ಇಲ್ಲಿ ನಾಯಕನ ಹೆಸರೇ ಚಿತ್ರದ ಪಾತ್ರಧಾರಿ ಹೆಸರೂ ಕೂಡ..
ಕೊಟ್ಟಾರಕರ್ ಅವರ ರಚಿಸಿದ ಕಥೆಯನ್ನು ಪರಿಣಾಮಕಾರಿಯಾದ ಚಿತ್ರಕತೆಯನ್ನಾಗಿ ರೂಪಿಸಿದ್ದು ವಿ ಸೋಮನಾಥನ್.
ಆ ಚಿತ್ರಕತೆಯನ್ನು ಅಚ್ಚುಕಟ್ಟಾಗಿ ನಿರ್ಮಿಸಿ ನಿದೇಶಿಸಿದ್ದು ಆರ್ ರಾಮಮೂರ್ತಿ ಶ್ರೀ ರಾಮ ಎಂಟರ್ಪ್ರೈಸ್ ಲಾಂಛನದಲ್ಲಿ.
ನಾಯಕಿ ರಾಜಕುಮಾರ್ ಅವರ ಅನೇಕಾನೇಕ ಚಿತ್ರಗಳಲ್ಲಿ ಪಾತ್ರವಹಿಸಿದ್ದ ಮುದ್ದು ಮುಖದ ರಾಜಶ್ರೀ.. ಸಹನಾಯಕಿಯಾಗಿ ಪ್ರೇಮಲತಾ..
ದಿನೇಶ್ ಮತ್ತೊಮ್ಮೆ ಇಲ್ಲಿ ಖಳನ ಪಾತ್ರಧಾರಿ.. ಆದರೆ ಅವರಿಗೆ ಸಿಗುತ್ತಿದ್ದ ಪಾತ್ರಗಳು ವಿಶೇಷ.. ಇಲ್ಲಿ ಹಿತವಾಗಿ ಮಿತವಾಗಿ ಮಾತಾಡಿದ್ದಾರೆ.. ಖಳಛಾಯೆ ಇಲ್ಲದ ಪಾತ್ರ.. ಆದರೆ ಸಾಂದರ್ಭಿಕವಾಗಿ ಅಂತ್ಯದಲ್ಲಿ ತಮ್ಮ ವಿರಾಟ್ ರೂಪ ತೋರಿಸುತ್ತಾರೆ.
ಗೋಮುಖ ವ್ಯಾಘ್ರನಾಗಿ ಅಶ್ವಥ್.. ಪರಿಣಾಮಕಾರಿ ಅಭಿನಯ. ಈತ ಹೆಣ್ಣುಮಕ್ಕಳಿಗೆ ಕರುಣಾಮಯಿ ತಂದೆಯಾಗಿ.. ಅತ್ತ ಕಡೆ ವ್ಯಾಘ್ರನಾಗಿ ಸಮಾಜಘಾತುಕ ಶಕ್ತಿಯ ತಂಡದೊಳಗೆ.. ವಿಭಿನ್ನ ಅಭಿನಯ.. ಮನಸ್ಸಿನ ತೊಳಲಾಟ. ಎಲ್ಲವನ್ನೂ ಸೊಗಸಾಗಿ ಅಭಿನಯಿಸಿದ್ದಾರೆ
ರಂಗ ಸುಂದರನಾಗಿ ಕಾಣೋದಷ್ಟೇ ಅಲ್ಲದೆ.. ಅವರ ಧ್ವನಿ ಇಷ್ಟವಾಗುತ್ತದೆ.. ಪೈಲಟ್ ಆಗಿ ಕೆಲವು ದೃಶ್ಯಗಳಲ್ಲಿ ಕಾಣುವ ಅವರು ಮುದ್ದಾಗಿ ಕಾಣುತ್ತಾರೆ
ಪ್ರೇಮಲತಾ ಮಿತವಾದ ಅವಕಾಶದಲ್ಲಿ ಕಾಣುತ್ತಾರೆ
ಜಯಶ್ರೀ ಖಡಕ್ ತಾಯಿಯಾಗಿ, ಹಾಗೆ ಮಮತಾಮಯಿ ಪ್ರೇಮಿಯಾಗಿ ಸೊಗಸಾಗಿದ್ದಾರೆ. ಅವರ ಅಭಿನಯವೇ ಚಿತ್ರದ ಆರಂಭಕ್ಕೆ ಚಾಲನೆ ನೀಡುವುದು.. ಮನೆಯ ಶಿಕ್ಷಣ ತಾಯಿಯಿಂದ ಶುರು ಎನ್ನುವ ಮಾತಿನಂತೆ ಮನಸೆಳೆಯುತ್ತಾರೆ
ಸೇನೆಯ ಮೇಜರ್ ಆಗಿ ಬರೀ ಹಿನ್ನೆಲೆಯ ಧ್ವನಿಯಲ್ಲಿ ರಾಜಕುಮಾರ್ ಅವರ ಗಂಭೀರ ಧ್ವನಿ ಇಷ್ಟವಾಗುತ್ತದೆ. ತನ್ನ ಮಕ್ಕಳನ್ನು ಯಾವ ರೀತಿ ಬೆಳೆಸಬೇಕು.. ಹೇಗೆ ದೇಶಭಕ್ತರನ್ನಾಗಿ ಮಾಡಬೇಕು ಎಂದು ಚುಟುಕಾಗಿ ಹೇಳುವ ಅವರ ಮಾತುಗಳು ಇಷ್ಟವಾಗುತ್ತದೆ.
ಉಳಿದಂತೆ ಸಹನಟರಾಗಿ ಭಟ್ಟಿ ಮಹದೇವಪ್ಪ ಗಮನಸೆಳೆಯುತ್ತಾರೆ .. ಖಳನ ಸಹಪಡೆಯಲ್ಲಿ ನಾಗಪ್ಪ ಇದ್ದಾರೆ. ರಾಮಚಂದ್ರ ಶಾಸ್ತ್ರೀ ಬಂದು ಹೋಗುತ್ತಾರೆ. ಜೋಕರ್ ಶ್ಯಾಮ್ ಇದ್ದಾರೆ. ಗಣಪತಿ ಭಟ್ ಪುಟ್ಟ ಪಾತ್ರದಲ್ಲಿ ಬಂದು ಹೋಗುತ್ತಾರೆ.
ಕೆಲವು ಹಾಸ್ಯ ದೃಶ್ಯಗಳಲ್ಲಿ ದ್ವಾರಕೀಶ್ ನಗಿಸುತ್ತಾರೆ .. ಇದೊಂದು ರಾಜಕುಮಾರ್ ಅವರ ಮುಂದಿನ ಚಿತ್ರಗಳ ದಿಕ್ಸೂಚಿ ತೋರಿಸುತ್ತದೆ ಎಂದರೆ ತಪ್ಪಿಲ್ಲ.. ಕಾರಣ ರಾಜಕುಮಾರ್ ಅವರ ಹಾಸ್ಯ ಶಕ್ತಿಯ ಪ್ರತಿಭೆ ಇಲ್ಲಿ ತೆರೆಗೆ ಬಂದಿದೆ.
ಚಿತ್ರದ ಆರಂಭದಲ್ಲಿ ಹೆಸರುಗಳನ್ನ ತೋರಿಸುವ ವಿಭಿನ್ನ ರೀತಿ .. ಪ್ರತಿ ಕಲಾವಿದರಷ್ಟೇ ಅಲ್ಲದೆ ತೆರೆಮರೆಯ ಸಿಬ್ಬಂದಿ, ತಂತ್ರಜ್ಞರು, ಸಂಗೀತ ನಿರ್ದೇಶಕರು, ಛಾಯಾಗ್ರಾಹಕರು, ಸಂಕಲನ, ಸಾಹಿತ್ಯ ಹೀಗೆ ಎಲ್ಲಾ ವಿಭಾಗದವರ ಚಿತ್ರಗಳನ್ನು ತೋರಿಸುತ್ತಾರೆ. ಇದೊಂದು ಉತ್ತಮ ಪ್ರಯತ್ನ ಯಾಕೆ ಎಂದರೆ ನಾಯಕ ನಾಯಕಿ ಮತ್ತಿತರ ಕಲಾವಿದರನ್ನಷ್ಟೇ ಗುರುತಿಸುವ ಚಿತ್ರರಸಿಕರ ಗಮನಕ್ಕೆ
ಉಳಿದವರ ಚಿತ್ರಪಟಗಳನ್ನು ನೋಡಿದಾಗ ಅರೆ ಇವರು.. ಅರೆ ಇವರನ್ನು ನೋಡಿದ್ದೇನೆ ಅಂತ ಅನಿಸುತ್ತದೆ. ಇದು ತಂತ್ರಜ್ಞರನ್ನು ಗುರುತಿಸುವ ಒಂದು ಉತ್ತಮ ಪ್ರಯತ್ನ.
ಹಾಡುಗಳನ್ನು ಸಂಭಾಷಣೆಗಳನ್ನು ಚಿ ಉದಯಶಂಕರ್ ರಚಿಸಿದ್ದಾರೆ
ಸಂಗೀತ ಸತ್ಯಂ ಅವರದ್ದು
ಛಾಯಾಗ್ರಹಣ ಬಿ ದೊರೈರಾಜ್
ಗಾಯನ.. ಅರೆ ಹೌದು ರಾಜಕುಮಾರ್ ಅವರ ಪಾತ್ರಕ್ಕೆ ಉದಯೋನ್ಮುಖ ಗಾಯಕ ಎಸ್ ಪಿ ಬಾಲಸುಬ್ರಮಣ್ಯಂ ಅವರು ಧ್ವನಿ ನೀಡಿದ್ದಾರೆ.. ಹಿಂದಿನ ಕೆಲವು ಚಿತ್ರಗಳಲ್ಲಿ ಎಸ್ ಪಿ ಅವರ ಧ್ವನಿ ಹಾಡಿನ ಕೆಲವು ಭಾಗಕ್ಕೆ ಮೀಸಲಾಗಿದ್ದರೇ ಈ ಹಾಡಿನಲ್ಲಿ ಪೂರ್ಣಪ್ರಮಾಣದಲ್ಲಿ ಎಸ್ಪಿಬಿ ಧ್ವನಿ ಸೇರಿದೆ.
"ಇಲ್ಲಿ ಆಡುವ ಮಾತು ಕನ್ನಡ.. " ಇದೆ ಆ ಹಾಡು
ಉಳಿದಂತೆ ಪಿ ಸುಶೀಲ, ಎಸ್ ಜಾನಕೀ, ಪಿ ಶ್ರೀನಿವಾಸ್ ಉಳಿದ ಹಾಡುಗಳಿಗೆ ಧ್ವನಿ ನೀಡಿದ್ದಾರೆ.
ಸಾಹಸಮಯ ಚಿತ್ರವಾದರೂ, ಭಾವನೆಗಳಿಗೆ ಉತ್ತಮ ಅವಕಾಶವಿದೆ.
ರಾಜಕುಮಾರ್ ಬಗ್ಗೆ ಹೇಳಲೇ ಇಲ್ಲ ಅಂದೀರಾ.. ಇಡೀ ಚಿತ್ರ ಅವರ ಮೇಲೆ ನಿಂತಿದೆ.. ತಾಯಿ ಪ್ರೇಮ, ತಮ್ಮನ ಮೇಲೆ ಅಭಿಮಾನ, ತಾನು ಪ್ರೀತಿಸುವ ಹುಡುಗಿಯ ಮೇಲೆ ಪ್ರೇಮ, ಮಮತೆ.. ತನ್ನ ಮಾವನಾಗಬೇಕಾದವರು ದೇಶದ ವಿರುದ್ಧ ಕೆಲಸ ಮಾಡುವ ಗ್ಯಾಂಗ್ ಅಂತ ಗೊತ್ತಾದಮೇಲೆ ಅದನ್ನು ನಿಷ್ಕಾರುಣವಾಗಿ ದೂರ ಮಾಡುವ ಮಾತುಗಳು... ಸಿ ಐ ಡಿ ಪಾತ್ರಕ್ಕೆ ಬೇಕಾದ ಚಾಕಚಕ್ಯತೆ, ಆ ಮುಖಭಾವ.. ಖಡಕ್ ಮಾತುಗಳು ಎಲ್ಲವೂ ಮಸ್ತ್ ಇದೆ.
ದಶಾವತಾರದಂತೆ ಭಿನ್ನ ವಿಭಿನ್ನ ವೇಷಧಾರಿಯಾಗಿ ಚಿತ್ರದುದ್ದಕ್ಕೂ ಮಿಂಚುತ್ತಾರೆ.
ರಾಜಕುಮಾರ್ ಇಡೀ ಚಿತ್ರವನ್ನು ಹಲವಾರು ಚಿತ್ರಗಳಲ್ಲಿ ಮಾಡಿದಂತೆ ತಮ್ಮ ಹೆಗಲ ಮೇಲೆ ಹೊತ್ತು ನಿಭಾಯಿಸಿದ್ದಾರೆ.
ಇಂದು ದಿನಾಂಕ ಹನ್ನೆರಡು ಏಪ್ರಿಲ್.. ಚಿತ್ರಲೋಕವನ್ನು ಬಿಟ್ಟು ಗಂಧರ್ವ ಲೋಕವನ್ನು ಸೇರಿದ ದಿನ.. ಇಪ್ಪತ್ತು ವಸಂತಗಳು ಕಳೆದಿವೆ.. ಅವರ ಮ್ಯಾಜಿಕ್, ಅವರ ಚಿತ್ರಗಳ ಮೇಲಿನ ಮೋಹ ಎಲ್ಲವೂ ಮುಂದುವರೆದಿದೆ..
ಯುಗದಲ್ಲಿ ಒಮ್ಮೆ ಮಾತ್ರ ಈ ರೀತಿಯ ಪಾತ್ರ ಆ ಬ್ರಹ್ಮನಿಗೆ ಸೃಷ್ಟಿಸಲು ಸಾಧ್ಯ

No comments:
Post a Comment