ಶ್ರೀ ರಾಮ ಎಂಟರ್ಪ್ರೈಸಸ್ ಅವರ ರೌಡಿ ರಂಗಣ್ಣ.. ಇದೊಂದು ಹಳ್ಳಿಯಲ್ಲಿ ನೆಡೆಯುವ ಕಥೆ.
ಹಣವಂತರು ಬಡವರ ಮೇಲೆ ತೋರುವ ದರ್ಪ.. ಸಿಡಿದೆದ್ದು ಬೀಳುವ ಬಡವನ ಕೋಪ.. ಅದರ ಪರಿಣಾಮ, ನಂತರ ಸಿರಿವಂತರ ಸೋಲು.. ಸುಖಾಂತ್ಯ ಇಲ್ಲವೇ ಆಘಾತದ ಅಂತ್ಯ.. ಈ ಸಮೀಕರಣವನ್ನು ಒಳಗೊಂಡ ಚಿತ್ರವಿದು..
ಮತ್ತೊಮ್ಮೆ ರಾಜಕುಮಾರ್ ವಿಭಿನ್ನ ಪಾತ್ರದಲ್ಲಿ ಮಿಂಚುತ್ತಾರೆ.. ತಂಗಿಯ ಮೇಲಿನ ಪ್ರೀತಿ ಆತನನ್ನು ಯಾವುದೇ ಕಠಿಣ ನಿರ್ಧಾರಕ್ಕೆ ಒಳಪಡಿಸುತ್ತದೆ..
ರೈತನಾಗಿದ್ದವ ಬೆಳೆ ಬೆಳೆದು ಬಂದ ಹಣದಿಂದ.. ಸಾಹುಕಾರನ ಸಾಲ ತೀರಿಸು ಎಂದು ಹೇಳಿದ ತಂಗಿಯ ಮಾತನ್ನು ಬೇಡ ಎಂದು ಹೇಳಿ, ನಿನ್ನ ಮದುವೆ ಮುಖ್ಯ, ಸಾಲವನ್ನು ಇಂದು ನಾಳೆ ತೀರಿಸಬಹುದು, ಆದರೆ ಉತ್ತಮ ಬಾಳು ಮತ್ತೆ ಬಾರದು ಎಂದು ಉತ್ತಮ ಕುಟುಂಬದ ಜೊತೆ ಮದುವೆ ನಿಶ್ಚಯವಾಗಿ ಮದುವೆಯೂ ಆಗುವ ವೇಳೆಯಲ್ಲಿ ಆ ಸಿರಿವಂತ ತನ್ನ ದರ್ಪವನ್ನು ಚಲಾಯಿಸಿ ಮದುವೆ ಮುರಿಯುವುದು ಅಷ್ಟೇ ಅಲ್ಲದೆ, ಅಣ್ಣ ಸೆರೆವಾಸ ಅನುಭವಿಸಲು ಕಾರಣವಾಗುತ್ತಾನೆ..
ಇದರಿಂದ ಸಿಟ್ಟಾದವ ಸೆರೆಮನೆಯಿಂದ ಬಂದ ಮೇಲೆ ಸೇಡು ತೀರಿಸಿಕೊಳ್ಳಲು ಬಂದಾಗ, ಆತನ ತಂಗಿಯ ಜೀವನದಲ್ಲಿ ನೆಡೆದ ಅಚಾನಕ್ ತಿರುವುಗಳಿಂದ ಆ ಸಿರಿವಂತನ ಸೊಸೆಯಾಗಿರುತ್ತಾಳೆ.. ಆದರೆ ಇಲ್ಲಿ ನೆಡೆಯುವ ಒಂದು ಘಟನೆಯಿಂದ, ಆತನ ತಂಗಿ ಗಂಡನ ಮನೆಯಿಂದ ಹೊರಹೋಗುವಂತೆ ಆಗುತ್ತದೆ.. ಮತ್ತೆ ನಾಯಕನ ಹೋರಾಟ.. ತನ್ನ ತಂಗಿ ನಿರಪರಾಧಿ ಎಂದು ನಿರೂಪಿಸಿ, ತನ್ನ ಬಾಳಿಗೂ ಒಬ್ಬ ನಾಯಕಿ ಸಿಗುವುದರ ದೃಶ್ಯದಲ್ಲಿ ಚಿತ್ರ ಅಂತ್ಯ ಕಾಣುತ್ತದೆ..
ಇಲ್ಲಿ ರಾಜಕುಮಾರ್ ಅವರ ಬಗ್ಗೆ ಹೊಗಳಿಕೆ ಏನೆಂದರೆ.. ಅಷ್ಟೊಂದು ಚಿತ್ರಗಳಲ್ಲಿ ಅಭಿನಯಿಸಿದ್ದರೂ, ತನ್ನ ಪಾತ್ರದ ಬಗ್ಗೆ ತಲೆ ಕೆಡಿಸಿಕೊಳ್ಳದೆ, ಚಿತ್ರ ನಿರ್ಮಾಪಕರ ಹಿತ ಕಾಯುವುದು ಇಲ್ಲಿ ಮತ್ತೊಮ್ಮೆ ಸಾಬೀತಾಗಿದೆ...
ರಾಜಾಶಂಕರ್ ಮತ್ತು ಚಂದ್ರಕಲಾ ಅವರ ಪಾತ್ರವೇ ಪ್ರಧಾನ..
ಬಾಲಕೃಷ್ಣ ಮತ್ತು ರಮಾದೇವಿ ಚಿತ್ರದುದ್ದಕ್ಕೂ ಆವರಿಸಿಕೊಂಡಿದ್ದಾರೆ
ಮನೆಯಾಳು ಪಾತ್ರದಲ್ಲಿ ರತ್ನಾಕರ್ ಚಿತ್ರದುದ್ದಕ್ಕೂ ಇರುತ್ತಾರೆ
ಆದರೆ ರಾಜಕುಮಾರ್ ಪಾತ್ರ ಆರಂಭದ ಕೆಲವು ದೃಶ್ಯಗಳು ಮತ್ತೆ ಅವರ ಸೆರೆವಾಸ ಮತ್ತೆ ಅವರು ಬರೋದು ಸಿನಿಮಾದ ಸುಮಾರು ಅಂತಿಮ ದೃಶ್ಯಗಳಲ್ಲಿ.. ಆದರೆ ಅವರಿಗೆ ಸಿಗುವ ದೃಶ್ಯಗಳಲ್ಲಿ ರೋಷ, ಆಕ್ರೋಶ, ಸೇಡು, ಸಿಟ್ಟು, ದುಡುಕುತನ, ತಾಳ್ಮೆ, ಹಾಸ್ಯ, ಸಂಯಮ, ಕಿಲಾಡಿತನ ಎಲ್ಲವನ್ನೂ ತೋರಿಸುತ್ತಾರೆ..
ಅವರ ಅಭಿನಯದ ಸೊಗಸು ನೋಡುವುದೇ ಒಂದು ಅನುಭವ.. ತನ್ನ ಪಾತ್ರದ ಬಗ್ಗೆ ಯೋಚನೆ ಮಾಡುತ್ತಾ, ತನ್ನ ಪಾತ್ರವನ್ನು ಹೇಗೆ ಉತ್ತಮ ಪಡಿಸುವುದು, ಹಿಂದಿನ ಚಿತ್ರಗಳ ಅನುಭವ ಹೇಗೆ ತನ್ನನ್ನು ಉತ್ತಮ ನಟನನ್ನಾಗಿ ಮಾಡಲು ಸಹಕರಿಸುತ್ತಿದೆ.. ಅವರ ಅಭಿನಯದಲ್ಲಿ ಕಾಣುವುದು ಈ ತುಡಿತವೇ..
ಚಿತ್ರದ ಉತ್ತರಾರ್ಧದಲ್ಲಿ ಮುದ್ದಾಗಿ ಸೂಟು ಬೂಟುಗಳಲ್ಲಿ ಕಾಣುವ ರಾಜಕುಮಾರ್ ಕಣ್ಣಿಗೆ ಹಬ್ಬ ಮೂಡಿಸುತ್ತಾರೆ ..
ಇಲ್ಲಿ ಮತ್ತೆ ಬಾಲಣ್ಣ ಪಂಚಿಂಗ್ ಸಂಭಾಷಣೆಗಳಿಂದ ಮನಸೆಳೆಯುತ್ತಾರೆ.. ಸಾಧಾರಣ ಸಂಭಾಷಣೆಗೆ ಚಿನ್ನದ ಮೆರುಗು ಕೊಡುವ ಅವರ ಪ್ರತಿಭೆ ಮತ್ತೊಮ್ಮೆ ಅನಾವರಣಗೊಂಡಿದೆ
"ನನಗೊತ್ತು ನೀನು ಹೇಗೆ ಹೇಳ್ತೀಯ ಅಂತ"
"ಮದುವೆಯಲ್ಲಿ ಹೆಣ್ಣನ್ನು ನೋಡೋಣ ಎಂದರೆ.. ಪುರೋಹಿತ ಅರ್ಜೆಂಟ್ ಮಾಡುತಿದ್ದ, ಒರೆಗಣ್ಣಲ್ಲಿ ನೋಡೋಣ ಎಂದರೆ ಹೋಮದ ಹೊಗೆ.. ಮಗು ಹುಟ್ಟಿದ ಮೇಲೆಯೇ ನಿಮ್ಮಮ್ಮನ ಮುಖ ನೋಡಿದ್ದು"
"ಏ ರಂಗನ ತಂಗಿ"
"ಅಯ್ಯೋ ನಿನ್ನ ಮನೆ ಹಾಳಾಗ"
ಈ ರೀತಿಯ ಅನೇಕಾನೇಕ ಸಂಭಾಷಣೆಗಳು ನೋಡುಗರಲ್ಲಿ ಸೀಟಿ ಹೊಡೆಸುತ್ತದೆ.
ಗಣಪತಿ ಭಟ್, ಈಶ್ವರಪ್ಪ, ಎಚ್ ಆರ್ ಶಾಸ್ತ್ರೀ, ಗುಗ್ಗು,ರತ್ನಾಕರ್, ರಮಾದೇವಿ ಇವರೆಲ್ಲಾ ಕಥೆಗೆ ಸಾತ್ ನೀಡಿದ್ದಾರೆ..
ಜಯಂತಿ ಇತ್ತ ನಾಯಕಿಯೂ ಅಲ್ಲ ಅತ್ತ ಅತಿಥಿ ನಟಿಯೂ ಅಲ್ಲ ಅನ್ನೋ ಹಾಗೆ ಇರುವ ಪಾತ್ರಕ್ಕೆ ಜೀವ ತುಂಬಿದ್ದಾರೆ.. ಆ ಚೆಲುವು, ಆ ಸೊಬಗು, ಆ ಮಾತುಗಳು, ಜೇನು ದನಿ.. ಬಲು ಇಷ್ಟವಾಗುತ್ತದೆ..
ನರಸಿಂಹರಾಜು ಒಂದು ಪುಟ್ಟ ಪಾತ್ರದಲ್ಲಿ ಬಂದು ಹೋಗುತ್ತಾರೆ
ಪಂಡರಿಬಾಯಿ ಧರಣಿಗೆ ಗಿರಿ ಭಾರವೇ ಹಾಡಿನಲ್ಲಿ ಕಾಣಿಸಿಕೊಳ್ಳುತ್ತಾರೆ
ದಿನೇಶ್ ಪುಟ್ಟ ಖಳನ ಪಾತ್ರದಲ್ಲಿ ಆದರೆ ಚಿತ್ರಕ್ಕೆ ತಿರುವು ಕೊಡುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ
ಅಂತಿಮ ದೃಶ್ಯದಲ್ಲಿ ಭಗವಾನ್ ಕಾಣಿಸಿಕೊಳ್ಳುತ್ತಾರೆ
ಜೋಕರ್ ಶ್ಯಾಮ್, ಅಯ್ಯಂಗಾರ್, ಇಂದಿರಾ ಜಾರ್ಜ್, ಎಂ ಎನ್ ಲಕ್ಷ್ಮೀದೇವಿ ಪುಟ್ಟ ಪಾತ್ರಗಳಲ್ಲಿ ಬರುತ್ತಾರೆ.
ಎ ಕೆ ವೇಲನ್ ಅವರ ಕಥೆಯನ್ನು ಬಿ ದೊರೈರಾಜ್ ಅವರ ಛಾಯಾಗ್ರಹಣ, ಸತ್ಯಂ ಅವರ ಸಂಗೀತ, ಚಿ ಉದಯಶಂಕರ್ ಅವರ ಸಂಭಾಷಣೆ ಮತ್ತು ಹಾಡುಗಳ ಸಹಕಾರದಿಂದ ಆರ್ ರಾಮಮೂರ್ತಿಯವರು ನಿರ್ದೇಶಿಸಿದ್ದಾರೆ.
ಗಾಯನ ಪಡೆಯಲ್ಲಿ ಪಿ ಬಿ ಶ್ರೀನಿವಾಸ್, ಬಾಲಸುಬ್ರಹ್ಮಣ್ಯಂ, ಪಿ ಸುಶೀಲ, ಎಸ್ ಜಾನಕೀ ಇದ್ದಾರೆ.
No comments:
Post a Comment