Wednesday, December 17, 2025

ರಹಸ್ಯವನ್ನು ಕಾಪಾಡುವ ರಾಜದುರ್ಗದ ರಹಸ್ಯ 1967 (ಅಣ್ಣಾವ್ರ ಚಿತ್ರ ೮೫/೨೦೭)

ಜಾನಪದ ಕಥಾವಸ್ತುಗಳಿಗೆ ಹೇಳಿ ಮಾಡಿಸಿದ ನಟ ರಾಜಕುಮಾರ್ ಅವರು. ರಾಜಕುಮಾರ, ದೇಶದಿಂದ ಹೊರಗೆ ಹಾಕಿದ ಪ್ರಜೆ, ನ್ಯಾಯಕ್ಕಾಗಿ ಹೋರಾಡುವ ಯುವಕ, ತನ್ನ ಕುಟುಂಬಕ್ಕೆ ಆಗಿರುವ ಅನ್ಯಾಯವನ್ನು  ದಿಕ್ಕರಿಸಿ, ಅದನ್ನು ಸರಿ ಪಡಿಸುವ ಪಾತ್ರ,ಸೊಕ್ಕಿನ ಹೆಣ್ಣನ್ನು ಪಳಗಿಸಿ ಗರ್ವ ಭಂಗ ಮಾಡುವ ಪಾತ್ರ.. ಹೀಗೆ ಸಾಮಜಿಕ ಕಳಕಳಿಯ ಪಾತ್ರಗಳು ಇವರನ್ನೇ ಹುಡುಕಿಕೊಂಡು ಬರುತ್ತವೆ. ಆ ಪಾತ್ರದ ವೇಷಭೂಷಣ, ಆಂಗೀಕ ಅಭಿನಯ, ಸಂಭಾಷಣೆಯ ಶೈಲಿ ಎಲ್ಲವೂ ಕರತಲಾಮಲಕ ಬಿಟ್ಟಿದೆ ಇವರಿಗೆ. 

ಅಂತಹ ಒಂದು ಚಿತ್ರರತ್ನ ರಾಜದುರ್ಗದ ರಹಸ್ಯ. .

ಒಂದೇ ತಾಯಿಯ ಮಕ್ಕಳಾದರೂ ಭಿನ್ನ ವಿಭಿನ್ನ ಅಭ್ಯಾಸಗಳು ಹವ್ಯಾಸಗಳಿಂದ ಒಬ್ಬ ಗುಣವಂತನಾದರೆ, ಇನ್ನೊಬ್ಬ ಆಲಸಿಯಾಗಿರುತ್ತಾನೆ. 

ದುರಭ್ಯಾಸಗಳಿಗೆ ತುತ್ತಾದ ರಾಜಕುಮಾರ ತನ್ನ ಸೋದರಮಾವನ ಕುತಂತ್ರಕ್ಕೆ ಬಲಿಯಾಗಿ ತನ್ನ ಪ್ರಾಣವನ್ನೇ ತ್ಯಾಗ ಮಾಡುವಂಥಹ ಸನ್ನಿವೇಶ ಬರುತ್ತದೆ. ಆಗ ಆತನ ತಮ್ಮನಾಗಿರುವ ತಾನೇ ಆಲಸಿ ರಾಜಕುಮಾರ ಎಂದು ಬಿಂಬಿಸಿಕೊಂಡು ಅದಕ್ಕೆ ತಕ್ಕ ಹಾಗೆ ನಟನೆ ಮಾಡುತ್ತಾ ರಾಜ್ಯವನ್ನು ಮತ್ತೆ ಸುಭಿಕ್ಷತೆಗೆ ತೆಗೆದುಕೊಂಡು ಬರುವುದು ಮತ್ತೆ ಹಿಂದಿನ ರಾಜನನ್ನು ಮರಳಿ ಪಟ್ಟದಲ್ಲಿ ಕೂರಿಸುವುದು ಈ ಚಿತ್ರದ ತಿರುಳು. 

ಅದಕ್ಕೆ ಆಯ್ಕೆ ಮಾಡಿಕೊಂಡ ಚಿತ್ರಕತೆ ತೀಕ್ಷ್ಣವಾಗಿದೆ. ಚಿತ್ರವೂ ಎಲ್ಲೂ  ಹಳಿ ತಪ್ಪಿ ಹೋಗದಂತೆ ಚಿತ್ರವನ್ನು ನಿರ್ದೇಶಿಸಿದ್ದಾರೆ. 

ಚಿತ್ರದ ಆರಂಭಿಕ ಭಾಗಗಳಲ್ಲಿ ದ್ವಿಪಾತ್ರ ಅಭಿನಯದಲ್ಲಿ ಕಾಣುವ ರಾಜಕುಮಾರ್ ಎರಡೂ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ಅವರ ಆಲಸಿ, ಲೋಲುಪತನದ ಪಾತ್ರವನ್ನು ನಮ್ಮಂಥ ಅವರನ್ನು  ಆರಾಧಿಸುವ ಅಭಿಮಾನಿ ದೇವರುಗಳು ನೋಡುವುದು ಕಷ್ಟವೆನಿಸಿದರೂ ಅವರ  ಅಭಿನಯ ಕಳೆಗಟ್ಟಿದೆ. 

ಸೌಮ್ಯ ಪಾತ್ರದಲ್ಲಿ ರಾಜಕುಮಾರ್ ಅವರ ಪಾತ್ರ ಹೇಳೋದೇ ಬೇಡ.. ಸುಂದರವಾದ ಮುಖ, ಉಡುಪುಗಳು,ಸಂಭಾಷಣೆ ಶೈಲಿ, ಹಾವ ಭಾವ, ಕಾಳಗ ಎಲ್ಲವೂ ಎರಕ ಹುಯ್ದಂತೆ ಇದೆ. 

ನಾಯಕಿಯ ಪಾತ್ರದಲ್ಲಿ ಭಾರತಿ ಮತ್ತೆ ಸಹಜಾಭಿನಯ ನೀಡಿದ್ದಾರೆ 

ದಿನೇಶ್ ರಾಜ್ಯದ ಅರಾಜಕತೆಯ ವಿರುದ್ಧ ದನಿ ಎತ್ತುವ ಪಾತ್ರದಲ್ಲಿ ಸೊಗಸಾದ ಅಭಿನಯ ನೀಡಿದ್ದಾರೆ. 

ಪಾಪಮ್ಮ ಅವರಿಗೆ ಕೆಲವೇ ದೃಶ್ಯಗಳು ಇದ್ದರೂ ಅವರ ಅಭಿನಯ ಹಿತವಾಗಿದೆ. 

ಸಂಭಾಷಣೆಯನ್ನು ಸರಿ ಮಾಡುತ್ತಲೇ ಮಾತಾಡುವ ನರಸಿಂಹರಾಜು ಇಷ್ಟವಾಗುತ್ತಾರೆ

ಅವರ ಮತ್ತು ಬೆಂಗಳೂರು ನಾಗೇಶ್ ಅವರ ಸ್ವಯಂವರದ ದೃಶ್ಯಗಳು ನಗೆ ಉಕ್ಕಿಸುತ್ತದೆ 

ಗಣಪತಿ ಭಟ್ ಸ್ಪರ್ಧೆ ಸೃಷ್ಟಿಸುವ ಪಾತ್ರ ನಗಿಸುತ್ತದೆ

ಉದಯಕುಮಾರ್ ಮತ್ತೆ ಇಲ್ಲಿ ಖಳನಾಯಕ.. ಅಬ್ಬರದ ನಗು, ಎತ್ತರದ ದನಿಯಲ್ಲಿ ಮಾತುಗಳು, ಸಿಂಹ ನೆಡೆ, ಕ್ರೌರ್ಯ ಎಲ್ಲವೂ ಮೇಳೈಸಿದೆ. 

ಇದೊಂದು ಸುಂದರ ಚಿತ್ರ ಗಮನಸೆಳೆಯುವುದು ಹಿನ್ನೆಲೆ ಸಂಗೀತ ಮತ್ತು ಹಾಡುಗಳಲ್ಲಿ. 

ನಿರ್ದೇಶನ ಎ ಸಿ ನರಸಿಂಹಮೂರ್ತಿ ಮತ್ತು ಎಸ್ ಕೆ ಭಗವಾನ್ 

ನಿರ್ಮಾಣ ಎ ವಾಸುದೇವರಾವ್ ಮತ್ತು ಟಿ ದ್ವಾರಕಾನಾಥ್ 

ಸಂಗೀತ ಜಿ ಕೆ ವೆಂಕಟೇಶ್ 

ಲಾಂಛನ ಕೃಷ್ಣೋದಯ ಚಿತ್ರ 

ಸಂಭಾಷಣೆ  ಮತ್ತು ಸಾಹಿತ್ಯ ಆರ್ ಎನ್ ಜಯಗೋಪಾಲ್ 

ಕಥೆ ಮತ್ತು ಚಿತ್ರಕತೆ ನಂದನ  

ಛಾಯಾಗ್ರಹಣ ಬಿ ದೊರೈರಾಜ್ 











ಹಾಸ್ಯ ಪತ್ರಿಕೆ ಅಲ್ಲ ಅಲ್ಲ ಇದು ಲಗ್ನಪತ್ರಿಕೆ 1967 (ಅಣ್ಣಾವ್ರ ಚಿತ್ರ ೮೪/೨೦೭)

ಚಿತ್ರದ ನಿರ್ದೇಶಕ ಕೆ ಎಸ್ ಎಲ್ ಸ್ವಾಮಿ 
ಸಂಗೀತ ವಿಜಯಭಾಸ್ಕರ್ 
ಛಾಯಾಗ್ರಹಣ ಕೆ ಜಾನಕಿರಾಮ್ 
ಭಾವ ಫಿಲ್ಮ್ಸ್ ಲಾಂಛನ 
ಎ ಎಂ ಸಮೀವುಲ್ಲಾ ನಿರ್ಮಾಪಕರು 
ಸಹನಿರ್ದೇಶನ ಸಿದ್ಧಲಿಂಗಯ್ಯ ಹಾಗೂ ತಿಪಟೂರು ರಘು 


ಗಾಯಕರು ಪಿ ಬಿ  ಶ್ರೀನಿವಾಸ್, ಬೆಂಗಳೂರು ಲತಾ, ಎಲ್ ಆರ್ ಈಶ್ವರಿ, ಎ ಎಲ್ ರಾಘವನ್, ಮೈಸೂರು ಗುಪ್ತ, ಎಸ್ ಜಾನಕೀ 

ತಾರಾಗಣದಲ್ಲಿ ರಾಜಕುಮಾರ್, ನರಸಿಂಹರಾಜು, ದ್ವಾರಕೀಶ್, ಹನುಮಂತಾಚಾರ್, ಬಿವಿರಾಧ, ಚಿ, ಉದಯಶಂಕರ್ ಶಿವರಾಂ, ಜಯಶ್ರೀ, ಜಯಂತಿ,, ಜೊತೆಯಲ್ಲಿ ನಾರಾಯಣಸ್ವಾಮಿ ಅಲಿಯಾಸ್ ಶ್ರೀನಾಥ್ ಹಾಗೂ ಗಂಗಾಧರ್. 

ಹಾಡುಗಳು 

ನಿನ್ನಿಂದ ನಾನಿಂದು ಹಂಬಲಿಸಿ 
ಅಳುಕು ಮೋರೆ ಹೆಣ್ಣಿಗೆ 
ಬಲು ಅಪರೂಪ  ನಮ್ ಜೋಡಿ 
ಬ್ರಹ್ಮಚಾರಿ ಶರಣಾದ 
ಮೇಲಿನ ಹಾಡುಗಳು ಹಾಗೂ ಇತರ ಹಾಡುಗಳು ಮನಸೆಳೆಯುತ್ತವೆ 

ಬ್ರಹ್ಮಚಾರಿ ಮನಸ್ಸು ಶತಮರ್ಕಟ ಮನಸ್ಸು ಅಂತಾರೆ ... ಇಲ್ಲಿ ರಾಜಕುಮಾರ್ ಬ್ರಹ್ಮಚಾರಿ ಪಾತ್ರದಲ್ಲಿ ನರಸಿಂಹರಾಜು ಮತ್ತು ದ್ವಾರಕೀಶ್ ಜೊತೆಯಲ್ಲಿ ಸಂಘ ಕಟ್ಟಿ.. ಅದರಲ್ಲಿ ಒಂದೇ ಮನಸ್ಸಿನ ಹುಡುಗರನ್ನು ಸದಸ್ಯರನ್ನಾಗಿ ಮಾಡಿಕೊಂಡು ಬ್ರಹ್ಮಚಾರಿಯಾಗಿರಲು ನಿರ್ಧರಿಸುತ್ತಾರೆ  ಮತ್ತೆ ಅದರಂತೆ ನೆಡೆದುಕೊಳ್ಳುತ್ತಿರುತ್ತಾರೆ.. ಆದರೆ ಆತನ ಸಹಚಾರಿಗಳು ಅಂದರೆ ದ್ವಾರಕೀಶ್ ಮತ್ತು ನರಸಿಂಹರಾಜು ತಮಗಿಷ್ಟವಾದ ಜೋಡಿಯನ್ನು ಪ್ರೀತಿ ಮಾಡುತ್ತಾ ರಾಜಕುಮಾರ್ ಪಾತ್ರ ಒಂದಲ್ಲ ಒಂದು ದಿನ ರಾಜಕುಮಾರ್ ಬದಲಾಗುತ್ತಾರೆ  ಎನ್ನುವ ವಿಶ್ವಾಸದಿಂದ ಮುಂದುವರೆಸಿರುತ್ತಾರೆ

ಈ ಪ್ರಸಂಗ ಹಾಸ್ಯಮಯವಾಗಿದೆ .. 

ಸ್ನೇಹಿತನ ಮದುವೆಗೆ ಹೋಗುವಾಗ ರೈಲಿನಲ್ಲಿ ಸಿಗುವ ಕನ್ಯಾಮಣಿಯ ಜೊತೆ ಹುಸಿ ಮುನಿಸಿನ ಪ್ರೀತಿ ಮೆಲ್ಲಗೆ ಶುರುವಾಗುತ್ತದೆ.. ನಂತರ ಸ್ನೇಹಿತನ ಮದುವೆಯ ಸಂದರ್ಭ.. ಅವರಿಬ್ಬರನ್ನು ಹತ್ತಿರ ಮಾಡುತ್ತದೆ.. ನಂತರ ತನ್ನ ಸಿದ್ಧಾಂತ, ತನ್ನ ಗುರಿ ಎಲ್ಲವನ್ನೂ ಹಿಂದಕ್ಕೆ ಹಾಕಿ ಸುಖಾಂತ್ಯ ಹೊಂದುತ್ತದೆ. 

ಈ ಸರಳ ಕತೆಯನ್ನು ನೋಡುವಂತೆ ಮಾಡುವಲ್ಲಿ ನಿರ್ದೇಶಕರ ಪಾತ್ರ ಹಿರಿದು... 

ಈ  ಚಿತ್ರದಲ್ಲಿ ಎಲ್ಲವೂ ಅಡಕವಾಗಿದೆ.. ನವಿರಾದ ಹಾಸ್ಯ, ಮಧುರ ಗೀತೆಗಳು, ನೆನಪಲ್ಲಿ ಉಳಿಯುವ ಸಂಭಾಷಣೆ.. ಎಲ್ಲರ ಅಭಿನಯ.. ಚಿತ್ರಕ್ಕೆ ಕಳೆ ಕಟ್ಟಿದೆ. 

ಚಿತ್ರದ ಕಾಲು ಭಾಗ ರೈಲಿನಲ್ಲಿಯೇ ನೆಡೆಯುವುದು ವಿಶೇಷ.. ಸೆಟ್ಟಿಂಗ್ ಇಷ್ಟವಾಗುತ್ತದೆ. ರೈಲಿನ ಶಬ್ದ  ಹಿನ್ನೆಲೆಯಲ್ಲಿ ಕೇಳುತ್ತಲೇ ಇರುತ್ತದೆ.. 












ರಾಜಕುಮಾರ್ ಮತ್ತೆ ಮುದ್ದಾಗಿ ಕಾಣುತ್ತಾರೆ. ಸಂಭಾಷಣೆ, ಅದರ ವೈಖರಿ, ಮುಖಭಾವ ಎಲ್ಲವೂ ಇಷ್ಟವಾಗುತ್ತದೆ. ಕಥೆಯ ಆಯ್ಕೆ ಅದಕ್ಕೆ ಪೂರಕವಾದ ಅವರ ಅಭಿನಯ ಸೊಗಸು. 

ಜಯಂತಿ ಸುಂದರಿಯೇ ಹೌದು..  ಮೃದು ಮಾತು, ನಾಜೂಕುತನ, ವಯ್ಯಾರ .. 

ನರಸಿಂಹರಾಜು ಮತ್ತು ದ್ವಾರಕೀಶ್ ಹಾಸ್ಯ ಉಕ್ಕಿಸುವಲ್ಲಿ  ಅವರ ಸಂಭಾಷಣೆಗಳಿಂದ ಮನೆಸೆಳೆಯುತ್ತಾರೆ. 

ಉಳಿದಂತೆ ರಾಧಾ, ಹನುಮಂತಾಚಾರ್ ಜಯಶ್ರೀ, ಶ್ರೀನಿವಾಸ್ ಗಮನಸೆಳೆಯುತ್ತಾರೆ

ಈ ಚಿತ್ರದ ನಿಜವಾದ ನಾಯಕ ಚಿ ಉದಯಶಂಕರ್. ಪ್ರಾಯಶಃ  ಮೊದಲಬಾರಿಗೆ ಸಂಪೂರ್ಣ  ಚಿತ್ರವನ್ನು ರಚಿಸಲು ಸಿಕ್ಕಿರುವ ಅವಕಾಶವನ್ನು ಸೊಗಸಾಗಿ ಕೈಗೆ ಎತ್ತಿಕೊಂಡಿದ್ದಾರೆ. ಕಥೆ, ಚಿತ್ರಕತೆ, ಸಂಭಾಷಣೆ, ಸಾಹಿತ್ಯ ಎಲ್ಲವೂ ಅವರದ್ದೇ. 

ಇದರ ಜೊತೆಯಲ್ಲಿ ಸೀನು ಸುಬ್ಬು ಎಂಬ ಜೋಡಿಯನ್ನು ಸೃಷ್ಟಿಸಿ ಬಲು ಅಪರೂಪ ನಮ ಜೋಡಿ ಹಾಡಿನಲ್ಲಿ ಸಾಹಿತ್ಯವೂ ಹಾಸ್ಯಮಯ ಹಾಗೂ ಅವರ ಮತ್ತು ಶಿವರಾಂ ಅವರ ನೃತ್ಯವೂ ಕೂಡ. 

ನಾ ಕನ್ನಡ ಚಿತ್ರಗಳನ್ನು ಅನುಸರಿಸಿಕೊಂಡು ಬಂದಂತೆ ನನಗೆ ಅನಿಸಿದ್ದು ಇದೊಂದು ಮೊದಲ ಸಂಪೂರ್ಣ ಹಾಸ್ಯಮಯ ಚಿತ್ರ. 

ಇನ್ನೊಂದು ವಿಶೇಷತೆ ಎಂದರೆ ರಾಜಕುಮಾರ್ ಅವರ ಹೆಸರಿಗೆ ಬಿರುದು ಸೇರಿಸಿ ವರನಟ ರಾಜಕುಮಾರ್ ಅಂತ ತೋರಿಸಿರೋದು. 

Tuesday, December 16, 2025

ಪ್ರತ್ಯಕ್ಷವಾದರೂ ಪ್ರಮಾಣಿಸಿ ನೋಡು ಎನ್ನುವ ಮಾತು ಹೇಳುವ ರಾಜಶೇಖರ 1967 (ಅಣ್ಣಾವ್ರ ಚಿತ್ರ ೮೩/೨೦೭)


ನೂರು ಮೀಟರುಗಳ ಓಟ 

ಇನ್ನೂರು ಮೀಟರುಗಳ ಓಟ 

ನಾನೂರು ಮೀಟರುಗಳ ಓಟ 

ಮ್ಯಾರಥಾನ್ ಅಥವ ಮೈಲುಗಳ ದೂರದ ಓಟ 

ಪ್ರತಿಯೊಂದರ ಸಿದ್ಧತೆಯೂ ವಿಭಿನ್ನ 

ಕೆಲವೊಂದು ಸಿನಿಮಾಗಳು ಹಾಗೆಯೇ ಮೊದಲ ಕ್ಷಣದಿಂದ ನಮ್ಮನ್ನು ಆವರಿಸಿಕೊಳ್ಳುತ್ತದೆ, ಅತ್ತಿತ್ತ ನೋಡದಂತೆ ನಮ್ಮನ್ನು ಹಿಡಿದಿಡುತ್ತದೆ.. ಓಹ್ ಸಿನೆಮಾ ಹೀಗೆಯೇ ಸಾಗುತ್ತದೆ ಎನ್ನುವಾಗ ಅಚಾನಕ್ ತಿರುವು ಕೊಟ್ಟು ಭಿನ್ನ ಹಾದಿಯನ್ನು ಹಿಡಿಯುತ್ತದೆ. 

ವಸಂತ್ ಪಿಕ್ಚರ್ಸ್ ಲಾಂಛನದಲ್ಲಿ ಬಿ ಎಸ್ ರಂಗ ಅವರು ನಿರ್ಮಿಸಿರುವ ಚಿತ್ರದ ಹೊಣೆಗಾರಿಕೆಯನ್ನು ಜಿ ವಿ ಅಯ್ಯರ್ ಅವರಿಗೆ ಒಪ್ಪಿಸಿದ್ದಾರೆ. 

ಜಿ ವಿ ಅಯ್ಯರ್ ಅವರು ನಿರ್ಮಾಪಕರು ಕೊಟ್ಟ ಕತೆಯನ್ನು ಚಿತ್ರಕತೆಯಾಗಿಸಿ ಒಪ್ಪುವಂತೆ ಚಿತ್ರವನ್ನು ತೆರೆಗೆ ತಂದಿದ್ದಾರೆ.

ಸಿನೆಮಾದ ಆರಂಭದಿಂದ ಒಂದೇ ವೇಗದಲ್ಲಿ ಸಾಗೋದಕ್ಕೆ ಚಿತ್ರಕಥೆಯೂ ಸಹಾಯ ಮಾಡಿದೆ ಜೊತೆಗೆ ಜಿ ಕೆ ವೆಂಕಟೇಶ್ ಅವರ ಸಂಗೀತವೂ ಕೂಡ ರಭಸ ಕೊಟ್ಟಿದೆ. ಸಾಹಿತ್ಯ ಜಿ ವಿ ಅಯ್ಯರ್ ಅವರದ್ದು. ಬಿ ಎನ್ ಹರಿದಾಸ್ ಅವರ ಛಾಯಾಗ್ರಹಣವಿದೆ. 

ರಾಜಶೇಖರನಾಗಿ ರಾಜಕುಮಾರ್ ಅವರ ಅಭಿನಯ ಕಳೆ ಕಟ್ಟಿದೆ. ತಾರುಣ್ಯದಲ್ಲಿ ಅವರಾಡುವ ಮಾತುಗಳು, ಆಂಗೀಕ ಸಂಭಾಷಣೆ, ಗತ್ತು, ಸ್ನೇಹಕ್ಕೆ ಮಿಡಿಯುವ ಮನಸ್ಸು,ಮನಸ್ಸು ಕೊಂಚ ಗಲಿಬಿಲಿಯಾಗಿ ಪ್ರೇಮಕ್ಕೆ ತಿರುಗಿಕೊಳ್ಳುವ ದೃಶ್ಯ.. ಮುಪ್ಪಿನಲ್ಲಿ ಅವರ ಅದೇ ವಿಶ್ವಾಸದಿಂದ ಮಾತಾಡುವ ರೀತಿ, ಹೊಡೆದಾಟದ ದೃಶ್ಯಗಳು, ಕತ್ತಿ ವರಸೆ.. ಪತ್ನಿ ಮತ್ತು ಗೆಳೆಯನನ್ನ ದೂರ ಮಾಡಿ ನಂತರ ಪಶ್ಚಾತಾಪ ಪಡುವ ದೃಶ್ಯಗಳು.. ರಾಜಕುಮಾರ್ ಅವರಿಗೆ ಹೇಳಿ ಮಾಡಿಸಿದ  ಹಾಗಿದೆ. ತಾರುಣ್ಯದಲ್ಲಿ ಅತ್ಯಂತ ಸುಂದರವಾಗಿ ಕಾಣುವ ಪಾತ್ರ.. ವಯೋಸಹಜತೆಯಿಂದ ಕುಗ್ಗುವ ಅದಕ್ಕೆ ಬೇಕಾದ ಲವಲವಿಕೆಯಿಂದ ಅಭಿನಯಿಸಿದ್ದಾರೆ. 



ಇದೊಂದು ರಾಜ್ ಅವರ ಚಿತ್ರ ಅನ್ನಬಹುದು.. ಚಿತ್ರದುದ್ದಕ್ಕೂ ಬರುವ ಅವರ ಪಾತ್ರ ಚಿತ್ರವನ್ನು ಆವರಿಸಿಕೊಂಡಿದೆ.  ಈ  ಚಿತ್ರದಲ್ಲಿ ರಾಜಕುಮಾರ್ ಅವರೇ ನಾಯಕ.. ರಾಜಕುಮಾರ್ ಅವರೇ ಖಳನಾಯಕ.. ಇದೆ ಈ ಚಿತ್ರದ ವಿಶೇಷ.. 

ಅವರ ನಾಯಕಿಯಾಗಿ ಭಾರತಿ  ಅವರ ಪಾತ್ರ ತಕ್ಕನಾಗಿ ಮೂಡಿಬಂದಿದೆ. ಅವರ ಪಾತ್ರಕ್ಕೆ ಹೆಚ್ಚಿನ ಅವಕಾಶವಿಲ್ಲವಾದರೂ ಸಿಕ್ಕ ದೃಶ್ಯಗಳಲ್ಲಿ ಮನಸೆಳೆಯುತ್ತಾರೆ. 

ರಾಜಕುಮಾರ್ ಅವರ ಸ್ನೇಹಿತ ಜಗಮಲ್ಲನ ಪಾತ್ರದಲ್ಲಿ ಬದಲಾವಣೆಯೆಂದರೆ ಈ ಚಿತ್ರದಲ್ಲಿ ಉದಯಕುಮಾರ್ ಖಳನಾಯಕನಲ್ಲ.. ಬದಲಿಗೆ ಸ್ನೇಹಕ್ಕೆ ಪ್ರಾಣ ಕೊಡುವಂತಹ ಗೆಳೆಯನ ಪಾತ್ರ. ಅದ್ಭುತವಾಗಿ ಅಭಿನಯಿಸಿದ್ದಾರೆ. . 

ಉಳಿದಂತೆ ಮುಖ್ಯ ಪಾತ್ರಗಳಲ್ಲಿ ಗಮನ ಸೆಳೆಯುವವರು ಕುಪ್ಪುರಾಜ್, ರಾಘವೇಂದ್ರ ರಾವ್,ರಮಾದೇವಿ, ಪಾಪಮ್ಮ, ರಮಾ,ಬಾಲಕೃಷ್ಣ, ನರಸಿಂಹರಾಜು, ಬಿ ಎಂ ವೆಂಕಟೇಶ್, ವಂದನ, ದಿನೇಶ್ ಮತ್ತು ಮಚ್ಚೇರಿ. 

ಪ್ರತಿಯೊಬ್ಬರೂ ಪಾತ್ರಕ್ಕೆ ಹಾಗೂ ಚಿತ್ರಕತೆ ಮತ್ತು ಚಿತ್ರದ ಓಘಕ್ಕೆ ತಕ್ಕ ಹಾಗೆ ಅಭಿನಯಿಸಿದ್ದಾರೆ. 

ಬರಹದ ಆರಂಭದಲ್ಲಿ ಹೇಳಿದ ಹಾಗೆ ಚಿತ್ರದ ಆರಂಭಿಕ ಸಂಗೀತದಿಂದ ಜಿ ಕೆ ವೆಂಕಟೇಶ್ ಗಮನ ಸೆಳೆಯುತ್ತಾರೆ. ಚಿತ್ರದ ವೇಗಕ್ಕೆ ಅವರ ಸಂಗೀತ ಸಾತ್ ನೀಡಿದೆ. 

ಚಿಕ್ಕ ಚೊಕ್ಕ ಚಿತ್ರವಿದ್ದು.. ಪ್ರತ್ಯಕ್ಷವಾದರೂ ಪ್ರಮಾಣಿಸಿ ನೋಡು ಎನ್ನುವ ಮಾತನ್ನು  ಪುಷ್ಟಿಕರಿಸುವ ಚಿತ್ರವಿದು!