ಹಳ್ಳಿಯ ಜೀವನ.. ಅಲ್ಲಿನ ಮುಗ್ಧತೆ, ಕ್ರೌರ್ಯ, ಮೌಢ್ಯ, ದ್ವೇಷ, ಜಾಣತನ, ಪ್ರೀತಿಯನ್ನು ದುರುಪಯೋಗಪಡಿಸಿಕೊಳ್ಳುವ ಕ್ರೂರತೆ.. ಹಳ್ಳಿಯಲ್ಲಿ ಮುಗ್ಧ ಜನರನ್ನು ದಾರಿ ತಪ್ಪಿಸುವವರು, ಅದೇ ಜನಗಳನ್ನು ಸರಿದಾರಿಗೆ ತರುವ ಸಾಹಸ.. ಸಾಧಿಸಿ ಗುರಿ ಮುಟ್ಟುವ ಛಲ ಮತ್ತು ಅದನ್ನು ಮೆಟ್ಟಿ ನಿಲ್ಲುವ ಸಾಹಸೀ ಯಶಸ್ವೀ ಪ್ರಯತ್ನ. ಈ ರೀತಿಯ ಎಲ್ಲಾ ವಿಶೇಷಣಗಳನ್ನು ಅಳವಡಿಸಿಕೊಂಡು ಕಥೆ ಚಿತ್ರಕಥೆ ಸಂಭಾಷಣೆ ಹಾಡುಗಳು ಮತ್ತು ನಿರ್ದೇಶನ ಮಾಡಿರುವವರು ಗೀತಪ್ರಿಯ ಎಂಬ ನಾಮಾಂಕಿತರಾದ ಲಕ್ಷ್ಮಣರಾವ್ ಮೋಹಿತೆ.
ಸುದರ್ಶನ್ ಮೂವೀಸ್ ಲಾಂಛನದಲ್ಲಿ ಎಂ ವಿ ವೆಂಕಟಾಚಲಂ ಮತ್ತು ಅಲೆಕ್ಸಾಂಡರ್ ನಿರ್ಮಾಣ..
ವಿ ಮನೋಹರ್ ಛಾಯಾಗ್ರಹಣ ಮತ್ತು ವಿಜಯಭಾಸ್ಕರ್ ಸಂಗೀತ.
ಈ ಚಿತ್ರದ ಆರಂಭದಲ್ಲಿ, ತಾರಾಗಣ, ತಾಂತ್ರಿಕ ವರ್ಗದ ಹೆಸರು ತೋರಿಸುತ್ತಾ ಹಿನ್ನೆಲೆಯಲ್ಲಿ ಹಳ್ಳಿಯ ಗ್ರಾಮೀಣ ದೃಶ್ಯ ತೋರಿಸಿರುತ್ತಾರೆ.. ಹೆಸರು ಮುಗಿದ ಮೇಲೆ ಆ ದೃಶ್ಯದಿಂದಲೇ ಸಿನಿಮಾ ಆರಂಭವಾಗುತ್ತದೆ.. ನಾಯಕನ ಪ್ರವೇಶವಾಗುತ್ತದೆ. ಸಾಮಾನ್ಯವಾಗಿ ಇದುವರೆಗಿನ ಚಿತ್ರಗಳಲ್ಲಿ ಹಾಗೆ ಇರಲಿಲ್ಲ. ಇದೊಂದು ವಿಶೇಷ!
ಇದೇನು ಸಭ್ಯತೆ ಇದೇನು ಸಂಸ್ಕೃತಿ ಈ ಹಾಡಿನಲ್ಲಿ ಎಂದು ನೊಂದು ಕೇಳುತಿಹಳು ನಮ್ಮ ತಾಯಿ ಭಾರತಿ ಅಂತ ಹಾಡಿದ ಮೇಲೆ ಸುಮಾರು ೨-೩ ಸೆಕೆಂಡುಗಳ ನಿಶ್ಯಬ್ಧ ಈ ಹಾಡನ್ನು ಮೇಲೆತ್ತುತ್ತದೆ. ಪಿ ಸುಶೀಲ ಮೇಲಿನ ಸ್ಥಾಯಿಯಲ್ಲಿ ಹಾಡಿರುವ ಕೆಲವು ಸಾಲುಗಳು ಈ ಹಾಡಿಗೆ ಹೆಚ್ಚಿನ ಯಶಸ್ಸು ಕೊಡಲು ಸಹಕಾರಿಯಾಗುತ್ತದೆ.
ಬದುಕುವ ಮಾರ್ಗವನ್ನು ತುಸು ಜೋರಾಗಿಯೇ ಹೇಳುವ "ಭಗವಂತ ಕೈಕೊಟ್ಟ" ಹಾಡು ಪಿ ಬಿ ಶ್ರೀನಿವಾಸ್ ಅವರ ಧ್ವನಿಯಲ್ಲಿ ಅಮರವಾಗಿದೆ.
ಉಳಿದ ಕೆಲವು ಹಾಡುಗಳಿಗೆ ಎಸ್ ಜಾನಕೀ ಧ್ವನಿ ನೀಡಿದ್ದಾರೆ.
ಹಳ್ಳಿಯಲ್ಲಿನ ಮುಗ್ಧತೆ, ನಾಜೂಕುತನವಿಲ್ಲದ ಪಾತ್ರಗಳು ನಾಗರೀಕರಣದಲ್ಲಿ ಮುಳುಗಿದ ಪಾತ್ರಗಳ ಜೊತೆ ಮಾತಾಡುವಾಗಲೂ ಅದೇ ತನ ಇದು ಈ ಚಿತ್ರದ ಸಂಭಾಷಣೆಗಳ ವಿಶೇಷತೆ.
ಖಳನಾಯಕ ಕೇಡು ಮಾಡುತ್ತಲೇ ಇದ್ದರೂ, ಅಬ್ಬರವಿಲ್ಲ. ನರಿಯ ಹಾಗೆ ಚಾಣಕ್ಷತನ ತೋರುತ್ತಾನೆ.. ಅಬ್ಬರವಿಲ್ಲದೆಯೋ ಖಳನ ಪಾತ್ರ ಮಾಡಿಸಬಹುದು .. ಮತ್ತು ಖಳ ಈ ಚಿತ್ರದ ನಾಯಕನಿಗೆ ಸಂಬಂಧಿಯಾಗಿದ್ದರಿಂದ ಕ್ರೂರತನವನ್ನು ಕಡಿಮೆ ಮಾಡಿ ಬರೀ ಮೆಲ್ಲನೆ ಬರಿ ದ್ವೇಷ ಹೆಚ್ಚುವ ಕೆಲಸ ಮಾಡುತ್ತಾನೆ.
ನಾಯಕಿ ಮೃದುವಾಗಿ ಮಾತಾಡುತ್ತಾ ಜನರನ್ನು ಪ್ರಗತಿಯತ್ತ ಹೆಜ್ಜೆ ಹಾಕಿಸುವುದು.. ನಾಯಕನಿಗೂ ಸಹಕರಿಸುತ್ತ, ಊರಿನ ಮಂದಿಗೆ ಸರಿ ದಾರಿ ತೋರುವ, ತನ್ನ ಆಪ್ತ ಗೆಳತಿಯರು ನಗರೀಕರಣದತ್ತ ಮುಖ ಮಾಡಿದ್ದರೂ ಹಳ್ಳಿಯ ಕಡೆಗೆ ತನ್ನ ಗಮನ ಹರಿಸುವ ಪಾತ್ರದಲ್ಲಿ ಕಲ್ಪನಾ ಮೆಚ್ಚುಗೆಳಿಸುತ್ತಾರೆ.
ಶಾಂತಮ್ಮ, ಜಯ, ಅಶ್ವಥನಾರಾಯಣ್, ಹೆಚ್ ರಾಮಚಂದ್ರಶಾಸ್ತ್ರಿ, ಇಂದಿರಾದೇವಿ, ರೇಣುಕಾ , ಎಂ ಪಿ ಶಂಕರ್ ಮುಂತಾದ ಸಹನಟರ ಅಭಿನಯವಿದೆ.
ನಾಯಕ ರಾಜಕುಮಾರ್ ಅವರಿಗೆ ನೀರು ಕುಡಿದಷ್ಟೇ ಸಲೀಸು ಅಭಿನಯ. ಹಳ್ಳಿಜನರ ಮುಗ್ಧತೆ ಮೈಗೂಡಿಸಿಕೊಂಡು ಪಟ್ಟಣದ ಸಹವಾಸ ಕಂಡರೂ ಅದರ ಆಕರ್ಷಣೆಗೆ ಬೆರಗಾಗದೆ ಮತ್ತೆ ಹಳ್ಳಿಗೆ ಬಂದು, ಶ್ರಮವಹಿಸಿಕೊಂಡು ಮಾದರಿ ರೈತನಾಗುವ ಅಭಿನಯದಲ್ಲಿ ತಾವೇ ತಾವಾಗಿದ್ದಾರೆ. ಮಲ್ಲಣ್ಣ ಮೋಸ ಮಾಡುತ್ತಿದ್ದಾನೆ ಎಂದಾಗ ರೌದ್ರರೂಪ ತಾಳುವ ರಾಜಕುಮಾರ್ ನಾಯಕಿಯ ಜೊತೆ, ನಾಯಕಿಯ ಸಂಗಡಿಗರ ಜೊತೆ ಮಾತಾಡುವಾಗ ನಗೆಬುಗ್ಗೆ ಉಕ್ಕಿಸುತ್ತಾರೆ. ಈ ಚಿತ್ರದ ವಿಶೇಷತೆ ಬಾವಿ ತೊಡುವ ದೃಶ್ಯ.. ರಾಜಕುಮಾರ್ ಅವರು ಗಂಗವ್ವ ಬಂದ್ಲು ಗಂಗವ್ವ ಬಂದ್ಲು ಎನ್ನುವಾಗಿನ ಅವರ ಅಭಿನಯ ಅದ್ಭುತ.

No comments:
Post a Comment