Sunday, December 10, 2023

ಚಂದವಳ್ಳಿ ಎನ್ನುವ ಅದ್ಭುತ ಕಥಾನಕಚಂದವಳ್ಳಿಯ ತೋಟ (1964 (ಅಣ್ಣಾವ್ರ ಚಿತ್ರ ೪೮/೨೦೭)

ಸಾಮಾನ್ಯ ನಾ ಸಿನಿಮಾ ನೋಡಿ  ಬರೆಯುವ ಶೈಲಿ ಸಿನಿಮಾ ನೋಡಿ ಅದರ ಉತ್ತಮ / ಮಹತ್ತರ  ತುಣುಕುಗಳ ದೃಶ್ಯಗಳ ಚಿತ್ರಗಳನ್ನು ಹಾಕಿ ಅದರ  ಬಗ್ಗೆ ಬರೆಯುತ್ತಾ ಹಾಗೆ ಚಿತ್ರದ ಹೂರಣವನ್ನು ಬರೆಯುವುದು. 

ಆದರೆ ಈ ಚಿತ್ರದಲ್ಲಿ  ಪ್ರತಿ ದೃಶ್ಯಗಳು, ಪ್ರತಿ ಸಂಭಾಷಣೆ, ಪ್ರತಿ ಮುಖಭಾವ ಮುಖ್ಯವೇ ಆಗಿದೆ. ಇಡೀ ಚಿತ್ರದ ಪ್ರತಿ ಕ್ಷಣದ ತುಣುಕು ಹಾಕಬೇಕು. 

ನಾಲ್ಕು ದಶಕಗಳ ಹಿಂದೆ ಈ ಚಿತ್ರವನ್ನು ಟಿವಿಯಲ್ಲಿ ನೋಡಿದಾಗ ಕರುಳು ಚುರ್ ಎಂದಿತ್ತು.. ನಂತರದ ಹಲವಾರು ವರ್ಷಗಳಲ್ಲಿ ಅನೇಕ ಬಾರಿ ಹಾಗೆ ನೋಡಿದ್ದೇನೆ ಜೊತೆಗೆ ನೋಡಲೇಬೇಕು ಎಂದು ಹಠವಿಡಿದು ನೋಡಿದ್ದು ಇದೆ



ಈ ಚಿತ್ರ ಚೆನ್ನಾಗಿದೆ ಎಂದರೆ ಮನುಜನ ಕ್ರೂರವರ್ತನೆ ಚೆನ್ನಾಗಿದೆ ಎಂದ ಹಾಗೆ.. ಚೆನ್ನಾಗಿಲ್ಲ ಎಂದರೆ ನಮ್ಮ ಪ್ರಪಂಚ ಚೆನ್ನಾಗಿದೆ ಎಂದು ಸುಳ್ಳು ಸುಳ್ಳೇ ನಂಬಿದಂತೆ. ಒಂದು ರೀತಿಯ ವಿಚಿತ್ರ ಸ್ಥಿತಿ. 










ಈ ಸಿನೆಮಾದ ಬಗ್ಗೆ ರಾಜಕುಮಾರ್ ಅವರೇ ನನ್ನೊಳಗೆ ಬಂದು ಹೇಳಿದ ಹಾಗೆ ಅನುಭವ ... ಕಣ್ತೆರೆದು ನೋಡು ಎನ್ನುವ ಚಿತ್ರದ ನಿಜವಾದ ನಾಯಕ ಬಾಲಕೃಷ್ಣ  ಅಂತ ಹೇಳಿದ್ದ ಹಾಗೆ ಈ ಚಿತ್ರ ಕೂಡ  ಪ್ರಮುಖ ಪಾತ್ರಧಾರಿ ಉದಯಕುಮಾರ್ ಅವರಿಗೆ ಸೇರಿದ್ದು. ನಂತರದ ಭಾಗ ಮನೆಮುರುಕುತನ ಗುಣದ ಪಾತ್ರಧಾರಿಗಳು ಬಾಲಕೃಷ್ಣ, ಅಶ್ವಥ್ ನಾರಾಯಣ್,  ಪಾಪಮ್ಮ, ಆದವಾನಿ ಲಕ್ಷ್ಮೀದೇವಿ ಮತ್ತು ಬಸವರಾಜ್. 

ಇವರುಗಳು  ಅಭಿನಯಸಿಲ್ಲ ಬದಲಿಗೆ ತಾವೇ ಪಾತ್ರವಾಗಿದ್ದಾರೆ. 

ಮೊದಲ ಬಾರಿಗೆ ಈ ಸಿನಿಮಾ ನೋಡಿದಾಗ ಒಂದೆರಡು ದಿನ ಅದೇ ಗುಂಗಿನಲ್ಲಿದ್ದೆ, ನಂತರ ಪ್ರತಿ ಸಾರಿ ಈ ಸಿನೆಮಾ ನೋಡಿದಾಗ ಆ ಗುಂಗಿನಲ್ಲಿ ಮೂರು ನಾಲ್ಕು ದಿನ ಇರುವುದು ರೂಢಿಯಾಗಿಬಿಟ್ಟಿದೆ. 

ಚಂದವಳ್ಳಿ ಒಂದು ಕುಗ್ರಾಮ ಬಿಸಿಲು ನಾಡಿನ ಒಂದು ಪುಟ್ಟ ಹಳ್ಳಿ.. ಆ ಊರಿನಲ್ಲಿ ಬಿರು ಬಿಸಿಲು ಬಿಟ್ಟರೆ ಬೇರೆ ಏನೂ ಇಲ್ಲ ಅನ್ನುವ ಊರದು. ಲೆಕ್ಕಪತ್ರ ಪರಿಶೋಧನೆ ಮಾಡಲು ಬರುವ ಸರ್ಕಾರಿ ಅಧಿಕಾರಿಯ ಕೊಂಕು ಕುಪಿತ ನುಡಿಗೆ ಊರಿನ ಪ್ರಮುಖನಾದ ಶಿವನಂಜೇಗೌಡ ಶಪಥ ಮಾಡಿ, ಊರಿನಲ್ಲಿ ಒಂದು ಎಳನೀರಿನ ತೆಂಗಿನ ತೋಟ ಮಾಡಬೇಕು ಎಂದು ನಿರ್ಧಾರ ಮಾಡುತ್ತಾರೆ. ಅವರ  ಕುಲಪುರೋಹಿತರು ಜಾತಕ ಪರಿಶೀಲಿಸಿ ತೋಟ ಗೌಡನ ನಕ್ಶತ್ರಕ್ಕೆ ಆಗಿ ಬರೋಲ್ಲ ಎಂದು  ಹೇಳಿದರೂ, ಅದಕ್ಕೆ ಕಿವಿಗೊಡದೆ, ನನ್ನ ಹೆಸರಿಗೆ  ಆಗೋಲ್ಲ ಎಂದರೆ, ತನ್ನ ಹಿತೈಷಿ ನಾರಣಪ್ಪನ ಹೆಸರಲ್ಲಿ ಮಾಡುವಂತೆ ಒಪ್ಪಿಸುತ್ತಾನೆ 

ಊರಿನ ಪುರೋಹಿತರು ತಮಗೆ ವಯಸ್ಸಾಗಿದೆ, ಕರೆದಾಗೆಲ್ಲ ಬರೋಕೆ  ಆಗದು ಎಂದಾಗ, ತಮ್ಮ ಶಿಷ್ಯನೊಬ್ಬನ ಸಂಸಾರವನ್ನು ಕಳಿಸಿಕೊಡುತ್ತಾನೆ, ಅಲ್ಲಿಂದ ಶುರು ಈ ಸಿನೆಮಾದ ನಿಜವಾದ ಕಥೆ ಶುರುವಾಗೋದು. ಆ ಕುಟಿಲ ಭಟ್ಟರ ಸಂಸಾರ ಊರಿನ ಇನ್ನೊಬ್ಬ ತರಲೆ ಕರಿಯಪ್ಪನ ಜೊತೆಗೂಡಿ ಶಿವನಂಜೇ ಗೌಡನ ಇಡೀ ಸಂಸಾರವನ್ನೇ ನಾಶ ಮಾಡುತ್ತಾರೆ.. ಅಂತಿಮವಾಗಿ ಕರಿಯಪ್ಪ, ಭಟ್ಟರು, ಅವನ ಹೆಂಡತಿ, ಮತ್ತು ಅವರಿಗೆ ಸಾತ್ ನೀಡಿದ ತಿಪ್ಪವ್ವ ಎಲ್ಲರಿಗೂ ಕಠಿಣ ಶಿಕ್ಷೆ ಕೊಡುತ್ತಾರೆ. ಇದಕ್ಕೂ ಮುನ್ನ ಸಹೋದರರು  ಪಾಲು ಎನ್ನುತ್ತಾ ಮನೆಯನ್ನು ಎರಡು ಭಾಗವಾದುದ್ದನ್ನು ಕಂಡು ಶಿವನಂಜೆ ಗೌಡನ ಹೆಂಡತಿ ಪುಟ್ಟತಾಯಿ  ಅಸು ನೀಗುತ್ತಾರೆ. ನಂತರ ಕುತಂತ್ರ ಮಾಡಿ ಶಿವನಂಜನ ಮೊದಲ  ಮಗ ಹನುಮನ ಪುಟ್ಟ ಮಗುವನ್ನು ವಿಷ ಹಾಕಿಸಿ ಸಾಯಿಸುತ್ತಾರೆ. ಅದರಿಂದ ಕ್ಷುದ್ರಗೊಂಡ ಹನುಮ ಕೋಪದ ಬರದಲ್ಲಿ ತನ್ನ ತಮ್ಮ ರಾಮನನ್ನು, ಹಾಗೂ ಆತನ ಮಡದಿ ಲಕ್ಷ್ಮಿಯನ್ನು ಕೊಂದದ್ದಕ್ಕೆ ಜೀವಾವಧಿ ಶಿಕ್ಷೆಗೆ ಗುರಿಯಾಗುತ್ತಾನೆ. ಅವನ ಮಡದಿ ಚೆನ್ನೈ ಈ ವಿಷಯ ಕೇಳಿ ಪ್ರಾಣ ಬಿಡುತ್ತಾಳೆ. ಹೀಗಾಗಿ ಶಿವನಂಜನ ಇಡೀ ಪರಿವಾರವೇ ನಾಶವಾಗುತ್ತದೆ. 

ಇಂದಿಗೂ ಬಾಲಣ್ಣ ಅವರ ಈ ಚಿತ್ರದಲ್ಲಿನ ಅಭಿನಯಕ್ಕೆ ಶಭಾಷ್ ಹೇಳಲೇ ಬೇಕು

"ಲೋ ಗೌಡ ನಿನ್ನ ಎಲ್ಲಿ ಬಿಡ್ತೀನಿ"

"ಭಟ್ರೇ ಏನೂ ನನ್ನ ಮಾತಿನಲ್ಲಿ ಹಾವು ಅಂದುಬಿಟ್ರಿ"

"ಭಟ್ರೇ ನಿಮಗೆ ಬದುಕು ಕೊಟ್ಟ ಗೌಡನಿಗೆ ನೀವು ನಿಯತ್ತಾಗಿಲ್ಲ ನಿಮ್ಮ ಸಹವಾಸಕ್ಕೆ ಒಂದು ಸಲಾಂ"

"ನನ್ನ  ತಂಟೆಗೆ ಬರದೇ ಇದ್ರೆ ಸಾಕು"

ಹೀಗೆ ನಗುನಗುತ್ತಾ ವಿಷ ಉಕ್ಕಿಸುವ ಮಾತುಗಳ ಅಭಿನಯ,  ಸದಾ ಬೀಡಿ ಸೇದುತ್ತಾ, ನಾಜೂಕಾಗಿ ಮಾತಾಡುವ, ರೀತಿಯ ಅಭಿನಯಕ್ಕೆ ಒಂದು ಸಲಾಂ

ಈ ಚಿತ್ರದ ಹೂರಣ "ನಿಮ್ಮ ಗಬ್ಬು ಗಲೀಜು ನೀರನ್ನು ನಮ್ಮ ಹಿತ್ತಲಿಗೆ ಬಿಡಬೇಕೆನ್ರಿ ಭಟ್ರೇ.. ಎನ್ನುತ್ತಾ ಕಡೆಗೆ ಭಟ್ಟರ ಕೆಟ್ಟ ಮನಸ್ಸಿನ ಯೋಜನೆಗಳಿಗೆ ದಾರಿ ಬಿಡುವ ದೃಶ್ಯವದು. 

ರಾಜಕುಮಾರ್ ಮೊದಲಾರ್ಧದಲ್ಲಿ "ನೀರ ಹೊತ್ತ ನೀರ ಜಾಣೆ" ಎನ್ನುವ ಹಾಡಲ್ಲಿ ಬಂದು ಹೋಗುವ, ಅವರು ಉತ್ತರಾರ್ಧದಲ್ಲಿ ಗಮನ ಸೆಳೆಯುವ ಅಭಿನಯ ನೀಡಿದ್ದಾರೆ. ಆ ಗುಂಗುರು ತಲೆಗೂದಲು, ಹಳ್ಳಿಯ ದಿರುಸು ಅದೇ ಮಟ್ಟದ ಸಂಭಾಷಣೆ, ಮನೆ ಭಾಗವಾಗುವಾಗ ತನ್ನ ಅಪ್ಪನ ಜೊತೆ ನಿಂತು ದುಃಖಪಡುವ ದೃಶ್ಯ, ಕಡೆಯಲ್ಲಿ ಕುಪಿತನಾಗಿ, ಮುಂದಿನ ಆಗುಹೋಗುಗಳ ಬಗ್ಗೆ ಯೋಚಿಸದೆ ತಮ್ಮ ಹಾಗೂ  ಹೆಂಡತಿಯ ಸಾವಿಗೆ ಕಾರಣನಾಗುವ ದೃಶ್ಯದ ರೌದ್ರಾವತಾರ ಶಭಾಷ್  ಎನಿಸುತ್ತದೆ. 

ಜಯಂತಿ ರಾಜಕುಮಾರ್ ಜೊತೆ ಅಭಿನಯದ ಮೊದಲ ಚಿತ್ರ.. ಆದರೆ ಹಳ್ಳಿಯ ನೆಲೆಯ ಪಾತ್ರದಲ್ಲಿ ಮಿಂಚುತ್ತಾರೆ . ಹದಬೆರೆತ ಅಭಿನಯ ರಾಘವೇಂದ್ರರಾವ್, ಶಾಂತಮ್ಮ, ಜಯಶ್ರೀ, ಲಕ್ಷ್ಮೀದೇವಿ, ಪಾಪಮ್ಮ, ಅಶ್ವಥ್ ನಾರಾಯಣ್, ಅವರದ್ದು, 

ನಿಜವಾಗಿಯೂ ಈ ಚಿತ್ರದ ಪ್ರಮುಖ ಕಂಬಗಳು ಉದಯಕುಮಾರ್ ಮತ್ತು ಬಾಲಕೃಷ್ಣ, 

ವಯೋಸಹಜ ಪಾತ್ರದಲ್ಲಿ ಉದಯಕುಮಾರ್ ಮೊದಲ ಭಾಗದಲ್ಲಿ ಅಚ್ಚುಕಟ್ಟಾಗಿ ಕಂಡರೆ, ವಯಸ್ಸಾದ ಪಾತ್ರದಲ್ಲಿ ಚಿತ್ರದುದ್ದಕ್ಕೂ ಗಮನಸೆಳೆಯುತ್ತಾರೆ. ಸಂಭಾಷಣೆ ಹೇಳುವ ವೈಖರಿ, ಆಂಗೀಕ ಅಭಿನಯ, ಮುಖದಲ್ಲಿ ತೋರುವ ಭಾವ.... ವಾಹ್ ಅದ್ಭುತ. ಅದರಲ್ಲೂ ತನ್ನ ಮೊಮ್ಮಗನನ್ನು ಕಂಡು ಮಾತಾಡುವ ಸಂಭಾಷಣೆ ಅದ್ಭುತ. 

ಬಾಲಣ್ಣ ಏನು ಹೇಳಲಿ, ಆ ವಯಸ್ಸಿಗೆ ಅನಿಸಿದ್ದು, ಸಿಕ್ಕರೆ  ಯಾಕೆ ಹೀಗೆ ಮಾಡಿದಿರಿ ಬಾಲಣ್ಣ, ಗೌಡರು ನಿಮ್ಮ ಜಮೀನು , ಮನೆ, ಖರ್ಚು ಎಲ್ಲಾ ಕೊಟ್ಟಮೇಲೂ ಅವರ ಮನೆಯ ವಿನಾಶಕ್ಕೆ ಆ ತರಲೆ ಭಟ್ಟರ ಮಾತುಗಳಿಗೆ ಬಲಿಯಾಗಿ ಗೌಡರ ಮನೆ  ಹಾಳು ಮಾಡಿಬಿಟ್ರಿ ಅಂತ ಕೇಳೋಣ ಅನ್ನುವಷ್ಟು  ಅಭಿನಯ. 

ಕೊನೆಯ ದೃಶ್ಯದಲ್ಲಿ ಹೇಳುವ "ಅಣ್ಣ ತಮ್ಮಂದಿರು ಒಂದಾಗಿದ್ದರೆ ಮನೆ ಒಂದಾಗಿರುತ್ತದೆ ಮನೆ ಮನೆ ಒಂದಾಗಿದ್ದರೆ ಊರು ಒಂದಾಗಿರುತ್ತದೆ.. ಊರು ಊರು ಒಂದಾಗಿದ್ದರೆ ನಾಡು ಒಂದಾಗಿರುತ್ತದೆ. ನಾಡು ಒಂದಾಗಿದ್ದರೆ  ಯಾವ ಶಕ್ತಿಯೂ  ನಮ್ಮನ್ನು ಗೆಲ್ಲೋಕೆ ಆಗೋದಿಲ್ಲ.. ಈಗ ಹೇಳ್ರಪ್ಪ ಪಾಲಾಗ್ತೀರಾ, ಹಾಳಾಗ್ತೀರಾ.. " ಎಷ್ಟು ಅದ್ಭುತ ವಾಕ್ಯಗಳು. 

ತರಾಸು ಅವರ ಅದೇ ಹೆಸರಿನ ಕಾದಂಬರಿಯನ್ನು  ತರಾಸು ಅವರಿಗೆ ಸಂಭಾಷಣೆಯ ಹೊಣೆಯನ್ನು ಕೊಟ್ಟು ಈ ಸಿನೆಮಾವನ್ನು ನಿರ್ದೇಶಿಸಿದ್ದು ಟಿ ವಿ ಸಿಂಗ್ ಠಾಕೂರ್. ಪಾಲ್ ಅಂಡ್ ಚಂದಾನಿ ನಿರ್ಮಾಣದಲ್ಲಿ ಮೂಡಿ ಬಂದ ಚಿತ್ರಕ್ಕೆ ಸಾಹಿತ್ಯ ತರಾಸು ಹಾಗೂ ಆರ್ ಎನ್ ಜಯಗೋಪಲ್ ಸಂಗೀತ ಟಿ  ಜಿ ಲಿಂಗಪ್ಪ.. ಛಾಯಾಗ್ರಹಣ ಬಿ ದೊರೈರಾಜ್. ಸಹನಿರ್ದೇಶನ ಎಸ್ ಕೆ ಭಗವಾನ್. 

ಹಾಡುಗಳೆಲ್ಲವೋ ಚಿತ್ರದ ಓಟಕ್ಕೆ ಬೇಕಾಗುವ ಹಾಗೆ ಮೂಡಿ ಬಂದಿದೆ. 

ಪಕ್ಕದ ಮನೆಯ ಮೋರಿ ನೀರು ನಮ್ಮ ಮನೆಯಲ್ಲಿ ಗಬ್ಬು ವಾಸನೆ ಬೀರುವ ಹಾಗೆ, ಇನ್ನೊಬ್ಬರ ಕಿಡಿ ಕುಟಿಲ ಮಾತುಗಳು ಮನೆಯನ್ನು ಮನಸ್ಸನ್ನು ಹಾಳು ಮಾಡುತ್ತದೆ.. ಅದರ ಕಡೆಗೆ ತಲೆಗೊಡದೆ ಬದುಕನ್ನು ನಿಭಾಯಿಸಬೇಕು .. ತೋಟದಲ್ಲಿ ಎಳನೀರಿನ ಸಸ್ಯ ಹಾಕಿದಾಗ ಅದಕ್ಕೆ ಕಳೆರೋಗ ಬಂದು ಹಾಳಾಗದಂತೆ ನೋಡಿಕೊಂಡಾಗ ಸಿಹಿ ನೀರು ನಮಗೆ ಇಲ್ಲವೇ ಕಳೆಯನ್ನು ಬೆಳೆಯಲು ಬಿಟ್ಟರೆ ಸಸ್ಯವೂ ಹಾಳು ತೋಟವೂ ಹಾಳು.. ಹಾಗೆಯೇ ಬದುಕು ಕೂಡ ಹಾಳು ಎನ್ನುವ  ಪಾಠ ಸಿಗುತ್ತದೆ... 

No comments:

Post a Comment