Monday, June 1, 2020

ಕರುಣೆ ಇದ್ದಾಗ ಕುಟುಂಬ ಎಂದಿಗೂ ಐಸಿರಿ ತುಂಬಿದ ಕುಟುಂಬ - ಕರುಣೆಯೇ ಕುಟುಂಬದ ಕಣ್ಣು (1962) (ಅಣ್ಣಾವ್ರ ಚಿತ್ರ ೩೦ / ೨೦೭)

ಅಣ್ಣ ಅಶ್ವಥ್ ಹೇಳಿದ್ದು ವಾಕ್ಯ.. ಅತ್ತಿಗೆ ಆದವಾನಿ ಲಕ್ಷ್ಮೀದೇವಿ ಹೇಳಿದ್ದು ವೇದವಾಕ್ಯ ಉದಯಕುಮಾರ್ ಪಾತ್ರಧಾರಿಗೆ.. ಅವರು ಹೇಳಿದ್ದನ್ನು ಚಾಚು ತಪ್ಪದೆ ಪಾಲಿಸುವ ತಮ್ಮ ಹೀಗೆ ಸುಂದರ ಕುಟುಂಬ ಹೇಗೆ ಅಸೂಯೆ, ಹೊಟ್ಟೆ ಉರಿಯಿಂದ ತೊಂದರೆಗೀಡಾಗುತ್ತದೆ.. ಎನ್ನುವ ಅಂಶ ಸೊಗಸಾಗಿ ಮೂಡಿಸಿದ್ದಾರೆ.

ಉದಯಕುಮಾರ್ ಮಡದಿಯ ಪಾತ್ರಧಾರಿ ಜಯಶ್ರೀ ಆ ಹೊಟ್ಟೆ ಉರಿ, ಅಸೂಯೆ ದೆಸೆಯಿಂದ ತನ್ನ ಮಗ ರಾಜ್ ಕುಮಾರನನ್ನು ಉಡಾಳನನ್ನಾಗಿ ಬೆಳೆಸುತ್ತಾರೆ.. ಕುಮಾರ ಪಾತ್ರದಲ್ಲಿ ರಾಜಕುಮಾರ್ ಅದ್ಭುತವಾಗಿ ನಟಿಸಿದ್ದಾರೆ. ಆತ ಬೆಳೆದ ಹಾಗೆ ದುಶ್ಚಟಗಳು ಬೆಳೆಯುತ್ತವೆ. ಆಕೆಯ ಮತ್ಸರಗುಣ ಈತನಿಗೂ ಬರುತ್ತದೆ,

ಮದುವೆಯಾದರೆ ಸರಿ ಹೋಗಬಹುದು ಎನ್ನುವ ಮಾತಿನಂತೆ ರಾಜ್ ಕುಮಾರನಿಗೆ ಲೀಲಾವತಿಯನ್ನು ಮದುವೆ ಮಾಡಿಸುತ್ತಾರೆ. ಆದರೆ ದುಶ್ಚಟಗಳಿಗೆ ದಾಸನಾಗಿರುವ ಈತ.. ತನ್ನ  ಗೆಳೆಯ ಬಾಲಕೃಷ್ಣ, ರಾಜ್ ಕುಮಾರನ  ಹಾದಿ ತಪ್ಪಿಸುವ ಪಾತ್ರದಲ್ಲಿ ಹುಡುಗಿಯ ಪರಿಚಯ ಮಾಡಿಕೊಡುತ್ತಾನೆ. ಜೊತೆಗೆ ಆಕೆಯನ್ನು ನಾಯಕಿಯನ್ನಾಗಿಯೂ, ರಾಜ್ ಕುಮಾರನನ್ನ ನಾಯಕನ್ನಾಗಿ ಚಿತ್ರ ಮಾಡುತ್ತೀನಿ ಅದಕ್ಕೆ  ಒಂದಷ್ಟು ಹಣ ಬೇಕು ಎಂದು ಪುಸಲಾಯಿಸುತ್ತಾನೆ.

ಮನೆಯಲ್ಲಿ ದುಡ್ಡು ಕೇಳಿದರೆ ಮಂಗಳಾರತಿಯಾಗುತ್ತದೆ ಎಂದು ತಿಳಿದು ಪತ್ನಿಯ ಸರವನ್ನು ಕದ್ದು, ಮಾರ್ವಾಡಿ ಅಂಗಡಿಯಲ್ಲಿ ಬಾಲಕೃಷ್ಣನ ಮೂಲಕ ಒತ್ತೆ ಇಟ್ಟು.. ಆ ದುಡ್ಡು ಅಶ್ವಥ್ ಅವರಿಗೆ ತುರ್ತು ಬೇಕಾಗಿದೆಯೆಂದು ನಂಬಿಸಿ, ದುಡ್ಡನ್ನು ಹೊತ್ತೊಯ್ಯುತ್ತಾರೆ..

ಈ ವಿಷಯ ಹೇಗೋ ಉದಯಕುಮಾರ್ ಅವರಿಗೆ ತಿಳಿದು, ಅಣ್ಣನ ಮೇಲೆ ಬೇಸರಗೊಂಡು, ಹೀಯಾಳಿಸಿ ಕಳಿಸುತ್ತಾರೆ.. ಅತ್ತಿಗೆ ಪಾತ್ರಧಾರಿ ಆದವಾನಿ ಲಕ್ಷ್ಮೀದೇವಿ ತನ್ನ ಮೈದುನ ಅಪರಂಜಿ ಎಂದೇ ಹೇಳಿ.. ಏನೋ ಕೆಟ್ಟ ಘಳಿಗೆ ಎಂದು ಸುಮ್ಮನಾಗುತ್ತಾಳೆ..

ಇತ್ತ ಕೆಟ್ಟ ಹಾದಿ ತುಳಿದಿದ್ದ ಮಗ.. ದುಡ್ಡು ಬೇಕು ಎಂದು ಮನೆಯಲ್ಲಿ ಪಾಲು ಕೇಳುವಂತೆ ತನ್ನ ಅಪ್ಪನನ್ನು ಪ್ರಚೋದಿಸಿ ಒಂದಾಗಿದ್ದ ಮನೆಯನ್ನು ಒಡೆಯುತ್ತಾನೆ.

ಆದರೆ ಆದವಾನಿ ಲಕ್ಷ್ಮೀದೇವಿ ತನ್ನ ಪತಿ ವಂಶದವರು ಬಾಳಿ ಬದುಕಿದ ಮನೆಯನ್ನು ಒಡೆಯಬಾರದು ಎಂದು ತಮ್ಮ ತೋಟದ ಮನೆಗೆ ಹೋಗುತ್ತಾರೆ.

ದುಶ್ಚಟ ಹೆಚ್ಚಾಗಿ, ಅದಕ್ಕೆ ದುಡ್ಡಿಲ್ಲದೆ ಹೋದಾಗ, ಬಾಲಕೃಷ್ಣ ತನ್ನ ಗೆಳೆಯನ ಕೈ ಬಿಡುತ್ತಾರೆ .. ಆ ಗುದ್ದಾಟದಲ್ಲಿ ಏಟಾಗಿ ಮನೆಗೆ ಬರುವ ಕುಮಾರ್, ಆರೋಗ್ಯ ಹದಗೆಟ್ಟು ಕಣ್ಣು ಹೋಗುತ್ತದೆ.

ಮೆಲ್ಲನೆ ತನ್ನ ತಪ್ಪಿನ ಅರಿವಾಗಿ ಮತ್ತೆ ಎಲ್ಲರನ್ನು ಒಂದುಗೂಡಿಸುವ ಪ್ರಯತ್ನಕ್ಕೆ ಸಹಕರಿಸುವುದು ಅಶ್ವಥ್ ಅವರ ಮಗ ರಾಜಾಶಂಕರ್.. ಕಡೆಗೆ ಎಲ್ಲವೂ ಸುಖಾಂತ್ಯವಾಗುತ್ತದೆ.. ಅಣ್ಣ ಅಶ್ವಥ್ ಮತ್ತು ಉದಯಕುಮಾರ್ ಅವರ ಸಂಸಾರ ಒಟ್ಟಿಗೆ ಬಾಳುತ್ತದೆ..

ಇಷ್ಟೆಲ್ಲಾ ಬವಣೆಗಳಿದ್ದರೂ ಎಲ್ಲವನ್ನು ಸಹಿಸಿಕೊಂಡು ಸಂಸಾರ ಮಾಡುವ ಆದವಾನಿ ಲಕ್ಷ್ಮೀದೇವಿ ಪಾತ್ರಕ್ಕೆ ಧರ್ಮದೇವತೆ ಎನ್ನುತ್ತಾರೆ.. ಅದೇ ಈ ಚಿತ್ರದ ತಳಹದಿ..

ಈ ಚಿತ್ರ ತುಂಬಾ ಸರಳವಾಗಿದೆ.. ಹಾಗಾಗಿ ಚಿತ್ರದ ಮೂಲ ಕತೆಯನ್ನು ಹೇಳಿ ನಂತರ ಚಿತ್ರದ ವಿಶೇಷವನ್ನು ಹೇಳುವ ಅಭಿಲಾಷೆ ನನ್ನದು.


ಕೆಲವು ಕರುಣಾರಸ ತುಂಬಿರುವ ಚಿತ್ರಗಳಲ್ಲಿ ಉದಾತ್ತ ಮನೋಭಾವ ತೋರಿಸುತ್ತಾ ಇರುವಂತೆ ಈ ಅತ್ತಿಗೆ ಪಾತ್ರವನ್ನು ಚಿತ್ರಿಸಿಲ್ಲ ಅದೇ ವಿಶೇಷತೆ ಈ ಚಿತ್ರದ್ದು.. ಎಲ್ಲಾ ಪಾತ್ರಗಳನ್ನು ನೈಜವಾಗಿಯೇ ಅಭಿನಯಿಸುವಂತೆ ನೋಡಿಕೊಂಡಿದ್ದಾರೆ ನಿರ್ದೇಶಕರು.

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗುತ್ತದೆಯೇ ಎನ್ನುವ ಸಾರಾಂಶದ ಮೇಲೆ ಈ ಕತೆ ನಿಂತಿದೆ..

 ಕನ್ನಡ ಚಲನ ಚಿತ್ರರಂಗದಲ್ಲಿ ಮೊದಲ ಬಾರಿಗೆ ಕಾದಂಬರಿಯನ್ನು ಆಧರಿಸಿದ ಚಿತ್ರವಿದು. ಶ್ರೀ ಕೃಷ್ಣಮೂರ್ತಿ ಪುರಾಣಿಕ್ ಅವರ ಧರ್ಮದೇವತೆ ಕಾದಂಬರಿಯನ್ನು ಆಧರಿಸಿ ಈ ಚಿತ್ರ ತಯಾರಿಸಲಾಗಿದೆ.




ಶೈಲಶ್ರೀ ಪ್ರೊಡಕ್ಷನ್ಸ್ ಅವರ ಮೊದಲ ಕಾಣಿಕೆಯಿದು. ಸಂಭಾಷಣೆ ಚಿ ಸದಾಶಿವಯ್ಯನವರು ರಚಿಸಿದ್ದ್ದಾರೆ. ಹಾಡುಗಳನ್ನು ಕಣಗಾಲ್ ಪ್ರಭಾಕರ್ ಶಾಸ್ತ್ರೀ ರಚಿಸಿದ್ದಾರೆ. ಸಂಗೀತ ಜಿ ಕೆ ವೆಂಕಟೇಶ್. ಬಿ ದೊರೈರಾಜ್ ಅವರ ಛಾಯಾಗ್ರಹಣ..  ಅವರ ಗೆಳೆಯ ಭಗವಾನ್  ಸಹ ನಿರ್ದೇಶಕರು

ಈ ಚಿತ್ರದ ಕ್ಯಾಪ್ಟನ್ ಟಿ ವಿ ಸಿಂಗ್ ಠಾಕೂರ್.

ರಾಜ್ ಕುಮಾರ್ ಪ್ರಪ್ರಪಥಮ ಬಾರಿಗೆ ತೆರೆಯ ಮೇಲೆ ಧೂಮಪಾನ ಮಾಡುವ ದೃಶ್ಯಗಳಿವೆ. ಸಿಗರೇಟ್ ಹಚ್ಚಿಕೊಳ್ಳುವುದು, ಹೊಗೆಬಿಡುವುದು, ಅದರ ಹಾವಭಾವ ಎಲ್ಲವನ್ನು ಎಷ್ಟು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ ... ರೋಷದಲ್ಲಿ ಕೂಗುವುದಾಗಲಿ, ಅಪ್ಪನನ್ನು ಹೀಯಾಳಿಸಿ ಮಾತಾಡುವುದು, ಅಮ್ಮನಿಗೆ ಟೋಪಿ ಹಾಕುವಂತಹ ಮರುಳು ಮಾತುಗಳು, ಬಾಲಣ್ಣನ ಜೊತೆ ತಮಾಷೆಯ ಮಾತುಗಾರಿಕೆ ಜೊತೆಯಲ್ಲಿಯೇ ಹಣಕಾಸಿನ ವಿಚಾರದಲ್ಲಿ ಲಘುವಾಗಿ ಮಾತಾಡುವ ಅಭಿನಯ.. ಒಂದು ಕಡೆಯಾದರೆ.. ಕಡೆಯಲ್ಲಿ ತನ್ನ ಅವಿವೇಕದ ವರ್ತನೆಯಿಂದ ಮನೆಯನ್ನು ಇಬ್ಭಾಗ ಮಾಡಿದ್ದಕ್ಕಾಗಿ, ತನ್ನ ತಪ್ಪು ನೆಡೆಗಳು ಮನೆಯನ್ನು, ಮನೆತನವನ್ನು ಹಾಳು ಮಾಡಲು ಕಾರಣವಾಗಿದ್ದು ತಾನೇ ಎಂದು ಹಲುಬುವುದು ಮತ್ತೆ  ಮಾಡಲು ಪಶ್ಚಾತಾಪ ಪಡುವ ಪಾತ್ರದಲ್ಲಿ ಅಕ್ಷರಶಃ ತುಂಬಿ ನಟಿಸಿದ್ದಾರೆ.





ಅಶ್ವಥ್ ಮತ್ತು ಆದವಾನಿ ಲಕ್ಷ್ಮೀದೇವಿ ತಾಳ್ಮೆ, ಪ್ರೀತಿ, ಮಮಕಾರಗಳ ಪ್ರತೀಕವಾಗಿ ನಟಿಸಿದ್ದಾರೆ.
ಉದಯಕುಮಾರ್ ಮತ್ತು ಜಯಶ್ರೀ ಅಸೂಯೆ, ಅನುಮಾನ ಉಳ್ಳ ದಂಪತಿಗಳಾಗಿ ಸೊಗಸಾದ ಅಭಿನಯ ನೀಡಿದ್ದಾರೆ.



ಸಮಯಮದ ಪಾತ್ರದಲ್ಲಿ ಲೀಲಾವತಿ, ರಾಜಾಶಂಕರ್, ಹರಿಣಿ ಮನಸೆಳೆಯುತ್ತಾರೆ.




ಮುದ್ದಾಗಿ ಕಾಣುವ ರಾಜಶ್ರೀ ಮತ್ತಿತರರು  ಅಭಿನಯ ನೀಡಿದ್ದಾರೆ

ಆರಂಭದ ಕೆಲವು ದೃಶ್ಯಗಳಲ್ಲಿ ಹಾಸ್ಯ ತುಂಬಿರುವ ನರಸಿಂಹರಾಜು ಮತ್ತು ಬಾಲಕೃಷ್ಣ ನಗುವನ್ನು ಅರಳಿಸುತ್ತಾರೆ. .



ಅತೀ  ಗಮನ ಸೆಳೆಯುವ ಸಂಭಾಷಣೆ ಎಂದರೆ..

ಯಾವ ಕತೆ.. ಹೇಗೆ ಕತೆ ಎಂಬ ನರಸಿಂಹರಾಜು ಅವರ ಪ್ರಶ್ನೆಗೆ ಬಾಲಣ್ಣ ಹೇಳುವ ಉತ್ತರ..

"ರಾಮ ಲಕ್ಷ್ಮಣ ಸೀತೆ ಅಂದರೆ ಪೌರಾಣಿಕ"
"ರಾಮ್ಯ, ಲಕ್ಯ, ಸೀತಮ್ಮ ಅಂದರೆ ಸಾಮಾಜಿಕ"
"ರಾಮ್ ಸಿಂಗ್, ಲಕ್ಷ್ಮಣ್ ಸಿಂಗ್, ಸೀತಾ ಭಾಯಿ ಅಂದರೆ ಐತಿಹಾಸಿಕ"
"ರಾಮ್ ಕಪಾಲಿ, ಲಕ್ಷ್ಮಣ್ ಚಂಡಿ, ಸೀತಾ ಮೋಹಿನಿ ಅಂದರೆ ಜಾನಪದ"

ಇಷ್ಟೇ ಕಣೋ ಎನ್ನುತ್ತಾ ಸಮಜಾಯಿಸಿ ನೀಡುವ ಈ ಸಂಭಾಷಣೆ ಬಲು ಇಷ್ಟ!

ಬಾಲಣ್ಣ ನಾನು ತೆಗೆಯುವ ಚಿತ್ರಗಳು  ವಾರಗಳು ಓಡುತ್ತವೆ ಕಣೋ ಎಂದಾಗ ನರಸಿಂಹರಾಜು
ಹೌದು ಶುಕ್ರವಾರ, ಶನಿವಾರ, ಭಾನುವಾರ ಓಡುತ್ತದೆ ಎನ್ನುತ್ತಾರೆ..

ತಿಳಿ ಹಾಸ್ಯಗಳು ಚಿತ್ರದ ಓಟಕ್ಕೆ ಸಾತ್ ನೀಡುತ್ತಿದ್ದವು..

ಸಾಂಸಾರಿಕ ಚಿತ್ರವಾದ ಕರುಣೆಯೇ ಕುಟುಂಬದ ಕಣ್ಣು ಚಿತ್ರ ಒಳಗಿನ ಕಣ್ಣನ್ನು ತೆರೆಯಲು ಸಹಾಯ ಮಾಡುತ್ತದೆ.

ಇನ್ನೊಂದು ಚಿತ್ರದ ಮೂಲಕ ಬರೋಣ ಮತ್ತೆ.. !

1 comment: