ಈ ಚಿತ್ರ ನೋಡಿದಾಗ ನನಗನಿಸಿದ್ದು ರಾಜಕುಮಾರ್ ಅವರು ಒಂದು ಬಗೆಯ ಹೊಸತನಕ್ಕೋ, ಅಥವ ಏಕತಾನತೆಯನ್ನು ಮುರಿಯೋದಕ್ಕೆ ಈ ಸಿನಿಮಾ ಮಾಡಿರಬಹುದೇನೋ ಅಂತ.. ಕಾರಣ ಹಿಂದಿನ ಚಿತ್ರಗಳಲ್ಲಿ ಸಂಯಮವಾದ ಮಾತುಗಳು, ಕೆಲವು ಚಿತ್ರಗಳನ್ನು ಬಿಟ್ಟರೆ ದುರಭ್ಯಾಸ ಇಲ್ಲದಂತಹ ಪಾತ್ರಗಳು ಇವರ ಗರಿಮೆಯಾಗಿತ್ತು,
ಈ ಚಿತ್ರದಲ್ಲಿ ಜೂಜಾಡುತ್ತಾರೆ, ಸೆರೆ ಕುಡಿಯುತ್ತಾರೆ.. ಜೋರಾದ ದನಿಯಲ್ಲಿ ಮಾತಾಡುತ್ತಾರೆ, ತಾನು ಮಾಡಿದ್ದು ಸರಿ ಎಂದು ತಕ್ಕ ಮಟ್ಟಿಗೆ ಮಾತಾಡುವ ಪಾತ್ರ, ಜೊತೆಯಲ್ಲಿ ಸ್ವರ್ಗ ಲೋಕಕ್ಕೆ ಹೋದರೂ ಒರಟು ಭಾಷೆಯಲ್ಲಿಯೇ ದೇವತೆಗಳನ್ನು ತರಾಟೆಗೆ ತೆಗೆದುಕೊಳ್ಳುವ ಶೈಲಿ, ತನ್ನ ಇಷ್ಟದೈವ ಶಿವನೆದುರಿಗೂ ಕೂಡ ದಬಾಯಿಸುವ ಪಾತ್ರ. ಈ ರೀತಿಯ ಪಾತ್ರಗಳು ಬಹಳ ಕಡಿಮೆ ರಾಜಕುಮಾರ್ ಅವರು ಮಾಡಿದ್ದು.
ಅದಕ್ಕೆ ಹೇಳಿದ್ದು ಏಕಾತಾನತೆಯನ್ನು ಮುರಿಯಲೆಂದೇ ಈ ಚಿತ್ರವನ್ನು ಮಾಡಿದರೇನೋ ಅಂತ.
ಅವರ ಪಾತ್ರದ ತನ್ಮಯತೆ ಅದ್ಭುತ ಅನಿಸುತ್ತದೆ. ಚಿತ್ರದಿಂದ ಚಿತ್ರಕ್ಕೆ ಅವರು ಏರುತ್ತಿರುವ ಬೆಳವಣಿಗೆಯ ಹಾದಿ, ಮಾಗುತ್ತಾ ಬರುತ್ತಿರುವ ಅವರ ಅಭಿನಯದ ಶೈಲಿ, ಪಾತ್ರಕ್ಕೆ ತಕ್ಕಂತೆ ತಮ್ಮನ್ನು ಒಗ್ಗಿಸಿಕೊಳ್ಳುವ ಅವರ ಶಿಸ್ತು, ಅದನ್ನೇ ಅವರನ್ನು ಇಲ್ಲಿಗೆ ತಂದು ನಿಲ್ಲಿಸಿದೆ.
ತಮ್ಮ ತಾಯಿಗೆ ಅಪಾರ ಗೌರವ ಕೊಡುವ ಪಾತ್ರ.. ಅದಕ್ಕೆ ತಕ್ಕಂತೆ ಅಷ್ಟೇ ಗೌರವಯುತ ಪಾತ್ರದ ನಟನೆ ಜಯಶ್ರೀ ಅವರದು.
ಅವರ ತಮ್ಮನ ಪಾತ್ರದಲ್ಲಿ ಸದಾ ನಗೆಯುಕ್ಕಿಸುವ ನರಸಿಂಹರಾಜು.. ಕ್ಷಣಕಾಲ ಅವರನ್ನು ಗೋಳುಹುಯ್ದು ಕೊಳ್ಳುವ ಪಾತ್ರದಲ್ಲಿ ರಮಾದೇವಿ ಹಾಗೂ ಸಹನಟಿ ವಿಜಯಲಲಿತಾ.
ಈ ಚಿತ್ರವನ್ನು ಏಕ ಕಾಲಕ್ಕೆ ಕನ್ನಡ ಮತ್ತು ತೆಲುಗಿನಲ್ಲಿ ಚಿತ್ರೀಕರಣ ಮಾಡಿದ್ದರಿಂದ ಅನೇಕ ತೆಲುಗು ನಟರು ಕಾಣಿಸಿಕೊಳ್ಳುತ್ತಾರೆ.
ಮಾಮೂಲಿನಂತೆ ಎಂ ಪಿ ಶಂಕರ್ ಇಲ್ಲಿ ಖಳನಾಯಕ.. ದೇವರಿಂದ ಸತ್ತು ಬದುಕಿದ ಮಾನವರಿಂದ ಮಾತ್ರ ತನಗೆ ಮರಣ ಎಂಬ ವರ ಪಡೆದು ಗರ್ವಿತನಾಗಿ ಮೆರೆಯುವ ಪಾತ್ರ.
ಜಯಂತಿ ದೇವಲೋಕದ ರಂಬೆಯಾಗಿ, ಇಂದ್ರನಿಂದ ಶಪಿತನಾಗಿ ಭುವಿಯಲ್ಲಿ ಶಾಪ ಕಳೆದುಕೊಳ್ಳುವ ಪಾತ್ರ. ಸುಂದರ ಚಂದಿರನಾಗಿ ಕಂಗೊಳಿಸುತ್ತಾರೆ.
ಕುಪ್ಪುರಾಜ್ ಅವರ ದನಿಯನ್ನು ಹೊತ್ತು ಇಂದ್ರನ ಪಾತ್ರ ಬೆಳಗುತ್ತದೆ.
ಕೆಲವೇ ದೃಶ್ಯಗಳಲ್ಲಿ ಜೋಕರ್ ಶ್ಯಾಮ್ ಕಾಣಿಸಿಕೊಳ್ಳುತ್ತಾರೆ.
ಇಂದ್ರಲೋಕದ ಸೆಟ್ಟುಗಳು, ಛಾಯಾಗ್ರಹಣ, ತಾಂತ್ರಿಕ ಅಂಶಗಳು ಚೆನ್ನಾಗಿ ಮೂಡಿ ಬಂದಿದೆ.
ಮುದ್ದು ಮುದ್ದಾಗಿ ಕಾಣುವ ಶೈಲಶ್ರೀ ಗಂಧರ್ವ ಕನ್ಯೆಯಾಗಿದ್ದಾರೆ.
ಎಸ್ ಭಾವನಾರಾಯಣ್ ಅವರು ಕಥೆ ಚಿತ್ರಕಥೆ ಮೂಡಿಸಿದ್ದಾರೆ. ಫಲಕದಲ್ಲಿ ಒಂದು ಹೊಸಪದ ಕಂಡೆ "ಚಿತ್ರಕತೆ" ಪದದ ಬದಲು ಸಿನಿಮಾನುಕರಣೆ ಎಂಬ ಪದ .
ಸಂಭಾಷಣೆ, ಹಾಡುಗಳು ಮತ್ತು ನಿರ್ದೇಶನ ಹುಣುಸೂರು ಕೃಷ್ಣಮೂರ್ತಿಯವರದ್ದು.
ವೈ. ವಿ ರಾವ್ ನಿರ್ಮಾಣ.
ಸಂಗೀತ ರಾಜನ್ ನಾಗೇಂದ್ರ
ಜಿ ಚಂದ್ರನ್ ಛಾಯಾಗ್ರಹಣದ ಉಸ್ತುವಾರಿ
ಹಾಡುಗಳಿಗೆ ಪಿ ಬಿ, ಶ್ರೀನಿವಾಸ್ ಎಸ್ ಜಾನಕೀ ನಾಗೇಂದ್ರ ಎಲ್ ಆರ್ ಈಶ್ವರಿ ದನಿಯಾಗಿದ್ದಾರೆ.
ಚಿಕ್ಕ ಚೊಕ್ಕ ಚಿತ್ರವಿದು, ರಾಜಕುಮಾರ್ ಅವರ ಅಪರೂಪದ ಅಭಿನಯ ಇದರಲ್ಲಿದೆ.
ಒಂದು ದಿನಕ್ಕೆ ಸ್ವರ್ಗಾಧಿಪತಿಯಾಗಿ ವ್ಯವಸ್ಥೆಯನ್ನು ಬದಲಿಸುವಂಥಹ ಹತ್ತು ನಿಮಿಷದ ದೃಶ್ಯ ರಾಜಕುಮಾರ್ ಅವರ ನಿರರ್ಗಳ ಸಂಭಾಷಣೆಗಳಿಂದ ಕಳೆ ಕಟ್ಟಿದೆ,
ಪ್ರಾಯಶಃ ಒಂದು ದಿನಕ್ಕೆ ಅಧಿಕಾರಿಯಾಗುವ ಪರಿಕಲ್ಪನೆ ಹೊತ್ತ ಚಿತ್ರಗಳಿಗೆ ಈ ಚಿತ್ರಕತೆ ಸ್ಪೂರ್ತಿಯಾಗಿರಬಹುದು.
ವಿಶೇಷತೆ ಎಂದರೆ ಸೆಫಿಯಾ ವರ್ಣದಲ್ಲಿ ಈ ಚಿತ್ರ ನೋಡುವುದು.

No comments:
Post a Comment