ಶಾಲೆಯಲ್ಲಿ ಮಕ್ಕಳು ಮಗ್ಗಿ ಒಪ್ಪಿಸುವಾಗ ಮಗ್ಗಿಯನ್ನು ಹಿಂದೆ ಮುಂದೆ ಮಾಡುತ್ತವೆ..ಅದೇ ರೀತಿ ಕೆಲವು ಕಡೆ ರಾಜಕುಮಾರ್ ಅವರ ೧೨೫ನೇ ಚಿತ್ರ ಅಂತ ಇದ್ದರೇ ಕೆಲವು ಕಡೆ ಬಾಳು ಬೆಳಗಿತು ಅವರ ಮೈಲುಗಲ್ಲು ಚಿತ್ರ ಎಂದು ಹಾಕಿಕೊಂಡಿದ್ದಾರೆ..
ಇರಲಿ.. ರಾಜಕುಮಾರ್ ಅವರ ಆರಂಭದ ಚಿತ್ರದಿಂದಲೂ ನೋಡುತ್ತಾ ಬಂದಿರುವ ಸಿಕ್ಕ ಪಟ್ಟಿಯಲ್ಲಿ ಇದು ಅವರ ೧೨೪ನೇ ಚಿತ್ರ,
ಚಿತ್ರಶ್ರೀ ಇಂಟರ್ನ್ಯಾಷನಲ್ ಲಾಂಛನದಲ್ಲಿ ಕೆ ಎನ್ ಪ್ರಸಾದ್, ಬಿವಿ ಶ್ರೀನಿವಾಸ್, ಮತ್ತು ಎ ಎಸ್ ಭಕ್ತವತ್ಸಲ ಅವರು ನಿರ್ಮಿಸಿರುವ ಚಿತ್ರವಿದು.
ಸಿದ್ಧಲಿಂಗಯ್ಯನವರ ಕೈಯಲ್ಲಿ ಅರಳಿದ ಚಿತ್ರವಿದು
ವಿಜಯಭಾಸ್ಕರ್ ಇಂಪಾದ ಸಂಗೀತದಲ್ಲಿ ಪಿ ಬಿ ಶ್ರೀನಿವಾಸ್, ಪಿ ಸುಶೀಲ, ಎಲ್ ಆರ್ ಈಶ್ವರಿ ಅವರು ಚಿ ಉದಯಶಂಕರ್ ಮತ್ತು ಆರ್ ಎನ್ ಜಯಗೋಪಾಲ್ ರಚಿಸಿರುವ ಹಾಡುಗಳನ್ನು ಹಾಡಿದ್ದಾರೆ
ಛಾಯಾಗ್ರಹಣ ಆರ್ ಚಿಟ್ಟಿಬಾಬು
ಸಂಭಾಷಣೆ ಚಿ ಉದಯಶಂಕರ್
ಒಬ್ಬ ಕುರುಡ.. ಒಬ್ಬ ಕಾಲಿಲ್ಲದ ಒಬ್ಬರಿಗೊಬ್ಬರು ಆಸರೆಯಾಗಿ ಕುರುಡ ಕಾಲಿಲ್ಲದವನಿಗೆ ಕಾಲಾಗುತ್ತಾನೆ.. ಕಣ್ಣು ಕಾಣದವನಿಗೆ ಕಾಲಿಲ್ಲದವ ಕಣ್ಣಾಗುತ್ತಾನೆ.. ಒಬ್ಬರಿಗೊಬ್ಬರು ಅನ್ನುವ ತಾತ್ವಿಕತೆಯನ್ನು ನೆನಪಿಸುವ ಕಥಾವಸ್ತು.
ರಾಜಕುಮಾರ್ ತೊಳಲಾಡುವ ದೃಶ್ಯಗಳಲ್ಲಿ ಮನೋಜ್ಞ ಅಭಿನಯ ನೀಡಿದ್ದಾರೆ. ಸಂಭಾಷಣೆಯಲ್ಲಿ ಎಲ್ಲಿ ಮೌನಕ್ಕೆ ಒತ್ತು ಕೊಡಬೇಕು.. ಎಲ್ಲಿ ಗಟ್ಟಿದನಿಯಾಗಬೇಕು ಎಂಬ ಸರಿಯಾದ ಸ್ಥಿತಿಯಲ್ಲಿ ಅವರ ಅಭಿನಯ ಚಿತ್ರದುದ್ದಕ್ಕೂ ಗಮನಾರ್ಹವಾಗಿದೆ. ಅವರಿಲ್ಲದೆ ಚಿತ್ರವನ್ನು ಊಹಿಸಿಕೊಳ್ಳಲು ಅಸಾಧ್ಯ. ಮುದ್ದಾಗಿ ಕಾಣೋದಷ್ಟೇ ಅಲ್ಲದೆ.. ಅವರ ಅಭಿನಯದಲ್ಲಿ ನಾವೇ ಅವರಾಗಿದ್ದೀವಿ ಅನ್ನುವಷ್ಟು ಮನಸಿನಲ್ಲಿ ಮೂಡುತ್ತಾರೆ.
ತೂಗಿ ಆಡುವ ಅವರ ಪ್ರತಿ ಸಂಭಾಷಣೆಯೂ ಮನಸ್ಸಿಗೆ ನಾಟುತ್ತದೆ. ಗೊಂದಲದ ಗೂಡಾದ ಮನುಷ್ಯ ಹೇಗೆ ನಿಭಾಯಿಸುತ್ತಾನೆ, ಹೇಗೆ ಪ್ರತಿಕ್ರಿಯಿಸುತ್ತಾನೆ ಅದೇ ಮೂಲ ಉದ್ದೇಶ ಅದನ್ನು ಪರಿಣಾಮಕಾರಿಯಾಗಿ ತೆರೆಗೆ ತಂದಿದ್ದಾರೆ ರಾಜಕುಮಾರ್.
ಉಳಿದ ಪಾತ್ರಗಳು ಕತೆಯನ್ನು ಮುಂದುವರೆಸಲು, ಚಿತ್ರಕಥೆಗೆ ಪೂರಕವಾಗಿ ಜೊತೆಯಾಗುತ್ತಾರೆ.
ಭಾರತಿ ಮತ್ತು ಜಯಂತಿ ಅಭಿನಯ ಚೆನ್ನಾಗಿದೆ.
ನಾಗಪ್ಪ ಖಳನಾಗಿದ್ದಾರೆ
ಚೇತನ್ ರಾಮರಾವ್, ಭಟ್ಟಿ ಮಹದೇವಪ್ಪ, ಶಾಂತಮ್ಮ, ಪ್ರಭಾಕರ್, ಜ್ಯೋತಿ ಲಕ್ಷ್ಮಿ, ಕುಪ್ಪುರಾಜ್, ರಮಾ, ಮತ್ತು ಬೇಬಿ ರಾಣಿ ಇದ್ದಾರೆ.
ದ್ವಾರಕೀಶ್ ಚಿತ್ರದುದ್ದಕ್ಕೂ ರಾಜಕುಮಾರ್ ಪಾತ್ರಕ್ಕೆ ಜೊತೆಯಾಗಿದ್ದಾರೆ.
ಕುತೂಹಲಭರಿತ ಚಿತ್ರವಿದು.. ಇದರ ಕಥೆಯನ್ನು ಹೇಳಿದರೆ ಸ್ವಾರಸ್ಯ ಇರೋಲ್ಲ.. ಹಾಗಾಗಿ ಚಿತ್ರದ ಬಗ್ಗೆ ಹೆಚ್ಚು ಬರೆಯೋಕೆ ಹೋಗಿಲ್ಲ.. ಚಿತ್ರ ನೋಡಿ ಖುಷಿ ಪಡಿ..












