ಬಹುಶಃ ಬಿಡುಗಡೆಗೆ ಮುಂಚೆ ಚಿತ್ರ ತಯಾರಿಕೆಯಲ್ಲಿ ತುಸು ಹೆಚ್ಚಿಗೆ ಸಮಯ ತೆಗೆದುಕೊಂಡಿರಬಹುದು ಎನ್ನುವುದು ನನ್ನ ಊಹೆ.. ಕಾರಣ ಹಿಂದಿನ ಚಿತ್ರಗಳ ಪ್ರಿಂಟ್ ಚೆನ್ನಾಗಿದೆ .. ಈ ಚಿತ್ರ ಪ್ರಿಂಟ್ ತುಂಬಾ ಮಬ್ಬು.. ಮಬ್ಬು..
ರಾಜಕುಮಾರ್ ಮತ್ತು ಉದಯಕುಮಾರ್ ಇದ್ದಾರೆ ಎಂದರೆ ಅದು ಅಜೀವ ಗೆಳೆತನದ ಕಥೆ ಇರುತ್ತೆ ಇಲ್ಲವೇ ಜಿದ್ದಾಜಿದ್ದಿ ಹೊಡೆದಾಟ ಇರುತ್ತದೆ.. ಇಲ್ಲವೇ ಭಾವುಕತನದ ಪರಮಾವಧಿಯಲ್ಲಿ ಇಬ್ಬರೂ ನಲುಗಿರುವ ಚಿತ್ರಕತೆ ಇರುತ್ತದೆ..
ಈ ಚಿತ್ರ ಎರಡನೇ ವರ್ಗಕ್ಕೆ ಸೇರಿರೋದು.. ರಾಜ್ಯವನ್ನು ಕಬಳಿಸೋಕೆ ಅಂತ ಉದಯಕುಮಾರ್ ನಿಂತರೆ... ಅವರ ಪ್ರಯತ್ನವನ್ನು ನಿಗ್ರಹ ಮಾಡೋಕೆ ರಾಜಕುಮಾರ್ ನಿಲ್ಲುತ್ತಾರೆ..
ಇಬ್ಬರದೂ ಸಮಬಲದ ಪಾತ್ರ.. ಚಿತ್ರದ ಅಂತಿಮ ದೃಶ್ಯದ ತನಕ ಇಬ್ಬರೂ ಸೋಲೋಲ್ಲ .. ಕಡೆಯಲ್ಲಿ ಖಳ ಸೋಲಲೇ ಬೇಕು ಒಳ್ಳೆಯತನ ಗೆಲ್ಲಲೇ ಬೇಕು ಅಲ್ಲವೇ..
ಅಣ್ಣ ತಮ್ಮಂದಿರು ದೊಡ್ಡ ರಾಜ್ಯವನ್ನು ಇಬ್ಭಾಗ ಮಾಡಿಕೊಂಡು ಆಳುತ್ತಿದ್ದರೂ ತಮ್ಮನಿಗೆ ತೃಪ್ತಿಯಿಲ್ಲದೆ ಅಣ್ಣನ ರಾಜ್ಯವನ್ನು ಕಬಳಿಸಬೇಕು ಎಂದು ಕುಟಿಲೋಪಾಯವನ್ನು ತನ್ನ ಮಂತ್ರಿಯ ಜೊತೆ ಸೇರಿಕೊಂಡು ಮಾಡುತ್ತಿರುತ್ತಾನೆ.. ಆದರೆ ಮಂತ್ರಿಯ ದುರಾಲೋಚನೆಯೇ ಬೇರೆ, ರಾಜ್ಯ ಕಬಳಿಸದಮೇಲೆ, ರಾಜನನ್ನು ಮೂಲೆಗುಂಪು ಮಾಡಿ ತಾನೇ ಸರ್ವಾಧಿಕಾರಿಯಾಗುವುದು ಆತನ ಅಂತಿಮ ಯೋಜನೆ.. ಅದಕ್ಕೆ ತಕ್ಕ ಹಾಗೆ ಒಂದಲ್ಲ ಒಂದು ಉಪಾಯ ಮಾಡುತ್ತಲೇ ಇರುತ್ತಾನೆ.
ಆದರೆ ಅವನ ಯೋಜನೆಗಳನ್ನು ತಲೆಕೆಳಗು ಮಾಡೋಕೆ ರಾಜಕುಮಾರ್ ಪಾತ್ರ ಸದಾ ಹುಷಾರಾಗಿ ಕೆಲಸ ಮಾಡುತ್ತಲೇ ಇರುತ್ತಾರೆ
ರಾಜಕುಮಾರ್ ಮತ್ತೆ ರಾಜಕುಮಾರನ ಪಾತ್ರ. ಅದಕ್ಕೆ ಬೇಕಾದ ಎಲ್ಲಾ ವಿಶೇಷತೆಗಳನ್ನು ಕೇಂದ್ರೀಕರಿಸಿಕೊಂಡು ಅಭಿನಯಿಸಿರುವ ಪಾತ್ರ.. ಕತ್ತಿವರಸೆ, ಕಾಳಗ, ಮಾತುಗಳು, ಹಾಡುಗಳು, ಹಾಸ್ಯ ಎಲ್ಲವೂ ಕರತಲಾಮಲಕವಾಗಿದೆ ಅವರ ಅಭಿನಯದಲ್ಲಿ. ಇಲ್ಲಿ ರಾಜ್ ಕುಮಾರ್ ಹಲವಾರು ರೂಪದಲ್ಲಿ ಕಾಣಿಸಿಕೊಳ್ಳುವುದು ಚಿತ್ರದ ವಿಶೇಷ.
ಜಯಂತಿ ನಾಯಕಿಯಾದರೂ ಕಥೆಯಲ್ಲಿ ಹೆಚ್ಚಿನ ಪ್ರಾಮುಖ್ಯತೆಯಿಲ್ಲ.. ಕಥೆಗೆ ಬರುವ ದೃಶ್ಯದಲ್ಲಿ ಅವರ ಅಭಿನಯ ಇಷ್ಟವಾಗುತ್ತದೆ ...
ಡಿಕ್ಕಿಮಾಧವರಾವ್, ರಾಘವೇಂದ್ರರಾವ್ ಸಮಯೋಚಿತ ಅಭಿನಯ
ದಿನೇಶ್, ರಮಾದೇವಿ, ನರಸಿಂಹರಾಜು, ಜ್ಯೋತಿಲಕ್ಷ್ಮಿ, ರತ್ನಾಕರ್, ಹನುಮಂತಾಚಾರ್, ಬಿವಿ ರಾಧ ಅವರಿಗೆ ಒಪ್ಪಿಸಿರುವ ಪಾತ್ರಗಳಲ್ಲಿ ಬರುತ್ತಾರೆ
ಇಲ್ಲಿ ನಿಜವಾಗಿಯೂ ಅಬ್ಬರಿಸುವುದು ಉದಯಕುಮಾರ್.. ಸ್ವಲ್ಪ ಹಾಸ್ಯಮಯವಾಗಿ ಅವರ ಮೇಕಪ್ ಕಂಡರೂ ಕೃತ್ರಿಮತೆ, ಕ್ರೂರತೆ, ಅಬ್ಬರ ಎಲ್ಲವೂ ಮೇಳೈಸಿದೆ.
ಗೌರಿ ಆರ್ಟ್ಸ್ ಪ್ರೊಡಕ್ಷನ್ಸ್ ಅವರ ತಯಾರಿಕೆಯಲ್ಲಿ ಛಾಯಾಗ್ರಹಣ ಹಾಗೂ ನಿರ್ದೇಶನ ಡಬ್ಲ್ಯೂ ಆರ್ ಸುಬ್ಬರಾವ್ ಅವರದ್ದು, ನಿರ್ವಹಣೆ ಎಸ್ ಭಾವನಾರಾಯಣ್, ಸಂಗೀತ ಜಿ ಕೆ ವೆಂಕಟೇಶ್, ಹಾಡುಗಳು ಚಿ ಉದಯಶಂಕರ್, ಗಾಯನದಲ್ಲಿ ಹಾಡುಗಾರರ ದಂಡೇ ಇದೆ. ಟಿ ಎಂ ಸೌಂದರ್ ರಾಜನ್, ಪಿ ಬಿ ಶ್ರೀನಿವಾಸ್, ಪೀಠಾಪುರಂ ನಾಗೇಶ್ವರ ರಾವ್, ಎಸ್ ಜಾನಕೀ ಇದ್ದಾರೆ.
ಜಾನಪದ ಶೈಲಿಯ ಚಿತ್ರವಿದು.

No comments:
Post a Comment