Sunday, December 21, 2025

ಮನಸ್ಸಿಗಿಂತ ಶಕ್ತಿಶಾಲಿ ಆಯುಧ ಯಾವುದಿದೆ - ಮನಸ್ಸಿದ್ದರೆ ಮಾರ್ಗ 1967 (ಅಣ್ಣಾವ್ರ ಚಿತ್ರ ೮೮/೨೦೭)

ಪ್ರಕೃತಿ ವಿಕೋಪಕ್ಕೆ ಸಿಕ್ಕಿ ಚೆನ್ನಾಗಿದ್ದ ಸಂಸಾರ ಒಡೆದು ನುಚ್ಚು ನೂರಾಗಿ ಬದುಕನ್ನು ಹೇಗೆ ನಿಭಾಯಿಸೋದು ಅಂತ ತಲೆ ಮೇಲೆ ಕೈ ಹೊತ್ತು ಕೂರದೆ ಅದಕ್ಕೊಂದು ಮಾರ್ಗ ಹುಡುಕಿ ಮತ್ತೆ ಚಿಗುರಿ ನಿಲ್ಲುವ ಸಾಧನೆ ತೋರುವ ಚಿತ್ರವಿದು. 


ಎಂ ಆರ್  ವಿಠ್ಠಲ್ ಅವರ ನಿರ್ದೇಶನದ  ಚಿತ್ರಗಳು ಸಂದೇಶ ಭರಿತ ಚಿತ್ರಗಳಾಗಿರುತ್ತವೆ. ಸಮಾಜಕ್ಕೆ ಉತ್ತಮ ಕಾಣಿಕೆ ನೀಡುವ ಉತ್ಸಾಹ ಇವರ ಚಿತ್ರಗಳು ತೋರುತ್ತವೆ. 

ಶ್ರೀಕಾಂತ್ ಅಂಡ್ ಶ್ರೀಕಾಂತ್ ಲಾಂಛನದಲ್ಲಿ ಶ್ರೀಕಾಂತ್ ನಹತ ಹಾಗೂ ಶ್ರೀಕಾಂತ್ ಪಟೇಲ್ ನಿರ್ಮಾಪಕರಾಗಿದ್ದಾರೆ. 

ಎಂ ರಂಗರಾವ್ ಅವರ ಸುಮಧುರ ಸಂಗೀತವಿದೆ. 

ಸದಾಶಿವ ಬ್ರಹ್ಮ ಅವರ ಚಿತ್ರಕಥೆಗೆ ಸಂಭಾಷಣೆ  ಒದಗಿಸಿದವರು ನರೇಂದ್ರಬಾಬು. 

ವಿಜಯನಾರಸಿಂಹ ಹಾಗೂ ನರೇಂದ್ರಬಾಬು  ಅವರು ಹಾಡುಗಳನ್ನು ಬರೆದಿದ್ದಾರೆ. 

ತಾರಾಗಣದಲ್ಲಿ ರಾಜಕುಮಾರ್, ಜಯಂತಿ,ರಾಜಾಶಂಕರ್, ನರಸಿಂಹರಾಜು,  ಅಶ್ವಥ್, ಉದಯಚಂದ್ರಿಕ, ಬಿ ವಿ ರಾಧಾ, ರಂಗ, ಶೈಲಶ್ರೀ ಹಾಗೂ ಖಳನಾಯಕರಾಗಿ ಎಂ ಪಿ ಶಂಕರ್ , ದಿನೇಶ್ ಇದ್ದಾರೆ.. ಚಿಕ್ಕಪತ್ರಗಳಲ್ಲಿ ರತ್ನಾಕರ್, ಗುಗ್ಗು ಇದ್ದಾರೆ. 

ರಾಜಕುಮಾರ್ ಮನೆಯ ಯಜಮಾನನಾಗಿ ತಮ್ಮ ಸಂಸಾರವಲ್ಲದೆ, ತಮ್ಮನ ಓದು ಬರಹವನ್ನು ನೋಡಬೇಕಾಗಿರುತ್ತದೆ. ಸಂಪಾದನೆಗೆ ಮಾರ್ಗ ಅರಿವಾಗದೇ ಸೈಕಲ್ ರಿಕ್ಷಾ ಓಡಿಸಲು ನಿರ್ಧರಿಸುತ್ತಾರೆ. ಶ್ರಮದ ಕೆಲಸ ಅಂತ ಮಡದಿ ಹೇಳಿದರೆ, ನೋಡಿದವರು ಏನು ಅನ್ನುತ್ತಾರೆ  ಎನ್ನುವ ಅಳುಕು ತಮ್ಮನಿಗೆ. 














ಆದರೆ ಇವರ  ಮಾತಿಗೆ ಗಮನ ಕೊಡದೆ ತಮ್ಮ ಸಂಸಾರವನ್ನು ಹಿಡಿದೆತ್ತಿ ನಿಲ್ಲಿಸಲು ಶ್ರಮಿಸುತ್ತಾರೆ. ತಮ್ಮನ ಪರೀಕ್ಷೆಗೆ ಹಣದ ತೊಂದರೆ ಬಂದಾಗ, ರೇಸ್ ನಲ್ಲಿ ಗೆದ್ದವರಿಗೆ ಬಹುಮಾನ ಸಿಗುತ್ತದೆ  ಎಂಬ ಸುದ್ದಿ ಕೇಳಿ ಕಾಲಿಗೆ ಗುಂಡೇಟಿನಿಂದ ಗಾಯವಾಗಿದ್ದರೂ ಕೂಡ ಲೆಕ್ಕಿಸದೆ ಪಾಲ್ಗೊಂಡು ಗೆದ್ದು ಬಹುಮಾನದ ಹಣವನ್ನು ತಮ್ಮನಿಗೆ ಕೊಡುತ್ತಾರೆ. ಪರೀಕ್ಷೆಯಲ್ಲಿ ತಮ್ಮ ಪಾಸಾಗಿದ್ದಾನೆ ಎಂಬ ಸಂತೋಷವನ್ನು ಹಂಚಿಕೊಳ್ಳುವ ರೀತಿ ಚೆನ್ನಾಗಿದೆ  

ಯಜಮಾನನ ಕರ್ತವ್ಯ, ಶ್ರದ್ಧೆ ಗುರಿಯತ್ತ ಗಮನವಿದ್ದಾಗ ಅಡತಡೆಗಳು ತೊಂದರೆ ಕೊಟ್ಟರೂ ಅದನ್ನು ಸಹಿಸಿಕೊಂಡು ವಿಧಿಯ ಆಟವನ್ನು ಗೆಲ್ಲುವುದು ಮತ್ತು ಮನಸ್ಸಿದ್ದರೆ ಮಾರ್ಗ ಎನ್ನುವ ಶೀರ್ಷಿಕೆಗೆ ಅರ್ಹ  ಅಭಿನಯ ನೀಡಿರುವುದು ಶ್ಲಾಘನೀಯ. 

ರಾಜಕುಮಾರ್ ಇಂತಹ ಪಾತ್ರಗಳಲ್ಲಿ ಮಿಂಚುವ ಪರಿ ಮತ್ತು ನೋಡುಗರಿಗೆ ಹೀಗೆ ಇರಬೇಕು ಎನ್ನಿಸುವ ಗುವವೇ ರಾಜಕುಮಾರ್ ಅವರನ್ನು ಕರುನಾಡ ಪ್ರೇಕ್ಷಕರ ಕಣ್ಮಣಿ ಮಾಡಿರುವುದು. 

ನಾಯಕಿ ಜಯಂತಿ ಕಷ್ಟಕೋಟಲೆಗಳ ಮಧ್ಯೆಯೂ ನಗು ನಗುತ್ತಾ ಚಿತ್ರದುದ್ದಕ್ಕೂ ಸಾಗಿ ಬರುವುದು, ಮನೆಯನ್ನು ಹಿಡಿದಿಟ್ಟು ಕೊಂಡು ಮನೆಯನ್ನು ಗೆಲ್ಲಿಸಲು ಶ್ರಮಿಸುವುದು ಹೀಗೆ ಉತ್ತಮ ಅಭಿನಯ ನೀಡಿದ್ದಾರೆ

ತಮ್ಮನಾಗಿ ರಾಜಾಶಂಕರ್ ಮುದ್ದಾಗಿ ಕಾಣಿಸುವುದಷ್ಟೇ ಅಲ್ಲದೆ ಮಾನವೀಯತೆಯನ್ನು ಇಟ್ಟುಕೊಂಡಿರುವ ಪಾತ್ರ. ತಾನು ಪೊಲೀಸ್ ಅಧಿಕಾರಿಯಾದರೂ ತನ್ನನ್ನು ಬೆಳೆಸಿದ ಅಣ್ಣನನ್ನು ಬಂಧಿಸುವ ಪ್ರಸಂಗದಲ್ಲೂ ಕೂಡ ಸಂಯಮ ಅಭಿನಯ.. ಜೊತೆಯಲ್ಲಿ ಅಣ್ಣನ ಬೆನ್ನ ಹಿಂದೆ  ಖಳರನ್ನು ಹಿಡಿಯಲು ಹೋರಾಟ ಮಾಡುವ ಪಾತ್ರದಲ್ಲಿ ಗೆಲ್ಲುತ್ತಾರೆ. 

ಅಶ್ವಥ್ ತಮ್ಮ ಮಗ ಖಳರೊಂದಿಗೆ ಸೇರಿ ಕೊಂಡಿದ್ದಾನೆ ಎಂದು  ಅರಿವಾದಾಗ  ಪಟ್ಟುಕೊಂಡರೂ ಕರ್ತವ್ಯ ಪ್ರಜ್ಞೆ ಮರೆಯದೆ ಮಗನನ್ನು  ಬಂಧಿಸಲು ಅಪ್ಪಣೆ ಮಾಡುವುದು, ತಮ್ಮ ಮಗಳು ಒಬ್ಬ ರಿಕ್ಷಾ ಎಳೆಯುವ ತಮ್ಮನನ್ನು ಪ್ರೀತಿಸುತ್ತಿದ್ದಾಳೆ ಎಂದು ತಿಳಿದು, ಆತ ವಿದ್ಯಾವಂತ ಎಂದು ಅರಿತು, ಆತನಿಗೆ ಪೊಲೀಸ್ ಉದ್ಯೋಗ ಕೊಡಿಸುವುದು, ಮತ್ತೆ ಅವರಿಬ್ಬರಿಗೂ ಮದುವೆ ಮಾಡಿಸುವುದು .. ಈ ಪಾತ್ರದಲ್ಲಿ ಅಶ್ವಥ್ ಅವರ ಅಭಿನಯ ನೋಡುವುದೇ ಹಬ್ಬ. 

ರಂಗ, ಉದಯಚಂದ್ರಿಕಾ, ಶೈಲಶ್ರೀ, ನರಸಿಂಹರಾಜು, ಬಿವಿರಾಧ, ಗುಗ್ಗು, ರತ್ನಾಕರ್ ಎಂ ಪಿ ಶಂಕರ್ ದಿನೇಶ್ ಪಾತ್ರಕ್ಕೆ ತಕ್ಕ ಅಭಿನಯ

"ಈ ಜೀವನ ಬೇವು ಬೆಲ್ಲ.. " ಹಾಡು ಸ್ಪೂರ್ತಿದಾಯಕ. ಗೂಗಲ್ ಮಹಾತ್ಮೆ ಪ್ರಕಾರ ಕನ್ನಡ ಚಿತ್ರದಲ್ಲಿ ಪ್ರಥಮ ಬಾರಿಗೆ ಈ ಹಾಡಿನಲ್ಲಿ back projection technology.ಉಪಯೋಗಿಸಿದ್ದಾರೆ. 

ಮನಸ್ಸು ಗಟ್ಟಿ ಇದ್ದಾಗ, ಗುರಿಯ ಕಡೆಗೆ ಲಕ್ಷ್ಯವಿದ್ದಾಗ ಎಂಥಹ ಸಮಸ್ಯೆಯೂ ಕೂಡ ಕರಗುತ್ತದೆ ಎಂಬ ಸಂದೇಶ ಕೊಡುತ್ತದೆ. 


No comments:

Post a Comment