ಕಥಾವಸ್ತುವನ್ನು ಆಯ್ದುಕೊಂಡು ಅದಕ್ಕೊಂದು ಸಹನೀಯ ರೂಪ ಕೊಡುವಲ್ಲಿ ಪದ್ಮಿನಿ ಪಿಕ್ಚರ್ಸ್ ಎತ್ತಿದ ಕೈ. ಸಾಮಾಜಿಕ ಚಿತ್ರವೇ ಆಗಲಿ, ಪೌರಾಣಿಕವಾಗಲಿ, ಐತಿಹಾಸಿಕವಾಗಲಿ ಚಿತ್ರಕತೆಯೇ ಈ ಸಂಸ್ಥೆಯ ಶಕ್ತಿ ಮತ್ತು ಅದನ್ನು ಅಷ್ಟೇ ಪ್ರಾಮಾಣಿಕವಾಗಿ ಫಲಕದಲ್ಲಿ ತೋರಿಸುವುದು ಈ ಸಂಸ್ಥೆಯ ವಿಶೇಷ.
ಜನಜನಿತವಾದ ಪಾರ್ವತಿ ಪರಮೇಶ್ವರರ ಕತೆಯನ್ನು ಅಚ್ಚುಕಟ್ಟಾದ ಚಿತ್ರಕತೆ ಮಾಡಿ ಕೆಲವೇ ಚಿತ್ರಗಳ ಹಿಂದೆ ಇದೆ ಕತೆಯನ್ನು ಆಧರಿಸಿದ ಪಾರ್ವತಿ ಕಲ್ಯಾಣ ಚಿತ್ರ ಒಂದು ಕಡೆ.. ಈ ಚಿತ್ರದ ಅದರ ಮುಂದುವರೆದ ಭಾಗ ಅಂತ ಅಲ್ಲದಿದ್ದರೂ ಅದೇ ಕತೆಯ ಅಂತ್ಯ ಈ ಚಿತ್ರದ ಆರಂಭ ಎನ್ನಬಹುದು.
ರಾಜಕುಮಾರ್ ಇಲ್ಲಿ ಶಿವನ ಪಾತ್ರಧಾರಿ.. ಲೀಲಾವತಿ ಗೌರಿಯಾದರೆ, ಭಾರತಿ ಗಂಗೆ ಪಾತ್ರ. ಅಶ್ವಥ್ ನಾರದ, ರಾಜೇಶ್ ವಿಷ್ಣು, ಎಂಪಿ ಶಂಕರ್ ಯಥಾ ಪ್ರಕಾರ ಕಾಡುವ ಪಾತ್ರ ಇಲ್ಲಿ ಶನಿದೇವನಾಗಿ, ಉಳಿದಂತೆ ಕೆಲವು ಮುಖ್ಯ ಪಾತ್ರಗಳಲ್ಲಿ ನರಸಿಂಹರಾಜು, ಆರ್ ಟಿ ರಮಾ, ಕೃಷ್ಣಶಾಸ್ತ್ರಿ, ಪಾಪಮ್ಮ, ದಿನೇಶ್, ಮಚ್ಚೇರಿ ಅಭಿನಯಿಸಿದ್ದಾರೆ.
ಇಲ್ಲಿನ ವಿಶೇಷತೆ ಅಂದ್ರೆ ರಾಜಕುಮಾರ್ ಮತ್ತೆ ಶಿವನಾಗಿ ನಂತರ ಭೂಲೋಕದಲ್ಲಿ ಮಾನವನಾಗಿ ನಟಿಸುವ ಪಾತ್ರ. ಒಂದು ದೈವಿ ಕಳೆ, ಇನ್ನೊಂದು ಪಾತ್ರದಲ್ಲಿ ಮಾನವತ್ವ. ಅವರ ಪರಕಾಯ ಪ್ರವೇಶ ಖುಷಿ ನೀಡುತ್ತದೆ.
ಇಲ್ಲಿ ಗಂಗೆ ಗೌರಿ ಪಾತ್ರವೇ ಮುಖ್ಯವಾದರೂ, ಯಥಾಪ್ರಕಾರ ತಮ್ಮ ಪಾತ್ರದ ಪ್ರಾಮುಖ್ಯತೆ ಕಡೆಗೆ ಗಮನ ಕೊಡದೆ ತಮ್ಮ ಅಭಿನಯದ ಬಗ್ಗೆ ಪಾತ್ರ ತಲ್ಲೀನರಾಗಿರೋದು. ಆಗಲೇ ಎಂಭತ್ತು ಚಿತ್ರಗಳಲ್ಲಿ ಅಭಿನಯಿಸಿದ್ದರೂ, ಹಮ್ಮು ಬಿಮ್ಮು ಇಲ್ಲದೆ ಪಾತ್ರಗಳಲ್ಲಿ ತೊಡಗಿಸಿಕೊಳ್ಳೋದು ನೋಡಿದಾಗ ತುಂಬಿದ ಕೊಡ ಅನ್ನಿಸದೆ ಇರದು.
ಪರಶಿವನಾಗಿ ಅಗತ್ಯವಾದ ಮಾತುಗಳಲ್ಲಿ ಮಿಂಚಿದ್ದಾರೆ. ಶಾಪ ಕೊಡೋದು, ಇಬ್ಬರು ಹೆಂಡತಿಯರ ಜೊತೆಯ ತಲ್ಲಣ, ಉಗ್ರರಾದ ದೃಶ್ಯಗಳು, ಮತ್ತೆ ಶಾಂತನಾಗುವ ಪರಿ, ಭೂಲೋಕದಲ್ಲಿ ಜನಿಸಿದಾಗ ಮಾನವರ ಕುಹಕದ ಮಾತುಗಳನ್ನು ಸಹಿಸಿಕೊಳ್ಳುವ ಪರಿ. ಅನೇಕಾನೇಕ ದೃಶ್ಯಗಳು ಅವರ ಅಭಿನಯ ಸಾಮರ್ಥ್ಯಕ್ಕೆ ಪುಷ್ಟಿ ನೀಡುತ್ತವೆ.
ಲೀಲಾವತಿ ಭಾರತಿ ಅವರ ಜುಗಲ ಬಂಧಿ ಅಭಿನಯ.. ಮಾತಿಗೆ ಮಾತು ನಗುವಿಗೆ ನಗು.. ಕೋಪದ ಮಾತುಗಳಿಗೆ ಬಿರು ಮಾತುಗಳು ಖುಷಿ ನೀಡುತ್ತದೆ.
ನರಸಿಂಹರಾಜು ಹಾಗೂ ಜಯ ಅವರ ಕಾವ್ಯತ್ಮಕ ಸಂಭಾಷಣೆ ನಗು ತರಿಸುತ್ತೆ
ಪಾಪಮ್ಮ ಯಥಾಪ್ರಕಾರ ಘಟವಾಣಿ ಆದರೆ ಅಂತ್ಯದಲ್ಲಿ ಬದಲಾಗುವ ಪಾತ್ರ
ಕೃಷ್ಣಶಾಸ್ತ್ರಿ ಅವರ ಪಾತ್ರ ನರಸಿಂಹರಾಜು ಅವರ ಜೊತೆ ಸಂಭಾಷಣೆಗೆ ಸೀಮಿತವಾದ ಪಾತ್ರ
ಹಿಂದಿನ ಚಿತ್ರಗಳಂತೆ ಇಲ್ಲಿ ಎಂ ಪಿ ಶಂಕರ್ ಶನಿದೇವನಾಗಿ ನಾರದ ಅಶ್ವಥ್ ಅವರನ್ನು ಕಾಡುವುದು, ಅವರನ್ನು ಕಾಡುತ್ತ ಅವರನ್ನು ಹುಡುಗಿಯಾಗಿ ಬದಲಾಯಿಸೋದು ಆ ಪಾತ್ರದಲ್ಲಿ ರಮಾ ಸೊಗಸಾಗಿ ಅಭಿನಯಿಸಿದ್ದಾರೆ ಹಾಗೆಯೇ ಶನಿದೇವನಾಗಿ ಎಂಪಿ ಶಂಕರ್ ಪರಿಪರಿಯಾಗಿ ಗಂಗೆ ಗೌರಿ ಅವರಿಗೆ ಕಾಡುವುದು.. ಎಲ್ಲವೂ ಒಪ್ಪಿತವಾಗಿದೆ.
ಎಲ್ಲಾ ಗ್ರಹಗಳನ್ನು ಪರಿಚಯಿಸುತ್ತ ಅದರ ವಿಶೇಷತೆ ಹೇಳುತ್ತಾ ನಾರದರು ಹಾಡಿನ ಮೂಲಕ ಬರುವುದು ವಿಶೇಷತೆ, ಮತ್ತು ಚಿತ್ರಸಾಹಿತಿಯ ಪ್ರತಿಭೆ ಅರಿವಾಗುತ್ತದೆ.
ಪದ್ಮಿನಿ ಪಿಕ್ಚರ್ಸ್ ಅವರ ಲಾಂಛನದಲ್ಲಿ ಬಿ ಆರ್ ಪಂತುಲು ನಿರ್ಮಿಸಿ ನಿರ್ದೇಶಿಸಿದ ಚಿತ್ರಕ್ಕೆ ಎ ಎನ್ ನಾಗರಾಜ್ ಕತೆ ಒದಗಿಸಿದ್ದಾರೆ. ಪದ್ಮಿನಿ ಪಿಕ್ಚರ್ಸ್ ತಂಡ ಚಿತ್ರಕತೆ ರಚಿಸಿದೆ. ಆಸ್ಥಾನ ಸಂಗೀತ ನಿರ್ದೇಶಕ ಟಿ ಜಿ ಲಿಂಗಪ್ಪ., ಸಾಹಿತ್ಯ ಜಿ ವಿ ಅಯ್ಯರ್, ಛಾಯಾಗ್ರಹಣ ಪಿ ಎಲ್ ನಾಗಪ್ಪ ಇವರ ಜೊತೆಗೆ ಗಾಯನದಲ್ಲಿ ಪಿ ಬಿ ಶ್ರೀನಿವಾಸ್, ಬಾಲಮುರಳಿಕೃಷ್ಣ, ಎಸ್ ಜಾನಕೀ, ಲತಾ, ಪಿ ಲೀಲಾ ದನಿಗೂಡಿಸಿ ಈ ಚಿತ್ರವನ್ನು ಸ್ಮರಣೀಯವಾಗಿಸಿದ್ದಾರೆ.
ಗೊತ್ತಿರುವ ಕತೆಯನ್ನು ಆತ್ಮೀಯವಾಗಿ ಸಹನೀಯವಾಗಿಸೋದು ನಿರ್ದೇಶಕರ ಶಕ್ತಿ.. ಪಂತುಲು ಅವರು ಇಲ್ಲಿ ಗೆದ್ದಿದ್ದಾರೆ.

















No comments:
Post a Comment