Friday, January 2, 2026

ಬದಲಾವಣೆ ಜಗದ ನಿಯಮ ಸಂದೇಶ ಸಾರುವ ಹಣ್ಣೆಲೆ ಚಿಗುರಿದಾಗ 1968 (ಅಣ್ಣಾವ್ರ ಚಿತ್ರ ೯೮/೨೦೭)

ಬದಲಾವಣೆ ಆಗುತ್ತಲೇ ಇರುತ್ತದೆ .. ಅದಕ್ಕೆ ಹೊಂದಿಕೊಂಡವರು ಮುಂದಕ್ಕೆ.. ಆಗದಿದ್ದವರು ಹಿಂದಕ್ಕೆ ಎನ್ನುವ ಸಂದೇಶ ಇಟ್ಟುಕೊಂಡು ಬಂದ ಕಾದಂಬರಿ  ಶ್ರೀಮತಿ ತ್ರಿವೇಣಿ ಅವರ ಹಣ್ಣೆಲೆ ಚಿಗುರಿದಾಗ.. 

ಈ ಕಥಾವಸ್ತುವಿಗೆ ಒಬ್ಬ ಹಿರಿಯ ನಟ ಎಂದಾಗ ನೆಡೆದು ಬಂದದ್ದು ಭೀಷ್ಮ ಎನಿಸಿಕೊಂಡ ಆರ್ ಎನ್ ನಾಗೇಂದ್ರ ರಾವ್ ಅವರು.. 

ಈ ಚಿತ್ರದ ಕಥಾವಸ್ತುವಿಗೆ ನಿಜವಾದ  ನಾಯಕರು ಅವರೇ... 

ಮರೆಗುಳಿ, ಹಠಮಾರಿ, ನಾಜೂಕುತನವಿಲ್ಲದ ನೇರವಾದ ಮಾತು, ಮಕ್ಕಳ ಜೊತೆ ನೆಡೆದುಕೊಳ್ಳುವ ರೀತಿ.. ಪ್ರೀತಿಸಿದವರನ್ನೂ ಕೂಡ ತನ್ನ ಸಿದ್ಧಾಂತಗಳಿಗೆ  ವಿರುದ್ಧವಾದಾಗ ಬಿಟ್ಟು ಬಿಡುವ ತನ.. ತನ್ನ ಮಡದಿಯೇ ತಪ್ಪು ಮಾಡಿದರೂ ಕೂಡ ಕ್ಷಮಿಸದ ಗುಣ.. ಮೊಮ್ಮಕ್ಕಳನ್ನು ಕಂಡರೆ, ಸೊಸೆಯಂದಿರನ್ನು ಕಂಡರೆ ಅಪಾರ ಪ್ರೀತಿ .. ಹೀಗೆ ಅನೇಕ  ಗುಣಗಳ ಸಮ್ಮಿಶ್ರಣ ಪಾತ್ರಕ್ಕೆ ಸರಿಯಾದ ಆಯ್ಕೆ ನಾಗೇಂದ್ರರಾಯರು.. 

ಅವರೇ ಪಾತ್ರವಾಗಿದ್ದಾರೋ, ಪಾತ್ರವೇ ಅವರನ್ನು ಆವರಿಸಿಕೊಂಡಿದ್ದೀಯೋ ಅನ್ನುವಷ್ಟರ ಮಟ್ಟಿಗೆ ಪರಕಾಯ ಪ್ರವೇಶ ಮಾಡಿದ್ದಾರೆ. 

ನೂರಕ್ಕೆ ಇನ್ನೂರು ಅಂಕ ಅವರಿಗೆ.. 

ಪಾಪಮ್ಮ ಸಾಮಾನ್ಯವಾಗಿ ಮನೆಹಾಳಿ, ಗಟ್ಟಿ ಗಿತ್ತಿ, ಬಜಾರಿತನ ಈ ಪಾತ್ರಗಳಲ್ಲೇ ಬಂದಿದ್ದ ಅವರು ಈ ಚಿತ್ರದಲ್ಲಿ ಅಂತಃಕರಣವೆತ್ತ ಪಾತ್ರ..ಮರೆಗುಳಿ ಹಠಮಾರಿತನದ ಪತಿರಾಯನನ್ನು ಸಂಭಾಳಿಸುತ್ತಾ, ತುಂಬು ಸಂಸಾರವನ್ನು ತೂಗಿಸಿಕೊಂಡು ಹೋಗುವ ಅಭಿನಯ ಸೊಗಸಾಗಿದೆ. 

ದಿನೇಶ್, ರಂಗ ತಂದೆಗೆ ಎದುರು ಮಾತಾಡಲೂ ಸಂಕೋಚಪಟ್ಟರೂ, ಹೇಳಬೇಕಾದ ಮಾತುಗಳನ್ನೂ ನಿರ್ಧಾರಗಳನ್ನು ಹೇಳುವ ಗುಣ ಇವರಿಬ್ಬರ ಪಾತ್ರದ ತಳಹದಿ. ತಂಗಿಯನ್ನು ಬಿಟ್ಟುಕೊಡದೆ, ಅವಳನ್ನು ರಕ್ಷಿಸಲು ಅಪ್ಪನನ್ನೇ ಎದುರುಹಾಕಿಕೊಂಡರು  ಸರಿ ಎನ್ನುವ ಅವರಿಬ್ಬರ ನಟನೆ ಉತ್ತಮವಾಗಿದೆ. 

ತಾನು ಮಾತು ಕೊಟ್ಟ ಹೆಣ್ಣಿಗೆ ಮೋಸ ಮಾಡಬಾರದು ಎಂದು ಅಪ್ಪನನ್ನೇ ಎದುರುಹಾಕಿಕೊಂಡು ಆಸ್ತಿಯೂ ಬೇಡ ಏನೂ ಬೇಡ ಅಂತ ಮನೆ ಬಿಟ್ಟು , ತಾನು ಮಾತು ಕೊಟ್ಟ ಹುಡುಗಿಯನ್ನು ಮದುವೆಯಾಗಿ ಮನೆಯಿಂದ ಹೊರಗೆ ಹೋದರೂ ಕೂಡ, ತಂಗಿಯನ್ನು ಮರೆಯದ ಅಣ್ಣನಾಗಿ ಅರುಣಕುಮಾರ್ ಅಭಿನಯಿಸಿದ್ದಾರೆ. 

ಜಯಶ್ರೀ ಮತ್ತು ಸಹನಟಿ ಇಂದಿರಾ ಜಾರ್ಜ್ ಸೊಸೆಯಾಗಿ ಇಬ್ಬರ ಅಭಿನಯ ಮತ್ತು ತಮ್ಮ ನಾದಿನಿಯನ್ನು ಕಣ್ಣಿನಲ್ಲಿ ಇಟ್ಟುಕೊಂಡು ನೋಡಿಕೊಳ್ಳುವ ಪಾತ್ರದಲ್ಲಿ ಮಿಂಚುತ್ತಾರೆ. 

ಇನ್ನೊಬ್ಬ ನಟಿ ಪ್ರೇಮಲತ ಅರುಣ್ ಕುಮಾರ್ ಅವರ ಜೋಡಿಯಾಗಿ ಅಭಿನಯಿಸಿದ್ದಾರೆ. 

ಮೃದು ಮಾತು, ಸನ್ನಿವೇಶಗಳನ್ನು ಅರ್ಥ ಮಾಡಿಕೊಂಡು ತನ್ನನ್ನು ಪ್ರೀತಿಸುವ ಅಪ್ಪನಿಗೆ ಯಾವುದೇ ಕಾರಣದಿಂದ  ನೋವಾಗಬಾರದು, ತನ್ನ ಬದುಕು ಏನಾದರೂ ಸರಿ,ಆದರೆ ಅಪ್ಪನ ನೆಮ್ಮದಿ ಮುಖ್ಯ ಎನ್ನುವ ಸಿದ್ಧಾಂತದ ಕಲ್ಪನ ಪಾತ್ರ ಈ ಚಿತ್ರದ ಹೈ ಲೈಟ್. 

ಪ್ರತಿ ದೃಶ್ಯದಲ್ಲೂ ಅಳೆದು ತೂಗುವ ಮಾತುಗಳು, ಕಣ್ಣೋಟ, ಆ ಭಾವನೆಗಳು ಎಲ್ಲವೂ ತ್ರಿವೇಣಿಯವರು ಕಾದಂಬರಿಯಲ್ಲಿ ಚಿತ್ರಿಸಿದಂತೆ ಇದ್ದಾರೆ ಅನ್ನುವ ಮಾತು ದೃಢವಾಗುತ್ತದೆ. 

ನಾಯಕನೊಡನೆ ಮಾತಾಡುವಾಗಲೂ  ಆ ಪಾತ್ರದ  ಮಿತಿಯಲ್ಲಿಯೇ ಅಭಿನಯಿಸುವುದು ನಾಯಕಿ  ಪಾತ್ರದ ಪೋಷಣೆಯತ್ತ ನೋಡಿದಾಗ ಶ್ಲಾಘನೀಯವೆನಿಸುತ್ತದೆ

ರಾಜಕುಮಾರ್.. ಇವರ ಬಗ್ಗೆ ಏನು ಹೇಳೋದು.. ಮುದ್ದಾಗಿ ಕಾಣುವ ಈ ವರನಟ, ಅಭಿನಯಿಸುತ್ತಾರೋ, ಪ್ರತಿ ಚಿತ್ರದಲ್ಲಿ ತಾವೇ ಪಾತ್ರವಾಗಿ ಬಿಡುತ್ತಾರೋ. .ಹೇಳೋದು ಬಹಳ ಕಷ್ಟ.. ತೊಂಬತ್ತೇಳು ಚಿತ್ರಗಳನ್ನು ನೋಡಿ ಕೊಂಡು ಬರುವಾಗ, ಅರೆ ಒಂದು ಚಿತ್ರದ ಅಭಿನಯಕ್ಕೂ ಇನ್ನೊಂದು ಚಿತ್ರದ ಅಭಿನಯಕ್ಕೂ ಎಳ್ಳಷ್ಟೂ ಹೋಲಿಕೆಯಿಲ್ಲ ಎಂದು ಅರಿವಾಗುತ್ತದೆ. 

ಸೂಟುಬೂಟುಧಾರಿಯಾಗಿ  ಅಷ್ಟೇ ಚಮತ್ಕಾರಿಕವಾಗಿ ಮಾತಾಡುವ ಇವರು, ತಮ್ಮ ಬದುಕಿನಲ್ಲಿ ಆದ ಘಟನೆಯಿಂದ ಜರ್ಜಿತರಾದರೂ, ಸಮಯಮ ಬಿಡದೆ ಪಾತ್ರದಲ್ಲಿ ಅದ್ಭುತ ಇವರು. 

ಮಗುವನ್ನು ಲಾಲಿಸುವಾಗ, ಪತ್ನಿಯಾದ ಬಿ ವಿ ರಾಧಾ ಅವರನ್ನು ಪ್ರೀತಿಯ ಮಾತುಗಳಲ್ಲಿ ಮಣಿಸುವಾಗ, ತಮ್ಮನ್ನು ಸಾಕಿ ಸಲುಹಿದ ಅಕ್ಕನ ಬಳಿ ಮಾತಾಡುವಾಗ, ಬದುಕು ಕೊಟ್ಟ ಮನೆಯ ಹಿರಿಯ ನಾಗೇಂದ್ರರಾಯರ ಬಳಿ ಮಾತಾಡುವಾಗ,ಅಷ್ಟೇಕೆ ಸಿನೆಮಾದ ಎರಡನೇ ಭಾಗದಲ್ಲಿ ತಮ್ಮ ಪತ್ನಿ ಮೃತರಾದ ಮೇಲೆ, ಮಗುವನ್ನು  ಸಂಭಾಳಿಸುವುದು ಕಷ್ಟವೆನಿಸಿದಾಗ, ಕಲ್ಪನಾ ಅವರ ಬಳಿ ತಮ್ಮ್ ಕಷ್ಟಗಳನ್ನು ಹೇಳಿಕೊಳ್ಳುವಾಗ.. ರಾಜಕುಮಾರ್  ಅಭಿನಯ ಕಣ್ಣಲ್ಲಿ ನೀರು  ತರಿಸುತ್ತದೆ. 

ತಮ್ಮ ಪಾತ್ರದ ಪ್ರಾಮುಖ್ಯತೆ ಇರಲಿ ಬಿಡಲಿ, ಉತ್ತಮ ಚಿತ್ರದೊಂದಿಗೆ, ನಟನಟಿಯರ ಜೊತೆ ಅಭಿನಯಿಸುವ ಅವರ ಗುಣವೇ ಅವರನ್ನು ಕರುನಾಡ ಚಿತ್ರರಂಗದಲ್ಲಿ ಇಲ್ಲಿಯ ತನಕ ಕರೆದುಕೊಂಡು ಬಂದಿದೆ. 

ಉಳಿದ ಸಹಕಲಾವಿದರ ಅಭಿನಯ ಕಣ್ಣು ತುಂಬಿಸುತ್ತದೆ. 

ಆರ್ ಎನ್ ಜಯಗೋಪಾಲ್ ವಿರಚಿತ  ಹಾಡುಗಳು ಅರ್ಥಗರ್ಭಿತವಾಗಿದೆ 

ಎಂ ರಂಗರಾವ್  ಅವರ ಸಂಗೀತ ಮಧುರವಾಗಿದೆ.. 

ಶ್ರೀಕಾಂತ್ ಮತ್ತು ಶ್ರೀಕಾಂತ್ ಎಂಟರ್ಪ್ರೈಸಸ್  ಅವರ ಮತ್ತೊಂದು ಕಾಣಿಕೆಯಿದು.. ಶ್ರೀಕಾಂತ್ ನಹತ ಹಾಗೂ ಶ್ರೀಕಾಂತ್ ಪಟೇಲ್ ನಿರ್ಮಾಪಕರು. 

ಪಿ ಬಿ ಶ್ರೀನಿವಾಸ್, ಎಲ್ ಆರ್ ಈಶ್ವರಿ, ಪಿ ಸುಶೀಲ ಮತ್ತು ಎಂ ಬಾಲಮುರಳಿ ಕೃಷ್ಣ ಅವರ ಗಾಯನ ಸೊಗಸಾಗಿದೆ 

ಶ್ರೀಕಾಂತ್ ಮತ್ತು ಕುಮಾರ್ ಅವರ ಛಾಯಾಗ್ರಹಣ ಉತ್ತಮ

ಎಂ ಆರ್ ವಿಠ್ಠಲ್ ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. 

No comments:

Post a Comment