ಜಾನಪದ ಕಥಾವಸ್ತುಗಳಿಗೆ ಹೇಳಿ ಮಾಡಿಸಿದ ನಟ ರಾಜಕುಮಾರ್ ಅವರು. ರಾಜಕುಮಾರ, ದೇಶದಿಂದ ಹೊರಗೆ ಹಾಕಿದ ಪ್ರಜೆ, ನ್ಯಾಯಕ್ಕಾಗಿ ಹೋರಾಡುವ ಯುವಕ, ತನ್ನ ಕುಟುಂಬಕ್ಕೆ ಆಗಿರುವ ಅನ್ಯಾಯವನ್ನು ದಿಕ್ಕರಿಸಿ, ಅದನ್ನು ಸರಿ ಪಡಿಸುವ ಪಾತ್ರ,ಸೊಕ್ಕಿನ ಹೆಣ್ಣನ್ನು ಪಳಗಿಸಿ ಗರ್ವ ಭಂಗ ಮಾಡುವ ಪಾತ್ರ.. ಹೀಗೆ ಸಾಮಜಿಕ ಕಳಕಳಿಯ ಪಾತ್ರಗಳು ಇವರನ್ನೇ ಹುಡುಕಿಕೊಂಡು ಬರುತ್ತವೆ. ಆ ಪಾತ್ರದ ವೇಷಭೂಷಣ, ಆಂಗೀಕ ಅಭಿನಯ, ಸಂಭಾಷಣೆಯ ಶೈಲಿ ಎಲ್ಲವೂ ಕರತಲಾಮಲಕ ಬಿಟ್ಟಿದೆ ಇವರಿಗೆ.
ಅಂತಹ ಒಂದು ಚಿತ್ರರತ್ನ ರಾಜದುರ್ಗದ ರಹಸ್ಯ. .
ಒಂದೇ ತಾಯಿಯ ಮಕ್ಕಳಾದರೂ ಭಿನ್ನ ವಿಭಿನ್ನ ಅಭ್ಯಾಸಗಳು ಹವ್ಯಾಸಗಳಿಂದ ಒಬ್ಬ ಗುಣವಂತನಾದರೆ, ಇನ್ನೊಬ್ಬ ಆಲಸಿಯಾಗಿರುತ್ತಾನೆ.
ದುರಭ್ಯಾಸಗಳಿಗೆ ತುತ್ತಾದ ರಾಜಕುಮಾರ ತನ್ನ ಸೋದರಮಾವನ ಕುತಂತ್ರಕ್ಕೆ ಬಲಿಯಾಗಿ ತನ್ನ ಪ್ರಾಣವನ್ನೇ ತ್ಯಾಗ ಮಾಡುವಂಥಹ ಸನ್ನಿವೇಶ ಬರುತ್ತದೆ. ಆಗ ಆತನ ತಮ್ಮನಾಗಿರುವ ತಾನೇ ಆಲಸಿ ರಾಜಕುಮಾರ ಎಂದು ಬಿಂಬಿಸಿಕೊಂಡು ಅದಕ್ಕೆ ತಕ್ಕ ಹಾಗೆ ನಟನೆ ಮಾಡುತ್ತಾ ರಾಜ್ಯವನ್ನು ಮತ್ತೆ ಸುಭಿಕ್ಷತೆಗೆ ತೆಗೆದುಕೊಂಡು ಬರುವುದು ಮತ್ತೆ ಹಿಂದಿನ ರಾಜನನ್ನು ಮರಳಿ ಪಟ್ಟದಲ್ಲಿ ಕೂರಿಸುವುದು ಈ ಚಿತ್ರದ ತಿರುಳು.
ಅದಕ್ಕೆ ಆಯ್ಕೆ ಮಾಡಿಕೊಂಡ ಚಿತ್ರಕತೆ ತೀಕ್ಷ್ಣವಾಗಿದೆ. ಚಿತ್ರವೂ ಎಲ್ಲೂ ಹಳಿ ತಪ್ಪಿ ಹೋಗದಂತೆ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಚಿತ್ರದ ಆರಂಭಿಕ ಭಾಗಗಳಲ್ಲಿ ದ್ವಿಪಾತ್ರ ಅಭಿನಯದಲ್ಲಿ ಕಾಣುವ ರಾಜಕುಮಾರ್ ಎರಡೂ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ಅವರ ಆಲಸಿ, ಲೋಲುಪತನದ ಪಾತ್ರವನ್ನು ನಮ್ಮಂಥ ಅವರನ್ನು ಆರಾಧಿಸುವ ಅಭಿಮಾನಿ ದೇವರುಗಳು ನೋಡುವುದು ಕಷ್ಟವೆನಿಸಿದರೂ ಅವರ ಅಭಿನಯ ಕಳೆಗಟ್ಟಿದೆ.
ಸೌಮ್ಯ ಪಾತ್ರದಲ್ಲಿ ರಾಜಕುಮಾರ್ ಅವರ ಪಾತ್ರ ಹೇಳೋದೇ ಬೇಡ.. ಸುಂದರವಾದ ಮುಖ, ಉಡುಪುಗಳು,ಸಂಭಾಷಣೆ ಶೈಲಿ, ಹಾವ ಭಾವ, ಕಾಳಗ ಎಲ್ಲವೂ ಎರಕ ಹುಯ್ದಂತೆ ಇದೆ.
ನಾಯಕಿಯ ಪಾತ್ರದಲ್ಲಿ ಭಾರತಿ ಮತ್ತೆ ಸಹಜಾಭಿನಯ ನೀಡಿದ್ದಾರೆ
ದಿನೇಶ್ ರಾಜ್ಯದ ಅರಾಜಕತೆಯ ವಿರುದ್ಧ ದನಿ ಎತ್ತುವ ಪಾತ್ರದಲ್ಲಿ ಸೊಗಸಾದ ಅಭಿನಯ ನೀಡಿದ್ದಾರೆ.
ಪಾಪಮ್ಮ ಅವರಿಗೆ ಕೆಲವೇ ದೃಶ್ಯಗಳು ಇದ್ದರೂ ಅವರ ಅಭಿನಯ ಹಿತವಾಗಿದೆ.
ಸಂಭಾಷಣೆಯನ್ನು ಸರಿ ಮಾಡುತ್ತಲೇ ಮಾತಾಡುವ ನರಸಿಂಹರಾಜು ಇಷ್ಟವಾಗುತ್ತಾರೆ
ಅವರ ಮತ್ತು ಬೆಂಗಳೂರು ನಾಗೇಶ್ ಅವರ ಸ್ವಯಂವರದ ದೃಶ್ಯಗಳು ನಗೆ ಉಕ್ಕಿಸುತ್ತದೆ
ಗಣಪತಿ ಭಟ್ ಸ್ಪರ್ಧೆ ಸೃಷ್ಟಿಸುವ ಪಾತ್ರ ನಗಿಸುತ್ತದೆ
ಉದಯಕುಮಾರ್ ಮತ್ತೆ ಇಲ್ಲಿ ಖಳನಾಯಕ.. ಅಬ್ಬರದ ನಗು, ಎತ್ತರದ ದನಿಯಲ್ಲಿ ಮಾತುಗಳು, ಸಿಂಹ ನೆಡೆ, ಕ್ರೌರ್ಯ ಎಲ್ಲವೂ ಮೇಳೈಸಿದೆ.
ಇದೊಂದು ಸುಂದರ ಚಿತ್ರ ಗಮನಸೆಳೆಯುವುದು ಹಿನ್ನೆಲೆ ಸಂಗೀತ ಮತ್ತು ಹಾಡುಗಳಲ್ಲಿ.
ನಿರ್ದೇಶನ ಎ ಸಿ ನರಸಿಂಹಮೂರ್ತಿ ಮತ್ತು ಎಸ್ ಕೆ ಭಗವಾನ್
ನಿರ್ಮಾಣ ಎ ವಾಸುದೇವರಾವ್ ಮತ್ತು ಟಿ ದ್ವಾರಕಾನಾಥ್
ಸಂಗೀತ ಜಿ ಕೆ ವೆಂಕಟೇಶ್
ಲಾಂಛನ ಕೃಷ್ಣೋದಯ ಚಿತ್ರ
ಸಂಭಾಷಣೆ ಮತ್ತು ಸಾಹಿತ್ಯ ಆರ್ ಎನ್ ಜಯಗೋಪಾಲ್
ಕಥೆ ಮತ್ತು ಚಿತ್ರಕತೆ ನಂದನ
ಛಾಯಾಗ್ರಹಣ ಬಿ ದೊರೈರಾಜ್

No comments:
Post a Comment