ಬದುಕಲ್ಲಿ ತಿರುವು ಕಾಣೋದು ಸಾಮಾನ್ಯ., ಆ ತಿರುವು ಬಡತನ ರೇಖೆಯನ್ನು ಅಳಿಸಬಹುದು ಅಥವ ಗೆರೆಯನ್ನು ಉದ್ದ ಮಾಡಬಹುದು.. ಆದರೆ ಜವಾಬ್ಧಾರಿ ಒಮ್ಮೆ ಕೈಗೆತ್ತಿಕೊಂಡರೆ ಬೀದಿ ಬಸವಣ್ಣನಾಗಿದ್ದವರು ಶಿವನ ಗುಡಿಯ ಬಸವಣ್ಣ ಆಗಬಹುದು. ಈ ಸೂತ್ರ ಇಟ್ಟುಕೊಂಡು ಹೆಣೆದ ಕಥೆ ಬೀದಿ ಬಸವಣ್ಣ ಚಿತ್ರದ್ದು.
ಪದ್ಮಿನಿ ಪಿಕ್ಚರ್ಸ್ ಆ ಕಾಲದ ಒಂದು ಕಾರ್ಪೊರೇಟ್ ಮಾದರಿಯ ನಿರ್ಮಾಣ ಸಂಸ್ಥೆ. ಸರಿಯಾದ ಕಥೆಯ ಎಳೆಯನ್ನು ಹಿಡಿದು ಅದಕ್ಕೆ ಒಪ್ಪುವ ಚಿತ್ರಕಥೆ.. ಆ ಕತೆಗೆ ತಕ್ಕಂತಹ ನಟ ನಟಿಯರನ್ನು ಆಯ್ದುಕೊಂಡು ಉತ್ತಮ ಸಹನೀಯ ಚಿತ್ರವನ್ನಾಗಿಸುವುದು ಬಿ ಆರ್ ಪಂತುಲು ಅವರಿಗೆ ವರವಾಗಿ ಬಂದ ಕಲೆ.
ಕನ್ನಡದಲ್ಲಿ ಅನೇಕಾನೇಕ ಚಿತ್ರಗಳನ್ನು ತೆರೆಗೆ ತಂದ ಖ್ಯಾತಿ ಇವರದ್ದು.
ಬೀದಿ ಬಸವಣ್ಣ ರಾಜಶ್ರೀ ಅವರ ಕಥೆಯನ್ನು ತಮ್ಮ ಪದ್ಮಿನಿ ಪಿಕ್ಚರ್ಸ್ ಕಥಾ ವಿಭಾಗ ಸಿದ್ಧಪಡಿಸಿದ ಚಿತ್ರಕಥೆಯನ್ನು ಆಧಾರವಾಗಿಸಿ ನಿರ್ಮಿಸಿ ನಿರ್ದೇಶಿಸಿದ ಬಿ ಆರ್ ಪಂತುಲು ಒಂದು ಮುಖ್ಯ ಪಾತ್ರದಲ್ಲಿ ತೆರೆಯ ಮೇಲಿದ್ದಾರೆ.
ಹುಡುಗಾಟದ ಹುಡುಗನಾಗಿ ಆರಂಭಿಕ ದೃಶ್ಯಗಳಲ್ಲಿ ಕಾಣಿಸುವ ರಾಜಕುಮಾರ್ ಮುಂದೆ ತನ್ನ ಕುಟುಂಬಕ್ಕೆ ಆದ ಆಘಾತವನ್ನು, ಬಡತನವನ್ನು ತೊಡೆದುಹಾಕುವ ಪ್ರಯತ್ನದ ಪಾತ್ರದಲ್ಲಿ ಸೊಗಸಾಗಿ ಅಭಿನಯಿಸಿದ್ದಾರೆ . ತಮ್ಮ ಜವಾಬ್ಧಾರಿ ಮರೆತು ಮತ್ತೆ ಹುಡುಗಾಟಿಕೆಯ ಕಡೆಗೆ ಹೋದಾಗಲೆಲ್ಲ ಅವರನ್ನು ಮತ್ತೆ ಎಚ್ಚರಿಸಿ ಹೊರತರುವ ಪಾತ್ರದಲ್ಲಿ ನರಸಿಂಹರಾಜು ಇದ್ದಾರೆ.
ಇದೊಂದು ಬಗೆಯ ಸಾಂಸಾರಿಕ ಚಿತ್ರವೂ ಹೌದು ಮತ್ತೆ ಪತ್ತೇದಾರಿ ಸಿನೆಮಾವೂ ಹೌದು. ಕಣ್ಣಿಗೆ ಕಾಣುವ ಕೇಡು ಸಂಗತಿಗಳು ಚಿತ್ರವನ್ನು ಮುನ್ನೆಡೆಸುತ್ತ ಸಾಗುತ್ತದೆ.
ರಾಜಕುಮಾರ್ ಅವರ ಪಾತ್ರ ಪೋಷಣೆ ಉತ್ತಮವಾಗಿದೆ. ಅಷ್ಟೇ ಮುದ್ದಾಗಿ ಕಾಣುವ, ಹದವಾದ ಅಭಿನಯ ಅವರದ್ದು. ವೇಷಭೂಷಣ, ಮಾತಿನ ಧಾಟಿ, ಹಾಡುಗಳಲ್ಲಿ ನರ್ತನ ಎಲ್ಲವೂ ಉತ್ತಮವಾಗಿ ಸಂಗಮಿಸಿದೆ.
ಭಾರತಿ ಮೊದ ಮೊದಲು ದರ್ಪದ ಪಾತ್ರಾಭಿನಯವಿದ್ದರೂ ಮೆದುವಾಗಿ, ಪಾತ್ರಕ್ಕೆ ತಕ್ಕ ಹಾಗೆ ಅಭಿನಯಿಸಿದ್ದಾರೆ.
ಜವಾಬ್ದಾರಿಯುತ ಪಾತ್ರದಲ್ಲಿ ಸದಾ " ತುಪ್ಪದ ಆಂಜನೇಯ" ಅನ್ನುವ ಅವರ ಅಭಿನಯ ಚಂದ.
ಇಲ್ಲಿ ದಿನೇಶ್ ಪೂರ್ಣಪ್ರಮಾಣದಲ್ಲಿ ಖಳನಾಯಕರಾಗಿದ್ದಾರೆ. ಆಧ್ವನಿ ಇಷ್ಟವಾಗುತ್ತದೆ.
ಸಂಗೀತ ಟಿ ಜಿ ಲಿಂಗಪ್ಪ ಅವರದ್ದು
ಸಾಹಿತ್ಯ ಜಿ ವಿ ಅಯ್ಯರ್.. ಅದಕ್ಕೆ ದನಿಯಾಗಿ ಪಿ ಬಿ ಶ್ರೀನಿವಾಸ್, ಎಸ್ ಜಾನಕೀ, ಬೆಂಗಳೂರು ಲತಾ, ನಾಗೇಶ್ವರರಾವ್ ಮತ್ತು ಪೆದ್ದಿ ಸತ್ಯಂ ಇದ್ದಾರೆ.

No comments:
Post a Comment