Friday, December 1, 2023

ಅಲ್ಲಿಂದ ಶುರುವಾಯಿತು, ಪುಟ್ಟಣ್ಣ ಅವರ ಚಿತ್ರಗಾಥೆ..

ಖುರ್ಚಿಗಳಿಗೆ ಬ್ರಾಂಡ್ ಇರುತ್ತೆ.. ಆದರೆ ಬ್ರಾಂಡ್ ಹೆಸರೇ ಖುರ್ಚಿಗೆ ತಂದುಕೊಟ್ಟದ್ದು ಇವರ ಹೆಗ್ಗಳಿಕೆ.. 

ಯಾರು ಅಂತ ಗೊತ್ತಾಯ್ತೆ.. ನಿರ್ದೇಶಕರ ಸ್ಥಾನಕ್ಕೆ ತಾರಾ ಮೌಲ್ಯ ತಂದು ಕೊಟ್ಟು.. ನಿರ್ದೇಶಕನೇ ಹಡಗಿಗೆ ಕಪ್ತಾನ ಎಂದು ಚಿತ್ರ ಜಗತ್ತಿಗೆ ಪರಿಚಯಿಸಿದ, ಸಾರಿ, ಸಾರಿ ಹೇಳಿದ ಧೀಮಂತ ನಿರ್ದೇಶಕ ಶ್ರೀ ಶ್ರೀ ಶ್ರೀ ಪುಟ್ಟಣ್ಣ ಕಣಗಾಲ್.. 

ರಂಗನಾಯಕಿ ಚಿತ್ರದಲ್ಲಿ ಒಂದು ಸಂಭಾಷಣೆ ಇದೆ.. ರಾಜಾನಂದ್ ಅಂಬರೀಷ್ ಪಾತ್ರಕ್ಕೆ ಹೇಳುವ ಮಾತು

"ನಿನ್ನಂತಹ ಕೋಟಿ ಕೋಟಿ ಕಲಾವಿದರು ಬರಬೇಕು ರಾಮಣ್ಣ.. ಕಲಾವಿದರಿಗೂ ಮರ್ಯಾದೆ ಇದೆ ಘನತೆ ಇದೆ ಎಂದು ಎದೆ ತಟ್ಟಿ ಹೇಳಬೇಕು ಕಣೋ.. "

ಈ ಸಂಭಾಷಣೆ ಹೇಳುವಾಗ ರಾಜಾನಂದ್ ಅವರ ಮುಖಾಭಿನಯ, ಆ ಗತ್ತು, ಆ ಸಂಭಾಷಣೆ ವೈಖರಿ ಅಬ್ಬಬ್ಬಾ.. 

ಹೌದು.. ಪುಟ್ಟಣ್ಣ ಕಣಗಾಲ್ ಅವರ ಚಿತ್ರಗಳು ನನ್ನ ಮನಸ್ಸನ್ನು ಸೂರೆಗೊಳ್ಳುಲು ಶುರುವಾಗುವ ಹೊತ್ತಿಗೆ ಜಗನ್ಮಾತೆಯ ಕರೆಗೆ ಓ ಗೊಟ್ಟು ಈ ಭುವಿಯಿಂದ ಗಂಧರ್ವ ಲೋಕಕ್ಕೆ ತೆರಳಿದ್ದರು. 


ಆದರೆ ಅವರ ಉಪಾಸನೆ, ಸಾಕ್ಷತ್ಕಾರ, ಪಡುವಾರ ಹಳ್ಳಿ ಪಾಂಡವರು, ಧರ್ಮಸೆರೆ ಈ ಚಿತ್ರಗಳು ನನ್ನ ಮೇಲೆ ನಿಧಾನವಾಗಿ ಆವರಿಸುತ್ತಿದ್ದ ಪುಟ್ಟಣ್ಣ ಕಣಗಾಲ್ ಅವರ ಜಾದೂ ಕಡಿಮೆಯಾಗದೆ ಹೆಚ್ಚುತ್ತಾ ಹೋಗಿತ್ತು. ಮೆಲ್ಲನೆ ಅವರ ನಿರ್ದೇಶನದ ಕನ್ನಡ ಚಿತ್ರಗಳನ್ನು ನೋಡುತ್ತಾ ಬಂದೆ.. ಕಾಲಕಾಲಕ್ಕೆ ತಂತ್ರಜ್ಞಾನ ಬದಲಾದ ಹಾಗೆ, ಕ್ಯಾಸೆಟ್, ಸಿಡಿ ಇವೆಲ್ಲಾ ಹೋಗಿ ಈಗ ಇಂದ್ರಜಾಲ ಎನ್ನುವಂತೆ ಜಾಲತಾಣ ಬಂದಿದ್ದು ನನಗೆ ಮತ್ತೊಮ್ಮೆ ಮಗುದೊಮ್ಮೆ ಅವರ ಚಿತ್ರಗಳನ್ನು ಬೇಕಾದ ಹಾಗೆ, ಬೇಕಾದಷ್ಟು ಬಾರಿ, ಕೆಲವು ಫ್ರೇಮುಗಳನ್ನು ಮತ್ತೆ ಮತ್ತೆ ನೋಡುವ ಅವಕಾಶ ಒದಗಿ ಬಂತು. . ಅದರ ಪರಿಣಾಮ ಅವರ ೨೪ ಕನ್ನಡ ಚಿತ್ರಗಳನ್ನು ನೋಡಿ, ಅದರಿಂದ ನಾ ಕಲಿತ ಸಂದೇಶಗಳು, ಆ ಚಿತ್ರಗಳ ಹೂರಣ, ಇವನ್ನೆಲ್ಲ ಬಿಡಿಸುತ್ತಾ ಹೋಗುವ, ಬರೆಯುತ್ತ ಹೋಗುವ ತುಡಿತ ಶುರುವಾಯಿತು. 

ಒಂದು ಶುಭಮಹೂರ್ತದಲ್ಲಿ ಶುರು ಮಾಡಿಯೇ ಬಿಟ್ಟೆ.. ಆದರೆ ಅದಕ್ಕೆ ಚಿಮ್ಮು ಹಲಗೆಯಾಗಿದ್ದು ಕಣಗಾಲ್ ಊರಿಗೆ ಹೋಗಿ ಪುಟ್ಟಣ್ಣ ಹುಟ್ಟಿ ಬೆಳೆದ ಊರನ್ನು, ಮನೆಯನ್ನು ಅವರು ಆಡಿ ಬೆಳೆದಿದ್ದ ಅಂಗಳದಲ್ಲಿ ಕೂತು ಕೆಲವು ಕ್ಷಣಗಳನ್ನು ಕಳೆದು ನಂತರ ಪುಟ್ಟಣ್ಣ ಅವರ ತಮ್ಮ ನರಸಿಂಹ ಶಾಸ್ತ್ರಿಗಳನ್ನು ರಾಮನಾಥಪುರದಲ್ಲಿ ಕಂಡು ಮಾತಾಡಿಸಿ, ಅವರು  ನಿರರ್ಗಳವಾಗಿ  ಒಂದು ಘಂಟೆಗೂ ಮಿಗಿಲಾಗಿ  "ಬೆಳ್ಳಿ ಮೋಡ" ಚಿತ್ರದ ಪೂರ್ವ ಸಿದ್ಧತಾ ಅನುಭವಗಳನ್ನು ಕೇಳಿದಾಗ ಮೈ ಜುಮ್ ಎಂದಿದ್ದು ಇಂದಿಗೂ ಹಸಿರಾಗಿದೆ. 






ಅಲ್ಲಿಂದ ಶುರುವಾಯಿತು, ಪುಟ್ಟಣ್ಣ ಅವರ ಚಿತ್ರಗಾಥೆ..  

ಫಲಿತಾಂಶ ನೋಡಲು ಸಿಗಲಿಲ್ಲ. ಕಾರಣ ಆ ಚಿತ್ರದ ರೀಲುಗಳು ಅಗ್ನಿ ಆಕಸ್ಮಿಕದಲ್ಲಿ ಭಸ್ಮವಾಯಿತು ಅಂತ ಸ್ವತಃ ಆ ಚಿತ್ರದ ನಾಯಕ ಜೈ ಜಗದೀಶ್ ಒಂದು ಸಂದರ್ಶನದಲ್ಲಿ ಹೇಳಿದ್ದು ಕೇಳಿದ ಮೇಲೆ, ಆ ಚಿತ್ರವನ್ನು ನೋಡುವ ಆಸೆ ಬಿಟ್ಟು ಬಿಟ್ಟೆ. ಹೌದು ಅದೇ ಚಿತ್ರವನ್ನು ತೆಲುಗಿಗೆ ನನ್ನು ಪ್ರೇಮಿಂಚು ಎಂಬ ಹೆಸರಿನಲ್ಲಿ ಡಬ್ ಮಾಡಿದ್ದಾರೆ ಅಂತ ತಿಳಿದಾಗ, ಆಗಲಿ ತೆಲುಗು ಭಾಷೆಯಲ್ಲಿ ನೋಡಿದರಾಯ್ತು ಅಂತ ಬಹಳ ಹುಡುಕಾಡಿದೆ.. ಆದರೆ ತೆಲುಗು ಚಿತ್ರವೂ ಕೂಡ ಸಿಗಲಿಲ್ಲ.. ನೋಡೋಣ ಪುಟ್ಟಣ್ಣ ಕಣಗಾಲ್ ಅವರ ಒಂದು ಅದ್ಭುತ ಚಿತ್ರರತ್ನ ನೋಡುವ ಅವಕಾಶ ಖಂಡಿತ ಸಿಗಬಹುದು ಎನ್ನುವ ಆಸೆಯಿದೆ.. ಅದು ನನಸಾದಾಗ ಅದರ ಬಗ್ಗೆ ಬರೆಯುತ್ತೇನೆ. 

ಇಂದು ಅವರ ಜನುಮದಿನ.. ಸುಮಾರು ೯೦ ವರ್ಷಗಳ ಹಿಂದೆ ಬೆಳಿಗ್ಗೆ ಹಕ್ಕಿ ಶಕುನ ಹೇಳುವ ಬುಡಬುಡಕಿಯವರು ಕಣಗಾಲ್ ಹಳ್ಳಿಯ ಒಂದು ಬೀದಿಯಲ್ಲಿ ಸಾಲು ಸಾಲು ಮನೆಯ ಹಾದಿಯಲ್ಲಿ ಬಂದು ಒಂದು ಮನೆಯ ಮುಂದೆ ಡಮರುಗ ಜೋರಾಗಿ ನುಡಿಸುತ್ತಾ ರಾಗವಾಗಿ 

"ಹಾಲಕ್ಕಿ ನುಡಿತೈತೆ ಹಾಲಕ್ಕಿ ನುಡಿತೈತೆ"

ಬೆಳ್ಳಿಮೋಡದ ಮೇಲೆ ಕಾಣುತೈತೆ ಆ ಮಲ್ಲಮ್ಮನ ಪವಾಡ ಕಾಣುತೈತೆ ...  ಕಪ್ಪು ಬಿಳುಪು ಮನಸ್ಸು.. ಆ ಮಹಾತಾಯಿಗೆ ನೃತ್ಯ ಮಾಡುತ್ತಾ ... ಗೆಜ್ಜೆ ಪೂಜೆ ಮಾಡಿದಾಗ ಆ ಕರುಳಿನ ಕರೆಗೆ ಮನಸೋತು ಗರ್ಭವೆನ್ನುವ ಶರಪಂಜರದಿಂದ ಹೊರಗೆ ಪ್ರತಿಭೆ ಸಾಕ್ಷಾತ್ಕಾರವಾಗಿ ಬರುತೈತೆ ... ಬೆಳಗಲೇ  ಬೇಕು ಎಂಬ ಛಲ ಹೊತ್ತ ಸುಯೋಧನನ ಹಾಗೆ ನಾಗರಹಾವು ಮೂಡಿಸುವ ಛಲದ ಯಶಸ್ಸಿನ ಶಿಖರವೂ ಎಡಕಲು ಗುಡ್ಡದ ಮೇಲೆ ಇರಲಿ ಅದರಿಂದ ಎದೆಗುಂದದೆ ಚಲನ ಚಿತ್ರ ಮಾಧ್ಯಮದ ಉಪಾಸನೆ ಮಾಡುತ್ತಾ ಹಲವಾರು ಕಥೆಗಳನ್ನು ಓದಿ ಕಥಾಸಂಗಮ ಮಾಡುತ್ತಾ ಒಂದು ಮಹೂರ್ತದಲ್ಲಿ ಶುಭಮಂಗಳ ಹಾಡುತ್ತಾ.. ನಾಯಕ ಸಿನೆಮಾ ಪರದೆಯ ಮೇಲೆ ನಾಯಕಿಯನ್ನು ಬಿಳಿ ಹೆಂಡ್ತಿಯನ್ನು ಪ್ರೀತಿಸುವಷ್ಟೇ ಚಿತ್ರಮಾಧ್ಯಮವನ್ನು ಪ್ರೀತಿಸುವ ಈ ಮಗುವಿನ ಭವಿಷ್ಯದ ಫಲಿತಾಂಶ ಕಾಲೇಜು ರಂಗದಲ್ಲಿ ನಿರ್ದೇಶನ ಎಂಬ ವಿಶ್ವವಿದ್ಯಾಲಯದಲ್ಲಿ ಅನೇಕಾನೇಕ  ನಿರ್ದೇಶಕರ ಮಧ್ಯೆ ಉಳಿದುಕೊಳ್ಳುವವರು ಪಡುವಾರಹಳ್ಳಿ ಪಾಂಡವರು ಎನ್ನುವಂತೆ, ಅದ್ಭುತ ನಿರ್ದೇಶಕರ ಮಧ್ಯೆ ತಾನು ಹೊಳೆಯುತ್ತಾನೆ.. ಧರ್ಮಸೆರೆ ಎಂಬ ಪ್ರತಿ ಸಂಸ್ಕಾರವನ್ನು ತನ್ನ ಚಿತ್ರಗಳಲ್ಲಿ ತೋರಿಸುತ್ತಾ ರಂಗನಾಯಕಿಯಂತೆ ಧ್ರುವತಾರೆಯಾಗಿ ಬೆಳಗಗುತ್ತಾ, ತನ್ನ ಮನಸ್ಸು ಮಾನಸ ಸರೋವರದಲ್ಲಿರುವಂತೆ ಪ್ರಶಾಂತತೆಯಿಂದ ಕೂಡಿರುತ್ತದೆ .. ಧರಣಿ ಮಂಡಲ ಮಧ್ಯದೊಳಗೆ ಇದ್ದರೂ ಕೂಡ ತನ್ನದೇ ಅಮೃತ ಘಳಿಗೆಗೆ ಕಾಯುತ್ತಾ ಜಗನ್ಮಾತೆ ಋಣಮುಕ್ತಳು ಆಗುವ ವರವನ್ನು ಕೊಡುವಂತೆ  ತನ್ನದೇ ಭಾವವನ್ನು ಹುಡುಕುತ್ತಾ ಮಸಣದ ಹೂವು ಆಗುವ ತನಕ ಸ್ವರ್ಗಕ್ಕೆ ಸಾವಿರ ಮೆಟ್ಟಿಲು ಇರುವವರೆಗೂ ಕರುನಾಡೇ ಏಕೆ, ಇಡೀ ಪ್ರಪಂಚದ ಚಿತ್ರ ಜಗತ್ತು ಈ ಮಗುವಿನ ಕಡೆಗೆ ತಿರುಗಿ ನೋಡುವಂತೆ ಬೆಳೆಯುತ್ತಾನೆ .. ಬೆಳಗುತ್ತಾನೆ.. ಈ ಮಗುವಿಗೆ ನೀವು ಏನೇ ನಾಮಕರಣ ಮಾಡಿ.. ಚಿತ್ರಜಗತ್ತಿನಲ್ಲಿ ಇವರನ್ನು ಗುರುತಿಸುವುದು "ನಮ್ಮ ಪುಟ್ಟಣ್ಣ" ಅಂತಾನೇ!!!

ಬೆಳ್ಳಿ ಮೋಡ (1966)
ಮಲ್ಲಮ್ಮನ ಪವಾಡ (1969)
ಕಪ್ಪು ಬಿಳುಪು (1969)
ಗೆಜ್ಜೆ ಪೂಜೆ (1969)
ಕರುಳಿನ ಕರೆ (1970)
ಶರಪಂಜರ (1971)
ಸಾಕ್ಷಾತ್ಕಾರ (1971)
ನಾಗರ ಹಾವು (1972)
ಎಡಕಲ್ಲು ಗುಡ್ಡ ಮೇಲೆ (1973)
ಉಪಾಸನೆ (1974)
ಶುಭಮಂಗಳ (1975)
ಕಥಾ ಸಂಗಮ (1975)
ಬಿಳಿ ಹೆಂಡ್ತಿ (1975)
ಫಲಿತಾಂಶ (1976)
ಕಾಲೇಜು ರಂಗ (1976)
ಪಡುವಾರಹಳ್ಳಿ ಪಾಂಡವರು (1978)
ಧರ್ಮಸೆರೆ (1979)
ರಂಗನಾಯಕಿ (1981)
ಮಾನಸ ಸರೋವರ (1982)
ಧರಣಿ ಮಂಡಲ ಮಧ್ಯದೊಳಗೆ (1983)
ಋಣ ಮುಕ್ತಳು (1984)
ಅಮೃತ ಘಳಿಗೆ (1984)
ಮಸಣದ ಹೂವು (1984)
ಸಾವಿರ ಮೆಟ್ಟಿಲು (2006) 

ಚಿತ್ರಜಗತ್ತಿನಲ್ಲಿ ಪುಟ್ಟಣ್ಣ ಎನ್ನುತ್ತಾ ದೊಡ್ಡಣ್ಣನ ಸಾಧನೆ ಮಾಡಿರುವ ನಮ್ಮೆಲ್ಲರ ನೆಚ್ಚಿನ ಶ್ರೀ ಪುಟ್ಟಣ್ಣ ಕಣಗಾಲ್ ಅವರಿಗೆ ಜನುಮದಿನ ಶುಭಾಶಯಗಳು.. 

ಪುಟ್ಟಣ್ಣ ಸರ್ ಎಲ್ಲೇ ಏರಿ ಹೇಗೆ ಇರಿ ಈ ಕರುನಾಡಿನ ಚಿತ್ರಜಗತ್ತನ್ನು ಹರಸುತ್ತಾ ಇರಿ!!!

13 comments:

  1. Sooper write up sri 😊😊👌👌👍 class performance 👌hats off

    ReplyDelete
    Replies
    1. ಧನ್ಯವಾದಗಳು ಗುರುಗಳೆ

      Delete
  2. Mathe hutti banni puttanna sir..🙏🙏🙏

    ReplyDelete
  3. Srikanth u are superb macha

    ReplyDelete
  4. Tumba Chennagide Srikanth,, Lekhana Keep Writing ...Keep Sharing

    ReplyDelete
  5. Saroja suryanarayanaDecember 2, 2023 at 2:30 PM

    ಪುಟ್ಟಣ ಅವರ ಚಿತ್ರಗಾಥೆ ಬರಹ ತುಂಬಾ ಚೆನ್ಬಾಗಿದೆ ನಿನ್ನ ಬರಹಕ್ಕೆ ತುಂಬಾ ತುಂಬಾ ಧನ್ಯವಾದಗಳು.

    ReplyDelete
  6. Beautifully articulated Sri. Phalitamsha Telugina version nodoke sikkare Dayavittu nanagoo tilisi.

    ReplyDelete