Sunday, December 21, 2025

ನಂಬಿಕೆ.. ಔಷಧಿ.. ಮತ್ತು ಸಾಮಾಜಿಕ ಕಳಕಳಿ - ಬಂಗಾರದ ಹೂವು 1967 (ಅಣ್ಣಾವ್ರ ಚಿತ್ರ ೮೯/೨೦೭)

ರಾಜನ್ ನಾಗೇಂದ್ರ ಅವರ ಸಂಗೀತ ಇಂದಿಗೂ ಸುಮಧುರ 

ಡೂ ಡೂ ಬಸವಣ್ಣ - ಪಿ ಬಿ ಶ್ರೀನಿವಾಸ್ ಮತ್ತು ಪಿ ಸುಶೀಲ 
ಆ ಮೊಗವು ಎಂಥ ಮೊಗವು - ಪಿ ಬಿ ಶ್ರೀನಿವಾಸ್ 
ಓಡುವ ನದಿ ಸಾಗರವ ಸೇರಲೇ ಬೇಕು - ಪಿ ಬಿ ಶ್ರೀನಿವಾಸ್ ಮತ್ತು ಪಿ ಸುಶೀಲ 
ಮದುವೆ ಮದುವೆ - ಎಸ್ ಜಾನಕೀ 
ಓದಿ ಓದಿ ಮರುಳಾದ ಕೂಚುಭಟ್ಟ - ಎಸ್ ಜಾನಕೀ 
ನೀ ನೆಡೆವ ಹಾದಿಯಲ್ಲಿ - ಪಿ ಸುಶೀಲ 

ಎಲ್ಲಾ ಹಾಡುಗಳು ಸುಮಧುರವಾಗಿವೆ.. ಚಿತ್ರೀಕರಣವೂ ಮಧುರವಾಗಿದೆ. 

ಹಾಡುಗಳನ್ನು ರಚಿಸಿರುವ ಚಿ ಉದಯಶಂಕರ್ ಹಾಗೂ ವಿಜಯನಾರಸಿಂಹ ಅವರಿಗೆ ಹಾಡುಗಳ ಯಶಸ್ಸಿನ ಶ್ರೇಯಸ್ಸು ಸಂಗೀತ ನಿರ್ದೇಶಕ ಜೋಡಿಯ ಜೊತೆಗೆ ಸಲ್ಲುತ್ತದೆ. 

ಬಿ ಎನ್ ಹರಿದಾಸ್ ಅವರ ಛಾಯಾಗ್ರಹಣದಲ್ಲಿ ನಟ ನಟಿಯರು ಮುದ್ದಾಗಿ ಕಾಣುತ್ತಾರೆ. ನೆರಳು ಬೆಳಕಿನ ವ್ಯವಸ್ಥೆಯನ್ನು ಚೆನ್ನಾಗಿ ಉಪಯೋಗಿಸಿಕೊಂಡಿದ್ದಾರೆ. 

ಅರ್ಥಪೂರ್ಣ ಸಂಭಾಷಣೆ ಚಿ ಉದಯಶಂಕರ್ ಅವರಿಂದ. 

ತಮ್ಮದೇ ಕಿರುನಾಟಕ "ಅಭಾಗಿನಿ"ಯನ್ನು ಕಥಾನಾಟಕ ರಚಿಸಿ ನಿರ್ಮಿಸಿ ನಿರ್ದೇಶಿಸಿರುವುದು ಬಿ ಎ ಅರಸ ಕುಮಾರ್.. ತಮ್ಮದೇ ರಚಿತವಾದ ಕಥಾವಸ್ತುವನ್ನು ಅಚ್ಚುಕಟ್ಟಾಗಿ ನಿರ್ದೇಶಿಸಿದ್ದಾರೆ. 

ಚಿತ್ರದ ಆರಂಭದಲ್ಲಿ ತಮ್ಮ ಕೃತಜ್ಞತೆ ಅರ್ಪಿಸಿರುವುದು ವಿಶೇಷ, 

ಈ ಚಿತ್ರ ರಾಷ್ಟ್ರಪ್ರಶಸ್ತಿಗೂ ಭಾಜನವಾಗಿದ್ದು ವಿಶೇಷ. ಸಾಂಕ್ರಾಮಿಕ ರೋಗ, ಪೂರ್ವ ಜನ್ಮದ ಪಾಪದ ಫಲ, ಸಾಯಿಸೋಕೆ ಬಂದಿರುವ ಖಾಯಿಲೆ ಹೀಗೆ ಹತ್ತಾರು ನಂಬಿಕೆಗಳ ಮೂಲವಾದ ಕುಷ್ಠರೋಗದ ಬಗ್ಗೆ ಸಂದೇಶ ಇರುವ ಚಿತ್ರವಿದು. ಆರಂಭದಲ್ಲಿ ಗುರುತಿಸಿ ತಕ್ಕ ಚಿಕಿತ್ಸೆ ಪಡೆದರೆ ಖಂಡಿತ ಗುಣವಾಗುವ ಖಾಯಿಲೆ ಇದು. ಮತ್ತೆ ಇದನ್ನು ಸಾಂಕ್ರಾಮಿಕ ರೋಗವೆಂದು, ಇಂಥಹವರನ್ನು ಸಮಾಜದಿಂದ ದೂರ ಇರಿಸಬೇಕು ಎನ್ನುವ ಸಮಾಜದ ಒಂದು ವರ್ಗದ ನಂಬಿಕೆಯನ್ನು ಮುರಿದು, ಅವರಿಗೂ ಬದುಕಲು ಹಕ್ಕಿದೆ, ಅವರನ್ನು ಮಾನವೀಯತೆಯಿಂದ ನೋಡಿಕೊಂಡಾಗ ಗುಣಪಡಿಸಲು ಸಾಧ್ಯ ಮತ್ತೆ ರೋಗಿಗೆ ತಾನು ಬದುಕಬಲ್ಲೆ ಎಂಬ ಭರವಸೆಯನ್ನು ಕೊಡುವುದು ಅವರ ಸುತ್ತಲೂ ಇರುವವರ ಧರ್ಮ ಎಂದು ಸಾರುವ ಚಿತ್ರವಿದು. 

ರಾಜಕುಮಾರ್ ಸಾಮಾನ್ಯವಾಗಿ ತಾಯಿಯ ಪಾತ್ರದೆದುರು ಜೋರಾಗಿ ಮಾತನಾಡೋಲ್ಲ.. ಅವರ ಸಿನಿಮಾ ತಾಯಿ ಪಂಡರಿಬಾಯಿ ಇಂದಿಗೂ ಮಕ್ಕಳ ಆಶಯಕ್ಕೆ ವಿರುದ್ಧ ಮಾತಾಡೋಲ್ಲ ಅಂತ ಸಂಯಮ ಕಾಯ್ದುಕೊಂಡು ಬಂದಿರುವ ನಟ ನಟಿಯರು ಇವರಿಬ್ಬರು. ಆದರೆ ಈ ಚಿತ್ರದಲ್ಲಿ ಕೊಂಚ ಬದಲಾವಣೆ, ತನ್ನ ಅಣ್ಣನಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಹಠ ಮಾಡುವ ಪಾತ್ರ.. ತಾನು ಮಾತು ಕೊಟ್ಟ ಹುಡುಗಿಯ ಮನೆಯವರನ್ನು ಕಾಪಾಡುವ ಸಲುವಾಗಿ ತಾಯಿಯ ಇಚ್ಚೆಗೆ ವಿರುದ್ಧವಾಗಿ ಮಾತಾಡುವ ಪಾತ್ರ.. ಆದರೆ ಕಡೆಯಲ್ಲಿ ಇಬ್ಬರೂ ತಮ್ಮ ತಮ್ಮ ವಿಚಾರಗಳನ್ನು ಬದಲಿಸಿಕೊಳ್ಳುತ್ತಾರೆ ಮತ್ತೆ ಚಿತ್ರ ಸುಖಾಂತ್ಯವಾಗುತ್ತದೆ. 

ರಾಜಕುಮಾರ್ ಮತ್ತೊಮ್ಮೆ ಅಮೋಘ ಅಭಿನಯ ನೀಡಿದ್ದಾರೆ. ಇತ್ತ ಸ್ನೇಹಿತನ ಮನೆ, ಇಚ್ಛೆ ಪಟ್ಟ ಹುಡುಗಿ, ತನ್ನನ್ನು ಸಾಕಿ ಸಲಹಿದ ತಾಯಿ, ಜೊತೆಯಲ್ಲಿ ಬೆಳೆದ ತನ್ನ ಮಾವನ ಮಗಳ ಪ್ರೀತಿ ಹೀಗೆ ಎಲ್ಲವನ್ನೂ ಸಮಾಧಾನದಿಂದ ನಿಭಾಯಿಸುವ ಪರಿ ಇಷ್ಟವಾಗುತ್ತದೆ. 

ಸಂಯಮದ ಅಭಿನಯ.. ಕೆಲವು ದೃಶ್ಯಗಳಲ್ಲಿ ಮನಮಿಡಿಯುವಂತೆ ಅಭಿನಯಿಸಿದ್ದಾರೆ.. ಗೊಂದಲಗಳು, ತಾಕಲಾಟಗಳು ಇವುಗಳನ್ನು ಸಮರ್ಥವಾಗಿ ಅಭಿನಯಿಸಿರುವ ರಾಜಕುಮಾರ್ ಮಾಮೂಲಿನಂತೆ ಆ ಪಾತ್ರಕ್ಕಿ ತಾವಾಗಿದ್ದಾರೆ. 

ನಾಯಕಿಯಾಗಿ ಕಲ್ಪನಾ ಸಂಯಮದ ಅಭಿನಯ.. ನಾಯಕನಿಗೆ ತಾನು ಮದುವೆಯಾಗಲು ಸಿದ್ಧವಿಲ್ಲ ಎಂದು ಹೇಳುವಾಗಿನ ತಳಮಳವನ್ನು ಸೊಗಸಾಗಿ ಅಭಿನಯಿಸಿದ್ದಾರೆ. ದೂರ ಬೆಟ್ಟದಲ್ಲಿ ಪುಟ್ಟ ಮನೆಯಿರಬೇಕು ಹಾಡಿನ ಸಾಲಿನಲ್ಲಿ ಅವರ ಅವರ ಅಭಿನಯ ಸೊಗಸು. 

ಉದಕುಮಾರ್ ಅವರ ಪಾತ್ರಕ್ಕೆ ಹೆಚ್ಚಿನ ಅವಕಾಶವಿಲ್ಲವಾದರೂ, ನಾಯಕನ ಜೊತೆಯಲ್ಲಿನ ದೃಶ್ಯಗಳು ಮನಮುಟ್ಟುತ್ತವೆ. ತನ್ನ ತಂಗಿಗೆ ಬಂದ ಖಾಯಿಲೆಯನ್ನು ಕಡೆಗಣಿಸಿ ಜೊತೆಯಾಗುತ್ತೇನೆ ಎಂಬ ನಾಯಕನ ಮಾತಿಗೆ ಕಂಬನಿ ಮಿಡಿಯುವ ದೃಶ್ಯ ಇಷ್ಟವಾಗುತ್ತದೆ. 

ಪಂಡರಿಬಾಯಿ ಅವರದ್ದು ಮಾತೃ ಹೃದಯದ ಅಭಿನಯ.. 

ಶೈಲಶ್ರೀ ಇಲ್ಲಿ ಮಿಂಚುತ್ತಾರೆ.. ತಮ್ಮ ಆಸೆಗೆ ವಿರುದ್ಧವಾಗಿ ನೆಡೆಯುತ್ತಿದೆ ಎಂದು ಗೊತ್ತಾಗಿ ಅದರ ದುಃಖವನ್ನು ನುಂಗುತ್ತಾ, ನಾಯಕನಿಗೆ ಸಮಾಧಾನ ಪಡಿಸುವ ಹಾಗೂ ತನ್ನ ಅತ್ತೆಯನ್ನು ಒಪ್ಪಿಸುವ ಅಭಿನಯ ಸೊಗಸು. 

ಉಳಿದಂತೆ ಹಾಸ್ಯಕ್ಕಾಗಿ ಬಾಲಣ್ಣ ಮತ್ತು ನರಸಿಂಹರಾಜು ಇದ್ದಾರೆ. ಸಮಾಜದ ಒಂದು ವರ್ಗ ತಮ್ಮ ಅನುಕೂಲಕ್ಕಾಗಿ ತಮ್ಮ ಹಿತಕ್ಕಾಗಿ ವ್ಯಕ್ತಿಗಳ. ಮನೆಯ ಸಂತೋಷವನ್ನು, ನೆಮ್ಮದಿಯನ್ನು ಹೇಗೆ ಬಲಿ ಹಾಕುತ್ತಾರೆ ಎನ್ನುವುದು ಬಾಲಣ್ಣ ಅವರ ಅಭಿನಯದಲ್ಲಿ ತೋರುತ್ತಾರೆ. ಮಾತು ಮಾತಿಗೂ "ಇದಪ್ಪ ವರಸೆ" ಎಂದು ಹೇಳುತ್ತಲೇ ತಮ್ಮ ಬೇಳೆ ಬೇಯಿಸಿಕೊಳ್ಳುವ ಪಾತ್ರ. 

ನರಸಿಂಹರಾಜು ಗುರುವಿಗೆ ತಿರು ಮಂತ್ರ ಹಾಕುವ ಮತ್ತು ಗುರುವಿನ ಆಶಯಕ್ಕೆ ವಿರುದ್ಧವಾಗಿ ನೆಡೆಯುವ ಪಾತ್ರ ಅಲ್ಲಲ್ಲಿ ನಗಿಸುತ್ತಾರೆ. 

ಹಿಂದಿನ ಕೆಲವು ಚಿತ್ರಗಳಲ್ಲಿ ಅಬ್ಬರಿಸಿದ್ದ ದಿನೇಶ್ ಇಲ್ಲಿ ಒಂದು ದೃಶ್ಯದಲ್ಲಿ ಬಂದು ಹೋಗುತ್ತಾರೆ. 

ಸಾಮಾಜಿಕ ಕಳಕಳಿಯ ಈ ಚಿತ್ರ ರಾಜಕುಮಾರ್ ಅವರ ಸಾಮಾಜಿಕ ಚಿಂತನೆಯ ಚಿತ್ರಗಳಲ್ಲಿ ಇದು ಒಂದು. 

















No comments:

Post a Comment