ಶಿಲ್ಪಿ ಮೂರ್ತಿಯನ್ನು ಕೆತ್ತುವುದಕ್ಕೆ ಮೊದಲು ಶಿಲೆಯನ್ನು ಪರೀಕ್ಷೆ ಮಾಡುತ್ತಾರೆ.. ಅದೇ ರೀತಿ ರಾಜಕುಮಾರ್ ಬೇಡರ ಕಣ್ಣಪ್ಪ ಚಿತ್ರದ ದಿಣ್ಣನ ಪಾತ್ರವನ್ನು ನೋಡಿದವರು ಈ ರೀತಿಯ ದೇಸಿಯ ಗೂಢಚಾರ ಅನೇಕಾನೇಕ ಉಪಕರಣಗಳನ್ನು ಆರಾಮಾಗಿ ಉಪಯೋಗಿಸುವ ಪಾತ್ರದಲ್ಲಿ ಬೆಳಗುತ್ತಾರೆ ಎಂದು ಊಹಿಸಿರಲಿಲ್ಲ.. ಆದರೆ ರಾಜಕುಮಾರ್ ಎಂಬ ಮೂರ್ತಿ ಆ ಶಿಲೆಯಲ್ಲಿ ಇತ್ತು.. ಅದನ್ನು ಅನೇಕ ನಿರ್ದೇಶಕರು ನಟರು ತಂತ್ರಜ್ಞರು ಆ ಮಹಾ ಯಜ್ಞದಲ್ಲಿ ಭಾಗಿಗಳಾಗಿದ್ದರು.
ಜೇಡರಬಲೆಯ ಮುಂದಿನ ಗೂಢಚಾರ ಕಥಾನಕದ ಸರಣಿ ಗೋವಾದಲ್ಲಿ ಸಿ ಐ ಡಿ ೯೯೯ ಮುಂದುವರೆಯುತ್ತದೆ. ಮತ್ತೊಂದು ಎಳೆಯನ್ನು ಹಿಡಿದು ದೇಶದ್ರೋಹಿಗಳನ್ನು ಹಿಡಿದು ಸದೆಬಡಿಯುವುದು ಇಲ್ಲಿನ ಕಥಾನಕ.
ರಾಜಕುಮಾರ್ ಅವರ ಅದ್ಭುತ ಪರಕಾಯ ಪ್ರವೇಶ ನೋಡೋದೇ ಒಂದು ಖುಷಿ. ಆರಂಭದ ದೃಶ್ಯದಲ್ಲಿ ಒಂದು ಗುಂಡಿ ಒತ್ತಿದರೆ ಸಾಕು ಓಡಾಡುವ ಮಂಚ, ತೆರೆದುಕೊಳ್ಳುವ ಬಾಗಿಲು, ಅದರಿಂದ ಒಳಬರುವ ಅವರ ಆಪ್ತ ಸಹಾಯಕರು, ಅತಿಥಿಗೆ ಕೂತುಕೊಳ್ಳಲು ಬರುವ ಕುರ್ಚಿ, ದೂರವಾಣಿ, ಪಿಸ್ತೂಲು, ಚಾಕು ಹೀಗೆ ಹತ್ತಾರು ಇಲೆಕ್ಟ್ರಾನಿಕ್ ಉಪಕರಣಗಳ ತೋರಿಸುವ ಚಿತ್ರದಲ್ಲಿ ರಾಜಕುಮಾರ್ ತಮ್ಮದೇ ರೀತಿಯ ಛಾಪು ಮೂಡಿಸುತ್ತಾರೆ.
ಆ ಗತ್ತು, ಗಾಂಭೀರ್ಯ,ಆಂಗ್ಲ ಸಂಭಾಷಣೆಗಳನ್ನು ಹೇಳುವಾಗ ಇರಬೇಕಾದ ಭಾವ, ಆ ನಾಜೂಕುತನ, ಹೊಡೆದಾಟದಲ್ಲಿ ತೋರುವ ಚಾಕಚಕ್ಯತೆ ದೇಸಿ ಗೂಢಚಾರ ಇದ್ದರೇ ಹೀಗೆ ಇರುತ್ತಾರೆ ಎನ್ನುವಷ್ಟು ನಿಖರವಾಗಿದೆ ಅವರ ಅಭಿನಯ.
ನವನಟಿಯಾಗಿ ಲಕ್ಷ್ಮಿ ಪಾತ್ರಕ್ಕೆ ಕೊಂಚ ಅವಕಾಶ ಕಡಿಮೆ, ಆದರೆ ಚಿತ್ರಕ್ಕೆ ಮುಖ್ಯವಾದ ಸುಳಿವು, ಹಾಗೂ ಅಂತಿಮ ದೃಶ್ಯಕ್ಕೆ ಅವರೇ ಮುಖ್ಯವಾದ ಕೊಂಡಿ.
ನರಸಿಂಹರಾಜು ಅವರ ಪಾತ್ರ ಮುಖ್ಯಪಾತ್ರಕ್ಕೆ ಸಹಕಾರ ನೀಡುವುದು
ಶಕ್ತಿಪ್ರಸಾದ್ ಮತ್ತು ರಾಘವೇಂದ್ರರಾವ್ ಮುಖ್ಯ ಪಾತ್ರಗಳಾಗಿದ್ದಾರೆ.
ಇಲ್ಲಿ ಕಥೆಯೇ ಸಿನೆಮಾವನ್ನು ತೂಗಿಸಿಕೊಂಡು ಹೋಗುವುದರಿಂದ ಪಾತ್ರಗಳು ಬರುತ್ತಲೇ ಇರುತ್ತವೆ.. ಕುತೂಹಲ ಮೂಡಿಸಿಕೊಂಡು ಸಾಗುವ ಚಿತ್ರವನ್ನು ರಾಜಕುಮಾರ್ ತಮ್ಮ ಹೆಗಲ ಮೇಲೆ ಹೊತ್ತು ಮೆರೆದಿದ್ದಾರೆ.
ಅನುಪಂ ಮೂವೀಸ್ ಅವರ ತಯಾರಿಕೆಯಲ್ಲಿ ಬಿ ದೊರೈರಾಜ್ ಎಸ್ ಕೆ ಭಗವಾನ್ ಜೋಡಿ ಕಥೆ ಚಿತ್ರಕಥೆ ನಿರ್ಮಾಣ ನಿರ್ದೇಶನ ಮಾಡಿದ್ದಾರೆ.
ಹಾಡುಗಳು ಆರ್ ಎನ್ ಜಯಗೋಪಾಲ್
ಛಾಯಾಗ್ರಹಣ ಬಿ ದೊರೈರಾಜ್
ಚಿತ್ರವನ್ನು ಆವರಿಸಿಕೊಂಡಿರುವುದು ರಾಜಕುಮಾರ್ ಅಭಿನಯ ಮತ್ತೊಂದು ಜಿ ಕೆ ವೆಂಕಟೇಶ್ ಅವರ ಸಂಗೀತ.
ಬಾಂಡ್ ಮಾದರಿಯ ಸಂಗೀತವನ್ನು ಅಳವಡಿಸಿಕೊಂಡು ಅದ್ಭುತವಾಗಿ ಸಂಗೀತ ನೀಡಿದ್ದಾರೆ. ಗಿಟಾರ್ ನಾದವನ್ನು ಅವರು ಬಳಸಿರುವ ರೀತಿ ಅದ್ಭುತ.

No comments:
Post a Comment