Friday, January 2, 2026

ಓಡುತ್ತಲೇ ಇರುವ ಬೆಂಗಳೂರು ಮೈಲ್ 1968 (ಅಣ್ಣಾವ್ರ ಚಿತ್ರ ೯೭/೨೦೭)

ಕೆಲವೊಂದು ಚಿತ್ರಗಳಿಗೆ ಚಿತ್ರಕತೆಯೇ ನಾಯಕನಾಗಿರುತ್ತದೆ.. ಅಂತಹ ಚಿತ್ರವಿದು ಬೆಂಗಳೂರು ಮೈಲ್.. 

ಖಳರ ಗುಂಪೊಂದು ವ್ಯವಸ್ಥಿತವಾಗಿ ತನ್ನ ಹೋಟೆಲಿನಲ್ಲಿ ಉಳಿಯುವವರ ವಿವರವನ್ನು ತಿಳಿದುಕೊಂಡು, ಅವರನ್ನು ಕೊಳ್ಳೆಹೊಡೆದು, ಕೊಳ್ಳುವ ತಂಡವಿದು.. 

ಹೀಗೆ ಒಂದು ಪಯಣದಲ್ಲಿ ನರಸಿಂಹರಾಜು ಹತ್ತಿದ ರೈಲು ಡಬ್ಬಿಯಲ್ಲಿ ಕೊಲೆಯಾಗುತ್ತದೆ.. ಆದರೆ ನರಸಿಂಹರಾಜುವನ್ನು ದಿಕ್ಕು ತಪ್ಪಿಸಲು ಬರುವ ಹೆಣ್ಣಿನ ದೆಸೆಯಿಂದ ಕೊಲೆಯ ಆರೋಪ ಅವರ ಸುತ್ತಾ ಸುತ್ತಿಕೊಳ್ಳುತ್ತದೆ.. ಆ ಗೋಜಲನ್ನು ಪರಿಹರಿಸಲು ರಾಜಕುಮಾರ್ ನೇಮಕಗೊಳ್ಳುತ್ತಾರೆ. 

ಬೇಡರಕಣ್ಣಪ್ಪ ಸಿನೆಮಾದಿಂದ ರಾಜಕುಮಾರ್ ಅವರ ಪಯಣ ಅಚ್ಚರಿಗೊಳಿಸುತ್ತದೆ.. ಆ ದಿಣ್ಣಪ್ಪನೆಲ್ಲಿ, ಇಲ್ಲಿ ಸೂಟುಬೂಟು ಧರಿಸಿ ಕೊಲೆಗಾರರ ತಂಡವನ್ನು ಬೆನ್ನಟ್ಟುವ ರಾಜಕುಮಾರ್ ಎಲ್ಲಿ.. ಅವರ ಪಯಣ ಅದ್ಭುತ.. 

ಈ ಚಿತ್ರದಲ್ಲಿ ಅವರ ಮೊದಲ ದೃಶ್ಯ ಸಿನಿಮಾ ಶುರುವಾಗಿ ಸುಮಾರು ಇಪ್ಪತ್ತು ನಿಮಿಷಗಳಾದ ಮೇಲೆ ಬಂದರೂ  ಉಳಿದ ಅಷ್ಟು ಕ್ಷಣಗಳು ಪ್ರತಿ ದೃಶ್ಯದಲ್ಲೂ ಕಾಣಿಸಿಕೊಳ್ಳುತ್ತಾರೆ.. ಠಾಕುಠೀಕಾದ ನೆಡೆ ನುಡಿ, ಹೊಡೆದಾಟ, ಹಾಡು, ನೃತ್ಯ ಎಲ್ಲದಕ್ಕೂ ಸೈ.. 

ಆ ದೃಶ್ಯಗಳಲ್ಲಿ ಅವರನ್ನು ನೋಡುವುದೇ ಒಂದು ಹಬ್ಬ.. 

ನರಸಿಂಹರಾಜು ಅವರ ಜೊತೆ ಸೇರಿಕೊಂಡು ಆ ರಹಸ್ಯವನ್ನು ಭೇದಿಸುವ ಅವರ ಶೈಲಿ ಸೊಗಸಾಗಿದೆ.. ಕೆಲವೊಮ್ಮೆ ಅನಿಸುತ್ತದೆ ಇಲ್ಲಿ ನರಸಿಂಹರಾಜು ಅವರ ಪಾತ್ರವೇ ಕೊಂಚ ಹಿರೀದು ಅಂತ ಆದರೂ ನಾಯಕ ನಾಯಕನೇ ಅಲ್ಲವೇ.. ಅವರ ಸುತ್ತ ಹೆಣೆದ ಕಥೆಗೆ ರಾಜಕುಮಾರ್ ಅದ್ಭುತ ನ್ಯಾಯ ಒದಗಿಸಿದ್ದಾರೆ.  ಆ ಪಾತ್ರಕ್ಕೆ ಬೇಕಾದ ಸ್ಟೈಲ್, ಗತ್ತು, ಸಂಭಾಷಣೆ ಹೇಳುವಾಗ, ಗದರಿಸುವಾಗ ಆ ಪಾತ್ರಕ್ಕೆ ಸಂಪೂರ್ಣ ನ್ಯಾಯ ಸಲ್ಲಿಸಿದ್ದಾರೆ.. 

ಪ್ರೀತಿಸಿದ ಹೆಣ್ಣನ್ನು ಮದುವೆಯಾಗಬೇಕು ಅಂತ ಹಠ ಹಿಡಿದಾಗ.. ಅದನ್ನು ದಿಕ್ಕರಿಸುವ ತಂದೆ.. ಇಲ್ಲಿ ಹಣ ಅಂತಸ್ತು ಅಡ್ಡಿ ಬರೋಲ್ಲ ಅಂತ ಅಪ್ಪ ಸ್ಪಷ್ಟವಾಗಿ ಹೇಳಿ.. ಬರೀ ಆಚಾರ ವಿಚಾರಗಳು ಮಾತ್ರ ಅಡ್ಡಿ ಬರುತ್ತದೆ ಅಂತ ಹೇಳುವ ಅಪ್ಪನ ಪಾತ್ರದಲ್ಲಿ ಅಶ್ವಥ್.. ಹಾಗೆಯೇ ಅದನ್ನು ನಾಯಕಿ ಜಯಂತಿಗೆ ವಿವರಿಸುವಾಗ ಕೂಡ ಸಂಯಮದ ಅಭಿನಯ ಸೊಗಸು.. 

ಅಪ್ಪ ಮಗನ ಜುಗಲಬಂಧಿ ಸಂಭಾಷಣೆ ಎಲ್ಲೇ ಮೀರೋಲ್ಲ, ಕಿರುಚಾಟವಿಲ್ಲಾ,  ಇಬ್ಬರೂ ಕೂಡ ಒಬ್ಬರ ಅಭಿಪ್ರಾಯವನ್ನು ಗೌರವಿಸುತ್ತಲೇ ತಮ್ಮ ತಮ್ಮ ವಿಚಾರಗಳನ್ನು ಒಪ್ಪಿಸುವ ಪರಿ ಸೂಪರ್ ಇದೆ. 

ಅಶ್ವಥ್ ಅವರ ಅಭಿನಯ ಬಹಳ ನಾಟುತ್ತದೆ. 

ಜಯಂತಿ ಚಿಕ್ಕ ಚೊಕ್ಕ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅವರ ಚೆಲುವು, ವಯ್ಯಾರ ಸೊಗಸಾಗಿದೆ. 

ನರಸಿಂಹರಾಜು ಚಿತ್ರದ್ದುದ್ದಕ್ಕೂ ಆವರಿಸಿಕೊಂಡಿದ್ದಾರೆ. ಪ್ರತಿ ಹೆಜ್ಜೆಯಲ್ಲೂ ನಾಯಕನಿಗೆ ಸಹಕರಿಸುತ್ತಾ  ಖಳರನ್ನು ಹಿಡಿದುಕೊಡುವಲ್ಲಿ ಸಹಕರಿಸುವ ಪಾತ್ರದಲ್ಲಿ ಮಿಂಚುತ್ತಾರೆ. 

ಉಳಿದಂತೆ.. ಬಿವಿ ರಾಧಾ,  ಕೊಟ್ಟಾರಕ್ಕರ್ ಶ್ರೀಧರ್ ನಾಯರ್ ಖಳನ ಪಾತ್ರದಲ್ಲಿ ಮಿಂಚುತ್ತಾರೆ. 

ಎಸ್ ಕೆ ಭಗವಾನ್ ಹೋಟೆಲಿನ ಮ್ಯಾನೇಜರ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. 

ಕಾಮಿಡಿಯನ್ ಗುಗ್ಗು, ಶನಿಮಹಾದೇವಪ್ಪ, ಕುಪ್ಪುರಾಜ್ ಸಮಯೋಚಿತ ಅಭಿನಯ.. 

ಸಂಭಾಷಣೆ ಹಾಡುಗಳು ಚಿ ಉದಯಶಂಕರ್.. ಅವರ ಹೆಸರೇ ಮೊದಲು ಬರೋದು ವಿಶೇಷ.. 

ಸಂಗೀತ ಸತ್ಯಂ 

ಛಾಯಾಗ್ರಹಣ ಆರ್ ಮಧು 

ಗಾಯನ ಪಿ ಬಿ ಶ್ರೀನಿವಾಸ್, ಎಸ್ ಪಿ ಬಾಲಸುಬ್ರಮಣ್ಯಂ, ಪಿ ಸುಶೀಲ, ಎಸ್ ಜಾನಕೀ ಸುಮಿತ್ರಾ 

ನಿರ್ದೇಶನ ಎಲ್ ಎಸ್ ನಾರಾಯಣ.. 

ನಿರ್ಮಾಣ ವೈ ವಿ ರಾವ್ 

ಗೌರಿ ಆರ್ಟ್ಸ್ ಫಿಲಂಸ್ 

ಇದೊಂದು ವೇಗವಾಗಿ ಓಡುವ ಸಿನಿಮಾ .. ರಾಜಕುಮಾರ್ ಈ ಚಿತ್ರದ ಮುಖ್ಯ ಭಾಗವಾಗಿದ್ದಾರೆ

ಈ ಚಿತ್ರ ಮಲೆಯಾಳಂ ಚಿತ್ರದ ಅವತರಣಿಕೆಯಾದರೂ ಎಲ್ಲೂ ಕೂಡ ಪರಭಾಷೆಯ ನೆರಳು ಕಾಣದ ಹಾಗೆ ಚಿತ್ರಿಸಿದ್ದಾರೆ. 

No comments:

Post a Comment