ಕೆಲವು ಚಿತ್ರಗಳು ಅದರ ಹೃದಯದಲ್ಲಿರುವ ಅಂಶವನ್ನು ತೋರುವ ವಿಭಿನ್ನ ಪ್ರಯತ್ನ ಮಾಡುತ್ತದೆ. ಚಿತ್ರದ ಆಶಯ ಅದರ ಸಾರವನ್ನು ಅರಿತುಕೊಳ್ಳುವುದು.. ಅದರಲ್ಲಿ ಹೇಳಿದ ಚಿತ್ರದಲ್ಲಿ ನೆಡೆಯದೆ ಇರಬಹುದು.. ಆದರೆ ಅದಕ್ಕೆ ಅನುಸರಿಸಬೇಕಾದ ಪ್ರಯತ್ನ, ಹಾದಿ, ಸಂಕಷ್ಟಗಳನ್ನು ದಾಟಿ ಮುನ್ನೆಡೆಯುವ ಧೈರ್ಯ ಇದು ಚಿತ್ರದ ಆಶಯವಾಗಿರುತ್ತೆ..
ಮಾರ್ಗದರ್ಶಿ ಇದು ಹೆಸರಾಂತ ಕಾದಂಬರಿಕಾರ ಶ್ರೀ ತ ರಾ ಸು ಅವರ ಅದೇ ಹೆಸರಿನ ಕಾದಂಬರಿಯಾಧಾರಿತ.. ಸಾಮಾನ್ಯ ತ ರಾ ಸು ಅವರ ಕಾದಂಬರಿಗಳು ದುಃಖಾಂತ್ಯ ಹೊಂದುತ್ತದೆ.. ಆದರೆ ಇಲ್ಲಿ ಕಥೆ ಓಡುತ್ತಾ ಓಡುತ್ತಾ ಅದಕ್ಕೆ ಸಂಬಂಧಪಟ್ಟವರಲ್ಲಿನ ಬದಲಾವಣೆಗಳನ್ನು ಹೊರತರುತ್ತದೆ.. ಚಿತ್ರದಲ್ಲಿಯೂ ಕೂಡ ಇದೆ ಆಶಯದ ಪ್ರಯತ್ನವನ್ನು ಬಿಂಬಿಸಿದ್ದಾರೆ.
ಚಿಕ್ಕಮನಲ್ಲಿ ತಾಯಿಯನ್ನು ಕಾಣುವ ನಾಯಕ, ಆದರೆ ಆಕೆ ಹಿಂದಿನ ಮತ್ಸರದ ಹಾದಿಯಲ್ಲಿಯೇ ನೆಡೆದು ನಾಯಕನನ್ನು ತೃಣ ಸಮಾನವಾಗಿ ಕಾಣುವುದು.. ನಂತರ ಆಕೆಯ ಅಣ್ಣ ಆಕೆಗೆ ಮಾನವೀಯತೆಯ ಬಗ್ಗೆ ಹೇಳಿ ಆಕೆಯ ಬದಲಾವಣೆಗೆ ಕಾರಣವಾಗುತ್ತಾನೆ.
ನಂತರದ ಸರದಿ ಚಿಕ್ಕಪ್ಪನದು.. ಹಣ ಹಣ ಹಣ ಅದರ ಹಿಂದೆ ಸಾಗಿ ಮಾಡಬಾರದ ಅನ್ಯಾಯಗಳನ್ನು ಮಾಡುವುದು, ಜೊತೆಗೆ ತನ್ನ ಅಣ್ಣನ ಆಸ್ತಿಯನ್ನು ಕಬಳಿಸಿ, ಚಿಕ್ಕಪ್ಪ ಎಂದು ಪ್ರೀತಿಗೆ ಮರುಗುವ ನಾಯಕನನ್ನು ಹೀನಾಮಾನವಾಗಿ ಬಯ್ದು, ಹೀಯಾಳಿಸಿ ಅವಮಾನ ಮಾಡುವಾತ ತನ್ನ ಹೆಂಡತಿಯ ಬುದ್ದಿಯ ಮಾತಿಗೆ ಸೋತು ತನ್ನ ಗುಣವನ್ನು ಬದಲಿಸಿಕೊಳ್ಳುವುದು.
ಊರಿನ ಶಾನುಭೋಗ ಬರೀ ತನ್ನ ಸ್ವಾರ್ಥಕ್ಕೆ ಓಡಾಡುತ್ತಿದ್ದವ, ನಾಯಕನ ಆದರ್ಶ ಗುಣಗಳಿಗೆ ಮಾರು ಹೋಗಿ ಊರಿನ ಹಿತವೇ ತನ್ನ ಧ್ಯೇಯ ಎನ್ನುವ ನಾಯಕನ ಕೈ ಜೋಡಿಸುವುದು.
ನಾಯಕನನ್ನು ತನ್ನ ಮಗನಿಗಿಂತ ಹೆಚ್ಚು ಎನ್ನುವ ತನ್ನ ತಂದೆಯ ಸಮಕಾಲೀನನ ಮನೆಯವರ ರಕ್ಷಣೆಗಾಗಿ ತನ್ನ ಚಿಕ್ಕಪ್ಪ ಚಿಕ್ಕಮ್ಮನನ್ನು ಊರಿನವರನ್ನು ಹಾಕಿಕೊಳ್ಳೋದು, ನಂತರ ಊರಿನವರು ಎಲ್ಲರೂ ನಾಯಕನ ಮಾರ್ಗದರ್ಶನದಲ್ಲಿ ನೆಡೆಯುವ ನಿರ್ಧಾರದೊಂದಿಗೆ ಚಿತ್ರ ಮುಗಿಯುತ್ತದೆ.
ಇದುವರೆಗೂ ಬಂದ ಚಿತ್ರಗಳಲ್ಲಿ ಕೊಂಚ ವಿಭಿನ್ನ.. ಇಲ್ಲಿ ನಾಯಕ ವಿಜೃಂಭಿಸದೇ ಒಬ್ಬ ಸಾಮಾನ್ಯ ನಾಗರೀಕನಾಗಿ ತೊಳಲಾಟ, ಸಂಕಟ, ವಿಷಾದ, ಸೋಲು, ಗೆಲುವು, ಪ್ರೀತಿಯ ಹಂಬಲಿಕೆ ಇದರ ಜೊತೆಯಲ್ಲಿ ಗೆದ್ದೇ ಗೆಲ್ಲುವೆ ಎಂಬ ದೃಢನಿರ್ಧಾರ, ಅದರ ಹಾದಿಯಲ್ಲಿ ಬರುವ ಎಡರು ತೊಡರುಗಳನ್ನು ನಿವಾರಿಸಿಕೊಂಡು ತನ್ನ ಕಾರ್ಯ ಸಾಧಿಸುವ ಚಾಣಾಕ್ಷತೆ ಎಲ್ಲವನ್ನೂ ಮೇಳೈಸಿಕೊಂಡಿರುವ ನಾಯಕ.. ಈ ಪಾತ್ರದಲ್ಲಿ ರಾಜಕುಮಾರ್ ಮನೋಜ್ಞ ಅಭಿನಯ ನೀಡಿದ್ದಾರೆ. ಚಿತ್ರದ ಅರ್ಧಭಾಗದ ತನಕ ಸಿನಿಮಾದ ಆಶಯ, ಸಿನಿಮಾದ ಕಥೆಯೇನು ಎನ್ನುವ ತವಕದಲ್ಲಿದ್ದರೂ ನಾಯಕನ ಪಾತ್ರ ಪೋಷಣೆ ಮತ್ತು ಅಭಿನಯ ಗೆಲ್ಲುತ್ತದೆ. ರಾಜಕುಮಾರ್ ಸದಾ ಗೆಲ್ಲುವುದು ಈ ರೀತಿಯ ಪಾತ್ರಗಳಲ್ಲಿ. ವೀಕ್ಷಕರು ಆ ಪಾತ್ರವನ್ನು ತಮಗೆ ಹೋಲಿಸಿಕೊಂಡು ತಾವೇ ಆ ಪಾತ್ರ, ಆ ನಿರ್ಧಾರ ಕೂಡ ಹೀಗೆ ನಿರ್ಧಾರ ಮಾಡುತ್ತೇವೆ ಎನ್ನುವ ಪರಿಗೆ ಸಾಗುವಂತೆ ಮಾಡುತ್ತದೆ ರಾಜಕುಮಾರ್ ಅವರ ಪಾತ್ರ.
ಬಾಲಣ್ಣ ನಿಜವಾದ ಖಳ ಕಿರುಚಾಡೋ ಅವಶ್ಯಕತೆ ಇಲ್ಲ ಅಂತ ತೋರಿಸಿದ್ದಾರೆ. ಅವರ ಮುಖಾಭಿನಯ, ಧ್ವನಿ, ಆ ಭಾವಭಂಗಿ ಆಹಾ...
ಬಾಲಣ್ಣ ಅವರ ಅದ್ಭುತ ಪರಿಶ್ರಮ ಅಭಿಮಾನ್ ಸ್ಟುಡಿಯೋ ಅವರ ಜೀವನದ ಕನಸು. ಆ ತಾಣದಲ್ಲಿ ಈ ಚಿತ್ರಕ್ಕೆ ಮೊದಲ ಬಾರಿಗೆ ಸೆಟ್ ಹಾಕಿದ್ದರು ಅಂತ ವಿಕಿಪೀಡಿಯ ಹೇಳುತ್ತೆ.. ಮತ್ತೆ ಹೆಸರಿನ ಫಲಕಗಳಲ್ಲೂ ಅದನ್ನು ತೋರಿಸುತ್ತೆ.
ಜಯಶ್ರೀ ಮೊದಲಾರ್ಧದಲ್ಲಿ ಮತ್ಸರ ತೋರಿದರೂ ನಂತರ ಪಾತ್ರಪೋಷಣೆ ಸೊಗಸಾಗಿದೆ. ಸಾಮಾನ್ಯ ಸೌಮ್ಯ ಸ್ವಭಾವದ ಪಾತ್ರದಲ್ಲಿ ಕಾಣುವ ಜಯಶ್ರೀ ಆರಂಭದ ದೃಶ್ಯದಲ್ಲಿಯೇ ನಾಯಕನನ್ನು ತಾತ್ಸಾರವಾಗಿ ನೋಡುವುದು ನಾ ಆಶ್ಚರ್ಯ ಪಟ್ಟೆ.. ಅರೆ ಇದೇನಿದು ಅಂತ.. ಚಿತ್ರ ಮುಂದುವರೆದಂತೆ ಅವರ ತೊಳಲಾಟ ಅದ್ಭುತವಾಗಿದೆ.
ನಾಯಕಿಯಾಗಿ ಚಂದ್ರಕಲಾ ಅವರಿಗೆ ಸೀಮಿತ ಪಾತ್ರ.
ಚಿತ್ರಕ್ಕೆ ನಿಜವಾಗಿ ತಿರುವು ಕೊಡುವುದು ರಾಘವೇಂದ್ರ ರಾವ್. ನಾಯಕನ ಮೇಲೆ ಆತನ ಚಿಕ್ಕಪ್ಪ ಚಿಕ್ಕಮ್ಮ ಆತ ಮಾಡಿದ ಒಳ್ಳೆಯ ಕೆಲಸವನ್ನು ಗುರುತಿಸದೆ ನಾಯಕನನ್ನು ಬಯ್ದದ್ದು ಕಂಡು ತನ್ನ ತಂಗಿಯ ಮೇಲೆ ಕಿಡಿಕಾರಿ ಬುದ್ದಿ ಹೇಳುವ ದೃಶ್ಯ ಸಿನೆಮಾಕ್ಕೆ ತಿರುವು ಕೊಡುತ್ತದೆ. ಉತ್ತಮ ಅಭಿನಯ ರಾಘವೇಂದ್ರ ರಾವ್ ಅವರದ್ದು.
ಉಳಿದಂತೆ ಪಾಪಮ್ಮ ಊರಿನ ವಯೋವೃದ್ಧೆಯಾಗಿ, ಶಾನುಭೋಗನಾಗಿ ನರಸಿಂಹರಾಜು, ಕೇಡಿಯಾಗಿ ಎಂ ಪಿ ಶಂಕರ್, ಚೇತನ್ ರಾಮರಾವ್, ನಾಗಪ್ಪ, ಸಂಪತ್ ಅವರುಗಳ ಅಭಿನಯ ಚಿತ್ರಕ್ಕೆ ಹುರುಪು ನೀಡುತ್ತದೆ.
ಹಿಂದಿ ಚಿತ್ರಗಳ ಪ್ರಖ್ಯಾತ ಹಿನ್ನೆಲೆ ಗಾಯಕ ಮನ್ನಾಡೆ ರಾಜಕುಮಾರ್ ಅವರಿಗೆ ಒಂದು ಹಾಡಿನಲ್ಲಿ ಧ್ವನಿ ನೀಡಿದ್ದಾರೆ. ಉಳಿದಂತೆ ಪಿ ಬಿ ಶ್ರೀನಿವಾಸ್, ಎಸ್ ಜಾನಕೀ, ಪಿ ಸುಶೀಲ ಗಾಯನಕ್ಕೆ ಜೊತೆಯಾಗಿದ್ದಾರೆ.
ಕುವೆಂಪು ಅವರ ನೆಡೆಮುಂದೆ ನೆಡೆಮುಂದೆ ನುಗ್ಗಿ ನೆಡೆಮುಂದೆ ಕವಿತೆಯನ್ನು ಅಳವಡಿಸಿಕೊಂಡಿದ್ದಾರೆ.. ಮಿಕ್ಕ ಹಾಡುಗಳನ್ನು ವಿಜಯನಾರಸಿಂಹ ರಚಿಸಿದ್ದಾರೆ.
ಶ್ರೀಕಾಂತ್ ಅಂಡ್ ಶ್ರೀಕಾಂತ್ ಎಂಟರ್ಪ್ರೈಸಸ್ ಅವರಿಗೆ ಎಂ ರಂಗರಾವ್ ನೆಚ್ಚಿನ ಸಂಗೀತ ನಿರ್ದೇಶಕರು. ಆ ಸರಣಿ ಇಲ್ಲೂ ಮುಂದುವರೆದಿದೆ.
"ಮಾನವನ ಮನ ನೊಂದೀತೆಂದು ಸತ್ಯಕ್ಕೆ ಅವಮಾನ ಮಾಡಬೇಡ" ಒಂದು ಅತ್ಯುತ್ತಮ ಸೂಕ್ತಿ, ಆ ವಾಕ್ಯವನ್ನು ಹಲವಾರು ಬಾರಿ ಚಿತ್ರದಲ್ಲಿ ಬಳಸಿದ್ದಾರೆ.
ಒಂದು ಉತ್ತಮ ಮಾನವನ ಸಂಘರ್ಷ ಜೊತೆ ಜೊತೆಗೆ ಸ್ಫೂರ್ತಿ ತುಂಬುವ ಚಿತ್ರವಿದು.

No comments:
Post a Comment