Thursday, December 25, 2025

ಭಾರತದ ಸಿನಿ ಜಗತ್ತಿಗೆ ಬಲೆ ಬೀಸಿದ ಜೇಡರ ಬಲೆ 1968 (ಅಣ್ಣಾವ್ರ ಚಿತ್ರ ೯೨/೨೦೭)

ಕರುನಾಡಲ್ಲಿ ಏನಿಲ್ಲ ... ಅಂದರೆ ಎಲ್ಲಾ ಇದೆ ಎಂದು ಎದೆ ತಟ್ಟಿ ಹೇಳೋಕೆ ಬೇಕಾದಷ್ಟು ವಿಷಯಗಳಿವೆ ಅಂತಹ ವಿಷಯದಲ್ಲಿ ಇದು ಒಂದು.. 

 ಚಿತ್ರಜಗತ್ತು ಜೇಮ್ಸ್ ಬಾಂಡ್ ಸಿನಿಮಾಗಳಿಗೆ ಮಾರು ಹೋಗಿದ್ದ ಸಮಯ.. ಆ ಘಟ್ಟದಲ್ಲಿ ಕರುನಾಡು ಹಿಂದೆ ಇಲ್ಲ ಅಂತ ಮೂಡಿ ಬಂದಿದ್ದು ಈ ಜೇಡರ ಬಲೆ.. 



ದೇಸಿ ಮಾದರಿ ಜೇಮ್ಸ್ ಬಾಂಡ್ ಅವತರಿಸಿದ್ದು ಕರುನಾಡ ನೆಲದಲ್ಲಿ.. ಮುಂದೆ ಅನೇಕ ಸಾಹಸಗಳಿಗೆ ಈ ಚಿತ್ರ ಮುನ್ನುಡಿಯಾಗಿದ್ದು ವಿಶೇಷ. 

ಈ ಚಿತ್ರವನ್ನು ಗೂಢಚಾರಿಯ / ಬಾಂಡ್ಕ ಮಾದರಿಯ ಕತೆಗಳ ಕತೃ ಮ.  ರಾಮಮೂರ್ತಿ ಅವರಿಗೆ ಅರ್ಪಿಸಿದ್ದು ವಿಶೇಷ. 


ಸಿನಿಮಾ ವಲಯದಲ್ಲಿ ಒಟ್ಟಿಗೆ ಒಟ್ಟಿಗೆ ಭಿನ್ನ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಸಮಾನ ಮನಸ್ಕರು ಒಟ್ಟಿಗೆಯಾಗಿದ್ದು ಈ ಚಿತ್ರದಿಂದ.. 

ಬಿ ದೊರೈರಾಜ್ ಛಾಯಾಗ್ರಹಣದಲ್ಲಿ ನಿಪುಣರು... ಎಸ್ ಕೆ ಭಗವಾನ್ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ವಿಭಾಗದಲ್ಲಿ ದುಡಿದವರು.. ಇವರಿಬ್ಬರು ದೊರೈರಾಜ್ ಭಗವಾನ್ ಅಂತ ಆಗಿ ಮುಂದೆ ದೊರೈ ಭಗವಾನ್ ಜೋಡಿಯಾಗಿ ಅನೇಕಾನೇಕ ಚಿತ್ರಗಳನ್ನು ನಿರ್ಮಿಸಿ ನಿರ್ದೇಶಿಸಿದ್ದರು.. ಇದು ಅವರ ಮೊದಲ ಸ್ವತಂತ್ರ ಹೆಜ್ಜೆ.. 

ಇಲ್ಲಿಯ ತನಕ ಭಾವನಾತ್ಮಕ, ರೋಷಾವೇಶ, ಭಕ್ತಿಪೂರಕ, ಐತಿಹಾಸಿಕ ಚಿತ್ರಗಳಲ್ಲಿ ಮಿಂದಿದ್ದ ರಾಜಕುಮಾರ್ ಅವರು ಈ ಚಿತ್ರದಲ್ಲಿ ಮೈ ಕೊಡವಿಕೊಂಡು ಅಸಾಧಾರಣ ಗೂಢಚಾರಿಯಾಗಿ ಮಾರ್ಪಾಟಿದ್ದಾರೆ.. 

ಇಲೆಕ್ಟ್ರಾನಿಕ್ ಉಪಕರಣಗಳ ಉಪಯೋಗ, ತಿರುಗುತ್ತ ಇರುವ ಮಂಚ.. ಸ್ವಿಚ್ ಒತ್ತಿದರೆ ಫೋನ್ ಹತ್ತಿರಕ್ಕೆ ಇವರು ಹೋಗೋದು.. ಬಟ್ಟನ್ ಒತ್ತಿದರೆ ತೆರೆದು ಕೊಳ್ಳುವ ಬಾಗಿಲುಗಳು.. ಒಂದು ತಪ್ಪು ಹೆಜ್ಜೆ ಪಾತಾಳಕ್ಕೆ ಬೀಳಿಸುವ ನೆಲದಲ್ಲಿನ ಬಾಗಿಲುಗಳು.. ಹೀಗೆ ಹತ್ತಾರು ತಂತ್ರಗಳನ್ನು ಒಳಗೊಂಡ ದೃಶ್ಯಗಳು ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿದ್ದು ಮತ್ತು ಇದನ್ನೆಲ್ಲಾ ಸರ್ವೇ ಸಾಧಾರಣ ಅನ್ನುವಂತೆ ಉಪಯೋಗಿಸಿ ನಿಜವಾಗಿಯೂ ಗೂಢಚಾರಿಗಳು ಎಂದರೇ ಹೀಗೆ ಇರುತ್ತಾರೆ ಎಂದು ತೆರೆಯ ಮೇಲೆ ನೈಜವಾಗಿ ಅಭಿನಯಿಸಿದ್ದಾರೆ ರಾಜಕುಮಾರ್ ಅವರು. 


ಆ ಸೂಟುಬೂಟುಗಳಲ್ಲಿ ನೆಡೆಯುವಾಗ, ಹೊಡೆದಾಟದ ದೃಶ್ಯಗಳಲ್ಲಿ, ಜಾಣ್ಮೆಯಿಂದ, ಕಿಲಾಡಿತನದಿಂದ ಕಷ್ಟದ ಜಾಲಗಳಿಂದ ಹೊರ ಬರುವುದು, ಖಳನಾಯಕರೊಡನೆ ಸಂಯಮ ಕಳೆದುಕೊಳ್ಳದೆ ಸಂಭಾಷಿಸುವುದು ಹೊಸದು.. ಅದನ್ನು ದಿಟ್ಟವಾಗಿ ಅಳವಡಿಸಿಕೊಂಡು ಅಭಿನಯಿಸಿದ ಪರಿ ಕಣ್ಣಿಗೆ ಸೊಗಸು. 

ಇಡೀ  ಚಿತ್ರವನ್ನು ತಮ್ಮ ಹೆಗಲ ಮೇಲೆ ಹೊತ್ತು ನಿಲ್ಲಿಸಿದ್ದಾರೆ.. 

ಮತ್ತೊಮ್ಮೆ ರಾಜ್ ಕುಮಾರ್ ಅವರ ಚಿತ್ರದಲ್ಲಿ ಖಳನಾಗಿ ಉದಯಕುಮಾರ್ ಮತ್ತು ಅವರ ಜೊತೆಯಾಗಿ ಶಕ್ತಿಪ್ರಸಾದ್, ದಿನೇಶ್, ಎಂಪಿ ಶಂಕರ್ ಸೊಗಸಾದ ಅಭಿನಯ.. 





ಜಯಂತಿ ಮತ್ತು ಶೈಲಶ್ರೀ  ಸೆಳೆಯುತ್ತಾರೆ. ವಿಜಯಲಲಿತಾ ಒಂದು ನೃತ್ಯದ ಹಾಡಿನಲ್ಲಿ ಕಾಣಿಸಿಕೊಳ್ಳುತ್ತಾರೆ 





ನರಸಿಂಹರಾಜು ಗೂಢಚಾರಿಯ ಜೊತೆಗಾರನಾಗಿ ಇದ್ದಾರೆ.. ಅವರಿಗೆ ಜೊತೆಯಾಗಿ ಒಂದೆರಡು ದೃಶ್ಯಗಳಲ್ಲಿ ರಮಾ ಬರುತ್ತಾರೆ.. 


ಅಶ್ವಥ್ ಅತಿಥಿ ನಟ.. ಕೆಲವು ದೃಶ್ಯಗಳು ಆದರೆ ಇಷ್ಟವಾಗುತ್ತಾರೆ


ಈ ರೀತಿಯ ಬಾಂಡ್ ಮಾದರಿ ಚಿತ್ರಗಳಿಗೆ ಸಂಗೀತ ಬಹಳ ಮುಖ್ಯ.. ಜಿ ಕೆ ವೆಂಕಟೇಶ್ ಪಾಶ್ಚ್ಯಾತ್ಯ  ಅಳವಡಿಸಿಕೊಂಡು ದೇಶೀಯ ಮಾದರಿ.. ನಾಯಕಿಯನ್ನು ಕಾರಿನಲ್ಲಿ ಹಿಂಬಾಲಿಸಿಕೊಂಡು ಹೋಗುವ ದೃಶ್ಯದಲ್ಲಿ ಹಿನ್ನೆಲೆ ಸಂಗೀತವನ್ನು ಅನುಸರಿಸುತ್ತಲೇ ಹಾಡಿನ ಸಂಗೀತ ಶುರುವಾಗೋದು ಅವರ ವಿಶಿಷ್ಟತೆ.. ಚಿತ್ರದ ಪೂರ್ತಿ ಇವರ ಸಂಗೀತ ಚಿತ್ರವನ್ನು ಹಿಡಿದಿಟ್ಟಿದೆ. 

ಕಥೆ ಚಿತ್ರನಾಟಕ ನಿರ್ದೇಶನ ದೊರೈರಾಜ್ ಭಗವಾನ್ ಅವರದ್ದು 
ಸಂಭಾಷಣೆ ಎಂ ನರೇಂದ್ರ ಬಾಬು ಹಾಗೂ ಭಗವಾನ್
ಸಾಹಿತ್ಯ ಆರ್ ಎನ್ ಜಯಗೋಪಾಲ್ 
ಗಾಯನ ಎಸ್  ಜಾನಕೀ ಮತ್ತು ಎಲ್ ಆರ್ ಈಶ್ವರಿ. 
ಈ ಚಿತ್ರದ ಇನ್ನೊಂದು ವಿಶೇಷತೆ ಎಂದರೆ ರಾಜಕುಮಾರ್ ಅವರ ಶಾರೀರ ಪಿ ಬಿ ಶ್ರೀನಿವಾಸ್ ಗಾಯನ ಇಲ್ಲದೆ ಇರುವುದು.. ಮತ್ತೆ ರಾಜಕುಮಾರ್ ಅವರಿಗೆ ಹಾಡೇ ಇಲ್ಲದಿರುವುದು 
ಮಂತ್ರಾಲಯ ಮೂವೀಸ್ ಅವರ ಚೊಚ್ಚಲ ಕಾಣಿಕೆ 
ಟಿ ಪಿ  ವೇಣುಗೋಪಾಲ್ ನಿರ್ಮಾಪಕರಾಗಿದ್ದಾರೆ. 

ದೇಸಿ ಗೂಢಚಾರಿಗಳ ಚಿತ್ರ ಸರಣಿಗೆ ಓಂಕಾರ ಹಾಕಿದ್ದು ಜೇಡರ ಬಲೆ.. 

No comments:

Post a Comment