Tuesday, October 21, 2025

ಲೋಕಕ್ಕೆ ಪಾಠ ಹೇಳಿಕೊಟ್ಟ ಸತೀ ಸುಕನ್ಯ 1967 (ಅಣ್ಣಾವ್ರ ಚಿತ್ರ ೮೧/೨೦೭)

ನಮ್ಮ ಬಳಿ ಯಾರ ಬಳಿಯೂ ಇರದ ಒಂದು ಉತ್ತಮವಾದ ವಸ್ತುವಿದ್ದರೆ ಸಾಕು.. ನಮ್ಮ ಅಹಂ ಮೆಲ್ಲನೆ ಏರುತ್ತಾ ಹೋಗುತ್ತದೆ.. ಅದನ್ನು ನಾವು ಎಷ್ಟು ಹೇಳಿದರೂ ಹೊಗಳಿಕೊಂಡರೂ ಸಾಲದು ಅನ್ನುವಷ್ಟು ಆ ವಸ್ತು ನಮ್ಮ ಮನಸ್ಸಿನ ಮೇಲೆ ಗ್ರಹಣ ಮಾಡಿರುತ್ತದೆ. 

ಸಿನೆಮಾಗಳ ನಿರ್ಮಾಣ ಅದರಲ್ಲೂ ಕನ್ನಡ ಚಿತ್ರಗಳ ಸೀಮಿತ ಮಾರುಕಟ್ಟೆಯಲ್ಲಿ ತಯಾರಾಗುತ್ತಿದ್ದ ಚಿತ್ರಗಳು ಕಡಿಮೆ.. ಅಂತ ಕಾಲಘಟ್ಟದಲ್ಲಿ ತಮ್ಮ ಪ್ರತಿಭೆಯಿಂದ, ನಿರ್ಮಾಪಕರ, ನಿರ್ದೇಶಕರ ಸಹಯೋಗದಿಂದ, ಸಹನಟರ ಆರೋಗ್ಯ ಪೂರ್ಣ ಸಹಕಾರಗಳಿಂದ ಆಗಲೇ ಎಂಭತ್ತು ಚಿತ್ರಗಳ ನಾಯಕ ನಟರಾಗಿದ್ದ ರಾಜಕುಮಾರ್ ಈ ಚಿತ್ರವನ್ನು ಆರಿಸಿಕೊಂಡಿದ್ದು, ಹಾಗೂ ಅದರ ಪಾತ್ರ ಪೋಷಣೆಯಲ್ಲಿ ಯಶಸ್ವಿಯಾಗಿದ್ದು ಅಚ್ಚರಿ ಎನಿಸಿದ್ದು ಸುಳ್ಳಲ್ಲ.. 

ನಿಜ, ಸತೀ ಸುಕನ್ಯ ಜನಜನಿತವಾಗಿದ್ದ ಪೌರಾಣಿಕ ಕಥಾನಕ.. ಅದಕ್ಕೆ ಒಂದಷ್ಟು ಹಾಸ್ಯ, ಕಲಿಯುಗದ ಜನರ ಅಸೂಯೆ ಸೇರಿಸಿ, ಸುಂದರ ಹಾಡುಗಳ ಮಿಲನ ಈ ಚಿತ್ರದಲ್ಲಿ ಮೂಡಿ ಬಂದಿದೆ.. 

ರಾಜಕುಮಾರ್ ಅವರ ಪಾತ್ರ ಚ್ಯವನ ಮಹರ್ಷಿ, ತಪಸ್ಸು ಮಾಡುತ್ತಿದ್ದಾಗ ಹುತ್ತ ಅಂದರೆ ವಲ್ಮೀಕ ಬೆಳೆದು ಬರಿ ಕಣ್ಣುಗಳು ಮಾತ್ರ ಕಾಣುತ್ತಿರುತ್ತದೆ.. ಕುತೂಹಲ ಮನಸ್ಸಿನ ರಾಜಕುಮಾರಿ ಸುಕನ್ಯ ಕಡ್ಡಿಯಿಂದ ಆ ಹುತ್ತದಿಂದ ಕಾಣುತ್ತಿದ್ದ ಕಣ್ಣುಗಳನ್ನು ಚುಚ್ಚಿದಾಗ ಹುತ್ತ ಒಡೆದು ಹೋಗಿ ಕಣ್ಣಿನಿಂದ ರಕ್ತ ಸುರಿಸಿಕೊಂಡು ನೋವಿನಿಂದ ನರಳುತ್ತಿದ್ದ ಮಹರ್ಷಿ ಹೊರಬರುತ್ತಾರೆ. 

ಮಾಡಿದ ತಪ್ಪನ್ನು ತಿದ್ದಿಕೊಳ್ಳಬೇಕು ಎಂಬ ನಿಲುವಿನ ಸುಕನ್ಯ ಮಾತನ್ನು ನಾರದರೂ ಅನುಮೋದಿಸಿದ್ದರಿಂದ ಸುಕನ್ಯಾ ವೃದ್ಧ ಹಾಗೂ ಅಂಧ ಚ್ಯವನ ಮಹರ್ಷಿಯನ್ನು ಮದುವೆಯಾಗಿ ಅವರ ದಿನ ನಿತ್ಯದ ಪೂಜಾ, ತಪಸ್ಸಿನ ಕಾರ್ಯಗಳಲ್ಲಿ ನೆರವಾಗುತ್ತಾರೆ.. 


ಕಾಲಾನಂತರ ನಾರದರ ಲೋಕಕಲ್ಯಾಣಾರ್ಥ ಘಟನೆಗಳಲ್ಲಿ ಚ್ಯವನ ಹಾಗೂ ಸುಕನ್ಯ ಅವರ ದಾಂಪತ್ಯದ ಒಲುಮೆ, ಪತಿ ಭಕ್ತಿ, ಪತಿ ಪತ್ನಿಯರ ಅನ್ಯೋನ್ಯತೆ ಇವುಗಳ ಸತ್ವ ಪರೀಕ್ಷೆ ನೆಡೆಯುತ್ತದೆ ಹಾಗೂ ಅಂತ್ಯದಲ್ಲಿ ಚ್ಯವನ ಮಹರ್ಷಿಗೆ ಯೌವನ ಮತ್ತು ದೃಷ್ಟಿ ಮರಳಿ ಬರುತ್ತದೆ.. 

ಈ ಕಥಾನಕವನ್ನು ಅಚ್ಚುಕಟ್ಟಾಗಿ ನಿರೂಪಿಸಿದವರು ನಿರ್ದೇಶಕ ವ್ಯೆ ಆರ್ ಸ್ವಾಮಿ.. ಶ್ರೀ ರಾಮಚಂದ್ರ ಅವರ ಕಥೆಗೆ ಸಂಭಾಷಣೆ ಒದಗಿಸಿದವರು ಸೋರಟ್ ಅಶ್ವಥ್, ಗೀತೆಗಳನ್ನು ಎಂ ಎನ್ ಆರಾಧ್ಯ.. ಇಂಪಾದ ಸಂಗೀತ ಒದಗಿಸಿದವರು ರಾಜನ್ ನಾಗೇಂದ್ರ ಜೋಡಿ. 

ಸುಶ್ರಾವ್ಯಗಾಗಿ ಹಾಡಿದವರು ಪಿ ಬಿ ಶ್ರೀನಿವಾಸ್, ಎಸ್ ಜಾನಕಿ, ಪಿ ಲೀಲಾ, ಎಲ್ ಆರ್ ಈಶ್ವರಿ, ಬಿ ಕೆ ಸುಮಿತ್ರಾ, ನಾಗೇಂದ್ರ, ರತ್ನಾಕರ್, ಹಾಗೂ ಪ್ರೇಮ. 

ಹಾಸ್ಯನಟ ರತ್ನಾಕರ್ ಇಲ್ಲಿ ಸಹನಿರ್ದೇಶನ ಕೂಡ ಮಾಡಿದ್ದಾರೆ. ಛಾಯಾಗ್ರಹಣ ಆರ್ ಮಧು. 

ವಿಶೇಷ ಎಂದರೆ ನಿರ್ಮಾಪಕರ ಹೆಸರಿನ ಜೊತೆ ಅವರ ವೃತ್ತಿಯನ್ನು ಗುರುತಿಸಿರುವುದು - ಶಿಲ್ಪಿ ಕಲಾವಿದ ಡಿ ಪುಟ್ಟಸ್ವಾಮಿ. 

ಸಿನೆಮಾದ ಮುಕ್ಕಾಲು ಭಾಗ ಅಂಧರಾಗಿ ರಾಜಕುಮಾರ್ ಅಭಿನಯಿಸಿದ್ದಾರೆ. ಹಿತವಾದ, ಹಿಡಿಯಾದ ಅಭಿನಯ. ಎಲ್ಲೂ ಕಡಿಮೆಯಾಗಿಲ್ಲ, ಆ ಪಾತ್ರಕ್ಕೆ ತಕ್ಕಂತೆ ಅಭಿನಯ. 

ನಿಜಕ್ಕೂ ಅಷ್ಟೊಂದು ಸಿನೆಮಾಗಳಲ್ಲಿ ನಟಿಸಿದ ನಟ, ಇಲ್ಲಿ ಅಂಧನಾಗಿ, ವೃದ್ಧನಾಗಿ ನಟಿಸುವುದರಲ್ಲಿ ಏನೂ ಮುಜುಗರ ಪಡದೆ ಅಭಿನಯಿಸಿರೋದು ಅವರ ವೃತ್ತಿಪರತೆಗೆ ಸಾಕ್ಷಿ

ಸಿನೆಮಾದ ಕಡೆಯ ಇಪ್ಪತ್ತು ನಿಮಿಷಗಳಲ್ಲಿ ಮರಳಿದ ಯೌವನ ಹಾಗೂ ದೃಷ್ಟಿಯಿಂದ ಮುದ್ದಾಗಿ ಕಾಣುವ ರಾಜಕುಮಾರ್ ಅವರನ್ನು ನೋಡೋದೇ ಒಂದು ಸಂಭ್ರಮ. 

ಮುಖ್ಯ ಪಾತ್ರದಲ್ಲಿ ಚಿತ್ರದುದ್ದಕ್ಕೂ ಕಾಣಿಸಿಕೊಳ್ಳುವ ಮುದ್ದಾದ ಹರಿಣಿ ಅಭಿನಯದಿಂದ ಇಷ್ಟವಾಗುತ್ತಾರೆ 


ಹಾಸ್ಯಕ್ಕೆ ಕೊಂಚ ದೃಶ್ಯಗಳು ನರಸಿಂಹರಾಜು, ರತ್ನಾಕರ್, ಬಾಲಕೃಷ್ಣ, ಬೆಂಗಳೂರು ನಾಗೇಶ್, ಆರ್ ಟಿ ರಮಾ ಜೊತೆಯಾಗಿದ್ದಾರೆ. 


ಉದಕುಮಾರ್ ಅವರ ಬಗ್ಗೆಯೂ ಒಂದು ಮಾತು.. ಆ ಕಾಲಘಟ್ಟದಲ್ಲಿ ರಾಜಕುಮಾರ್ ಅವರ ಸಮಕಾಲೀನರಾಗಿದ್ದರೂ ನಾಯಕ, ಖಳನಾಯಕ, ಪೋಷಕ ಪಾತ್ರಗಳು ಎಲ್ಲದರಲ್ಲೂ ಇಮೇಜ್ ಹಂಗಿಲ್ಲದೆ ನಟಿಸಿದ್ದಾರೆ. ಈ ಚಿತ್ರದಲ್ಲೂ ಕೂಡ ಸುಕನ್ಯ ಅವರ ತಂದೆಯಾಗಿ ಉತ್ತಮ ಅಭಿನಯ, ಹಾಗೆಯೇ ಜಯಶ್ರೀ ಅವರದ್ದು ತಾಯಿಯ ಅಭಿನಯ, 



ಕರುನಾಡಿನ ಚಿತ್ರಜಗತ್ತಿನ ನಾರದನ ಪಾತ್ರಕ್ಕೆ ಹೇಳಿ ಮಾಡಿಸಿದಂತಹ ಅಶ್ವಥ್. ಹಾಸ್ಯ ತುಂಟತನ ನಾಜೂಕಾಗಿ ಹೇಳಬೇಕಾದ ಮಾತುಗಳು.. ನಾಟಕೀಯತೆ ಎಲ್ಲವನ್ನೂ ಮೇಳೈಸಿಕೊಂಡು ಅಭಿನಯಿಸಿದ್ದಾರೆ. 


ರಾಜಕುಮಾರ್ ಅವರ ಆಗಿನ ಚಿತ್ರಗಳಲ್ಲಿ ಖಾಯಂ ಎನ್ನುವಂತಿದ್ದ ಎಂ ಪಿ ಶಂಕರ್ ಕಡೆಯ ದೃಶ್ಯಗಳಲ್ಲಿ ಬರುತ್ತಾರೆ,  ರಾಜಾಶಂಕರ್ ಇಂದ್ರನಾಗಿ ಕಂಗೊಳಿಸಿದರೆ, ವಿದ್ಯಾಸಾಗರ್ ಎಂಬ ಹೆಸರಿನಿಂದ ಚಿತ್ರಜೀವನ ಶುರು ಮಾಡಿದ ರಾಜೇಶ್ ಎಂದು ನಂತರ ಹೆಸರಾದವರು ಈ ಚಿತ್ರದಲ್ಲಿ ಇದ್ದಾರೆ. 



ನಾವು ಏನಾದರೂ ಆಗಿರಬಹುದು ಆದರೆ ಸಿಕ್ಕ ಅವಕಾಶಗಳನ್ನು ಸ್ವೀಕರಿಸಿ ಮುನ್ನುಗಿ ಸಾರ್ಥಕತೆ ಪಡೆಯಬೇಕು ಎನ್ನುವುದನ್ನು ಈ ಚಿತ್ರದಲ್ಲಿ ಅಭಿನಯಿಸಿರುವ ರಾಜಕುಮಾರ್ ಅವರ ಗುಣಗಳಿಂದ ಅರ್ಥ ಮಾಡಿಕೊಳ್ಳಬಹುದು!

ಮತ್ತೊಂದು ಚಿತ್ರದಲ್ಲಿ ಸಿಗೋಣ!

No comments:

Post a Comment