ಬಿ ಆರ್ ಪಂತುಲು ಅದ್ಭುತ ಕಥೆ ಹೇಳುವ ಚತುರ ನಿರ್ದೇಶಕ.. ಅವರ ಚಿತ್ರದ ಕಥೆಗಳು ಸಾಮಾನ್ಯವಾಗಿರುತ್ತೆ ಆದರೆ ಅದಕ್ಕೆ ಕೊಡುವ ಅವರ ತರ್ಕ, ಅದನ್ನು ಬೆಳೆಸುವ ಪರಿ ವಿಭಿನ್ನ. ಅಂತಹ ಒಂದು ಚಿತ್ರರತ್ನ ಗಂಡೊಂದು ಹೆಣ್ಣಾರು..
ಈ ಚಿತ್ರದ ಹೆಸರನ್ನು ಮೂರು ರೀತಿಯಲ್ಲಿ ಅರ್ಥೈಸಿಕೊಳ್ಳಬಹುದು
೧) ಗಂಡೊಂದು ಹೆಣ್ಣಾರು?
ಗಂಡು ಒಂದು.. ಹೆಣ್ಣು ಯಾರು ಅಂತ
೨) ಗಂಡೊಂದು ಹೆಣ್ಣಾರು
ಗಂಡು ಒಂದೇ ಆದರೆ ಹೆಣ್ಣುಗಳು ಆರು ಇದ್ದಾರೆ
೩) ಗಂಡೊಂದು ಹೆಣ್ಣಾರು
ಗಂಡು ಒಂದು..ಆರು ಗುಣಗಳಿರುವ ಹೆಣ್ಣು..
ಮೂರನೇ ಅರ್ಥವೇ ಈ ಚಿತ್ರದ ಮೂಲ ತಿರುಳು.. ಹೆಣ್ಣಿನಲ್ಲಿ ಆರು ಗುಣಗಳಿರಬೇಕು ಎನ್ನುವ ಸೂತ್ರದ ತಳಹದಿಯ ಮೇಲೆ ಈ ಚಿತ್ರದ ಚಿತ್ರಕತೆ ನಿಂತಿದೆ.
ಸಿರಿವಂತಿಕೆಯ ಸುಪ್ಪತ್ತಿಗೆಯಲ್ಲಿ ಬೆಳೆದ ನಾಯಕನಿಗೆ ತನ್ನ ಸುತ್ತಲೂ ಹಣ ಹಣಕ್ಕೆ ಬಾಯಿ ಬಿಡುವ ಜನರನ್ನು ಕಂಡು ಬೇಸತ್ತು ದೂರದೂರಿಗೆ ಪಯಣ ಮಾಡಲು ನಿರ್ಧರಿಸುತ್ತಾನೆ. ದಾರಿಯಲ್ಲಿ ಕಾರು ನಿಂತು ಹೋದಾಗ, ಅಲ್ಲಿಯೇ ಹತ್ತಿರದಲ್ಲಿದ್ದ ಗುಡಿಸಲಿನಲ್ಲಿ ಇಬ್ಬರು ವಯೋವೃದ್ಧ ದಂಪತಿಗಳು ಸಂತಸದಿಂದ ಇರುವುದನ್ನು ಕಂಡು.. ಇದಕ್ಕೆ ಕಾರಣವೇನು ಎಂದು ಕೇಳಿದಾಗ.. ಅವರು ಹೇಳುವ ಮಾತುಗಳೇ ಚಿತ್ರದ ಬುನಾದಿಯಾಗುತ್ತದೆ.
ಹೆಣ್ಣಿಗೆ ಆರು ಗುಣಗಳಿರಬೇಕು.. ಆಗ ಮಾತ್ರ ಸಂಸಾರ ಸುಂದರವಾಗಲು ಸಾಧ್ಯ.. ಎಂದು ಹೇಳುತ್ತಾ ನಾಯಕನಿಗೆ ಆ ಆರು ಗುಣಗಳು ಯಾವುದು ಎಂದು ಹೇಳಿ, ಅದಕ್ಕೆ ಅರ್ಥ ವಿಸ್ತಾರ ಕೊಟ್ಟು, ಈ ರೀತಿಯ ಆರು ಗುಣಗಳಿರುವ ಹೆಣ್ಣನ್ನೇ ಮದುವೆಯಾಗಬೇಕು ಎಂದು ಹೇಳುತ್ತಾರೆ. ಸವಾಲಾಗಿತೆಗೆದುಕೊಂಡು ನಾಯಕ ಆ ಆರು ಗುಣಗಳಿರುವ ಹೆಣ್ಣಿನ ಹುಡುಕಾಟವೇ ಈ ಚಿತ್ರ.
ಮಧ್ಯಂತರದಲ್ಲಿ ಕಥೆ ಆ ಕಡೆ ಈ ಕಡೆ ಓಡಾಡುತ್ತಿದೆ, ಎಲ್ಲೋ ಲಯ ತಪ್ಪುತ್ತಿದೆ ಎನಿಸುತ್ತದೆ, ಆದರೆ ಅಂತಿಮ ದೃಶ್ಯಗಳಲ್ಲಿ ಆ ಎಳೆಯನ್ನು ನವಿರಾಗಿ ಬಿಡಿಸಿ ಅದಕ್ಕೊಂದು ತಾರ್ಕಿಕ ಅಂತ್ಯ ಕೊಡುವ ನಿರ್ದೇಶಕರ ಜಾಣ್ಮೆ ಮೆಚ್ಚುವಂತದ್ದು.
ಇಲ್ಲಿ ನಿರ್ಮಾಪಕ ನಿರ್ದೇಶಕ ಬಿ ಆರ್ ಪಂತುಲು ಗೆದ್ದಿದ್ದಾರೆ.
ಅವರ ಆಸ್ಥಾನದ ಸಂಗೀತ ನಿರ್ದೇಶಕ ಟಿ ಜಿ ಲಿಂಗಪ್ಪ ಯಶಸ್ವಿಯಾಗಿ ಸಂಗೀತ ನೀಡಿದ್ದಾರೆ
ಕಣಗಾಲ್ ಪ್ರಭಾಕರ್ ಶಾಸ್ತ್ರೀ ಮತ್ತು ಜಿ ವಿ ಅಯ್ಯರ್ ಅವರ ಉತ್ತಮ ಸಾಹಿತ್ಯ,
ಜಿ ವಿ ಅಯ್ಯರ್ ಅವರ ಅರ್ಥಗರ್ಭಿತ ಸಂಭಾಷಣೆಗಳು
ಪಿ ಬಿ ಶ್ರೀನಿವಾಸ್, ಎಸ್ ಜಾನಕಿ, ಪಿ ಸುಶೀಲ, ಪಿ ಲೀಲಾ, ಪಿ ನಾಗೇಶ್ವರಾವ್, ಬೆಂಗಳೂರು ಲತಾ ಧ್ವನಿ ನೀಡಿದ್ದಾರೆ.
ಉತ್ತಮ ತಾರಾಗಣವಿದೆ..
ನಾಯಕಿಯಾಗಿ ಭಾರತೀ..ಚಿತ್ರದ ಆರಂಭದಿಂದ ಅಂತ್ಯದವರೆಗೂ ತೆರೆಯನ್ನು ಆವರಿಸಿಕೊಂಡಿದ್ದಾರೆ. ಚಿತ್ರದ ಎರಡನೇ ಅರ್ಧದಲ್ಲಿ ಹಲವಾರು ವೇಷಭೂಷಣಗಳಲ್ಲಿನ ಅವರ ಅಭಿನಯ ಕಳೆಗಟ್ಟಿದೆ. ಕಥೆಯನ್ನು ನಿರ್ದಿಷ್ಟ ದಿಕ್ಕಿಗೆ ಒಯ್ಯುವುದರಲ್ಲಿ ಅವರ ಅಭಿನಯ ಸಹಕಾರಿಯಾಗಿದೆ. ಇವರ ಪಾತ್ರವೇ ಗೊಂದಲಮಯವಾದರೂ, ಅದನ್ನು ನಿವಾರಿಸುವ ನಿರ್ದೇಶಕರ ಜಾಣ್ಮೆಗೆ ಭಾರತಿ ಅಭಿನಯ ಒತ್ತು ನೀಡಿದೆ.
ಬಾಲಕೃಷ್ಣ ಕಡಿಮೆ ದೃಶ್ಯಗಳಾದರೂ ಅವರೇ ಚಿತ್ರದ ತಿರುವಿಗೆ ನಿಂತಿದ್ದಾರೆ.
ಗಣಪತಿ ಭಟ್, ನಾಗಪ್ಪ, ಎಚ್ ರಾಮಚಂದ್ರಶಾಸ್ತ್ರಿ, ನರಸಿಂಹರಾಜು, ಹನುಮಂತಾಚಾರ್, ಮೈನಾವತಿ, ದಿನೇಶ್, ರಮಾದೇವಿ, ಗುಗ್ಗು. ಎಂ ಪಿ ಶಂಕರ್ ಜೊತೆಯಾಗಿದ್ದಾರೆ.
ಇವರನ್ನೆಲ್ಲ ತಮ್ಮ ಭುಜದ ಮೇಲೆ ಹೊತ್ತಂತೆ ರಾಜಕುಮಾರ್ ನಾಯಕನ ಪಾತ್ರದಲ್ಲಿ ಮಿಂಚಿದ್ದಾರೆ. ಆ ಸಿರಿವಂತಿಕೆಯ ದರ್ಪವಿಲ್ಲದ ಅಭಿನಯ, ಹಣದಿಂದ ಬೇಸತ್ತ ಹೋದ ಅಭಿನಯ, ಹೊಸ ವಿಚಾರವನ್ನು ಕಲಿಯುವ ತವಕ, ಸ್ನೇಹಿತನಿಗೆ ಸಹಾಯ ಮಾಡುವ ಮನೋಗುಣ, ನಾಯಕಿಯನ್ನು ಕಂಡು ಅವರ ಮನೆಯ ವಿಚಾರ ಅರಿತು, ಅದಕ್ಕೆ ಬೆನ್ನೆಲುಬಾಗಿ ನಿಲ್ಲುವ ಚಾಣಾಕ್ಷತನ.. ಎಲ್ಲವೂ ಸೊಗಸಾಗಿ ಮೂಡಿ ಬಂದಿದೆ.
ರಾಜಕುಮಾರ್ ಅವರು ಅಭಿನಯ ಮಾಡುತ್ತಾರೋ, ಪಾತ್ರವೇ ಅವರಾಗುತ್ತಾರೋ ಹೇಳುವುದು ಕಷ್ಟ.. ಅಷ್ಟರಮಟ್ಟಿಗೆ ಪರಕಾಯ ಪ್ರವೇಶದ ಶಕ್ತಿ ಅವರ ಅಭಿನಯಕ್ಕೆ ಇದೆ.
ಈ ಚಿತ್ರದ ಸೂತ್ರಧಾರ ಬಿ ಆರ್ ಪಂತುಲು.. ಒಂದು ಮುಖ್ಯ ಪಾತ್ರದಲ್ಲಿ ವಿಜ್ಞಾನಿಯಾಗಿ ಕಾಣಿಸಿಕೊಳ್ಳುವ ಅವರ ಅಭಿನಯ ಸ್ಮರಣೀಯ... K2+SO4+CR2 ಅಂತ ಚಿತ್ರದುದ್ದಕ್ಕೂ ಹೇಳುತ್ತಲೇ ಇರುವ ಪಾತ್ರ.
ಒಂದು ವಿಭಿನ್ನ ಚಿತ್ರ ಗಮನ ಸೆಳೆಯುತ್ತದೆ. ರಾಜಕುಮಾರ್ ಚಿತ್ರವನ್ನು ತೂಗಿಸಿಕೊಂಡು ಹೋಗಿರುವುದು ಎದ್ದು ಕಾಣುತ್ತದೆ.

No comments:
Post a Comment