Sunday, October 6, 2013

ಪವಾಡ ನಡೆಸಿದ ಮಲ್ಲಮ್ಮ - ಮಲ್ಲಮ್ಮನ ಪವಾಡ (1969)

ಊರಿನ ಅನೇಕ ಕುಟುಂಬದಲ್ಲೂ ನಡೆದಿರಬಹುದಾದ ಒಂದು ತಲೆಮಾರಿನ ಇತಿಹಾಸವನ್ನೇ ತಲೆಕೆಳಗು ಮಾಡಬಲ್ಲ ಸವತಿ ಮಕ್ಕಳ ಕಥಾವಸ್ತುವುಳ್ಳ ಈ ಚಿತ್ರ ಒಂದು ರೀತಿಯಲ್ಲಿ ಇತಿಹಾಸವನ್ನೇ ಮಾಡಿತ್ತು. ಅರವತ್ತರ ಅಂತ್ಯದಲ್ಲಿ ಚಿತ್ರೀಕರಣಗೊಂಡ ಮಲ ತಾಯಿ ಧೋರಣೆಯ ಕಥಾವಸ್ತುವಿನ ಚಿತ್ರ ,ಭಾರತದ ಪ್ರಮುಖ ಭಾಷೆಗಳಲ್ಲಿ ಕಾಲ ಕಾಲ ಘಟ್ಟಕ್ಕೆ ಅನುಗುಣವಾಗಿ ಬದಲಾಗುತ್ತಾ ಚಿತ್ರೀಕರಣಗೊಂಡರೂ,  ನಮ್ಮ ಗಾರುಡಿಗ ಅಶ್ಲೀಲತೆಯ ಸೊಂಕಿಲ್ಲದೆ, ಮೈಯನ್ನು ಮುಟ್ಟದೆ ಭಾವನಾತ್ಮಕವಾಗಿ ಮನಸನ್ನು ಮಾತ್ರ ಮುಟ್ಟುವಂತಹ  ಚಿತ್ರ ನಮಗೆ ನೀಡಿದ್ದಾರೆ.   


ಶ್ರೀ ಬಿ ಪುಟ್ಟಸ್ವಾಮಯ್ಯನವರ ಕಾದಂಬರಿ ಆಧಾರಿತ,  ಪಿ ಪುಲ್ಲಯ್ಯ ಚಿತ್ರಕಥೆ ಹೊಂದಿದ್ದ ಈ ಚಿತ್ರಕ್ಕೆ ಆರ್ ಏನ್ ಜಯಗೋಪಾಲ್ ಮತ್ತು ಪುಟ್ಟಣ್ಣ ಅವರ ಆಪ್ತ ಮಿತ್ರವಿಜಯನಾರಸಿಂಹ ಗೀತೆಗಳನ್ನು ರಚಿಸಿದ್ದರು. ಸಂಭಾಷಣೆ ಕುರಾಸಿ ಎಂದೇ ಖ್ಯಾತರಾಗಿದ್ದ ಕು ರಾ ಸೀತಾರಾಮಶಾಸ್ತ್ರಿ ಮತ್ತು ಛಾಯಾಗ್ರಹಣ ಸೆಲ್ವರಾಜ್ ಅವರದಾಗಿತ್ತು. ಈ ಚಿತ್ರದ  ವಿಶೇಷತೆ ಕಂಚಿನ ಕಂಠದ ವಜ್ರಮುನಿ ಪಾದಾರ್ಪಣೆ ಮಾಡಿದ್ದು ಹಾಗೆಯೇ ಇನ್ನೊಂದು ಕಂಚಿನ ಕಂಠ ಸುಂದರ ಕೃಷ್ಣ ಅರಸ್ ಸಹ ನಿರ್ದೇಶಕ ಆಗಿದ್ದು ಅಷ್ಟೇ ಅಲ್ಲದೆ ಒಂದು ಚಿಕ್ಕ ಚೊಕ್ಕ ಪಾತ್ರವನ್ನು ಮಾಡಿದ್ದರು. ಇಡಿ ಚಿತ್ರಕ್ಕೆ ಸುಮಧುರ ಸಂಗೀತ ನೀಡಿದ್ದು ಸಂಗೀತ ಸಾಮ್ರಾಟ್ ವಿಜಯಭಾಸ್ಕರ್.  

ಪ್ರಥಮ ದೃಶ್ಯದಲ್ಲೇ ಮನಸ್ಸೆಳೆಯುವುದು ಪುಟ್ಟಣ್ಣ ಅವರ ಚಿತ್ರಗಳ ವಿಶೇಷತೆ. ಗೂಳಿಯಂತೆ ಮನದೊಳಕ್ಕೆ ನುಗ್ಗುವ ಆಶಾ ಪಾಶಗಳನ್ನು ಕಡಿವಾಣದಲ್ಲಿಟ್ಟುಕೊಳ್ಳಲು ರಭಸಬೇಕಿಲ್ಲ ಆದರೆ ತಾಳ್ಮೆಯ ಗುಣ ಇರಬೇಕು ಎನ್ನುವುದನ್ನು ಗೂಳಿ ನುಗ್ಗಿ ಬರುವುದನ್ನು ನೋಡಿ "ಬಸವ ಅಲ್ಲೇ ನಿಲ್ಲು" ಎಂದು  ಸಾತ್ವಿಕ ದೃಷ್ಟಿ ಬೀರಿ ಗೂಳಿಯನ್ನು ನಿಲ್ಲಿಸುವ ದೃಶ್ಯದಲ್ಲಿ ಸರೋಜಾದೇವಿ ಪ್ರತಿಪಾದಿಸುತ್ತಾರೆ. ಸಮಸ್ಯೆಗಳನ್ನು ಶಾಂತ ಚಿತ್ತರೀತಿಯಲ್ಲಿ ಮಾತ್ರ ಬಗೆಹರಿಸಬೇಕು ಎನ್ನುವುದು ತಿಳಿಯುತ್ತದೆ. 

ದೇಹ ಬೆಳೆದರು ಮಗು ಮನದೊಳಗೆ ಇರುತ್ತದೆ ಎನ್ನುವ ಹಾಗೆ "ನಾನೂನು ನಿಮ್ಮಂಗೆ ಗೊಂಬೇನೇ ಕಣ್ರೋ" ಎನ್ನುವ ಹಾಡಿನಲ್ಲಿ ಪಿ ಬಿ ಎಸ್ ಗಾಯನ ರಾಜ್ ಅವರ ಅಭಿನಯ ಕಣ್ಣಿಗೆ ಕಟ್ಟುತ್ತದೆ. 

ಅದೇ ಮಾತು ಹೇಳುತ್ತಾ "ಸಂತೋಷ ಬಂದಾಗ ನಗಬೇಕು ಸಂಕಟ ಬಂದಾಗ ಅಳಬೇಕು" ಎನ್ನುವ ಮಾತು ಎಷ್ಟು ನಿಜ ಅಲ್ಲವೇ. ಅದು ಇದ್ದಾಗ ಇದು ಬೇಕು ಇದು ಇದ್ದಾಗ ಅದು ಬೇಕು ಎನ್ನುತ್ತಾ ಎರಡನ್ನು ಅನುಭವಿಸದೆ ಗೋಳಾಡುವ ಮನಸ್ಥಿತಿಗೆ ಸರಿಯಾದ ಚಾಟಿ ಏಟು ಈ ಮಾತು. 

"ಶರಣೆಂಬೆ ನಾ ಶಶಿಭೂಷಣ" ಹಾಡಿನಲ್ಲಿ ದೃಶ್ಯ ಸಂಯೋಜನೆ, ಪಿ ಸುಶೀಲ ಅವರ ಮಧುರ ಗಾಯನ, ಶಿವಲೀಲೆಯನ್ನು ನೆರಳು ಬೆಳಕಿನಲ್ಲಿ ತೋರುವ ತಂತ್ರಜ್ಞಾನ, ಸರೋಜದೇವಿಯವರ ಅಭಿನಯ ಎಲ್ಲವೂ ಹಾಲುಜೇನಿನಂತೆ ಮಿಳಿತವಾಗಿದೆ. 

"ಹುಚ್ಚರಲ್ಲ ನೀವು ಹುಚ್ಚರಲ್ಲ" ಹಾಡಿನಲ್ಲಿ ತೊಳಲಾಟದಿಂದ ಹೊರಗೆ ಕರೆ ತರುವಾಗ ನಾವು ಅವರ ನೆಲೆಗಟ್ಟಿಗೆ ಹೋಗಿ ಅವರನ್ನು ಮೇಲಕ್ಕೆ ತರಬೇಕು ಎನ್ನುವ ಮಾರ್ಮಿಕ ಸಂದೇಶ ಪಿ ಸುಶೀಲ ಅವರ ಗಾಯನದಲ್ಲಿ ಮೂಡಿಬಂದಿದೆ. 

"ಮರೆಯದ ಮಾತಾಡು ಜಾಣ" ಬಿ ಕೆ ಸುಮಿತ್ರ ಧ್ವನಿಯಲ್ಲಿ ಪ್ರೇಮ ಪಾಶ ಮೋಹಕತೆಯ ಅಂಶ ಚೆಲ್ಲುತ್ತದೆ. 

ರಾಜ್ ಕೇಳುತ್ತಾರೆ "ಪ್ರೇಮ" ಎಂದರೆ ಏನು ಎಂದು. ಮಾನಸಿಕವಾಗಿ ಬೆಳೆಯದ ಅವರ ಬುದ್ದಿಮತ್ತೆಗೆ ಪತ್ನಿಯಾದವಳು ಯಾವುದೇ ರೋಮಾಂಚನಕಾರಿ ಅಥವಾ ಪ್ರಚೋದನೆ ನೀಡುವಂತೆ ಹೇಳದೆ, ಚಿತ್ರಿಸದೆ, ಬರಿ ಮಾತು ಮಾತಲ್ಲೇ ಅದರ ಅರ್ಥ ಹೇಳುವ ದೃಶ್ಯ ಈ ಚಿತ್ರದ ಹೈ ಲೈಟ್ ಎನ್ನಬಹುದು. 

ನನಗೆ ತುಂಬಾ ಹಿಡಿಸಿದ ಇನ್ನೊಂದು ಸಂಭಾಷಣೆ "ಸಾತ್ವಿಕ ಮನೋಭಾವ ಎಂದು ಅಂಜುಕುಳಿಯಲ್ಲ" ವಾಹ್.. ನಿಜಕ್ಕೂ ಮನವನ್ನು ಬಡಿದೆಬ್ಬಿಸಬಹುದಾದ ಮಾತುಗಳು. 

ರಾಜ್ ಓದುತ್ತಾರೆ, ವಿಧ್ಯಾವಂತರಾಗುತ್ತಾರೆ.. ಅದನ್ನು ಗಮನಿಸಲು ಬರುವ ಅಪ್ಪನ ಪಾತ್ರಧಾರಿ ಸಂಪತ್ ಕೇಳುತ್ತಾರೆ "ಚಂದ್ರಣ್ಣ ಏನು ಓದುತ್ತಿದ್ದೀಯ"

"ಇಡಿ ಸಾರಸತ್ವ ಲೋಕವನ್ನೇ ಸೂರೆಗೊಂಡ ಕನ್ನಡದ ಮಹೋನ್ನತ ಕವಿ ರನ್ನನ ಗಧಾಯುದ್ಧ  ಓದುತ್ತಿದ್ದೇನೆ. ಮಿತ್ರನ ಋಣವನ್ನು ತೀರಿಸುವ ಸಲುವಾಗಿ ತಮ್ಮನ ಅಂಬಿಗೆ ಬಲಿಯಾಗಿ ರಕ್ತ ತರ್ಪಣ ಕೊಟ್ಟ ಕರ್ಣನ ಸಾವಿನ ಸನ್ನಿವೇಶ" ಎಂದು ಹೇಳುವಾಗ ರಾಜ್ ಕಣ್ಣಲ್ಲಿ ನೀರು, ಅಭಿನಯ, ಸಂಭಾಷಣೆ ಹೇಳುವ ಶೈಲಿ ಇಡಿ ದೃಶ್ಯವನ್ನು ಚಿತ್ರೀಕರಿಸಿದ ರೀತಿ ಪುಟ್ಟಣ್ಣ ಅವರ ತಾಕತ್ ತೋರಿಸುತ್ತದೆ. ಈ ದೃಶ್ಯದ ಬಗ್ಗೆ ಬರೆಯುವಾಗ ನಿಜಕ್ಕೂ ನಾನು ರೋಮಾಂಚನಗೊಂಡಿದ್ದೆ. ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತಿತ್ತು. ಮಗನ ಬಗ್ಗೆ ಹೆಮ್ಮೆ ಪಟ್ಟುಕೊಳ್ಳುವ ಅಭಿನಯ ಸಂಪತ್ ಕಣ್ಣಲ್ಲಿ.... ಬೇಡ ನೀವೇ ಒಮ್ಮೆ ನೋಡಿ ಅನುಭವಿಸಿ.... 

ಮೊದಲ ಹೆಂಡತಿಯ ಮಗನಿಗೆ ಮಲತಾಯಿ ಸರಿಯಾಗಿ ಆರೈಕೆ ಮಾಡಿಲ್ಲ ಎನ್ನುವ ವಿಷಯ ಗೊತ್ತಾದಾಗ ಸಂಪತ್ ಹೇಳುವ ಮಾತು "ತಾಯಿಪ್ರೇಮ ಗಂಗಾ ಪ್ರವಾಹ  ಇದ್ದ ಹಾಗೆ.. ಒಬ್ಬ ಒಂದು ಬೊಗಸೆ ಇನ್ನೊಬ್ಬ ಇನ್ನೊಂದು ಬೊಗಸೆ ಕುಡಿದರೆ ಗಂಗಾ ಪ್ರವಾಹ ಬತ್ತಿ ಹೋಗುವುದಿಲ್ಲ" ತಾಯಿ ಮಮತೆಯ ಬಗ್ಗೆ ಇದಕ್ಕಿಂತ ಉತ್ತಮ ಸಂಭಾಷಣೆ ಬೇಕೇ... 

"ಆಶಾ ವಿಲಾಸಿ ಈ ರೂಪ ರಾಶಿ" ಎಲ್ ಆರ್ ಈಶ್ವರಿ ಈ ಹಾಡಿಗೆ ಬೇಕಾದ ಮಾದಕತೆಯನ್ನು ತುಂಬುತ್ತಾರೆ.. ಅಷ್ಟೇ ಚೆಲುವಾಗಿ ನರ್ತಿಸುವ ಉದಯಚಂದ್ರಿಕ ಮನಸೆಳೆಯುತ್ತಾರೆ. ಅಶ್ಲೀಲತೆಯಿಲ್ಲದೆ ಒಂದು ಮೋಜಿನ ಹಾಡನ್ನು ಸೃಷ್ಟಿಸುವುದು ನಿಜಕ್ಕೂ ಒಂದು ಸವಾಲ್. ಅದರಲ್ಲಿ ನಮ್ಮ ಹೆಮ್ಮೆಯ ನಿರ್ದೇಶಕ ಯಾವಾಗಲೂ ಮುಂದೆ. 

"ಪ್ರಪಂಚದಲ್ಲಿ ವಿವೇಕ ಎನ್ನುವ ಕಠೊರ ಚಾವಟಿಗಿಂತ ಬೇರೆ ಇಲ್ಲ" ಎನ್ನುವ ಮಾತು ಎಷ್ಟು ನಿಜ. 

"ಹಾಡೋಣ ಒಲವಿನ ರಾಗ ಮಾಲೆ" ಪಿ ಬಿ ಎಸ್ ಮತ್ತು ಪಿ ಸುಶೀಲ ಮನ ತುಂಬುತ್ತಾರೆ. ಒಂದು ಪ್ರೇಮ ಗೀತೆ ಅಥವಾ ಒಂದು ಸುಮಧುರ ಪ್ರೀತಿ ತುಂಬಿದ ಗೀತೆ ಗ್ರಾಮೀಣ ಪರಿಸರದಲ್ಲಿ ತೋರುವ ಬಗೆ ಸಂತಸ ಕೊಡುತ್ತದೆ. 

ಇನ್ನೂ ಈ ಚಿತ್ರದ ಇಬ್ಬರ ಅಭಿನಯ ಹೇಳದೆ ಹೋದರೆ ಈ ಲೇಖನ ಅಪೂರ್ಣ.. 

ವಜ್ರಮುನಿ ಮೊದಲ ಚಿತ್ರ.  ಆದರೆ ಅಭಿನಯದಲ್ಲಿ ಯಾವುದೇ ರೀತಿಯಲ್ಲೂ ಇದು ಮೊದಲ ಚಿತ್ರ ಎಂಬ ಅನುಮಾನದ ಲವಲೇಶವೂ ಕಾಣುವುದಿಲ್ಲ. ಅಲ್ಲಿರುವ ನಟ ನಟಿಯರೆಲ್ಲ ಘಟಾನುಘಟಿಗಳೇ..ಸಂಪತ್, ರಾಜ್, ಸರೋಜಾದೇವಿ, ಆದವಾನಿ ಲಕ್ಷ್ಮೀದೇವಿ, ರಮಾದೇವಿ, ರಾಮಚಂದ್ರ ಶಾಸ್ತ್ರಿ, ದ್ವಾರಕೀಶ್, ಅನಂತರಾಮ್ ಮಚ್ಚೇರಿ, ಇವರ ಜೊತೆಯಲ್ಲಿ ನಮ್ಮ ಬಾಲಣ್ಣ.. ಇಂತಹ ಮಹಾನ್ ನಟ ನಟಿಯರ ಎದುರಲ್ಲಿ ಮೊದಲ ಚಿತ್ರದಲ್ಲೇ ಸೆಡ್ಡು ಹೊಡೆಯುವಂತಹ ಅಭಿನಯ.. 

"ಅಮ್ಮ ನಿನ್ನ ಕುಂಕುಮ ಹೋದ ಮೇಲೆ ನಿನಗೆ ಬೇಕಿರುವುದು ನಾಲ್ಕು ಗೋಡೆಯ ನೆರಳು" ಈ ದೃಶ್ಯದಲ್ಲಿ ಆ ಕಂಚಿನ ಕಂಠದ ಅಭಿನಯ, ಮುಖಭಾವ ಅಬ್ಬಾ ಹಾಗೆಯೇ ಬೆನ್ನು ಮೂಳೆಯಲ್ಲಿ ಸಣ್ಣಗೆ ಚಳಿ ಏಳುತ್ತದೆ.

ಇನ್ನೂ  ನನ್ನ ನೆಚ್ಚಿನ ಬಾಲಣ್ಣ 

"ಊರಿಗೆ ಗೊತ್ತಿರುವ ವಿಷಯ ಇವರಿಗೆ ಗೊತ್ತಿಲ್ವ ಚಿನ್ನಾ.. ಇವರು ಈ ಪ್ರಪಂಚದವರಲ್ವ ಚಿನ್ನಾ.. ಯಾರು ಚಿನ್ನಾ ಇವರು....  ಓಹ್ ತಾಯಿನಾ... ಬಿಡು ಚಿನ್ನ...  ಸಾಧಾರಣ... "

"ವಾಲಗ ಊದಿದರೆನಾ ಮದುವೆ ತಾಳಿ ಕಟ್ಟಿದರೇನಾ ಮದುವೆ.. ಆ ಸಂಪ್ರದಾಯ ನಮ್ಮ ಕಡೆ ಇಲ್ಲಾ ಚಿನ್ನ.. ಮೈಸೂರು ಚಿಗುರೆಲೆಯಲ್ಲಿ ಮಲ್ಲಿಗೆ ಅಂಥಹ ಮನಸನ್ನು ಮಡಿಸಿ ದಂತದಂಥಹ ಈ ಕೈಗಳಲ್ಲಿ ಬಾಯಿಯಲ್ಲಿ ಇಡಿಸಿಕೊಂಡರೆ ಆಯಿತು"

"ಲಗಾವಣೆ ಮಾಡ್ಕೊಬೇಕು ಜಮಾವಣೆ"

ಇವೆಲ್ಲಾ ಅವರ ನುಡಿಮುತ್ತುಗಳು. ತಲೆ ಹಿಡುಕನಾಗಿ ವಯ್ಯಾರ ಮಾಡುತ್ತಾ ರಾಗವಾಗಿ ಸಂಭಾಷಣೆ ಹೇಳುವ ಶೈಲಿ ಬಾಲಣ್ಣನಿಗೆ ಮಾತ್ರ ಸಾಧ್ಯ. 

ಹಳ್ಳಿ ಪರಿಸರದಲ್ಲಿ ನಡೆಯುವ ಕುಟುಂಬ ಕಲಹ, ಮಲತಾಯಿ ಮತ್ಸರ ತೋರುವ ಆದವಾನಿ ಲಕ್ಷ್ಮೀದೇವಿ, ತಾಯಿಯ ಮಾತಿಗೆ ಮರುಳಾಗಿ ಕೆಟ್ಟ ದಾರಿ ಹಿಡಿಯುವ ವಜ್ರಮುನಿ ಪಾತ್ರ, ಅದನ್ನು ಎದುರಿಸದೆ ತೊಳಲಾಡುವ ಮನೆಯ ಯಜಮಾನನಾಗಿ ಸಂಪತ್, ತನ್ನ ಮಗಳಿಗೆ ಮೋಸವಾಗಿದೆ ಅಂತ ಅರಿವಾದಾಗ ಊರಿನ ಪ್ರಮುಖರು ಎನ್ನುವುದನ್ನು ಯೋಚಿಸದೆ ಅವರ ಮೇಲೆ ಹರಿಹಾಯುವ ಹೆಣ್ಣಿನ ತಂದೆಯಾಗಿ ಅನಂತರಾಮ್ ಮಚ್ಚೇರಿ, ಇವರ ಮಧ್ಯೆ ಸ್ವಾಮೀ ನಿಷ್ಠೆ ತೋರುವ ಶಾನುಭೋಗರು ಪಾತ್ರದಲ್ಲಿ ರಾಮಚಂದ್ರ ಶಾಸ್ತ್ರಿ, ಸಹಾಯಕ ಪಾತ್ರಗಳಲ್ಲಿ ದ್ವಾರಕೀಶ್, ಶಾಂತಮ್ಮ, ಕೆಲ ಹಳ್ಳಿಗರು, ಇವರ ಮಧ್ಯೆ ಕೆಟ್ಟವರನ್ನು ಇನ್ನಷ್ಟು ಕೆಡಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಪಾತ್ರದಲ್ಲಿ ಬಾಲಣ್ಣ, ರಮಾದೇವಿ, ಉದಯ ಚಂದ್ರಿಕಾ, ಇವರೆನ್ನಲ್ಲ ಸಂಭಾಳಿಸುವ ರಾಜ್ ಮತ್ತು ಸರೋಜಾದೇವಿ.  ಇದನೆಲ್ಲ ಹದವಾಗಿ ಬೆರೆಸಿ ಒಂದು ರುಚಿಯಾದ ಪಾಕ ತಯಾರಿಸಿರುವ ನಿರ್ದೇಶಕ, ಒಂದು ಸುಂದರ ಸಂದೇಶ ನೀಡುವ ಚಿತ್ರವನ್ನಾಗಿ "ಮಲ್ಲಮ್ಮನ ಪವಾಡ"ವನ್ನೇ ಮಾಡಿದ್ದಾರೆ ಎಂದರೆ ಅತಿಶಯೋಕ್ತಿ ಅಲ್ಲವೇ ಅಲ್ಲಾ. 

10 comments:

 1. ಅಭಿನಯ ಅಂದಿನ ದಿನಗಳ ವಾಸ್ತವತೆ ಕಣ್ಣಿಗೆ ಕಟ್ಟುವಂತೆ ಮಾಡಲು ಯಶಸ್ವಿಯಾಗಿದೆ .ನನಗಂತೂ ಈ ಚಿತ್ರದಲ್ಲಿನ ಯಾವ ಪಾತ್ರವೂ ಮರೆತು ಹೋಗಿಲ್ಲ . ಇಂತಹ ಚಿತ್ರಕ್ಕೆ ನಮ್ಮ ಶ್ರೀಕಾಂತ್ ವಿಮರ್ಶೆ ಬರೆದರೆ ಅದಕ್ಕೆ ಇನ್ನೂ ರುಚಿ ಹೆಚ್ಚುತ್ತದೆ . ಒಳ್ಳೆಯ ನೆನಪುಗಳು ಉಂಟಾಗುತ್ತವೆ ನಿಮ್ಮ ಬ್ಲಾಗ್ ಓದಿದರೆ . ಜೈ ಹೊ ಶ್ರೀಕಾಂತ್ ಜಿ

  ReplyDelete
  Replies
  1. ಪುಟ್ಟಣ್ಣ ಅವರ ಚಿತ್ರಗಳು ನನಗೆ ಚೈತನ್ಯ ಕೊಡುವ ಮಾತ್ರೆಗಳು ಅಂದರೆ ತಪ್ಪಿಲ್ಲ ಪ್ರತಿ ಭಾರಿ ನೋಡಿದಾಗ ಹೊಸ ಹೊಸ ರೀತಿಯಲ್ಲಿ ಅನುಭವಕ್ಕೆ ಸಿಗುತ್ತದೆ ನಿಮ್ಮ ಪ್ರತಿಕ್ರಿಯೆ ಓದಿ ಮೊಗದಗಲಕ್ಕೂ ಹಲ್ಲು ಬಿಡುತಿದ್ದೇನೆ. ಖುಷಿಯಾಗುತ್ತಿದೆ ಬಾಲೂ ಸರ್ ಧನ್ಯೋಸ್ಮಿ

   Delete
 2. ಮಲ್ಲಮ್ಮನ ಪವಾಡ ನಿಜಕ್ಕೂ ಒಂದು ಉತ್ತಮ ಸಂದೇಶ ಸಾರುವ ಚಿತ್ರ, ಇದು ನಿಜಕ್ಕೂ ಪುಟ್ಟಣ್ಣ ಕಣಗಾಲ್ ಪವಾಡದ ಚಿತ್ರ ಎನ್ನ ಬಹುದು, ಯಾವುದೇ ಪಾತ್ರವನ್ನೂ ಅತಿರೇಕ ಮಾಡದೆ ನ್ಯಾಯ ಬದ್ದವಾಗಿ ಜೀವ ತುಂಬಲು ಅವಕಾಶ ಮಾಡಿಕೊಟ್ಟಿದ್ದಾರೆ,ಹದವಾದ ಸಂಭಾಷಣೆ , ಅಭಿನಯ ಅಂದಿನ ದಿನಗಳ ವಾಸ್ತವತೆ ಕಣ್ಣಿಗೆ ಕಟ್ಟುವಂತೆ ಮಾಡಲು ಯಶಸ್ವಿಯಾಗಿದೆ .ನನಗಂತೂ ಈ ಚಿತ್ರದಲ್ಲಿನ ಯಾವ ಪಾತ್ರವೂ ಮರೆತು ಹೋಗಿಲ್ಲ . ಇಂತಹ ಚಿತ್ರಕ್ಕೆ ನಮ್ಮ ಶ್ರೀಕಾಂತ್ ವಿಮರ್ಶೆ ಬರೆದರೆ ಅದಕ್ಕೆ ಇನ್ನೂ ರುಚಿ ಹೆಚ್ಚುತ್ತದೆ . ಒಳ್ಳೆಯ ನೆನಪುಗಳು ಉಂಟಾಗುತ್ತವೆ ನಿಮ್ಮ ಬ್ಲಾಗ್ ಓದಿದರೆ . ಜೈ ಹೊ ಶ್ರೀಕಾಂತ್ ಜಿ

  ReplyDelete
  Replies
  1. ಹೌದು.. ಒಂದು ಸಾಮಾನ್ಯ ಕಥೆಯನ್ನ ಬೆಳ್ಳಿ ತೆರೆಯ ಮೇಲೆ ಯಾವುದೇ ಮಸಾಲೆ ಪದಾರ್ಥ ಅತಿ ಎನ್ನಿಸುವಂತೆ ಹಾಕದೆ ಹದ ಮಾಡಿ ಬಡಿಸುವುದು ಸಾಹಸವೇ ಸರಿ. ಆ ನಿಟ್ಟಿನಲ್ಲಿ ಪುಟ್ಟಣ್ಣ ನಿಜವಾಗಿಯೂ ಜಾದುಗಾರರೆ ಸರಿ. ದೃಶ್ಯ ಸಂಯೋಜನೆ ನೆರಳು ಬೆಳಕಿನ ಉಪಯೋಗ ಅತ್ಯುತ್ತಮ ರೀತಿಯಲ್ಲಿ ಬಳಸಿದ ಕೆಲವೇ ನಿರ್ದೇಶಕರಲ್ಲಿ ಪುಟ್ಟಣ್ಣ ಅವರು ಒಬ್ಬರು ಎನ್ನುವುದೇ ಹೆಮ್ಮೆಯ ವಿಷಯ. ಸುಂದರ ಪ್ರತಿಕ್ರಿಯೆ ನಿಮ್ಮದು ಬಾಲೂ ಸರ್ ಧನ್ಯವಾದಗಳು

   Delete
 3. ಅ೦ದಿನ ಚಿತ್ರಗಳನ್ನು ಅದರ ಸ೦ದೇಶಗಳನ್ನು ಆಸ್ವಾದಿಸುವುದೇ ಒ೦ದು ಮಜ. ಮಲ್ಲಮ್ಮನ ಪವಾಡ ಚಿತ್ರವನ್ನು ನೋಡಿದ ಹೆಣ್ಣುಮಗಳೊಬ್ಬಳು ತನ್ನ ಗ೦ಡನನ್ನು ತಿದ್ದಿ ಬುದ್ದಿವ೦ತನಾಗಲು ಪ್ರಯತ್ನ ಪಟ್ಟು ಯಶಸ್ವಿಯಾದಳೆ೦ದು ನಾನು ಕೇಳಿದ್ದೆ. ಚಿತ್ರ, ನಟನೆ, ಸ೦ಭಾಷಣೆ, ಹಾಡುಗಳು ಎಲ್ಲವೂ ಸಹ ಅತ್ತ್ಯುತ್ತಮ. ಡಾ|| ರಾಜ್ ಬಗ್ಗೆ ಅವರ ಪಾತ್ರದ ಬಗ್ಗೆ ಹೇಳೋಕಾದ್ರು ಏನಿದೆ, ಅದೇನಿದ್ರು ನೋಡಿ ಆಸ್ವಾದಿಸಿ ಅನುಭವಿಸುವ೦ತದ್ದು. ಇದೇ ಕತೆ ಎಳೆಯನ್ನು ಹಿಡಿದು ಬ೦ದ ಮತ್ತೊ೦ದು ಚಿತ್ರ ಅಣ್ಣಯ್ಯ. ಧನ್ಯವಾದ ಶ್ರೀಕಾ೦ತ್, ನೆನಪುಗಳನ್ನ ಮರುಕಳಿಸಿದಿರಿ.

  ReplyDelete
  Replies
  1. ಹಿಂದೆ ಕಾಣುವುದು ಯಾವತ್ತು ಸುಂದರವೇ,. ನೆನಪುಗಳು, ಮಾತುಗಳು, ಕಟ್ಟಿ ಕೊಡುವ ಚಿತ್ರಗಳು.. ಎಲ್ಲವು ಸುಂದರವೇ. ಕಲಾವಿದರು ತಮ್ಮ ಜ್ಞಾನ, ಪ್ರತಿಭೆಯನ್ನು ಒರೆಗೆ ಹಚ್ಚಿ ಕೊಡುತ್ತಿದ್ದ ಚಿತ್ರಗಳು, ಹಾಡುಗಳು, ಸಂಗೀತ, ಸಂಭಾಷಣೆ ಅದರಿಂದಲೇ ಸಮಾಜವನ್ನು ತಿದ್ದುವ ಒಂದು ಸಣ್ಣ ಪ್ರಯತ್ನ ಮಾಡುತ್ತಿದ್ದರು. ಪುಟ್ಟಣ್ಣ ಅವರ ಚಿತ್ರಗಳು ಒಂದು ರೀತಿಯಲ್ಲಿ ಕ್ರಾಂತಿಕಾರಕ ಯೋಚನೆಗಳಿಗೆ ದಾರಿ ಮಾಡಿಕೊಡುತ್ತಿದ್ದವು/ ಸುಂದರ ಪ್ರತಿಕ್ರಿಯೆ DFR ಧನ್ಯವಾದಗಳು

   Delete
 4. ನಾನು ಬಹಳ ಮೆಚ್ಚಿದ ಚಿತ್ರವಿದು. ಸರೋಜಾದೇವಿಯವರ ಅಭಿನಯ ವಾಹ್ ವಾಹ್ ಅನ್ನೋ ಹಾಗಿದೆ.. ರಾಜ್ ರವರ ಮುಗ್ದ ಪಾತ್ರ ರೂಪಣೆ ಮನಸನ್ನು ಮುಟ್ಟುತ್ತದೆ. ಅದಕ್ಕಿಂತ ಇಡಿ ಚಿತ್ರದ ನಿರ್ದೇಶನ ಎದ್ದು ಚಪ್ಪಾಳೆ ತಟ್ಟುವ ಹಾಗಿದೆ. ಅವರ ಶ್ರಮ, ಕಲೆ ಮತ್ತು ಸಾಮರ್ಥ್ಯವನ್ನು ಎತ್ತಿ ಹಿಡಿದಂತಿದೆ ನಿಮ್ಮ ಬರಹ.. ವಾಹ್ ವಾಹ್ ಹೇಳಲೆ ಬೇಕಾದ ಬರಹ :)

  ReplyDelete
  Replies
  1. ಹಳೆಯ ಅನೇಕ ಸುಂದರ ಸಂದೇಶ ಇರುವ ಚಿತ್ರಗಳಲ್ಲಿ ಇದು ಒಂದು. ಸಣ್ಣ ಎಳೆಯನ್ನು ಎಷ್ಟು ಸೊಂಪಾದ ಕಥೆ ಚಿತ್ರಕಥೆ ಮಾಡಿ ಬೆಳ್ಳಿ ತೆರೆಯಲ್ಲಿ ಮೂಡಿಸಿದ್ದಾರೆ. ಇಡಿ ತಂಡದ ಪರಿಶ್ರಮ ಎದ್ದು ಕಾಣುತ್ತದೆ. ನಿಮ್ಮ ಪ್ರೋತ್ಸಾಹಕ ನುಡಿಗಳು ನಿಜಕ್ಕೂ ಸ್ಪೂರ್ತಿದಾಯಕ. ಧನ್ಯವಾದಗಳು ನಿವಿ

   Delete
 5. ವಾಹ್.!! ಈ ಚಿತ್ರದ ಬಗ್ಗೆ ಏನು ಹೇಳುವುದು ಎರಡು ಮಾತಿಲ್ಲ. ಅದ್ಭುತ ಚಿತ್ರ. ಹಳೆಯ ಚಿತ್ರಗಳಲ್ಲಿರುವ ಸಾಹಿತ್ಯ, ನೀತಿ, ಭಾಷಾ ಪ್ರೇರಣೆ ಎಲ್ಲವೂ ವಿಭಿನ್ನ. ಡಾ.ರಾಜ್ ಅವರ ಅಭಿನಯವನ್ನು ಮೀರಿಸುವವರಿಲ್ಲ. ಥಾಂಕ್ಸ್ ಶ್ರೀಕಾಂತ್ ಎಂದಿನಂತೆ ಒಳ್ಳೆಯ ಲೇಖನ. ನೀವು ಸದಾ ಸ್ಪೂರ್ತಿದಾಯಕರು

  ReplyDelete
  Replies
  1. ಧನ್ಯವಾದಗಳು ಅಕ್ಕಯ್ಯ.. ಅವರ ಆಸಕ್ತಿ, ಸಮಾಜಕ್ಕೆ ಒಂದು ಉತ್ತಮ ಸಂದೇಶ ಕೊಡಬೇಕು ಎನ್ನುವ ಕಾತುರ, ಸಾಹಿತ್ಯ ಸೇವೆ ಮಾಡುವ ತವಕ, ಏನಾದರೂ ಸಾಧಿಸಬೇಕು ಎನ್ನುವ ಛಲ ಇವೆಲ್ಲ ಅಂದು ಉತ್ತಮ ಚಿತ್ರಗಳನ್ನು ಕೊಡಲು ಪ್ರೇರೇಪಿಸುತಿತ್ತು. ಪ್ರತಿಯೊಬ್ಬರ ಅಭಿನಯ ಸುಂದರ ಈ ಚಿತ್ರದಲ್ಲಿ. ಇಡಿ ಹಡಗನ್ನು ನಡೆಸುವ ಪುಟ್ಟಣ್ಣ ಕಣಗಾಲ್ ಚಿತ್ರ ನಿರ್ದೇಶಕರ ಮಾಧ್ಯಮ ಎಂದು ಕೂಗಿ ಕೂಗಿ ಹೇಳುತ್ತಾರೆ

   Delete