ಸಿನಿಮಾ ಆರಂಭವಾದ ಸ್ವಲ್ಪ ಹೊತ್ತಿನಲ್ಲಿಯೇ ಮತ್ತೆ ಹಿಂದಕ್ಕೆ ಹೋಗಿ ಈ ಸಿನಿಮಾ ರಾಜಕುಮಾರ್ ಅವರದ್ದ ಅಂತ ನೋಡಿದೆ.. ಮತ್ತೆ ಖಾತ್ರಿ ಪಡಿಸಿಕೊಂಡೆ ಅವರೇ ಚಿತ್ರದ ನಾಯಕರೇ ಅಂತ..
ನಿಜ ತೊಂಭತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕನಾಗಿ ಅಭಿನಯಿಸಿ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವ ಹೆಸರಾಂತ ನಾಯಕ ನಟ ಈ ಪಾತ್ರಕ್ಕೆ ಒಪ್ಪಿದ್ದಾದರೂ ಹೇಗೆ ಅಂತ.. ಆದರೆ ಚಿತ್ರದ ಎರಡನೇ ಭಾಗದಲ್ಲಿ ಅವರ ಅಭಿನಯ ಕಂಡು ಇಷ್ಟವಾಯಿತು..
ಮನಸ್ಸಿಗಿಂತ ಮಿಗಿಲಾದ ಸಾಕ್ಷಿ ಎಲ್ಲೂ ಸಿಗೋಲ್ಲ ಮನಸ್ಸೇ ದೊಡ್ಡ ಶಕ್ತಿ ಅದನ್ನು ಸರಿ ದಾರಿಯಲ್ಲಿ ಉಪಯೋಗಿಸಿಕೊಂಡರೆ ಅದು ತೋರಿಸಿದ ಮಾರ್ಗದಲ್ಲಿ ನೆಡೆದಾಗ ಬದುಕಲ್ಲಿ ಎಂಥಹ ಸಂಭ್ರಮದ ಯಶಸ್ಸು ನೋಡಬಹುದು ಎನ್ನುವುದಕ್ಕೆ ಉದಾಹರಣೆ ಈ ಸಿನಿಮಾ.
ಇದು ತಮಿಳು ಚಿತ್ರದ ಅವರತರಣಿಕೆಯಾದರೂ ಅಚ್ಚುಕಟ್ಟಾಗಿ ಮೂಡಿಸಿದ್ದಾರೆ ನಿರ್ದೇಶಕ ಎಸ್ ಕೆ ಎ ಚಾರಿ ಅವರು.
ಎಂಪಿ ಶಂಕರ್ ಮತ್ತೊಮ್ಮೆ ಖಳನಾಯಕನಾಗಿ ವಿಜೃಂಭಿಸಿದ್ದಾರೆ.. ಅವರ ಹಾವಭಾವ, ಒಳ್ಳೆಯವನು ಎಂಬ ಸೋಗಲಾಡಿತನ, ಕುಹಕ ನಗೆ ಎಲ್ಲವೂ ಒಪ್ಪವಾಗಿದೆ.
ಭಾರತಿ ನಾಯಕಿ ನಟಿಯಾಗಿ ಹಳ್ಳಿ ಹುಡುಗಿಯ ಮುಗ್ಧತೆ ಹಾಗೂ ಗಡುಸುತನ ಎರಡನ್ನೂ ಚೆನ್ನಾಗಿ ಅಭಿನಯದಲ್ಲಿ ತೋರಿಸಿದ್ದಾರೆ.
ನರಸಿಂಹರಾಜು ಬಹುಶಃ ಬಿ ವಿ ರಾಧಾ ಅವರ ಸುತ್ತಲೇ ಸುತ್ತುವ ದೃಶ್ಯಗಳು ಹೆಚ್ಚು. ಇಬ್ಬರ ಜೋಡಿ ನಗಿಸುತ್ತದೆ, ಹಾಗೆ ಚಿತ್ರದ ಕಥೆಗೆ ಪೂರಕವಾಗಿದ್ದಾರೆ.
ಜಯಶ್ರೀ ಹಾಗೂ ಶಾಂತಮ್ಮ ನಾಯಕಿ ಮತ್ತು ನಾಯಕನ ತಾಯಿಯಾಗಿ ಚೊಕ್ಕ ಅಭಿನಯ ನೀಡಿದ್ದಾರೆ
ನಾಗಪ್ಪ ಹಾಗೂ ಸಹಚರರು ಖಳನಿಗೆ ಒತ್ತಾಸೆಯಾಗಿ ನಿಂತಿದ್ದಾರೆ
ಶೈಲಶ್ರೀ ಮುಗ್ಧೆಯಾಗಿ, ಸುಂದರವಾಗಿ ಕಾಣುತ್ತಾರೆ.
ರಂಗ, ಸಾವ್ಕಾರ್ಗು ಜಾನಕೀ, ಗುಗ್ಗು, ಎಚ್ ಆರ್ ಶಾಸ್ತ್ರೀ ಕೆಲವು ದೃಶ್ಯಗಳಲ್ಲಿ ಬಂದು ಹೋಗುತ್ತಾರೆ.
ನರೇಂದ್ರಬಾಬು ಅವರ ಸಂಭಾಷಣೆ
ಜಿ ಕೆ ವೆಂಕಟೇಶ್ ಅವರ ಸಂಗೀತ
ಕು ರಾ ಸೀತಾರಾಮಶಾಸ್ತ್ರಿ ಮ್ಮತ್ತು ಮತ್ತು ವಿಜಯನಾರಸಿಂಹ ಅವರ ಹಾಡುಗಳು
ಪಿ ಬಿ ಶ್ರೀನಿವಾಸ್, ಪಿ ಸುಶೀಲ, ಎಲ್ ಆರ್ ಈಶ್ವರಿ ಅವರ ಗಾಯನ
ವಿ ಸೆಲ್ವರಾಜ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.
ಎ ಎಲ್ ಎಸ್ ಪ್ರೋಡ್ಯೂಕ್ಷನ್ಸ್ ಲಾಂಛನದಲ್ಲಿ ಎ ಎಲ್ ಶ್ರೀನಿವಾಸನ್ ಅವರು ನಿರ್ಮಿಸಿದ್ದಾರೆ.
ರಾಜಕುಮಾರ್ ಇವರು ಈ ಚಿತ್ರದ ಶಕ್ತಿ. ಅಂತಹ ಹೆಸರಾಂತ ಕಲಾವಿದರು ಈ ಚಿತ್ರದಲ್ಲಿ ಜೇಬು ಕತ್ತರಿಸುವ ಕಳ್ಳನ ಪಾತ್ರದಲ್ಲಿ, ಮತ್ತೆ ಸಮಾಜ ಘಾತುಕರ ಜೊತೆ ಸೇರಿಕೊಂಡು ಮಾಡಬಾರದ ಕೆಲಸಕ್ಕೆ ಕೈ ಜೋಡಿಸುವ ಪಾತ್ರ ಒಪ್ಪಿಕೊಳ್ಳೋದು ಕಷ್ಟ . ಆದರೆ ಆ ನಾಟಕೀಯತನವನ್ನು, ತನ್ನ ಪಾಡು ನೆಡೆದರೆ ಸಾಕು ಮಿಕ್ಕವರ ಪಾಡು ತನಗೇಕೆ ಎನ್ನುವ ಅಭಿನಯ ಅಬ್ಬಬ್ಬಾ ಎನಿಸುತ್ತದೆ.. ನಂತರ ತನ್ನ ಕೃತ್ಯ ತನ್ನ ಸ್ನೇಹಿತನ ಕುಟುಂಬವನ್ನೇ ನಾಶ ಮಾಡಿತು ಎನ್ನುವುದು ತಿಳಿದಾಗ ಅವರ ಬದಲಾಗುವ ಅಭಿನಯದ ಧಾಟಿ.. ಅಬ್ಬಾ ಇವರು ಅದ್ಭುತ ಕಲಾವಿದರು ಅಂತ ತೋರಿಸುತ್ತದೆ..
ಮನಸ್ಸೇ ನಮ್ಮ ನಾಯಕ.. ಅವನೇ ದಾರಿ ತೋರಿಸುವ ಮಾರ್ಗದರ್ಶಿ ಎಂದು ತಿಳಿಸುವ ಚಿತ್ರವಿದು.

No comments:
Post a Comment