Saturday, January 24, 2026

ಮೃಗವನ್ನು ಪಳಗಿಸಿದ ಮಲ್ಲಮ್ಮನ ಪವಾಡ - 1969 (ಅಣ್ಣಾವ್ರ ಚಿತ್ರ ೧೦೮/೨೦೭)


"ನಮ್ಮ ಕಡೆ ಆ ತರಹ  ಇಲ್ಲ ಚಿನ್ನ ... ಮೈಸೂರು ಚಿಗುರೆಲೆಯಲ್ಲಿ ಮಲ್ಲಿಗೆಯಂಥ ಮನಸ್ಸನ್ನು ಇಟ್ಟು ದಂತದಂತಹ ಕೈಯಲ್ಲಿ ಅವರಿಗೆ ಬಾಯಿಗಿಟ್ಟರೆ ಆಯಿತು ಅದೇ ಮದುವೆ"

"ಯಾರು ಚಿನ್ನ ಇದು .. ತಾಯೀನ ಬಿಡು ಚಿನ್ನ.. ಸಾಧಾರಣ"

"ಅಮ್ಮ ನಿನ್ನ ಹಣೆಯಿಂದ ಕುಂಕುಮ ಹೋದ ಮೇಲೆ ನಿನಗೆ ಬೇಕಾಗಿರೋದು ನಾಲ್ಕು ಗೋಡೆ.. ಹೊಟ್ಟೆಗೆ ಊಟ.. ಅಷ್ಟೇ"

"ತಾಯಿಯ ಪ್ರೀತಿ ಗಂಗೆಯಿದ್ದ ಹಾಗೆ.. ನಾಲ್ಕು ಬೊಗಸೆ ನೀರು ಕುಡಿದಾಕ್ಷಣ ಗಂಗೆ ಬತ್ತಿ ಹೋಗೋಲ್ಲ"

"ಮಲ್ಲವ್ವ.. ನಮ್ಮ ಮನೆಯಲ್ಲಿ ಪಳಗಿಸಬೇಕಾದ ಒಂದು ಪಶು ಇದೆ"

"ಸಾಹಿತ್ಯ ಲೋಕವನ್ನೇ ಸೂರೆ ಮಾಡಿದ ರನ್ನನ ಗದಾಯುದ್ಧ ಅಪ್ಪಾಜಿ:

"ಲಗಾವಣೆ .. ಜಮಾವಣೆ.. "

"ಯಾವ್ ಸೀಮೆ ಊರೋ ಇದು.. ಯಾವ ಸೀಮೆ ಜನರೋ ನೀವು. ನನಗೆ ಕೊಡಬೇಕು ಕಣೋ ಕಿಸ್ತು"

"ವಿಷ ಯಾಕೆ ಸ್ವಲ್ಪ ಅಫೀಮು ಸಾಕು ಅಲ್ಲವೇ"

"ಅಯ್ಯೋ ನಾವು ಒಂದೇ ಕಡೆ ನಿಲ್ಲೋ ಹಾಗಿಲ್ಲ.. ನೀವು ಯಥಾ ಶಕ್ತಿ ಕೊಟ್ರಿ.. ರಾಜಿ ಯಥಾ ಶಕ್ತಿ ಸೇವೆ ಮಾಡಿದ್ಲು.. ಇನ್ನು ನಾವು ಮುಂದಿನ ಊರಿಗೆ ಹೋಗಬೇಕು"

"ಹೌದು ತಿಂತಾನೆ ಇರ್ಲಿಲ್ಲ .. ಬರಿ ಕುಡ್ಕೊಂಡೇ ಇದ್ರೂ"

ಹೀಗೆ ಹತ್ತಾರು ನೆನಪಲ್ಲಿ ಉಳಿಯುವಂತಹ ಸಂಭಾಷಣೆಗಳು, ಖಡಕ್ ಅಭಿನಯ, ದೃಶ್ಯ ಸಂಯೋಜನೆ, ಹಾಡುಗಳು ಎಲ್ಲವೂ ಸೊಗಸಾಗಿದೆ. 

ನಾನೂನೂ ನಿಮ್ಮಂತೆ ಗೊಂಬೆನೇ ಕಣರೋ - ಪಿ ಬಿ ಶ್ರೀನಿವಾಸ್ 

ಶರಣೆಂಬೆನಾ ಶಶಿಭೂಷಣ - ಪಿ ಸುಶೀಲ 

ಆಶಾ ವಿಲಾಸಿ ಈ ರೂಪ ರಾಶಿ - ಎಲ್ ಆರ್ ಈಶ್ವರಿ 

ಹಾಡೋಣ ಒಲವಿನ ರಾಗ ಮಾಲೆ - ಪಿ ಬಿ ಶ್ರೀನಿವಾಸ್, ಪಿ ಸುಶೀಲ 

ಹುಚ್ಚರಲ್ಲ ನೀವು ಹುಚ್ಚರಲ್ಲ - ಪಿ ಸುಶೀಲ 

ಮರೆಯದ ಮಾತಾಡು - ಸುಮಿತ್ರಾ 

ಇಲ್ಲಿ ಹಾಡುಗಳು ಚಿತ್ರಕಥೆಯನ್ನು ಕೊಂಡೊಯ್ಯುವಂತೆ ರೂಪಿತವಾಗಿರೋದು ಮತ್ತು ಅಷ್ಟೇ ಉತ್ತಮವಾಗಿ ಕತೆಯ ಓಟದಲ್ಲಿ ಸೇರಿಸಿರೋದು ನಿರ್ದೇಶಕರ ಜಾಣ್ಮೆಯನ್ನು ಎತ್ತಿ ತೋರಿಸುತ್ತದೆ. 

ಶರಣೆಂಬೆನ ಹಾಡಿನಲ್ಲಿ ನೆರಳು ಬೆಳಕಿನ ಸಂಯೋಜನೆ silhouette ಅಂತಾರೆ ಆ ರೀತಿಯಲ್ಲಿ ಚಿತ್ರೀಕರಿಸಿರುವುದು ವಿಶೇಷ. 

ಸಂಗೀತ ನಿರ್ದೇಶಕರ ಪರಿಶ್ರಮ ಎದ್ದು ಕಾಣುತ್ತದೆ ಹಾಗೂ ಚಿತ್ರದ ಗತಿಗೆ ತಕ್ಕಂತೆ ಸಂಗೀತ ನೀಡಿರುವ ವಿಜಯಭಾಸ್ಕರ್ ವಿಶೇಷ ಪ್ರಶಂಸೆಗಳಿಸುತ್ತಾರೆ . 

ಕಣಗಾಲ್ ಪ್ರಭಾಕರ್ ಶಾಸ್ತ್ರೀ ಮತ್ತು ವಿಜಯನಾರಸಿಂಹ ಹಾಡುಗಳನ್ನು ರಚಿಸಿದ್ದಾರೆ. 

ಛಾಯಾಗ್ರಹಣ ಕೈಚಳಕ ಸೊಗಸಾಗಿದೆ, ಕ್ಲೋಸ್ ಅಪ್ ದೃಶ್ಯಗಳು, ನೆರಳು ಬೆಳಕಿನ ಸಂಯೋಜನೆ ವಿ ಸೆಲ್ವರಾಜ್ ಅವರದ್ದು. 




ವಿಷಯಕ್ಕೆ  ಬಾರಪ್ಪ ಅಂದರು ರಾಜಕುಮಾರ್. 

ಬಿ ಪುಟ್ಟಸ್ವಾಮಯ್ಯನವರ ಕಾದಂಬರಿ ಆಧಾರಿತ ಚಿತ್ರ.  

                                        

ಬಿ ಪುಲ್ಲಯ್ಯನವರು ಚಿತ್ರಕಥೆ ರಚಿಸಿದ್ದಾರೆ. 

ನಿರ್ದೇಶಕರ ಕುರ್ಚಿಯಲ್ಲಿ ಎಸ್ ಆರ್ ಪುಟ್ಟಣ್ಣ ಕಣಗಾಲ್ ಅವರು  ತಾರಾಗಣ, ತಂತ್ರಜ್ಞರ ಪ್ರತಿಭೆಯನ್ನು ಉತ್ತಮವಾಗಿ ಬಳಸಿಕೊಂಡಿದ್ದಾರೆ.. ಕಥೆಯ ಪುಟಗಳ ಮೇಲೆ ಹೆಸರು ಬರುವಂತೆ ತೋರಿಸಿರುವುದು ನಿರ್ದೇಶಕರ ಕ್ರಿಯಾಶೀಲತೆಯನ್ನು ತೋರಿಸುತ್ತದೆ. 

ಬಾಲ್ಯದಲ್ಲಿ  ತನ್ನ ಮಲತಾಯಿ ಧೋರಣೆಯಿಂದ ಆದ ಬುದ್ದಿ ಮಾಂದ್ಯತೆಯಿಂದ  ಬಳಲುವ ರಾಜಕುಮಾರ್ ಆ ಪಾತ್ರದಲ್ಲಿ ನೈಜವಾಗಿ ಅಭಿನಯಿಸಿದ್ದಾರೆ. ತಮ್ಮನಿಂದ ಹೊಡೆತ ತಿನ್ನುವಾಗ ಹಿಂಸೆ ಪಡುವುದು, ಅದನ್ನು ತನ್ನ ಮಡದಿಯಲ್ಲಿ ಹೇಳಿಕೊಳ್ಳುವಾಗಿನ ಮುಗ್ಧತೆ ಬಹಳ ನೈಜವಾಗಿದೆ. ತನ್ನ ಮಡದಿಯ ಆರೈಕೆಯಿಂದ, ಮಾರ್ಗದರ್ಶನದಿಂದ ಓದು ಬರಹ ಕಲಿತು.. ಸುಶಿಕ್ಷಿತನಾಗಿ ಮುಂದುವರೆಯುವ ಪಾತ್ರದಲ್ಲಿ ಇನ್ನಷ್ಟು ಇಷ್ಟವಾಗುತ್ತಾರೆ. 

ಓದುತ್ತಾ ಕೂತಿದ್ದ ಮಗನನ್ನು ಕಾಣಲು ಬರುವ ಸಂಪತ್ ಮಗನ ಸ್ಥಿತಿ ಕಂಡು ಸಂತಸ ಪಡುತ್ತಾ, ಏನು ಓದುತ್ತಿದ್ದೀಯ ಅಂತ ಕೇಳಿದಾಗ ರಾಜಕುಮಾರ್ ಹೇಳುವ ಸಂಭಾಷಣೆ ಮತ್ತು ಅಭಿನಯ ಅದ್ಭುತವಾಗಿದೆ. 

ಎರಡೂ ರೀತಿಯ ಪಾತ್ರ ಪೋಷಣೆಯಲ್ಲಿ ಅದ್ಭುತ ಬದಲಾವಣೆ ತಂದು ಕೊಂಡಿದ್ದಾರೆ. ಅದೇ ವೇಷಭೂಷಣ,  ಮೇಕಪ್, ಆದರೇ ಸಂಭಾಷಣೆ, ಮುಖಭಾವ ಬದಲಾವಣೆ ಸೊಗಸಾಗಿದೆ. ರಾಜಕುಮಾರ್ ಪಾತ್ರ ಪೋಷಣೆ ಸೊಗಸಾಗಿದೆ  ಮತ್ತು ರಾಜಕುಮಾರ್ ಗೆದ್ದಿದ್ದಾರೆ ಎಂದಿನಂತೆ. 







ಬಾಲಣ್ಣ ಏನು ಹೇಳೋದು ಈ ನಟನ ಬಗ್ಗೆ.  ಸೋಗಲಾಡಿತನದ ಪಾತ್ರದಲ್ಲಿ ಪ್ರತಿ ಸಂಭಾಷಣೆ, ಆಂಗೀಕ ಅಭಿನಯ ಅದ್ಭುತ. 

ರಮಾದೇವಿ ಬಾಲಣ್ಣ ಅವರಿಗೆ ಸಾತ್ ನೀಡಿದ್ದಾರೆ. 


ಉದಯಚಂದ್ರಿಕಾ ಚೆಲುವೆ..  ಅವರ ಚೆಲುವನ್ನು ನೋಡೋದೇ ಒಂದು ಖುಷಿ. 


ಆದವಾನಿ ಲಕ್ಷ್ಮೀದೇವಿ ಮಲತಾಯಿಯ ಪಾತ್ರದಲ್ಲಿ ಉತ್ತಮ ಅಭಿನಯ ನೀಡಿದ್ದಾರೆ. ಅದರಲ್ಲೂ ತನ್ನ ಮಗನಿಂದಲೇ ಅವಮಾನ  ಮನೆಯಿಂದ ಹೊರಗೆ ಬರುವ ದೃಶ್ಯದಲ್ಲಿ ಕಣ್ಣೀರಾಗಿಸುತ್ತಾರೆ. 


ಸಂಪತ್ ಹಳ್ಳಿಯ ಪ್ರಮುಖನಾಗಿ, ತನ್ನ ಮನೆಯಲ್ಲಿಯೇ ತನಗೆ ಬೆಲೆ ಇಲ್ಲದಂತಹ ಪಾತ್ರದಲ್ಲಿ ಅಭಿನಯ ಸರಳ.ಸುಂದರ  


 ಎಚ್  ರಾಮಚಂದ್ರ ಶಾಸ್ತ್ರೀ ಲೆಕ್ಕಿಗನಾಗಿ, ಮತ್ತು ಮನೆಯ ಹಿತೈಷಿಯಾಗಿ ಇಷ್ಟವಾಗುತ್ತಾರೆ. 


ಶಾಂತಮ್ಮ, ದ್ವಾರಕೀಶ್, ಅನಂತರಾಮ್ ಮಚ್ಚೇರಿ ಪಾತ್ರೋಚಿತ ಅಭಿನಯ.

 






ಹಾಗೆಯೇ ಸುಂದರಕೃಷ್ಣ ಅರಸ್ ಪಾತ್ರವೂ ಉತ್ತಮವಾಗಿದೆ. ಆದರೆ ಪುಟ್ಟ ಪಾತ್ರವಾಗಿದ್ದರಿಂದ ನಟವರ್ಗದಲ್ಲಿ ಕಾಣದೆ ತಾಂತ್ರಿಕ ವರ್ಗದಲ್ಲಿ ಕಾಣುತ್ತಾರೆ.



 ರಾಜಕುಮಾರ್ ಅವರ ಪಾತ್ರಕ್ಕೆ ಇರುವ ಪ್ರಾಮುಖ್ಯತೆಯಷ್ಟೇ ಇನ್ನೆರಡು ಪಾತ್ರಗಳು ಅಂದರೆ ಬಿ ಸರೋಜಾದೇವಿ  ನಾಯಕಿಯಾಗಿ ಕಂಗೊಳಿಸುತ್ತಾರೆ. ಪ್ರತಿನಾಯಕನನ್ನು ಪಳಗಿಸುವ, ಹಾಗೆಯೇ ತನ್ನ ಪತಿರಾಯನನ್ನು ಸುಶಿಕ್ಷಿತನಾಗಿ ಮಾಡುವಲ್ಲಿ  ಅವರ ಸಂಯಮದ ಅಭಿನಯ ಹಾಗೂ ಕೆಲವು ದೃಶ್ಯಗಳಲ್ಲಿ ರೌದ್ರತೆ ಶ್ಲಾಘನೀಯ. 



ಬಿಡುಗಡೆಯಾದ ಮೊದಲನೇ ಚಿತ್ರದಲ್ಲಿ ವಜ್ರಮುನಿ ಅದ್ಭುತ ಅಭಿನಯ ನೀಡಿದ್ದಾರೆ. ಅವರ ಪಾತ್ರದಲ್ಲಿ ತುಂಬಿರುವ ಧೈರ್ಯ ಮತ್ತು ಅವರ ಅಭಿನಯದ ಮನೋಧೈರ್ಯ ಮೆಚ್ಚಬೇಕಾದ್ದು. ಕಾರಣ ಆಗಲೇ ಶತ  ಅಭಿನಯಿಸಿರುವ ಮತ್ತು ನಟಸಾರ್ವಭೌಮ, ವರನಟ ಅಂತ ಜನಮನ್ನಣೆಗಳಿಸಿರುವ ನಟನ ಮುಂದೆ ಆ ರೀತಿ ಅಬ್ಬರದ ನಟನೆ ಮಾಡುವುದು ತಮಾಷೆಯಲ್ಲ. ಅದರಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ಮೇಲುಗಣ್ಣು ಬಿಟ್ಟುಕೊಂಡು, ಮೇಲುಸ್ಥಾಯಿಯಲ್ಲಿ ಹೇಳುವ ಸಂಭಾಷಣೆಯಲ್ಲಿ ಅವರನ್ನು ನೋಡುವುದೇ ಖುಷಿ. ವಜ್ರಮುನಿ ಮೊದಲ ಬಿಡುಗಡೆ ಚಿತ್ರದಲ್ಲಿಯೇ ಎಲ್ಲರಿಗೂ ಇಷ್ಟವಾಗುತ್ತಾರೆ. 



ನಿರ್ದೇಶಕರ ಬಗ್ಗೆ ಏನು ಹೇಳುವುದು. ಉತ್ತಮ ಪ್ರತಿಭೆಗಳಿಂದ ಅತ್ಯುತ್ತಮ ಕೆಲಸವನ್ನು ತೆಗೆದುಕೊಂಡು ಈ ಕಥಾನಕವನ್ನು ಅರ್ಥಗರ್ಭಿತ ಚಿತ್ರರತ್ನವನ್ನಾಗಿಸಿರುವ ಅವರ ಅದ್ಭುತ ಪ್ರತಿಭೆಗೊಂದು ನಮೋನಮಃ!

No comments:

Post a Comment