Monday, December 22, 2025

ಹಠ ಹಠ ಹಠದ ಸುಳಿ ಇದೇ ಚಕ್ರ ತೀರ್ಥ 1967 (ಅಣ್ಣಾವ್ರ ಚಿತ್ರ ೯೦/೨೦೭)

ಇಬ್ಬರು ಗಂಡಸರ ಹಠ ಸಂಸಾರದ ಸುಖಶಾಂತಿಯನ್ನೇ ಸುಟ್ಟು ಹಾಕುತ್ತದೆ , 
ಒಬ್ಬರ ಹಠ ದುಡ್ಡಿದೆ ಎನ್ನುವ ಅಮಲು.. 
ಇನ್ನೊಬ್ಬರ ಹಠ ದುಡ್ಡು ಹಣ ಸಂಪಾದನೆ ಮಾಡಬೇಕು ಎನ್ನುವುದು 
ಈ ಇಬ್ಬರ ಹಠದ ಸುಳಿಯಲ್ಲಿ ಸಿಲುಕಿ ಸಂಸಾರ ನಾಶವಾಗುವುದೇ ಚಕ್ರತೀರ್ಥದ ತಿರುಳು. 
ಚಿತ್ರದ ಆರಂಭದಲ್ಲಿ ಚಿತ್ರದ ಆಶಯವನ್ನು ಸ್ವತಃ ಕಾದಂಬರಿ ಕತೃ ಶ್ರೀ ತ ರಾ ಸು ಅವರೇ ಪರದೆಯ ಮೇಲೆ ಬಂದು ಹೇಳುವುದು.. ತಾನು ಬರೆದ ಕಾದಂಬರಿಯನ್ನು ಸಿನೆಮಾಕ್ಕೆ ಕೊಂಚ ಬದಲಿಸಿಕೊಂಡು ಸಹನೀಯವಾಗಿಸಿರೋದು ಅಂತ ಹೇಳಿ ಚಿತ್ರಕ್ಕೆ ಚಾಲನೆ ನೀಡುತ್ತಾರೆ. 


ಶ್ರೀ ತ ರಾ ಸು 
















ಉದಯಕುಮಾರ್  ಅವರಿಗೂ ಕಾದಂಬರಿ ಕತೃ ತ ರಾ ಸುಬ್ಬರಾವ್ ಅವರಿಗೂ ಏನೋ ಪೂರ್ವಜನ್ಮದ ನಂಟು ಅನ್ನಿಸುತ್ತೆ, ಅವರ ಚಂದವಳ್ಳಿ ತೋಟ ಚಿತ್ರದಲ್ಲಿ ಉದಯಕುಮಾರ್ ಅಬ್ಬರದ ನಟನೆ, ಈ ಚಿತ್ರದಲ್ಲೂ ಹಾಗೆ..ನಾಯಕ, ನಾಯಕಿ, ಸಹನಟರನ್ನು  ತಿಂದು ಹಾಕಿದ್ದಾರೆ ಅಭಿನಯದಲ್ಲಿ. 

ಈ ಚಿತ್ರದ ನಿಜವಾದ ನಾಯಕ ಉದಯಕುಮಾರ್ ಅವರು. ಆ ಮಟ್ಟಕ್ಕೆ ಅಭಿನಯದಲ್ಲಿ ರಾಕ್ಷಸರಾಗಿದ್ದರೆ. ಹಣದಾಸೆ, ಅಧಿಕಾರದ ದರ್ಪ, ಬಂಧು ಬಳಗವನ್ನೆಲ್ಲ ಹಣದ ಆಧಾರದಲ್ಲಿ ತುಲನೆ ಮಾಡೋದು. ಅಬ್ಬರದ ಸಂಭಾಷಣೆ, ಆ ದರ್ಪ, ತಮ್ಮ ದಪ್ಪ ಶರೀರವನ್ನು ಅಭಿನಯಕ್ಕೆ ಒಗ್ಗಿಸಿಕೊಂಡಿರುವುದು ಉದಯಕುಮಾರ್ ಅವರ ವಿಶಿಷ್ಟತೆ. 

ರಾಜಕುಮಾರ್ ಅವರು ಉದಯಕುಮಾರ್ ಅವರ ಅಳಿಯನ ಪಾತ್ರ.. ಬಡತನ, ಸ್ವಾಭಿಮಾನ, ಅಸಹಾಯಕತೆ, ಹಠ. ಗೆಲ್ಲಬೇಕು ಎನ್ನುವ ಛಲ ಎಲ್ಲವನ್ನು ಮೇಳೈಸಿಕೊಂಡು ಅಭಿನಯಿಸಿದ್ದಾರೆ. ಮಡದಿಯೊಂದಿಗೆ ಪ್ರೀತಿಯ ಹಾಡು, ಮಧುರ ಸಂಭಾಷಣೆ.. ಹಾಗೆ ಮಾತಾಡಿಕೊಂಡು ಅವರ ಮಾವ ಉದಯಕುಮಾರ್ ಅವರ  ಮಾತು ಬಂದಾಗ ಕ್ಷುದ್ರರಾಗೋದು... ಆ ಅಭಿನಯ ನೋಡೋದು ಒಂದು ಪುಣ್ಯ. 

ಜಯಂತಿ ಇಲ್ಲಿ ದ್ವಿಪಾತ್ರ ಅಭಿನಯ.. ಎರಡೂ ಪಾತ್ರಗಳಲ್ಲಿ ಸಹಜಾಭಿನಯ.. ಮುದ್ದಾಗಿ ಕಾಣೋದಷ್ಟೇ ಅಲ್ಲದೆ  ಮಾತುಗಳು ತೂಕಬದ್ಧವಾಗಿದೆ. 

ಜಯಶ್ರೀ ತಾಯಿಯ ಪಾತ್ರದಲ್ಲಿ ಮಮತಾಮಯಿ.. ತನ್ನ ಪತಿರಾಯನ ದರ್ಪವನ್ನು ಸಹಿಸಿಕೊಳ್ಳುತ್ತಾ, ಸಾಯುವ ಅಂಚಿನಲ್ಲಿ ಮಗಳನ್ನು ನೋಡುವ ಹಂಬಲದ  ದೃಶ್ಯ ಕಣ್ಣಿಗೆ ಕಟ್ಟುತ್ತದೆ. 

ಬಿ ಎಂ ವೆಂಕಟೇಶ್ ಸಂಯಮದ ಪಾತ್ರೋಚಿತ ಅಭಿನಯ 

ಬಾಲಣ್ಣ ಇಲ್ಲಿ ನಗಿಸುತ್ತಾರೆ. 
ಇದು ನನ್ನ ಮಾತಲ್ಲ ಸಾಕ್ಷಾತ್ ಧನ್ವಂತ್ರಿ ಮಾತು.. 
ಬ್ರಹ್ಮ ಬರೆದದ್ದಲ್ಲ ಇದು ನನ್ನ ಬರಹ.. 

ಹೀಗೆ ಹತ್ತಾರು ಚುಟುಕು ಸಂಭಾಷಣೆಯಿಂದ ಭಾವತೀವ್ರತೆಯಿಂದ ಕೂಡಿರುವ ಸಿನಿಮಾದಲ್ಲಿ ನಗಿಸುತ್ತಾರೆ. 

ಕಥೆ : ತ ರಾ ಸುಬ್ಬಾರಾಯರ ಅದೇ ಹೆಸರಿನ ಕಾದಂಬರಿ 
ಚಿತ್ರಕಥೆ ಮತ್ತು ಸಂಭಾಷಣೆ - ತ ರಾ ಸು 
ಹಾಡುಗಳು : ತ ರಾ ಸು, ದ ರಾ ಬೇಂದ್ರೆ, ಆರ್ ಎನ್ ಜಯಗೋಪಾಲ್ 
ಗಾಯಕರು : ಪಿ ಬಿ ಶ್ರೀನಿವಾಸ್, ಪಿ ನಾಗೇಶ್ವರ ರಾವ್, ಎಸ್ ಜಾನಕೀ, ಎಲ್ ಆರ್ ಈಶ್ವರಿ, ಬಿ ಕೆ ಸುಮಿತ್ರಾ, ಬೆಂಗಳೂರು ಲತಾ, 
ಛಾಯಾಗ್ರಹಣ : ಆರ್ ಚಿಟ್ಟಿಬಾಬು 

ಹಾಡುಗಳು ಸುಮಧುರವಾಗಿವೆ 

ಟೈಟಲ್ ಸಾಂಗ್ .. ಇದೆ ಚಕ್ರತೀರ್ಥ 
ಓಡಿ ಬಾ ನಾ ಓಡುವೆ 
ನಿನ್ನ ರೂಪ ಕಣ್ಣಲಿ 
ಕುಣಿಯೋಣುಬಾರ 

ಮುಂತಾದ ಹಾಡುಗಳು ಮೆಲುಕು ಹಾಕುವಂತಿವೆ!

ಭಗವತಿ ಪ್ರೋಡಕ್ಷನ್ಸ್ ಅವರ ಲಾಂಛನ.. ಪೆಕೇಟಿ ಶಿವರಾಂ ಅವರ ನಿರ್ದೇಶನ.. 





No comments:

Post a Comment