ಕೆಲವೊಮ್ಮೆ ಆಗಿ ಬಿಡುತ್ತದೆ..
ಕೆಲವೊಂದನ್ನು ಮೊದಲೇ ಊಹಿಸಲಾಗದು
ಕೆಲವು ಪೂರ್ವ ನಿರ್ಧರಿತವಾಗಿದ್ದರೂ ಕೈಗೂಡೂದಿಲ್ಲ
ರಾಜಕುಮಾರ್ ಚರಿತ್ರಾರ್ಹ ನಟನಾಗಿದ್ದು ಕರುನಾಡ ಚಿತ್ರರಸಿಕರ ಪ್ರಪಂಚದಲ್ಲಿ ನೆಡೆದ ಒಂದು ವಿಸ್ಮಯ. ಬೇಡರ ಕಣ್ಣಪ್ಪ ಚಿತ್ರದಲ್ಲಿ ಆಯ್ಕೆಗೊಂಡಾಗ ಅವರಿಗೆ ನಂಬಿಕೆ ಇರಲಿಲ್ಲ ಚಿತ್ರರಂಗದಲ್ಲಿ ತಾನು ಇಷ್ಟು ದೂರ ಬರಬಹುದು ಎಂದು..
ಶತ ಚಿತ್ರಗಳ ನಾಯಕ ನಟ ಎಂಬ ಬಿರುದು ಹೊತ್ತ ರಾಜಕುಮಾರ್ ಅವರ ನೂರನೇ ಚಿತ್ರವೇ ಈ ಭಾಗ್ಯದ ಬಾಗಿಲು..
ಈ ಚಿತ್ರ ಅವರ ಹಿಂದಿನ ೯೯ ಚಿತ್ರಗಳಿಗಿಂತ ಭಿನ್ನವಾಗಿ ಆರಂಭವಾಗುತ್ತದೆ. ಇಲ್ಲಿ ಗಮನಿಸಬೇಕಾದ್ದು ತಾನು ಅಷ್ಟೊಂದು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ ಎಂಬ ಭಾವ ಕೊಂಚವೂ ಕಾಣ ಸಿಗದು.. ಹುಚ್ಚನಾಗಿ ಅಭಿನಯಿಸುವ ಆರಂಭದ ದೃಶ್ಯಗಳು.. ಮತ್ತೆ ಸಿನೆಮಾದ ಅಂತಿಮ ಹಂತದಲ್ಲಿ ಎಲ್ಲವೂ ಬಿಡಿಬಿಡಿಯಾಗಿ ನಂತರ ಸುಖಾಂತ್ಯವಾಗೋದು ಈ ಚಿತ್ರದ ವಿಶೇಷತೆ..
ಹೌದು ಹಲವಾರು ಬಾರಿ ತುಂಬಾ ನಿರೀಕ್ಷಿತ ಚಿತ್ರಕಥೆಗಳು ದೃಶ್ಯ ಮಾಧ್ಯಮದಲ್ಲಿ ಹಾಗೆಯೆ ಮೂಡಿ ಬರಲು ಸಾಹಸ ಮಾಡುವುದುಂಟು..
ಈ ಚಿತ್ರ ನೋಡಿದಾಗ ಇದೆ ನೂರನೇ ಚಿತ್ರವಾಗಬೇಕಿತ್ತೇ ಅನಿಸೋದು ಸಹಜ.. ಆದರೆ ರಾಜಕುಮಾರ್ ಅವರ ತನ್ಮಯತೆ, ತನ್ನ ಕೆಲಸದ ಮೇಲೆ ತಾವಿಟ್ಟಿರುವ ಶ್ರದ್ಧೆ, ತಮ್ಮ ಮೇಲೆ ತಮಗಿರುವ ನಂಬಿಕೆ, ತನ್ನ ಕೆಲಸ ಅಭಿನಯಿಸೋದು.. ನಿರ್ದೇಶಕನೇ ಚಿತ್ರಗಳ ಕಪ್ತಾನ ಎನ್ನುವ ಅವರ ಸಿದ್ಧಾಂತ.. ಎಲ್ಲವೂ ಕಾಣಸಿಗುತ್ತದೆ.
ಅಭಿನಯ, ಅಭಿನಯ, ಅಭಿನಯ.. ಇಷ್ಟೇ ಅವರ ಕಾರ್ಯ ಕ್ಷೇತ್ರ ಅನ್ನಿಸುವಂತೆ ಅವರ ಅಭಿನಯದ ಶಕ್ತಿ ಖುಷಿಕೊಡುತ್ತದೆ..
ದೊರೆ ಅವರ ಕಥೆಯನ್ನು ಚಿತ್ರಕತೆ ರಚಿಸಿ ನಿರ್ದೇಶಿಸುವ ಭಾಗ್ಯ ಒದಗಿದ್ದು ಕೆ ಎಸ್ ಎಲ್ ಸ್ವಾಮಿ ಅಥವ ರವಿ ಅವರಿಗೆ.
ಬಿ ಎಚ್ ಜಯಣ್ಣ ನಿರ್ಮಾತೃ
ಎಸ್ ಜೆ ಕೆ ಪ್ರೊಡಕ್ಷನ್ಸ್ ಲಾಂಛನ
ಕೆ ಜಾನಕಿರಾಮ್ ಅವರ ಛಾಯಾಗ್ರಹಣ
ವಿಜಯಭಾಸ್ಕರ್ ಅವರ ಸಂಗೀತ
ಪಿ ಬಿ ಶ್ರೀನಿವಾಸ್, ಬಾಲಸುಬ್ರಹ್ಮಣ್ಯಂ , ಎಸ್ ಜಾನಕೀ ಅವರ ಗಾಯನ ಸುಧೆ
ಈ ಮೈಲಿಗಲ್ಲಿನ ಸಿನಿಮಾದಲ್ಲಿ ರಾಜಕುಮಾರ್ ಅವರ ಜೊತೆಯಲ್ಲಿ ಬಾಲಕೃಷ್ಣ, ದ್ವಾರಕೀಶ್, ಅಶ್ವಥ್, ಬಿ ವಿಜಯಲಕ್ಷ್ಮಿ, ಬಿ ವಿ ರಾಧಾ, ಬಿ ಜಯ, ಜಯಶ್ರೀ, ಪಾಪಮ್ಮ, ತೂಗುದೀಪ ಶ್ರೀನಿವಾಸ್ ಮುಂತಾದವರಿದ್ದಾರೆ.
ಹೆಸರಾಂತ ನಾಯಕಿ ನಟಿ ಇಲ್ಲ.. ಹಿಂದೆ ತಮ್ಮ ಜೊತೆ ಅಭಿನಯಿಸಿದ ನಾಯಕಿಯರು ಇಲ್ಲ.. ಆದರೂ ಇದು ಅವರ ನೂರನೇ ಚಿತ್ರ ಎನ್ನುವ ಆಕರ್ಷಣೆಯೇ ಮುಖ್ಯವಾಗಿ ಮಿಕ್ಕ ವಿಷಯಗಳು ಗೌಣವಾಗಿವೆ..
ನಾಯಕನನ್ನು ವಿಜೃಂಭಿಸುವ "ನಾನೇ ರಾಜಕುಮಾರ.. " ಈ ಚಿತ್ರದ ಮುಖ್ಯ ಆಕರ್ಷಣೆ.
ಆಗಿನ ಕಾಲದ ಬೆಂಗಳೂರನ್ನು ನೋಡುವ ಸೌಭಾಗ್ಯ ಸಿಗುತ್ತದೆ.. ಈಗ ನೆನಪಾಗಿ ಉಳಿದಿರುವ ಭಾರತ್, ನಂದ, ಮಿನರ್ವ ಮೊದಲಾದ ಟಾಕೀಸುಗಳು ಕಾಣುತ್ತವೆ..
ರಾಜಕುಮಾರ್ ಅವರು ತಮ್ಮದೇ ಚಿತ್ರದ ಪೋಸ್ಟರುಗಳನ್ನು ಅಂಟಿಸುವ, ತಮ್ಮದೇ ಹಿಂದಿನ ಚಿತ್ರಕ್ಕೆ ಟಿಕೇಟು ಪಡೆಯುವ ಸಲುವಾಗಿ ಸರತಿ ಸಾಲಿನಲ್ಲಿ ನಿಲ್ಲುವ ದೃಶ್ಯಗಳು ವಿಶೇಷ..