ಬಹಳ ತಿಂಗಳುಗಳ ನಂತರ ಒಂದು ಸಿನೆಮಾಕ್ಕೆ ಹೋಗಬೇಕು ಅನ್ನಿಸಿತು. ಮಗಳಿಗೆ ಇವತ್ತು ಪರೀಕ್ಷೆ ಮುಗಿದಿತ್ತು. ಎಲ್ಲಿಗಾದರೂ ಕರೆದುಕೊಂಡು ಹೋಗೋಣ ಅನ್ನಿಸಿ ಸರಿ ದೂದ್ ಸಾಗರ್ ತೋರಿಸುವ ಎಂದು "ಮೈನಾ" ಚಿತ್ರಕ್ಕೆ "ಶ್ರೀವಿತಲ್" ಹೋದೆವು.
ಇನ್ನು ಚಿತ್ರದ ಬಗ್ಗೆ ಆಗಲೇ ನೂರಾರು ವಿಮರ್ಶೆಗಳು, ಹೊಗಳಿಕೆಗಳು, ಗಲ್ಲಾಪೆಟ್ಟಿಗೆಯಲ್ಲೂ ಸದ್ದು ಮಾಡಿದ ಚಿತ್ರ ಎಂದು ಬಣ್ಣಿಸಿ ಬರೆದ ಲೇಖನಗಳು ಮೈನಾ ಹಕ್ಕಿಯಂತೆಯೇ ಹಾರಾಡುತ್ತಿದೆ. ನನಗೆ ಅನ್ನಿಸಿದ ಒಂದೆರಡು ಮಾತುಗಳನ್ನ ಬರೆಯೋಣ ಎನ್ನಿಸಿತು. ಹಾಗಾಗಿ ಈ ಬ್ಲಾಗ್ ಲೇಖನ!
ಮೈ ನವಿರೇಳಿಸುವಂತಹ ಆರಂಭಿಕ ಸಾಹಸ ದೃಶ್ಯಗಳಿಂದ ಶುರುವಾಗುತ್ತದೆ ಚಿತ್ರ. ನಂತರ ನಿಧಾನಗತಿಯಲ್ಲಿ ಕಾವೇರಿಸುತ್ತಾ ಸಾಗುತ್ತದೆ. ಈ ರಿಯಾಲಿಟಿ ಶೋಗಳು ಮನುಷ್ಯರನ್ನು ಮಾನವೀಯ ಕಂಪನಗಳಿಂದ ಹೇಗೆ ದೂರ ಒಯ್ಯಬಲ್ಲದು ಎಂದು ಸೂಕ್ಷ್ಮವಾಗಿ ಪರಿಚಯಿಸುತ್ತಾ ಹೋಗುತ್ತದೆ.
ನಂತರ ಶುರುವಾಗುತ್ತದೆ ರಿಯಲ್ ಸಿನಿಮಾ. ದೃಶ್ಯ ಕಾವ್ಯವಾಗಿ ಹರಿದಾಡುತ್ತದೆ. ಪ್ರತಿಯೊಂದು ಸನ್ನಿವೇಶವನ್ನು ಕುಸುರಿಗಾರನ ಕೈಚಳಕದಲ್ಲಿ ಅರಳಿದ ಕಲೆಯಂತೆ ಸಾಗುತ್ತದೆ. ಪಾತ್ರಧಾರಿಗಳು ಕೂಡ ಆ ಪಾತ್ರಗಳಿಗೆ ಎಷ್ಟು ಬೇಕೋ ಅಷ್ಟು ಅಭಿನಯವನ್ನು ಮುದ್ದಾಗಿ ಅಭಿನಯಿಸಿದ್ದಾರೆ.
ಮನಸೆಳೆಯುವ ಅಂಶಗಳು :
ಹುಚ್ಚೆಬ್ಬಿಸುವ ಅಂಶಗಳು:
ಚಿತ್ರ ಕೃಪೆ - ಅಂತರ್ಜಾಲ |
ಚಿತ್ರ ಕೃಪೆ - ಅಂತರ್ಜಾಲ |
ನಂತರ ಶುರುವಾಗುತ್ತದೆ ರಿಯಲ್ ಸಿನಿಮಾ. ದೃಶ್ಯ ಕಾವ್ಯವಾಗಿ ಹರಿದಾಡುತ್ತದೆ. ಪ್ರತಿಯೊಂದು ಸನ್ನಿವೇಶವನ್ನು ಕುಸುರಿಗಾರನ ಕೈಚಳಕದಲ್ಲಿ ಅರಳಿದ ಕಲೆಯಂತೆ ಸಾಗುತ್ತದೆ. ಪಾತ್ರಧಾರಿಗಳು ಕೂಡ ಆ ಪಾತ್ರಗಳಿಗೆ ಎಷ್ಟು ಬೇಕೋ ಅಷ್ಟು ಅಭಿನಯವನ್ನು ಮುದ್ದಾಗಿ ಅಭಿನಯಿಸಿದ್ದಾರೆ.
ಮನಸೆಳೆಯುವ ಅಂಶಗಳು :
- ಚೇತನ್ ಅವರ ಆಕರ್ಷಕ ಮೈಕಟ್ಟು, ಓಡುವ ಶೈಲಿ, ಸುಂದರ ನಗು ಚೆಲ್ಲುವ ಕಣ್ಣುಗಳು, ಜಲಪಾತದಂತೆಯೇ ಹರಿದಾಡುವ ತಲೆಗೂದಲು
- ಬೇಸರವೆನಿಸುವ ತಬಲಾ ನಾಣಿಯ ಅದೇ ಕುಡುಕನ ಶೈಲಿಯ ಮಾತುಗಳು, ಆದರೆ ಬರು ಬರುತ್ತಾ ನಾಯಕನಿಗೆ ಅವನ ಪ್ರೇಮಕ್ಕೆ ಸಹಾಯ ಮಾಡುವ ಹೃದಯ ಸಿರಿವಂತಿಕೆ (ಬಹುಶಃ ಸಿನಿಮಾದಲ್ಲಿ ಮಾತ್ರ ಸಿಗುತ್ತೆ)
- ಸಾಧು ಕೋಕಿಲ ಅವರ ಹಾಸ್ಯ ನಟನೆಗಿಂತ ಹಿನ್ನೆಲೆ ಸಂಗೀತದಲ್ಲಿ ಗಮನ ಸೆಳೆಯುತ್ತಾರೆ (ಕನ್ನಡ ಚಿತ್ರರಂಗದಲ್ಲಿ ಅವರಂತೆ ಪರಿಣಾಮಕಾರಿಯಾಗಿ ಹಿನ್ನೆಲೆ ಸಂಗೀತ ಕೊಡುವರು ಇನ್ನೊಬ್ಬರಿಲ್ಲಾ ಎನ್ನಿಸುತ್ತದೆ)
- ಪೋಲಿಸ್ ಸಮವಸ್ತ್ರದಲ್ಲಿ (ಮೊದಲಬಾರಿಗೆ) ಮೈ ತುಂಬಾ ಬಟ್ಟೆ ಹಾಕಿಕೊಂಡು ಮುದ್ದಾಗಿ ಕಾಣುವ ಸುಮನ್ ರಂಗನಾಥ್
- ಸಾಹಸ ದೃಶ್ಯಗಳು ಗಮನ ಸೆಳೆಯುತ್ತವೆ.
- ಚಿತದ ೯೮ % ಭಾಗ ಅತ್ಯುತ್ತಮ ನಿರ್ದೇಶನ ಮಾಡಿರುವ ನಾಗ್ ಶೇಖರ್! (ಇನ್ನುಳಿದ ೨% ಮಾಹಿತಿಗೆ ಲೇಖನದ ಕೊನೆಯಲ್ಲಿ ನೋಡಿ)
ಹುಚ್ಚೆಬ್ಬಿಸುವ ಅಂಶಗಳು:
ಚಿತ್ರ ಕೃಪೆ - ಅಂತರ್ಜಾಲ |
- ಹಿರಿಯ ತಾರೆ "ಸರಿತಾ" ನಂತರ ಕಣ್ಣುಗಳಲ್ಲೇ ಅಭಿನಯಿಸುವ ನಾಯಕಿ ನಿತ್ಯಾ ಮೆನನ್. ಅವರ ಪಾತ್ರಕ್ಕೆ ಮಾತುಗಳೇ ಬೇಡವಾಗಿತ್ತು ಅನ್ನಿಸುವಷ್ಟು ಅದ್ಭುತವಾಗಿವೆ ಕಣ್ಣಿನ ಅಭಿನಯ
- ಕಲರಫುಲ್ ಎನ್ನುವಾಗ ಕಣ್ಣಲ್ಲಿ ಕಾಣುವ ಕಾಂತಿ
- ಚಿಕ್ಕ ವಯಸ್ಸಿನಲ್ಲಿ ತೆವಳಲು ಮಜಾ ಎನ್ನಿಸುತ್ತಿತ್ತು.. ತೆವಳುವುದೇ ಜೀವನದ ಅಂತಿಮ ಎನ್ನುವ ದೃಶ್ಯದಲ್ಲಿ ಕಣ್ಣುಗಳು ಕಾರುವ ಭಾವ
- ನನಗೆ ಗಂಡ ಬೇಕು ಎನ್ನುವಾಗ ಕಣ್ಣಲ್ಲಿ ಕಾಣುವ ದೂದ್ ಸಾಗರ!
- ನಿತ್ಯಾ ಮೆನನ್ ಅವರದು "ಮೈನಾ"ದಲ್ಲಿ "ಮೈ"ನಾ ತೋರಿಸದೆ ಮನಸನ್ನು ಬಿಚ್ಚಿಟ್ಟ ಒಂದು ಸುಂದರ ಪಾತ್ರ
- ಈ ಚಿತ್ರದ ನಿಜವಾದ ನಾಯಕ ಛಾಯಾಗ್ರಾಹಕ ಸತ್ಯ ಹೆಗಡೆ. ಕ್ಯಾಮೆರಾಗಳನ್ನು ಎಲ್ಲೆಲ್ಲಿ ಇಟ್ಟಿದ್ದಾರೆ ಎನ್ನುವ ಅನುಮಾನ ಹುಟ್ಟಿಸುವಷ್ಟು ದೃಶ್ಯಗಳು ಶ್ರೀಮಂತವಾಗಿವೆ.
- ಸಮುದ್ರ ತೀರದ ದೃಶ್ಯಗಳು, ಕ್ಯಾಮೆರಾಗಳು ಹರಿದಾಡುವ ಸೊಗಸು ನೋಡಿಯೇ ಅನುಭವಿಸಬೇಕು
- ಮಳೆ ದೃಶ್ಯಗಳನ್ನು ಬೊಂಬಾಟ್ ಆಗಿ ಚಿತ್ರೀಕರಿಸಿದ್ದಾರೆ
- ದೂದ್ ಸಾಗರ ಜಲಪಾತದ ಕಣಿವೆ ದೃಶ್ಯಗಳು, ಕ್ಯಾಸಲ್ ರಾಕ್, ಬ್ರಿಗಾಂಜ್ ಘಾಟ್, ರೈಲು ಪಟ್ಟಿಯ ಮಧ್ಯೆ ಬರುವ ಸುರಂಗಗಳು, ಪ್ರತಿಯೊಂದು ದೃಶ್ಯಕಾವ್ಯ. ಇನ್ನೊಮ್ಮೆ ಈ ಚಿತ್ರವನ್ನು ನೋಡಬೇಕೆನಿಸಿದರೆ ಅದು ಸತ್ಯ ಅವರ ಅದ್ಭುತ ಕೆಲಸಕ್ಕೆ. ಜಲಪಾತಗಳನ್ನು ಇಷ್ಟು ಸುಂದರವಾಗಿ ಸೆರೆಹಿಡಿಯಬಹುದು ಎಂದು ತೋರಿಸಿದ್ದಾರೆ. ಅವರ ಶ್ರಮಕ್ಕೆ ಶಿರಬಾಗಿ ನಮಿಸುವೆ
ತಲೆಕೂದಲು ಕಿತ್ತು ಕೊಳ್ಳಬೇಕು ಅನ್ನಿಸುವ ಅಂಶಗಳು:
- ಚಿತ್ರದುದ್ದಕ್ಕೂ ಮೈ ಮುಚ್ಚುವ ಪೋಲಿಸ್ ಧಿರುಸಿನಲ್ಲಿ ಸುಂದರವಾಗಿ ಕಾಣುವ ಸುಮನ್ ರಂಗನಾಥ್ ಕಡೆ ದೃಶ್ಯದಲ್ಲಿ ಒಂದು ಸುಂದರ ಹಾಡನ್ನು ಗಬ್ಬೆಬ್ಬಿಸಿ ರಿಮಿಕ್ಸ್ ಅನ್ನುವ ಕೆಟ್ಟ ತಂತ್ರ ಮಾಡಿ ವಯೋವೃದ್ಧರಾದ ಕೆಲ ನಟರನ್ನ ಬಾಯಿ ಬಾಯಿ ಬಿಡುತ್ತಾ ಚಿತ್ರೀಕರಿಸಿರುವ ಹಾಡು. ಅದಕ್ಕೆ ಹಿರಿಯ ನಟರನ್ನು ಬಳಸಿಕೊಂಡ ರೀತಿ (ಲೋಕನಾಥ್, ಪಾರ್ಥಸಾರಥಿ, ಉಮೇಶ್)... ದೇವರೇ ಕಾಪಾಡಪ್ಪ!
- ರಾತಿ ಪೂರ್ತ ಸಂಕಟ ಅನುಭವಿಸಿ ಹೆತ್ತ ಮಗುವನ್ನು ನಾಯಿ ಕಚ್ಚಿಕೊಂಡು ಹೋಯಿತು ಎನ್ನುವ ಹಾಗೆ... ಒಳ್ಳೆ ಅಂತ್ಯ ಕೊಡಬೇಕಾದ ಜಾಗದಲ್ಲಿ @#$@#$@#$!
- ಈ ಕಡೆ ಪ್ರೇಮ ಕಾವ್ಯವೂ ಆಗದೆ, ಸೇಡಿನ ರಾಜಕಾರಣವೂ ಆಗದ ಎಡಬಿಡಂಗಿಯಂತಹ ಅಂತ್ಯ
- ಸಂಜು ಮತ್ತು ಗೀತ ದುಖಾಂತ್ಯವಾಯಿತು ಗಲ್ಲಾ ಪೆಟ್ಟಿಗೆ ತುಂಬಿತ್ತು ಅಂತ ಈ ಚಿತ್ರದಲ್ಲಿಯೂ ಬೇಡದ ಅದೇ ದೋರಣೆಯನ್ನು ತೋರಿರುವುದು.
- ಒಳ್ಳೆಯ ನಟರನ್ನು ಪಾತ್ರ ಪೋಷಣೆ ಇಲ್ಲದೆ ವ್ಯರ್ಥ ಮಾಡಿರುವುದು (ಸುಹಾಸಿನಿ, ಅನಂತನಾಗ್, ಜೈ ಜಗದೀಶ್)
- ಶರತ್ ಕುಮಾರ್ ಈ ಪಾತ್ರಕ್ಕೆ ಬೇಕಿತ್ತೆ ಎನ್ನುವ ಗೊಂದಲ ಕಾಡುತ್ತದೆ
ಹೊಡಿ ಬಡಿ ಚಚ್ಚು ಎನ್ನುವ ಸಿದ್ಧ ಸೂತ್ರಗಳ ಮಧ್ಯೆ ನಿಜಕ್ಕೂ ಉಸಿರಾಡಿಸುವ ಸುಂದರ ಚಿತ್ರ. ನೋಡಿ ಅಪರೂಪಕ್ಕೆ ಎಂಬಂತೆ ಬಂದಿರುವ ಒಂದು ಸುಂದರ ಕನ್ನಡ ಚಿತ್ರವನ್ನು ಬೆಂಬಲಿಸಿ.
ಶ್ರೀ,
ReplyDeleteಧನ್ಯವಾದಗಳು ಚಂದದ ವಿಮರ್ಶೆಗೆ..
ಈ ರೀತಿ ಬರೆಯುವ ಶೈಲಿಯನ್ನು ಮೊದಲ ಬಾರಿಗೆ ನೋಡಿದೆ ..
ಈ ರೀತಿ ವಿಂಗಡಿಸುವುದು ಹೊಸತನ ಎನಿಸಿತು...ಆದರೆ ವಿಮರ್ಶೆಯನ್ನು ಬರೆಯುವಾಗ ಈ ರೀತಿ ಪ್ರತಿಯೊಂದು ಅಂಶಗಳನ್ನು ಒಂದೊಂದರಂತೆ ಬರೆಯುವುದು ಎಷ್ಟು ಸರಿಯೋ ಗೊತ್ತಿಲ್ಲ...ನನಗನಿಸಿದಂತೆ ಚಿತ್ರಗಳ ಬಗ್ಗೆ ಅಥವಾ ಬೇರೆಯವರ ಕಲಾಕೃತಿಯೋ ಅಥವಾ ಅನ್ವೇಷಣೆಯನ್ನೋ ಉಳಿದವರಿಗೆ ತಿಳಿಸುವಾಗ ಈ ರೀತಿ ಬರೆದರೆ,ನಮ್ಮ ಸ್ವಂತದ ಅಭಿಪ್ರಾಯವನ್ನು ಓದುಗರ ಮೇಲೆ ಹೇರಿದಂತಾಗುತ್ತದೆ ಅನಿಸುತ್ತದೆ ..ಗೊತ್ತಿಲ್ಲ...ನೀವು ಆ ರೀತಿ ಬರೆದಿದ್ದೀರಿ ಅಂತೆನಲ್ಲ, ಆದರೆ ಆ ಒಂದಾದ ಮೇಲೋಂದು ಬರುವ ಪಾಯಿಂಟುಗಳ ಭರದಲ್ಲಿ ಅದೇ ಭಾವ ಬಂದರೂ ಬರಬಹುದು ಎನ್ನುವುದಷ್ಟೇ...ಅದೇ ನಮ್ಮದೇ ಆದ ಬರಹಕ್ಕೆ ಈ ರೀತಿ ಬಳಸಿದರೆ ತೊಂದರೆಯೇನಿಲ್ಲ ಎಂದೆನಿಸುತ್ತದೆ..ಯಾವುದೋ ಸಾಮಾಜಿಕ ವಿಷಯದ ಬಗೆಗಿನ ಲೇಖನಕ್ಕೋ ಅಥವಾ ಇಲ್ಲೇ ಹೇಳುವುದಾದರೆ ಇಂದಿನ ಚಲನಚಿತ್ರಗಳು ಎಂಬಿತ್ಯಾದಿ ವಿಷಯಕ್ಕೋ ಇವು ಸರಿ ಎಂದೆನಿಸುತ್ತಿದೆ..ನೋಡಿ ಒಮ್ಮೆ ಆ ಕಡೆ..
ಇನ್ನು ವೈಯಕ್ತಿಕ ನೆಲೆಗಟ್ಟಿನಲ್ಲಿ ಹೇಳುವುದಾದರೆ ನನಗೆ ಚಿತ್ರದ ಕ್ಲೈಮಾಕ್ಸ್ ತುಂಬಾ ಇಷ್ಟವಾಗಿತ್ತು..ಕಾಲೇಜು ಹುಡುಗರೆಲ್ಲ ಭಾವುಕರಾಗಿ ಚಿತ್ರಮಂದಿರದಿಂದ ಹೊರಬರುವುದನ್ನು ನೋಡಿದ್ದೆ...ಇಲ್ಲಿ ನೀವು ಅಂತ್ಯದ ಬಗ್ಗೆ ಬರೆದಿದ್ದು ನೋಡಿ ಖುಷಿಯಾಯಿತು...ನಮಗೆ ಚೆನ್ನಾಗಿ ಕಾಣಿಸಿದ್ದು ಎಲ್ಲರಿಗೂ ಕಾಣಲೇಬೇಕು ಎಂದಿಲ್ಲ ಅಲ್ವಾ??? ಹಾಂ ಆದರೆ ನಿಮ್ಮ ಒಂದು ಮಾತನ್ನು ನಾ ಒಪ್ಪಲಾರೆ ನನ್ನ ಮಟ್ಟಿಗೆ..ನನ್ನ ಮನಸ್ಸಿನಲ್ಲಿ "ಮೈನಾ" ಇನ್ನೂ ಚಂದದ ಪ್ರೇಮಕಾವ್ಯವಾಗೇ ಉಳಿದಿದೆ :)..ಅದು ನನ್ನ ಸ್ವಂತದ ಅನಿಸಿಕೆಯಷ್ಟೇ...
ಧನ್ಯವಾದಗಳು ಶ್ರೀ...ಬಹಳ ದಿನಗಳ ನಂತರ ನೀವು ಹೊಸಗನ್ನಡ ಚಿತ್ರ (ಹೊಸ--ಕನ್ನಡ ;)P)ದ ಬಗ್ಗೆ ನೀವು ಬರೆದದ್ದನ್ನು ಓದಿದೆ..ಬರೆಯುತ್ತಿರಿ..
ಹಮ್ ಇಲ್ಲಿ ನನಗನಿಸಿದ್ದನ್ನು ನೇರವಾಗಿ ಹೇಳಿದೆ, ಬೇಜಾರಿದ್ದರೆ ದಯವಿಟ್ಟು ಕ್ಷಮಿಸಿ...ಮುಕ್ತ ಚರ್ಚೆಗೆ ಬ್ಲಾಗ್ ಲೋಕ ತೆರೆದುಕೊಳ್ಳಲಿ ಎಂಬುದಷ್ಟೇ ನನ್ನ ಆಶಯ..
ನಮಸ್ತೆ :)
ಚಿನ್ಮಯ್.. ಲೋಕೋ ಭಿನ್ನಃ ರುಚಿಹಿ ಅನ್ನುವಂತೆ ಗಣಿತದ ಭಿನ್ನರಾಶಿಯಲ್ಲಿ ಮೂರುವಿಧಗಳಿವೆ. ಹಾಗೆಯೇ ಇಬ್ಬರು ನೋಡುವ ನೋಟ ಒಂದೇ ರೀತಿಯಲ್ಲಿ ಇರಲು ಆಗೋಲ್ಲ ಎನ್ನುವ ನಿಮ್ಮ ಮಾತು ಸರಿಯಾಗಿದೆ ಈ ಸಿನಿಮಾ ಬಿಡುಗಡೆಯಾದಾಗ ಬೇಕಾದಷ್ಟು ಋಣಾತ್ಮಕ, ಧನಾತ್ಮಕ ಅಂಶಗಳು ದಿನಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಬಂದಿದ್ದವು. ಅದನ್ನೆಲ್ಲ ಓದುಗರ, ನೋಡುಗರ ಮೇಲೆ ಹಾಕುವ (ಅಥವಾ ಬೀಳುವ) ಒತ್ತಡ ಎನ್ನಲಿಕ್ಕೆ ಆಗುತ್ತದೆಯೇ. ಅವರವರ ಭಾವಕ್ಕೆ ಅನ್ನುವ ಹಾಗೆ ನಾ ಕಂಡ ಕಣ್ಣಲ್ಲಿ ಹೇಳಲು ಮಾಡಿದ ಒಂದು ಪ್ರಯತ್ನ ಇದು. ನಿಮಗೆ ಇಷ್ಟವಾಯಿತು ಅದು ನನಗೆ ಸಂತಸ ತಂದಿತು. ಸುಂದರವಾದ ವಿಶ್ಲೇಷಣೆಯ ನಿಮ್ಮ ಪ್ರತಿಕ್ರಿಯೆ ಚಂದವಾಗಿದೆ. ಧನ್ಯವಾದಗಳು ಚಿನ್ಮಯ್!!
Deleteಒಂದು ಸಿನಿಮಾದ ಸಮರ್ಥ ವಿಶ್ಲೇಷಣೆ, ನನ್ನ ಗೆಳೆಯ ಸತ್ಯ ಹೆಗಡೆಯ ಬಗ್ಗೆ ಒಳ್ಳೆಯ ಮಾತುಗಳು ಬರೆದದ್ದಕ್ಕಾಗಿ ಅನಂತ ಧನ್ಯವಾದಗಳು.
ReplyDelete"ಕನ್ನಡ ಪುಸ್ತಕ - ಕೊಂಡು ಓದಿ"
"ಕನ್ನಡ ಸಿನಿಮಾ - ಚಿತ್ರಮಂದಿರದಲ್ಲೇ ನೋಡಿ"
"ಕನ್ನಡ ವಾಹಿನಿ - ಟಿಐ.ಆರ್.ಪಿ. ಬರೋವಂತೆ ಮಾಡಿ"
ಧನ್ಯವಾದಗಳು ಬದರಿ ಸರ್. ನಿಜಕ್ಕೂ ಅವರ ಪ್ರತಿಭೆ ಅಮೋಘವಾಗಿ ಅನಾವರಣಗೊಂಡಿದೆ. ಹೌದು ಒಳ್ಳೆಯ ಸಿನಿಮಾಗಳನ್ನು ಪ್ರೇಕ್ಷಕ ಪ್ರಭು ಯಾವಗಲು ಸ್ವೀಕರಿಸಿದ್ದಾನೆ ಮತ್ತು ಸ್ವೀಕರಿಸುತ್ತಲಿರಬೇಕು!!!
Deleteಶ್ರೀಕಾಂತ್ ರವರೇ ನನಗೂ ಈ ಚಿತ್ರ ನೋಡಿದಾಗ ಇದೆ ರೀತಿಯ ಅನುಭವವಾಗಿತ್ತು(ಆದರೆ ಅದರ ಬಗ್ಗೆ ಎಲ್ಲೂ ಬರೆಯಲಿಲ್ಲ ಅಷ್ಟೇ).
ReplyDeleteನನಗೂ ನಿಮ್ಮಷ್ಟೇ ಆ ಚಿತ್ರದ ದುಖಾಂತ್ಯದ ಬಗ್ಗೆ ಬೇಸರವಿದೆ. ದುಖಾಂತ್ಯ ತಂದರೆ ಸಿನಿಮಾ ಹಾಲ್ ಬಿಟ್ಟು ಹೊರಡುವ ಪ್ರೇಕ್ಷಕನ ಕಣ್ಣಲ್ಲಿ ನೀರು ಬಂದರೆ ಚಿತ್ರ ಹಿಟ್ ಆಗುತ್ತದೆಂದು ಬಹಳ ನಿರ್ದೇಶಕರು ಅಂದುಕೊಂಡಿದ್ದಾರೆಂಬುದು ಬೇಸರ ತರಿಸುವ ವಿಷಯ. ಒಳ್ಳೆಯ ಊಟ ಉಣಬಡಿಸುತ್ತಾ ಇದ್ದಕ್ಕಿದ್ದಂತೆ ಜಿರಳೆ ಬಿದ್ದಿರುವ ಪಲ್ಯವೊಂದನ್ನು ಬಡಿಸಿದರೆ ಹೇಗಿರುತ್ತದೋ ಹಾಗೆ ಪ್ರೇಕ್ಷಕನ ಮನಸ್ಥಿತಿಯಾಗಿರುತ್ತದೆ. ಈ ಕಥೆಯಲ್ಲಿ ಅದು ಬೇಕಿತ್ತು ಎಂದು ಹೇಳಬಹುದು, ಆದರೆ ಏನೋ ಬೇರೆಯಿರಬೇಕಿತ್ತು ಎಂಬ ಅಸಮಾಧಾನವಂತೂ ಕಾಡದೇ ಇರದು.
ಜೊತೆಗೆ ಪೋಲೀಸ್ ಅಧಿಕಾರಿಯೊಬ್ಬಳು ಇದ್ದಕ್ಕಿದ್ದಂತೆ ಐಟಮ್ ಸಾಂಗ್ ಒಂದರಲ್ಲಿ ಕುಣಿಯುವುದು ಅರಗಿಸಿಕೊಳ್ಳಲಾಗದ ಸಂಗತಿ. ಅದನ್ನು ಉದ್ದೇಶಪೂರ್ವಕವಾಗಿ ತುರುಕಿದ್ದಾರೆಂದು ಅನಿಸುತ್ತದೆ.
----------------------
ಈ ಅಂಶಗಳನ್ನು ಬಿಟ್ಟರೆ ಉಳಿದಂತೆ ಹಿನ್ನೆಲೆ ಸಂಗೀತ, ನಿರ್ದೇಶನ, ಛಾಯಾಗ್ರಹಣ ಎಲ್ಲವೂ ಮನಸ್ಸಿಗೆ ಖುಷಿ ಕೊಟ್ಟುತ್ತವೆ.
ಕನ್ನಡಿಗನಾಗಿ ಕನ್ನಡ ಚಿತ್ರ ಗೆದ್ದರೆ ನನಗೆ ಬಹಳ ಸಂತೋಷ.
ಈ ಲೋಪಗಳನ್ನು ಹೇಳಿರುವುದು ಮುಂದಿನ ಚಿತ್ರಗಳಲ್ಲಿ ನಾಗಶೇಖರ್ ತಿದ್ದಿಕೊಳ್ಳಲಿ ಅಂತ.
ಚಿತ್ರದಿಂದ ಚಿತ್ರಕ್ಕೆ ಅವರು ಬೆಳೆಯಬೇಕೆಂಬುದು ನಮ್ಮೆಲ್ಲರ ಆಶಯವಷ್ಟೇ!!
ಸಂತೋಷ್ ಅವರೇ ಧನ್ಯವಾದಗಳು. ನಿಮಗೂ ಹಾಗೆ ಅನ್ನಿಸಿದ್ದು ಎಂದು ಕೇಳಿ ಸಂತಸವಾಯಿತು. ನಮ್ಮ ನಿರ್ದೇಶಕರು ವಾಣಿಜ್ಯ ಯಶಸ್ಸಿಗಾಗಿ ಸಿದ್ಧಸೂತ್ರಗಳಿಗೆ ಜೋತು ಬೀಳುವುದನ್ನು ನೋಡಿದಾಗ ಬೇಸರವಾಗುತ್ತದೆ. ನಿಮ್ಮ ಸುಂದರ ವಿಶ್ಲೇಷಣೆಗೆ ನನ್ನ ಧನ್ಯವಾದಗಳು
Deleteಲೇಖನದ ಮೊದಲ ಭಾಗ ನಾ ನೋಡಿದ ಮೈನಾ ದ ಬಗ್ಗೆಯೇ ಹೇಳುತ್ತೀರಾ ಅಂತ ಅನುಮಾನವಾಯಿತು.. ಕ್ಯಾಮರಾ ವರ್ಕ್ ಬಿಟ್ಟರೆ ಬೇರೇನೂ ಇಷ್ಟ ಆಗುವಂತಹ ಅಂಶ ಚಿತ್ರದಲ್ಲಿ ನನಗೆ ಕಾಣಿಸಲಿಲ್ಲ.
ReplyDeleteನಿಮ್ಮ ವಿಮರ್ಶೆ ಇಷ್ಟವಾದಷ್ಟು ಚಿತ್ರ ಇಷ್ಟ ಆಗಲಿಲ್ಲ.. :D
ಪಿ.ಎಸ್ ಕೆಲವೊಮ್ಮೆ ಹಾಗೆ ಆಗುವುದುಂಟು. ಚಿತ್ರಕ್ಕಿಂತ ಅದರ ಬರಹಗಳೇ ಖುಷಿ ಕೊಡುತ್ತದೆ. ಇಂದಿಗೂ ನಿಮ್ಮ ಹಾಗೆ ನನಗೆ ಹಾಗೆ ಅನ್ನಿಸುವ ಚಿತ್ರ ಕಸ್ತೂರಿ ನಿವಾಸ. ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ
Deleteಚಿತ್ರದಲ್ಲಿ ನಿಜಕ್ಕೂ ಬೇಜಾರಾದ ಸಂಗತಿಗಳು ಅಂದರೆ ಐಟಂ ಸಾಂಗ್ ಮತ್ತು ಕ್ಲೈಮ್ಯಾಕ್ಸ್...ಈ ಚಿತ್ರದಲ್ಲಿ ಕ್ಯಾಮೆರ ವರ್ಕ್ ತುಂಬ ಚೆನ್ನಾಗಿದೆ ..ಮತ್ತೆ ಕೊನೆಗೆ ಅನಿಸಿದ್ದು ದೂದ್ ಸಾಗರ್ ಅನ್ನು ನೋಡಲೇಬೇಕು ಎಂದು ... ಕಳೆದ ಬಾರಿ ನಿಮ್ಮ ಲೇಖನ ನೋಡಿದಾಗ ಅಲ್ಲಿಗೆ ಹೋಗಬೇಕೆಂದು ಕೊಂಡಿದ್ದೆ ... ಇಲ್ಲಿ ಅದರ ವಿಡಿಯೋ ನೋಡಿದ ಮೇಲೆ ನೋಡಲೇಬೇಕು ಎಂದು ಗಾಢವಾಗಿ ಅನ್ನಿಸಿದೆ ... ಒಳ್ಳೆಯ ವಿಮರ್ಶೆ ಸರ್ ...
ReplyDeleteಬಹಳ ದಿನದ ನಂತರ ಇಷ್ಟ ಆದ ಕನ್ನಡ ಚಿತ್ರ ಇದು..
ಬೆಣ್ಣೆಯಲ್ಲಿ ಸುಂದರ ಗೊಂಬೆಯ ಮಾಡಿ ಕಡೆಗೆ ಅದರ ಮೇಲೆ ಸಗಣಿ ಇಡುವಂತೆ ಭಾಸವಾಗುತ್ತೆ ಈತರಹ ಕ್ಲೈಮ್ಯಾಕ್ಸ್ ಮತ್ತು ಐಟಂ ಹಾಡುಗಳು. ಸುಂದರ ಪ್ರತಿಕ್ರಿಯೆ ಗಿರೀಶ್ ಧನ್ಯವಾದಗಳು ಬಹಳ ದಿನಗಳ ನಂತರ ಒಂದು ಸುಂದರ ಕನ್ನಡ ಚಿತ್ರ ನೋಡಿದ ಅನುಭವವಾಯಿತು
Deleteನೋಡಲೋ ಬೇಡವೋ ಅನ್ನೋ ಗೊಂದಲದಲ್ಲಿ ಇದ್ದೆ. ಸಂಜು ವೆಡ್ಸ್ ಗೀತ ಚಿತ್ರದ ಥರ ದುಖಾಂತ್ಯ ಅಂದರೆ ಮತ್ತೊಮ್ಮೆ ಯೋಚನೆ ಮಾಡಬೇಕು ದುಡ್ಡು ಕೊಟ್ಟು ಅಳಬೇಕು ನೋಡಿ.
ReplyDeleteಒಮ್ಮೆ ನೋಡಬಹುದಾದ ಚಿತ್ರ. ಕ್ಯಾಮೆರಾ ಕೆಲಸ ಬಲು ಸೊಗಸಾಗಿದೆ. ಧನ್ಯವಾದಗಳು ಎಸ್ಎಸ್
Deleteಅದೆಷ್ಟೋ ದಿನದ ನಂತ್ರ ಚಿತ್ರ ಮಂದಿರದಲ್ಲಿ ನೋಡಿದ ಚಿತ್ರ ....ಅದೂ ಚಿನ್ಮಯಣ್ಣನ ವಿಮರ್ಶೆ ನೋಡಿ....
ReplyDeleteಈಗ ನಿಮ್ಮೀ ಬರಹ ಓದಿ ನಿಜಕ್ಕೂ ನೋಡಿದ್ದು ಸಾರ್ಥಕ ಅನ್ನಿಸ್ತು:)
ದೂದ್ ಸಾಗರದ ತಂಪಲ್ಲಿ ಮಿಂದೆದ್ದ ಭಾವ :)
ತುಂಬಾ ಚೆನ್ನಾಗಿದೆ ...
ಎಲ್ಲದರ ಬಗ್ಗೆಯೂ ಪಾಸಿಟಿವ್ ಆಗಿ ಹೇಳೋ ನಿಮ್ಮ ಅದೆ ಗುಣ ಮತ್ತೆ ಮತ್ತೆ ಕಾಣ್ತಾ ಇದೆ:)
ಬರೀತಾ ಇರಿ ...ಧನ್ಯಾವಾದ
ಧನ್ಯವಾದಗಳು ಬಿ.ಪಿ. ಸುಂದರ ನಿಮ್ಮದು . ದೂದ್ ಸಾಗರ, ನಾಯಕಿಯ ಭಾವುಕ ಕಣ್ಣುಗಳು, ಕ್ಯಾಮೆರಾ ಕೆಲಸ ಇದನ್ನು ನೋಡಲಿಕ್ಕೆ ಖಂಡಿತ ಈ ಸಿನಿಮಾ ಉತ್ತಮ ಉದಾಹರಣೆ
Delete