ಹಲವಾರು ಚಿತ್ರಗಳು ಯಶಸ್ವಿಯಾಗೋದು ಉತ್ತಮ ಕಥೆಯಿಂದ ಮತ್ತೆ ಅದಕ್ಕೆ ಕೊಡುವ ಚಿತ್ರಕಥೆಯಿಂದ.. ಇವೆರಡು ಸರಿ ಇದ್ದರೇ ಅರ್ಧ ಕೆಲಸ ಆದಂತೆ.
ರಾಜಕುಮಾರ್ ಪ್ರವರ್ಧಮಾನಕ್ಕೆ ಬಂದಂತೆ ಅವರಿಗೆ ಸಿಗುವ ಚಿತ್ರಗಳು ವಿಭಿನ್ನವಾಗಿರುತ್ತಿದ್ದವು. ಇದು ಅದೇ ಹಾದಿಯಲ್ಲಿ ಸಾಗುವ ಚಿತ್ರ. ಹೆಸರಿಗೆ ತಕ್ಕ ಹಾಗೆ ಇರಬೇಕು ಅಂತ ಅವರ ದೃಶ್ಯದಲ್ಲಿ ಕಳ್ಳನ ಹಾಗೆ ತೋರಿಸಿದ್ದಾರೆ.. ನಂತರ ಕೆಲವು ದೃಶ್ಯಗಳು ಹಾಗೆಯೇ ಇದೆ.. ಮತ್ತೆ ಸುಳಿವನ್ನು ಹಿಡಿಯಲು ಸದಾರಮೆ ರೂಪಕದಲ್ಲಿ ಕಳ್ಳನ ಹಾಗೆ ವೇಷ. ಆದರೆ ಮಿಕ್ಕ ಎಲ್ಲಾ ದೃಶ್ಯಗಳಲ್ಲಿ ನಾಗರೀಕತೆಯ ಪೋಷಾಕಿನಲ್ಲಿ ಸುರಸುಂದರ.
ಆಫೀಸಿನ ಕೆಲಸ ಮಾಡುವಾಗ ಅದೇ ತನ್ಮಯತೆ ... ಕೇಡಿಗಳ ಜೊತೆ ಇರುವಾಗ ಅದೇ ಭಾಷೆ, ನಾಯಕಿಯ ಜೊತೆ ಮಾತಾಡುವಾಗ ನಾಜೂಕುತನ, ಹಿರಿಯರ ಜೊತೆಯಲ್ಲಿದ್ದಾಗ ಗತ್ತು. ಹೀಗೆ ಹಲವಾರು ಆಯಾಮಗಳಲ್ಲಿ ನಟಿಸಿರುವ ಅವರ ಅಭಿನಯ ಚಂದ.
ಅವರು ಪಾತ್ರಗಳಿಗೆ ಹೊಂದಿಕೊಳ್ಳುವ ಪರಿ ಅನನ್ಯ.. ಇವರೇ ಆ ಪಾತ್ರವೇನೋ ಅನಿಸುತ್ತೆ.
ಚೂರಿ ಚಿಕ್ಕಣ್ಣ ಆ ರೀತಿಯ ಹೊಂದಿಕೊಂಡು ಅಭಿನಯಿಸಿರುವ ಚಿತ್ರವಿದು.. ಪ್ರತಿ ದೃಶ್ಯದಲ್ಲಿಯೂ ಅವರು ತೋರುವ ತನ್ಮಯತೆ ಸೂಪರ್. ಹಾಡುಗಳಲ್ಲಿ, ನೃತ್ಯಗಳಲ್ಲಿ ಕೂಡ.
ಪಿ ಬಿ ಶ್ರೀನಿವಾಸ್ ಇಲ್ಲಿ ಹಾಡುಗಳಲ್ಲಿ ಕುಣಿಸುತ್ತಾರೆ
"ಕಾರನೇರಿ ಬಂದ"
"ಮೆಲ್ಲಗೆ ನೆಡೆ ಮೆಲ್ಲಗೆ"
"ಕೇಳೆ ಕೇಳೆ ನಿನ್ನ ಕಥೆ ಹೇಳುವೆ"
ರಾಜಕುಮಾರ್ ಅವರಿಗೆ ತಕ್ಕಂತೆ ಪಿ ಬಿ ಶ್ರೀನಿವಾಸ್, ಪಿ ಬಿ ಶ್ರೀನಿವಾಸ್ ಅವರಿಗೆ ತಕ್ಕಂತೆ ರಾಜಕುಮಾರ್.. ಈಗಾಗಲೇ ಅನೇಕ ಚಿತ್ರಗಳಲ್ಲಿ ಅವರಿಬ್ಬರ ಜೋಡಿ ಮೋಡಿ ಮಾಡಿರೋದು ನಮಗೆ ಗೊತ್ತಲ್ಲವೇ.
ಜಯಂತಿ ಚಿತ್ರದ ನಾಯಕಿ, ಆರಂಭದ ದೃಶ್ಯಗಳಲ್ಲಿ ಬರುತ್ತಾರೆ.. ಕಥೆ ಮುಂದುವರಿದಂತೆ ಕೂತೂಹಲ ಹೆಚ್ಚಾಗುತ್ತದೆ.. ಹಾಗಾಗಿ ಜಯಂತಿ ಅವರ ಪಾತ್ರ ಕಡಿಮೆ ಇದೆ.. ಆದರೆ ಚಿಕ್ಕದ ತಿರುವಿಗೆ ಅವರು ಮುಖ್ಯ ಕಾರಣ.
ಅಶ್ವಥ್ ಇಲ್ಲಿ ಗುಪ್ತಗಾಮಿನಿಯ ಪಾತ್ರ.. ಸಾಮ್ಯವಾಗಿಯೇ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.
ನರಸಿಂಹರಾಜು, ಸಹನಟಿ, ನಾಗಪ್ಪ, ಗಣಪತಿ ಭಟ್, ಮತ್ತು ಬಿವಿರಾಧ ಮತ್ತು ಚಿ೦ಪಾಂಜಿ ಸಹನಟರಾಗಿ ಚಿತ್ರವನ್ನು ಮುಂದುವರೆಸಿದ್ದಾರೆ.
ಬಹು ಮುಖ್ಯ ಪಾತ್ರದಲ್ಲಿ ದಿನೇಶ್ ಖಳನಟರಾಗಿ ನಟಿಸಿದ್ದಾರೆ. ಇತ್ತ ತಂಗಿಗಾಗಿ ಎಲ್ಲಾ ಮಾಡುವ ಅಣ್ಣನಾಗಿ ಇಷ್ಟವಾದರೆ, ಅದಕ್ಕೆ ಅವರು ಆಯ್ಕೆ ಮಾಡಿಕೊಂಡ ದಾರಿ ದುರ್ಗಮವಾದ ಹಾದಿ.. ಕಳ್ಳದಾರಿ.. ಸಂಭಾಷಣೆ, ದರ್ಪ ಎಲ್ಲವೂ ಸೊಗಸು..
ನಿರ್ಮಾಪಕ ನಿರ್ದೇಶಕ ಆರ್. ರಾಮಮೂರ್ತಿ ಅವರು.
ಛಾಯಾಗ್ರಹಣ ಬಿ ದೊರೈರಾಜ್
ಸಂಗೀತ ಸತ್ಯಂ
ಕಥೆ ಕೊಟ್ಟಾರಕರ್
ಸಂಭಾಷಣೆ ಮತ್ತು ಹಾಡುಗಳು ಚಿ ಉದಯಶಂಕರ್
ಪಿ ಬಿ ಶ್ರೀನಿವಾಸ್, ಎಸ್ ಜಾನಕೀ, ಎಲ್ ಆರ್ ಈಶ್ವರಿ, ಬೆಂಗಳೂರು ಲತಾ, ಎಸ್ ಪಿ ಬಾಲಸುಬ್ರಮಣ್ಯಂ, ಜಯದೇವ್, ರತ್ನಾಕರ್ ಗಾಯನ ತಂಡದಲ್ಲಿದ್ದಾರೆ.
ಇದು ಶ್ರೀ ರಾಮ ಎಂಟರ್ಪ್ರೈಸಸ್ ಅವರ ಕೊಡುಗೆ.

No comments:
Post a Comment