ಈ ಸಿನೆಮಾವನ್ನು ನನ್ನ ಮನಸ್ಸು ತುಂಬಾ ಗಲಭೆಯಿಂದ ಕೂಡಿದ್ದಾಗ ನೋಡಿದ್ದು.. ಬಹಳ ಮನಸ್ಸಿಗೆ ತಾಕಿತ್ತು.. ಅದರಲ್ಲೂ ರಾಜಕುಮಾರ್ ತಪ್ಪು ಮಾಡಿದ್ದೀನಿ ಕ್ಷಮಿಸಿ ಎಂದು ಫಲಕ ಹಾಕಿಕೊಂಡು ವಠಾರದ ಎಲ್ಲಾ ಮನೆಯ ಮುಂದೆ ನಿಂತು ಕೂಗಿದಾಗ ಮನೆಯವರು ಅವನನ್ನು ಮೂದಲಿಸಿ ಹೀಯಾಳಿಸಿದಾಗ ರಾಜಕುಮಾರ್ ಅವರ ಕಣ್ಣಲ್ಲಿ ನೀರು ತುಂಬಿರುತ್ತದೆ. .. ಮನಸ್ಸು ಬಹಳ ಕಲಕಿತ್ತು ಈ ದೃಶ್ಯ ನೋಡಿ.. ಮತ್ತೆ ಪ್ರತಿ ಬಾರಿ ಈ ಸಿನಿಮಾ ನೋಡಿದಾಗಲೂ ಈ ದೃಶ್ಯಕ್ಕೆ ಅದೇ ಭಾವ ಮೂಡುತ್ತದೆ.
ಒಂದು ಚಿಕ್ಕ ಚೊಕ್ಕ ಸಿನೆಮಾವನ್ನು ಹೇಗೆ ತೆಗೆಯಬೇಕು ಎನ್ನುವುದಕ್ಕೆ ಉದಾಹರಣೆ.. ಒಂದು ವಠಾರ, ಒಂದು ಪಾರ್ಕ್, ಒಂದು ಸೆರೆ ಮನೆ, ಒಂದು ರಸ್ತೆ ಇಷ್ಟೇ ಈ ಚಿತ್ರದಲ್ಲಿ ಕಾಣೋದು.. ಆದರೆ ಚಿತ್ರಕಥೆ ಸೊಗಸಾಗಿದೆ.. ಅದಕ್ಕೆ ಉತ್ತಮ ಸಂಗೀತ, ಸಂಭಾಷಣೆ ಮತ್ತು ನಿರ್ದೇಶನ ಚಿತ್ರಕ್ಕೆ ಮೆರುಗು ಕೊಟ್ಟಿದೆ.
ಎಲ್ಲ ಕಲಾವಿದರು ಪಾತ್ರವೇ ಆಗಿಬಿಟ್ಟಿದ್ದಾರೆ.. ಹಾಗಾಗಿ ಅಭಿನಯಿಸುವ ಗೋಜಿಗೆ ಹೋಗಿಲ್ಲ ಅನಿಸುತ್ತದೆ
ವಠಾರದಲ್ಲಿ ಮೊದಲ ಮನೆ :
ಅಶ್ವಥ್ ಮತ್ತು ಅವರ ಸೇವಕ ರಾಘವೇಂದ್ರ ರಾವ್.. ವಠಾರದಲ್ಲಿ ನೆಡೆಯುವ ಪ್ರತಿ ಘಟನೆಗಳನ್ನು ನಿಭಾಯಿಸುವ ಹೊಣೆ ಹೊತ್ತವರು.. ಮತ್ತು ಅವರ ಮಾತಿಗೆ ಅಷ್ಟೇ ತೂಕ .. ರಹಸ್ಯಗಳನ್ನು ಒಳಗಿಟ್ಟುಕೊಂಡು ಏನೂ ಆಗಿಲ್ಲ ಅಂತ ಇರುವವರು
ಬಾಲಕೃಷ್ಣ, ಪಂಡರಿಬಾಯಿ, ಕಲ್ಪನಾ, ಮತ್ತೆರಡು ಮಕ್ಕಳು.. ಬಡತನವನ್ನೇ ಹೊತ್ತು ನೆಡೆಯುತ್ತಿರುವ ಕುಟುಂಬ.. ಮುಖ್ಯ ಕಥೆ ಇವರ ಕುಟುಂಬದ ಸುತ್ತಲೇ ಸುತ್ತುತ್ತದೆ.
ವಠಾರದಲ್ಲಿ ಮೂರನೇ ಮನೆ :
ನರಸಿಂಹರಾಜು ಮತ್ತು ಆತನ ಮಡದಿ .. ಆಂಗ್ಲ ಪದ್ಧತಿ ಅನುಸರಿಸುವ ಮತ್ತು ಯಾವುದೇ ಜಂಜಾಟದಲ್ಲಿ ಬೀಳೋದನ್ನು ತಪ್ಪಿಸಿಕೊಳ್ಳುವ ಕುಟುಂಬ
ಗಣಪತಿ ಭಟ್ ಮತ್ತು ಸಹನಟಿ ವಠಾರದಲ್ಲಿ ಇದ್ದೀವಿ ಇದ್ದೀವಿ ಎನಿಸುವಂತಹ ಕುಟುಂಬ.. ಸಿನಿಮಾ ಹುಚ್ಚು ಆಕೆ ಪ್ರತಿ ಮಾತಿನಲ್ಲೂ ಒಂದೊಂದು ಸಿನಿಮಾದ ದೃಶ್ಯದ ಬಗ್ಗೆ ಹೇಳುತ್ತಾ ಇರುವುದು ವಿಶೇಷತೆ.
ರಮಾದೇವಿ ಗಡುಸು ಮಾತು, ಧೈರ್ಯ.. ಯಾರಿಗೂ ಹೆದರದ ಇವರನ್ನು ಅವರ ಪತಿರಾಯ ಇವರನ್ನು ಬಿಟ್ಟು ಹೋಗಿದ್ದಾರೆ.. ಎಮ್ಮೆಗಳನ್ನು ಸಾಕಿ, ಅದರ ಹಾಲನ್ನು ವಿಕ್ರಯಿಸಿ ಜೀವನ ಸಾಗಿಸುತ್ತಿರುತ್ತಾರೆ. ವಠಾರದ ಎಲ್ಲಾ ಸಮಸ್ಯೆಗಳಿಗೂ ಇವರು ತಲೆ ಕೊಡುತ್ತಿರುತ್ತಾರೆ..
ದ್ವಾರಕೀಶ್.. ಜವಾಬ್ಧಾರಿ ಇಲ್ಲದ ಹುಡುಗ.. ತನ್ನ ಮಗಳನ್ನು ಮದುವೆ ಮಾಡಿಕೊಂಡು ಆರಾಮಾಗಿ ಬದುಕುವ ಅಭಿಲಾಷೆ ಇಟ್ಟುಕೊಂಡಿರುವ.. ಬರಿ ತರಲೆ ಮಾಡಿಕೊಂಡು ಜೀವನ ಕಳೆಯುವವ..
ವಠಾರದಲ್ಲಿ ಏಳನೇ ಮನೆ :ಮರೆಗುಳಿ ಸ್ವಭಾವದ ಜಯಶ್ರೀ ಮತ್ತು ಎಲ್ಲದ್ದಕ್ಕೂ ಆಶ್ಚರ್ಯ ಸೂಚಿಸುವ ಕೃಷ್ಣ ಶಾಸ್ತ್ರೀ
ರಾಜಕುಮಾರ್ ಅನಾಥ ಹುಡುಗ.. ಕಾಲೇಜು ಓದು, ಎಲ್ಲರ ಮನೆಯಲ್ಲಿ ವಾರಾನ್ನ ಮಾಡುವ ಬಡ ವಿದ್ಯಾರ್ಥಿ.. ಬರವಣಿಗೆ, ಕವಿತೆ ಜೊತೆಯಲ್ಲಿ ಮಾತು ಮಾತಿಗೂ ಸರ್ವಜ್ಞನ ವಚನಗಳನ್ನು ಹೇಳುತ್ತಲೇ ಇರುವ.. ಜೊತೆಯಲ್ಲಿ ತನ್ನದೇ ಶೈಲಿಯಲ್ಲಿ ವಚನಗಳನ್ನು ಕಟ್ಟಿ ಹೇಳುವ ನಿಪುಣ. ಮೃದು ಮಾತು, ಮೃದು ಸ್ವಭಾವ..
ಹೊರಗಡೆ ಮನೆ:
ನಾಗಪ್ಪ, ಪಾಪಮ್ಮ, ಬಿವಿ ರಾಧಾ ,, ನಾಗಪ್ಪನವರಿಗೆ ಲೇಖನಿಗಳನ್ನು ಸಂಗ್ರಹಿಸುವ ಹವ್ಯಾಸ , ಪಾಪಮ್ಮನ ಸ್ವಲ್ಪ ಘಟವಾಣಿ, ಅವರ ಆಸೆ ಎಂದರೆ ತನ್ನ ತಮ್ಮನನ್ನು ತನ್ನ ಮಗಳಿಗೆ ಕೊಟ್ಟು ಮದುವೆ ಮಾಡಿ ಮನೆಯಳಿಯನನ್ನಾಗಿ ಮಾಡಿಕೊಂಡು ಇರೋದು.. ಬಿ ವಿ ರಾಧಾ ಹುಚ್ಚು ಕೋಡಿ ಮನಸ್ಸು.. ಕ್ಷಣ ಚಿತ್ತ ಕ್ಷಣ ಪಿತ್ತ ಅನ್ನುವಂತಹ ಸ್ವಭಾವ.. ಅದಕ್ಕೆ ಎಣ್ಣೆ ಹಾಕುವಂತೆ ದ್ವಾರಕೀಶ್ ಸ್ವಭಾವ..
ಈ ಒಂಭತ್ತು ಮನೆಯ ಕಥೆಯ ಸಂಗಮವೇ ಗಾಂಧಿನಗರ..
ಹುಟ್ಟುವಾಗಲೇ ತಾಯಿಯನ್ನು ಕಳೆದುಕೊಂಡು ಅದೇ ಕೊರಗಿನಲ್ಲಿ ತಂದೆಯನ್ನು ಕಳೆದುಕೊಳ್ಳುವ ಮಗು ಅವರ ಅಪ್ಪನ ಸ್ನೇಹಿತನ ವಠಾರದಲ್ಲಿ ಅನಾಥನಂತೆ ಬದುಕುತ್ತದೆ. ಅದಕ್ಕೆ ಕಾರಣ ಆ ಮಗುವಿನ ಜಾತಕಫಲ..
ಕಷ್ಟ ಕೋಟಲೆಗಳನ್ನು ದಾಟಿ ಮತ್ತೆ ಸುಖಾಂತ್ಯವಾಗುವ ಕಥಾನಕ..
ಎಲ್ಲರ ಅಭಿನಯ ಸೊಗಸು ..
ಚಿ ಉದಯಶಂಕರ್ ಅವರ ಸಂಭಾಷಣೆ ಗೀತೆಗಳು
ಸಂಗೀತ ಸತ್ಯಂ
ಛಾಯಾಗ್ರಹಣ ಕೆ ಜಾನಕಿರಾಮ್
ಗಾಯನ ಪಿ ಬಿ ಶ್ರೀನಿವಾಸ್, ಬಾಲಸುಬ್ರಮಣ್ಯಂ, ಬಿ ಗೋಪಾಲ್, ಪಿ ಸುಶೀಲ, ಎಸ್ ಜಾನಕೀ, ಎಲ್ ಆರ್ ಈಶ್ವರಿ,
ಸಹನಿರ್ದೇಶನ ಸಿದ್ಧಲಿಂಗಯ್ಯ
ನಿರ್ಮಾಪಕ ಸಿ ವೆಂಕು ರೆಡ್ಡಿ
ಕಥೆ ಜಿವಿಜಿ ಅವರ ಕಿರುಕಥಾನಕ
ಚಿತ್ರಕಥೆ ಎಸ್ ಭಾವನಾರಾಯಣ
ನಿರ್ದೇಶನ ಕೆ ಎಸ್ ಎಲ್ ಸ್ವಾಮಿ
ಲಾಂಛನ ವಿಜಯವರ್ಧನ ಮೂವೀಸ್
ಹೃದಯಕ್ಕೆ ಹತ್ತಿರವಾದ ಚಿತ್ರವಿದು
ಏನಪ್ಪಾ ಶ್ರೀಕಾಂತಪ್ಪ ಎಲ್ಲರ ಬಗ್ಗೆ ಬರೆದೆ ನನ್ನ ಬಗ್ಗೆ ಏನೂ ಇಲ್ವೇ .. ಬಾಲಣ್ಣ ಕೈ ಕೆರೆದುಕೊಳ್ಳುತ್ತಾ ಬಂದರು..
ನೋಡಿ ಬಾಲಣ್ಣ ನಿಮ್ಮ ಅದ್ಭುತ ಸಂಭಾಷಣೆಗಳ ತುಣುಕನ್ನು ಬರೆದಿಟ್ಟುಕೊಂಡಿದೀನಿ
೧. ಕಾರೊಂದು ಬಾಲಣ್ಣನಿಗೆ ಡಿಕ್ಕಿ ಹೊಡೆಯುವುದು ಸ್ವಲ್ಪದರಲ್ಲಿ ತಪ್ಪುತ್ತದೆ ಆಗ ಬಾಲಣ್ಣ "ಏನಪ್ಪಾ ಮೊದಲೇ ತಿಳಿಸಿದ್ದಾರೆ ತಿಳಿಸಿದ್ದರೇ ಮನೆಗೆ ಎಲ್ಲ ಖರ್ಚುಗಳನ್ನು ಹೊಂದಿಸಿಕೊಟ್ಟು ಬರುತ್ತಿದ್ದೆ
೨. ಕದ್ದ ಪೆನ್ನನ್ನು ಬಾಲಣ್ಣನಿಗೆ ಮಾರಲು ಬರುತ್ತಾನೆ "ನೋಡಿ ಸರ್ ಪೆನ್ನು ಎಂಟೂ ಮುಕ್ಕಾಲು ರೂಪಾಯಿ. ಬಹಳ ಚೀಪು
ಆಗ ಬಾ;ಬಾಲಣ್ಣ ಏನೂ ಎಂಟೂ ಮುಕ್ಕಾಲು ಚೀಪೋ
ಹೌದು ಸರ್ ಜಪಾನಿನಲ್ಲಿ ಇದರ ಬೆಲೆ ಐವತ್ತು ರೂಪಾಯಿ
ಓಹ್ .. ನಿಂದೆ ಕಥೆ ಈ ಊರಿನಲ್ಲೆಲ್ಲಾ ನೆಡಿತಿರೋದು
೩. ನಿಮ್ಮ ಅಡ್ರೆಸ್ಸ್ ಕೊಡಿ ಸರ್
ನನ್ನ ಅಡ್ರೆಸ್ಸ್ ವಿಡ್ರೆಸ್ ಎಲ್ಲ ಒಂದೇ .. ಗಾಂಧಿ ನಗರ ಮೇಲೆ ಹನ್ನೊಂದು ಕೆಳಗೆ ಮೂರು
ಹೀಗೆ ಹತ್ತಾರು ಸಂಭಾಷಣೆಗಳು ಬಾಲಣ್ಣ ಅವರ ಅದ್ಭುತ ಶೈಲಿಯಿಂದ ಇನ್ನಷ್ಟು ಸುಂದರವಾಗಿದೆ
ಹಾ ಈಗ ಸರಿ ಹೋಯ್ತಪ್ಪ ಶ್ರೀಕಾಂತಪ್ಪ .. ಮತ್ತೆ ಸಿಗೋಣ ಎಂದು ಬಾಲಣ್ಣ ನೆಡೆಯುತ್ತಾ ಗಾಂಧಿನಗರದಿಂದ ಹೊರಟರು.