ ರಾವ್, ಪಿ ಲೀಲಾ, ಎಸ್ ಜಾನಕಿ, ಸ್ವರ್ಣಲತಾ ಹಿನ್ನೆಲೆ ಗಾಯನ ಮಾಡಿದ್ದಾರೆ.


ಪಾಳೇಗಾರರ ಪಾಳೆಪಟ್ಟು, ಅದರ ಕುತಂತ್ರ, ರಾಜಕೀಯ, ಮೋಸ, ವಂಚನೆ, ಮಮತೆ, ಪ್ರೀತಿ ಈ ವಿಷಯಗಳನ್ನು ಚೆನ್ನಾಗಿ ಕಲೆಸಿದ ಚಿತ್ರವಿದು.

ಪದ್ಮ ಎಂಬ ಪಟ್ಟ ಮಹಿಷಿ ಇರುವ ಶಿವಪ್ಪನಾಯಕ ಎನ್ನುವ ರಾಜನಿಗೆ ರಾಮನಾಯಕ ಎನ್ನುವ ಬೇಜವಾಬ್ಧಾರಿ ವಿಲಾಸೀ ತಮ್ಮ ಇರುತ್ತಾನೆ. ಆತನಿಗೆ ಸದಾ ಅಣ್ಣನ ಸಿಂಹಾಸನದ ಮೇಲೆ ಕಣ್ಣು. ಅವನ ಆಸೆಯ ಬೆಂಕಿಗೆ ತುಪ್ಪ ಸುರಿಯುವಂತೆ ತುಂಗಾಮಯ್ಯ ಇರುತ್ತಾನೆ.. ಆತನಿಗೆ ಸಹಾಯಕಳಾಗಿ ತಿಮ್ಮು..

ಇವರೆಲ್ಲರ  ಕುತಂತ್ರಗಳು ನಾಗೇಂದ್ರ ದೈವದ ಅನುಗ್ರಹದಿಂದ ಹೇಗೆ ವಿಫಲವಾಗುತ್ತವೆ ಎನ್ನವುದೇ ಚಿತ್ರದ ತಿರುಳು. ಆ ದೈವ ಅನುಗ್ರಹಕ್ಕೆ ಸಾಥಿಯಾಗಿ ರಂಗನಾಯಕಿ..

ಇತಿಹಾಸದ ಕೆಲವು ಪುಟಗಳನ್ನು ತೆರೆಗೆ ತಂದಿರುವ ಈ ಚಿತ್ರದಲ್ಲಿ ಭಾವನಾತ್ಮಕತೆಗೆ ಜಾಸ್ತಿ ಒತ್ತು ನೀಡಿದ್ದಾರೆ.. ಸಂಬಂಧಗಳಿಗೆ ಪ್ರಾಮುಖ್ಯತೆ  ನೀಡಿದ್ದಾರೆ..

ಈ ಚಿತ್ರ ಕೆಲವು ವಿಶಿಷ್ಟ ಕಾರಣಗಳಿಗೆ ಇಷ್ಟವಾಗುತ್ತದೆ.. ಸಾಮಾನ್ಯ ನರಸಿಂಹರಾಜು ಹಾಸ್ಯ ಪಾತ್ರಗಳಿಗೆ ಹೆಸರುವಾಸಿ.. ಹಾಸ್ಯ ಮಾಡುತ್ತಲೇ ಚಿತ್ರದ ನಾಯಕನಿಗೆ ಸಹಾಯ ಮಾಡುತ್ತಾ ಖಳನಾಯಕನಿಗೆ ಚಳ್ಳೆ ಹಣ್ಣು ತಿನ್ನಿಸುವ ಪಾತ್ರಗಳು ಇದುವರೆಗೂ ರಾಜ್ ಕುಮಾರ್ ಅವರ ಚಿತ್ರಗಳಲ್ಲಿ ನೋಡಿದ್ದು.. ಆದರೆ ಈ ಚಿತ್ರದಲ್ಲಿ ಅವರ ಪಾತ್ರ ವಿಶೇಷವಾಗಿದೆ.. ಎರಡನೇ ನಾಯಕ ರಾಜಾಶಂಕರ್ ಅವರ ಕಿವಿ ತುಂಬುತ್ತ ರಾಜಕೀಯ ಮಾಡುವ ಪಾತ್ರದಲ್ಲಿ ಮಿಂಚಿದ್ದಾರೆ.. ಅವರಿಗೆ ಸಾತ್  ನೀಡುವ ಎಂ ಎನ್ ಲಕ್ಷ್ಮೀದೇವಿಯ ಆನೆಯ ಹುಚ್ಚು ನಗೆ ತರಿಸುತ್ತದೆ.



ಶಿವಪ್ಪನಾಯಕನ ಪಾತ್ರದಲ್ಲಿ  ರಾಜ್ ಕುಮಾರ್ ಅವರ ಅಭಿನಯ ಸೊಗಸಾಗಿದೆ..ಆರಂಭದ ದೃಶ್ಯದಲ್ಲಿಯೇ  ಪಂಡರೀಬಾಯಿಯವರನ್ನು ನೋಡುತ್ತಲೇ ಅವರ ಸೌಂದರ್ಯಕ್ಕೆ ಮಾರು ಹೋಗಿ ಕಲ್ಯಾಣಕ್ಕೆ ಪ್ರಸ್ತಾಪ ಇಡುವ ದೃಶ್ಯದಲ್ಲಿ ಅವರ ಅಭಿನಯ ಇಷ್ಟವಾಗುತ್ತದೆ.



ಕೀಳು ಜಾತಿ ಹೆಣ್ಣು ನಾನು ಎಂದಾಗ, ಅದಕ್ಕೆ ಸಮಜಾಯಿಸಿ ಕೊಡುವ ರೀತಿ, ಆಕೆಯನ್ನು ವಿವಾಹ ಮಾಡಿಕೊಂಡು ತನ್ನ ಹೆಂಡತಿ ಪದ್ಮಳಿಗೆ ಅಂದರೆ ಆದವಾನಿ ಲಕ್ಷ್ಮೀದೇವಿಯವರ ಜೊತೆಯಲ್ಲಿ ಸುಗಮವಾಗಿ ಸಾಗುವ ಸಂಸಾರದ ಸಾರಥಿಯಾಗಿ ರಾಜ್ ಕುಮಾರ್ ಅವರ ಅಭಿನಯ ಸೊಗಸು.

ರಾಜನಾಗಿ, ಪತಿಯಾಗಿ,  ದಕ್ಷ ಅಧಿಕಾರಿಯಾಗಿ ಅವರ ಪಾತ್ರ ಪೋಷಣೆ ಚೆನ್ನಾಗಿದೆ.. ತಿರುವುಗಳು ಕಂಡು, ರಾಜಕೀಯ ಕುತಂತ್ರಗಳಿಗೆ ಬಲಿಯಾಗಿ ಕಣ್ಣು ಕಳೆದುಕೊಂಡರು ತಮ್ಮನ ಮೇಲಿನ ಅಭಿಮಾನ ಕಳೆದುಕೊಳ್ಳದೆ ಇರುವುದು, ಚಿತ್ರದ ಅಂತ್ಯದಲ್ಲಿನ ರೋಷಭರಿತ ಅಭಿನಯದಲ್ಲಿ ಅವರನ್ನು ನೋಡುವುದೇ ಖುಷಿ.

ಅನೇಕ ಚಿತ್ರಗಳ ನಂತರ ತಮ್ಮನ್ನು ಬೆಳ್ಳಿ ತೆರೆಗೆ ಪರಿಚಯಿಸಿದ ಎಚ್ ಎಲ್ ಎನ್ ಸಿಂಹ ಅವರ ನಿರ್ದೇಶನದಲ್ಲಿ ಅಭಿನಯಿಸಿರುವುದು ವಿಶೇಷ.

ನಿರ್ಮಾಪಕಿಯಾಗಿ ಪಂಡರಿಬಾಯಿ ಹಾಗೂ ರಂಗನಾಯಕಿಯಾಗಿ ಪಂಡರಿಬಾಯಿಯವರ ಅಭಿನಯ ಸುಂದರವಾಗಿದೆ. ತಮ್ಮ ಪಾತ್ರಕ್ಕೆ ಸಿಕ್ಕಷ್ಟೇ ಅವಕಾಶ ಇತರ ಪಾತ್ರಗಳಿಗೂ  ನೋಡಿಕೊಂಡಿರುವುದು ಅವರ ಚಿತ್ರ ಪ್ರೇಮಕ್ಕೆ ಸಾಕ್ಷಿ. ಮಮತಾಮಯಿ ಪಾತ್ರದಲ್ಲಿ ಎಲ್ಲರನ್ನೂ ಸರಿ ದಾರಿಗೆ ತರುವ ಪಾತ್ರದಲ್ಲಿ ಆವರಿಸಿಕೊಂಡಿದ್ದಾರೆ.






ಆಡಳಿತ ಅಧಿಕಾರಿಯಾಗಿ ರಾಮಚಂದ್ರ ಶಾಸ್ತ್ರೀ ಪಾತ್ರಕ್ಕೆ  ತಕ್ಕ ಅಭಿನಯ ನೀಡಿದ್ದಾರೆ.. ಪುಟ್ಟ ಪಾತ್ರದಲ್ಲಿ ಗಣಪತಿ ಭಟ್ ಮತ್ತು ಹನುಮಂತ ಚಾರ್ ಗಮನಸೆಳೆಯುತ್ತಾರೆ.. ಹಾಗೆಯೆ ಘಟವಾಣಿಯಾಗಿ ರಮಾದೇವಿ ಮತ್ತು ಶಾಂತ ಸ್ವಭಾವದ ದೇಶಪ್ರೇಮಿಯಾಗಿ ಪಾಪಮ್ಮ ಉತ್ತಮ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ




ಅಶ್ವಥ್ ಮತ್ತು ಬಾಲಕೃಷ್ಣ ಒಂದೇ ದೃಶ್ಯದಲ್ಲಿ ಬಂದು ಹೋಗುತ್ತಾರೆ..



ಚಿತ್ರದುದ್ದಕ್ಕೂ ಗಮನ ಸೆಳೆಯುವುದು ರಾಜಾಶಂಕರ್ ಮತ್ತು ನರಸಿಂಹರಾಜು ಅವರ ಜುಗಲ್ ಬಂದಿ ಮಾತುಗಳು.. ಜೊತೆಯಲ್ಲಿ ಚಿಂದೋಡಿ ಲೀಲಾ ಅವರ ಚುರುಕು ಅಭಿನಯ ಹಾಗೂ ರಾಜಶ್ರೀ ಅವರ ಮುಗ್ಧ ಸೌಂದರ್ಯ.

ಶಿವಪ್ಪನಾಯಕನ ದಾಯಾದಿಯಾಗಿ ಡಿಕ್ಕಿ ಮಾಧವರಾವ್ ಪುಟ್ಟ ಪಾತ್ರದಲ್ಲಿ ಅಬ್ಬರಿಸಿದ್ದಾರೆ..



ನಾವೇನೇ ಮಾಡ ಹೋದರು ದೈವ ಪ್ರೇರಣೆ ಮತ್ತು ದೈವ ಸಹಾಯ ಇರಲೇಬೇಕು.. ಅದೇ ನಮ್ಮನ್ನು ಕಾಪಾಡುತ್ತದೆ  ಮತ್ತು ತಾಳ್ಮೆ ಕಳೆದುಕೊಳ್ಳದೆ ಎಲ್ಲವನ್ನೂ ನಿಭಾಯಿಸುವ ಕಲೆ ಬೆಳೆಸಿಕೊಳ್ಳಬೇಕು ಎನ್ನುವ ನೀತಿ ಈ ಚಿತ್ರದಲ್ಲಿ ಹರಡಿಕೊಂಡಿದೆ..

ಇನ್ನೊಂದು ಚಿತ್ರದ ಜೊತೆಗೆ ರಾಜ್ ಕುಮಾರ್ ಅವರ ಚಿತ್ರಗಾಥೆಯನ್ನು ಮುಂದುವರೆಸೋಣ.. !

No comments:

Post a Comment