Wednesday, December 24, 2025

ಕನ್ನಡದ ಕುಲ ತಿಲಕ ಪರಮೇಶ್ವರ ಇಮ್ಮಡಿ ಪುಲಿಕೇಶಿ 1967 (ಅಣ್ಣಾವ್ರ ಚಿತ್ರ ೯೧/೨೦೭)

ಈ ರೀತಿಯ ಚಿತ್ರಗಳನ್ನು ಮಾಡುವುದು ಸುಲಭವಲ್ಲ.. 

ಮೊದಲಿಗೆ ಅದಕ್ಕೆ ಬೇಕಾದ ಪೂರ್ವ ಸಿದ್ಧತೆ.. ಇತಿಹಾಸದ ಬಗ್ಗೆ ತೀವ್ರ ಜ್ಞಾನ, ಅದಕ್ಕೆ ಒಪ್ಪುವ ನಟ ನಟಿಯರು.. ಅದನ್ನು ನಿಭಾಯಿಸಬಹುದಾದ ತಂತ್ರಜ್ಞರು... ಅಗತ್ಯವಾದ ಸಂಗೀತ, ಸಾಹಿತ್ಯ, ಮತ್ತು ಸಂಭಾಷಣೆ ... .. ಮತ್ತೆ ಆ ಕಾಲವನ್ನು ಮರು ಸೃಷ್ಟಿಸುವ ಸೆಟ್ಟುಗಳು, ವೇಷಭೂಷಣಗಳು, ಇದಕ್ಕೆಲ್ಲ ಮಿಗಿಲಾಗಿ ಬಂಡವಾಳ ಹೂಡಬಲ್ಲ ನಿರ್ಮಾಪಕರು 

ಇಲ್ಲಿ ಎಲ್ಲವೂ ಮಿಳಿತವಾಗಿದೆ. 

ಸಂಗೀತ ನಿರ್ದೇಶಕ ಜಿ ಕೆ ವೆಂಕಟೇಶ್ ತಮ್ಮ ವೆಂಕಟೇಶ್ ಚಿತ್ರದ ಲಾಂಛನದಲ್ಲಿ ನಿರ್ಮಿಸಿದ ಚಿತ್ರವಿದು. ಪ್ರತಿಯೊಬ್ಬರಿಗೂ ಒಂದೊಂದು ಕನಸಿರುತ್ತವೆ, ಜಿ ಕೆ ವೆಂಕಟೇಶ್ ತಮ್ಮ ಕನಸನ್ನು ನನಸು ಮಾಡಿಕೊಂಡ ಚಿತ್ರವಿದು. 

ಜಿ ವಿ ಅಯ್ಯರ್ ಅವರ ಸಂಭಾಷಣೆ ಮತ್ತು ಚಿತ್ರಕತೆ.  

ಜಿ ಕೆ ವೆಂಕಟೇಶ್ ಅವರ ಸಂಗೀತ 

ಎನ್ ಸಿ ರಾಜನ್ ಅವರ ನಿರ್ದೇಶನ 

ಬಿ ದೊರೈರಾಜ್ ಮತ್ತು ರಾಜಾರಾಮ್ ಅವರ ಛಾಯಾಗ್ರಹಣ 

ಪಿ ಬಿ ಶ್ರೀನಿವಾಸ್, ಎಸ್ ಜಾನಕೀ, ಪಿ ಸುಶೀಲ ಅವರ ಮಧುರ ಗಾಯನ 

ದೊಡ್ಡ ತಾರಾಗಣವೇ ಮೇಳೈಸಿದೆ 

ರಾಜಕುಮಾರ್, ಉದಯಕುಮಾರ್, ಸುದರ್ಶನ್, ಅಶ್ವಥ್, ಅರುಣ್ ಕುಮಾರ್, ರಾಮಚಂದ್ರ ಶಾಸ್ತ್ರೀ, ನರಸಿಂಹರಾಜು, ಶಕ್ತಿಪ್ರಸಾದ್, ಗಣಪತಿ ಭಟ್, ಜಯಂತಿ, ಕಲ್ಪನಾ, ಬಿ  ಜಯಮ್ಮ, ಎಂ ಎನ್ ಲಕ್ಷ್ಮೀದೇವಿ. 

ಇವರೆಲ್ಲರ ಜೊತೆಯಲ್ಲಿ  ನೂರನೇ ಚಿತ್ರದ ಸಂಭ್ರಮದಲ್ಲಿ ಬೀಗುತ್ತಿರುವ ಟಿ ಎನ್ ಬಾಲಕೃಷ್ಣ. ಶಕುನಿಯ ಅಂಶದ ಅದ್ಭುತ ಪಾತ್ರ ಇವರದ್ದು. ಅದನ್ನು ಅಷ್ಟೇ ಅದ್ಭುತವಾಗಿ ನಿಭಾಯಿಸಿದ್ದಾರೆ ಬಾಲಣ್ಣ. ಆ ಕುಟಿಲತೆ, ತಂತ್ರಗಾರಿಕೆ, ಮಾತಿನಲ್ಲಿ  ನಾಜೂಕುತನ, ಕೃತ್ರಿಮ ನಗೆ.. ಆಹಾ  ಬಾಲಣ್ಣ ಈ ಚಿತ್ರದ ನಿಜವಾದ ನಾಯಕ ಎಂದರೂ ಸರಿಯೇ.. ಆದರೆ ಆದರೆ 

ಇರಿ  ಇರಿ .. ಕನ್ನಡ ಬಾಂಧವರ ಬಳಿ ಇಮ್ಮಡಿ ಪುಲಿಕೇಶಿಯನ್ನು ನೋಡಿದ್ದೀರಾ ಅಂತ ಸ್ವತಃ ಪುಲಿಕೇಶಿಯೇ ಧರೆಗಿಳಿದು ಬಂದು ಕೇಳಿದರೆ ಎಲ್ಲರೂ ಹೇಳುವುದು ಹೌದು.. ನೋಡಿದ್ದೇವೆ ಅಂತ.. ಎಲ್ಲಿ ಎಂದರೆ ಇಮ್ಮಡಿ ಪುಲಿಕೇಶೀ ಚಿತ್ರದ ಪೋಸ್ಟರ್ ತೋರಿಸುತ್ತಾರೆ.. 

ನಿಜ ಇಮ್ಮಡಿ ಪುಲಿಕೇಶೀ ಹೀಗೆ ಇದ್ದಾರೇನೋ ಅನಿಸುವಂತೆ ಆವರಿಸಿಕೊಂಡಿದ್ದಾರೆ ರಾಜಕುಮಾರ್ ಅವರು. ಆ ಹೊಳಪಿನ ಮೊಗ, ಆಕರ್ಷಕ ತಲೆಗೂದಲು (ವಿಗ್.. ಆದರೂ ಎಷ್ಟು ಚೆನ್ನಾಗಿ ಒಪ್ಪುತ್ತದೆ) ಆಕರ್ಷಕ ಅಂಗ ಸೌಷ್ಟವ.. ಸಿನಿಮಾದ ಬಹುಭಾಗ ಆ ಪೋಷಾಕಿನಲ್ಲಿ ಕಾಣುವ ರಾಜಕುಮಾರ್ ಪುಲಿಕೇಶಿಯನ್ನೇ ಧರೆಗಿಳಿಸಿದ್ದಾರೆ. ಮುಂದೆ ಹಲವಾರು ಚಿತ್ರಗಳಲ್ಲಿ ಧರೆಗಿಳಿಸಿದ ಇತಿಹಾಸದ ನಾಯಕರು, ದೈವ ಪಾತ್ರಗಳು ರಾಜಕುಮಾರ್ ಅವರ ಸ್ವತ್ತು ಅನಿಸುವಂತೆ ಇದೆ. 

"ಅದರಲ್ಲೂ ದೇವಾಲಯದಲ್ಲಿ ಕತ್ತಿ ಹಿರಿದು ನಿಂತ ರೂಪ ಅಬ್ಬಬ್ಬಾ" (ಅಬ್ಬಬ್ಬಾ ಎನ್ನುವ ಪದ ಉಚ್ಚಾರಣೆ ಅವರ ಬಾಯಿಯಲ್ಲಿ ಕೇಳಬೇಕು... ಹತ್ತಾರು ಬಾರಿ ತಿರುಗಿಸಿ ತಿರುಗಿಸಿ ಆ ದೃಶ್ಯವನ್ನು ಈ ಅಬ್ಬಬ್ಬಾ ಅನ್ನುವ ಪದ ಕೇಳೋದಕ್ಕೆ ನೋಡಿದ್ದೀನಿ"

ಆರಂಭಿಕ ದೃಶ್ಯದಲ್ಲಿ ಕೀರ್ತಿ ಕಂಭವನ್ನು ಬೆನ್ನ ಮೇಲೆ ತಡೆಹಿಡಿದು ಕನ್ನಡ, ಕನ್ನಡಿಗರು, ಕನ್ನಡದ ಮಕ್ಕಳ ಬಗೆ ಆಡುವ ನುಡಿಗಳು ಅದ್ಭುತ.. ಇಡೀ  ಚಿತ್ರವನ್ನು ಆವರಿಸಿಕೊಂಡಿದ್ದಾರೆ. ಕಡೆಯ ದೃಶ್ಯದಲ್ಲಿ ಆ ಕತ್ತಿ ಹಿರಿದು ನಿಂತ ದೃಶ್ಯ ಮೈ ಜುಮ್ ಎನ್ನಿಸುತ್ತದೆ. 

ಅದ್ಭುತ ಚಿತ್ರವಿದು.. 

ಉದಯಕುಮಾರ್ ಮತ್ತೊಮ್ಮೆ ಇಲ್ಲಿ ಖಳ ಮಿಶ್ರಿತ ಉಪನಾಯಕನ ಪಾತ್ರ ಮಾಡಿದ್ದಾರೆ. ಗೂನು ಬೆನ್ನಿನ ಪಾತ್ರ.. ಅಷ್ಟೇ ಪರಿಣಾಮಕಾರಿಯಾಗಿ ಅಭಿನಯಿಸಿದ್ದಾರೆ.ಆ ಸಂಭಾಷಣೆಯ ವೈಖರಿ, ಗೂನು ಬೆನ್ನಿನ ಆಂಗೀಕ ಅಭಿನಯ.. ವಾಹ್.. 

ಉಳಿದಂತೆ ಜಯಂತಿ, ಕಲ್ಪನಾ, ಅಶ್ವಥ್, ರಾಮಚಂದ್ರ ಶಾಸ್ತ್ರೀ ಮತ್ತು ಉಳಿದ ನಟರಾದ ಅಶ್ವಥ್, ಸುದರ್ಶನ್, ಅರುಣ್ ಕುಮಾರ್, ನರಸಿಂಹಾಜು, ಮುಂತಾದವರು ಉತ್ತಮ ಅಭಿನಯ ನೀಡಿದ್ದಾರೆ.. 

ರಾಜಕುಮಾರ್ ಅವರು ಪುಲಿಕೇಶಿಯನ್ನೇ ಧರೆಗೆ ತಂದಿರುವುದು  ಈ ಚಿತ್ರದ ವಿಶೇಷ!

No comments:

Post a Comment