Saturday, May 25, 2013

ಮಲೆಗಳಲ್ಲಿ ಮದುಮಗಳು - ಒಂದು ಅನುಭವ (2013)

ಕವಿ ಕಲ್ಪನೆಗೆ, ಬರೆಯುವ ಶಕ್ತಿಗೆ ಎಲ್ಲೇ ಇಲ್ಲಾ ಎಂದು ಹೇಳುತ್ತಾರೆ. ಆ ಕಾಲಘಟ್ಟದಲ್ಲಿ ತಮ್ಮ ಘಟದಲ್ಲಿದ್ದ ಕಲ್ಪನೆಗಳನ್ನು ಅಕ್ಷರಕ್ಕೆ ತುಂಬಿ, ಪದಗಳನ್ನು ಎರಕ ಹುಯ್ದು, ಕಾಲಮಾನವೇ ಒಂದು ಸರತಿ ಹಿಂತಿರುಗುವಂತೆ ಚಿತ್ರಿಸುವ ಜಾಣ್ಮೆಯಲ್ಲಿ ಗೆದ್ದರೆ ಕವಿ/ಲೇಖಕ ಸಮರದಲ್ಲಿ ವಿಜಯ ಸಾಧಿಸಿದಂತೆಯೇ ಸರಿ...!

ಅಂಥಹ ಒಂದು ಸುವರ್ಣ ಚೌಕಟ್ಟಿನಲ್ಲಿ ಮಿನುಗಿ, ಮಿಂದು, ಸಾಹಿತ್ಯ ಲೋಕದಲ್ಲಿ ಒಂದು ಉನ್ನತ ಸ್ಥಾನ ಗಳಿಸಿ.. ಹೆಮ್ಮೆಯಿಂದ ಎದೆಯುಬ್ಬಿಸಿನಿಂತ ಕೆಲವು ಕಾದಂಬರಿಗಳು ಓದುಗರ ಮನಸ್ಸಿನಲ್ಲಿ ಸ್ಥಿರವಾಗಿ ಮಾನಸ ಸರೋವರದ ಪಲ್ಲಂಗದಲ್ಲಿ ಪವಡಿಸಿಬಿಟ್ಟಿರುತ್ತವೆ. ಅಂತಹ ಕಥಾನಕಗಳನ್ನು ಮನ ಮುಟ್ಟಿಸುವುದಿರಲಿ... ಮುಟ್ಟುವುದು ಕೆಲವೊಮ್ಮೆ ಆಸಾಧ್ಯ ಎನ್ನಿಸಿಬಿಡುತ್ತದೆ!  

"ಮಲೆಗಳಲ್ಲಿ ಮದುಮಗಳು" ಕರ್ನಾಟಕ ನಾಡಗೀತೆಯಂತೆಯೇ ಜನಪ್ರಿಯವಾದ ಇನ್ನೊಂದು ಮಹಾನ್ ಕೃತಿ ನಮ್ಮ 
ರಾಷ್ಟ್ರಕವಿ ಕುವೆಂಪು ಅವರಿಂದ. 


ಅಂಥಹ ಬೃಹತ್ ಕಾದಂಬರಿಯನ್ನು ಸುಮಾರು ಒಂಭತ್ತು ತಾಸು ಹೊರಾಂಗಣದಲ್ಲಿ  ಆ ಪುಟಗಳನ್ನೂ ಹಾಗೆಯೇ ತೆರೆದಿಡುವುದು ಒಂದು ಸವಾಲೇ ಸರಿ. ಅಂತಹ ಒಂದು ರೋಮಾಂಚನಕಾರಿ ಅನುಭವ ಕೊಡುವ ಕಲಾಗ್ರಾಮದ ಆವರಣದಲ್ಲಿ ಸುಮಾರು ಒಂದು ತಿಂಗಳಿಂದ ಪ್ರದರ್ಶನಗೊಳ್ಳುತ್ತಿರುವ ನಾಟಕ "ಮಲೆಗಳಲ್ಲಿ ಮದುಮಗಳು". 


ಕೇವಲ ನೂರು ರೂಪಾಯಿಗಳಲ್ಲಿ ಒಂದು ೨೦೦-೩೦೦ ವಸಂತಗಳ ಗೆರೆಯನ್ನು ದಾಟಿಸಿ ಕರೆದುಕೊಂಡು ಹೋಗುವ ಒಂದು ಅದ್ಭುತ ಪ್ರದರ್ಶನ. ಅಲ್ಲಿ   ಪ್ರತಿಯೊಂದು ದೃಶ್ಯಗಳನ್ನು ಸಹಜ ಎನ್ನುವಂತೆ ಇರುವ ಅಂಗಣದಲ್ಲಿ ನಟಿಸುವ ಕಲಾವಿದರು, ಅದಕ್ಕೆ ಪೂರಕವಾದ ಸಾಹಿತ್ಯ ಮತ್ತು ಸಂಗೀತ, ನಾವೆಲ್ಲಾ ಆ ಕಾಲಮಾನದ ಯಜಮಾನರ ಜೊತೆಯಲ್ಲಿ ವಿಹರಿಸುತ್ತಿದ್ದೆವೇನೋ ಅನ್ನುವಷ್ಟು ತನ್ಮಯತೆ ಹುಟ್ಟಿಸುವ ನೈಜತೆ ಮನಸನ್ನು ದಂಗುಪಡಿಸುತ್ತದೆ. 

ಕಾರ್ಯಕ್ರಮಕ್ಕೆ ಬಂದವರನ್ನು ಸುಮ್ಮನೆ ಗಮನಿಸಿದರೆ ಸುಮಾರು ಯುವ ಪೀಳಿಗೆಯೇ ಹೆಚ್ಚು ಕಾಣುತ್ತದೆ. ಇದು ನಿಜಕ್ಕೂ ಶ್ಲಾಘನೀಯ ಮತ್ತು ಇದರ ಶ್ರೇಯಸ್ಸು ಈ ನಾಟಕದ ಆಯೋಜಕರಿಗೆ ಸಲ್ಲುತದೆ. 

ನಾಲ್ಕು ವಿವಿಧ ಅಂಗಣದಲ್ಲಿ ನಡೆಯುವ ಈ ಮಹಾನ್ ಕೃತಿಯ ಪ್ರತಿಕೃತಿಯನ್ನು ನಾನು ನನ್ನ ಮಾತಲ್ಲಿ ಹೇಳುವ ಆಸೆ:

೧. ಕೆರೆ ಅಂಗಳ (Bed Area)
ಕೆರೆ, ಮನೆ, ಆವರಣ, ಸೇತುವೆ, ಹೀಗೆ ಒಂದು ಮಲೆನಾಡಿನ ಹಳ್ಳಿಯನ್ನು ದುತ್ತನೆ ಕಣ್ಣ ಮುಂದೆ ನಿಲ್ಲಿಸುವ ಈ ಅಂಗಣದಲ್ಲಿ ನಾಟಕದ ಆರಂಭದ ವಿವಿದ ಮಜಲುಗಳನ್ನು ತೋರುತ್ತ ಹೋಗುತ್ತಾರೆ. ಪ್ರತಿಯೊಂದು ಪಾತ್ರ, ಪ್ರತಿಯೊಂದು ಸಂಭಾಷಣೆ, ಆಗಾಗ ಕಚಗುಳಿ ಕೊಟ್ಟು ನಗಿಸುವ ಒಂದು ಸಾಲಿನ ಸಂಭಾಷಣೆ ಪ್ರೇಕ್ಷಕರ ಕಣ್ಣಿಗೆ ಬಟ್ಟೆ ಕಟ್ಟಿ ಆ ಕಾಲಘಟ್ಟಕ್ಕೆ ಎಳೆದೊಯ್ಯುತ್ತದೆ. ಪ್ರತಿಯೊಂದು ಪಾತ್ರವು ಜೀವಂತ! ಬಡತನದ ಬೇಗೆಯಲ್ಲಿದ್ದರೂ ಜೀವನದ ಸುಂದರ ಕ್ಷಣಗಳನ್ನು ಅನುಭವಿಸುವ, ಜೀವನ ಶೈಲಿ ಹೀಗೆ ಇರಬೇಕು ಎಂದು ಪರಿ ಪರಿಯಾಗಿ ಹಲಸಿನ ಹಣ್ಣನ್ನು ಬಿಡಿಸಿದಂತೆ ತೋರುವ ಚಿತ್ರಣ ಮಕ್ಕಳ ತುಂಟತನ, ಅನುಮಾನ, ಪ್ರೀತಿ ಪ್ರೇಮದ ಭಾವ ಇವೆಲ್ಲಾ ಆಹ್ ಇಂದ ವಾಹ್ ಎನ್ನುವಂತೆ ಮಾಡುತ್ತದೆ.

೨. ಬಯಲು ರಂಗಮಂದಿರ (Open Air Theater Stage)
ಮನಸ್ಸೊಳಗೆ ಇರುವ ಭಾವಾವೇಶ ಬಯಲಿಗೆ ಬಂದು ನಿಲ್ಲುವ ಸುಂದರ ಸನ್ನಿವೇಶಗಳು ಈ ಘಟ್ಟದಲ್ಲಿ ಮೂಡಿಬರುತ್ತದೆ. ಮನಸ್ಸಿನ ವಿಕಾರ ಮುಖಗಳ ಅನಾವರಣ ಆಗುತ್ತಲೇ, ಮನುಷ್ಯನ ವಿಕೃತ ಮನೋಭಾವ ಪರಿಸ್ಥಿತಿಯನ್ನು ಅಣು ಅನುವಾಗಿ ವಿವರಿಸುತ್ತಲೇ, ಮೂಢನಂಬಿಕೆ, ಜಾತಿ ಪದ್ಧತಿ, ಅದನ್ನು ಲಾಭಕ್ಕೆ ಬಳಸುವ ಹಾದಿಗಳು ಮುಂತಾದ ವ್ಯಾಧಿಯ ಬಲೆಯನ್ನು ಹೇಗೆ ನೇಯುತ್ತದೆ ಎಂದು ವಿವರಿಸುತ್ತದೇ. ಹಳ್ಳಿ ಮನೆ, ಊರಿನ ಅಂಗಳ, ಬೆಟ್ಟದ ತುದಿ, ಮುಂತಾದ ಹಳ್ಳಿ ಸೊಗಡನ್ನು ಕಚಕ್ ಕಚಕ್ ಎನ್ನುವಂತೆ ಕ್ಷಿಪ್ರವಾಗಿ ದರ್ಶನ ಕೊಡುತ್ತಾ ಸಾಗುತ್ತದೆ

೩. ಬಿದಿರುಮೆಳೆ (Bamboo groove)
 ಆನೆಗೆ ಪ್ರಿಯವಾದ ಆಹಾರ ಬಿದಿರು. ಆನೆ ನಡೆದದ್ದೇ ದಾರಿ ಅನ್ನುವ ಹಾಗೇ ತಡೆಯಿಲ್ಲದ ಮನುಷ್ಯನ ದಬ್ಬಾಳಿಕೆ, ಅನಾಚಾರ ದೃಶ್ಯಗಳು ಕಾಣ ಸಿಗುತ್ತದೆ. ಅದಕ್ಕೆ ಪೂರಕವಾಗಿ..  ಇಲ್ಲಿನ ದೃಶ್ಯಗಳಲ್ಲಿ ಹಳ್ಳಿ ಶಾಲೆ, ಹೋಟೆಲ್, ಕಾಡಿನ ಹಾದಿಯನ್ನು ನಾಶ ಮಾಡಿ ಊರಿನ ಹಾದಿ ಮಾಡುವ ತವಕ, ಭಾವಿ ಕಟ್ಟೆ, ಹಾವಿನ ದ್ವೇಷದ ಧ್ಯೋತಕವಾದ ಹುತ್ತಗಳು ಕಾಣಸಿಗುತ್ತವೆ. ಮೋಸ, ಕೆಡಕು, ತಟವಟಗಳಿಂದ ಮಾನವ ತಾನು ಹಾಳಗುವುದಲ್ಲದೇ, ಪರಿಸರವನ್ನು ಗಬ್ಬೆಬ್ಬಿಸುವ ಭಾವಗಳು ಕಾಡುತ್ತವೆ.
೪. ಹೊಂಗೆ ರಂಗ (Honge Ranga)
"ಹೊಂಗೆಯ ನೆರಳೇ ಚೆನ್ನ" ಅನ್ನುವ ಅಣ್ಣಾವ್ರ ಶಂಕರ್ ಗುರು ಚಿತ್ರದ ಹಾಡಿನಂತೆ.. ತಾಮಸ ಗುಣಗಳು ತಂಪಾಗುವ ನಿಟ್ಟಿನಲ್ಲಿ ಕೆಲವೊಮ್ಮೆ ಸ್ಪೋಟಿಸುವ ತಪ್ಪು ತಿಳುವಳಿಕೆಗಳು, ತಪ್ಪುಗಳು, ಸಿಟ್ಟು ಸೆಡವುಗಳು ಮನುಷ್ಯನನ್ನು ಹೇಗೆ ದಾರಿ ತಪ್ಪಿಸುತ್ತವೆ ಹಾಗೆಯೇ ಸರಿ ದಾರಿಗೆ ಮರಳಲು ಫಲಕಾರಿಯಾಗುತ್ತವೆ ಎನ್ನುವುದನ್ನು ಗ್ರಾಮ್ಯ ಪರಿಸರ, ಬೆಟ್ಟದ ತುತ್ತ ತುದಿ, ಮಳೆ ಬಂದು ತುಂಬಿ ಹರಿಯುವ ತೊರೆಗಳು, ತಾನು ಬದುಕಲು ನಂಬಿಕೊಂಡ ಜೀವಿಯನ್ನು ತೊರೆಯುವುದು.. ನಂತರ ಪರಿತಪಿಸುವುದು, ತನ್ನ ದಣಿಗೋಸ್ಕರ ತಾನು ಹಾದಿಯಿಂದ ದೂರ ಸರಿಯುವುದು ಇವೆಲ್ಲ ಪುಸ್ತಕದ ಹಾಳೆಗಳು ತೆರೆದಂತೆ ಅವು ತೆಗೆದುಕೊಳ್ಳುತ್ತದೆ ಹಾಗೂ ಒಳಗಿನ ಮನವನ್ನು ಎದುರು ತಂದು ನಿಲ್ಲಿಸುತ್ತದೆ . 
*********************************************************************************
ಪ್ರತಿಯೊಂದು ಪಾತ್ರವೂ ಕಾಡುತ್ತದೆ, ಪ್ರತಿಯೊಂದು ಸಂಭಾಷಣೆಯು ಮನಕ್ಕೆ ತಾಗುತ್ತದೆ, ಅದಕ್ಕೆ ಪೂರಕ ಹಿಮ್ಮೇಳ ಸಂಗೀತ, ಅದರ ಸಾಹಿತ್ಯ ಎಲ್ಲವು ಮನಸ್ಸಿನ ತಂತಿಯನ್ನು ಟಿಂಗ್ ಎಂದು ಮೀಟುತ್ತದೆ. ನನ್ನ ಮನಸ್ಸಿಗೆ ತಾಕಿ, ಈ ಬೃಹತ್ ಕಥಾವಸ್ತುವಿನ ಪ್ರದರ್ಶನಕ್ಕೆ ಬಂದದ್ದು ಸಾರ್ಥಕ ಅನ್ನಿಸುವಂತೆ ಮಾಡಿದ್ದು ಕೆಲವು ಪಾತ್ರಗಳು ಹಾಗು ಸನ್ನಿವೇಶ :

ಹುಲಿಯ (ನಾಯಿ): ನಿಜವಾಗಿಯೂ ಕಣ್ಣಲ್ಲಿ ಬಿಂದು ಜಿನುಗಿಸುವ ಪಾತ್ರ ಇದು. ಈ ಪಾತ್ರಧಾರಿ ನಿಜಕ್ಕೂ ಉತ್ಸಾಹದ ಚಿಲುಮೆ. ತನ್ನ ಪಾತ್ರ ಗೌಣ ಆಗದೆಯೂ... ಮುಖ್ಯ ಪಾತ್ರವಾಗದ ಹಾದಿಯಲ್ಲಿ ಬೆಳೆಯುವ ಈ ಪಾತ್ರ ಕಲಾವಿದನ ಪರಿಶ್ರಮ ಮತ್ತು ಶ್ರದ್ದೆಗೆ ಒಂದು ದಿಕ್ಸೂಚಿ 

ಚಿಂಕಾರ-ಸೆರೆಗಾರ: ಅದ್ಭುತ ಆಂಗೀಕ ಭಾಷೆ, ಭಾಷ ಪ್ರಯೋಗ, ನಡೆಯುವ ಶೈಲಿ ಖಳ ಎಂದರೆ ಹೀಗೆಯೇ ಇರಬೇಕು ಅನ್ನಿಸುವಷ್ಟು ಅಮೋಘ ಅಭಿನಯ 

ಕುಂಟ ಕಾಲಿನ ವೆಂಕಟಪ್ಪ ನಾಯಕ : ಬೊಂಬಾಟ್ ಸಂಭಾಷಣೆ, ಆಂಗೀಕ ಅಭಿನಯ, ಕೃತ್ರಿಮತೆ ಹೀಗೆಯೇ ಇರಬೇಕು ಅನ್ನುವುದನ್ನು ಸಲೀಸಾಗಿ ತೋರುವ ಅಭಿನಯ.. ವಾಹ್ ಅದಕ್ಕೆ ಸಾಟಿಯಿಲ್ಲ. 

ದೇವಿ ಮೈಮೇಲೆ ಬರುವ ಸನ್ನಿವೇಶ.. ರೋಮಾಂಚನ ತಂದಿತು, ಅದಕ್ಕೆ ಎಲ್ಲಾ ಕಲಾವಿದರು ಪಟ್ಟ ಪರಿಶ್ರಮಕ್ಕೆ ತಲೆ ಬಾಗಿ ವಂದಿಸುವೆ.

 ಚಿತ್ರಗಳು

*******************************************************************************
ಹೀಗೆ ಮನಸ್ಸಿಗೆ ಅನ್ನಿಸಿದ ಕೆಲವು ಮಾತುಗಳನ್ನು ಹೇಳಿದ್ದೇನೆ. ಕಥೆ ಬಗ್ಗೆ, ಹಾಗೂ ಅದರ ನೆಲೆಗಟ್ಟಿನ ಬಗ್ಗೆ ಓದುಗರಿಗೆ ಪರಿಚಯವಿದ್ದೆ ಇರುತ್ತೆ.. ಹಾಗಾಗಿ ಅದರ ಒಳ ನೋಟವನ್ನು ಹೇಳ ಹೋಗಿಲ್ಲ. ಸುಮಾರು ಒಂಭತ್ತು-ಹತ್ತು ತಾಸುಗಳನ್ನು ತ್ರಾಸದಾಯಕವಾದರೂ ಉತ್ಕೃಷ್ಟ ಸಂತಸವನ್ನು ಕೊಡುವ, ಹಾಗೂ ಕಲೆ ಕಲಾವಿದರನ್ನು ಹತ್ತಿರದಿಂದ ನೋಡುವ, ಅವರ ಅನುಭವಗಳನ್ನು ಕೇಳುವ ಸುವರ್ಣ ಅವಕಾಶ ಇನ್ನು ಕೆಲವೇ ಕೆಲವು ದಿನಗಳು ಮಾತ್ರ. ಇದೆ ಜೂನ್ ಒಂದಕ್ಕೆ ಕಡೆ ಆಟ ಅಂತ ಹೇಳುತ್ತಿದ್ದಾರೆ. ಎಷ್ಟೋ ಮಂದಿ ಒಂದಕ್ಕಿಂತ ಹೆಚ್ಚು ಭಾರಿ ನೋಡಿರುವುದು ಈ ನಾಟಕವನ್ನು ಕಲಾಗ್ರಮದ ರಂಗದ ಮೇಲೆ ತಂದ  ತಂಡಕ್ಕೆ ಅನಿರ್ವಚನೀಯ ಆನಂದ ತಂದು ಕೊಟ್ಟಿದೆ...!

ಇಡೀ ತಂಡಕ್ಕೆ ನಮ್ಮ ಬಳಗದಿಂದ ಅಭಿನಂದನೆಗಳು ಹಾಗೂ ತಂಡದ ಮುಂದಿನ ಎಲ್ಲಾ ಸಾಹಸಗಳಲ್ಲಿ ಯಶಸ್ಸು ಹೀಗೆ ಸಿಗಲಿ ಎನ್ನುವ ಹಾರೈಕೆ ನಮ್ಮ ತಂಡದಿಂದ!  

ಒಂದು ಸುಂದರ ಮನಸ್ಸಿನ ಸರದಾರರ ಜೊತೆಯಲ್ಲಿ
ಈ ಒಂದು ಸಾಹಸದ ಪರಿಶ್ರಮವನ್ನು ವೀಕ್ಷಿಸಲು ಜೊತೆಯಾದ ಸುಲತ, ಸಂಧ್ಯಾ, ರೂಪ, ಮೇಘನ ಹಾಗೂ ನನನ್ ಮನದನ್ನೆ ಸವಿತಾ ಹಾಗೂ ಮಗಳು ಶೀತಲ್ ಎಲ್ಲರಿಗೂ ಎಷ್ಟು ಧನ್ಯವಾದಗಳನ್ನು ಸಲ್ಲಿಸಿದರು ಸಾಲದು.

22 comments:

 1. naanu ee naatakakke hogokke agle illa health problem inda... nimma nirupaNe natakakke karedukondu hodantaytu.. thanks

  ReplyDelete
  Replies
  1. ಧನ್ಯವಾದಗಳು ಅಕ್ಕಯ್ಯ. ವೀಡಿಯೊ ಸಿ ಡಿ ಬಿಡುಗಡೆ ಮಾಡುತ್ತಾರೆ. ಅವಾಗ ಒಂದು ಪ್ರತಿ ಕಳಿಸುವೆ ಬಿಡಿ ಯೋಚಿಸಬೇಡಿ.

   Delete
 2. ವಾವ್ .. ಅಂತೂ ನಾಟಕ ನೋಡಿ ಬಂದಿರಿ .. ಇದೊಂದು ಅದ್ಭುತ ಪ್ರಯೋಗ ಅನ್ನಿಸಿತು .. ನಾಯಿ ಪಾತ್ರ ನಿಜಕ್ಕೂ ಸವಾಲಿನದ್ದು ಮತ್ತು ಅದನ್ನು ಆತ ಚೆನ್ನಾಗಿ ನಿಭಾಯಿಸಿದ್ದಾನೆ ಕೂಡ .. ನಾನು ಕಳೆದ ತಿಂಗಳು ಈ ನಾಟಕ ನೋಡಿದ್ದೆ .. ತುಂಬ ಇಷ್ಟ ಆಗಿತ್ತು ..

  ReplyDelete
  Replies
  1. ಹೌದು ಗಿರೀಶ್ ನಾಟಕಗಳನ್ನು ನೋದುವತ್ತ ಅಷ್ಟು ಒಲವಿಲ್ಲದ ನಾನು ತುಂಬಾ ಇಷ್ಟ ಪಟ್ಟೆ. ಇನ್ನೊಮ್ಮೆ ನೋಡುವಾಸೆ ಇದೆ. ಸುಂದರ ಪರಿಶ್ರಮ. ನಾಯಿಯ ಪಾತ್ರ ನಿಜಕ್ಕೂ ಕಲಾವಿದನ ಶ್ರದ್ದೆಯ ಒಂದು ರೂಪ ಎಂದು ಹೇಳಬಹುದು. ಪ್ರತಿಕ್ರಿಯೆಗೆ ಧನ್ಯವಾದಗಳು

   Delete
 3. ಶಶಿಧರ ಹಡಪ ಅವರ ರಂಗ ಸಜ್ಜಿಗೆ ಹುಚ್ಚು ಹಿಡಿಸುವಂತಿದೆ ಎಂದು ಗೆಳೆಯರೆಲ್ಲ ಹೇಳಿದ ಮೇಲೂ ನಾನು ನಾಟಕಕ್ಕೆ ಹೋಗಿಲ್ಲವೆಂದರೆ ಅದು ನನ್ನ ಪೆದ್ದುತನವೇ! :(

  ReplyDelete
  Replies
  1. ಬನ್ನಿ ಬದರಿ ಸರ್.. ಈ ವಾರವೇ ಕಡೆ ವಾರ ಹೋಗುವ. ಇನ್ನೊಮ್ಮೆ ನೋಡುವ ಆಸೆ ಇದೆ

   Delete
 4. ಮಲೆಗಳಲ್ಲಿ ಮದುಮಗಳು ನನ್ನ ನೆಚ್ಚ್ಚಿನ ಕಾದಂಬರಿಗಳಲ್ಲಿ ಒಂದು. ಇದನ್ನ ರಂಗದ ಮೇಲೆ ತರುತ್ತಾರೆ ಎಂಬ advertisement ನೋಡಿದಾಗ ನನಗನಿಸಿದ್ದು ಇದು ಸಾಧ್ಯವಾ ? ಅಷ್ಟು ದೊಡ್ಡ ಕಥೆಯನ್ನು ಅದು ಹೇಗೆ ತರುತ್ತಾರೆ ಎಂಬುದು. ನಿನ್ನೆ ಎಲ್ಲರ ಜೊತೆಯಲ್ಲಿ ಕುಳಿತು ನೋಡಿದಾಗ ನಿಜಕ್ಕೂ ರೋಮಾಂಚನ . ತೆರೆದ ರಂಗ ಮಂದಿರದಲ್ಲಿ ಒಂಭತ್ತು ತಾಸು ನಡೆಯುವ ನಾಟಕ ಮನ ತಟ್ಟುತ್ತಾ ಹೋಗುತ್ತೆ. ಮನಸಲ್ಲೇ ಉಳಿದು ಬಿಡುತ್ತೆ. ಸಮಯದ ಪರಿವಿಲ್ಲದಂತೆ.

  ನಿಜ ಕುವೆಂಪು ಅಂದಿದ್ದು ...

  ಇಲ್ಲಿ ಯಾರೂ ಮುಖ್ಯರಲ್ಲ ... ಯಾರೂ ಅಮುಖ್ಯರಲ್ಲ .. ಯಾವುದು ಯಕಃಶ್ಚಿತವಲ್ಲ ...

  ಅಲ್ಲಿನ ಯಾವ ಪಾತ್ರವೂ ಕೂಡ .. ಪಾತ್ರಧಾರಿಗಳೂ ಕೂಡ ...

  Sooper...

  ReplyDelete
  Replies
  1. ಎಸ್ ಪಿ ನಿನ್ನ ಮಾತು ಅಕ್ಷರಶಃ ನಿಜ. ಪ್ರತಿ ಪಾತ್ರವು ಜೀವಂತ ಎನ್ನಿಸುವಷ್ಟು ಸಹಜವಾಗಿದೆ. ಸುಂದರ ಪ್ರತಿಕ್ರಿಯೆ. ಧನ್ಯವಾದಗಳು

   Delete
 5. "ಮಲೆಗಳಲ್ಲಿ ಮದುಮಗಳು " ಹೆಸರಿನ್ನಲ್ಲೇ ಏನೋ ಒಂದು ರೋಮಾಂಚನ ..
  ೯ ತಾಸಿನ ನಾಟಕಾನಾ ನನ್ನಿಂದ ನೋಡೋದು ಸಾಧ್ಯಾನಾ ? ಅನ್ನೋ ಭಾವವನ್ನ ಹೊತ್ತುಕೊಂಡೇ ನಾವವತ್ತು ಕಲಾಗ್ರಮಕ್ಕೆ ಹೋಗಿದ್ದು !
  ..೩ ದಿನದಿಂದ ಮಾಡಿರದ ನಿದ್ದೆಯ ಆಚೆಗೂ ನಂಗಲ್ಲಿ ಸ್ವಲ್ಪವೂ ನಿದ್ದೆಯ ಕುರುಹೂ ಕಾಣದಂತೆ ಮಾಡಿತ್ತು ಕಲಾಗ್ರಾಮ ...
  ಹುಲಿಯನ ಅಭಿನಯ ಇವತ್ತೂ ಕಣ್ಣ ಮುಂದೆ ಕಾಡುತ್ತೆ ....ಹೀಗೊಂದು ಮನೋಜ್ನ ಅಭಿನಯ ನೋಡೋ ಖುಷಿ ನನ್ನದಾಗಿತ್ತು ...
  ಎಲ್ಲಾ ಪಾತ್ರಗಳೂ ಜೀವಂತಿಕೆಯ ಪಾತ್ರಗಳು ಅಲ್ವಾ ?
  (ನಾ ಮಲೆಗಳಲ್ಲಿ ಮದುಮಗಳು ಕಾದಂಬರಿ ಓದಿರಲಿಲ್ಲ ..ಆದರೆ ನಾಟಕ ನೋಡಿದ ಮರುದಿನ ನಾ ಇದನ್ನೋದೋಕೆ ಕುಳಿತಿದ್ದೆ )
  " ಬರುವೆ ಎಂದ ನಲ್ಲಾ ಬರದೇ ಹೋದನಲ್ಲಾ " ಅನ್ನೋ ನೋವಿನ ಭಾವದಿಂದ ಹಿಡಿದು ಮನೋವ್ಯಾಪಾರದಲ್ಲಿ ಜೋಗಿಯರ ಭಾವಕ್ಕೆ ಜೊತೆಯಾಗಿ "ಇಲ್ಲಿ ಯಾರೂ ಮುಖ್ಯರಲ್ಲ ,ಯಾರೂ ಅಮುಖ್ಯರಲ್ಲ "ಅನ್ನೋ ಆಶಯಕ್ಕೆ ಕೊನೆಯಾದ ಅಂಕದಲ್ಲಿ ಕೊನೆಗೆ ನನಗೆ ದಕ್ಕಿದ್ದು ಮಾತ್ರ ಅತೀ ಇಷ್ಟವಾದ "ಮಲೆಗಳಲ್ಲಿ ಮದುಮಗಳು " :)

  ಇವತ್ತು ಮತ್ತದೇ ಕಲಾಗ್ರಾಮದ ನಾಲ್ಕು ರಂಗಗಳ ಪರಿಚಯಿಸಿದ್ರಿ ಶ್ರೀಕಾಂತಣ್ಣ ....ಕೆರೆ ಅಂಗಳದಿಂದ ಶುರುವಾಗಿ ಹೊಂಗೆರಂಗದ ವರೆಗಿನ ಎಲ್ಲಾ ಭಾವವೂ ತುಂಬಾ ತುಂಬಾ ಇಷ್ಟವಾಯ್ತು :) ನಿಮ್ಮಿಂದ ಹೀಗೊಂದು ಮದುಮಗಳನ್ನ ನಾನವತ್ತೇ expect ಮಾಡಿದ್ದೆ ಕೂಡಾ :)
  (ಆದರೂ ಒಂದು ಸಣ್ಣ ಬೇಜಾರು ..ನಿಮ್ಮೊಟ್ಟಿಗೆ ನಾನೂ ಬರಬೇಕಿತ್ತು )

  ReplyDelete
  Replies
  1. ಬಿ ಪಿ ನೀನು ಹಾಕಿದ ಫೋಟೋ ಗಳನ್ನೂ ನೋಡಿ ಈ ನಾಟಕವನ್ನು ನೋಡಲೇಬೇಕು ಅಂದುಕೊಂಡೆ. ಆ ಆಸೆ ನೆರವೇರಿದ ಸಂಭ್ರಮದಲ್ಲಿ ಮನಸ್ಸು ತಣಿಯಿತು. ಎಷ್ಟು ಚಂದವಾದ ಪ್ರತಿಕ್ರಿಯೆ ನಿನ್ನದು ಇಷ್ಟವಾಯಿತು

   Delete
 6. ನಾಟಕ ನೋಡಬೇಕೆಂಬ ನನ್ನಾಸೆಗೆ ನೀವೆಲ್ಲಾ ಸಾಥ್ ಕೊಟ್ಟದ್ದಕ್ಕೆ ಧನ್ಯವಾದಗಳು :)

  ReplyDelete
  Replies
  1. ಈ ನಾಟಕಕ್ಕೆ ಹೋದದ್ದು, ಖುಷಿ ಪಟ್ಟದ್ದು ಎಲ್ಲವಕ್ಕೂ ಮೂಲ ಕಾರಣ ನೀವೇ. ನೀವು ಹೋಗೋಣ ಎಂದಿರಿ ನಾವು ಹೊರಟೆವು. ನಿಮಗೂ ಧನ್ಯವಾದಗಳು

   Delete

 7. ಶ್ರೀಕಾಂತ್,
  ಸುಂದರವಾಗಿ ವಿವರಿಸಿ ಬರೆದಿದ್ದೀರಿ.....
  ನಿಜವಾಗಿಯೂ ನಾನೊಂದು ನಾಟಕವನ್ನ ರಾತ್ರಿಯೆಲ್ಲ ಈ ರೀತಿ ನೋಡಿದ್ನಾ ಅಂತ ಆಶ್ಚರ್ಯ?
  ಇನ್ನು ಸನ್ನಿವೇಶಗಳ ಗುಂಗಿನಿಂದ ಹೊರಬರಲು ಆಗುತ್ತಿಲ್ಲ....
  ಮನದಲ್ಲಿ ಅಚ್ಚಾಗಿ ಉಳಿಯುವ ಪಾತ್ರಗಳು, ಮತ್ತೊಮ್ಮೆ ಪುಸ್ತಕವನ್ನು ತೆಗೆದು ಓದಲೇಬೇಕೆಂದು ಪ್ರೇರೇಪಿಸಿದೆ....
  ರಾಷ್ಟ್ರಕವಿ ಕುವೆಂಪು ರವರಿಗೆ ಸಾಷ್ಟಾಂಗ ವಂದನೆ!
  ಇದೊಂದು ನಾಟಕವಲ್ಲ - ಇದೊಂದು ಅನುಭವ..... Life Time Experience!!

  ಇಂತ ಒಂದು ಅವಕಾಶವನ್ನು ಮಾಡಿಕೊಟ್ಟ 5 "S" ಗಳಿಗೂ ಭಾವಪೂರ್ಣ ವ೦ದನೆಗಳು.
  (Srikanth, Savitha, Sheethal, Sandhya, Sulatha :)

  ReplyDelete
  Replies
  1. ರೂಪ.. ನಮ್ಮೆಲ್ಲರ 3K ತಂಡದ ರೂವಾರಿಯ ಜೊತೆ ನಾಟಕ ನೋಡಿದ್ದು ಬಹು ಖುಷಿ ಕೊಟ್ಟಿತು. ಹೌದು ನೀವು ಹೇಳುವ ಹಾಗೆ ಇದು ಜೀವಮಾನದ ಒಂದು ಸುಂದರ ಅಧ್ಯಾಯ. 5S ...ವಾಹ್ ಎಂತಹ ಮಾತು. ಧನ್ಯೋಸ್ಮಿ

   Delete
 8. ಸುಂದರ ವಿವರಣೆ ಸಾರ್... ಧನ್ಯವಾದಗಳು!

  ReplyDelete
  Replies
  1. ಧನ್ಯವಾದಗಳು ಪ್ರದೀಪ್. ಸುಂದರ ಅನುಭವ ನಿಮ್ಮದಾಗಲಿದೆ

   Delete
 9. ಓದಿದ ಖುಷಿ ನಮ್ಮದಾಗಿಸುವುದು ನಿಮ್ಮ ಬರಹಗಳ
  ತಾಕತ್ತು , ಇಡನ್ನೋದಿದಾಗ ಸ್ವಲ್ಪ ಜಾಸ್ತಿನೆ ಖುಷಿಯಾಯಿತು

  ReplyDelete
  Replies
  1. ಸಹೋದರಿ ಸ್ವರ್ಣ ಅವರಿಗೆ ಧನ್ಯವಾದಗಳು. ನಿಮಗೆ ಖುಷಿಯಾದರೆ ಬರೆದದ್ದಕ್ಕೆ ಸಾರ್ಥಕ

   Delete
 10. ನಾನು ಈ ನಾಟಕವನ್ನು ಮೊನ್ನೆ ನೋಡಿ ಬಂದೆ ... ಕಲಾಗ್ರಾಮ ನಮ್ಮ ಮನೆಗೆ ತುಂಬ ಹತ್ತಿರವೇ ಇದೆ.. ಆದರು ಇಷ್ಟು ತಡಮಾಡಿ ಈ ನಾಟಕವನ್ನು ನೋಡಿದ್ದಕೆ ನನ್ನ ಮೇಲೆ ನನಗೆ ಸಿಟ್ಟು ಬಂತು
  ಎಂಥ ಅದ್ಬುತ ಈ "ಮಲೆಗಳಲ್ಲಿ ಮದುಮಗಳು " ಎಲ್ಲ ಕಲಾವಿದರು ತುಂಬ ಅದ್ಬುತ ಎನಿಸುವ ರೀತಿಯಲ್ಲಿ ತಮ್ಮ ಪತ್ರವನ್ನು ಕಟ್ಟಿ ಕೊಟ್ಟಿದ್ದಾರೆ .. ಒಂದು ಕಡೆಯೂ ಬೆಜರಗದೆ.. ೯ ಗಂಟೆಗಳ ಈ ಪ್ರಯೋಗ ತುಂಬ ಅದ್ಬುಥ... ಇಂಥ ಇನ್ನಸ್ಟು ಪ್ರಯೋಗಳು ಬರಲಿ ಇ ದಕ್ಕೆ ನಮ್ಮಗಳ ಸಹಕಾರ ಖಂಡಿತ ವಾಗಿಯೂ ಇದೆ..
  ೩೧ ನೆ ದಿನದ ನಾಟಕ ಪ್ರದರ್ಶನ ಮಳೆಯ ಕಾರಣ ರದ್ದಾಯಿತು .. ನಾನು ಶನಿವಾರ ಇದನ್ನು ನೋಡಲು ಹೊಗಿದ್ದೆ.. ಹತ್ರ ಹತ್ರ ಸಾವಿರ ಕಲಾಪ್ರೇಮಿಗಳು ಇದ್ದಿರಬೇಕು... ಅಂಥಹ ಮಳೇ ಯಲ್ಲು... ಕೆರೆ ಅಂಗಳದ ಕೆಸರಿನಾ ಮೇಲೆಯೂ ಕೂತು ಈ ಪ್ರದರ್ಶನವನ್ನು ನೊಡಿದರು ..... ಒಂದು ವೇದಿಕೆ ಇಂದ ಇನ್ನೊದು ಕಡೆ ಹೋಗುವಾಗ ಮಧ್ಯರಾತ್ರಿಯಲ್ಲಿ ಜನಪ್ರವಹವೇ ಹರಿದು ಹೋಗುತ್ತಾ ಇತ್ತು....

  ReplyDelete
  Replies
  1. ಧನ್ಯವಾದಗಳು ಗುರುಪ್ರಸಾದ್. ಒಳ್ಳೆಯ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಎನ್ನುವುದು ಕಲಾಗ್ರಮಕ್ಕೆ ಹೋದಾಗ ಅರಿವಾಯಿತು. ತಂಡದ ಪರಿಶ್ರಮ ಪ್ರತಿಯೊಂದು ಹಂತದಲ್ಲೂ ಎದ್ದು ಕಾಣುತ್ತದೆ. ಸುಂದರ ಪ್ರತಿಕ್ರಿಯೆ ನಿಮ್ಮದು

   Delete
 11. ಅಣ್ಣಯ್ಯ ಒಂದು ಚಂದದ ಅನುಭವವನ್ನು ಕಟ್ಟಿ ಕೊಟ್ಟಿದ್ದಿರಿ.. ನಿಮ್ಮ ಜೊತೆ ನಾಟಕ ನೋಡಬೇಕೆಂದಿದ್ದ ಆಶೆ ಆಶೆಯಾಗೆ ಉಳಿಯಿತು.. ಜೊತೆಗೆ ಮತ್ತೊಮ್ಮೆ ನಾಟಕ ನೋಡಬೇಕೆಂದಿದ್ದ ಆಸೆಯೂ... ಮಲೆಗಳಲ್ಲಿ ಮಧುಮಗಳು ಒಂದು ಚಂದದ ಅನುಭೂತಿ...

  ReplyDelete
  Replies
  1. ಹೌದು ಒಂದು ಆಜೀವ ಅನುಭವ ಈ ನಾಟಕ ನೋಡಿದ್ದು. ನಾನು ನಾಟಕಗಳನ್ನೂ ನೋಡಿದ್ದು ಬಹಳ ಕಡಿಮೆ. ಬಹಳ ಇಷ್ಟವಾಯಿತು. ಧನ್ಯವಾದಗಳು ಪಿ ಎಸ್!

   Delete